ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಮಿನಿ ಪುರಾಣ - ಉತ್ತರ ಪರ್ವ ...

By Staff
|
Google Oneindia Kannada News


ಇದು ಅಮೆರಿಕಥಾಮಂಜರಿ . ಕುಮಾರವ್ಯಾಸನು ಬರೆಯಲು ಕೂತಾಗ ಒಂದು ಪದವನ್ನೂ ತಿದ್ದದೆ, ಅಳಿಸದೆ ಬರೆಯುತ್ತಿದ್ದನಂತೆ. ಆದರೆ ಇಂದಿನ ನಾರಣಪ್ಪನವರು ಹೇಳಿದ್ದನ್ನು ನಾನು ಬಹಳಷ್ಟು ಬಾರಿ ಬಡಿದು, ಹೊಡೆದು, ಚಿತ್ತು ಮಾಡಿ, ತಿದ್ದಿ, ಪರದಾಡಿ ಬರೆಯಬೇಕಾಯಿತು



Amerikathamanjari, A humour write up by Nandakishorಇತ್ತೀಚಿನ ವಿಚಿತ್ರಾನ್ನದಲ್ಲಿ ನಾರಣಪ್ಪನವರ ಅಮೆರಿಕಾ ಪ್ರವಾಸ ಕಥನ ದ ಸ್ಯಾಂಪಲ್ ಓದಿದ ಮೇಲೆ ರಾತ್ರಿ ನಾರಣಪ್ಪನವರು ನನ್ನ ಹತ್ತಿರವೂ ಬಂದಿದ್ದರು! ಅಮೆರಿಕ ಪ್ರವಾಸಕಥೆಯನ್ನು ನಿಮ್ಮ ಬಳಿ ಅವರಿಗೆ ಪೂರ್ತಿ ತಿಳಿಸಲಾಗಲಿಲ್ಲವಂತೆ. ಕೊನೆಯ ಕೆಲವು ಪದ್ಯಗಳನ್ನು ನನಗೆ ಹೇಳಿ ಬರೆಸಿ ನಿಮಗೆ ದಾಟಿಸಲು ತಿಳಿಸಿದ್ದಾರೆ. ಅವು ಇಲ್ಲಿವೆ ನೋಡಿ.

"ಕರ್ಣಾಟ ಅಮೆರಿಕಥಾಮಂಜರಿಯ" ಅಂತಿಮ ಭಾಗ :
ನಾರಣಪ್ಪನವರ ಮಗನ ಹೆಸರೂ ಜನಮೇಜಯಎಂಬುದು ಅವರು ನಿಮಗೆ ಹೇಳಿರಲಿಲ್ಲವೆಂದು ಕಾಣುತ್ತದೆ. ಅಮೆರಿಕವನ್ನು ಹೊಗಳುತ್ತ ಅವರು ಮಗನಿಗೆ ಹೇಳಿದ್ದು ಹೀಗೆ -

ಕೇಳು ಜನಮೇಜಯ ಧರಿತ್ರಿಯ
ನಾಳುತಲಿ ತಾ ಪೊಟ್ಟಳಿಸಲೀ
ರೇಳುಲೋಕದಿ ಮೆರೆವಮೇರಿಕ ದೇಶವನು ಸುತ್ತಿ |
ಬೀಳುತೇಳುತ ಬೆಚ್ಚಿ ಮೆಚ್ಚುತ
ಮೇಳವಿಸಿದದ್ಭುತಗಳಾಗರ-
ದಾಳವಿದ ನಾನೆಂತು ಬಣ್ಣಿಪೆನೆನುತ ಬೆರಗಾದೆ ||

(ಪೊಟ್ಟಳಿಸು = ಮೆರೆ, ಹೆಮ್ಮೆ ಪಡು)

ಈ ದೇಶದ ಬಗ್ಗೆ ಇಷ್ಟು ಬೆರಗಾದರೂ ಅವರಿಗೆ ತನ್ನೂರ ತಿಂಡಿಗಳ ನೆನಪು ಬರದೇ ಇರಲಿಲ್ಲ; ಇಲ್ಲಿನ ಟೇಸ್ಟ್‌ಲೆಸ್ ಪೀಡ್ಜವು ಅವರಿಗೆ ಹಿಡಿಸಲಿಲ್ಲ. ವಾಲುಮಾರ್ಟುಗಳಲ್ಲಿ ಊರ ಮಾಲುಗಳು ಸಿಕ್ಕರೂ ಅವುಗಳಲ್ಲಿ ತನ್ನವ್ವನ, ತನ್ನಾಕಿಯ ಕಕ್ಕುಲತೆಯ ರುಚಿಯಿಲ್ಲದ್ದಕ್ಕೆ ಅವರು ಮನನೊಂದು ಇನ್ನೊಂದು ಹಾಡ ಹೊಸೆದರು.

ಅಲ್ಲಿ ಸವಿಯುವುದುಂಟು ಕುಂದವ
ಮೆಲ್ಲುವರು ಕರದಂಟ ಬಯಸುತ
ಜೊಲ್ಲು ಸುರಿಸುತೆ ಪೇಡವನು ಭುಂಜಿಪರು ಸುಖಿಸುತಲಿ |
ಇಲ್ಲಿಹುದು ರುಚಿಹೀನ ಪಿಜ್ಜವು
ಜಲ್ಲಿಕಲ್ಲಿಗು ಕಠಿಣವದು ತಾ
ನೆಲ್ಲಿ ತಿನಲೆನ್ನೂರ ತಿನಿಸನೆನುತಲಿ ಕೊರಗಿಹೆನು ||

ಇಷ್ಟರಲ್ಲಿ ಅವರಿಗೆ ತನ್ನ ಗದುಗಿನ, ತನ್ನ ಕರ್ಣಾಟದ, ತನ್ನ ಭಾರತದ ನೆನಪು ಒತ್ತರಿಸಿಕೊಂಡು ಬಂತು. ಮತ್ತು ಮಳೆಯಿಂದಾಗಿ ಇನ್ನೂ ಒಣಗದ ‘ಒದ್ದೆ ಬೈರಾಸ್’ ಸುತ್ತಿಕೊಂಡು, ಲೇಖಕ್ ಪುಸ್ತಕದಲ್ಲಿ ’ಗದುಗಿನ ಭಾರತ’ವನ್ನು ಪಾರಾಯಣದಂತೆ ಬರೆಯುತ್ತಿದ್ದ ಸಂಗತಿಯೂ ನೆನಪಾಯಿತು (ಕುಮಾರವ್ಯಾಸನು ಒದ್ದೆ ಮಡಿಯನ್ನುಟ್ಟು ಅದು ಒಣಗುವ ಮೊದಲೇ ಅಂದಿನ ಪಾಲನ್ನು ಬರೆದು ಮುಗಿಸುತ್ತಿದ್ದನಂತೆ, ಇವರಿಗೂ ಹಾಗೆಯೇ ಆಗುತ್ತಿದೆ ಪಾಪ).

ಆ ಕಾವ್ಯದ ಆರ್ದ್ರತೆ, ಲಾಲಿತ್ಯ, ಅಧ್ಯಾತ್ಮಗಹನತೆಗಳು ಗಾಢವಾಗಿ ಆವರಿಸಿಕೊಂಡವು. ಅವರೊಳಗಿನ ಅಪ್ಪಟ ಭಾರತೀಯ ಮನಸ್ಸು- "ಇಲ್ಲಿನದೆಲ್ಲ ಬರಿಯ ತೋರಿಕೆ; ಭಾರತವೇ ತನಗೆ ಸ್ವರ್ಗ. ವೀರನಾರಾಯಣನ ಸಾನ್ನಿಧ್ಯವೇ ತನಗೆ ಆತ್ಮೋನ್ನತಿಯ ಪರಮ ಸೋಪಾನ"ವೆಂಬುದಾಗಿ ಚಿಂತಿಸಿತು; ಅದನ್ನೇ ಬರೆಯಿತು ಕೂಡ -

ಹದುಳವಹುದೇಂ ಹವಳವಿದ್ದೊಡೆ
ಬದರಿಗಿಂತಲು ಮಿಗಿಲೆ ಡಾಲರು
ಎದೆಯೊಳಗೆ ಸೆಲೆ ಸುರಿಸುತಿಹಳೆನ್ನಬ್ಬೆ ಭಾರತಿಯು |
ಬದುಕಿನಂದವ ತಿಳಿಯದೆಲೆ ಗಣ-
ಕದಿ ಕಳೆವರಿಗೆ ಶುಭವ ನೀಡಲು
ಗದುಗಿನಧಿಪತಿ ವೀರನಾರಾಯಣನ ಬೇಡುವೆನು ||

(ಹದುಳ = ಸೌಖ್ಯ. ಹವಳ - ಇದು ಸಂಪತ್ತಿಗೆ ಸಂಕೇತ.)

ಕುಮಾರವ್ಯಾಸನು ಬರೆಯಲು ಕೂತಾಗ ಒಂದು ಪದವನ್ನೂ ತಿದ್ದದೆ, ಅಳಿಸದೆ ಬರೆಯುತ್ತಿದ್ದನಂತೆ. ಆದರೆ ಇಂದಿನ ನಾರಣಪ್ಪನವರು ಹೇಳಿದ್ದನ್ನು ನಾನು ಬಹಳಷ್ಟು ಬಾರಿ ಬಡಿದು, ಹೊಡೆದು, ಚಿತ್ತು ಮಾಡಿ, ತಿದ್ದಿ, ಪರದಾಡಿ ಬರೆಯಬೇಕಾಯಿತು. ನನ್ನ ಸಾಮರ್ಥ್ಯದ ಮಿತಿ. :-)

ನೀವು ಬರೆದ ಭಾಮಿನಿಯಿಂದಾಗಿ ನನ್ನ ಸ್ಥಿತಿ ಮೋಡಗಟ್ಟಿದಾಗಿನ ನವಿಲಿನದ್ದಾಯಿತು. ಮತ್ತು ಬೆಳಗ್ಗೆ ಬೇಗನೆ ಎಬ್ಬಿಸಿ ಇಷ್ಟೆಲ್ಲ ಬರೆಸಿತು. ಇದಕ್ಕೆ ಕಾರಣಕರ್ತರಾದ ನಿಮಗೆ ಒಂದು ದೊಡ್ಡ, ಅಕ್ಕರೆಯ ಧನ್ಯವಾದ.

* ಕೊನೆಯ ಪದ್ಯದಲ್ಲಿ ಅಮೆರಿಕದ ಬಗೆಗಿನ ಅಭಿಪ್ರಾಯ ನನ್ನದಲ್ಲ ಬದಲು ನಾರಣಪ್ಪನವರದು ಮಾತ್ರ - ಎಂದು ಒತ್ತಿ ತಿಳಿಯಬಯಸುತ್ತೇನೆ ;-)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X