ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂವರವೋ ಸ್ವಯಂವಧುವೋ?

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

‘ಮದುವೆ ದೇವಲೋಕದಲ್ಲೇ ನಿರ್ಧರಿತವಾಗಿರುತ್ತದೆ...’ ಎನ್ನುತ್ತಾರೆ. ತಾಳಿಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನಮಾಲೆ... ಯಾರಿಗೆ ಯಾರೆಂದು ವಿಧಿ ಬರೆದಿರುವಾ ಎಂದು... ಚಿತ್ರಗೀತೆಯದೂ ಅದೇ ಸೊಲ್ಲು. ಡೇಟಿಂಗು, ಲವ್‌ ಮ್ಯಾರೇಜು, ಅರೇಂಜ್ಡ್‌ ಮ್ಯಾರೇಜು - ಅವುಗಳ ಅನುಕೂಲ-ಪ್ರತಿಕೂಲಗಳು; ಮಾನವಕುಲಕ್ಕೆ ಮಾತ್ರ ವಿಶಿಷ್ಟವಾದ ‘ಮದುವೆ’ಯೆಂಬ ಪವಿತ್ರಬಂಧಕ್ಕೆ ಸಾರ್ವತ್ರಿಕವಾಗಿ ಇರುವ ಮಹತ್ವ, ಗೌರವ; ಮದುವೆಯ ಮೊದಲು ಸವಿಗನಸುಗಳು, ಮದುವೆಯ ನಂತರ ಸಂಸಾರತಾಪತ್ರಯಗಳು - ಈ ಗಹನವಿಚಾರಗಳೆಲ್ಲ ಎಷ್ಟೊಂದು ಚರ್ಚೆಗಳಿಗೆ ಗ್ರಾಸವಾಗಿಲ್ಲ? ಅದೆಷ್ಟು ಬರವಣಿಗೆಗೆ, ಸಿನೆಮಾ-ನಾಟಕಗಳಿಗೆ, ಕಟ್ಟೆಹರಟೆಗಳಿಗೆ ಸಾಮಗ್ರಿಯಾಗಿಲ್ಲ?

ಇವತ್ತು ವಿಚಿತ್ರಾನ್ನದಲ್ಲಿ ಮದುವೆಯ ಕುರಿತಾದ, ಮದುವೆಗೆ ಸಂಬಂಧಿಸಿದ ಒಂದು ವಿಚಾರ! ಎಲ್ಲಾಬಿಟ್ಟು ವಿಚಿತ್ರಾನ್ನಭಟ್ಟರು ಯಾವಾಗ ಮ್ಯಾರೇಜ್‌ಬ್ಯೂರೊ ಶುರುಮಾಡಿದರಪ್ಪಾ ಎಂದು ವಿಸ್ಮಯಪಡಬೇಡಿ. ಇಲ್ಲಿ ಪ್ರಸ್ತಾಪಿಸಲಿರುವ ವಿಷಯವನ್ನು ಬೇಕಿದ್ದರೆ ಒಂದು ಜಿಜ್ಞಾಸೆ ಅಥವಾ ವಸ್ತುನಿಷ್ಠ ತರ್ಕ ಎಂದರೂ ಸರಿಹೋದೀತು. ಇದಮಿತ್ಥಂ ಎಂದೇನೂ ಅಲ್ಲ, ಈಬಗ್ಗೆ ನಿಮ್ಮ ದೃಷ್ಟಿಕೋನ ಬೇರೆ ಇದ್ದರೂ ಇರಬಹುದು ಮತ್ತು ಅದನ್ನು ನೀವು ಬರೆದು ತಿಳಿಸಲೂಬಹುದು.

*

ದಮಯಂತಿ, ಸೀತೆ, ದ್ರೌಪದಿಯೇ ಮೊದಲಾಗಿ ಪುರಾಣೇತಿಹಾಸಗಳಲ್ಲಿನ ಎಲ್ಲ ಕಥೆಗಳಲ್ಲೂ ನಾವೆಲ್ಲ ಓದಿತಿಳಿದಿರುವಂತೆ ಸ್ವಯಂವರ ನಡೆದದ್ದು ವರನ ಆಯ್ಕೆಗೇ ಹೊರತು ವಧುವನ್ನು ಆಯ್ದುಕೊಳ್ಳಲಿಕ್ಕೆ ಅಲ್ಲ. ಏಳುಮಲ್ಲಿಗೆ ತೂಕದ ಅಪ್ರತಿಮ ಸುಂದರಿ ರಾಜಕುಮಾರಿಯನ್ನು ಅದ್ವಿತೀಯ ಸಾಮರ್ಥ್ಯವುಳ್ಳ ಸ್ಫುರದ್ರೂಪಿ ರಾಜಕುಮಾರನೊಬ್ಬನಿಗೆ ಕೊಟ್ಟು ಮದುವೆಮಾಡಬೇಕೆಂಬ ರಾಜನ ಬಯಕೆಯಿಂದಿರಬಹುದು, ತನ್ನ ಕೈ ಹಿಡಿಯುವವನು ಹೀಗಿರಬೇಕು ಹಾಗಿರಬೇಕು... ಎಂಬ ರಾಜಕುಮಾರಿಯ ಮನೋವಾಂಛೆಗಳೂ ಸುಂದರಕಲ್ಪನೆಗಳೂ ಈಡೇರುವುದಕ್ಕೆ ಇರಬಹುದು ಅಥವಾ ‘ಗೆದ್ದುಕೊಂಡು ಹೋಗಲಾಗದಿದ್ದರೆ ಕದ್ದುಕೊಂಡಾದರೂ ಹೋಗುತ್ತೇನೆ...’ ಎನ್ನುವ ರಾವಣನಂಥ ಪುರುಷಸಹಜ ಛಲ-ದರ್ಪಗಳ ಪ್ರಭಾವವೇ ಇರಬಹುದು - ಅಂತೂ ಸ್ವಯಂವರ ಕಥೆಗಳೆಲ್ಲದರಲ್ಲೂ ಒಂದು ಹೆಣ್ಣನ್ನು ಮದುವೆಯಾಗಲು ಹತ್ತಾರು ಗಂಡುಗಳಲ್ಲಿ ಪೈಪೋಟಿ. ‘ವರ’ನನ್ನು ಆಯ್ಕೆಮಾಡುವುದೇ ಸ್ವಯಂವರದ ಅರ್ಥವೇನೊ ಎನಿಸುವಷ್ಟು!

Seeta Swayamvaraಶ್ರೀರಾಮಚಂದ್ರನು ಶಿವಧನುಸ್ಸನ್ನು ಎತ್ತಿಮುರಿದದ್ದಾಗಲೀ, ಅರ್ಜುನನು ಮತ್ಸ್ಯಯಂತ್ರವನ್ನು ಭೇದಿಸಿ ತನ್ನ ಬಿಲ್ವಿದ್ಯೆಯ ಹೆಚ್ಚುಗಾರಿಕೆಯನ್ನು ತೋರಿಸಿದ್ದಾಗಲೀ ಅಥವಾ ನಳನ ಬಗ್ಗೆ ದಮಯಂತಿಗೆ, ಸತ್ಯವಾನನ ಬಗ್ಗೆ ಸಾವಿತ್ರಿಗೆ - ಹೀಗೆ ದೈವೇಚ್ಛೆಯನ್ನೂ ಮೀರಿದ ಉತ್ಕಟ ಮೋಹವುಂಟಾದದ್ದಾಗಲೀ ಇವೆಲ್ಲ ಕಥೆಗಳಲ್ಲೂ ಪರೀಕ್ಷಾರ್ಥಿ ಗಂಡು, ಆಯ್ಕೆ ಮಾಡುವವಳು ಹೆಣ್ಣು (ಅಥವಾ ಅವಳ ಪರವಾಗಿ ಅವಳ ತಂದೆ). ಎಲ್ಲಾದರೂ, ಯಾವುದಾದರೂ ಕಥೆಯಲ್ಲಿ ನೀವು ‘ರಾಜಕುಮಾರನಿಗೆ ಸ್ವಯಂವರ ಏರ್ಪಾಡಾಗಿತ್ತು... ಅನೇಕಾನೇಕ ದೇಶಗಳ ರಾಜಕುಮಾರಿಯರು ತಮ್ಮ ಸೌಂದರ್ಯ-ಸಾಮರ್ಥ್ಯಗಳ ಪ್ರದರ್ಶನಕ್ಕಾಗಿ ಒಟ್ಟುಸೇರಿದ್ದರು... ಅವರ ಪೈಕಿ ಭುವನಸುಂದರಿಯಾಬ್ಬಳಿಗೆ ತಾಳಿಕಟ್ಟಿ ರಾಜಕುಮಾರ ಅವಳನ್ನು ಮದುವೆಯಾದ...’ ಎಂದು ಓದಿದ್ದುಂಟೇ?

ಹೋಗಲಿ, ಪುರಾಣ ಗಿರಾಣಗಳಷ್ಟು ಹಿಂದಿನ ಸಂಗತಿ ಯಾಕೆ? ನಮ್ಮ ಕೆ.ಎಸ್‌.ನರಸಿಂಹಸ್ವಾಮಿಯವರ ಕವಿತೆಯಲ್ಲಿನ ಒಂದು ಪ್ರಸಂಗವನ್ನೇ ತೆಗೆದುಕೊಳ್ಳೋಣ. ಅದರಲ್ಲಿ ಶಾನುಭೋಗರ ಮಗಳು, ರತ್ನದಂತಹ ಹುಡುಗಿ, ಬಲುಜಾಣೆ ಗಂಭೀರೆ ಸೀತಾದೇವಿ ಮಾಡಿದ್ದಾದರೂ ಏನು? ತಾವರೆಕೆರೆಯ ಜೋಯಿಸರ ಮೊಮ್ಮಗನು ‘ಹೆಣ್ಣು ನೋಡಲಿಕ್ಕೆ’ ಎಂದು ಬಂದಾಗ, ವೈದಿಕರ ಮನೆಗಳಲಿ ಊಟ ಹೊತ್ತಾಗುವುದೆಂಬ ಪಿಳ್ಳೆನೆಪ ಮಾಡಿ ಅವನನ್ನು ಒಲ್ಲೆ ಎಂದಳು; ಮ್ಯಾರೇಜ್‌ ಪ್ರೊಪೊಸಲ್‌ಅನ್ನು ರಿಜೆಕ್ಟ್‌ ಮಾಡಿಬಿಟ್ಟಳು! ಯಾಕೆ ಗಂಡು ಒಪ್ಪಿಗೆಯಾಗಲಿಲ್ಲ ಎಂದು ಆಪ್ತಗೆಳತಿ ಕೇಳಿದಾಗ ಮಾತ್ರ, ‘ತನ್ನ ಕೂದಲಿಗಿಂತಲೂ ಕಪ್ಪಗಿರುವವನನ್ನು ಹೇಗೆತಾನೆ ವರಿಸಲಿ?’ ಎಂದು ನಿಜಸಂಗತಿಯನ್ನು ತಿಳಿಸಿದಳು!

ಒಟ್ಟಿನಲ್ಲಿ ಅಲ್ಲೂ Yes or No ನಿರ್ಧಾರ ಶಾನುಭೋಗರ ಮಗಳದೇ ಹೊರತು ಜೋಯಿಸರದಾಗಲೀ ಅವರ ಮೊಮ್ಮಗನದಾಗಲೀ ಅಲ್ಲ. ಅವರಿಗೋ ಬಂದದಾರಿಗೆ ಸುಂಕವಿಲ್ಲ ಎಂದು ತಣ್ಣಗಾಗಿ ಹಿಂತೆರಳುವುದಷ್ಟೇ ಬಂತು. ಆಫ್‌ಕೋರ್ಸ್‌, ಆಮೇಲೆ ಆ ಸೀತಾದೇವಿ ಯಾವ ಶ್ರೀರಾಮಚಂದ್ರನನ್ನು ವರಿಸಿದಳು, ಅದಕ್ಕೆ ಮೊದಲು ಅವನು ಎಂತೆಂಥ ಬಿಲ್ಲುಗಳನ್ನು ಮುರಿಯಬೇಕಾಯಿತು (ಅಥವಾ ರೆಸ್ಟೊರೆಂಟ್‌, ಜವುಳಿಅಂಗಡಿ, ಒಡವೆಅಂಗಡಿ ಬಿಲ್ಲುಗಳನ್ನು ತೆರಬೇಕಾಯಿತು) ಎನ್ನುವ ವಿವರಗಳನ್ನು ಕೆ.ಎಸ್‌.ನ ಕೊಟ್ಟಿಲ್ಲವೆನ್ನಿ.

*

ಬಹುಷಃ ‘ವರ’ ಅಂದರೆ ಮದುವೆಗಂಡು ಎಂಬ ಅರ್ಥವೇ - ಕನಿಷ್ಠ ಪಕ್ಷ ವೈವಾಹಿಕ ಸಂದರ್ಭದಲ್ಲಿ - ನಮ್ಮೆಲ್ಲರ ಶಬ್ದಭಾಂಡಾರದಲ್ಲಿರುವುದರಿಂದ, ಸ್ವಯಂವರ ಎಂದರೆ ವರನ ಆಯ್ಕೆ ಅಂತಲೇ ನಾವೆಲ್ಲ ತಿಳಿದುಕೊಂಡಿದ್ದೇವೆ. ಅದರಲ್ಲೇನೂ ತಪ್ಪಿಲ್ಲ ಬಿಡಿ. ಯಾರಾದರೂ ತರ್ಕಿಸಿದರೆ ಅವರ ಬಾಯ್ಮುಚ್ಚಿಸಲು ಪುರಾಣದಲ್ಲಿನ ಉಲ್ಲೇಖಗಳ ಪುಷ್ಠೀಕರಣ ಇದ್ದೇ ಇದೆಯಲ್ಲ?

ಆದರೆ, ವರಿಸು ಅಥವಾ ಇಚ್ಛಿಸು/ ಇಷ್ಟಪಡು/ ಆಯ್ಕೆಮಾಡು ಇತ್ಯಾದಿ ಕ್ರಿಯಾಪದದ ರೂಪದಲ್ಲಿ ಅರ್ಥೈಸಿದರೆ ಸ್ವಯಂವರ ಪದವು ‘ ಸ್ವಂತದ ಆಯ್ಕೆ’ ಎಂದೇ ಆಗಬೇಕು. ಒಂದು ಹೆಣ್ಣು ಹತ್ತಾರು ಗಂಡುಗಳ ಪೈಕಿ ಒಬ್ಬನನ್ನು ಸಂಗಾತಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಯಂತೆಯೇ ಒಬ್ಬ ಗಂಡು ಹತ್ತಾರು ಹೆಣ್ಣುಗಳ ಪೈಕಿ ಒಬ್ಬಳನ್ನು ಆಯ್ದು ತನ್ನ ಬಾಳ ಜೊತೆಗಾತಿಯನ್ನಾಗಿ ಸ್ವೀಕರಿಸುವ ಪ್ರಕ್ರಿಯೆಯೂ ಸ್ವಯಂವರವೇ! ಅಥವಾ, ಅದನ್ನು ‘ ಸ್ವಯಂವಧು’ ಎನ್ನೋಣವೇ?

ಪುರಾಣಗಳಲ್ಲೇನೊ ಸ್ವಯಂವರಗಳ ವೈಭವ ನಮಗೆ ವರ್ಣರಂಜಿತವಾಗಿ ಸಿಗುತ್ತದೆ, ಕಥೆ-ಕವಿತೆಗಳಲ್ಲೂ ಹೆಣ್ಣು ತನ್ನಿಷ್ಟದ ಗಂಡನ್ನು ಮದುವೆಯಾಗುವ ಕಲ್ಪನೆಗಳೇ ಹೆಚ್ಚಾಗಿ ಇರುತ್ತವೆ. ಆದರೆ ನಿಜಜೀವನದಲ್ಲಿ - ಕನಿಷ್ಠಪಕ್ಷ ಭಾರತದಲ್ಲಿನ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ - ಮದುವೆಯ ವಿಚಾರ ಬಂದಾಗ, ಮದುವೆಯಾಗಲು ಹೆಣ್ಣು-ಗಂಡಿನ ಪರಸ್ಪರ ಒಪ್ಪಿಗೆಯ ವಿಚಾರ ಬಂದಾಗ ಬಹುತೇಕ ಸಂದರ್ಭಗಳಲ್ಲಿ ವಸ್ತುಸ್ಥಿತಿ ಬೇರೆಯೇ ಇರುತ್ತದೆ ಅಂತನಿಸುವುದಿಲ್ಲವೇ?

‘ಹೆಣ್ಣು ನೋಡಿ ಹೋಗಿದ್ದಾರೆ... ಇನ್ನು ಗಂಡಿನ ಕಡೆಯವರಿಂದ ಗ್ರೀನ್‌ಸಿಗ್ನಲ್‌ ಬಂದಮೇಲೆ ಮುಂದಿನ ತಯಾರಿಗಳು...’ ಎಂದೇ ತಾನೆ ಮದುವೆ ಪ್ರೊಪೊಸಲ್‌ಗಳ ಸಮಾಚಾರವಿರುವುದು? ಒಂದು ಹೆಣ್ಣು ಮದುವೆಯಾಗುವ ಮೊದಲು ‘ನೋಡಿರಬಹುದಾದ’ ಗಂಡುಗಳ ಸಂಖ್ಯೆ ಮತ್ತು ಒಂದು ಗಂಡು ಮದುವೆಯ ಅಂತಿಮನಿರ್ಧಾರದ ಮೊದಲು ಮಾಡಿರಬಹುದಾದ ಕನ್ಯಾಪರೀಕ್ಷೆಗಳ ಸಂಖ್ಯೆ - ಬಹುತೇಕವಾಗಿ ಎರಡನೆಯದೇ ಜಾಸ್ತಿಯಿರುವುದಲ್ಲವೇ? ಅಂದಮೇಲೆ ಸ್ವಯಂವರದ ಕಾನ್ಸೆಪ್ಟ್‌ಗಿಂತ ‘ಸ್ವಯಂವಧು’ ಕಾನ್ಸೆಪ್ಟ್‌ ನಮ್ಮ ಸಮಾಜದಲ್ಲಿ ಚಾಲ್ತಿಯಿರುವುದು ಎಂದರೆ ಅಸಂಗತವಾಗಲಾರದು.

ಡಾಟ್‌ ಕಾಮ್‌ ಯುಗದಲ್ಲೂ ಸ್ವಯಂವಧು?

21ನೆಯ ಶತಮಾನದ ಈ-ಯುಗದಲ್ಲಿ, ಟಿಕೆಟ್‌ ಬುಕಿಂಗ್‌ನಿಂದ ಹಿಡಿದು ಬಿಲ್‌ ಪಾವತಿಯವರೆಗೂ ನಮ್ಮ ದೈನಂದಿನ ಆಗುಹೋಗುಗಳ ಹೆಚ್ಚಿನ ಸಂಗತಿಗಳೆಲ್ಲ ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ, ವಧು-ವರರ ಅನ್ವೇಷಣಾ ವೇದಿಕೆಯಾಗಿ ಅಂತರ್ಜಾಲವು ವಹಿಸಿರುವ ಪಾತ್ರ ಗಣನೀಯವಾದುದು.

ಮ್ಯಾಟ್ರಿಮೊನಿ ಡಾಟ್‌ ಕಾಮ್‌, ಶಾದಿ ಡಾಟ್‌ ಕಾಮ್‌, ಅಷ್ಟೇಏಕೆ - ಸ್ವಯಂವರ ಡಾಟ್‌ ಕಾಮ್‌ ಎನ್ನುವ ವೆಬ್‌ಸೈಟ್‌ ಸಹ ಇದೆ! ಇವತ್ತು ವೈವಾಹಿಕ ವರ್ಗೀಕೃತ ಜಾಹೀರಾತುಗಳೇ ಬಹಳಷ್ಟು ವೆಬ್‌ಸೈಟ್‌ಗಳಿಗೆ ಅತ್ಯಧಿಕ ಆದಾಯವನ್ನು ತರುವ ಮೂಲವಾಗಿರುವುದು. ಭಾರತದ ಎಲ್ಲ ಆನ್‌ಲೈನ್‌ ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಒಟ್ಟು ಜಾಹೀರಾತು ವಹಿವಾಟು ಕಳೆದೊಂದು ವರ್ಷದಲ್ಲೇ ಸುಮಾರು 20 ಕೋಟಿ ರೂಪಾಯಿಗಳಷ್ಟಿತ್ತು ಎಂದು ಸಮೀಕ್ಷೆಗಳು ತಿಳಿಸಿವೆ.

ಇಲ್ಲೊಂದು ಕುತೂಹಲಕರ ಸಂಗತಿಯನ್ನು ಗಮನಿಸಬೇಕು. ಬಾಳಸಂಗಾತಿಯ ಆಯ್ಕೆಗೆ ಅಂತರ್ಜಾಲವನ್ನು ಅವಲಂಬಿಸುವವರಲ್ಲಿ ಗಂಡಸರೇ ಹೆಚ್ಚು! Internet Online Association (IOA) ಸಮೀಕ್ಷೆಯ ಪ್ರಕಾರ, ಪ್ರತಿವರ್ಷ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಈ ವೆಬ್‌ಸೈಟ್‌ಗಳಲ್ಲಿ ನೋಂದಾವಣಿ ಮಾಡುವವರಲ್ಲಿ 50% ಗಂಡಸರು ಆನ್‌ಲೈನ್‌ ಮ್ಯಾಟ್ರಿಮೊನಿಗೆ ಪ್ರಾಶಸ್ತ್ಯ ಕೊಟ್ಟಿದ್ದರೆ, ಅಂತರ್ಜಾಲದ ಮೂಲಕ ಅಂದದ ಅರಸನನ್ನು ಹುಡುಕುವ ಹೆಂಗಸರ ಸಂಖ್ಯೆ 20% ಅಷ್ಟೆ.

ಪುರುಷಪ್ರಧಾನ ಸಮಾಜ, ಗಂಡಿಗೆ ಆಯ್ಕೆ ಅವಕಾಶ ಹೆಚ್ಚು, ಹೆಣ್ಣಿಗೆ ಕೌಟುಂಬಿಕ/ಸಾಮಾಜಿಕ ನಿರ್ಬಂಧಗಳು ಹೆಚ್ಚು ... ಹೀಗೆ ಬೇರೆಬೇರೆ ಸಬೂಬುಗಳನ್ನು ಕೊಟ್ಟು ಈ ಅಂಕಿಅಂಶಗಳನ್ನು ನಿರ್ಲಕ್ಷಿಸಬಹುದಾದರೂ ಅಂತಿಮವಾಗಿ, ಗಂಡೇ ತನ್ನಿಚ್ಛೆಯ ಹೆಣ್ಣನ್ನು ಆಯ್ದುಕೊಳ್ಳುವ, ಹೆತ್ತವರ ಒತ್ತಾಯಕ್ಕೋ ದಾಕ್ಷಿಣ್ಯಕ್ಕೋ ಹೆಣ್ಣು ಆ ಗಂಡನ್ನು ಮನಸ್ಸಿಲ್ಲದ ಮನಸ್ಸಿಂದ ಒಪ್ಪುವ ಸನ್ನಿವೇಶವೇ ಅಲ್ಲವೇ ಕಣ್ಮುಂದೆ ಬರುವುದು? ಆನ್‌ಲೈನ್‌ ಆಗಲೀ ಆಫ್‌ಲೈನ್‌ ಆಗಲೀ (ಕನಿಷ್ಠಪಕ್ಷ ಭಾರತದಲ್ಲಿ ತಥಾಕಥಿತ ಮಧ್ಯಮವರ್ಗದಲ್ಲಿ) ಇದನ್ನೇ ಅಲ್ಲವೇ ನಾವು ದಿನನಿತ್ಯ ಗಮನಿಸುವುದು?

ಹಾಗೆ ನೋಡಿದರೆ, ಮಾನವಜಾತಿಯಾಂದನ್ನು ಬಿಟ್ಟು ಮಿಕ್ಕೆಲ್ಲ ಜೀವಜಗತ್ತಿನಲ್ಲಿ ಇಂದಿಗೂ ಸಂಗಾತಿಯ ಆಯ್ಕೆಯ ವಿಷಯದಲ್ಲಿ ಹೆಣ್ಣಿನದೇ ಅಂತಿಮ ತೀರ್ಪು. ಬಣ್ಣಬಣ್ಣದ ಗರಿಗಳನ್ನು ಹೆಚ್ಚು ಅಗಲವಾಗಿ ಹರಡಿದ ಗಂಡುನವಿಲನ್ನೇ ಹೆಣ್ಣುನವಿಲು ಆಯ್ದುಕೊಳ್ಳುವುದು. ಕೋಗಿಲೆ ಅಥವಾ ಇತರ ಪಕ್ಷಿಸಂಕುಲದಲ್ಲಿ ಹಾಡು ಹೇಳಿಸಿ ಗಂಡುಹಕ್ಕಿಯದೇ ಸ್ವರಪರೀಕ್ಷೆ ಮಾಡುವುದು. ಮಾರಣಾಂತಿಕ ಕಾಳಗದಲ್ಲಿ ಜಯಶಾಲಿಯಾಗಿ ಬರುವ ಗಂಡುಜಿಂಕೆಯನ್ನೇ ಹೆಣ್ಣುಜಿಂಕೆ ಸೇರಿಕೊಳ್ಳುವುದು. ಜೇನ್ನೊಣಗಳಂತಹ ಕೆಲವು ಪ್ರಭೇದಗಳಲ್ಲಂತೂ ಮ್ಯಾಟ್ರಿಮೊನಿಯ ಫುಲ್‌ ಕಂಟ್ರೊಲ್‌ ಇರುವುದೇ ಹೆಣ್ಣಿನ ಕೈಯಲ್ಲಿ - ಸಂತಾನೋತ್ಪತ್ತಿಯ ನಂತರ ಗಂಡನ್ನು ಹಿಚುಕಿಹಾಕಿ ಕೊಲ್ಲುವವರೆಗೂ!

ಮನುಷ್ಯನಾದ ಮಾತ್ರಕ್ಕೆ, ಆಧುನಿಕತೆಯನ್ನು ಅರಗಿಸಿಕೊಂಡು ಹೆಣ್ಣು-ಗಂಡು ಸರಿಸಮಾನ ಎಂದು ಭಾಷಣ ಬಿಗಿದ ಮೇಲೂ ಅದು ಹೇಗೆ ಬಂತು ಗಂಡಿನ ನಿರ್ಧಾರ ಅಂತಿಮ ಎಂಬ ರಿವಾಜು? ಹೇಳಿ, ಹೇಗಾದೀತು ಅದು ಸ್ವಯಂವರ? ಪುರಾಣದಲ್ಲಿ ಓದೋಕೆ, ಹೇಳೋಕೆ ಮಾತ್ರ ‘ಸ್ವಯಂವರ’, ಆಚರಣೆಯಲ್ಲಿ ನಮ್ಮದಿನ್ನೂ ‘ಸ್ವಯಂವಧು’!

ನೀವೇನಂತೀರಿ? ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬರೆದು ತಿಳಿಸಲು ವಿಳಾಸ [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X