ಬಾನಲ್ಲೇ ಮಧುಚಂದ್ರಕೆ... ಸ್ಕೈಯಲ್ಲೇ ಹನಿಮೂನ್‌ಗೆ!

ಆದರೂ, ಶೀರ್ಷಿಕೆ ಯಲ್ಲೇನೊ ತಮಾಷೆ ಇದೆ ಅನಿಸುತ್ತದೆಯಲ್ಲ? ನಾಗತಿಹಳ್ಳಿ ಚಂದ್ರು ಬರೆದ ಮಿನಿಕಾದಂಬರಿಯ ವಿಷಯವಿರಬಹುದೇ? ಖಂಡಿತ ಅಲ್ಲ, ದ್ವಿತೀಯಾರ್ಧದಲ್ಲಿ ಹೇಳುತ್ತೇನೆ ಅದರ ಬಗ್ಗೆ. ಮೊದಲು ಹನಿಮೂನ್ ಮುಗಿಸೋಣ, ಐ ಮೀನ್, ಹನಿಮೂನ್ ಪದದ ಬಗೆಗಿನ ವ್ಯಾಖ್ಯಾನವನ್ನು ಮುಗಿಸೋಣ, ಆಗಬಹುದೇ?
*
ಹನಿಮೂನ್ ಪದಮೂಲ ಹುಡುಕುತ್ತ ಹೋದರೆ ಯುರೋಪ್‌ನ ನಾರ್ವೆ/ ಸ್ಕಾಂಡಿನೇವಿಯಾ ನಿವಾಸಿಗಳ ಭಾಷೆಯ hjunottsmanathr ಎಂಬ ಪದವನ್ನು ತಲುಪುತ್ತೇವೆ. ಮೂಲತಃ ಆ ಶಬ್ದಕ್ಕಿದ್ದ ಅರ್ಥವಂತೂ ಇವತ್ತಿನ 'ಹನಿಮೂನ್" ಮೂಡಿಸಬಹುದಾದ ಪುಳಕಕ್ಕೆ ತೀರಾ ತದ್ವಿರುದ್ಧವಾದದ್ದು!
ಪ್ರಾಚ್ಯ ಯುರೋಪ್‌ನ ಆದಿವಾಸಿಗಳ ಪದ್ಧತಿಯೆಂದರೆ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು 'ವರ"ನಾಗುವವ ಅಪಹರಿಸಿಕೊಂಡು ಹೋಗಿ ಯಾರಿಗೂ ಗೊತ್ತಾಗದ ತಾಣದಲ್ಲಿ ಅಡಗಿಕೊಳ್ಳುವುದು -ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಹೆಣ್ಣಿನ ಕಡೆಯವರು ಆಸೆಬಿಡುವವರೆಗೂ. ಗಂಡು-ಹೆಣ್ಣು ಮದುವೆಯಾಗಿ(ಬಲಾತ್ಕಾರವಾಗಿ) ಕೆಲ ದಿನಗಳವರೆಗೆ ಬಾಹ್ಯ ಪ್ರಪಂಚದ ಸಂಪರ್ಕ ಕಡಿದುಕೊಂಡು ಅಡಗುದಾಣದಲ್ಲಿರುವುದೇ ಆಗಿನ ಕಾಲದ ಹನಿಮೂನ್!
ಆದರೆ ಇಂಗ್ಲೀಷಲ್ಲಿ ಹನಿಮೂನ್ ಅನ್ನೋದು ಹನಿ(ಜೇನು) ಮತ್ತು ಮೂನ್(ಚಂದ್ರ) ಎಂಬ ಎರಡು ಪದಗಳು ಸೇರಿಆದದ್ದು ಅನ್ನುವ ತರ್ಕವನ್ನು ಹಿಡಿದರೂ, ಪ್ರಾಚೀನ ಐರೋಪ್ಯ ಸಂಪ್ರದಾಯಗಳಿಗೇ ಮುಟ್ಟುತ್ತೇವೆ. ಐರಿಷ್ ಭಾಷೆಯ meala ಎನ್ನುವ ಪದಕ್ಕೆ ಮಧು(ಜೇನು ಅಥವಾ ಜೇನಂತೆ ಸಿಹಿಯಾಗಿರುವ ದ್ರವ, ಮಾದಕವಾಗಿರಲೂ ಬಹುದು) ಎಂಬರ್ಥವಂತೆ; ಹಾಗೆಯೇ ಐರಿಷ್‌ನಲ್ಲಿ mi na meala ಅಂದರೆ ಮಧುಮಾಸ ಎಂದಾಗುತ್ತದೆಯಂತೆ. ಐರಿಷ್ ಪಾದ್ರಿಗಳು ಜೇನನ್ನು ಫರ್ಮೆಂಟ್ ಮಾಡಿ 'ಮೀಡ್" ಎನ್ನುವ ಮಾದಕ ಪಾನೀಯವನ್ನು ತಯಾರಿಸುತ್ತಿದ್ದರು. ಮೊದಮೊದಲು ಇದು ಔಷಧವಾಗಿಯಷ್ಟೇ ಉಪಯೋಗವಾಗುತ್ತಿತ್ತು, ಕ್ರಮೇಣ ಆ ಪಾನೀಯಕ್ಕೆ 'ಚೈತನ್ಯ ದಾಯಕ" ಶಕ್ತಿಯಿದೆಯೆಂದು ತಿಳಿದಮೇಲೆ ನವವಿವಾಹಿತರಿಗೆ, ಮದುವೆಯದಿನದಿಂದ ಒಂದು ಹುಣ್ಣಿಮೆಯಾಗುವವರೆಗೆ ದಿನವೂ ಆ ಪಾನೀಯ ಸೇವಿಸುವಂತೆ ಉಪದೇಶಿಸುತ್ತಿದ್ದ ರಂತೆ. ದಂಪತಿಯ ಹೊಸ ವೈವಾಹಿಕ ಜೀವನಕ್ಕೆ ಸಿಹಿಯನ್ನೂ ಚೈತನ್ಯವನ್ನೂ ಕಲ್ಪಿಸಿಕೊಡು ವ ಏರ್ಪಾಡದು. ಆ ಸಂಪ್ರದಾಯದಿಂದಾಗಿ ಹನಿ+ಮೂನ್ ಸೇರಿ ಹನಿಮೂನ್ ಆದದ್ದು.
ಇಂಗ್ಲಿಷ್ ಸಾಹಿತ್ಯದಲ್ಲಿ ಮೊಟ್ಟಮೊದಲಿಗೆ ಹನಿಮೂನ್ ಪದದ ಬಳಕೆಯಾದದ್ದು 1552ರಲ್ಲಿ ಎನ್ನಲಾಗಿದೆ. ರಿಚರ್ಡ್ ಹುಲೆಟ್ ಎಂಬ ಆಂಗ್ಲ ಲೇಖಕನ ಅಭಿಪ್ರಾಯದಂತೆ ಹನಿಮೂನ್ ಪದದ ಅರ್ಥ, ಮದುವೆಯಾದ ಹೊಸದರಲ್ಲಿನ ಚಾರ್ಮಿಂಗ್ ಅವಧಿ... ಮೊದಲ ಪ್ರೀತಿ ಜೇನಿನಂತೆ ಸಿಹಿಯೆನಿಸಿದರೂ, ಹುಣ್ಣಿಮೆಯ ಬೆಳದಿಂಗಳಂತೆ ಹುಚ್ಚೆಬ್ಬಿಸಿದರೂ, ಕ್ರಮೇಣ ಕೃಷ್ಣಪಕ್ಷದ ಚಂದ್ರನಂತೆ ಕ್ಷೀಣಿಸುತ್ತ ಹೋಗುವ ಪ್ರಕ್ರಿಯೆ! ಜೇನಿನ ಮತ್ತು ಚಂದ್ರನ ಉಲ್ಲೇಖ ಈ ವ್ಯಾಖ್ಯೆಯಲ್ಲಿ ಅರ್ಥಪೂರ್ಣವಾಗಿದೆ; ನೈಜತೆಗೆ ಹತ್ತಿರವಿದೆ.
ಇವತ್ತಿನ ಕಾಲಮಾನದ ಹನಿಮೂನ್ ಸಹ ಒಂಥರಾ ಆಡಂಬರ ಅಥವಾ ಪ್ರವಾಸ ವಿಹಾರದಂತೆ ಕಂಡುಬಂದರೂ, ದಾಂಪತ್ಯಜೀವನಕ್ಕೆ 'ಭದ್ರಬುನಾದಿ"ಯನ್ನು ಕಲ್ಪಿಸುವಲ್ಲಿ ಅದರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ನವವಿವಾಹಿತರಿಗೆ ಅಕ್ಷರಶಃ ಭೌತಿಕವಾಗಿ ಮತ್ತು ಸಾಂಕೇತಿಕವಾಗಿ ಪರಿಚಿತಮುಖಗಳಿಂದ ಬಹುದೂರ ಹೋಗಿ ಅಲ್ಲಿನ ಸಂಪೂರ್ಣ ಅಪರಿಚಿತ ವಾತಾವರಣದಲ್ಲಿ ಜತೆಯಾಗಿ ಆತ್ಮೀಯಕ್ಷಣಗಳನ್ನು ಕಳೆದು ಪರಸ್ಪರರನ್ನು ಅರ್ಥೈಸಿಕೊಳ್ಳಲು ಅವಕಾಶ. ಆ ಮಟ್ಟಿಗೆ ಮದುವೆ ದೈಹಿಕವಾಗಿ ಗಂಡು-ಹೆಣ್ಣನ್ನು ಬೆಸೆಯುವುದಾದರೆ ಹನಿಮೂನ್ ಅದಕ್ಕಿಂತಲೂ ಹೆಚ್ಚಾಗಿ, ಎರಡು ಮನಸ್ಸುಗಳ ಸಂಗಮದ ಪವಿತ್ರ ಗುರಿಯುಳ್ಳದ್ದು!
* ಮಧ್ಯಂತರ ವಿರಾಮ *
ಹನಿಮೂನ್‌ಗೆ ಕನ್ನಡ (ಸಂಸ್ಕೃತ) ಪದ 'ಮಧುಚಂದ್ರ". ವರ್ಡ್ ಟು ವರ್ಡ್ ಭಾಷಾಂತರದಿಂದ ಕಟ್ಟಿದ್ದು. ಆಡುಮಾತಿನಲ್ಲಿ ಇದರ ಬಳಕೆ ಕಡಿಮೆಯಾದರೂ ಸಾಹಿತ್ಯದಲ್ಲಿ, ವಿಶೇಷವಾಗಿ ಚಲನಚಿತ್ರಸಾಹಿತ್ಯದಲ್ಲಿ ಬಹಳಷ್ಟು ರೂಢಿಯಿದೆ. ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ 'ಬಾ ನಲ್ಲೆ ಮಧುಚಂದ್ರಕೆ" ಕಾದಂಬರಿಯನ್ನು ಹೆಚ್ಚಿನವರು ಓದಿರಬಹುದು. ಅದೇ ಹೆಸರಿನ ಚಲನಚಿತ್ರವೂ ಕನ್ನಡ ಬೆಳ್ಳಿತೆರೆಗೆ ಬಂದಿದೆ. ಆದರೆ, ಮಧುಚಂದ್ರಾಯಣದ ನನ್ನ ಈ ಲೇಖನದ logical link ಆಗಿ ಹಳೇ ಚಿತ್ರಗೀತೆಯ ಚರಣವೊಂದನ್ನು ನಾನು ಉಲ್ಲೇಖಿಸ ಬಯಸುತ್ತೇನೆ. ಎಡಕಲ್ಲುಗುಡ್ಡದಮೇಲೆ ಸಿನೆಮಾದ ವಿರಹ...ನೂರು ನೂರು ತರಹ... ಹಾಡಿನ ಸಾಲು, 'ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ... ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ..." ನಿಮಗೆ ಖಂಡಿತ ನೆನಪಿದೆ. ವಿಜಯನಾರಸಿಂಹ ಸಾಹಿತ್ಯದ, ಎಂ.ರಂಗಾರಾವ್ ಸಂಗೀತ ನಿರ್ದೇಶನದ, ಪಿ.ಸುಶೀಲಾ ಕಂಠಸಿರಿಯ, ಜಯಂತಿ ಅಭಿನಯದ, ಪುಟ್ಟಣ್ಣ ನಿರ್ದೇಶನದ ಅಮೋಘ ಪ್ರತಿಭಾ ಸಂಗಮವೇ ಅತಿಮಧುರವಾದ ಆ ಹಾಡು.
ಎಡಕಲ್ಲುಗುಡ್ಡದಮೇಲೆ, ಉಪಾಸನೆ, ಗೆಜ್ಜೆಪೂಜೆ, ಶರಪಂಜರ, ಬಂಗಾರದಮನುಷ್ಯ, ಅಮೃತಘಳಿಗೆ, ಬಿಳಿಹೆಂಡ್ತಿ, ಧರ್ಮಸೆರೆ, ಮಾನಸಸರೋವರ... ಹೀಗೆ ಅದೆಷ್ಟೋ ಅತ್ಯುತ್ತ ಮ ಚಿತ್ರಗಳ ಅವಿಸ್ಮರಣೀಯಗೀತೆಗಳನ್ನು (ಅಷ್ಟೇ ಏಕೆ, ಗಜಮುಖನೆ ಗಣಪತಿಯೆ ..., ಶರಣು ಶರಣಯ್ಯಾ..., ಭಾದ್ರಪದ ಶುಕ್ಲದಾ ಚೌತಿಯಂದು... ಮುಂತಾದ ಅಸಂಖ್ಯಾತ ಭಕ್ತಿಗೀತೆಗಳನ್ನು) ಕನ್ನಡಿಗರ ಕರ್ಣಾನಂದಕ್ಕೆ ಅಮೂಲ್ಯಕೊಡುಗೆಯಾಗಿ ನೀಡಿ ಹೋದ ದಿ।ವಿಜಯನಾರಸಿಂಹ ಯಾವತ್ತಿಗೂ ಸ್ಮರಣೀಯರೇ.
ಇದೇ ವಿಜಯನಾರಸಿಂಹ ಅವರ ಮೊಮ್ಮಗ (ಮಗಳ ಮಗ) ಗೌತಮ್, ವಿಚಿತ್ರಾನ್ನ ಓದುಗಬಳಗಕ್ಕೆ ಇತ್ತೀಚಿನ ಸೇರ್ಪಡೆ! ಮೂಲತಃ ಮೈಸೂರಿನವರಾದ, ಈಗ ಕ್ಯಾಲಿಫೋ ರ್ನಿಯಾದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜನಿಯರ್ ಆಗಿರುವ ಅವರು ನನ್ನ ಹೊಸ ಇ-ಸ್ನೇಹಿತ. ಯಾಹೂ ಹರಟೆ ಕಿಟಕಿಯಲ್ಲಿ ಭೇಟಿಯಾಗುತ್ತಿರುತ್ತಾರೆ. ಇದುವರೆಗೆ ಸ್ವತಂತ್ರ, ಸ್ವಚ್ಛಂದ ಬ್ರಹ್ಮಚಾರಿಯಾಗಿದ್ದ ಅವರೀಗ ಮದುವೆಯಾಗಲು ಭಾರತಕ್ಕೆ ಹೋಗಿದ್ದಾರೆ. ನಾಡಿದ್ದು ಫೆ.18ಕ್ಕೆ ಬೆಂಗಳೂರಿನಲ್ಲಿ ಮದುವೆ; ವಧು 'ದೀಪಾ" ಬೆಂಗಳೂರಿನವರು. ಗೌತಮ್ ನನಗೆ ಇ-ಆಹ್ವಾನಪತ್ರಿಕೆ ಕೊಟ್ಟು, ಇಂಡಿಯಾಕ್ಕೆ ಹೋಗಿಬರುತ್ತೇನೆ, ಗೃಹಸ್ಥಾಶ್ರಮ ಪ್ರವೇಶಿಸಿ ಹೆಂಡತಿಯನ್ನೂ ಕರಕೊಂಡು ಅಮೆರಿಕೆಗೆ ವಾಪಸಾಗುತ್ತೇನೆ ಎಂದು ಮೊನ್ನೆ ಚಾಟಿಸುವಾಗ ಹೇಳಿದ್ದರು.
'ಹನಿಮೂನ್‌ಗೆ ಎಲ್ಲಿಗೆ ಹೋಗ್ತಿದ್ದೀರಿ ಗೌತಮ್?" ಎಂಬ ನನ್ನ ಪ್ರಶ್ನೆಗೆ -'ಬರೀ ಮೂರೇ ವಾರದ ರಜೆಯಲ್ಲಿ, ಕ್ಯಾಲಿಫೋರ್ನಿಯಾದಿಂದ ಮೈಸೂರಿಗೆ ಹೋಗಿ, ಮನೆಯವರನ್ನು ಬಂಧುಬಳಗದವರನ್ನೆಲ್ಲ ಭೇಟಿಯಾಗಿ, ಮದುವೆಬಾಬ್ತು ಶಾಪಿಂಗ್ ಮುಗಿಸಿ, ಬೆಂಗಳೂರಲ್ಲಿ ಮದುವೆಯಾಗಿ, ಪತ್ನಿಗೆ H4 ವೀಸಾಕ್ಕೆ ಅರ್ಜಿ ಗುಜರಾಯಿಸಿ ಹರಸಾಹಸದಿಂದ ವೀಸಾ ಪಡೆದು, ಮತ್ತೆ ಅಮೆರಿಕೆಗೆ ಮರಳಲು ಪ್ಯಾಕಿಂಗ್ ಮಾಡಿ.... ಓಹ್ ಮೈ ಗಾಡ್... ಚಿಟಿಕೆ ಹೊಡೆಯೋದ್ರಲ್ಲಿ ಮೂರು ವಾರ ಮುಗಿದುಹೋಗಿರ್ತದೆ. ಹನಿಮೂನ್‌ಗೆ ಹೋಗ ಬೇಕೇನೊ ಹೌದು, ಆದರೆ ಎಲ್ಲಿದೆ ಸಮಯ ಈ ವೃತ್ತಿಜೀವನದಲ್ಲಿ? ವೀಸಾಗೋಸ್ಕರ ಚೆನ್ನೈ ಕಾನ್ಸುಲೇಟ್‌ಗೋ, ಅಲ್ಲಿ ಅವರು ಸತಾಯಿಸಿದರೆ ದೆಹಲಿಗೋ ಹಾರಬೇಕಾಗ್ತದಲ್ಲ... ಮತ್ತೆ ಪುಣ್ಯವಶಾತ್ ವೀಸಾ ಸಿಗುತ್ತದೆಯೆಂದುಕೊಳ್ಳೋಣ, ಗಂಡ-ಹೆಂಡತಿ ಇಬ್ರೂ ಒಟ್ಟಿಗೇ ಅಮೆರಿಕೆಗೆ ವಿಮಾನ ಹತ್ತುತ್ತೇವಲ್ಲ... ಅದೇ ಹನಿಮೂನ್... ಬಾನಲ್ಲೇ ಮಧುಚಂದ್ರ; ಸ್ಕೈಯಲ್ಲೇ ಹನಿಮೂನ್!" - ಇದು ಗೌತಮ್ ಪ್ರತಿಕ್ರಿಯೆ.
ಹಾಗೆ ನೋಡಿದರೆ ಈ ಮಾತುಗಳು ಗೌತಮ್‌ನಂಥ ಎಲ್ಲರವೂ. ಅಮೆರಿಕದಲ್ಲಿ H1 ವೀಸಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು, ಮೂರೇ ವಾರದ ರಜೆಯಲ್ಲಿ ಭಾರತಕ್ಕೆ ಹೋಗಿ ಮದುವೆಯಾಗಿ ನವವಧುವಿಗೆ H4 ವೀಸಾ ಏರ್ಪಾಡು ಮಾಡಿ ಜತೆಯಾಗಿ ಹಿಂತೆರಳುವ ಹೊತ್ತಿಗೆ ಹಿಂಡಿಹಿಪ್ಪೆಯಾಗಿ ಹನಿಮೂನೂ ಬೇಡ ಏನೂ ಬೇಡ ಎಂದು ರಸರಹಿತ ಜಾಮೂನಿನಂತಾಗುವವರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ಇರಲಿ, ಗೌತಮ್-ದೀಪಾ ದಂಪತಿಯ ಶುಭವಿವಾಹ ಸಮಾರಂಭಕ್ಕೆ, ತದನಂತರದ ವೀಸಾ ಪ್ರಕ್ರಿಯೆಗೆ, ಜತೆಯಾಗಿ ವಿದೇಶಪ್ರಯಾಣಕ್ಕೆ, ಸುಖೀವೈವಾಹಿಕ ಜೀವನಕ್ಕೆ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳಿರಲಿ.
*
ಈಗ ನಿಮಗೆ ಗೊತ್ತಾಗಿರಬಹುದು, ಹನಿಮೂನ್-ಮಧುಚಂದ್ರ- ವಿಜಯನಾರಸಿಂಹ- ಮೊಮ್ಮಗ-ಮದುವೆ-'ವೀಸಾ"ಯಣ-ಮರುಪ್ರಯಾಣ... ಎಂಬ ನೂಲಿನಿಂದ ವಿಚಾರಗಳನ್ನೆಲ್ಲ ಜೋಡಿಸಿ ಇವತ್ತಿನ ವಿಚಿತ್ರಾನ್ನ ಹೂಗುಚ್ಛವನ್ನು ಕಟ್ಟಿದ್ದು; ಮತ್ತದಕ್ಕೆ 'ಬಾನಲ್ಲೇ ಮಧುಚಂದ್ರಕೆ... ಸ್ಕೈಯಲ್ಲೇ ಹನಿಮೂನ್‌ಗೆ" ಎಂಬ ಶೀರ್ಷಿಕೆ ಕೊಟ್ಟದ್ದು!
ಈಗಾಗಲೇ ಹನಿಮೂನಿಸಿದವರು ಆ ಮಧುರಕ್ಷಣಗಳನ್ನು ನೆನೆದು, ಇನ್ನು ಮುಂದೆ ಹನಿಮೂನಿಸುವವರು ಅದನ್ನು ಊಹಿಸಿ ಪುಳಕಗೊಂಡಿರೊ ಏನೊ! ನಿಮ್ಮ ಅನಿಸಿಕೆ, ಅನುಭವ, ಅಭಿಪ್ರಾಯಗಳಿಗೆ ಸದಾ ಸ್ವಾಗತ. ವಿಳಾಸ- [email protected]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications