ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀ-ಪ್ಯಾಡ್‌ ಕೀ ಕಹಾನಿ!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Telephone keypad ಕೆಲವೊಂದು ವಸ್ತುಗಳನ್ನು, ಸಂಗತಿಗಳನ್ನು ನಾವು ದಿನಾ ನೋಡುತ್ತಿರುತ್ತೇವೆ. ಆದರೂ ಅವುಗಳ ಬಗೆಗಿನ ಕೂಲಂಕಷ ವಿವರ ನಮ್ಮಲ್ಲಿರುವುದಿಲ್ಲ ! ಟೆಲಿಫೋನ್‌ (ಅಥವಾ ಮೊಬೈಲ್‌ ಫೋನ್‌) ಬಳಸದೇ ನಮಗೆ ಇಡೀದಿನ ಕಳೆಯುವುದು ಕಷ್ಟವೇ ಸೈ. ಹಾಗೆಯೇ ಹದಿಮೂರು ಇನ್‌ಟು(ಗುಣಿಸು) ಒಂಬತ್ತು = ? ಎಂದು ಲೆಕ್ಕ ಮಾಡಲೂ ಕೂಡ ಕಾಲ್ಕುಲೇಟರ್‌ ಬಳಸುವವರು ನಾವು. ಅಂದಮೇಲೆ ಕಾಲ್ಕುಲೇಟರ್‌ ಕೂಡ ಹೆಚ್ಚು ಕಡಿಮೆ ನಮ್ಮ ದೈನಂದಿನ ಜೀವನದ ಒಂದು ಅವಶ್ಯಕ ವಸ್ತುವೇ. ಟೆಲಿಫೋನ್‌, ಕಾಲ್ಕುಲೇಟರ್‌ - ಇವೆರಡರಲ್ಲೂ 0 ಯಿಂದ 9 ರವರೆಗೆ ಅಂಕಿಗಳನ್ನು ಜೋಡಿಸಿದ ಕೀಪ್ಯಾಡ್‌ ಇದೆ. (ಇರಲೇಬೇಕು, ಇಲ್ಲಾಂದರೆ ಅವನ್ನು ಉಪಯೋಗಿಸುವುದಾದರೂ ಹೇಗೆ?). ಆದರೆ ಟೆಲಿಫೋನಿನ ಕೀಪ್ಯಾಡ್‌ನಲ್ಲಿ ಅಂಕೆಗಳ ಜೋಡಣೆ ಮತ್ತು ಕಾಲ್ಕುಲೇಟರ್‌ನ ಕೀಪ್ಯಾಡ್‌ನಲ್ಲಿ ಅಂಕೆಗಳ ಜೋಡಣೆ ಒಂದಕ್ಕೊಂದು ಉಲ್ಟಾ ಎನ್ನುವ ವಿಷಯವನ್ನು ಗಮನಿಸಿದ್ದೇವೆಯೇ ನಾವು?

ಅರೆ! ಹೌದಲ್ಲಾ ! ಯಾಕೆ ಇವೆರಡೂ ಒಂದೇ ಥರ ಇಲ್ಲ ? ಏನಿದರ ಲಾಜಿಕ್‌?

ಮಾರ್ಕೆಟಿಂಗ್‌ ಸರ್ವೇಗಳಿಂದ ಈ ವಿನ್ಯಾಸ ನಿರ್ಧರಿತವಾಗಿರಬಹುದೇ? ಅಥವಾ ಏನಾದರೂ ಉತ್ಪಾದನಾ ವೆಚ್ಚದ ಉಳಿತಾಯ ದೃಷ್ಟಿಯಿಂದ ಈ ರೀತಿಯೇ ? ಟೆಲಿಫೋನ್‌ ಕಂಪೆನಿಗಳಿಗೂ, ಕಾಲ್ಕುಲೇಟರ್‌ ಕಂಪೆನಿಗಳಿಗೂ ಜಟಾಪಟಿಯಿಂದಾಗಿ ಹೀಗಾಗಿರಬಹುದೇ? ಇಲ್ಲ , ಇದಾವುದೂ ಕಾರಣವಲ್ಲ . ಬರೇ ಸಂಪ್ರದಾಯದಿಂದಾಗಿ ಈ ಉಲ್ಟಾ-ಪಲ್ಟಾ ವಿನ್ಯಾಸಗಳು ಉಳಿದುಕೊಂಡಿವೆ ಎಂದರೆ ನಂಬುತ್ತೀರಾ?

ಕೀಪ್ಯಾಡ್‌ ಕಹಾನಿಯ ಮೂಲ, ಕಾಲ್ಕುಲೇಟರ್‌ಗಳ ಬಳಕೆಗಿಂತಲೂ ಹಿಂದಿನ ದಿನಗಳವರೆಗೆ ಹೋಗುತ್ತದೆ. ಆವಾಗ ಅಂಗಡಿ-ಮುಂಗಟ್ಟುಗಳಲ್ಲಿ ‘ಕ್ಯಾಷ್‌ ರಿಜಿಸ್ಟರ್ಸ್‌’ ಇರುತ್ತಿದ್ದುವು. ಈಗಿನಂತೆ ಬಾರ್‌ಕೋಡ್‌ ಸ್ಕ್ಯಾನ್‌ ಮಾಡುವ ಕ್ಯಾಷ್‌ ರಿಜಿಸ್ಟರ್ಸ್‌ ಅಲ್ಲ , ಬದಲಾಗಿ ಅವು ಪುಟ್ಟ ಮೆಕಾನಿಕಲ್‌ ಯಂತ್ರಗಳು. ಅದರಲ್ಲಿ ಒಂದೊಂದು ಕೀಯನ್ನೂ ಒತ್ತಿ ಸಂಖ್ಯೆಯನ್ನು ‘ಪಂಚ್‌’ ಮಾಡಬೇಕು. ಅಲ್ಲಿ ಬರೇ 0 ಯಿಂದ 9 ರವರೆಗೆ ಕೀಗಳು ಇದ್ದದ್ದಲ್ಲ . ಬದಲಾಗಿ, ತಲಾ ಹತ್ತು ಕೀಗಳ ಒಂಬತ್ತು ಕಾಲಮ್‌ಗಳು. ಪ್ರತಿ ಕಾಲಮ್‌ನಲ್ಲೂ ಕೆಳಗಿಂದ ಮೇಲಕ್ಕೆ ‘0’ ಯಿಂದ ‘9’ರವರೆಗೆ ಕೀಗಳು. ಕೆಳಗಿಂದ ಮೇಲೆ ಹೋದಂತೆ ಅಂಕೆಗಳ ಬೆಲೆ ಹೆಚ್ಚುತ್ತ ಹೋಗುವುದು ಒಂದು ರೀತಿಯಲ್ಲಿ ಸ್ಪಷ್ಟ ಲಾಜಿಕ್‌.

Calculator Keypadಮುಂದೆ ಕಾಲ್ಕುಲೇಟರ್‌ನ ಆವಿಷ್ಕಾರವಾದಾಗ ಈ ಕ್ಯಾಷ್‌ ರಿಜಿಸ್ಟರ್‌ನ ಲೇಔಟನ್ನೇ ಅಳವಡಿಸಿಕೊಂಡರು. ಬಹುಶಃ ಕ್ಯಾಷ್‌ ರಿಜಿಸ್ಟರ್ಸ್‌ ಉಪಯೋಗಿಸುತ್ತಿದ್ದವರೇ ಕಾಲ್ಕುಲೇಟರ್‌ಗಳನ್ನು ಉಪಯೋಗಿಸುವವರಾದ್ದರಿಂದ ‘ಸಂಪ್ರದಾಯ’ ವೆಂದು ಆ ವಿನ್ಯಾಸ ಉಳಕೊಂಡಿತು. ಕಾಲ್ಕುಲೇಟರ್‌ನಲ್ಲಿ ಇನ್ನೂ ಕಡಿಮೆ ಕೀಗಳು ಸಾಕಾಗುವಂತಾಯಿತು. ಕೆಳಗೆ 0, ಅದರ ಮೇಲಿನ ಸಾಲಲ್ಲಿ 1,2,3; ಅದರ ಮೇಲೆ 4,5,6 ಮತ್ತು ಅದರ ಮೇಲೆ 7,8,9 - ಈ ಕೀಪ್ಯಾಡ್‌ ವಿನ್ಯಾಸ ಕಾಲ್ಕುಲೇಟರ್‌ಗಳ ಸ್ಟಾಂಡರ್ಡ್‌ ಎಂದಾಯಿತು.

ಡಿಜಿಟಲ್‌ ಫೋನ್‌ಗಳ ಕಥೆ ಸ್ವಲ್ಪ ಭಿನ್ನವಾದುದು. ಮೊದಲಾಗಿ ಡಿಜಿಟಲ್‌ ಫೋನ್‌ (ಅಥವಾ ‘ಟಚ್‌ ಟೋನ್‌ ಫೋನ್‌’ ಎನ್ನುತ್ತಾರೆ) ಬಳಕೆಗೆ ಬಂದದ್ದೇ ಸುಮಾರು 1960 ರಿಂದೀಚೆಗೆ. ಅದಕ್ಕಿಂತ ಮೊದಲು ಏನಿದ್ದರೂ ರೋಟರಿ ಡಯಲಿಂಗ್‌ನ ಫೋನ್‌ಗಳೇ ಇದ್ದದ್ದು. ಅದರಲ್ಲಿ ಮೇಲಿಂದ ಕೆಳಕ್ಕೆ ಅಪ್ರದಕ್ಷಿಣಾಕಾರದಲ್ಲಿ 1,2,3,... 8,9,0 ಅಂಕಿಗಳುಳ್ಳ ಡಯಲ್‌. ಈ ರೀತಿಯ ಟೆಲಿಫೋನನ್ನು ಉಪಯೋಗಿಸಿದ ದಿನಗಳು ನಿಮಗಿನ್ನೂ ನೆನಪಿರಬಹುದು. ಅಂದಹಾಗೆ ಅಲ್ಲಿ 0 ಯಾಕೆ ಕೆಳಗೆ ಇತ್ತು ಎಂಬ ಪ್ರಶ್ನೆ ನಿಮಗೆ ಬರಬಹುದು. ಅದಕ್ಕೆ ಕಾರಣವೆಂದರೆ ಆಗೆಲ್ಲ ‘ಪಲ್ಸ್‌’ ಡಯಲಿಂಗ್‌ ಇದ್ದದ್ದು. ಈಗಿನಂತೆ ‘ಟೋನ್‌’ ಡಯಲಿಂಗ್‌ ಅಲ್ಲ . ಯಾವ ಅಂಕಿ ತಿರುಗಿಸುತ್ತೇವೋ ಅಷ್ಟು ಪಲ್ಸ್‌. ‘0’ಗೆ ಸೊನ್ನೆ ಪಲ್ಸ್‌ಗಳ ಬದಲಾಗಿ ಹತ್ತು ಪಲ್ಸ್‌ಗಳೆಂದು ನಿರ್ಧರಿಸಿ ‘0’ಯನ್ನು ‘9’ರನಂತರ ಕೆಳಗೆ ಇಡಲಾಗಿತ್ತು.

ಟಚ್‌ಟೋನ್‌ ಫೋನ್‌ಗಳ ಕೀಪ್ಯಾಡ್‌ ವಿನ್ಯಾಸ ಕಾಲ್ಕುಲೇಟರ್‌ಗಿಂತ ಬೇರೆಯಾಗಿರಲು ಬೇರೆಬೇರೆ ಕಾರಣಗಳನ್ನು ಊಹಿಸಬಹುದು.

1. ಆರಂಭದಲ್ಲಿ ಡಿಜಿಟಲ್‌ ಫೋನ್‌ಗಳ ಸರ್ಕ್ಯೂಟರಿ ಉಪಕರಣಗಳು, ಬಹಳ ವೇಗವಾಗಿ ಕೀಗಳನ್ನು ಅದುಮಿದರೆ ಅವನ್ನು ರಿಜಿಸ್ಟರ್‌ ಮಾಡಿಕೊಳ್ಳುವಲ್ಲಿ ತಪ್ಪುತ್ತಿದ್ದುವು. ಕಾಲ್ಕುಲೇಟರ್‌ ಉಪಯೋಗಿಸಿ ಅಭ್ಯಾಸವಾಗಿದ್ದ ಜನರು ಬಹಳ ಕ್ವಿಕ್ಕಾಗಿ ಕೀಗಳನ್ನು ಅದುಮುವ ಸಾಧ್ಯತೆಯನ್ನು ತಪ್ಪಿಸುವುದಕ್ಕಾಗಿಯೇ ಟೆಲಿಫೋನ್‌ ಕಂಪೆನಿಯವರು ಉಲ್ಟಾ ಕೀ ಪ್ಯಾಡ್‌ ಅಳವಡಿಸಿರಬಹುದು!

2. ರೋಟರಿ ಡಯಲ್‌ ಫೋನನ್ನು ಉಪಯೋಗಿಸಿ ಅಭ್ಯಾಸವಾಗಿದ್ದರಿಂದ ಮೇಲಿನ ಸಾಲಲ್ಲಿ 1,2,3, ಅದರ ಕೆಳಗೆ 4,5,6, ಆನಂತರ 7,8,9 ಮತ್ತದರ ಕೆಳಗೆ 0 - ಈ ವಿನ್ಯಾಸ ಜನರಿಗೆ ಅನುಕೂಲಕರವಾಗಿರುತ್ತದೆಂದು ಅದನ್ನು ಅಳವಡಿಸಿರಬಹುದು.

2. ಬೆಲ್‌ ಲ್ಯಾಬೊರೇಟರಿಯವರು ನಡೆಸಿದ ಸಮೀಕ್ಷೆಯ (1960ರ ಜುಲೈಯಲ್ಲಿ ಈಬಗ್ಗೆ ಪ್ರಕಟವಾದ ಟೆಕ್ನಿಕಲ್‌ ಜರ್ನಲ್‌) ಪ್ರಕಾರ ಈ ವಿನ್ಯಾಸದಲ್ಲಿ ಡಯಲ್‌ ಮಾಡುವಾಗ ತಪ್ಪುಗಳು ಆಗುವುದು ಕಡಿಮೆಯೆಂದು ತಿಳಿದುಬಂದು ಈ ವಿನ್ಯಾಸಕ್ಕೆ ಪುಷ್ಟೀಕರಣ ಸಿಕ್ಕಿತಂತೆ.

4. ಎ,ಬಿ,ಸಿ,ಡಿ... ಇಂಗ್ಲೀಷ್‌ ಅಕ್ಷರಗಳನ್ನೂ ಕೀಪ್ಯಾಡ್‌ ಮೇಲೆ ಅಂಕಿಗಳಿಗೆ ಹೊಂದಿಕೊಂಡು ಅಳವಡಿಸಬೇಕಾಗಿ ಬಂದಾಗ ಎ,ಬಿ,ಸಿ,ಡಿ... ಅಕ್ಷರಗಳು ಮತ್ತು 2,3,4,... ಅಂಕಿಗಳು ಈಗಿನ ಕ್ರಮದಲ್ಲೇ ಇರುವುದು ಸಮಂಜಸ. ‘1’ ಅಂಕೆಯ ಕೀಗೆ ಯಾವುದೇ ಅಕ್ಷರವಿಲ್ಲ - ಅದನ್ನು ಹೆಚ್ಚುವರಿ ಡಯಲಿಂಗ್‌ಗೆ (ಉದಾಹರಣೆಗೆ ಇಲ್ಲಿ ಅಮೆರಿಕದಲ್ಲಿ ದೂರದ ಊರಿಗೆ ಫೋನ್‌ ಮಾಡುವಾಗ ‘1’ ಪ್ರಿಫಿಕ್ಸ್‌ ಆಗುತ್ತದೆ) ಬಳಸುವುದರಿಂದ.

ಒಂದು ಸ್ವಾರಸ್ಯವೆಂದರೆ ಡಿಜಿಟಲ್‌ ಟೆಲಿಫೋನ್‌ನ ನಂತರ ಬಂದ ಕಂಪ್ಯೂಟರ್‌ನ ಕೀಲಿಮಣೆಯಲ್ಲಿ ನ್ಯೂಮರಿಕ್‌ ಕೀಪ್ಯಾಡ್‌ನ ವಿನ್ಯಾಸಕ್ಕೆ, ಹಾಗೆಯೇ ಅಟೊಮ್ಯಾಟಿಕ್‌ ಟೆಲ್ಲರ್‌ ಮೆಷಿನ್‌ನ ಕೀಪ್ಯಾಡ್‌ಗೆ ಕೂಡ ಮತ್ತೆ ಕಾಲ್ಕುಲೇಟರ್‌ನ ವಿನ್ಯಾಸವನ್ನೇ ಉಪಯೋಗಿಸಲಾಗಿದೆ!

ಇದಿಷ್ಟು ಕೀಪ್ಯಾಡ್‌ಗಳ ಕಹಾನಿ. ಕೆಲವು ವೆಬ್‌ಸೈಟ್‌ಗಳು ಮತ್ತು ಪುಸ್ತಕಗಳಲ್ಲಿದ್ದ ಮಾಹಿತಿಗಳನ್ನು ಆಧರಿಸಿ ನಾನು ಸಿದ್ಧಪಡಿಸಿದ ಈ ಲೇಖನದಲ್ಲಿ - ತಾಂತ್ರಿಕ ವಿಷಯವಾದ್ದರಿಂದ, ಇಂಗ್ಲೀಷ್‌ ಪದಗಳ ಬಳಕೆ ತುಸು ಹೆಚ್ಚಾಗಿಯೇ ಇದೆ. ದಯವಿಟ್ಟು ಕ್ಷಮಿಸಿ.

ಕೊನೆಯಲ್ಲೊಂದು ಕ್ವಿಕ್‌ ಪ್ರಶ್ನೆ : ಕಾಲ್ಕುಲೇಟರ್‌ ಉಪಯೋಗಿಸದೆ ಉತ್ತರಿಸಿ. ಟೆಲಿಫೋನ್‌ ಕೀಪ್ಯಾಡ್‌ನ ಎಲ್ಲ ಅಂಕಿಗಳ ಗುಣಲಬ್ಧ ಎಷ್ಟು ? ಸರಿಯಾದ ಉತ್ತರಕ್ಕೆ ಆ ಉತ್ತರದಷ್ಟೇ ಅಂಕಗಳು:-) ಆದರೂ ಉತ್ತರವನ್ನು ಕಳಿಸುವಿರಾದರೆ ವಿಳಾಸ - [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X