• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತ್ತಿಯಲಗಿನ ತಾಂತ್ರಿಕತೆ

By Staff
|

*ಶ್ರೀವತ್ಸ ಜೋಶಿ

Cutting Edge TechnologyCutting edge technology ಎಂದು ನೀವು ಓದಿರಬಹುದು, ಅಥವಾ ನೀವು/ನಿಮ್ಮ ಮನೆಯವರು ಕೆಲಸ ಮಾಡುವ ಕಂಪೆನಿ ‘ ಕಟ್ಟಿಂಗ್‌ ಎಡ್ಜ್‌ ಟೆಕ್ನಾಲಜಿ’ಯದಾಗಿರಬಹುದು. ಹೇಳಲಿಕ್ಕೆ ಬೇಸರವೆನಿಸುತ್ತದೆ, ಆದರೆ ಕಹಿಸತ್ಯವೆಂದರೆ ಇಂದು ಇಂತಹ ಎಷ್ಟೋ ಕಟ್ಟಿಂಗ್‌ ಎಡ್ಜ್‌ ಟೆಕ್ನಾಲಜಿಯ ಕಂಪೆನಿಗಳಲ್ಲಿ ಕೆಲಸಮಾಡುವುದೆಂದರೆ ‘ನೆತ್ತಿಯ ಮೇಲೆ ತೂಗುತಿದೆ ಕತ್ತಿ’ ನೆನಪಾಗುತ್ತದೆ! ಇರಲಿ, ಟೆಕ್ನಾಲಜಿಯ ಬಗ್ಗೆಯೇ ಹೆಚ್ಚು ವಿವರಿಸಿ ವಿಚಿತ್ರಾನ್ನವನ್ನು ಭಾರವಾಗಿಸುವುದಕ್ಕಿಂತ ‘ಕಟ್ಟಿಂಗ್‌ ಎಡ್ಜ್‌’ ಅನ್ನು ಈ ಸಲದ ವಿಷಯವಾಗಿ ಎತ್ತಿಕೊಳ್ಳುವಾ. ಆದರೂ ಶೀರ್ಷಿಕೆ ‘ಕತ್ತಿಯಲಗಿನ ತಾಂತ್ರಿಕತೆ’ ಎಂದೇ ಇರಲಿ ! ಏಕೆಂದರೆ ಈ ಲೇಖನದಲ್ಲಿನ ವಸ್ತು ಮತ್ತು ಕೊನೆಯಲ್ಲಿರುವ ಜಾಣ್ಮೆ ಲೆಕ್ಕಕ್ಕೂ ಸಾಮಾನ್ಯ ಅಂಶವೆಂದರೆ ಕತ್ತಿ ಮತ್ತು ಕತ್ತಿಯ ಅಲಗು.

ಕತ್ತಿಯ ಅಲಗು ಬಹಳ ಹರಿತ. ಹಾಗಾಗಿಯೇ ಏನೋ, ‘ಕತ್ತಿ’ ಎಂಬುದನ್ನು ಶಾರ್ಪ್‌ನೆಸ್‌ ಎಂಬರ್ಥದ ವಿಶೇಷಣವಾಗಿ ಬಳಸುತ್ತಾರೆ ತೆಲುಗಿನವರು. ‘ಯುನಿಕ್ಸ್‌ ಪ್ರೋಗ್ರಾಮಿಂಗ್‌ಲೊ ಆಯಿನ ಒಕ್ಕ ಕತ್ತಿ ಕಾಂಡಿಡೇಟ್‌...’ ಅಂದರೆ ಯುನಿಕ್ಸ್‌ ಪ್ರೋಗ್ರಾಮ್ಮಿಂಗ್‌ನಲ್ಲಿ ಅವನು ಬಹಳ ಶಾರ್ಪ್‌ ಎಂದರ್ಥ. ಕನ್ನಡದಲ್ಲಿ ಈ ರೀತಿಯ ಬಳಕೆ ಇದೆಯೋ ನನಗೆ ಗೊತ್ತಿಲ್ಲ . ಹಾಗೆಯೇ ತೆಲುಗಿನಲ್ಲಿ , ಖಂಡತುಂಡ ಮಾತಾಡುವುದು ಎನ್ನುವುದಕ್ಕೆ ‘ಕತ್ತಿಲಾಗಾ ಮಾಟ್ಲಾಡ್ತಾಡು...’ ಎನ್ನುತ್ತಾರೆ. ನಮ್ಮ ಕನ್ನಡದಲ್ಲಿ , ಕನಕದಾಸರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಕೀರ್ತನೆಯಲ್ಲಿ ‘ಚಂಡ ಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು ಖಂಡತುಂಡ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ...’ ಎಂದಿದ್ದಾರೆ.

‘ಸೌದೆ ತಾರೋ ಮಲ್ಲ...’ ಎಂದು ಕೇಳಿದರೆ ‘ಕತ್ತಿ ತಾಗೀತಲ್ಲ...’ ಎಂದು ಉತ್ತರ ಕೊಡುವ ಸೋಮಾರಿ ಮಲ್ಲನ ಹಾಡನ್ನು ನೀವು ಕೇಳಿರಬಹುದು. ಆದರೆ ಮಲ್ಲನಂತೆ ಕತ್ತಿಯ ಹೆದರಿಕೆಯಿಂದ ಕುಳಿತರೆ ನಮ್ಮ ದೈನಂದಿನ ಕೆಲಸಗಳಾಗಲಿಕ್ಕಿಲ್ಲ . ಸೌದೆ ತರಲು ನಾವು ಕಾಡಿಗೆ ಹೋಗುವವರಲ್ಲವಾದರೂ ಮನೆಯಲ್ಲಿ ಕತ್ತಿ, ಚೂರಿ ಉಪಯೋಗಿಸದೇ ಇರಲಿಕ್ಕಾಗುತ್ತದೆಯೇ? ತರಕಾರಿ, ಹಣ್ಣು , ಬ್ರೆಡ್‌ ಕಟ್‌ ಮಾಡುವಾಗ ಕತ್ತಿಯಲಗು ತಾಗಿ ಸಣ್ಣಪುಟ್ಟ ಗಾಯವಾದ ಘಟನೆ ನಿಮ್ಮಲ್ಲೂ ಯಥೇಷ್ಟ ಆಗಿರಬಹುದು. ಅಂದಮಾತ್ರಕ್ಕೆ ಕತ್ತಿ ಉಪಯೋಗಿಸುವುದನ್ನು ನಿಲ್ಲಿಸಲಿಕ್ಕಾಗುತ್ತದೆಯೇ ? ಅಯ್ಯೋ, ಅದೇನು ಮಹಾ, ಹಾಗೂ ಒಂದೊಮ್ಮೆ ಕತ್ತಿ ತಾಗಿ ಬೆರಳಿಗೆ ಗಾಯವಾದರೆ ಒಂದು ‘ಬಾಂಡ್‌-ಎಯ್ಡ್‌’ ಹಚ್ಚಿದರಾಯಿತು ಎನ್ನುತ್ತೀರಾ! ಹೌದು, ಬಾಂಡ್‌-ಎಯ್ಡ್‌ನ ಜನ್ಮಕ್ಕೆ ಕಾರಣವಾದ ಕಟ್ಟಿಂಗ್‌ ಎಡ್ಜ್‌ನ (ಕತ್ತಿಯಲಗು) ಕಥೆ ಹೀಗಿದೆ.

1920ರ ಮಾತು. ನ್ಯೂಜೆರ್ಸಿ ಪ್ರಾಂತದ ಬ್ರನ್ಸ್‌ವಿಕ್‌ ಎಂಬಲ್ಲಿ , ಅಗತಾನೆ ಮದುವೆಯಾಗಿದ್ದ ಜೋಸೆಫಿನ್‌ ಡಿಕ್ಸನ್‌ ತನ್ನ ಗಂಡ ಅರ್ಲ್‌ ಡಿಕ್ಸನ್‌ನೊಂದಿಗೆ ಹೊಸ ಮನೆಯಾಂದರಲ್ಲಿ ವಾಸವಾಗಿದ್ದಳು. ಮದುವೆಯಾಗುವವರೆಗೂ ಅಡಿಗೆ ಮಾಡಿ ಗೊತ್ತಿರದಿದ್ದ ಜೊಸೆಫಿನ್‌ (ಈಕೆಯ ಗುಂಪಿನವರು ಸಾಕಷ್ಟು ಸಿಗುತ್ತಾರೆ, ಬಿಡಿ!) ಮದುವೆಯಾದನಂತರ ಗಂಡ ಆಫೀಸಿಂದ ಬರುವಾಗ ಡಿನ್ನರ್‌ ರೆಡಿ ಮಾಡಿಟ್ಟಿರುತ್ತಿದ್ದಳೇನೊ ಸರಿ. ಆದರೂ ಪದೇಪದೇ ಕೈಬೆರಳುಗಳಿಗೆ ಚೂರಿ-ಕತ್ತಿ ತಾಗಿ ಗಾಯಾಳುವಾಗಿರುತ್ತಿದ್ದಳು. ಅರ್ಲ್‌ ಡಿಕ್ಸನ್‌ ಆ ಕಾಲದಲ್ಲಿ ‘ಜಾನ್ಸನ್‌ ಏಂಡ್‌ ಜಾನ್ಸನ್‌’ ಕಂಪೆನಿಯಲ್ಲಿ ಅರಳೆ (ಹತ್ತಿ) ಸರಬರಾಜಿನ ಕೆಲಸ ಮಾಡುತ್ತಿದ್ದ. ತನ್ನ ನೆಚ್ಚಿನ ಮಡದಿಯ ಈ ಗಾಯಗಳನ್ನು ನೋಡಿ ಮೊದಮೊದಲು ಪ್ಲಾಸ್ಟರ್‌ ತುಂಡುಮಾಡಿ ಅದರೊಳಗೆ ಸ್ವಲ್ಪ ಔಷಧಿ ಅದ್ದಿದ ಹತ್ತಿ ಇಟ್ಟು ಶುಶ್ರೂಷೆ ಮಾಡುತ್ತಿದ್ದ. (ಸೋ ನೈಸ್‌ ಆಫ್‌ ಹಿಮ್‌ !?) ಆದರೆ ಒಂದು ಗಾಯ ಗುಣವಾದ ನಂತರ ಇನ್ನೊಂದು ಬೆರಳನ್ನು ಕತ್ತರಿಸಿಕೊಳ್ಳುತ್ತಿದ್ದಳು ಜೊಸೆಫಿನ್‌. ಕೊನೆಗೂ ಅರ್ಲ್‌ಗೆ ಒಂದು ಉಪಾಯ ಹೊಳೆಯಿತು. ಅವನೇನೂ ಹೊಸ ಅಡಿಗೆಯವನನ್ನು ನೇಮಿಸಲಿಲ್ಲ , ಬದಲಾಗಿ, ಒಂದು ಉದ್ದದ ಪ್ಲಾಸ್ಟರ್‌ ತುಂಡಿಗೆ ಅಲ್ಲಲ್ಲಿ ಕ್ರಿನೊಲೈನ್‌ ಔಷಧಿಯಲ್ಲಿ ಮುಳುಗಿಸಿದ ಹತ್ತಿಯ ಚೂರುಗಳನ್ನು ಅಂಟಿಸಿಟ್ಟ . ಇನ್ನು ಮುಂದೆ ಗಾಯವಾದಾಗ ಜೊಸೆಫಿನ್‌ ತಾನೇ ಮಾಡಿಕೊಳ್ಳಬಹುದಾಗಿದ್ದ ಚಿಕಿತ್ಸೆ ಎಂದರೆ ಈ ಪ್ಲಾಸ್ಟರ್‌ನಿಂದ ಒಂದು ತುಂಡು ತೆಗೆದು ಬೆರಳಿಗೆ ಸುತ್ತಿಕೊಳ್ಳುವುದು!

Srivathsa Joshi‘ಯುರೇಕಾ...’ ಎಂದು ಓಡಿದ ಅರ್ಲ್‌ ಡಿಕ್ಸನ್‌ ತನ್ನ ಬಾಸ್‌ನ ಚೇಂಬರಿಗೆ! ಜಾನ್ಸನ್‌ ಏಂಡ್‌ ಜಾನ್ಸನ್‌ ಕಂಪೆನಿಯ ಮೆನೇಜ್‌ಮೆಂಟ್‌ಗೆ ಅರ್ಲ್‌ನ ಈ ಸಂಶೋಧನೆಯಲ್ಲಿ ಹುರುಳಿದೆ ಎನಿಸಿತು. ‘ಬಾಂಡ್‌-ಎಯ್ಡ್‌’ ಎಂಬ ಬ್ರಾಂಡ್‌ನೊಂದಿಗೆ ಔಷಧ ಭರಿತ ಪ್ಲಾಸ್ಟರ್‌ ತುಂಡುಗಳ ತಯಾರಿ ಮತ್ತು ಮಾರಾಟ ಆರಂಭವಾಗಿಯೇ ಬಿಟ್ಟಿತು! ಬಾಂಡ್‌-ಎಯ್ಡ್‌ ಜಗತ್ಪ್ರಸಿದ್ಧವಾಯಿತು; ಅರ್ಲ್‌ಗೆ ಜಾನ್ಸನ್‌ ಏಂಡ್‌ ಜಾನ್ಸನ್‌ ಕಂಪೆನಿಯ ವೈಸ್‌-ಪ್ರೆಸಿಡೆಂಟ್‌ ಹುದ್ದೆಯೂ ಸಿಕ್ಕಿತು. ನಿವೃತ್ತನಾಗುವವರೆಗೂ ಆ ಹುದ್ದೆಗೆ ಅವನು ಬಾಂಡ್‌-ಎಯ್ಡ್‌ನಂತೆ ಅಂಟಿಕೊಂಡಿದ್ದ . ಇತ್ತ ಜೊಸೆಫಿನ್‌ಗೆ ಕೈಬೆರಳುಗಳಿಗೆ ಗಾಯಮಾಡಿಕೊಳ್ಳದೆ ತರಕಾರಿ/ಮಾಂಸ ಕಟ್‌ ಮಾಡುವ ಪ್ರಾವೀಣ್ಯ ಬಂತೋ ಇಲ್ಲವೋ ಗೊತ್ತಿಲ್ಲ , ಬಾಂಡ್‌-ಎಯ್ಡ್‌ಗಳ ಪುಕ್ಕಟೆ ಸರಬರಾಜಂತೂ ಅವರ ಮನೆಯಲ್ಲಿ ಇದ್ದೇ ಇತ್ತೆಂದು ಊಹಿಸಿಕೊಳ್ಳಬಹುದು!

ಇದು ಬಾಂಡ್‌-ಎಯ್ಡ್‌ ಎಂಬ ಪ್ರಾಡಕ್ಟಿನ ಕಟ್ಟಿಂಗ್‌ ಎಡ್ಜ್‌ ಸತ್ಯಕಥೆ!

ಇನ್ನು ಈ ವಾರದ ಜಾಣ್ಮೆಲೆಕ್ಕ. ಇದೂ ಕಟ್ಟಿಂಗ್‌ ಎಡ್ಜ್‌ನದೇ. ನಿಮ್ಮ ಕೈಯಲ್ಲೊಂದು ಬಹಳ ಹರಿತವಾದ ಕತ್ತಿಯಿದೆ. (ಟಾಡಾ ಅಥವಾ ಪೋಟಾ ಆಕ್ಟ್‌ ಕೆಳಗೆ, ಭಯೋತ್ಪಾದಕರೆಂದು ನಿಮ್ಮನ್ನು ಬಂಧಿಸಲಾಗುವುದಿಲ್ಲ , ಡೋಂಟ್‌ ವರಿ:-). ಹಾಗೆಯೇ ನಿಮ್ಮ ಮುಂದಿದೆ ಒಂದು ದೊಡ್ಡ ಮಾಯಾವಿ ಡ್ರಾಗನ್‌. ಅದಕ್ಕೆ ಮೂರು ತಲೆ ಮತ್ತು ಮೂರು ಬಾಲಗಳಿವೆ. ಈ ಡ್ರಾಗನ್‌ನ ವಿಶೇಷ ಮಾಯಾಶಕ್ತಿಯೇನಪ್ಪಾ ಅಂದರೆ ನಿಮ್ಮ ಕತ್ತಿಯಿಂದ ಅದರ ಒಂದು ತಲೆ ಕಡಿದು ಹಾಕಿದರೆ ಅಲ್ಲೇ ಹೊಸದೊಂದು ತಲೆ ಹುಟ್ಟಿಕೊಳ್ಳುತ್ತದೆ. ನೀವು ಡ್ರಾಗನ್‌ನ ಒಂದು ಬಾಲ ಕತ್ತರಿಸಿದರೆ ಅಲ್ಲಿ ಎರಡು ಹೊಸ ಬಾಲಗಳು ಹುಟ್ಟಿಕೊಳ್ಳುತ್ತವೆ. ಎರಡು ಬಾಲಗಳನ್ನು ಒಂದೇ ಏಟಿಗೆ ಕಡಿದರೂ ಆ ಜಾಗದಲ್ಲಿ ಅದಕ್ಕೊಂದು ತಲೆ ಹುಟ್ಟಿಕೊಳ್ಳುತ್ತದೆ! ಎರಡು ತಲೆಗಳನ್ನು ಒಟ್ಟಿಗೇ ತುಂಡರಿಸಿದರೆ ಮಾತ್ರ ಆ ಜಾಗದಲ್ಲಿ ಏನೂ ಹೊಸದಾಗಿ ಹುಟ್ಟಿಕೊಳ್ಳುವುದಿಲ್ಲ. ಡ್ರಾಗನ್‌ನ ಎಲ್ಲ ತಲೆ ಮತ್ತು ಬಾಲಗಳು ನಿರ್ನಾಮವಾದರೆ ಮಾತ್ರ ಅದು ಸಾಯುವುದು.

ಈ ಪರಿಯಲ್ಲಿ ಡ್ರಾಗನ್‌ನ ಮಾಯಾಶಕ್ತಿಯಿರಲು, ನೀವೀಗ ಅದನ್ನು ಕೊಂದುಹಾಕಬೇಕು. ಕಂಡೀಷನ್‌ ಏನೆಂದರೆ, ಕತ್ತಿಯ ಒಂದು ಏಟಿಗೆ ನೀವು ಡ್ರಾಗನ್‌ನ ಒಂದು ಅಥವಾ ಎರಡು ಬಾಲ/ತಲೆಗಳನ್ನು ಮಾತ್ರ ತುಂಡರಿಸಬಹುದು. ಮೂರನ್ನು ಕಡಿದುಹಾಕುವುದು ಸಾಧ್ಯವಿಲ್ಲ. ಇನ್ನೊಂದು ಕಂಡೀಷನ್‌ ಎಂದರೆ ಅತಿ ಕಡಿಮೆ ಸಂಖ್ಯೆಯ ಪ್ರಹಾರ (ಸ್ಟ್ರೋಕ್‌)ಗಳನ್ನು ಬಳಸಬೇಕು.

ಎಷ್ಟು ಸ್ಟ್ರೋಕ್‌ಗಳಲ್ಲಿ ಮತ್ತು ಯಾವ ಪ್ರಕಾರ ಡ್ರಾಗನ್‌ನ ಇತಿಶ್ರೀ ಮಾಡಬಲ್ಲಿರಿ? ನಿಮ್ಮ ಕಟ್ಟಿಂಗ್‌ ಎಡ್ಜ್‌ ಸೊಲ್ಯೂಷನ್‌ ಅನ್ನು sjoshim@hotmail.com ವಿಳಾಸಕ್ಕೆ ಬರೆದು ತಿಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more