ಕರಡಿಯ ಬಗ್ಗೆ ಓದಲು ಆರ್‌ ಯು ರೆಡಿ?

*ಶ್ರೀವತ್ಸ ಜೋಶಿ

Bear this story n your mindಕರಡಿ ಕುಣಿಸುವವನ ಬಗ್ಗೆ ಬೇಂದ್ರೆಯವರು ಬರೆದ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ ಹೊದ್ದಾಂವ ಬಂದಾನ... ಗುನುಗುನುಗುಟ್ಟುತ ಕಡಗವ ಕುಟ್ಟುತ ಕರಡಿಯನಾಡಿಸುತ ನಿಂದಾನ...’ ಎಂಬ ಕವಿತೆ ಮತ್ತು ‘ಕರಡಿಯ ತಕತಕ ಕುಣಿಸುತ ಬಂದನು ಸಿದ್ದಿದ್ದಿ ಬಾವಾ ಬಾಲರ ಜೀವ...’ ಹಾಡುಗಳನ್ನು ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿ ಓದಿದ ನೆನಪು ನಿಮಗಿರಬಹುದು. ಈ ವಾರದ ವಿಚಿತ್ರಾನ್ನ ಡೆಡಿಕೇಟೆಡ್‌ ಟು ಕರಡಿ! ಓದಲು ಆರ್‌ ಯೂ ರೆಡಿ?

ಜಾಂಬವಂತ ತ್ರೇತಾಯುಗದಲ್ಲಿ ರಾಮಾಯಣದಲ್ಲಿ ಬರುವ ಕರಡಿ. ಸುಗ್ರೀವನ ಮಂತ್ರಿಯಾಗಿದ್ದವ ಮತ್ತು ವಾನರ ಸೈನ್ಯದೊಂದಿಗೆ ಶ್ರೀರಾಮನಿಗೆ ಸಹಾಯ ಮಾಡಿದವ. ಇದೇ ಜಾಂಬವಂತ ಮುಂದೆ ದ್ವಾಪರಯುಗದಲ್ಲಿ ಶ್ಯಮಂತಕ ಮಣಿಯ ಅಪಹರಣ ಬಾಬ್ತು ಶ್ರೀಕೃಷ್ಣನೊಂದಿಗೆ ಕಾದಾಡುತ್ತಾನೆ. ‘ಜಾಂಬವಂತನಿಗೆ ರಾಮನಾಗಿ ಶ್ರೀಕೃಷ್ಣ ಕಂಡುಬಂದ... ಹೋರಾಟ ನಡೆಸಿದ ತಪ್ಪಿಗಾಗಿ ಜಾಂಬವಂತ ನೊಂದ...’ ಹಾಡನ್ನು ಗಣೇಶಚೌತಿಯ ದಿನ ಮೈಕಾಸುರ ಅರಚಲೇಬೇಕು. ಆದರೆ ಇಲ್ಲೊಂದು ಡೌಟು. ‘ಅಶ್ವತ್ಥಾಮ ಬಲಿರ್ವ್ಯಾಸಃ ಹನೂಮಾಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ’ ಎಂಬ ಏಳು ಜನ ಚಿರಂಜೀವಿಗಳ ಲಿಸ್ಟ್‌ನಲ್ಲಿ ಜಾಂಬವಂತ ಇಲ್ಲ ! ಹಾಗಾದರೆ ತ್ರೇತಾಯುಗದಿಂದ ದ್ವಾಪರಯುಗದವರೆಗೂ ಹೇಗವನು ಬದುಕುಳಿದ ? ಬೇಂದ್ರೆಯವರ ಕವಿತೆಯಂತೆ ಜಾಂಬವಂತ ಕಲಿಯುಗದಲ್ಲೂ ಇದ್ದಾನೆ. ‘ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ ಜಾಂಬವಂತನ ಹಿಡಿದು ತಂದಾನ...’! ಕರಡಿಗೆ ಜೇನು ಬಹಳ ಪ್ರಿಯವಂತೆ.

ಈಗ ಕಲಿಯುಗಕ್ಕೆ ಬರೋಣ. ‘ಕರಡಿ ಟೇಲ್ಸ್‌’ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾದ ಮಕ್ಕಳ ಪುಸ್ತಕ-ಕ್ಯಾಸೆಟ್‌. ಗುಲ್ಜಾರ್‌, ನಾಸಿರುದ್ದೀನ್‌ ಶಾ, ಗಿರೀಶ್‌ ಕಾರ್ನಾಡ್‌, ಸಯೀದ್‌ ಜಾಫ್ರಿ ಮತ್ತಿತರರ ಪ್ರತಿಭಾಸಂಗಮ ‘ಕರಡಿ ಟೇಲ್ಸ್‌’ ಆಗಿ ಅಪಾರ ಜನಪ್ರಿಯವಾಗಿದೆ. ಹಾಗೆಯೇ ‘ಪಂಜೆ ಮಂಗೇಶರಾಯರ ಕಥೆಗಳು’ ಪುಸ್ತಕದಲ್ಲಿ ಮೂರು ಕರಡಿಗಳ ಕಥೆ - ದೊಡ್ಡ ಕರಡಿ, ಹದಾ ಕರಡಿ, ಸಣ್ಣ ಕರಡಿಗಳ ಕಥೆ - ಓದಿದ ನೆನಪಿದೆ. ಅದರಲ್ಲಿ , ಖಾಲಿಯಾದ ಪಾಯಸದ ಬಟ್ಟಲನ್ನು ಕಂಡು ಅಳುವ ಸಣ್ಣ ಕರಡಿಯ ಚಿತ್ರಣವನ್ನು ಮಂಗೇಶರಾಯರು ಚೆನ್ನಾಗಿ ಕೊಟ್ಟಿದ್ದರು.

ಕರಡಿಗೊಂಬೆಗಳು ನಿಮಗೆ ಗೊತ್ತಿರಬಹುದು. ಅದೇ ‘ಟೆಡ್ಡಿ ಬೇರ್‌’ ಅನ್ನುತ್ತಾರಲ್ಲ , ಅದು! ಟೆಡ್ಡಿ ಬೇರ್‌ ಒಂದು ಆಟಿಗೆಯಾಗಿ, ಶೋಕೇಸ್‌ ಐಟಂ ಆಗಿ ಹೇಗೆ ಹುಟ್ಟಿಕೊಂಡಿತು, ಅದಕ್ಕೆ ‘ಟೆಡ್ಡಿ’ ಎಂಬ ಹೆಸರು ಯಾಕೆ ಬಂತು, ಯಾರು ಆ ಟೆಡ್ಡಿ... ಇತ್ಯಾದಿ ಸ್ವಾರಸ್ಯಕರ ಸಂಗತಿಗಳು ನಿಮಗೆ ಗೊತ್ತೇ?

ಕಳೆದ ಶತಮಾನದ ಆದಿಯಲ್ಲಿ , ಅಂದರೆ 1901ರಿಂದ 1909ರವರೆಗೆ ಅಮೆರಿಕದ ಅಧ್ಯಕ್ಷನಾಗಿದ್ದವನು ಥಿಯೋಡರ್‌ ರೂಸ್‌ವೆಲ್ಟ್‌. ಜನರು ಅವನನ್ನು ಪ್ರೀತಿಯಿಂದ ‘ಟೆಡ್ಡಿ’ ಎಂದು ಕರೆಯುತ್ತಿದ್ದರು. ರೂಸ್‌ವೆಲ್ಟ್‌ನಿಗೆ ಶಿಕಾರಿ(ಬೇಟೆ)ಗೆ ಹೋಗುವ ಹುಚ್ಚಿತ್ತು. ನವಂಬರ್‌ 1902ರಲ್ಲಿ ಒಂದುದಿನ ರೂಸ್‌ವೆಲ್ಟ್‌ ಮತ್ತು ಸಂಗಡಿಗರು ಮಿಸಿಸಿಪ್ಪಿ ರಾಜ್ಯದ ಗೊಂಡಾರಣ್ಯದಲ್ಲಿ ಬೇಟೆಗೆ ಹೋಗಿದ್ದರು. ಗಂಟೆಗಟ್ಟಲೆ ಅಲೆದರೂ ಆದಿನ ಅವರಿಗೆ ಒಂದೇ ಒಂದು ಪ್ರಾಣಿ ಸಿಗಲಿಲ್ಲ . ರೂಸ್‌ವೆಲ್ಟ್‌ನ ಚೇಲಾಗಳು, ಬೇಟೆಯ ತಂಡ ಹೀಗೇ ಸುಮ್ಮನೆ ಹಿಂತಿರುಗಿದರೆ ಅಧ್ಯಕ್ಷಗಿರಿಗೇ ಅವಮಾನ ಎಂದು ತಿಳಿದು, ಕೊನೆಗೂ ಒಂದು ಕರಡಿಮರಿಯನ್ನು ಹಿಡಿದು ತಂದು ರೂಸ್‌ವೆಲ್ಟ್‌ನ ಬಳಿ ನಿಲ್ಲಿಸಿ ಅದನ್ನು ಕೊಲ್ಲುವಂತೆ ಹೇಳಿದರು. ರೂಸ್‌ವೆಲ್ಟ್‌ ಆ ಅಮಾಯಕ ಕರಡಿಮರಿಯನ್ನು ಕೊಲ್ಲಲು ಒಪ್ಪಲಿಲ್ಲ . ಮಾರನೆ ದಿನದ ಪತ್ರಿಕೆಗಳ ಮುಖಪುಟದಲ್ಲೇ ಅದೊಂದು ದೊಡ್ಡ ಸುದ್ದಿಯಾಯಿತು. ಅಧ್ಯಕ್ಷನ ಪ್ರಾಣಿದಯೆ ದೊಡ್ಡಕ್ಷರಗಳಲ್ಲಿ ರಾರಾಜಿಸಿತು. ‘ವಾಷಿಂಗ್ಟನ್‌ ಪೋಸ್ಟ್‌’ಗೆ ವ್ಯಂಗ್ಯಚಿತ್ರ ಬರೆಯುತ್ತಿದ್ದ ಕ್ಲಿಫರ್ಡ್‌ ಬೆರ್ರಿಮನ್‌ ಅವತ್ತು ಈ ವಿಷಯದ್ದೇ ಕಾರ್ಟೂನ್‌ ಬರೆದ. ಬೇಟೆಗಾರನ ಠೀವಿಯಲ್ಲಿ ಅಧ್ಯಕ್ಷ, ಅವನ ಚೇಲಾಗಳು, ಹ್ಯಾಪ್‌ ಮೋರೆ ಹಾಕಿ ನಿಂತಿದ್ದ ಒಂದು ಕರಡಿಮರಿ. ‘ಮಿಸಿಸಿಪ್ಪಿಯಲ್ಲಿ ಹಿಂಸೆ-ಅಹಿಂಸೆಗಳ ನಡುವೆ ಸ್ಪಷ್ಟರೇಖೆ...’ ಎಂಬ ಶೀರ್ಷಿಕೆ.

Srivathsa Joshi, The Authorಈ ಕಾರ್ಟೂನನ್ನು ನ್ಯೂಯಾರ್ಕ್‌ನಲ್ಲಿ ಒಂದು ಆಟಿಗೆ ಅಂಗಡಿಯನ್ನಿಟ್ಟುಕೊಂಡಿದ್ದ ದಂಪತಿ (ಅವರು ಜರ್ಮನ್‌ ಮೂಲದವರು) ಮೋರಿಸ್‌ ಮತ್ತು ರೋಸ್‌ ಮಿಕ್ಟಮ್‌ ಅವರು ನೋಡಿದರು. ಅದರಲ್ಲಿದ್ದ ಕರಡಿಮರಿ ಅವರಿಬ್ಬರಿಗೆ ಮುದ್ದಾಗಿ ಕಂಡುಬಂತು. ಅದನ್ನೇ ಹೋಲುವ ಒಂದು ಗೊಂಬೆಕರಡಿಯನ್ನು ತಯಾರಿಸಿ ಮಿಕ್ಟಮ್‌ ದಂಪತಿ ತಮ್ಮ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟರು. ಬಾಯಿಂದ ಬಾಯಿಗೆ ಸುದ್ದಿ ಹರಡಿ ಆ ಗೊಂಬೆಕರಡಿ ಅಲ್ಲೆಲ್ಲ ಜನಪ್ರಿಯವಾಯಿತು. ಮೋರಿಸ್‌ ಮಿಕ್ಟಮ್‌ ರಾಷ್ಟ್ರಾಧ್ಯಕ್ಷ ಥಿಯೋಡರ್‌ ರೂಸ್‌ವೆಲ್ಟ್‌ಗೆ ಒಂದು ಪತ್ರ ಬರೆದು ‘ಆ ಗೊಂಬೆ ಕರಡಿಗೆ ತಮ್ಮ ಪ್ರೀತಿಯ ಹೆಸರಾದ ‘ಟೆಡ್ಡಿ’ ಎಂದು ಹೆಸರನ್ನಿಡಬಹುದೇ?’ ಎಂದು ವಿನಂತಿಸಿಕೊಂಡ. ಆಶ್ಚರ್ಯವೆಂಬಂತೆ ಅಧ್ಯಕ್ಷನಿಂದ ಅವನಿಗೆ ಅನುಮತಿಯೂ ದೊರಕಿತು! ಅಲ್ಲಿಂದ ಶುರುವಾಯಿತು ಟೆಡ್ಡಿಬೇರ್‌ ಎಂಬ ಹೆಸರಿನ ಗೊಂಬೆಗಳ ಮಾರಾಟ! ಇಂದು ಪ್ರಪಂಚದಾದ್ಯಂತ ದಾಖಲೆ ಪ್ರಮಾಣದಲ್ಲಿ ಮಾರಾಟವಾಗುವ ಆಟಿಗೆ/ಗೊಂಬೆಗಳಲ್ಲೊಂದು ಟೆಡ್ಡಿ ಬೇರ್‌!

ಮುಂದಿನ ಸಲ ನೀವು ಯಾರದಾದರೂ ಮನೆಯಲ್ಲಿ ಟೆಡ್ಡಿಬೇರ್‌ ನೋಡಿದರೆ ಅಥವಾ ಅಂಗಡಿಯಲ್ಲಿ ಟೆಡ್ಡಿಬೇರ್‌ ಕೊಂಡರೆ ಈ ಕಥೆಯನ್ನು ‘ಬೇರ್‌ ದಿಸ್‌ ಇನ್‌ ಯುವರ್‌ ಮೈಂಡ್‌’ :-)

[email protected] ವಿಳಾಸಕ್ಕೆ ನೀವು ಈಮೈಲ್‌ ಕಳಿಸಲಿಕ್ಕಾಗಿ ಈ ವಾರದ ಪ್ರಶ್ನೆ : ಹಿಮಕರಡಿಗಳು (ಪೋಲಾರ್‌ ಬೇರ್ಸ್‌) ಯಾವ ಧ್ರುವಪ್ರದೇಶದಲ್ಲಿ ಕಾಣಸಿಗುವವು ? ಉತ್ತರ ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+