• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಮಚಾಗಿರಿ- ಇದೊಂದು ಹೊಸ ಪರಿ!

By Staff
|
Srivathsa Joshi *ಶ್ರೀವತ್ಸ ಜೋಶಿ

Spoonerism‘ಚಮಚಾಗಿರಿ’ ಎಂಬ ಪದವನ್ನು ಓದಿದಕೂಡಲೇ ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಚಿತ್ರಿತವಾಗಿರಬಹುದಾದ ಚಮಚಾಗಿರಿಗೂ ಪ್ರಸ್ತುತ ಲೇಖನದಲ್ಲಿ ವಿವರಿಸಲ್ಪಡಲಿರುವ ಚಮಚಾಗಿರಿಗೂ ಏನೇನೂ ಸಂಬಂಧವಿಲ್ಲ !

ನೀವು ಬಹುಶಃ ಇದು ರಾಜಕಾರಣಿಗಳ ದೊಡ್ಡ ಹೊಟ್ಟೆಯಡಿ ಆಶ್ರಯಪಡೆಯುವ ಚೇಲಾಗಳದೋ, ಮೇಲಧಿಕಾರಿಯ ಪಾದಸೇವೆ ಮಾಡಿ ಪ್ರಮೋಷನ್‌ ಗಿಟ್ಟಿಸುವ ಚಮಚಾಗಳದೋ, ಕಾಲೇಜು-ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರ ಪ್ರಭಾವೃತ್ತದ ಪರಿಧಿಯಾಳಗೆ ಪ್ರವೇಶಿಸಿ (ಅದು ಹೇಗೋ ನುಸುಳಿ) ಪರೀಕ್ಷೆಯಲ್ಲಿ ಪಾಸಾಗುವ ಪಾಮರ(ಪಂಡಿತ?) ರದೋ ವಿಷಯ ಇರಬಹುದೆಂದುಕೊಂಡಿರಬಹುದು. ನಮ್ಮ-ನಿಮ್ಮ ಕ್ಷೇಮಕ್ಕಾಗಿ ಅಂಥ ಚಮಚಾಗಳಿಂದ ಮತ್ತು ಆ ರೀತಿಯ ಚಮಚಾಗಿರಿಯಿಂದ ದೂರವಿರುವುದು ಒಳ್ಳೆಯದು. ಇಲ್ಲಿಯದು ಬೇರೆಯೇ ರೀತಿಯ ಚಮಚಾಗಿರಿ; ಏನಿದೆಂದು ಮುಂದೆ ಓದಿರಿ!

ರೆ। ವಿಲಿಯಮ್‌ ಆರ್ಕಿಬಾಲ್ಡ್‌ ಸ್ಪೂನರ್‌ (1844-1930) ಇಂಗ್ಲೇಂಡಿನ ಸುಪ್ರಸಿದ್ಧ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಡೀನ್‌ ಆಗಿ, ಆಮೇಲೆ ಅಲ್ಲೇ ನ್ಯೂಕಾಲೇಜ್‌ನಲ್ಲಿ ವಾರ್ಡನ್‌ ಆಗಿ ದೀರ್ಘಕಾಲ ಸೇವೆ ಸಲ್ಲಿಸಿದ ಒಬ್ಬ ಆರ್ಡಿನರಿ ಇಂಗ್ಲೀಷ್‌ ವಿದ್ವಾಂಸ. ಜತೆಯಲ್ಲೇ ಸ್ಥಳೀಯ ಚರ್ಚ್‌ನಲ್ಲಿ ಧಾರ್ಮಿಕ ಉಪನ್ಯಾಸಗಳನ್ನೂ ಕೊಡುತ್ತಿದ್ದ. ಈತ ಉಲ್ಲೇಖನೀಯ ಸಾಹಿತ್ಯಕೃತಿಗಳನ್ನೇನೂ ರಚಿಸದಿದ್ದರೂ ಹೊಸದೊಂದು ಬಗೆಯ ವಾಕ್ಚಾತುರ್ಯದಿಂದ ಜಗತ್ಪ್ರಸಿದ್ಧನಾದ ವ್ಯಕ್ತಿ. ಸ್ಪೂನರ್‌ನ ಆ ವಿಶೇಷ ಶಬ್ದಸರಸ (ವರ್ಡ್‌ ಪ್ಲೇ) ‘ಸ್ಪೂನರಿಸಂ’ ಎಂದೇ ಪ್ರಖ್ಯಾತವಾಗಿದೆ.

ವಾಕ್ಯದಲ್ಲಿನ ಯಾವುದೇ ಎರಡು ಪದಗಳ ಮೊದಲ ಅಕ್ಷರ(ಅಥವಾ ಉಚ್ಚಾರ)ಗಳನ್ನು ಅದಲುಬದಲು ಮಾಡಿ ಹೊಸದೊಂದು ಅರ್ಥಪೂರ್ಣ ಆದರೆ ತಿಳಿಹಾಸ್ಯದ ವಾಕ್ಯ ರಚಿಸುವುದೇ ಸ್ಪೂನರಿಸಂ. Boiling the icicle (Oiling the bicycle) ಎಂಬುದು ಅತ್ಯಂತ ಜನಜನಿತ ಸ್ಪೂನರಿಸಂ. ಹಾಗೆಯೇ, A blushing crow" (A crushing blow), "Those girls are sin twisters" (Those girls are twin sisters)ಇತ್ಯಾದಿ ಅನೇಕಾನೇಕ ಉದಾಹರಣೆಗಳು ಇವೆ.

ಹೆಚ್ಚಿನವು ಸ್ಪೂನರ್‌ನದೇ ರಚನೆಗಳಾದರೆ ಇನ್ನು ಕೆಲವು ಅವನ ಹೆಸರಿನಲ್ಲಿ ಬೇರೆಯವರ ಕೊಡುಗೆ. ಒಟ್ಟಿನಲ್ಲಿ ಸ್ಪೂನರ್‌, ಸ್ಪೂನರಿಸಂ ಇಂಗ್ಲೀಷ್‌ ದೇಶಗಳಲ್ಲೆಲ್ಲ ಗೊತ್ತು. ಎಂಬತ್ತಾರರ ಇಳಿವಯಸ್ಸಿನಲ್ಲಿ ಸ್ಪೂನರ್‌ ಸತ್ತಾಗ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಒಂದು ಪುಟವಿಡೀ ಸ್ಪೂನರಿಸಂಗಳಿಂದ ಕೂಡಿದ್ದ ಶ್ರದ್ಧಾಂಜಲಿ ಪ್ರಕಟಿಸಿತ್ತಂತೆ!

ಸ್ಪೂನರ್‌ ಮತ್ತು ಸ್ಪೂನರಿಸಂ ಬಗ್ಗೆ ‘ಅಧಿಕ್‌ ಜಾನ್‌ಕಾರಿ ಕೇ ಲಿಯೆ’ ನಿಮ್ಮ ಫೇವರಿಟ್‌ ಸರ್ಚ್‌ ಇಂಜಿನ್‌ನಲ್ಲಿ spoonerism ಎಂದು ಟೈಪಿಸಿ. ಅಷ್ಟು ಮಾಡುವ ಮೊದಲು ಪ್ರೊಫೆಸರ್‌ ಸ್ಪೂನರ್‌ ತನ್ನ ವಿದ್ಯಾರ್ಥಿಯಾಬ್ಬನನ್ನು ಬಯ್ದ ಈ ರೀತಿಯನ್ನು ನೋಡಿ:

"You have hissed all my mystery lectures. You have tasted two worms. Pack up your rags and bugs, and leave immediately by the town drain!" ("You have missed all my history lectures. You have wasted two terms. Pack up your bags and rugs, and leave immediately by the down train!"

ಕನ್ನಡದಲ್ಲಿ ಸ್ಪೂನರಿಸಂ ಇದೆಯೇ ?

ಮೊಟ್ಟಮೊದಲ ಗ್ರಂಥವಾದ ಕವಿರಾಜಮಾರ್ಗದಿಂದ ಹಿಡಿದು ಯಾವುದೇ ಗ್ರಂಥದಲ್ಲಾಗಲೀ ಹಲ್ಮಿಡಿ ಶಾಸನದಲ್ಲಾಗಲೀ ಯಾವ ಸ್ಪೂನರಿಸಂನ ಉಲ್ಲೇಖವೂ ಇದ್ದಂತಿಲ್ಲ . ಅಷ್ಟೇ ಅಲ್ಲದೆ ಕನ್ನಡಸಾಹಿತ್ಯದ ಇತಿಹಾಸದಲ್ಲಿ ಸ್ಪೂನರ್‌ ಎಂಬ ವ್ಯಕ್ತಿಯೇ ಇಲ್ಲ . ಹಾಗಾಗಿ ಮೊದಲು ‘ಸ್ಪೂನರಿಸಂ’ಗೆ ಒಂದು ಕನ್ನಡ ಪದ ಹುಡುಕಬೇಕು. ಸದ್ಯಕ್ಕೆ ‘ಚಮಚಾಗಿರಿ’ ಎಂಬ ಪದವನ್ನೇ (ಸ್ಪೂನ್‌ = ಚಮಚ ಶಬ್ದದಿಂದ ವ್ಯುತ್ಪತ್ತಿ) ಸಾಲವಾಗಿ ಉಪಯೋಗಿಸೋಣ. ಕನ್ನಡದಲ್ಲೂ ಈ ಒಂದು ಹಾಸ್ಯಪ್ರಕಾರಕ್ಕೆ ನಾಂದಿ ಹಾಡೋಣ!

ನನ್ನ ಕಿರುಪ್ರಯತ್ನವಾಗಿ ಕನ್ನಡದಲ್ಲಿ ಸ್ಪೂನರಿಸಂನ (ಅಂದರೆ ಚಮಚಾಗಿರಿಯ) ಒಂದು ಪಟ್ಟಿ ಮಾಡಲು ಹೊರಟಿದ್ದೇನೆ. ‘ಟಾಪ್‌ ಟೆನ್‌’ ಲಿಸ್ಟ್‌ ಮಾಡಬೇಕೆಂದಿದ್ದರೂ ಕಷ್ಟಪಟ್ಟು ಒಂಬತ್ತು ಒಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದೇನೆ. ಇಲ್ಲಿದೆ ಲಿಸ್ಟ್‌ (ಸ್ವಲ್ಪ ಕ್ಲಿಷ್ಟವಾದವುಗಳಿಗೆ ಜತೆಯಲ್ಲೇ ಟಿಪ್ಪಣಿ ಇದೆ).

10. ಕಾಯ್‌ ಹೋಳಿಗೆ - ಹಾಯ್‌ ಕೋಳಿಗೆ!

9. ಸದ್ದು ಮಾಡುವ ಹಪ್ಪಳ - ಹದ್ದು ಮಾಡುವ ಸಪ್ಪಳ

8. ಇಂಧನಕ್ಕಾಗಿ ಬಿದ್ದವರು - ಬಂಧನಕ್ಕಾಗಿ ಇದ್ದವರು (ಇರಾಕ್‌ ವಿರುದ್ಧ ಅಮೆರಿಕದ ‘ತೈಲದಾಹದ’ ಯುದ್ಧದಲ್ಲಿ ಬಾಗ್ದಾದ್‌ ಮೇಲೆ ಮುಗಿಬಿದ್ದ ಸೈನಿಕರು ಮತ್ತು ಯುದ್ಧದ ಸೆರೆಯಾಳುಗಳು)

7. ಹರ ಕೊಲ್ಲಲ್‌ ಪರ ಕಾಯ್ವನೇ? - ಕರ ಕೊಲ್ಲಲ್‌ ಪರ ಹಾಯ್ವನೇ? (ಟಾಕ್ಸ್‌, ಟಾಕ್ಸ್‌, ಟಾಕ್ಸ್‌... ಈಗ ವ್ಯಾಟ್‌ ಬೇರೆ. ಒಟ್ಟಿನಲ್ಲಿ ಕರ ನಮ್ಮ ಜೀವ ಹಿಂಡುತ್ತಿದೆಯೇ?)

6. ಕಡೆಯುವವಳಿಗಾದ ನಷ್ಟ - ನಡೆಯುವವನಿಗಾದ ಕಷ್ಟ (ನಂದಗೋಕುಲದಲ್ಲಿ ಒಮ್ಮೆ ಯಶೋದೆ ಮೊಸರು ಕಡೆಯುತ್ತಿದ್ದಾಗ ಸ್ವಲ್ಪ ಬೆಣ್ಣೆ ಚೆಲ್ಲಿತು. ಅಲ್ಲೇ ಓಡಾಡುತ್ತಿದ್ದ ಬಾಲಕೃಷ್ಣ ಜಾರಿ ಬೀಳುವ ಸಂದರ್ಭ ಬಂತು...)

5. ಹಾವೇರಿ ಸಮೀಪದ ಕಾಡು - ಕಾವೇರಿ ಸಮೀಪದ ಹಾಡು (ಬಯಲುಸೀಮೆಯ ಹಾವೇರಿಯ ಬಳಿ ಕಾಡು ಸಿಗುವುದು ಕಷ್ಟವೋ ಏನೊ, ಆದರೆ ಕಾವೇರಿಯ ಕುರಿತ ಹಾಡು ಶರಪಂಜರ ಅಥವಾ ಜೀವನದಿ ಸಿನೆಮಾದ ಟೈಟಲ್‌ ಸಾಂಗ್‌ ಇದೆಯಲ್ಲ !)

4. ಕನ್ನಡಕ್ಕೆ ಎಡೆಯಿಲ್ಲದ ಬೆಂಗಳೂರಲ್ಲಿ ‘ಎನ್ನಡ?’ಕ್ಕೆ ಕಡೆಯಿಲ್ಲ ! (ರೊಂಬ ನೋವಾಗ್ತದೆ ಈ ವಿಚಾರಾನ ನೆನೆದ್ರೇ... ಯೆದಕ್ಕ್‌ ಹೀಗಾಯ್ತು?)

3. ಬಾನು ತಲೆಯ ಮೇಲಿದೆಯೆಂದು ಹೇಳಿದವಳು - ಹೇನು ತಲೆಯ ಮೇಲಿದೆಯೆಂದು ಬಾಳಿದವಳು! (ಪ್ರಾಣಿದಯಾ ಸಂಘದವಳಿರಬೇಕು, ಆತ್ಮಹತ್ಯೆಗೆಂದು ಹೊರಟವಳು ತಲೆಯಲ್ಲಿನ ಹೇನು ಸಾಯಬಾರದೆಂದು ತಾನೂ ಆತ್ಮಹತ್ಯೆಯ ಐಡಿಯಾ ಕ್ಯಾನ್ಸಲ್‌ ಮಾಡಿದಳು!)

2. ಸ್ಕೂಲ್‌ಗೆ ಹೋಗಲು ತಡವಾಗುತ್ತದೆಂದು ತಾಯಿ, ಬಟ್ಟೆ ಹಾಕು ಎಂದು ಹೇಳಿದರೆ ಹಸಿದಿದ್ದ ಮಗುವಿನ ಬಾಯಿ ತಟ್ಟೆ ಹಾಕು ಎಂದಿತ್ತು !

1.

ಈಗ ಬೇಕು ನಿಮ್ಮ ನೆರವು. ನಿಮ್ಮ ಆಲೋಚನಾ ಟೊಪ್ಪಿಯನ್ನು (ಥಿಂಕಿಂಗ್‌ ಕ್ಯಾಪ್‌) ಹಾಕಿಕೊಂಡು ರೆಡಿಯಾಗಿ ! ನಂ.1 ಸ್ಥಾನವನ್ನು ಅಲಂಕರಿಸಲು ಒಂದು ‘ಚಮಚಾಗಿರಿ’ ಏನಾದರೂ ನಿಮಗೆ ಹೊಳೆದದ್ದೇ ಆದರೆ ಅದನ್ನು sjoshim@hotmail.com ವಿಳಾಸಕ್ಕೆ ಬರೆದು ಕಳಿಸಿ.

ಲಾಸ್ಟ್‌ ಬಟ್‌ ನಾಟ್‌ ಲೀಸ್ಟ್‌ , ಮನರಂಜನೆಯ ಹೆಸರಲ್ಲಿ ಈ ರೀತಿ ‘ತಲೆಯನ್ನು ಕೊರೆಯುವ’ ಸಾಧ್ಯತೆಯಿದ್ದರೂ ಈ ‘ಕಲೆಯನ್ನು ತೊರೆಯುವ’ ಕೆಲಸ ಮಾತ್ರ ಮಾಡಬೇಡಿ :-)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more