ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶ್ನಾರ್ಥಕ ಚಿಹ್ನೆ ಎಲ್ಲಿಂದ ಬಂತು?

By Staff
|
Google Oneindia Kannada News

*ಶ್ರೀವತ್ಸ ಜೋಶಿ

you know me ?ಎಲ್ಲಿದ್ದೆ ಇಲ್ಲೀ ತನ್ಕ... ಎಲ್ಲಿಂದ ಬಂದ್ಯವ್ವ... ನಿನಕಂಡು ನಾನ್ಯಾಕೆ ಕರಗಿದೆನೋ... ಎಂದು ಈ ಸಲ ಕೇಳೋಣ ಪ್ರಶ್ನಾರ್ಥಕ ಚಿಹ್ನೆಯನ್ನ !ಎಕ್ಸಾಮಿನೇಶನ್‌ ಹಾಲ್‌ನಲ್ಲಿ , ಪ್ರಶ್ನೆಪತ್ರಿಕೆಯ ತುಂಬೆಲ್ಲ ನಮ್ಮ ಕೆಚ್ಚೆದೆಯನ್ನು ಕೆಣಕಲೆಂದೇ ಜನ್ಮತಾಳಿದೆಯೋ ಎಂಬಂತಿರುವ ಪ್ರಶ್ನಾರ್ಥಕ ಚಿಹ್ನೆ ಬಂದದ್ದೆಲ್ಲಿಂದ? ‘ಗೂನು ಬೆನ್ನಿನ ಮುದುಕಿ’ ಎಂದು ಕರೆಯಲ್ಪಡುವ, ಬದುಕು ಯಾವಾಗಲೂ ಸರಳರೇಖೆಯಾಗಿರುವುದಿಲ್ಲ - ಅಲ್ಲಲ್ಲಿ ಆಗಾಗ ಪ್ರಶ್ನೆಯಾಗಿರುತ್ತದೆಯೆಂದು ಡೊಂಕುರೂಪದಲ್ಲಿ ಕೊಂಕುನುಡಿಯುವ ಈ ಚಿಹ್ನೆ ಉದಯವಾದದ್ದು ಹೇಗೆ ? ಪ್ರಶ್ನಾರ್ಥಕ ಚಿಹ್ನೆಯ ಪರಿಶೀಲನೆ ಮತ್ತು ಪರಿಚಯ ಈ ಸಲದ ವಿಚಿತ್ರಾನ್ನದಲ್ಲಿ.ನಮ್ಮ ಸಂಸ್ಕೃತ ಗ್ರಂಥಗಳಲ್ಲೆಲ್ಲೂ ಪಂಕ್ಚುವೇಷನ್‌ ಮಾರ್ಕ್‌ಗಳೇ ಇಲ್ಲ. (ಅದಕ್ಕೆಂದೇ ಅವು ಪ್ರಶ್ನಾತೀತ?). ಪಂಪ, ರನ್ನ, ಪೊನ್ನ, ಕುಮಾರವ್ಯಾಸ ಬರೆದ ಹಳಗನ್ನಡದಲ್ಲೂ ಪ್ರಶ್ನಾರ್ಥಕ ಚಿಹ್ನೆಯಿಲ್ಲ , ಆಶ್ಚರ್ಯಸೂಚಕವಿಲ್ಲ , ಕೊಮ-ಸೆಮಿಕಾಲನ್‌ಗಳೂ ಇಲ್ಲ! ನಾವು ಇಂದು ಭಾರತೀಯ ಭಾಷೆಗಳಲ್ಲಿ ಉಪಯೋಗಿಸುತ್ತಿರುವ ಪಂಕ್ಚುವೇಷನ್‌ ಮಾರ್ಕ್‌ಗಳೆಲ್ಲ ಪುರಾತನ ಶಾಸ್ತ್ರೀಯ ಗ್ರೀಕ್‌ ಮತ್ತು ಲ್ಯಾಟಿನ್‌ ಭಾಷೆಗಳಿಂದ ಬಂದವು.

ಶತಮಾನಗಳಷ್ಟು ಹಿಂದೆ ಪುಸ್ತಕಮುದ್ರಣ ಇತ್ಯಾದಿ ಇನ್ನೂ ಇಲ್ಲದಿದ್ದಾಗ, ಬರವಣಿಗೆ ಬಲ್ಲ ಒಬ್ಬಿಬ್ಬರಾರೋ ತಾವು ಬರೆದುದನ್ನು ಇತರರಿಗೆ ಓದಿ ಹೇಳುತ್ತಿದ್ದರು. ಅಂಥಾ ಬರಹಗಾರರ ಬರವಣಿಗೆಯಲ್ಲಿ ಪಂಕ್ಚುವೇಷನ್‌ ಮಾರ್ಕ್‌ಗಳ ಮುಖ್ಯ ಉದ್ದೇಶ, ಕೇಳುಗನ ಅವಗಾಹನೆ ಅರ್ಥೈಸುವಿಕೆಗೆ ಅನುಕೂಲವಾಗುವುದು ಆಗಿರಲಿಲ್ಲ ; ಬದಲಾಗಿ ಓದಿಹೇಳುವವನ ಮಾರ್ಗದರ್ಶನಕ್ಕಾಗಿ ಅವು ಉಪಯೋಗಿಸಲ್ಪಡುತ್ತಿದ್ದುವು. ಬರವಣಿಗೆಯಲ್ಲಿನ ಬೇರೆಬೇರೆ ಸಂಜ್ಞೆಗಳು, ಯಾವ ಸಿಲೆಬಲ್‌ಅನ್ನು ಎಷ್ಟು ಒತ್ತಿ ಹೇಳಬೇಕು, ಪದ, ವಾಕ್ಯಗಳ ನಡುವೆ ಎಲ್ಲಿ ಎಷ್ಟು ವಿರಾಮ ಕೊಡಬೇಕು ಎಂಬುದಕ್ಕೆಲ್ಲ ಬಳಕೆಯಾಗುತ್ತಿದ್ದುವು - ಈಗಲೂ ಹಾಗೆಯೇ.

Srivathsa Joshiಲ್ಯಾಟಿನ್‌ನಲ್ಲಿ ಬರೆಯುತ್ತಿದ್ದಾಗ ಪ್ರಶ್ನಾರ್ಥಕ ಭಾವ ಬರುವ ವಾಕ್ಯಗಳನ್ನು ಕೊನೆಯಲ್ಲಿ questio ಎಂಬ ಪದವನ್ನು ಬರೆದು ಅಂತ್ಯಗೊಳಿಸಲಾಗುತ್ತಿತ್ತು. ಆಗಲೇ ಹೇಳಿದಂತೆ ಮುದ್ರಣಸೌಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಕೈಬರಹದ ಕಠಿಣ ಕೆಲಸವನ್ನು ಸರಳಗೊಳಿಸುವುದಕ್ಕಾಗಿ ಹೆಚ್ಚಿನ ಪದಗಳಿಗೆಲ್ಲ ಶಾರ್ಟ್‌ಫಾರ್ಮ್‌ಗಳು ಪ್ರಚಲಿತವಾಗಿದ್ದುವು. ಪ್ರಶ್ನಾರ್ಥಕ ವಾಕ್ಯಾಂತ್ಯದಲ್ಲಿ ಬಳಸುವ questio ಶಬ್ದವನ್ನು QO ಎಂದು ಸರಳೀಕರಿಸಲಾಯಿತು. ಆದರೆ QO ಎಂಬುದು ಬೇರೆ ಕೆಲವು ಪದಗಳಿಗೂ ಶಾರ್ಟ್‌ಫಾರ್ಮ್‌ ಆಗಿದ್ದುದರಿಂದ ಬರವಣಿಗೆಕಾರರು Q ಅಕ್ಷರದ ಕೆಳಗೆ ಅಕ್ಷರವನ್ನು O ಬರೆಯುವ ಪರಿಪಾಠ ಆರಂಭಿಸಿದರು. ಕಾಲಕ್ರಮೇಣ Q ಆ ಅಕ್ಷರವು ಒಂದು ಸುರುಳಿಯಾಯ್ತು, O ಅಕ್ಷರವು ಒಂದು ಚುಕ್ಕಿಯಾಯ್ತು. ಸುರುಳಿಯ ಕೆಳಗೆ ಚುಕ್ಕಿ - ಪ್ರಶ್ನಾರ್ಥಕ ಚಿಹ್ನೆ ಉದಯಿಸಿದ್ದು ಹೀಗೆ!

ಹದಿನೈದನೆಯ ಶತಮಾನದಲ್ಲಿ ಮುದ್ರಣಯಂತ್ರ ಆವಿಷ್ಕಾರದ ನಂತರ ಪಂಕ್ಚುವೇಷನ್‌ ಮಾರ್ಕ್‌ಗಳನ್ನು ಸ್ಟಾಂಡರ್ಡೈಸ್‌ ಮಾಡಬೇಕಾಗಿ ಬಂತು. ಕ್ರಿ.ಶ 1556ರಲ್ಲಿ ಆಲ್ಡೋ ಮನೂಜಿಯೋ ಎಂಬಾತ ಪಂಕ್ಚುವೇಷನ್‌ ಮಾರ್ಕ್‌ಗಳ ಬಗ್ಗೆಯೇ ನಿಯಮಗಳ ಪುಸ್ತಕವೊಂದನ್ನು ಬರೆದು ಕೊಮಾ, ಸೆಮಿಕೊಲೊನ್‌ (ಅಲ್ಪವಿರಾಮ), ಕೊಲೊನ್‌, ಫುಲ್‌ಸ್ಟಾಪ್‌ (ಪೂರ್ಣ ವಿರಾಮ), ಕ್ವೆಷ್ಚನ್‌ ಮಾರ್ಕ್‌ (ಪ್ರಶ್ನಾರ್ಥಕ ಚಿಹ್ನೆ)ಗಳಿಗೆಲ್ಲ ವ್ಯಾಖ್ಯೆಬರೆದು ಉದಾಹರಣೆಗಳನ್ನು ಕೊಟ್ಟ. 1660ರ ನಂತರ ಎಕ್ಸ್ಲಮೇಷನ್‌ ಮಾರ್ಕ್‌ (ಆಶ್ಚರ್ಯ ಸೂಚಕ ಚಿಹ್ನೆ), ಕೊಟೇಶನ್‌ ಮಾರ್ಕ್ಸ್‌ (ಉದ್ಧರಣ ಚಿಹ್ನೆ) ಮತು ಡ್ಯಾಷ್‌ ( - ) ಗಳೂ ಬಳಕೆಗೆ ಬಂದುವು. ಬರೆದುದನ್ನು ಓದಿ ಹೇಳುವ ಕಾಲ ಹೋಯಿತು; ಪುಸ್ತಕ ಮುದ್ರಣ ಆರಂಭವಾಗಿ ಓದುವ ಕಲೆ ಆರಂಭವಾಯಿತು. ಈಗ ಪಂಕ್ಚುವೇಷನ್‌ ಮಾರ್ಕ್‌ಗಳ ಕೆಲಸ ಏನಿದ್ದರೂ ಓದುಗನಿಗೆ ಬರೆದಾತನ ಭಾವವನ್ನು ಮನದಟ್ಟು ಮಾಡುವುದು.

ಸೈಬರ್‌ಯುಗ ಆರಂಭವಾದ ನಂತರ ಇಮೋಟಿಕೋನ್ಸ್‌ ಎಂಬ ಹೊಸ ಪಂಕ್ಚುವೇಷನ್‌ ಮಾರ್ಕ್‌ಗಳು ಅವತರಿಸಿದುವು. ದಿನಾಲೂ ಅವನ್ನು ಬಳಸುವ ನಿಮಗೆ ಈ ಇಮೋಟಿಕೋನ್ಸ್‌ ಬಗ್ಗೆ ಹೇಳಬೇಕಿಲ್ಲ ತಾನೆ? :-) ಇರಲಿ, ಈಗ ಇದೊಂದು ಲಿಸ್ಟ್‌ ನೋಡಿ:

  • ಹೆಂಡತಿ ಮಾಡಿದ ಹೊಸರುಚಿಯನ್ನು ತಿನ್ನಲೋ ಬೇಡವೋ ಎಂಬ ಗಂಡನ ಮುಖದಲ್ಲಿ ...
  • ಗಂಡನ ಔಟ್‌ಲುಕ್‌ ಎಡ್ರೆಸ್‌ಬುಕ್‌ನಲ್ಲಿ ಹೆಂಗಳೆಯರ ಹೆಸರುಗಳೇ ತುಂಬಿರುವುದನ್ನು ನೋಡಿದ ಹೆಂಡತಿಯ ಮನದಲ್ಲಿ ...
  • ಮೊತ್ತಮೊದಲ ಬಾರಿ ಬಾಯ್‌ಫ್ರೆಂಡನ್ನು ಮನೆಗೆ ಕರಕೊಂಡು ಬಂದ ಮಗಳ ಹೆತ್ತವರ ಮೊಗದಲ್ಲಿ...
  • ವೀರಪ್ಪನ್‌ ಪ್ರತಿಸಲ ಆಡಿಯೋ ಕೆಸೆಟ್‌ ಕಳಿಸಿದಾಗಲೂ ತಮಗೆ ಇನ್ನೆಷ್ಟು ಮುಜುಗರವಾಗಲಿದೆ ಎಂದು ಚಿಂತಿಸುವ ಎಸ್‌.ಎಂ.ಕೃಷ್ಣರ ಮನದಲ್ಲಿ...
  • ಸ್ಪೀಡ್‌ ಲಿಮಿಟ್‌ಗಿಂತ ಐದು ಮೈಲಷ್ಟೇ ಹೆಚ್ಚು ಸ್ಪೀಡಿಂದ ಡ್ರೈವಿಸುತ್ತಿದ್ದರೂ ಅಡಗಿ ಕುಳಿತು ಹಿಡಿದು ’ಟಿಕೆಟ್‌’ ದಯಪಾಲಿಸಿದ ಮಾಮಾನ ಕುರಿತು ನಿಮ್ಮ ಹಿಡಿಶಾಪದಲ್ಲಿ...
  • ಭಾರತೀಯ ಕ್ರಿಕೆಟಿಗರ ವಿಕೆಟ್‌ಗಳೆಲ್ಲ ತರಗೆಲೆಯಂತೆ ಉದುರಿದಾಗ ಮ್ಯಾಚ್‌-ಫಿಕ್ಸಿಂಗ್‌ ಎಂಬ ಪೆಡಂಭೂತದ ಪರಿಚಯವಿಲ್ಲದ ವೀಕ್ಷಕನ ಕ್ರೀಡಾಭಿಮಾನದಲ್ಲಿ...
  • ಮಾಡರ್ನ್‌ ಆರ್ಟ್‌ ಅಥವಾ ಸೂಪರ್‌ ಮಾಡರ್ನ್‌ ಕವಿತೆಯ ರಸಾಸ್ವಾದ ಹೇಗೆ ಮಾಡಬೇಕೆಂದು ಅರಿಯದ ಕಲಾಭಿಮಾನಿಯ ಕಂಗಳಲ್ಲಿ...
  • ವಿಚಿತ್ರಾನ್ನದಲ್ಲಿ ಪಾಸಿಟಿವ್‌ ಬಿಡಿ, ’ನಗೆ’ಟಿವ್‌ ವಿಷಯಗಳೂ ಏನೂ ಸಿಗದಿದ್ದಾಗ ನಿಮ್ಮ ವದನಾರವಿಂದದಲ್ಲಿ...
  • ನಮ್ಮ-ನಿಮ್ಮ ದೈನಂದಿನ ಬದುಕಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿ ಬರುವ ಕೆಲವು ಸಂದರ್ಭಗಳನ್ನಿಲ್ಲಿ ಲಿಸ್ಟ್‌ ಮಾಡಿದ್ದೇನೆ. ಇದಕ್ಕಿಂತ ಚೆನ್ನಾದ ಲಿಸ್ಟ್‌ ನಿಮ್ಮ ಬಳಿಯೂ ಇರಬಹುದಾದ್ದರಿಂದ ಅದನ್ನು ನನ್ನ [email protected]ವಿಳಾಸಕ್ಕೆ ಕಳಿಸಿಕೊಡುತ್ತೀರಾ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X