ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲು ಗುಗ್ಗುಲು ಗುಗ್ಗುಲೂ!

By Staff
|
Google Oneindia Kannada News

*ಶ್ರೀವತ್ಸ ಜೋಶಿ

Gulu Gulu Guggulu...ಈ ಸಲದ ವಿಚಿತ್ರಾನ್ನದ ಶೀರ್ಷಿಕೆಯನ್ನು ನೋಡಿ ಏನೊಂದೂ ಅರ್ಥವಾಗಲಿಲ್ಲ , ಅಲ್ಲವೇ ? ಏನಿದು ಗುಲ್ಲು , ಗುಗ್ಗುಗಳ ಗುಲ್ಲೇ ? ‘ಲು’ ಪ್ರತ್ಯಯ ಸೇರಿ ಬಹುವಚನ ಶಬ್ದಗಳಾಗುವ ತೆಲುಗು ಭಾಷೆಯ ವಿಷಯವಿರಬಹುದೇ? ಅಥವಾ ಜತೆಗಿರುವ ಚಿತ್ರವನ್ನು ನೋಡಿ ‘ಗುಗ್ಗುಲು’ ಎಂಬ ಆಯುರ್ವೇದ ಔಷಧೀಯ ಗುಣವುಳ್ಳ ಮರದ ವಿಷಯವೇ ಎಂದು ನೀವು ತಲೆಕೆರೆದುಕೊಳ್ಳಲಾರಂಭಿಸಿದಿರಾ ? ಏನಿದು ಗುಗ್ಗುಲು ಎಂದು ಗೂಗಲ್‌.ಕಾಂನಲ್ಲಿ ಹುಡುಕಲು ಹೊರಟಿರಾ ?

ಅಂಥಾದ್ದೇನಿಲ್ಲ ಬಿಡಿ. ‘ಗುಲು ಗುಗ್ಗುಲು ಗುಗ್ಗುಲೂ’ ಎಂಬುದು ಸಂಸ್ಕೃತ ಸುಭಾಷಿತವೊಂದರ ಕೊನೆಯ ಚರಣ!

ನಿಮ್ಮಲ್ಲಿ ಕೆಲವರಾದರೂ ಹೈಸ್ಕೂಲು-ಕಾಲೇಜುಗಳಲ್ಲಿ ಪ್ರಥಮ ಭಾಷೆಯಾಗಿ ಸಂಸ್ಕೃತವನ್ನು ಕಲಿತಿರಬಹುದು. ಅಥವಾ ಸಂಸ್ಕೃತ ಪ್ರಥಮಭಾಷೆಯಾಗಿ ತೆಗೆದುಕೊಂಡೂ ಕನ್ನಡ/ಇಂಗ್ಲೀಷಲ್ಲೇ ಉತ್ತರಿಸಿ ಜಾಸ್ತಿ ಸ್ಕೋರಿಂಗ್‌ ಎಂದು ಬೀಗುತ್ತಿದ್ದ ಸಹಪಾಠಿಗಳು ನಿಮಗಿದ್ದಿರಬಹುದು. ಈ ವಾರದ ವಿಚಿತ್ರಾನ್ನದಲ್ಲಿ ಸಂಸ್ಕೃತ ಸಾಗರದಿಂದ ಆಯ್ದು ತಂದ ಒಂದಿಷ್ಟು ‘ಲೈಟ್‌ ರೀಡಿಂಗ್‌’ ಸಾಮಗ್ರಿ. ಓದಿ ಆನಂದಿಸಲು ಸಂಸ್ಕೃತ ಪಾಂಡಿತ್ಯ ಬೇಕಾಗಿಲ್ಲ!

‘ಗುಲು ಗುಗ್ಗುಲು ಗುಗ್ಗುಲೂ’ ಎಂಬ ಕೊನೆಯ ಚರಣದ ಆ ಶ್ಲೋಕ/ಸುಭಾಷಿತದ ಪೂರ್ಣ ರೂಪ ಹೀಗಿದೆ:

ಜಂಬೂಫಲಾನಿ ಪಕ್ವಾನಿ ಪತಂತಿ ವಿಮಲೆ ಜಲೆ ।
ಕಪಿಕಂಪಿತಶಾಖಾಭ್ಯೋ ಗುಲುಗುಗ್ಗುಲುಗುಗ್ಗುಲೂ ।।

ಅನುವಾದ: ಜಂಬುನೇರಳೆ ಹಣ್ಣಿನ ಮರವೇರಿದ ಕಪಿಯು ಮರದ ಗೆಲ್ಲನ್ನು ಅಲುಗಾಡಿಸಲು, ಮಾಗಿದ್ದ ಹಣ್ಣುಗಳೆಲ್ಲ ಅಲ್ಲೇ ಕೆಳಗೆ ಶಾಂತವಾಗಿ ಹರಿಯುವ ನೀರಿನಲ್ಲಿ ಬಿದ್ದಾಗ ‘ಗುಲು ಗುಗ್ಗುಲು ಗುಗ್ಗುಲೂ...’ ಎಂಬ ಶಬ್ದವಾಗುತ್ತದೆ! ಯಕ್ಕಶ್ಚಿತ್‌ ಕಪಿಯ ಕಾರುಬಾರನ್ನು ಕವಿ ವರ್ಣಿಸಿದ ರೀತಿ! ಈ ಶ್ಲೋಕವನ್ನು ರಚಿಸಿದ ಕವಿ ಯಾರೆಂದು ನನಗೆ ಸರಿಯಾಗಿ ಗೊತ್ತಿಲ್ಲ . ನನ್ನ ಬಳಿ ಇರುವ (ಯಾವಾಗಲಾದರೂ ಒಮ್ಮೆ ಧೂಳು ಒರೆಸಿ ನಾನು ಓದುವ:-) ‘ಸುಭಾಷಿತ ರತ್ನಭಾಂಡಾಗಾರಮ್‌’ ಎಂಬ ಗ್ರಂಥದ ‘ಸಮಸ್ಯಾಖ್ಯಾನಮ್‌’ ಸೆಕ್ಷನ್‌ನಲ್ಲಿ ನನಗಿದು ಸಿಕ್ಕಿತು.

ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ರಾಜಾಶ್ರಯ ಪಡೆದ ಚತುರಕವಿಗಳ ಬುದ್ಧಿಮತ್ತೆಯನ್ನು ಪರೀಕ್ಷಿಸಲು ಸ್ವತಃ ವಿದ್ವಾಂಸನಾಗಿರುತ್ತಿದ್ದ ರಾಜನೇ ಕಾವ್ಯರಚನೆಯ ಸವಾಲುಗಳನ್ನೊಡ್ಡುತ್ತಿದ್ದ ಕ್ರಮವಿತ್ತು . ಆ ಪ್ರಕಾರವೇ, ‘ಗುಲು ಗುಗ್ಗುಲು ಗುಗ್ಗುಲೂ’ ಎಂದು ಮುಗಿಯುವಂತೆ ಶ್ಲೋಕ ರಚಿಸಬೇಕೆಂದು ರಾಜ ಹೇಳಿರಬೇಕು. ಇದಕ್ಕೆ ತಕ್ಕಂತೆ ಸನ್ನಿವೇಶವನ್ನು ಸೃಷ್ಟಿಸಿ, ಕಾವ್ಯವನ್ನು ಹೊಸೆದು ರಾಜನಿಂದ ಭೇಷ್‌ ಎಂದು ಬಹುಮಾನ ಗಿಟ್ಟಿಸುವುದು ಕವಿಯ ಮಹದಾಸೆ.

Srivathsa Joshiಸಂಸ್ಕೃತದ ಕವಿವರೇಣ್ಯ ಕಾಳಿದಾಸನಂತೂ ಇಂತಹ ಆಶುಕವಿತೆಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈ! ಭೋಜರಾಜ ಮತ್ತು ಕಾಳಿದಾಸನ ಕಾವ್ಯಾತ್ಮಕ ಸಂಭಾಷಣೆಯ ಸ್ವಾರಸ್ಯಕರ ತುಣುಕುಗಳು ಸಂಸ್ಕೃತದ ಅನೇಕ ಗ್ರಂಥಗಳಲ್ಲಿ ಸಿಗುತ್ತವೆ. ಇನ್ನೊಬ್ಬ ಹನೂಮತ್‌ ಕವಿ ಎಂಬವ, ಹನ್ನೊಂದನೇ ಶತಮಾನದವನಂತೆ. ಅವನ ಆಶುಕವಿತ್ವ ಪ್ರತಿಭೆಯ ಈ ಸ್ಯಾಂಪಲ್‌ ನೋಡಿ. ‘ಠಠಂಠಠಂಠಂಠಠಠಂಠಠಂಠಃ’ ಎಂದು ಕೊನೆಯ ಚರಣ ಬರುವಂತೆ ಶ್ಲೋಕ ರಚಿಸಬೇಕೆಂದು ಸವಾಲು ಬಂದಾಗ ಕವಿಯ ಉತ್ತರ :

ರಾಮಾಭಿಷೇಕೆ ಮದವಿಹ್ವಲಾಯಾ ಹಸ್ತಾಚ್ಯುತೊ ಹೇಮಘಟಸ್ತರುಣ್ಯಾಃ ।
ಸೋಪಾನಮಾಸಾದ್ಯ ಕರೋತಿ ಶಬ್ದಂ ಠಠಂಠಠಂಠಂಠಠಠಂಠಠಂಠಃ ।।

ಅನುವಾದ: ಶ್ರೀರಾಮನಿಗೆ ಸ್ನಾನ ಮಾಡಿಸುವಲ್ಲಿ ಮಗ್ನಳಾದ ಸೇವಕಿಯ ಕೈಗಳಿಂದ ಜಾರಿ ಬಿದ್ದ ಚಿನ್ನದ ತಂಬಿಗೆಯು ನದಿತೀರದ ಮೆಟ್ಟಲುಗಳ ಮೇಲೆ ಠ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ... ಎಂದು ಶಬ್ದ ಮಾಡುತ್ತ ಉರುಳಿತು!

ಆಶ್ಚರ್ಯವೆಂದರೆ ಈ ಶ್ಲೋಕಗಳೆಲ್ಲ ಛಂದಸ್ಸಿನ ನಿಯಮಗಳನ್ನು ಒಂಚೂರೂ ತಪ್ಪಿರುವುದಿಲ್ಲ. ಅನುಷ್ಟುಪ್‌, ತ್ರಿಷ್ಟುಪ್‌ ಯಾವುದೇ ಛಂದಸ್ಸಿದ್ದರೂ ಗುರು-ಲಘು ಮಾತ್ರೆಗಳ ಅಕ್ಷರಗಳು ಬರಬೇಕಾದ ಜಾಗದಲ್ಲೇ ಬಂದಿರುತ್ತವೆ! ಈಗಿನ ಕಾಲದ ‘ಫ್ರೀ ಫ್ಲೋಯಿಂಗ್‌’ ಕವನಗಳಂತಲ್ಲ ಇವು. ‘ಗುಲು ಗುಗ್ಗುಲು ಗುಗ್ಗುಲು’ ಎಂದು ನೀರಲ್ಲಿ ಹಣ್ಣುಗಳು ಉದುರಿದ ಶಬ್ದದ ಧ್ವನಿಯಾಗಲೀ, ಮೆಟ್ಟಿಲುಗಳ ಮೇಲಿಂದ ತಂಬಿಗೆ ಉರುಳುತ್ತ ಕೆಳಕ್ಕೆ ಬಿದ್ದ ಶಬ್ದವಾಗಲೀ ‘ಕನ್ವಿನ್ಸಿಂಗ್‌’ ಆಗಿ, ‘ಎಫೆಕ್ಟಿವ್‌’ ಆಗಿ ಬರಬೇಕು; ಧ್ವನಿಯನ್ನು ಪ್ರಕಟಿಸಲು ಉಪಯೋಗಿಸಿದ ಅಕ್ಷರಗಳು ಛಂದೋಬದ್ಧವಾಗಿಯೂ ಇರಬೇಕು. ತಲೆಬಾಗಬೇಕಪ್ಪಾ ಅಂಥ ಅಪ್ರತಿಮ ಆಶುಕವಿಗಳಿಗೆ!

ಇದೇ ತರಹ ‘ಹೂಂಹುಹೂಂಹುಹುಹುಹೂಂಹುಹುಹೂಂಹೂಂ’ ಎಂದು ಕೊನೆಯ ಚರಣ ಇರುವ ಒಂದು ಶ್ಲೋಕವಿದೆ. ಶೃಂಗಾರ ರಸ ಬಹಳವಾಗಿಯೇ ಹರಿಯುವ ಆ ಶ್ಲೋಕ ಮತ್ತು ಅದರ ಅನುವಾದ ಇಲ್ಲೀಗ ಬೇಡ. ಕೇಳುಗನಿಂದ/ ಓದುಗನಿಂದ ಒಂದು ‘ಹೂಂ’ ಸಮ್ಮತಿ ಬರುವಂತೆ ಕವನ ರಚಿಸುವುದೇ ಕಷ್ಟಕರ ಕೆಲಸವಾದ ನಮಗೆ ಹನ್ನೊಂದು ‘ಹೂಂ’ಗಳೆಲ್ಲಿ ಬರಬೇಕು!? ಅದು ಕಾಳಿದಾಸನಂತಹ ಕವಿಗೇ ಸಾಧ್ಯ. ‘ಹೂಂ’ ಅಂತೀರಾ ? ‘ಉಹೂಂ’ ಅಂತೀರಾ ?

ನಿಮ್ಮ ನೆನಪಿನಾಳದಲ್ಲಿ , ಸಂಗ್ರಹದಲ್ಲಿ ಇಂತಹ ಸ್ವಾರಸ್ಯಕರ ಸಂಗತಿಗಳಿದ್ದರೆ ಬರೆಯಿರಿ. ಎಲ್ಲರೂ ಆನಂದಿಸೋಣ. ವಿಳಾಸ [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X