ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಾಯನಶಾಸ್ತ್ರವೂ ರಾಮಾಯಣವೂ

By Staff
|
Google Oneindia Kannada News

*ಶ್ರೀವತ್ಸ ಜೋಶಿ

Srivathsa Joshiರಸಾಯನ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ಮಾವಿನಹಣ್ಣಿನ ರಸಾಯನ ನಮ್ಮೂರಲ್ಲಿ ಬೇಸಿಗೆಕಾಲದ ಮದುವೆ-ಮುಂಜಿ ಫಂಕ್ಷನ್‌ಗಳಲ್ಲಿ ಒಂದು ಕಾಮನ್‌ ಐಟಂ. ಮಾವಿನಹಣ್ಣು ಸಿಗದಿದ್ದ ಸೀಸನ್‌ನಲ್ಲಿ ಬಾಳೆಹಣ್ಣು , ಸೇಬು, ಅನಾನಸ್‌ ಹೀಗೆ ಎಲ್ಲ ಹಣ್ಣುಗಳೂ ರಸಾಯನ ಮಾಡಲು ಬಳಕೆಯಾಗುತ್ತವೆ. ‘ತರಂಗ’ದಲ್ಲಿ ಹಾಸ್ಯಲೇಖನ ಪ್ರಕಟವಾಗುವ ಅಂಕಣಕ್ಕೂ ‘ರಸಾಯನ’ ಎಂದೇ ಹೆಸರು. ಆದರೆ ಇಲ್ಲಿ , ವಿಚಿತ್ರಾನ್ನದಲ್ಲಿ ಈ ಸಲ ವಿಮರ್ಶೆಯಾಗುವುದು ಈ ರಸಾಯನಗಳಲ್ಲ . ಬದಲಾಗಿ, ರಸಾಯನಶಾಸ್ತ್ರ ಅರ್ಥಾತ್‌ ಕೆಮಿಸ್ಟ್ರಿ.

ಕಾಲೇಜಿನ ದಿನಗಳಲ್ಲಿ ರಸಾಯನಶಾಸ್ತ್ರ ನಿಮ್ಮ ಇಷ್ಟದ ಸಬ್ಜೆಕ್ಟ್‌ ಆಗಿತ್ತೇ? ಅಥವಾ ಅಮೋನಿಯಾ ಅನಿಲದ ‘ಪಂಜೆಂಟ್‌’ ವಾಸನೆಯಂತೆ ಕೆಮಿಸ್ಟ್ರಿಯೆಂದರೆ ಮೂಗುಮುರಿಯುವ ಗುಂಪಿನವರೇ ನೀವು? ರಸಾಯನಶಾಸ್ತ್ರ ಸಂಬಂಧಿ ರಸವಿಷಯಗಳನ್ನೆಲ್ಲ ಕೋನಿಕಲ್‌ ಫ್ಲಾಸ್ಕ್‌ಗೆ ಸುರಿದು ವಿಟ್‌-ಪನ್‌ಗಳೆಂಬ ಕ್ಯಾಟಾಲಿಸ್ಟ್‌ ಸೇರಿಸಿ ಒಂದು ಪ್ರಯೋಗ ಮಾಡಲಾಗಿದೆ ಈ ಸಲದ ವಿಚಿತ್ರಾನ್ನದಲ್ಲಿ. ಎಂದಿನಂತೆ ಗಿನ್ನಿಪಿಗ್‌ಗಳು ಸ್ನೇಹಿತರಾದ ನೀವೇ. ಗಾಬರಿಯಾಗಬೇಡಿ, ಆಮ್ಲ-ಕ್ಷಾರ, ಗಂಧಕ-ರಂಜಕಗಳನ್ನು ನಿಮ್ಮ ಮೇಲೆ ಪ್ರಯೋಗಿಸಲಾಗುವುದಿಲ್ಲ. ಇಲ್ಲಿ ಏನಿದ್ದರೂ ಮನೋ‘ರಂಜಕ’ಗಳು ಮಾತ್ರ!

ನಾನು ಪಿ.ಯೂ.ಸಿ ವಿದ್ಯಾಭ್ಯಾಸ ಮಾಡಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ. ಅಲ್ಲಿನ ರಸಾಯನಶಾಸ್ತ್ರ ವಿಭಾಗದಲ್ಲಿ ಕೃಷ್ಣ ಮೂರ್ತಿ ಎಂಬ ಒಬ್ಬ ಪ್ರೊಫೆಸರರಿದ್ದರು. ಅವರ ವಿಷಯಜ್ಞಾನವಂತೂ ಅಮೋಘ. ಅದಕ್ಕಿಂತ ಹೆಚ್ಚಾಗಿ ಅವರ ಸ್ಪೆಷಾಲಿಟಿಯೆಂದರೆ ತರಗತಿಗೆ ಅವರು ಪಾಠಪುಸ್ತಕ ಮಾತ್ರವಲ್ಲ , ಅಟೆಂಡೆನ್ಸ್‌ ರಿಜಿಸ್ಟರನ್ನೂ ತರುತ್ತಿರಲಿಲ್ಲ . ತರಗತಿಯ ಎಲ್ಲ ವಿದ್ಯಾರ್ಥಿ(ನಿ)ಯರ ಹೆಸರೂ ಆಲ್ಫಾಬೆಟಿಕಲ್‌ ಆಗಿ ಅವರಿಗೆ ಕಂಠಪಾಠವಿರುತ್ತಿತ್ತು! ಶೈಕ್ಷಣಿಕ ವರ್ಷದ ಆರಂಭದಲ್ಲಿ ಸುಮಾರು ಒಂದು ವಾರದ ಕಾಲ ಮಾತ್ರ ಅಟೆಂಡೆನ್ಸ್‌ ರಿಜಿಸ್ಟರ್‌ ತರೋರು. ಆಮೇಲೆ ಆ ಲಿಸ್ಟ್‌ ಅವರಿಗೆ ಬೈ-ಹಾರ್ಟ್‌. ಒಂದು ಗಂಟೆ ಅವಧಿಯ ಕೆಮೆಸ್ಟ್ರಿ ಕ್ಲಾಸ್‌ ಮುಗಿದ ಮೇಲೆ ಅವರು ಹಾಜರಿ ಕರೆಯುತ್ತಿದ್ದರು. ನಮ್ಮ ಕ್ಲಾಸಲ್ಲಿ ನಂದಾ ಮತ್ತು ನೀನಾ ಅಂತ ಇಬ್ಬರು ಹುಡುಗಿಯರಿದ್ದರು. ಹಾಜರಿಪಟ್ಟಿಯಲ್ಲಿ ಅವೆರಡು ಅನುಕ್ರಮ ಹೆಸರುಗಳು. ನಮ್ಮ ಕೃಷ್ಣಮೂರ್ತಿ ಸರ್‌ ಹಾಜರಿ ಕರೆಯುತ್ತ ‘ನಂದಾ... ನೀನಾ...’ ಎಂದರೆ ಒಂದು ದಿನ ‘ಹೌದು ನಾನೇ..!’ ಎಂಬ ಉತ್ತರ ಬರಬೇಕೇ!

ಕೆಮಿಸ್ಟ್ರಿಗೆ ನಮಗೆ ಇನ್ನೊಬ್ಬ ಪ್ರೊಫೆಸರ್‌ ಇದ್ದರು, ಅವರ ಹೆಸರು ಕೃಷ್ಣ ಭಟ್‌. ಅವರ ಪಾಠದ ಶೈಲಿಯೂ ಗಂಧಕ-ರಂಜಕಗಳ ಜತೆಗೆ ಮನರಂಜಕವೂ ಆಗಿರುತ್ತಿತ್ತು . ಕೆಮೆಸ್ಟ್ರಿ ಲ್ಯಾಬೋರೇಟರಿಯಲ್ಲಿ ಪ್ರಾಕ್ಟಿಕಲ್‌ ತರಗತಿಗಳೆಂದರೆ ಬ್ಯೂರೆಟ್‌, ಪಿಪ್ಪೆಟ್‌, ಟೆಸ್ಟ್‌ಟ್ಯೂಬ್‌, ಬೀಕರ್‌, ಬರ್ನರ್‌ ಎಲ್ಲ ಇರುತ್ತವೆ. ದ್ರಾವಣಗಳ ರಾಸಾಯನಿಕ ವಿಶ್ಲೇಷಣೆ ಮಾಡುವ ಪ್ರಯೋಗಗಳನ್ನು ನಾವು ಮಾಡಬೇಕು. ಬ್ಯೂರೆಟ್‌ನಿಂದ ಪೊಟಾಸಿಯಂ ಪರಮಾಂಗನೇಟ್‌ ದ್ರಾವಣ ಕೋನಿಕಲ್‌ ಫ್ಲಾಸ್ಕ್‌ಗೆ ಬೀಳುತ್ತಿದ್ದರೆ ಇನ್ನೊಂದು ಟೆಸ್ಟ್‌ಟ್ಯೂಬ್‌ಗೆ ಬೇರೊಂದು ರಾಸಾಯನಿಕ ದ್ರಾವಣ ಸೇರಿಸಬೇಕು. ಪಿಪ್ಪೆಟ್‌ ಎಂಬ ಉಪಕರಣ ಇದಕ್ಕೆ ಬಳಸಬೇಕು. ಪಿಪ್ಪೆಟ್‌ನ ಒಂದು ತುದಿಯನ್ನು ಬಾಯಲ್ಲಿಟ್ಟು ಗಾಳಿಯನ್ನು ಹೀರಿ ನಿರ್ದಿಷ್ಟ ಅಳತೆಯ ದ್ರಾವಣ ಅದರಲ್ಲಿ ತುಂಬಿಸಬೇಕು. ಹಾಗೆ ಪಿಪ್ಪೆಟ್‌ ಮಾಡುತ್ತಿದ್ದ ಸಹಪಾಠಿಯಾಬ್ಬ ಬಾಯಲ್ಲಿ ಪಿಪ್ಪೆಟ್‌ ಇರುತ್ತಲೇ ಅದನ್ನು ಎರಡು ಕೈಗಳಿಂದ ಹಿಡಿದು ಆಕಡೆ ಈಕಡೆಯವರು ಏನು ಮಾಡುತ್ತಿದ್ದಾರೆಂದು ನೋಡಲು ಕಣ್ಣರಳಿಸುತ್ತಿದ್ದ. ಬಾಯಲ್ಲಿ ಸನಾದಿಯಂತೆ ಅವನ ಪಿಪ್ಪೆಟ್ಟನ್ನು ಕಂಡ ಕೃಷ್ಣಭಟ್ಟರು ‘ಪಿಪ್ಪೆಟ್‌ ಮಾಡೋದು ಅಂದರೆ ವಾಲಗ ಊದೋದಲ್ಲ...’ ಎಂದು ಅವನ ಕಿವಿಹಿಂಡಿದ ಚಿತ್ರ ನನಗಿನ್ನೂ ನೆನಪಿದೆ (ಕೆಮೆಸ್ಟ್ರಿ ಕ್ಲಾಸಲ್ಲಿ ಕಲಿತ ಯಾವ ಸೂತ್ರಗಳು ನೆನಪಿರದಿದ್ದರೂ)!

ನಮ್ಮ ಪ್ರಾಧ್ಯಾಪಕರಾಗಿದ್ದ ಕೃಷ್ಣಮೂರ್ತಿ, ಕೃಷ್ಣಭಟ್‌ ಇಬ್ಬರನ್ನೂ ಸ್ಮರಿಸಿದ ಈ ಬರಹಕ್ಕೆ ನಾನು ‘ರಸಾಯನಶಾಸ್ತ್ರವೂ ಕೃಷ್ಣಾಯಣವೂ’ ಎಂದು ಶೀರ್ಷಿಕೆ ಕೊಡಬಹುದಿತ್ತಲ್ಲ ? ರಾಮಾಯಣ ಎಲ್ಲಿ ಬಂತು? ನಿಲ್ಲಿ , ನಿಮಗೆ ಸಮಾಧಾನವಾಗಲೆಂದು ರಾಮಾಯಣದ ಉಪಕಥೆಯಾಂದನ್ನೂ ಇಲ್ಲಿ ಸೇರಿಸಿದ್ದೇನೆ. ರಸಾಯನಶಾಸ್ತ್ರಕ್ಕೆ ಸಂಬಂಧವಿರದಿದ್ದರೂ ಇಂಟೆರೆಸ್ಟಿಂಗ್‌ ಆಗಿದೆ, ಓದಿ.

ನಿಮಗೀಗಾಗಲೇ ಗೊತ್ತಿದ್ದಂತೆ, ಲವ-ಕುಶ ಅವಳಿಮಕ್ಕಳು. ಅಗಸನ ಮಾತಿಗೆ ಬೆಲೆಕೊಟ್ಟ ನಿಷ್ಠುರವಾದಿ ಶ್ರೀರಾಮಚಂದ್ರ, ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಕಾಡಿಗಟ್ಟಿದ್ದಾಗ ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ಹುಟ್ಟಿ ಬೆಳೆದವರು. ಅಂತಹ ಲವ-ಕುಶರಿಬ್ಬರೂ ಬೆಳೆದು ದೊಡ್ಡವರಾದರು. ಕುಶನಿಗೊಬ್ಬಳು ಗರ್ಲ್‌ಫ್ರೆಂಡ್‌ ಸಿಕ್ಕಿದಳು. ಅವಳಿಗೆ ಕಳಿಸುತ್ತಿದ್ದ ಈ ಮೈಲ್‌ನಲ್ಲಿ ಅವನು ನಮ್ಮ ನಿಮ್ಮ ಸಂಪ್ರದಾಯದಂತೆಯೇ With Lav, Khush ಎಂದು ಕೊನೆಯಲ್ಲಿ ಸಿಗ್ನೇಚರಿಸುತ್ತಿದ್ದ. ಈ ಗರ್ಲ್‌ಫ್ರೆಂಡ್‌ಗಾದರೋ ಮುಜುಗರ. ಕುಶನಿಗೆ ಲವನೆಂಬ ಅವಳಿಸೋದರನಿದ್ದ ಮಾತ್ರಕ್ಕೆ ನಾನು ಅವರಿಬ್ಬರನ್ನೂ ಜತೆಯಾಗೇ ಪ್ರೀತಿಸಬೇಕೆ? ಎಂದು ಅವಳ ತರ್ಕ. ಅವಳಿಗೆ, ಕುಶಾಗ್ರಮತಿಗಳಾದ ನಿಮ್ಮದೇನಾದರೂ ಸಮಾಧಾನವಿದೆಯೆ?

ಈಗ ಬ್ಯಾಕ್‌ ಟು ರಸಾಯನಶಾಸ್ತ್ರ . ನಿಮಗೊಂದು ರಸಾಯನಶಾಸ್ತ್ರ ಕುರಿತಾದ ರಸಪ್ರಶ್ನೆ. ವಿಚಿತ್ರಾನ್ನದಲ್ಲಿ ಇದನ್ನು ಕೇಳಿರುವುದರಿಂದ ಇದರ ಉತ್ತರ ಶುದ್ಧತರಲೆಯಾಗಿರುತ್ತದೆಯೆಂಬುದಂತೂ ಗ್ಯಾರಂಟಿ. ಆದರೂ ನಿಮ್ಮ ತಲೆಯಲ್ಲೊಂದಿಷ್ಟು ಕೆಮಿಕಲ್‌ ರಿಯಾಕ್ಷನ್‌ ಹುಟ್ಟಿಸಬಲ್ಲ ತರಲೆ ಮಾಡುವುದೆಂದರೆ ಅದೇನೋ ಮಜಾ. ಅದಕ್ಕೋಸ್ಕರವೇ ಈ ಪ್ರಶ್ನೆಯೇ ಹೊರತು ನಿಮ್ಮ ಕೆಮೆಸ್ಟ್ರಿ ಜ್ಞಾನಪರೀಕ್ಷೆಗೆ ಅಲ್ಲ.

ಹಾಗಾದರೆ ಕೇಳಿ. ಪ್ರಶ್ನೆ ಹೀಗಿದೆ: ಒಂದು ಬೇರಿಯಂ ಪರಮಾಣು ಎರಡು ಸೋಡಿಯಂ ಪರಮಾಣುಗಳೊಂದಿಗೆ ಸೇರಿದಾಗ ಅದು ಯಾವ ಚಿರಪರಿಚಿತ ವಸ್ತುವಿನ ರಾಸಾಯನಿಕ ಸೂತ್ರವಾಗುತ್ತದೆ? ನಿಮಗೆ ಹಿಂಟ್‌ ಬೇಕಿದ್ದರೆ ಹೇಳುತ್ತೇನೆ. ಈ ಉತ್ತರ ಸುಲಿದಿಟ್ಟ ಬಾಳೆಹಣ್ಣು ತಿಂದಷ್ಟು ಸಲೀಸಾಗಿದೆ. ಬೇರಿಯಂನ ಮೂಲಾಕ್ಷರಗಳು ಯಾವುದೆಂದು ಊಹಿಸುವುದು ನಿಮಗೆ ಸುಲಭ. ಸೋಡಿಯಂನದು ಎಂದು ತಿಳಿಸಿ ನಿಮಗೆ ಇನ್ನೂ ಸ್ವಲ್ಪ ಸಹಾಯ ಮಾಡಿದ್ದೇನೆ. ಈಗ ನೀವು ಹೇಳಬೇಕಾದ್ದು ಇಷ್ಟೇ. ಬೇರಿಯಂನ ಒಂದು ಅಣು + ಸೋಡಿಯಂನ ಎರಡು ಅಣು = ?

ಉತ್ತರವನ್ನು ಅಥವಾ ಇಂತಹ ಪ್ರಶ್ನೆ ಕಳಿಸಿದ್ದಕ್ಕೆ ನಿಮ್ಮ ಅಸಮಾಧಾನವನ್ನು ಕಳಿಸಬೇಕಾದ ವಿಳಾಸ- [email protected]

ವಿಚಿತ್ರಾನ್ನದಲ್ಲಿನ ಪ್ರಶ್ನೆಗಳಿಗೆ ಕನ್ಸಿಸ್ಟೆಂಟಾಗಿ ಉತ್ತರಿಸುವುದರಿಂದ ನಿಮ್ಮ ‘ಫ್ರೀಕ್ವೆಂಟ್‌ ಫ್ಲಯರ್‌’ ಮೈಲುಗಳು ಜಾಸ್ತಿಯಾಗುತ್ತವೆ, ಕೊನೆಯಲ್ಲೊಂದು ಆಕರ್ಷಕ ಬಹುಮಾನ ನಿಮ್ಮ ಆಸ್ತಿಯಾಗುತ್ತದೆ ಎನ್ನುವ ವಿಷಯ ನಿಮಗೆ ಗೊತ್ತಿದೆಯೆಂದು ಭಾವಿಸಿದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X