• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಟೆಯ ನೆಂಟನೆ ಓ ಗಡಿಯಾರ...

By Staff
|
Srivathsa Joshi *ಶ್ರೀವತ್ಸ ಜೋಶಿ

Tick Tuck Tick Tuck...Nonstop :)ಗಡಿಯಾರ ಉವಾಚ :

‘ನಾನೊಂದು ಗೋಡೆ ಗಡಿಯಾರ... (ಮಹಾಭಾರತ ಟಿ.ವಿ ಧಾರಾವಾಹಿಯಲ್ಲಿ , ‘ಮೈ ಸಮಯ್‌ ಹೂಂ...’ ಎಂದು ಹರೀಶ್‌ ಭಿಮಾನಿ ತನ್ನ ಕಂಚಿನ ಕಂಠದಲ್ಲಿ ಹೇಳುತ್ತಿದ್ದ ಟೋನ್‌ ಮತ್ತು ಟ್ಯೂನ್‌ ಅನ್ನು ನೆನಪಿಸಿಕೊಳ್ಳಿ). ಈ ಸಲದ ವಿಚಿತ್ರಾನ್ನದಲ್ಲಿ ನನ್ನ ಬಗ್ಗೆ, ಹಾಗೆಯೇ ನನ್ನ ಸಹೋದರರಾದ ಅಲಾರಂ ಕ್ಲಾಕ್‌ ಮತ್ತು ರಿಸ್ಟ್‌ವಾಚ್‌ಗಳ ಬಗ್ಗೆ ಕೂಡ ಲೈಟಾಗಿ ಒಂದಿಷ್ಟು ‘ಕೊರೆಯಲು’ ವಿಚಿತ್ರಾನ್ನ ಅಡಿಗೆಭಟ್ಟರಿಂದ ಅನುಮತಿ ಕೇಳಿ ಪಡೆದಿದ್ದೇನೆ. ಕಳೆದವಾರ ಕಾಲ್ಕುಲೇಟರ್‌ ಮತ್ತು ಡಿಜಿಟಲ್‌ಫೋನ್‌ ವಿಚಿತ್ರಾನ್ನದಲ್ಲಿ ಫೀಚರ್‌ಗೊಂಡಿದ್ದನ್ನು ಕಂಡು ನನಗೂ ಸ್ಫೂರ್ತಿ (ಮತ್ತೆ ಸ್ವಲ್ಪ ಅಸೂಯೆ ಕೂಡ) ಬಂತು! ನಿಮ್ಮ ಸಮಯವನ್ನು ಜಾಸ್ತಿಯಾಗಿ ತೆಗೆದುಕೊಳ್ಳದೆ, ಹೇಳಿ ಮುಗಿಸುತ್ತೇನೆ. ಆಲಿಸುವಂಥವರಾಗಿ...

ಗೋಡೆಗೆ ಅಂಟಿಕೊಂಡು ಇದ್ದಲ್ಲೇ ನಿರ್ಲಿಪ್ತನಾಗಿ ನನ್ನ ಕೆಲಸವನ್ನು ನಾನು ಮಾಡುತ್ತ ಮಾತ್ರ ಇರುತ್ತೇನೆಂದು ನೀವಂದುಕೊಂಡಿರಾ? ರೀ, ನನಗೂ ಭಾವನೆಗಳಿವೆ! ನಾನೂ ನಗುತ್ತೇನೆ, ಸಂತೋಷಪಡುತ್ತೇನೆ. ನನ್ನ ಲಯಬದ್ಧವಾದ, ಕ್ರಮಪ್ರಕಾರದ ನಡಿಗೆಯನ್ನು ಅನುಸರಿಸಲು, ಜೀವನದಲ್ಲಿ ಅಳವಡಿಸಿಕೊಳ್ಳಲು ನೀವೆಲ್ಲ ಕಷ್ಟಪಡುವುದನ್ನು ನೋಡಿ ಕೆಲವೊಮ್ಮೆ ದುಃಖಿಸುತ್ತೇನೆ.

ಆದರೂ, ನಗುವೇ ನನ್ನ ಸಹಜಧರ್ಮ. ಇದನ್ನು ಪುಷ್ಟೀಕರಿಸಲಿಕ್ಕೆಂದೇ ಜಾಹೀರಾತಿನಲ್ಲಿ ನಾನು ಅಥವಾ ನನ್ನ ತಮ್ಮ ರಿಸ್ಟ್‌ ವಾಚ್‌ ಯಾವಾಗಲೂ ಕಾಣಿಸಿಕೊಳ್ಳುವುದು ನಮ್ಮ ಕೈಗಳೆರಡು (ಅಥವಾ ಮುಳ್ಳುಗಳೆರಡು) 10 ಗಂಟೆ 10 ನಿಮಿಷದ ಸಮಯವನ್ನು ತೋರಿಸುವ ಪೋಸ್‌ ಕೊಟ್ಟು ! ನಮ್ಮ ಮುಖ ಆ ಸಮಯವನ್ನು (10:10 ಕೆಲವೊಮ್ಮೆ 10:08 ಅಥವಾ 10:12) ತೋರಿಸುವಾಗ ಒಂದು smiling face ನಂತೆ ಕಾಣಿಸಿಕೊಳ್ಳುವುದು ಮತ್ತು ಅದಕ್ಕಾಗಿಯೇ ಜಾಹೀರಾತಿನಲ್ಲಿ ಆ ಭಂಗಿಯಲ್ಲೇ ನಾವು ಕಾಣಸಿಗುವುದು ಏಕೆ ಎಂದು ನಿಮಗೀಗ ಅರ್ಥವಾಯಿತಲ್ಲ ? ಇನ್ನೊಂದು ಅನುಕೂಲವಿದೆ ಅದರಿಂದ. ನಮ್ಮ ಕೈಗಳು ಆ ವಿನ್ಯಾಸದಲ್ಲಿದ್ದರೇನೇ ನಮ್ಮ ಜನ್ಮದಾತೃ ಕಂಪೆನಿಯ ಟ್ರೇಡ್‌ಮಾರ್ಕ್‌ ಕೂಡ (ಸಾಮಾನ್ಯವಾಗಿ 12ರ ಕೆಳಗೆ ಇರುತ್ತದೆ) ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಕಾಣುವುದು! ಮಾರ್ಕೆಟಿಂಗ್‌ ಗಿಮಿಕ್‌ ಹೇಗೆಲ್ಲ ಯೋಚಿಸುತ್ತದೆ ನೋಡಿ! ಇನ್ನೊಂದು ಥಿಯರಿಯ ಪ್ರಕಾರ :

ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ಗೆ ಗೌರವಸೂಚಿಯಾಗಿ ಅವರು ಹತ್ಯೆಯಾದ ಸಮಯವನ್ನು ಗಡಿಯಾರ/ವಾಚುಗಳ ಜಾಹೀರಾತಲ್ಲಿ ತೋರಿಸುತ್ತಾರೆ ಎಂಬುದನ್ನು ನೀವೂ ಕೇಳಿರಬಹುದು/ಓದಿರಬಹುದು. ಅದು ಅಷ್ಟೇನೂ ಸಮಂಜಸ ಕಾರಣವಲ್ಲ . ಏಕೆಂದರೆ ಲಿಂಕನ್‌ಗೆ ಗುಂಡಿಕ್ಕಿದ್ದು ರಾತ್ರೆ 10:15ಕ್ಕೆ (ಎಪ್ರಿಲ್‌ 14, 1865) ಮತ್ತು ಲಿಂಕನ್‌ ಕೊನೆಯುಸಿರೆಳೆದದ್ದು ಬೆಳಿಗ್ಗೆ 7:22ಕ್ಕೆ (ಏಪ್ರಿಲ್‌ 15, 1865).

Smile please...ಇನ್ನೊಂದು ವಿಚಾರ ನಿಮಗೆ ತಿಳಿಸಲಿಕ್ಕಿದೆ. ಹಳೇಕಾಲದ ಮನೆಗಳಲ್ಲಿ (ಅಥವಾ ಈಗಲೂ ‘ಆಂಟಿಕ್‌’ ಎಂಬ ಮೌಲ್ಯದಿಂದ) ರೋಮನ್‌ ಅಂಕೆಗಳ ಡಯಲ್‌ ಇರುವ ಗಡಿಯಾರಗಳನ್ನು ನೀವು ನೋಡಿರಬಹುದು. ರೋಮನ್‌ ಅಂಕೆಗಳ ನಿಮ್ಮ ಜ್ಞಾನವನ್ನು ಪರೀಕ್ಷಿಸುವ ಅಧಿಕಪ್ರಸಂಗ ಯಃಕಶ್ಚಿತ್‌ ಒಂದು ಗೋಡೆಗಡಿಯಾರವಾದ ನನಗೆ ಬೇಡವಾದರೂ, ಈ ಹಳೆಕಾಲದ ಗಡಿಯಾರಗಳಲ್ಲಿ 4 ಎಂಬ ಅಂಕೆಯನ್ನು ರೋಮನ್‌ನಲ್ಲಿ IVಗೆ ಬದಲಾಗಿ IIII ಎಂದೇ ಬರೆದಿರುತ್ತಾರಲ್ಲ , ಯಾಕಿರಬಹುದು ? ನೀವು ಗಮನಿಸಿದ್ದೀರಾ ? ಇದಕ್ಕೆ ಕಾರಣಗಳು ಇವೆ. ಹಳೇಕಾಲದ ಗಡಿಯಾರಗಳಲ್ಲಿ ಅಂಕೆಗಳನ್ನು ಲೋಹ, ಮರ ಅಥವಾ ಪ್ರಾಣಿಗಳ ಎಲುಬುಗಳಿಂದ ಕೂಡ ‘ಕಾಸ್ಟಿಂಗ್‌’ ಮಾಡಿ ತಯಾರಿಸುತ್ತಿದ್ದರು. 20 I ಗಳು ಮತ್ತು ತಲಾ ನಾಲ್ಕು V ಮತ್ತು X ಗಳು - ಹೀಗೆ ಸಮಸಂಖ್ಯೆಯ ಆಕಾರಗಳು ಸಮಮಿತಿಯಿಂದ ಕಾಸ್ಟಿಂಗ್‌ ಮಾಡಲು ಸುಲಭವಾಗುತ್ತಿತ್ತು. ಇನ್ನೊಂದು ಕಾರಣವೆಂದರೆ ರೋಮನ್‌ ದೇವತೆ ಜುಪಿಟರ್‌ನ ಹೆಸರನ್ನು ಲ್ಯಾಟಿನ್‌ನಲ್ಲಿ ಬರೆಯುವಾಗ ಮೊದಲ ಎರಡು ಅಕ್ಷರಗಳು I ಮತ್ತು V. ದೇವರ ಹೆಸರನ್ನು (ಅದು ಕೂಡ ಇನಿಷಿಯಲ್ಸ್‌ !) ಗಡಿಯಾರದಲ್ಲಿ ಕೆತ್ತುವ ಧೈರ್ಯ ಯಾರಿಗೂ ಇರಲಿಲ್ಲ . ಇಷ್ಟಾದರೂ ಸ್ವಾರಸ್ಯಕರ ಸಂಗತಿಯೆಂದರೆ ಜಗತ್ಪ್ರಸಿದ್ಧ ‘ಬಿಗ್‌ ಬೆನ್‌’ ದೊಡ್ಡ ಗಡಿಯಾರದಲ್ಲಿ 4ನ್ನು IV ಎಂದೇ ಕೆತ್ತಲಾಗಿದೆ!

ಇರಲಿ, ಈ ಕಥೆಗಳನ್ನೆಲ್ಲ ಕೇಳಿ ಆಕಳಿಕೆ ಬಂತೇ? ಈಗ ಟಾಪಿಕ್‌ ಬದಲಾಯಿಸುವಾ. ನನಗೆ ನಗು ಬರುವುದು, ನನ್ನ ಇಂಪಾರ್ಟೆನ್ಸ್‌ನಿಂದ ಜಂಬವಾಗುವುದು ಯಾವ ಸಂದರ್ಭಗಳಲ್ಲಿ ಎಂದು ತಿಳಿಸಿ ನಿಮ್ಮ ಮುಖದಲ್ಲೂ ನಗು ಅರಳುವಂತೆ ಮಾಡಲೇ?

 • ಸಿದ್ಧಾರ್ಥ ಬಸುನಂತಹ ಕ್ವಿಜ್‌ಮಾಸ್ಟರ್‌ಗಳು ಟೆಲಿವಿಷನ್‌ ಕ್ವಿಜ್‌ನ ‘ರ್ಯಾಪಿಡ್‌ ಫೈರ್‌’ ಸುತ್ತಿನಲ್ಲಿ Your time starts...Now!! ಎಂದು ಹೇಳಿದೊಡನೆ ಸ್ಪರ್ಧಿಗಳ ಅಡ್ರಿನಲಿನ್‌ ಮಟ್ಟ ಹೆಚ್ಚಾದಾಗ...
 • ಸಿನೆಮಾಗಳಲ್ಲಿ , ಸಂಜೆ ಐದು ಗಂಟೆಗೆ ಭೇಟಿಯಾಗುತ್ತೇನೆ ಎಂದು ಹೇಳಿರುವ ನಾಯಕನಿಗಾಗಿ ಕಾದು ಕುಳಿತ ನಾಯಕಿಯನ್ನೊಮ್ಮೆ ಮತ್ತು ನನ್ನನ್ನೊಮ್ಮೆ ಕ್ಲೋಸ್‌ಶಾಟ್‌ನಲ್ಲಿ ತೋರಿಸಿದಾಗ...
 • ‘ಏಕ್‌ ದೂಜೆ ಕೆ ಲಿಯೆ’ ಫಿಲಂನಲ್ಲಿ ಕಮಲಹಾಸನ್‌ ಮತ್ತು ರತಿಅಗ್ನಿಹೋತ್ರಿ ಗಡಿಯಾರದ ಅಂಗಡಿಯಲ್ಲಿ ಮೀಟುವಾಗ ನಾವೆಲ್ಲ ಗೋಡೆಗಡಿಯಾರಗಳು ಒಂದಾದಮೇಲೆ ಒಂದರಂತೆ ಒಬ್ಬೊಬ್ಬರೂ 9 ಗಂಟೆ ಬಾರಿಸಿ, ನಾಯಕ-ನಾಯಕಿಗೆ ಮಾತಾಡಲು ಬಿಡದೆ ಸತಾಯಿಸಿದ್ದನ್ನು ನೆನೆದು... (ನಮಗೆ ಅತ್ಯುತ್ತಮ ಷೋಷಕ ನಟ ಅಂದರೆ ಬೆಸ್ಟ್‌ ಡಿಸ್ಟರ್ಬಿಂಗ್‌ ಆಕ್ಟರ್‌ ಎಂದು ಫಿಲ್ಮ್‌ಫೇರ್‌ ಪ್ರಶಸ್ತಿ ಬರಬೇಕಿತ್ತು :-)
 • ಹೈದರಾಬಾದ್‌ನ ಸಲಾರ್‌ ಜಂಗ್‌ ಮ್ಯೂಸಿಯಂನಲ್ಲಿರುವ ನನ್ನ ಅವತಾರವೊಂದು ಪ್ರತಿ ಗಂಟೆಯಾದಾಗ ಒಬ್ಬ ಪುಟ್ಟ ಸೈನಿಕ ಬಂದು ಗಂಟೆಬಾರಿಸುವ ವ್ಯವಸ್ಥೆ ಇರುವಂಥದ್ದನ್ನು ನೋಡಲು, ಬೇರೆ ಸಮಯದಲ್ಲಿ ಎಲ್ಲೇ ಇದ್ದರೂ ಹತ್ತು , ಹನ್ನೊಂದು ಅಥವಾ ಹನ್ನೆರಡು ಗಂಟೆ ಹೊಡೆಯುವ ಸಂದರ್ಭ ಬಂದಾಗ ನನ್ನ ಮುಂದೆ ಜನ ಜಮಾಯಿಸುವುದನ್ನು ನೋಡಿ....
 • ನನ್ನ ತಮ್ಮ ಅಲಾರಂ ಕ್ಲಾಕ್‌ ಹೇಳುವಂತೆ ಬೆಳಿಗ್ಗೆ ಐದೂವರೆ ಅಥವಾ ಆರಕ್ಕೆ ಸರಿಯಾಗಿ ಅಲಾರಂ ಆದರೂ ಅದನ್ನಲ್ಲಿಗೇ ಕುಕ್ಕಿ ಮತ್ತೆ ಕಂಬಳಿ ಹೊದ್ದುಕೊಂಡು ನಿದ್ದೆ ಮಾಡುವ ಕುಂಭಕರ್ಣ ಸಂತತಿಯವರನ್ನು ಕಂಡು...
 • ‘ಡೇ ಲೈಟ್‌ ಸೇವಿಂಗ್‌’ ಎಂದು ಅಮೆರಿಕನ್ನರು ತಂತಮ್ಮ ಗಡಿಯಾರ ವಾಚುಗಳನ್ನು ಏಪ್ರಿಲ್‌ ಮೊದಲ ರವಿವಾರ ಒಂದು ಗಂಟೆ ಮುಂದಕ್ಕೆ, ಅಕ್ಟೋಬರ್‌ ಕೊನೆಯ ಭಾನುವಾರ ಒಂದು ಗಂಟೆ ಹಿಂದಕ್ಕೆ ಅಡ್ಜಸ್ಟ್‌ ಮಾಡಿ, ಜತೆಯಲ್ಲೇ ತಮ್ಮ ಜೈವಿಕ ಗಡಿಯಾರವನ್ನೂ ಅಡ್ಜಸ್ಟ್‌ ಮಾಡಲು ಕಷ್ಟ ಪಡುವಾಗ ! ಈ ವಿಷಯದಲ್ಲಿ ಅರಿಜೋನಾ ರಾಜ್ಯದ ಮತ್ತು ಇಂಡಿಯಾನಾ ರಾಜ್ಯದ ಕೆಲ ಭಾಗದ ಜನರು ಜಾಣರು; ಅವರು ಗಡಿಯಾರವನ್ನು ಹೀಗೆ ಹಿಗ್ಗಾಮುಗ್ಗಾ ಎಳೆಯುವ ಉಸಾಬರಿಗೇ ಹೋಗೋದಿಲ್ಲ!

ಇನ್ನು ಕೆಲವೊಮ್ಮೆ ನನಗೆ ದುಃಖ ಅವಮಾನಗಳೂ ಆಗುವುದಿದೆ. ಮುಖ್ಯವಾಗಿ :

 • ಕೆಟ್ಟು ಹೋಗಿ ಸ್ತಬ್ಧವಾದ ಗಡಿಯಾರವನ್ನು ನೋಡಿ ‘ಪರವಾ ಇಲ್ಲ, ದಿನಕ್ಕೆ ಎರಡು ಸಲವಾದರೂ ಸರಿಯಾದ ಸಮಯ ತೋರಿಸುತ್ತದಲ್ಲ, ಸಾಕು...’ ಎಂಬ ಕುಹಕದ, ಮೂದಲಿಕೆಯ ಮಾತು ಕೇಳಿದಾಗ....
 • ನನ್ನ ಸಣ್ಣ ತಮ್ಮ ರಿಸ್ಟ್‌ವಾಚ್‌ ಕೆಟ್ಟುಹೋದರೆ ಹಳ್ಳಿ ಜನ, ‘ಇದನ್ನಿನ್ನು ಸುಣ್ಣದ ಡಬ್ಬಿಯಾಗಿ ಉಪಯೋಗಿಸಲಿಕ್ಕಡ್ಡಿಯಿಲ್ಲ...’ ಎಂದು ಹೀಗಳೆದಾಗ...
 • ‘ಹಿಕರಿ ಡಿಕರಿ ಡಾಕ್‌...’ನಲ್ಲಿ ಗಂಟೆ ಹೊಡೆದು ಅಮಾಯಕ ಇಲಿಯಾಂದನ್ನು ಅನವಶ್ಯಕವಾಗಿ ಕೆಳಗೆ ಬೀಳಿಸಿದೆನಲ್ಲಾ ಎಂಬ ಪಶ್ಚಾತ್ತಾಪದಿಂದ...
 • ಲಾಸ್‌ ವೇಗಾಸ್‌ನ ಗ್ಯಾಂಬ್ಲಿಂಗ್‌ ಕೆಸಿನೋಗಳಲ್ಲಿ ಒಂದೂ ಗಡಿಯಾರವಿಲ್ಲ. ಜೂಜಾಡಿ ಬಸವಳಿದ ಗ್ಯಾಂಬ್ಲರ್ಸ್‌ಗಳಿಗೆ ‘ಇಷ್ಟು ಸಾಕು, ಇನ್ನು ಮನೆಗೆ ವಾಪಸಾಗಿ...’ ಎಂದು ಎಚ್ಚರಿಸುವ ಒಳ್ಳೆಯ ಕೆಲಸವನ್ನು ನಾನು ಮಾಡಬಲ್ಲೆನಾದರೂ ಅಲ್ಲಿ ಗಡಿಯಾರಗಳೇ ಇರದಂತೆ ನೋಡಿಕೊಂಡಿದ್ದಾರೆ ಕ್ಯಾಸಿನೋ ನಡೆಸುವವರು. ಯಾರು ಎಷ್ಟು ದುಡ್ಡು ಕಳಕೊಂಡು ಧರ್ಮರಾಯನಂತಾದರೆ ಅವರಪ್ಪನ ಗಂಟೇನು ಹೋಯಿತು?

ಇಷ್ಟು ಕೊರೆತ ಸಾಕು, ನಿಮಗೂ ಟೈಮಿಲ್ಲ . ಒಂದೇಒಂದು ರಸಪ್ರಶ್ನೆ ಕೇಳಿ ಮುಗಿಸುತ್ತೇನೆ. ಗಡಿಯಾರದಲ್ಲಿ ಒಂದು ದಿನಕ್ಕೆ ದೊಡ್ಡಮುಳ್ಳು ಮತ್ತು ಸಣ್ಣಮುಳ್ಳು ಎಷ್ಟು ಬಾರಿ ಸಂಧಿಸುತ್ತವೆ? ಮಧ್ಯಾಹ್ನ ಮತ್ತು ಮಧ್ಯರಾತ್ರಿ 12 ಗಂಟೆ ಆದಾಗ - ಹಾಗಾಗಿ ಎರಡು ಬಾರಿ? ಅಥವಾ ನಿಮಗೆ ಬೇರೆ ಸರಿಯಾದ ಉತ್ತರ ಗೊತ್ತಿದ್ದರೆ sjoshim@hotmail.com ವಿಳಾಸಕ್ಕೆ ಕಳಿಸಿ. ಸಾಧ್ಯವಾದರೆ ಈಗಲೇ. ಏಕೆಂದರೆ ನಿಮಗೆ ಗೊತ್ತಲ್ಲ , Time and tide... wait for none...!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more