• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಪ್ಪುತಕ್ಕಡಿಯೂ ಕಲ್ಲು ಚಪ್ಪಡಿಯೂ ಜೊತೆಗೊಂದು ಲೆಕ್ಕವೂ..

By Staff
|

*ಶ್ರೀವತ್ಸ ಜೋಶಿ

justicescale‘ಕೇಳಿರಿ ಕೇಳಿರಿ ಜನ ಸಾಮಾನ್ಯರೆ ನಮ್ಮ ಸ್ವಾತಂತ್ರ್ಯದ ಕವಿತೆಯನು... ಪವಿತ್ರ ಮಾತೆಯ ಬಂಧ ವಿಮುಕ್ತಿಯ ಸಿಹಿಕಹಿ ತಿಳಿಸುವ ಚರಿತೆಯನು...’ ಎಂದು ಒಂದು ‘ಲಾವಣಿ ಹಾಡು’ ಇದೆ; ಮುಂದುವರಿಯುತ್ತ ಅದರಲ್ಲಿ , ‘ತಕ್ಕಡಿ ಹಿಡಿಯುತ ಬಂದಿದ್ದವರಿಗೆ ಇಲ್ಲಿಯ ಗುಟ್ಟದು ಗೊತ್ತಾಯ್ತು... ಮತ್ಸರದಲಿ ಮುಳುಗಿದ ನಮ್ಮರಸರು ಏಳುವಾಗಲೇ ಹೊತ್ತಾಯ್ತು...’ ಎಂಬ ಸಾಲುಗಳು ಬರುತ್ತವೆ. ತಕ್ಕಡಿ ಹಿಡಿಯುತ ಬಂದವರೆಂದರೆ ಬ್ರಿಟಿಷರು. ಭಾರತದಲ್ಲಿ ಹೇರಳವಾಗಿ ದೊರೆಯುತ್ತಿದ್ದ ಸಾಂಬಾರ ಪದಾರ್ಥಗಳನ್ನು, ಚಿನ್ನದ ಸಂಪತ್ತನ್ನು ವ್ಯಾಪಾರದಲ್ಲಿ ಕೊಳ್ಳಲು ಬಂದವರು ಇಲ್ಲಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳ ದುರ್ಲಾಭ ಪಡೆದು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ , ನಮ್ಮನ್ನು ದಾಸ್ಯಶೃಂಖಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಅಂದರೆ ತಕ್ಕಡಿ ಹಿಡಿದುಬಂದವರೆದುರು ನಾವು ಬೆಪ್ಪುತಕ್ಕಡಿಗಳಾದೆವು!

ಗಾಂಧಾರಿಯಂತೆ ಕಣ್ಣಿಗೆ ಬಟ್ಟೆಕಟ್ಟಿ ಕೈಯಲ್ಲಿ ತಕ್ಕಡಿ ಹಿಡಿದು ನಿಂತ ‘ನ್ಯಾಯದೇವತೆ’ಯ ಚಿತ್ರ ನಿಮಗೆ ಗೊತ್ತೇ ಇದೆ. ನ್ಯಾಯ-ಅನ್ಯಾಯಗಳನ್ನು ತಕ್ಕಡಿಯಲ್ಲಿ ತೂಗಿ ತೀರ್ಪು ಹೊರಬರಬೇಕೆಂಬ ಆಶಯದ ಸಂಕೇತ ಅದು. ಪ್ರಾಕ್ಟಿಕಲ್ಲಾಗಿ ಎಷ್ಟು ಕೇಸುಗಳಲ್ಲಿ ನಿಷ್ಪಕ್ಷಪಾತದ ತೀರ್ಪು ಸಿಗುವುದೋ ಆ ದೇವರಿಗೇ ಗೊತ್ತು . ನ್ಯಾಯ ಎಲ್ಲಿದೇ... ಎಲ್ಲಿದೆಯೋ ನ್ಯಾಯ... ಬಡವನು ನ್ಯಾಯವ ಕೇಳುವುದೇ ಅನ್ಯಾಯ... ಎಂಬೊಂದು ಚಿತ್ರಗೀತೆ ಇಲ್ಲಿ ನೆನಪಾಗುತ್ತದೆ.

ಅದು ಸರಿ, ಮೇಲಿನ ಎರಡು ಪ್ಯಾರಾಗ್ರಾಫ್‌ ಓದುವಾಗ ಈ ಸಲದ ವಿಚಿತ್ರಾನ್ನ ಸ್ವಲ್ಪ ಸೀರಿಯಸ್ಸಾಗಿದೆಯಲ್ಲಾ ಎಂದು ನೀವು ಭಾವಿಸುವ ಸಾಧ್ಯತೆಗಳಿವೆ. ಹಾಗೇನಿಲ್ಲ . ‘ತಕ್ಕಡಿ’ ಥೀಮ್‌ ಆಗಿಟ್ಟುಕೊಂಡು ಬರೆಯೋಣ ಅಂತನಿಸಿತು. ತೂಕದ ಮಾತುಗಳ ಜತೆಗೇ ಕೊನೆಯಲ್ಲೊಂದು ಜಾಣ್ಮೆಲೆಕ್ಕವೂ ಇದೆ - ತೂಕ/ತಕ್ಕಡಿಗೆ ಸಂಬಂಧಿಸಿದ್ದೇ. ಮೊದಲು ಒಂದಿಷ್ಟು ಹರಟೆ.

ಕನ್ನಡದ ಜನಪ್ರಿಯ ವಾರಪತ್ರಿಕೆ ‘ಸುಧಾ’ ತನ್ನ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ (1989 ಅಥವಾ 90ರಲ್ಲಿ ಎಂದು ನೆನಪು) ‘ಸುಧಾ ನಿಮಗೆ ಏಕೆ ಮೆಚ್ಚುಗೆಯಾಗುತ್ತದೆ ಅಥವಾ ಆಗುವುದಿಲ್ಲ?’ ಎಂಬ ಪ್ರತಿಕ್ರಿಯೆಗಳನ್ನು ಓದುಗರಿಂದ ಆಹ್ವಾನಿಸಿತ್ತು . ನಾನೂ ಒಂದು ಪತ್ರ ಬರೆದಿದ್ದೆ - ಸುಧಾದಲ್ಲಿ ನನಗೆ ಮೆಚ್ಚುಗೆಯಾಗುವ ಮತ್ತು ಆಗದ ವಿಷಯಗಳನ್ನು ತಕ್ಕಡಿಯ ಎರಡು ತಟ್ಟೆಗಳಲ್ಲಿಟ್ಟಾಗ... ಎಂದು ಎರಡು ಪ್ರತ್ಯೇಕ ಲಿಸ್ಟ್‌ ಮಾಡಿದ್ದೆ ಆ ಪತ್ರದಲ್ಲಿ . ನನಗೆ ಸಂತೋಷಾಶ್ಚರ್ಯಗಳಾಗುವಂತೆ ನನ್ನ ಆ ಪತ್ರ ಬಹುಮಾನಿತ ಪತ್ರಗಳಲ್ಲೊಂದಾಗಿತ್ತು !’ ಓದುಗರ ಅಭಿಪ್ರಾಯದ ತಕ್ಕಡಿಯಲ್ಲಿ ಸುಧಾ...’ ಎಂದು ಆ ವಾರ ಪ್ರಜಾವಾಣಿಯಲ್ಲಿ ಜಾಹೀರಾತು ಬೇರೆ ಬಂದಿತ್ತು (ನನ್ನ ಪತ್ರದಲ್ಲಿದ್ದ ‘ತಕ್ಕಡಿ’ ವಿಚಾರವನ್ನು ಉಲ್ಲೇಖಿಸಿ)! ಅಂದಹಾಗೆ ವಿಚಿತ್ರಾನ್ನದ ಬಗ್ಗೆ ಬರೆಯುವಾಗ ನೀವು ಕೂಡ, ಬರೇ ಚೆನ್ನಾಗಿತ್ತು ಚೆನ್ನಾಗಿತ್ತು ಎಂದು ಬರೆಯುವುದಕ್ಕಿಂತ ಏನು ಚೆನ್ನಾಗಿರಲಿಲ್ಲ ಎಂದು ಬರೆದರೆ ನನಗೆ ಅನುಕೂಲವಾಗುತ್ತದೆ. ನಿಮ್ಮ ಅಭಿಪ್ರಾಯದ ತಕ್ಕಡಿಯಲ್ಲಿ ವಿಚಿತ್ರಾನ್ನ ಹೇಗೆ ತೂಗುತ್ತದೆ ಎಂದು ತಿಳಿಯುತ್ತದೆ.

Thulabhara‘ತುಲಾಭಾರ’ ಎಂದು ನೀವು ಕೇಳಿರಬಹುದು/ಓದಿರಬಹುದು/ನೋಡಿರಬಹುದು. ಗುರುವಾಯೂರು, ಧರ್ಮಸ್ಥಳ, ಉಡುಪಿ ಮೊದಲಾದ ಪುಣ್ಯಕ್ಷೇತ್ರಗಳಲ್ಲಿ ಗಣ್ಯವ್ಯಕ್ತಿಗಳಿಗೆ ಸನ್ಮಾನರೂಪವಾಗಿ ಅಥವಾ ಕೆಲವೊಮ್ಮೆ ಹರಕೆಯ ರೂಪದಲ್ಲಿ ತುಲಾಭಾರ ನಡೆಯುತ್ತದೆ. ವ್ಯಕ್ತಿಯನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಕುಳ್ಳಿರಿಸಿ ಇನ್ನೊಂದು ತಟ್ಟೆಯಲ್ಲಿ ಅಷ್ಟೇ ತೂಕದ ದವಸ-ಧಾನ್ಯವಾಗಲೀ, ಹಣ್ಣುಗಳಾಗಲೀ ಇಟ್ಟು ಸಮತೂಕವಾದ ನಂತರ ಆ ವಸ್ತುವನ್ನು ದೇವರಿಗೆ ಅರ್ಪಿಸುವ ಕ್ರಮ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಒಮ್ಮೆ 945 ಬಾಳೆಹಣ್ಣುಗಳ ತುಲಾಭಾರಸೇವೆ ನಡೆದಿತ್ತು. ಡಾ।ರಾಜ್‌ ಅವರ ತುಲಾಭಾರ ನಡೆದ, ಪೇಜಾವರ ಶ್ರೀಗಳ ತುಲಾಭಾರ ನಡೆದ ಸುದ್ದಿಯನ್ನೋದಿದ್ದು ನನಗೆ ನೆನಪಿದೆ.

ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ ಗುರುವಾಯೂರಿನಲ್ಲಿ ತುಲಾಭಾರ ಸೇವೆಯಲ್ಲಿ 65 ಕೇ.ಜಿ ಸಕ್ಕರೆಯನ್ನು ಕೃಷ್ಣನಿಗರ್ಪಿಸಿದ್ದರು. ಸಣ್ಣಮಕ್ಕಳ ತುಲಾಭಾರವನ್ನು ಅಷ್ಟು ತೂಕದ ನಾಣ್ಯಗಳೊಂದಿಗೆ (ಹಿಂದಿನ ಕಾಲದಲ್ಲಾದರೆ ಸುವರ್ಣನಾಣ್ಯಗಳು ?) ಮಾಡಿ ಆ ಮೊತ್ತವನ್ನು ದೇವರಿಗೆ ಕಾಣಿಕೆಯಾಗಿ ಸಲ್ಲಿಸಲಾಗುತ್ತದೆ - ಮಗುವಿನ ಮತ್ತು ಹೆತ್ತವರ ಆಯುರಾರೋಗ್ಯ ಐಶ್ವರ್ಯ ವೃದ್ಧಿಗಾಗಿ.

ತಕ್ಕಡಿಯ ಕುರಿತೇ ಇದೊಂದನ್ನೂ ಉಲ್ಲೇಖಿಸಲೇಬೇಕು - ಮಂಗ ಮತ್ತು ಬೆಕ್ಕುಗಳ ಕಥೆ!

ಬೆಕ್ಕುಗಳು ತಮಗೆ ಸಿಕ್ಕಿದ ರೊಟ್ಟಿಯನ್ನು ತಾವೇ ಹಂಚಿಕೊಳ್ಳಲಾಗದೆ ಮಂಗನ ಸಹಾಯ ಯಾಚಿಸಿದ್ದು, ಮಂಗ ಒಂದು ತಕ್ಕಡಿ ಹಿಡಿದು ರೊಟ್ಟಿಯನ್ನು (ಅ)ಸಮ ಪಾಲು ಮಾಡಿ ಹೆಚ್ಚಾದದ್ದನ್ನು ಸ್ವಲ್ಪ ಸ್ವಲ್ಪವೇ ಕಬಳಿಸುತ್ತ ಕೊನೆಗೆ ಬೆಕ್ಕುಗಳಿಗೆ ರೊಟ್ಟಿಯೇ ಇಲ್ಲವಾಗಿ ಅವು ಬೆಪ್ಪುತಕ್ಕಡಿಗಳಾಗಿ ಅಲ್ಲಿಂದ ಜಾಗ ಖಾಲಿ ಮಾಡುವ ಕಥೆ ಅದು. ನೆನಪಿದೆಯಾ?

ಶಾಲೆಯಲ್ಲಿ , ಹೈಸ್ಕೂಲಲ್ಲಿ (ಅಷ್ಟೇ ಏಕೆ, ಕಾಲೇಜಲ್ಲೂ?) ಕ್ಲಾಸಲ್ಲಿ ನಿದ್ದೆ ಮಾಡುವವರನ್ನು ‘ತಕ್ಕಡಿಯಲ್ಲಿ ಬೆಲ್ಲ ತೂಗುವವರು’ ಎಂದು ಕರೆಯುತ್ತಾರೆ. ನಿದ್ದೆಯ ಮಂಪರಿನಲ್ಲಿ ಅವರ ತಲೆ ಆಕಡೆ ಒಮ್ಮೆ ಈಕಡೆ ಒಮ್ಮೆ ವಾಲುತ್ತಿರುವುದು ತಕ್ಕಡಿಯಲ್ಲಿ ಬೆಲ್ಲ ತೂಕಮಾಡುವಂತೆಯೇ ಇರುತ್ತದೆ! ನಿಮ್ಮ ಕ್ಲಾಸಲ್ಲಿ ಈ ದೃಶ್ಯಾವಳಿ ಸಾಮಾನ್ಯವಾಗಿ ಇರುತ್ತಿತ್ತೇ ? ವಿದ್ಯಾರ್ಥಿ ದೆಸೆಯಲ್ಲಿ ವಿಜ್ಞಾನ ಪ್ರಯೋಗಾಲಯದಲ್ಲಿ ‘ಭೌತತುಲಾಯಂತ್ರ’ ಎಂಬ ತಕ್ಕಡಿಯನ್ನು ಉಪಯೋಗಿಸಿದ್ದೂ ನಿಮ್ಮ ನೆನಪಲ್ಲುಳಿದಿದೆ ಎಂದುಕೊಂಡಿದ್ದೇನೆ.

ಈಗ ಒಂದು ಜಾಣ್ಮೆಲೆಕ್ಕ. ಒಂದು ಕಲ್ಲು ಚಪ್ಪಡಿ ಇದೆ, 40 ಕೇ.ಜಿ ತೂಕದ್ದು. ಅದನ್ನು ನೀವು ಆದಷ್ಟು ಕಡಿಮೆ ಸಂಖ್ಯೆಯ ತುಂಡುಗಳಾಗಿ ಮಾಡಬೇಕು. ನೀವು ಮಾಡಿದ ಈ ಕಲ್ಲು ತುಂಡುಗಳು ತೂಕದ ಬಟ್ಟುಗಳಂತೆ ತಕ್ಕಡಿಯಲ್ಲಿ ಒಂದರಿಂದ ನಲ್ವತ್ತು ಕೇ.ಜಿಯವರೆಗೆ (ಪೂರ್ಣಸಂಖ್ಯೆ ಮಾತ್ರ. ಗ್ರಾಂ, ಮಿಲಿಗ್ರಾಂ ತೂಕ ಅಗತ್ಯವಿಲ್ಲ) ಅಕ್ಕಿಯನ್ನು ತೂಕಮಾಡಲು ಉಪಯೋಗವಾಗುವಂತಿರಬೇಕು. ಇನ್ನೊಮ್ಮೆ ಸರಿಯಾಗಿ ಅರ್ಥಮಾಡಿಕೊಳ್ಳಿ. ಚಪ್ಪಡಿಯನ್ನು ಆದಷ್ಟು ಕಡಿಮೆ ತುಂಡುಗಳಾಗಿ ಮಾಡಬೇಕು. ಪ್ರತಿಯಾಂದು ತುಂಡೂ ಒಂದು ಪೂರ್ಣಸಂಖ್ಯೆಯ ತೂಕವಿರಬೇಕು. ಎಲ್ಲ ತುಂಡುಗಳನ್ನು ಬಳಸಿ ಒಂದರಿಂದ 40 ಕೇ.ಜಿಯವರೆಗೆ ತಕ್ಕಡಿಯಲ್ಲಿ ತೂಕ ಮಾಡಲು ಬರುವಂತಿರಬೇಕು. ತಲಾ ಒಂದು ಕೇ.ಜಿಯ ನಲ್ವತ್ತು ತುಂಡುಗಳು ಉತ್ತರವಲ್ಲ ಎಂಬುದು ನೆನಪಿರಲಿ. ಹಾಗಾದರೆ, ಎಷ್ಟು ತುಂಡುಗಳು ? ಪ್ರತಿಯಾಂದರ ತೂಕ ಎಷ್ಟು ? ಸರಿಯುತ್ತರವನ್ನು ಕಳಿಸಿ ನೀವೊಬ್ಬ ಬೆಪ್ಪುತಕ್ಕಡಿಯಲ್ಲ ಎಂದು ಜಗಜ್ಜಾಹೀರು ಪಡಿಸಬಹುದು!

ವಿಳಾಸ - sjoshim@hotmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more