ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿನೋದ ಸ್ಪರ್ಧೆ : ರೂ.500 ಬಹುಮಾನ!

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Padavinoda

ವಿಚಿತ್ರಾನ್ನದ ಓದುಗರಿಂದ ಅಪಾರ ಮೆಚ್ಚುಗೆ, ಪ್ರೋತ್ಸಾಹಗಳಿಸಿದ ಪದಬಂಡಿ ಪದಬಂಧದ ಯಶಸ್ಸಿನ ನಂತರ ಇದೀಗ ಇನ್ನೊಂದು!
  • ಇದೂ ಕೂಡ ನಾಲ್ಕಕ್ಷರದ ಉತ್ತರಗಳ ಪದಬಂಧ. (ನಾಲ್ಕಕ್ಷರಗಳಿಗೂ ವಿಚಿತ್ರಾನ್ನಕ್ಕೂ ಜನ್ಮಜನ್ಮದ ಅನುಬಂಧ...?)
  • ಪ್ರತಿಯಾಂದು ಉತ್ತರಕ್ಕೂ ಮೂರು ಸುಳಿವು (ಕ್ಲೂ)ಗಳನ್ನು ಕೊಡಲಾಗಿದೆ.ಮೊದಲ ಸುಳಿವು (ಅ), ಉತ್ತರದ ಒಂದನೇ ಮತ್ತು ನಾಲ್ಕನೇ ಅಕ್ಷರಗಳಿಂದಾಗುವ ಎರಡಕ್ಷರದ ಪದವನ್ನು ಕೊಟ್ಟರೆ ನಂತರದ ಸುಳಿವು (ಆ), ಮೂರನೇ ಮತ್ತು ಎರಡನೇ ಅಕ್ಷರಗಳಿಂದಾಗುವ ಎರಡಕ್ಷರದ ಪದವನ್ನು ಕೊಡುತ್ತದೆ. ಮೂರನೆಯ (ಇ) ಸುಳಿವು ಮಾತ್ರ ಇಡೀ ಪದವನ್ನು ಕೊಡುತ್ತದೆ (ಚಿತ್ರವನ್ನು ನೋಡಿ).
  • ಮೊದಲ ಮತ್ತು ಎರಡನೆಯ ಸುಳಿವುಗಳು ನಿಮಗೆ ಪೂರಕ ಮಾಹಿತಿ ಮತ್ತು ಮನರಂಜನಗೆ ಮಾತ್ರ. ನೀವು ಕಳಿಸಬೇಕಾದ್ದು ಮೂರನೆಯ (ಇ) ಸುಳಿವು ನೀಡುವ ಉತ್ತರವನ್ನು ಮಾತ್ರ.
  • ನಿಮ್ಮ ಉತ್ತರಗಳನ್ನು ಹನ್ನೆರಡು ಪದಗಳ ಪಟ್ಟಿಯ ರೂಪದಲ್ಲಿ ಬರಹ, ನುಡಿ, ಶ್ರೀ-ಲಿಪಿ, ಕಂಗ್ಲೀಷ್‌, ಇಂಗ್ಲೀಷ್‌ - ಹೀಗೆ ನಿಮಗನುಕೂಲವಾದ ಯಾವುದೇ ವಿಧದಲ್ಲೂ ಕಳಿಸಬಹುದು. ವಿಳಾಸ : [email protected]
  • ಸರಿಯುತ್ತರ ಕಳಿಸಿದವರ ಪಟ್ಟಿಯಿಂದ ಒಬ್ಬ ಅದೃಷ್ಟಶಾಲಿಯನ್ನು ಚೀಟಿಯೆತ್ತಿ ನಿರ್ಧರಿಸಲಾಗುವುದು. ಚೀಟಿಯೆತ್ತುವ ಗೌರವವನ್ನು ಕಳೆದ ಸಲದ ಪದಬಂಡಿ ಪದಬಂಧ ವಿಜೇತೆ ರೂಪಶ್ರೀ ಮೇಲ್ಕೋಟೆ (ಆರ್ಲಿಂಗ್ಟನ್‌, ಟೆಕ್ಸಾಸ್‌) ಅವರಿಗೆ ವಹಿಸುವುದೆಂದು ನನ್ನ ಯೋಜನೆ. (ಹಾಗಾಗಿ ರೂಪಶ್ರೀಯವರು ಸರಿಯುತ್ತರಗಳನ್ನು ಕಳಿಸಬಹುದಾದರೂ ಅವರ ಹೆಸರು ಸ್ಪರ್ಧಿಗಳಲ್ಲಿ ಶಾಮೀಲಾಗುವುದಿಲ್ಲ .)
  • ಬಹುಮಾನ ? ರೂ.500 ರ ಗಿಫ್ಟ್‌ ಚೆಕ್‌. ಪ್ರಾಯೋಜಕರು? ಹೊಸಮಾಧ್ಯಮದಲ್ಲಿ ಹೊಸ ಬರವಣಿಗೆಕಾರರಿಗೆ ಹೊಸಚೇತನ ನೀಡುತ್ತಿರುವ ದಟ್ಸ್‌ಕನ್ನಡ.ಕಾಂ ಸಂಪಾದಕ ಎಸ್‌. ಕೆ. ಶಾಮಸುಂದರ್‌!
  • ಉತ್ತರಗಳೊಂದಿಗೆ ನಿಮ್ಮ ಹೆಸರು, ಊರು (ದೇಶ) ಮಾತ್ರ ಈಗ ತಿಳಿಸಿದರೆ ಸಾಕು. ಸ್ಪರ್ಧೆಯಲ್ಲಿ ಗೆದ್ದರೆ ಬಹುಮಾನವನ್ನು ತಲುಪಿಸಲು ಭಾರತದಲ್ಲಿ ನಿಮ್ಮ ವಿಳಾಸವನ್ನು ಆಮೇಲೆ ಕೇಳಿ ಪಡೆಯೋಣವಂತೆ.
  • ನಿಮ್ಮ ಜವಾಬುಗಳು ಭಾನುವಾರ ಜೂನ್‌ 22, 2003ರ ಒಳಗೆ ತಲುಪಬೇಕು.
  • ಪದವಿನೋದ ಸ್ಪರ್ಧೆಯಲ್ಲಿ ನಿಮಗೆ ಮಾರ್ಗದರ್ಶನಕ್ಕೆಂದು ಒಂದು ಉದಾಹರಣೆಯನ್ನೂ ಕೊಡಲಾಗಿದೆ. ಗಮನವಿಟ್ಟು ನೋಡಿ.
Padavinodaಉದಾಹರಣೆ : .... .......

ಅ) ನೆಂಟರ ಮೇಲೆ ಪ್ರೀತಿ ಇದ್ದರೂ ಇದರ ಮೇಲೆ ಆಸೆ!
ಆ) ರಾಮಾಯಣದಲ್ಲಿ ಶ್ರೀರಾಮಚಂದ್ರನ ಅವಳಿ ಮಕ್ಕಳಲ್ಲೊಬ್ಬ.
ಇ) ಆಚೆಮನೆ ಸುಬ್ಬಮ್ಮ ಏಕಾದಶಿ ಉಪವಾಸದಂದು ಎಲ್ಲೋ ಸ್ವಲ್ಪ ಉಪ್ಪಿಟ್ಟು, ಪಾಯಸದೊಂದಿಗೆ ತಿಂದದ್ದು!

ಉತ್ತರ: ಅವಲಕ್ಕಿ

ಸರಿ, ಅವಲಕ್ಕಿ ರುಚಿ ನೋಡಿದ್ದಾಯ್ತು. ಇನ್ನು ಅವನು ಲಕ್ಕಿಯೋ, ಅವಳು ಲಕ್ಕಿಯೋ ಸದ್ಯಕ್ಕೆ ಗೊತ್ತಿಲ್ಲ:-) ಈಗ ಅಕ್ಷರದಾಟ ಶುರು ಮಾಡೋಣವೇ?

*

1. .... .......

ಅ) ಸೀತಾಪತಿಗೂ (ಆತ ಲಕ್ಷ್ಮೀಪತಿಯೇ ಆದರೂ) ವನವಾಸ ಕಾಲದಲ್ಲಿ ಮಲಗಲಿಕ್ಕೆ ಹುಲ್ಲುಹಾಸಿನ ಚಾಪೆಯೇ.
ಆ) ಧರ್ಮರಾಯನದೂ ಅದೇ ಅವಸ್ಥೆ. ಕಾರಣ? ಜೂಜಲ್ಲಿ ಆತ ಕಟ್ಟಿದ ಬಾಜಿ, ಪಂಥ.
ಇ) ಆದಿಯಲಿ ವಂದಿಪೆವು ಮೌಸ್‌-ರೈಡರನೇ... ವಿಘ್ನಗಳ ನೀಗು ನೀ ಸ್ನೇಕ್‌ಬೆಲ್ಟ್‌ಧರನೇ...

2. .... .......

ಅ) ನಮ್ಮವನಲ್ಲ ಬೇರೆಯವನು; ಹರ ಕೊಲ್ಲಲ್‌ ಈತ ಕಾಯ್ವನೇ?
ಆ) ಇದು ತಪ್ಪಲ್ಲ ; ‘ಸ್ವಲ್ಪ ಅತ್ಲಾಗೆ ಜರುಗು’ ಅನ್ನುವುದಕ್ಕೂ ಇದೇ ಪದ.
ಇ) ಪ್ರತಿ ವರ್ಷ ಜೂನ್‌ 5ನೆಯ ತಾರೀಕಿನಂದು ವಿಶ್ವಾದ್ಯಂತ ಯಾವ ದಿನಾಚರಣೆ?

3. .... .......

ಅ) ಕೊರವಂಜಿ ಹೇಳುವ ಭವಿಷ್ಯ.
ಆ) ದನ ಅಥವಾ ಎಮ್ಮೆಯ ಕರು ಎಂಬುದನ್ನು ಬಿಟ್ಟರೆ ಮಿಕ್ಕೆಲ್ಲ ಪ್ರಾಣಿಗಳ ‘ಮಕ್ಕಳಿ’ಗೂ ಕನ್ನಡದಲ್ಲಿ ಒಂದೇ ಪದ.
ಇ) ಹಣೆಯಲ್ಲಿ ಕುಂಕುಮ, ಕೊರಳಲ್ಲಿ ತಾಳಿಯ ಜತೆಗಿನ ‘ಮುತ್ತೈದೆ ಲಕ್ಷಣ’.

4. .... .......

ಅ) ಕಂದಾಯ, ತೆರಿಗೆ ಅನ್ನುವುದು ಒಂದು ಅರ್ಥವಾದರೆ ಕೈ, ಹಸ್ತ ಅನ್ನುವುದು ಇನ್ನೊಂದರ್ಥ.
ಆ) ಶೂರನಾದ, ಶಕ್ತಿಯುತನಾದ; ಸಿಂಧೂರ ಲಕ್ಷ್ಮಣನಂಥ ಪರಾಕ್ರಮಿ.
ಇ) ಸೇವಂತಿಕಾ, ಬಕುಲ, ಚಂಪಕ, ಪಾಟಲ, ಪುನ್ನಾಗಜಾತಿಯಾಂದಿಗೆ ದೇವರಪೂಜೆಯಲ್ಲಿ ಉಪಯೋಗಿಸಲ್ಪಡುವ ಈ ಹೂವಿಗೆ ಸಂಸ್ಕೃತ ಮತ್ತು ಕನ್ನಡದಲ್ಲಿ ಒಂದೇ ಹೆಸರು.

5. .... .......

ಅ) ಮಹಾಭಾರತದ ಶಕುನಿಯ ಕೈಯಲ್ಲಿದು ‘ಮ್ಯಾಜಿಕಲ್‌ ಪವರ್‌’ ಹೊಂದಿತ್ತು. ಶಕುನಿ ಹೇಳಿದ್ದೇ ಸಂಖ್ಯೆಗಳ ತೋರಿಸುತ್ತಿತ್ತು!
ಆ) ಗೌರೀಶ ಈಶನಿಗೆ ‘ಕೈಲಾಸ’, ಶ್ರೀ ವೆಂಕಟೇಶನಿಗೆ ’ತಿರುಪತಿ ಗಿರಿ’.
ಇ) ಸಸ್ಯಶಾಸ್ತ್ರೀಯ ಹೆಸರು Hibiscus rosa-sinensis. ಇದರ ತವರು ನಮ್ಮ ಭಾರತವೋ ಅಥವಾ ಚೈನಾದೇಶವೋ ಎಂಬ ಚರ್ಚೆಯಿದೆ.

6. .... .......

ಅ) ಶಕ್ತಿ, ಸಾಮರ್ಥ್ಯ; ‘ಎಡ’ ಅಲ್ಲ ಎನ್ನುವುದೂ ಇದಕ್ಕೇ.
ಆ) ಬಳೆಮಾರುವವನಿಗೆ ಬಳೆಯಾಂದಿಗೆ ಸೇರುವ, ಆಡುವವನಿಗೆ ಆಟದೊಂದಿಗೆ ಸೇರುವ ಪ್ರತ್ಯಯ ಶಬ್ದ.
ಇ) ಕ್ಷಾಮ, ನೀರಿಗಾಗಿ ಹಾಹಾಕಾರ. ಸದ್ಯಕ್ಕೆ ಕರ್ನಾಟಕದ ಬಹುತೇಕ ಪ್ರದೇಶಗಳು ಈ ಬವಣೆಯಲ್ಲಿ.

7. .... .......

ಅ) ಪ್ರಾಣಿಗಳ ಎಳೆಯ ಕೂಸು. ಮುದ್ದಿನಿಂದ ಕರೆಯುವಾಗ ಮನುಷ್ಯಪ್ರಾಣಿಯ ಕೂಸಿಗೂ ಈ ಶಬ್ದ ಬಳಕೆಯಾಗುವುದುಂಟು!
ಆ) ಬಾಗಿಲು ಎಂಬ ಸಾಮಾನ್ಯ ಅರ್ಥ ಮಾತ್ರ ನಮಗೆ ಗೊತ್ತಿರುವುದಾದರೂ ತುರುಬು ಅಥವಾ ತಲೆಯಲ್ಲಿನ ಕೂದಲ ಗಂಟು ಎಂಬರ್ಥವೂ ಈ ಪದಕ್ಕಿದೆ.
ಇ) ಚಿತ್ರದುರ್ಗದ ‘ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ’ಯನ್ನಾಳಿದವ, ‘ಮದಿಸಿದ ಕರಿಯ ಮದವಡಗಿಸಿದ’ ನಾಯಕ.

8. .... .......

ಅ) ಉಪಾಸನೆಯ ‘ಸಂಪಿಗೆ ಮರದ ಹಸಿರೆಲೆ ನಡುವೆ’ ಹಾಡಲ್ಲಿ ‘ಹರಿಯುವ ನದಿಯ ನೋಡುತ ನಿಂತಾಗ...’ ಅಲೆಗಳು ಕುಣಿದು ಕಿವಿಗೆ ತುಂಬಿದ ಮಂಜುಳನಾದ.
ಆ) ಎಣ್ಣೆ ಅಥವಾ ಕಬ್ಬಿನ ರಸವನ್ನು ತೆಗೆಯಲು ಎತ್ತಿನ ಶಕ್ತಿಯನ್ನು ಬಳಸುವ ಯಂತ್ರ.
ಇ) ಕನ್ನಡದ ಖ್ಯಾತ ಚಿತ್ರನಿರ್ದೇಶಕ ಪುಟ್ಟಣ್ಣ ತನ್ನ ಹೆಸರಿನ ಕೊನೆಗೆ, ಮತ್ತು ಅವರ ತಂದೆ ಚಿತ್ರಸಾಹಿತಿ ಪ್ರಭಾಕರ ಶಾಸ್ತ್ರಿಯವರು ತನ್ನ ಹೆಸರಿನ ಮೊದಲಿಗೆ ಸೇರಿಸಿದ ಊರ ಹೆಸರು.

9. .... .......

ಅ) ತನು ಮತ್ತು ಧನದೊಂದಿಗೆ ಇದನ್ನೂ ಸೇರಿಸಿ ಪ್ರೋತ್ಸಾಹಿಸಿ ಎಂಬುದು ಕಳಕಳಿಯ ಕೋರಿಕೆ.
ಆ) ಕೊಡುವವನು ಎಂದರ್ಥ; ಉದಾಹರಣೆಗೆ, ಹೊಲದಿ ದುಡಿವ ರೈತ ಅನ್ನಕೊಡುವವನು.
ಇ) ಟಿ.ಎನ್‌.ಸೀತಾರಾಮ್‌ ನಿರ್ದೇಶನ, ಅನಂತನಾಗ್‌ ಅಭಿನಯ, ಎಸ್‌.ಎಲ್‌.ಭೈರಪ್ಪ ಬರೆದ ರಾಜಕೀಯ ಕಥೆ. ಚಿತ್ರದ ಹೆಸರು?

10. .... .......

ಅ) ‘ಹ’ ಅಕ್ಷರವಿಲ್ಲದ ಹಳಗನ್ನಡದಲ್ಲಿ ‘ಹಣೆ’ಯನ್ನು ಹೀಗೇ ಬರೆಯಬೇಕೇನೋ.
ಆ) ಕೊಂಬು ಎಂದು ಅರ್ಥದ ಪದ. ಚಕ್ಕುಲಿಯ ತಮ್ಮನಾದ ಕುರುಕಲು ತಿಂಡಿ ಬಳೆಯಂತಿರುವುದು ಹೌದಾದರೂ ಅದಕ್ಕೆ ಕೊಂಬು ಇಲ್ಲವಲ್ಲ ?
ಇ) ಬ್ಯಾಡ್ಮಿಂಟನ್‌ ಆಟದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಪ್ರಕಾಶ್‌ ತನ್ನ ಹೆಸರಿನ ಮೂಲಕ ಉಡುಪಿ ಜಿಲ್ಲೆಯ ಈ ಊರಿಗೂ ಕೀರ್ತಿತಂದುಕೊಟ್ಟರು.

11. .... .......

ಅ) ಹೊಳೆಯಲ್ಲಿ ಆಳವಾದ ನೀರಿರುವ ಜಾಗ; ಕೃಷ್ಣ ಕಾಳಿಂಗಮರ್ದನ ಮಾಡಿದ್ದು ಯಮುನಾ ನದಿಯಲ್ಲಿನ ಇಂಥ ಒಂದು ಜಾಗದಲ್ಲಿ.
ಆ) ಎಡದಂಡೆ, ಬಲದಂಡೆ, ಮೇಲ್ದಂಡೆ ಇತ್ಯಾದಿ ಪ್ರಕಾರಗಳಲ್ಲಿ ಅಣೆಕಟ್ಟಿಂದ ನದಿನೀರು ಹರಿಯುವ ಕಾಲುವೆ.
ಇ) ಕರಾವಳಿ ಮತ್ತು ಬಯಲುಸೀಮೆಗಳ ಮಧ್ಯೆ, ಶಿವಮೊಗ್ಗ-ಚಿಕ್ಕಮಗಳೂರು-ಹಾಸನ ಜಿಲ್ಲೆಗಳುಳ್ಳ ದಟ್ಟಕಾಡುಳ್ಳ ಪ್ರದೇಶ. ಏಲಕ್ಕಿ, ಕಾಫಿ, ಶ್ರೀಗಂಧ.... ಘಮಘಮ!

12. .... .......

ಅ) ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಎಂದೊಡನೆ ನೆನಪಾಗುವ ರಾಜೇಂದ್ರ, ದ್ರೋಣ ಮತ್ತು ಈಗಿನ ಬಲರಾಮ.
ಆ) ಕುವೆಂಪು ಅವರ ಕಾದಂಬರಿಯಲ್ಲಿ ಮದುಮಗಳು ಇದ್ದದ್ದೆಲ್ಲಿ ?
ಇ) ಉತ್ತರಕನ್ನಡ, ಕಬ್ಬಿನ ಹಾಲು, ತೊಡದೇವು ಎಂಬ ಸಿಹಿತಿಂಡಿ - ಇವನ್ನೆಲ್ಲ ನೆನಪಿಸಿಕೊಂಡರೆ ನಿಮ್ಮ ಕಣ್ಣೆದುರಿಗೆ ಬರುವುದು...

*

ಬಾಲಂಗೋಚಿ: ‘ತೋಟ ಶೃಂಗಾರ, ಒಳಗೆ ಗೋಳಿಸೊಪ್ಪು’ ಎಂಬ ಗಾದೆಯನ್ನು ನೀವು ಕೇಳಿರಬಹುದು. ಹೊರಗಿಂದ ಸುಂದರವಾಗಿ ಕಂಡುಬರುವ ನಮ್ಮ ವ್ಯಕ್ತಿತ್ವದಲ್ಲಿ ಒಳಗೊಳಗೇ ಎಂತಹ ವಿರೋಧಾಭಾಸಗಳು, ವೈಪರೀತ್ಯಗಳಿರುತ್ತವೆ ನೋಡಿ. ಈ ಪದವಿನೋದದ ಹನ್ನೆರಡು ಪದಗಳ ಕಥೆಯೂ ಅದೇ. ಮೇಲ್ನೋಟಕ್ಕೆ ಸರಿಯಾದ ಪದಗಳು. ಬಾಹ್ಯ ಜಗತ್ತಿನ ಸಂಪರ್ಕವುಳ್ಳ ಮೊದಲ ಮತ್ತು ಕೊನೆಯ ಅಕ್ಷರಗಳಿಂದಾಗುವ ಪದವೂ ಅರ್ಥವುಳ್ಳದ್ದೇ. ಆದರೆ ಒಳಗೊಳಗೇ ವಿರುದ್ಧ ದಿಕ್ಕಿನಲ್ಲೊಂದು ಪ್ರವಾಹ (ಮೂರನೇ ಮತ್ತು ಎರಡನೇ ಅಕ್ಷರಗಳಿಂದಾದ ಪದ)! ಇಲ್ಲಿ ಸ್ವಲ್ಪ ಹೆಚ್ಚು, ಅಲ್ಲಿ ಸ್ವಲ್ಪ ಕಡಿಮೆ - ಇದು ಎಲ್ಲ ಮನೆ-ಮನಗಳ ಕಥೆ. ನೀವೇನಂತೀರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X