• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಚಿತ್ರಾನ್ನಕ್ಕೆ 25ನೇ ವಾರ !ಗುಡ್‌ ಬೈ ಹೇಳೋಣು ಬಾರಾ !!

By Staff
|

*ಶ್ರೀವತ್ಸ ಜೋಶಿ

Vichitranna celebrates Silver jubilee !ಕಳೆದ ವರ್ಷ ವಿಜಯದಶಮಿಯಂದು (ಅಕ್ಟೋಬರ್‌ 15, 2002) ಆರಂಭವಾಗಿ ಸತತವಾಗಿ 25 ವಾರಗಳ ಕಾಲ ಕಂತು ಕಂತಾಗಿ ನಿಮ್ಮ ತಲೆ ತಿಂದಿರುವ ('ತಲೆಯು" ತಿಂದಿರುವ ಎಂದು ಪ್ರಥಮಾ ವಿಭಕ್ತಿಯ ಅರ್ಥವನ್ನೂ ಉಪಯೋಗಿಸಬಹುದು; 'ತಲೆಯನ್ನು" ತಿಂದಿರುವ ಎಂದು ದ್ವಿತೀಯಾ ವಿಭಕ್ತಿಯಾಗಿಯೂ ಅರ್ಥೈಸಿಕೊಳ್ಳಬಹುದು!) ವಿಚಿತ್ರಾನ್ನದ ಈ 25ನೇ ತುತ್ತನ್ನು ವಿಶೇಷಾಂಕವಾಗಿ ನಿಮಗೆಲ್ಲ ಪ್ರೀತಿಯಿಂದ ಹಂಚುತ್ತಿದ್ದೇನೆ.

ಇಲ್ಲಿ ಒಂದಿಷ್ಟು ಆತ್ಮಾವಲೋಕನದ ಮಾತುಗಳಿವೆ ; ಆದರೆ ಸ್ವಪ್ರಶಂಸೆಯಂತೂ ಖಂಡಿತ ಅಲ್ಲ ! 'ಅಡಿಗೆ ಮಾಡಿ ಊಟ ಬಡಿಸಿದ್ದು ಆಯಿತು, ನೀವು ಹೊಟ್ಟೆತುಂಬ ಉಂಡದ್ದೂ ಆಯಿತು; ಇನ್ನು ಜಾಗ ಖಾಲಿ ಮಾಡಿ" ಎಂದು ಹೇಳುವ ಮೊದಲು ವಿಚಿತ್ರಾನ್ನವೆಂಬ ಈ ವಿಚಿತ್ರ ಅಂಕಣದ ಬಗ್ಗೆ 'ಫ್ರೀಕ್ವೆಂಟ್ಲಿ ಆಸ್ಕ್‌ಡ್‌ ಕ್ವೆಶ್ಚನ್ಸ್‌" ಒಂದಿಷ್ಟನ್ನು ಆನ್ಸರಿಸಿ ಅಡಿಗೆಮನೆಗೆ ಬೀಗ!

*

ಪ್ರ: ಮೊಟ್ಟಮೊದಲ ಪ್ರಶ್ನೆ ಎಂದರೆ, ಇದಕ್ಕೆಲ್ಲ ನಿಮಗೆ ಟೈಂ ಎಲ್ಲಿಂದ ಮತ್ತು ಹೇಗೆ ಸಿಗುತ್ತದೆ ಮಾರಾಯ್ರೇ?

ಉ: ವಿಚಿತ್ರಾನ್ನದ 95% ಓದುಗರ ಪ್ರಶ್ನೆ ಇದು. ನನ್ನ ಉತ್ತರವೆಂದರೆ, ಐಡಿಯಲೀ ನಾನು ಐಡಲ್‌ ಟೈಮನ್ನು ಇಂತಹ ಚಟುವಟಿಕೆಗೆ ಉಪಯೋಗಿಸುತ್ತೇನೆ. ಉದಾಹರಣೆಗೆ ಏರ್‌ಪೋರ್ಟ್‌ಗಳಲ್ಲಿ ವೈಟಿಂಗ್‌ ಟೈಮು (ಏನು ಮಾಡೋಣ, ಸಾಫ್ಟ್‌ವೇರ್‌ ಕನ್ಸಲ್ಟೆನ್ಸಿಯವರಿಗೆ ಕಮ್ಯೂಟಿಂಗ್‌ ಜಾಸ್ತಿ , ಮತ್ತು ಈಗೀಗ ಏರ್‌ಪೋರ್ಟ್‌ಗಳಲ್ಲಿ ವೈಟಿಂಗೂ ಜಾಸ್ತಿ), ಫ್ಲೈಟ್‌ ಜರ್ನಿ, ಸೂಪರ್‌ಮಾರ್ಕೆಟ್‌ನ ಕೌಂಟರ್‌ಗಳಲ್ಲಿ ವೈಟಿಂಗ್‌ ಇತ್ಯಾದಿಯನ್ನೆಲ್ಲ ವಿಚಿತ್ರಾನ್ನದ (ಅಥವಾ ಇತರ ಬರವಣಿಗೆಯ) ವಿಚಾರಲಹರಿಗಳಿಗೆ ಉಪಯೋಗಿಸುತ್ತೇನೆ. ಮತ್ತೆ ಕೆಲವೊಮ್ಮೆ 'ಪ್ಯಾರಲೆಲ್‌ ಪ್ರೋಸೆಸಿಂಗ್‌" ಕೂಡ ಮಾಡುತ್ತೇನೆ. ಹೇಗೆ ಗೊತ್ತಾ? ಭಾನುವಾರ ಒಗೆದ ಬಟ್ಟೆಗಳಿಗೆ ಇಸ್ತ್ರಿ ಮಾಡುತ್ತಿರುವಾಗ ಮನದಲ್ಲೇ ಲೇಖನದ ಬಿಲ್ಡಿಂಗ್‌ಬ್ಲಾಕ್‌ಗಳು ಸಿದ್ಧವಾಗುತ್ತವೆ. ಆಮೇಲೆ, ಬರಹ ಸಾಫ್ಟ್‌ವೇರ್‌ ಉಪಯೋಗಿಸಿ (ಶೇಷಾದ್ರಿವಾಸು ಚಂದ್ರಶೇಖರ್‌ ಅವರನ್ನು ನೆನೆನೆನೆದು) ಫಟಾಫಟ್‌ ಟೈಪ್‌ ಮಾಡುವುದೊಂದೇ ಕೆಲಸ. ಅದು 15 ನಿಮಿಷದಲ್ಲಿ ಆಗುತ್ತದೆ!

ಪ್ರ: ಒಂದಲ್ಲ ಒಂದು ರೀತಿಯಲ್ಲಿ ಬಾಲ್ಯದ/ಶಾಲಾದಿನಗಳ ನೆನಪು ಮರುಕಳಿಸುವಂತೆ ಮಾಡುವ ವಿಶೇಷತೆ ವಿಚಿತ್ರಾನ್ನದ ಪ್ರತಿ ಲೇಖನದಲ್ಲೂ ಇರುತ್ತದೆ; ಇದರ ಗುಟ್ಟೇನು?

ಉ: 'ಹಸಿ ಗೋಡೆಯಲ್ಲಿ ಹರಳು ನೆಟ್ಟಂತೆ" ಪ್ರಾಥಮಿಕ ಶಾಲೆಯ ಪಾಠ-ಪದ್ಯಗಳೆಲ್ಲ ನಮಗೆಲ್ಲರಿಗೂ ಯಾವಾಗಲೂ ನೆನಪಿರುತ್ತವೆ. ಮಾತ್ರವಲ್ಲ , ಅವು ನೆನಪಾದಾಗ ಜತೆಯಲ್ಲೇ ಇತರ ವಿಷಯಗಳೂ ಪುಂಖಾನುಪುಂಖವಾಗಿ ತೆರೆಯುತ್ತವೆ. ಅದೂ ಅಲ್ಲದೇ ಯುದ್ಧ, ಭಯೋತ್ಪಾದನೆ, ಅನಿಶ್ಚಿತತೆಯ ಇವತ್ತಿನ ದಿನಗಳಲ್ಲಿ ಅಂಥವೆಲ್ಲ ಜಂಜಾಟಗಳಿಲ್ಲದಿದ್ದ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ, ಓದುವವರಿಗೂ ಅದೇ ಭಾವನೆಯನ್ನು ತಂದರೆ ಆಶ್ಚರ್ಯವಿಲ್ಲ!

ಪ್ರ: ವಿಚಿತ್ರಾನ್ನ ಲೇಖನಗಳ ಶೀರ್ಷಿಕೆಗಳೂ, ಗ್ರಾಫಿಕ್‌ಗಳೂ ನಿಮ್ಮದೇ ರಚನೆಯೋ ಹೇಗೆ?

ಉ: ಹೌದು. ಸಾಧ್ಯವಾದಷ್ಟು ಮಟ್ಟಿಗೆ ಆಕರ್ಷಕ ಶೀರ್ಷಿಕೆ ಮತ್ತು ಅನುಗುಣವಾದ ಗ್ರಾಫಿಕ್‌ ಪ್ರತಿಯಾಂದು ಲೇಖನದ ಜತೆಗೂ ಇರುವಂತೆ ನೋಡಿಕೊಳ್ಳುತ್ತೇನೆ. ಪನ್‌ (ವರ್ಡ್‌ಪ್ಲೇ) ನನಗೆ ತುಂಬ ಇಷ್ಟ , ಹಾಗಾಗಿ ಶೀರ್ಷಿಕೆಯಲ್ಲಿ ಅಥವಾ ಲೇಖನದಲ್ಲಿ ಸ್ವಲ್ಪವಾದರೂ ಪನ್‌ಭರಿತ ಫನ್‌ ಇರಲೇಬೇಕು. ಇದುವರೆಗೆ ಒಮ್ಮೆ ಮಾತ್ರ ಲೇಖನದ ಶೀರ್ಷಿಕೆಯನ್ನು ದಟ್ಸ್‌ಕನ್ನಡ ಸಂಪಾದಕರು ಅನಾಮತ್ತಾಗಿ ಚೇಂಜಿಸಿದ್ದಾರೆ. 'ಇನ್ನೊಸೆನ್ಸ್‌ನಲ್ಲೇ ಇನ್ನೊಂದು ಸೆನ್ಸ್‌" ಎಂಬ ನನ್ನ ಪನ್‌-ಶೀರ್ಷಿಕೆಯನ್ನು ಏಕಾಏಕಿ 'ಪಾಪ ಪಾಂಡು" ಎಂದು ಬದಲಾಯಿಸಿದರು! ಆ ಎಪಿಸೋಡ್‌ ಸ್ವಲ್ಪ ಫ್ಲಾಪ್‌-ಶೋ ಆಯಿತು :-(

ಪ್ರ: ನಿಮಗೆ ಸಾಕಷ್ಟು ಮಂದಿ ವಿಚಿತ್ರಾನ್ನ ಅಭಿಮಾನಿಗಳು ಇರಬಹುದಲ್ಲವೇ?

ಉ: ಇದ್ದಾರೆ, ಪ್ರಪಂಚದಾದ್ಯಂತ ! ಅವರನ್ನೆಲ್ಲ ನನ್ನ ಅಭಿಮಾನಿಗಳು ಎನ್ನುವುದಕ್ಕಿಂತ ವಿಚಿತ್ರಾನ್ನ ಅಭಿಮಾನಿಗಳೆಂದು ಕರೆಯಲು ಇಷ್ಟಪಡುತ್ತೇನೆ. ಏಕೆಂದರೆ ಸ್ವತಃ ನಾನೇ ವಸ್ತುನಿಷ್ಠತೆಗೆ ಒತ್ತು ಕೊಡುವವನು. ವಿಚಿತ್ರಾನ್ನ ಅಭಿಮಾನಿಗಳಲ್ಲಿ ಬೆಂಗಳೂರಿನ ಸಾಫ್ಟ್‌ವೇರ್‌ 'ಗೀಕ್‌"ಗಳಿದ್ದಾರೆ; ಯುರೋಪ್‌ನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವವರಿದ್ದಾರೆ; ಟೈಮ್‌ಪಾಸ್‌ಗೆಂದು ವೆಬ್‌ಸೈಟ್‌ ನೋಡಿ ವಿಚಿತ್ರಾನ್ನ ಮೆಚ್ಚಿರುವ ಸದ್ಗೃಹಿಣಿಯರಿದ್ದಾರೆ; ನಿವೃತ್ತ ಜೀವನದಲ್ಲಿ ಮಗಳ/ಮಗನ ಮನೆಗೆ ಆರೇಳು ತಿಂಗಳ ಮಟ್ಟಿಗೆ ಅಮೆರಿಕೆಗೆ ಬಂದು 'ಕನ್ನಡ ಕನ್ನಡ ಹಾ! ಸವಿಗನ್ನಡ" ಎಂದು ಹಾತೊರೆಯುತ್ತಿರುವ ಹಿರಿಯರಿದ್ದಾರೆ; ಎರಡು ದಶಕಗಳಿಂದ ಇಲ್ಲೇ ನೆಲೆಸಿರುವ ತಲೆಮಾರಿನವರಿದ್ದಾರೆ. ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಕೊರಿಯಾ, ಹಾಂಗ್‌ಕಾಂಗ್‌, ಚೈನಾ, ಸಿಂಗಾಪುರ್‌ ಇತ್ಯಾದಿ ಪೌರ್ವಾತ್ಯ ದೇಶಗಳಿಂದ ಹಿಡಿದು, ಕ್ಯಾಲಿಫೋರ್ನಿಯಾದ ಕೊಲ್ಲಿ ಪ್ರದೇಶದ ಕನ್ನಡ ಸಾಹಿತ್ಯದ ತೆನೆಯ ಕೆನೆ ('ಕ್ರೀಮ್‌ ಆಫ್‌ ದ ಕ್ರಾಪ್‌") ಎಂದು ಹೇಳಿಕೊಳ್ಳುವ ಕನ್ನಡಿಗ ಓದುಗರಿದ್ದಾರೆ ವಿಚಿತ್ರಾನ್ನಕ್ಕೆ. ಸಂತೋಷದ ಸಮಾಚಾರವೆಂದರೆ ಇದರಲ್ಲಿ ತುಂಬ ಮಂದಿ ಪ್ರತಿಕ್ರಿಯೆ ಬರೆಯುತ್ತಾರೆ; ತಮಗೆ ಸಂತೋಷವಾಯಿತೆಂಬುದನ್ನು ತಿಳಿಸುತ್ತಾರೆ.

ಪ್ರ: ವಿಚಿತ್ರಾನ್ನ ಇಷ್ಟು ಚೆನ್ನಾಗಿ ಕ್ಲಿಕ್‌ ಆಗುತ್ತದೆಂದು ಊಹಿಸಿದ್ದಿರಾ?

ಉ: ಇಂಟರ್‌ನೆಟ್‌ನಲ್ಲಿ ಎಚ್‌.ಟಿ.ಎಂ.ಎಲ್‌ ಫಾರ್ಮಾಟ್‌ನಲ್ಲಿರುವುದರಿಂದ 'ಕ್ಲಿಕ್‌" ಆಗಿಯೇ ಬಿಟ್ಟಿತು! ಕ್ಲಿಕ್‌ ಮಾಡಿದ ಸಹಸ್ರಾರು ಮೌಸ್‌ಗಳ ಒಡೆಯರಿಗೆ ಕೃತಜ್ಞತೆ ಸಲ್ಲಬೇಕು. ಇಲ್ಲಿ ವಾಷಿಂಗ್ಟನ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಾನು ದಟ್ಸ್‌ಕನ್ನಡ ವೆಬ್‌ಸೈಟ್‌ ನೋಡುವ ಹೊತ್ತಿಗೆ, ಭೂಗೋಲದ ಪೂರ್ವಾರ್ಧದ ಪ್ರದೇಶಗಳಿಂದ ಆಗಲೇ ಕ್ಲಿಕ್‌ ಆಗಿ, ಕ್ವಿಕ್‌ ಆಗಿ ಪ್ರತಿಕ್ರಿಯೆಗಳು, ಒಗಟು/ಪ್ರಶ್ನೆಗಳಿಗೆ ಉತ್ತರಗಳ ಈ ಮೈಲ್‌ ಬಂದಿರುತ್ತವೆ!

ಪ್ರ: ವಿಚಿತ್ರಾನ್ನಕ್ಕೆ ಗುಡ್‌ಬೈಯ ನಂತರ ಮುಂದೇನು?

ಉ: ಅಣ್ಣಾವ್ರ ಹಾಡೊಂದಿದೆ - 'ಮುಂದೇನು ಇನ್ನೆಂದು ಹೇಳುವರು ಯಾರು... ಬರುವುದು ಬರಲೆಂದು ನಗುನಗುತ ಬಾಳಲು... ನಿರಾಸೆ ವಿಷಾದ ಇದೇಕೆ ಇದೇಕೆ..." ವಿಚಿತ್ರಾನ್ನಕ್ಕೂ ಇದೇ ಮಾತು ಅನ್ವಯ. ವಿಚಿತ್ರಾನ್ನ ಮುಗಿದರೆ ಮುಗಿಯಲಿ, ಜೀವನದಲ್ಲಿ ಬರುವ, ಭೇಟಿಯಾಗುವ ಸಣ್ಣ ಸಂಗತಿಗಳನ್ನೆಲ್ಲ ಆಸ್ವಾದಿಸುತ್ತ ಆಶಾಭಾವದಿಂದ ಮುನ್ನಡೆಯೋಣ.

*

shrivatsa joshiಅಶ್ವತ್ಥಾಮೋ ಹತಃ ಕುಂಜರಃ !

ಮಹಾಭಾರತ ಯುದ್ಧದ ವೇಳೆ ದ್ರೋಣಾಚಾರ್ಯರ ಜಂಘಾಬಲ ಉಡುಗಿಸಬೇಕೆಂಬ ಕೃಷ್ಣನ ತಂತ್ರವಾಗಿ ಯುಧಿಷ್ಠಿರನ ಬಾಯಿಂದ ಈ ಮಾತನ್ನು ಹೇಳಿಸಲಾಗುತ್ತದೆ - ಅಶ್ವತ್ಥಾಮ ಎಂಬ ಹೆಸರಿನ ಆನೆ ಸತ್ತುಹೋಯಿತು ಎಂದು ಅರ್ಥವಾಗುವಂತೆ. ಆದರೆ 'ಕುಂಜರಃ" ಶಬ್ದವನ್ನು ಯುಧಿಷ್ಠಿರ ಹೇಳುತ್ತಿದ್ದಂತೆ ಕೃಷ್ಣ ತನ್ನ ಶಂಖವನ್ನು ಊದುವುದರಿಂದ 'ಅಶ್ವತ್ಥಾಮೋ ಹತಃ" ಎಂದಷ್ಟೇ ದ್ರೋಣಾಚಾರ್ಯರಿಗೆ ಕೇಳುತ್ತದೆ; ಅವರು ಅಲ್ಲಿಗೇ ಕುಸಿಯುತ್ತಾರೆ. ಆಫ್‌ ಕೋರ್ಸ್‌, ಮಹಾಭಾರತ ಯುದ್ಧ ಆಮೇಲೂ ಮುಂದುವರಿಯುತ್ತದೆ.

ಕಳೆದ ನವೆಂಬರ್‌ನ ಒಂದು ವಾರಾಂತ್ಯದಲ್ಲಿ ಇಲ್ಲಿ ವಾಷಿಂಗ್ಟನ್‌ನಲ್ಲಿ ಹಿರಿಯ ಸ್ನೇಹಿತ, ಹಿತೈಷಿ ಮೈ.ಶ್ರೀ.ನಟರಾಜ್‌ ಅವರ ಮನೆಯಲ್ಲಿ ಕನ್ನಡಿಗ ಸ್ನೇಹಿತರ ಗೆಟ್‌-ಟುಗೆದರ್‌ ಏರ್ಪಡಿಸಿದ್ದರು. ನಾನಾಗ ಬಲವಂತ ಬ್ರಹ್ಮಚಾರಿಯಾಗಿದ್ದೆ (ಫೋರ್ಸ್‌ಡ್‌ ಬ್ಯಾಚುಲರ್‌), ಹಾಗಾಗಿ ನನಗೆ ಇಂಥ ಗೆಟ್‌-ಟುಗೆದರ್‌ಗಳು 'ಲುಕ್‌ ಫಾರ್ವರ್ಡ್‌ ಟು" ಆಗಿರುತ್ತಿದ್ದುವು:-) ಅವತ್ತು ಬೆಳಿಗ್ಗೆ ನಟರಾಜ್‌ ಅವರಿಗೆ ಫೋನ್‌ ಮಾಡಿ, 'ಸರ್‌, ಏನಾದ್ರೂ ಸಹಾಯ ಬೇಕಿದ್ರೆ ಹೇಳಿ..." ಎಂಬ (ಒಣ?) ಸೌಜನ್ಯ ತೋರಿಸಿದ್ದೆ. ಅವರು, 'ಏನಿಲ್ಲಾ ಬಿಡಿ ಜೋಶಿಯವರೆ, ಸ್ವಲ್ಪ ವಿಚಿತ್ರಾನ್ನ ತಕ್ಕೊಂಡು ಬನ್ನಿ, ಲೆಟ್‌ ಅಸ್‌ ಹೇವ್‌ ನೈಸ್‌ ಟೈಮ್‌" ಎಂದು ಹೇಳಿದ್ದರು. ನಾನಾದರೋ ಆ ಗೆಟ್‌-ಟುಗೆದರ್‌ ಒಂದು ಪಾಟ್‌ಲಕ್‌ ಡಿನ್ನರ್‌ ಆಗಿರಬಹುದು, ನಾನು ಏನನ್ನೂ ತಕ್ಕೊಂಡು ಹೋಗದೆ ಕೈಬೀಸಿಕೊಂಡು ಹೋದರೆ ಚೆನ್ನಾಗಿರಲ್ಲ ಎಂದುಕೊಂಡು ನಿಜವಾಗಿಯೂ ಒಂದಿಷ್ಟು ಚಿತ್ರಾನ್ನ ಮಾಡಿಕೊಂಡೇ ಹೋದೆ. ಮತ್ತೆ ನೋಡುತ್ತೇನಾದರೆ ಅದು ಪಾಟ್‌ಲಕ್‌ ಡಿನ್ನರ್‌ ಅಲ್ಲ . ಸ್ವಾದಿಷ್ಟವಾಗಿ ಎಲ್ಲ ಅಡುಗೆಯನ್ನೂ (ಸುಮಾರು 50-60 ಮಂದಿಗಾಗುವಷ್ಟು!) ಶ್ರೀಮತಿ ಗೀತಾ ನಟರಾಜ್‌ ಅವರೇ ಸ್ವತಃ ಮಾಡಿದ್ದರು! ನಾನು ಮಾತ್ರ ಚಿತ್ರಾನ್ನ ಮಾಡಿಕೊಂಡು ಹೋದ ಸಂಗತಿ ಅವರಿಗೂ, ನನಗೂ ಮುಜುಗರವಾಗದಂತೆ ಈ 'ಅಶ್ವತ್ಥಾಮೋ ಹತಃ ಕುಂಜರಃ" ಥಿಯರಿಯನ್ನು ಪ್ರಯೋಗಿಸಿದೆ. ನಟರಾಜ್‌ ಅವರು ಫೋನಲ್ಲಿ 'ವಿಚಿತ್ರಾನ್ನ ತಕ್ಕೊಂಡು ಬನ್ನಿ" ಎಂದು ಹೇಳುವಾಗಲೇ ನನ್ನ ಫೋನಲ್ಲಿ ಇನ್ನೊಂದು 'ಕಾಲ್‌ವೈಟಿಂಗ್‌" ಟೋನ್‌ ಬಂದಿದ್ದರಿಂದ ಅದು ನನಗೆ 'ಚಿತ್ರಾನ್ನ ತಕ್ಕೊಂಡು ಬನ್ನಿ" ಅಂತ ಕೇಳಿಸಿತು ಎಂಬುದಾಗಿ ವ್ಯಾಖ್ಯಾನಿಸಿದೆ!

ಇದೆಲ್ಲ ವಿವರಣೆ ಈಗ ಯಾಕೆ ಬಂತೆಂದರೆ, ಈ ವಾರದ ವಿಚಿತ್ರಾನ್ನದ ಶೀರ್ಷಿಕೆಯನ್ನು ನೀವು ಓದಿರಬಹುದಾದರೂ ಅಲ್ಲೇ ಪಕ್ಕದಲ್ಲಿ ನಮೂದಾಗಿರುವ ತಾರೀಕನ್ನು (ಎಪ್ರಿಲ್‌ 1 :-)) ಗಮನಿಸಿರುವುದಿಲ್ಲ . ಲೈಟಾಗಿ ನಿಮ್ಮನ್ನೊಮ್ಮೆ ಎಪ್ರಿಲ್‌-ಫೂಲ್‌ ಮಾಡೋಣ ಎಂದು ಇಷ್ಟೆಲ್ಲ ಪುರಾಣ. 'ಅಶ್ವತ್ಥಾಮೋ ಹತಃ ಕುಂಜರಃ" ಥಿಯರಿಯಂತೆ, 'ವಿಚಿತ್ರಾನ್ನಕ್ಕೆ ಗುಡ್‌ ಬೈ ಹೇಳೋಣು ಬಾರ..." ಎಂಬ ಇವತ್ತಿನ ಶೀರ್ಷಿಕೆಯಲ್ಲಿ 'ಬೈ"ಯನ್ನು ಬೈಪಾಸ್‌ ಮಾಡಿ "ವಿಚಿತ್ರಾನ್ನಕ್ಕೆ ಗುಡ್‌ ಹೇಳೋಣು ಬಾರ..."!

ಆದ್ದರಿಂದ ಈ ಲೇಖನದ ಆರಂಭದ ಪ್ಯಾರಾಗ್ರಾಫ್‌ನಲ್ಲಿ 'ಜಾಗ ಖಾಲಿ ಮಾಡಿ" ಎಂದರೆ ಇನ್ನಷ್ಟು ವಿಚಿತ್ರಾನ್ನ ಹಾಕಿಸಿಕೊಳ್ಳಲು ಜಾಗ ಖಾಲಿ ಮಾಡಿ ಎಂದರ್ಥ! ಹಾಗೆಯೇ, 'ಅಡಿಗೆ ಮನೆಗೆ ಬೀಗ" ಎಂಬುದನ್ನು ವಿಚಿತ್ರಾನ್ನದ ಅಡಿಗೆಮನೆಗೆ ಬೀಗರಾಗಿ ಬರಲಿಕ್ಕೆ ನಿಮಗೆ ಸದಾ ಸ್ವಾಗತ ಎಂಬ ಅರ್ಥದಲ್ಲಿ ಓದಿಕೊಳ್ಳುವುದು :-)

ಅಂದಹಾಗೆ ನಿಮ್ಮನ್ನು ಇಂಗ್ಲೀಷ್‌ನ 'ಫೂಲ್‌" ಮಾಡುವ ಉದ್ದೇಶ ಯಾವತ್ತೂ (ಏಪ್ರಿಲ್‌ ಒಂದರಂದು ಕೂಡ) ಇಲ್ಲ ವಿಚಿತ್ರಾನ್ನಕ್ಕೆ. ಹಿಂದಿಯ 'ಫೂಲ್‌"ನಂತೆ ನಿಮ್ಮ ಮನಸ್ಸನ್ನು ಹಗುರಾಗಿಸುವುದೊಂದೇ ಇಲ್ಲಿಯ ಧ್ಯೇಯ. 25 ವಾರಗಳ ಪ್ರಕಟಣೆಯ ಗರಿ ಮೂಡಿಸಿಕೊಂಡ (ಚಿತ್ರ ನೋಡಿ) ಗರಿಗರಿ ವಿಚಿತ್ರಾನ್ನ ಮತ್ತೆ ನಿಮ್ಮ ತಲೆ ತಿನ್ನಲು ಹಾಜರ್‌ ಮುಂದಿನ ಮಂಗಳವಾರ ! ಗುಡ್‌ ಮಾತ್ರವಲ್ಲ, 'ವೆರಿ ಗುಡ್‌" ಎಂದೆನಿಸಿಕೊಳ್ಳುವವರೆಗೂ!!

ನಿಮ್ಮ ಮನದ ಮಾತುಗಳು ಹರಿದುಬರಲಿ sjoshim@hotmail.com ವಿಳಾಸಕ್ಕೆ ಈ ಮೈಲ್‌ ರೂಪದಲ್ಲಿ .

ವಿಚಿತ್ರಾನ್ನದ ಸಮಸ್ತ ಓದುಗರಿಗೂ ಯುಗಾದಿಯ ಶುಭಾಶಯಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more