ಟ್ರಂಪ್ ಒಡ್ಡಿರುವ ಸವಾಲುಗಳನ್ನು ಎದುರಿಸುವುದೇ ಭಾರತ?

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ನಮ್ಮ ಭಾರತದಲ್ಲಿ ನೋಟು ರದ್ದತಿ, ಜಲ್ಲಿಕಟ್ಟು ಚಳವಳಿಗಳ ಕಾವು ಇಳಿದು ಅವುಗಳ ಸ್ಥಾನವನ್ನು ಉತ್ತರಪ್ರದೇಶ, ಪಂಜಾಬ್ ಮತ್ತಿತರ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳ ಕಾವು ಏರಿ ಜನರ ಮನಸ್ಸನ್ನು ಆವರಿಸುತ್ತಿದ್ದಂತೆ, ಅತ್ತ ಅಮೆರಿಕದಲ್ಲಿ ಒಬಾಮಾರ ರಾಜ್ಯಭಾರ ಮುಗಿದು ಡೊನಾಲ್ಡ್ ಟ್ರಂಪ್ ಈಗ ಸಿಂಹಾಸನವನ್ನು ಏರಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ತಮ್ಮ ಹತೋಟಿಯಿಲ್ಲದ ನಾಲಿಗೆಯಿಂದ ಜಗತ್ತಿನಾದ್ಯಂತ ಕಳವಳವುಂಟು ಮಾಡಿದ್ದರೂ ಮತ್ತು ಅಮೆರಿಕದ ಮತ್ತು ಜಗತ್ತಿನಾದ್ಯಂತ ತಥಾಕಥಿತ ಉದಾರವಾದಿಗಳ ತಾತ್ಸಾರದ ಉತ್ತುಂಗಕ್ಕೇರಿದ್ದರೂ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಪದವಿಯನ್ನು ಅಲಂಕರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಕಾರಕ್ಕೆ ಬರುತ್ತಲೇ ಮಾಡಿದ ಮೊದಲ ಕೆಲಸವೆಂದರೆ ಮೆಕ್ಸಿಕೋದ ಗಡಿಯಲ್ಲಿ ಗೋಡೆ ಕಟ್ಟುವ ಕೆಲಸಕ್ಕೆ ಆದೇಶ ಮತ್ತು ಅಮೆರಿಕಕ್ಕೆ ಬರುವ ನಿರಾಶ್ರಿತರ ವಲಸೆಗೆ ಕಠಿಣ ಕಟ್ಟುಪಾಡುಗಳನ್ನು ಜಾರಿಗೆ ತಂದಿದ್ದು. ಈ ಮೂಲಕ ತಾವು ನುಡಿದಂತೆ ನಡೆಯುವವರು ಎಂದು ತೋರಿಸಿ ಜಗತ್ತಿನಲ್ಲಿ ಕೋಲಾಹಲ ಉಂಟು ಮಾಡಿದ್ದಾರೆ.

How will India face the challenges posed by Donald Trump?

ಚುನಾವಣೆಯ ಸಮಯದಲ್ಲಿ ತಾವೊಬ್ಬ ಭಾರತದ ಮಿತ್ರ ಎಂದು ಹೇಳಿಕೊಂಡಿದ್ದರೂ ಮತ್ತು ಅಧ್ಯಕ್ಷರಾದೊಡನೆ ಚೀನ ಮತ್ತು ಜಪಾನ್‍ ದೇಶಗಳಿಗಿಂತ ಮುಂಚೆ ಭಾರತದ ಪ್ರಧಾನಿಗೆ ಫೋನ್ ಮಾಡಿದ್ದರೂ ಟ್ರಂಪ್ ಭಾರತದ ಉದ್ದಿಮೆದಾರರಲ್ಲಿ, ಅದರಲ್ಲೂ ಮಾಹಿತಿ ತಂತ್ರಜ್ಞಾನದ ಉದ್ದಿಮೆದಾರರ ನಿದ್ದೆಗೆಡಿಸಿದ್ದಂತೂ ಖಂಡಿತ.

ಅಮೆರಿಕದ ಜನಸಾಮಾನ್ಯರಿಗೆ ಅವರು ನೀಡಿದ ಆಶ್ವಾಸನೆ ಏನೆಂದರೆ, ಹೊರಗಿನ ಜನಕ್ಕೆ ಅಮೆರಿಕದ ವೀಸಾ ನೀಡುವುದನ್ನು ಬಿಗಿಗೊಳಿಸಿ ಅಮೆರಿಕದ ಜನರಿಗೆ ಉದ್ಯೋಗ ದೊರಕುವಂತೆ ಮಾಡುವುದು. ಟ್ರಂಪ್ ತಮ್ಮ ಮಾತಿನಂತೆ ನಡೆದುಕೊಂಡಿರುವುದರಿಂದ ಅಮೆರಿಕದಿಂದ ಸಿಗುವ ಪ್ರಾಜೆಕ್ಟ್ ಗಳ ಮೇಲೆ ಅವಲಂಬಿಸಿದ ಭಾರತದ ಅನೇಕ ಮಾಹಿತಿ ತಂತ್ರಜ್ಞಾನದ ಉದ್ದಿಮೆಗಳಿಗೆ ಹೊಡೆತ ಬೀಳುವ ಸಂಭವವಿದೆ.

ಇಲ್ಲಿಯವರೆಗಿನ ಅಮೆರಿಕದ ಆರ್ಥಿಕ ನೀತಿಯನ್ನು ಪ್ರಶ್ನಿಸಿದ ಟ್ರಂಪ್, ಚೀನದ ಜೊತೆಗಿನ ಅಮೆರಿಕದ ವಿದೇಶ ನೀತಿಯನ್ನು ಸಹ ಪ್ರಶ್ನಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಭಾರತದ ಜೊತೆಗಿನ ಅಮೆರಿಕದ ಸಂಬಂಧ ಇಪ್ಪತ್ತೊಂದನೇ ಶತಮಾನದ ಅತ್ಯಂತ ನಿರ್ಣಾಯಕ ಸಂಬಂಧ ಎಂದು ವರ್ಣಿಸಿದ ಒಬಾಮಾರ ಕೊನೆಯ ವರ್ಷಗಳಲ್ಲಿಯೇ ಈ ಬಗ್ಗೆ ಅಮೆರಿಕದಲ್ಲಿ ಚಿಂತನೆ ಆರಂಭವಾಗಿತ್ತೆಂದು ಇಲ್ಲಿ ವಿದಿತ.

ಪ್ರಬಲವಾಗುತ್ತಿರುವ ಚೀನ ತಮ್ಮ ಸುತ್ತ ಮುತ್ತಲಿನ ಪ್ರಭಾವಳಿಯಲ್ಲದೇ ಇಡೀ ವಿಶ್ವದಲ್ಲಿ ವರ್ಚಸ್ಸನ್ನು ಏರಿಸಲು ಸತತ ಪ್ರಯತ್ನ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಕ್ಕೆ ಸವಾಲು ಕೂಡ ಎಸೆಯುತ್ತಿದೆ. ದಕ್ಷಿಣ ಚೀನ ಸಮುದ್ರದಲ್ಲಿ ಕಾನೂನು ಉಲ್ಲಂಘಿಸಿರುವುದಲ್ಲದೇ ಉತ್ತರ ಕೊರಿಯ ಮತ್ತು ಪಾಕಿಸ್ತಾನದಂತಹ ಆತಂಕವಾದಿ ದೇಶಗಳ ಜೊತೆಗೆ ತನ್ನ ಸಹಯೋಗವನ್ನು ಇನ್ನೂ ಬೆಳೆಸುತ್ತಲೇ ಇದೆ. ರಷಿಯಾದ ಜೊತೆ ಕೂಡ ತನ್ನ ಸಂಬಂಧವನ್ನು ಸುಧಾರಿಸುವತ್ತ ಹೆಜ್ಜೆಯಿಟ್ಟಿದೆ. ಇದರಿಂದ ಸಹಜವಾಗಿ ಅಮೆರಿಕಕ್ಕೆ ಆತಂಕವಾಗಿದೆ. ಅದಕ್ಕೆ ಭಾರತದಂತಹ ಪ್ರಜಾಪ್ರಭುತ್ವವುಳ್ಳ ದೇಶದ ಬೆಂಬಲ ಸರ್ವಾಧಿಕಾರಿ ಚೀನವನ್ನು ಹತೋಟಿಯಲ್ಲಿಡಲು ಬೇಕಾಗಿದೆ.

ಭಾರತದ ಮುಂದಿರುವ ಮುಖ್ಯ ಸವಾಲೆಂದರೆ, ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿ ಇನ್ನೂ ಹೆಚ್ಚು ಹೆಚ್ಚು ಉದ್ದಿಮೆಗಳನ್ನು ಭಾರತಕ್ಕೆ ತರುವುದು. ಈ ದಿಶೆಯಲ್ಲಿ ಅಮೆರಿಕದ ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ ಎರಡೂ ಬೇಕು. ಮುಖ್ಯವಾಗಿ ಚೀನ ಮತ್ತು ಪಾಕಿಸ್ತಾನಗಳ ಆಪ್ತ ಸಂಬಂಧದ ಹಿನ್ನೆಲೆಯಲ್ಲಿ ಭಾರತಕ್ಕೆ ಅಮೆರಿಕದಂತಹ ಬಲಶಾಲಿ ರಾಷ್ಟ್ರದ ಬೆಂಬಲ ಬೇಕು. ಈ ದಿಶೆಯಲ್ಲಿ ಎರಡೂ ದೇಶಗಳಿಗೆ ಲಾಭವಿದೆ.

ಒಂದು ಮುಖ್ಯ ವಿಚಾರ ಏನೆಂದರೆ, ಇಂದಿನ ಯುಗದಲ್ಲಿ ಯಾರೊಬ್ಬರೂ ಮತ್ತೊಬ್ಬರಿಗೆ ಲಾಭವಿಲ್ಲದೇ ಬೆಂಬಲ ನೀಡಲಾರರು. ಅಮೆರಿಕದಲ್ಲಿ ಯಾರೇ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿರಲಿ, ಅವರು ಅಮೆರಿಕದ ಹಿತಾಸಕ್ತಿಗಳ ಸಲುವಾಗಿ ಮಾತ್ರ ಹೋರಾಡುತ್ತಾರೆ. ಇದು ಅಮೆರಿಕಕ್ಕೆ ಮಾತ್ರವಲ್ಲ, ನಮ್ಮ ಭಾರತಕ್ಕೂ ಅನ್ವಯವಾಗಬೇಕು. ಈ ದಿಶೆಯಲ್ಲಿ ಭಾರತ ಕೂಡ ಹಿಂಜರಿಯಬಾರದು.

ಯಾವ ವಿಷಯಗಳಲ್ಲಿ ಎರಡೂ ದೇಶಗಳಿಗೆ ಲಾಭವಿದೆಯೋ ಅವುಗಳಲ್ಲಿ ಎರಡೂ ದೇಶಗಳು ಒಂದಾದರೆ ಒಳ್ಳೆಯದೆ. ಟ್ರಂಪ್ ಅವರ ಎಲ್ಲ ನೀತಿಗಳಿಗೆ ಭಾರತ ಬೆಂಬಲ ನೀಡಬೇಕಾಗಿಲ್ಲ. ಆದರೆ ಯಾವುದರಲ್ಲಿ ಭಾರತಕ್ಕೆ ಲಾಭವಿದೆಯೋ ಅಂತಹ ವಿಷಯಗಳಲ್ಲಿ ಅವರನ್ನು ಬೆಂಬಲಿಸುವುದರಲ್ಲಿ ತಪ್ಪೇನಿಲ್ಲ. ನಮ್ಮ ಅಂತರಿಕ ಉದಾರವಾದಿಗಳ ಪ್ರತಿಷ್ಠೆಯ ಮಾತುಗಳ ಪ್ರಹಾರಕ್ಕೆ ಸರಕಾರ ಅಂಜಬೇಕಿಲ್ಲ.

ಇತ್ತೀಚಿನ ಎಕಾನಾಮಿಕ್ ಟೈಮ್ಸ್ ನ ವರದಿಯ ಪ್ರಕಾರ, ಭಾರತ ಹೊಸ ಸಂಶೋಧನೆಯಲ್ಲಿ ಜಗತ್ತಿನಲ್ಲಿ ಮೂರನೇ ಸ್ಥಾನ ಗಳಿಸಿದೆ. ಮೊದಲ ಸ್ಥಾನದಲ್ಲಿ ಅಮೆರಿಕವಿದೆ. ವಿಶ್ವದ ಹೊಸ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಎರಡು ಮುಖ್ಯ ದೇಶಗಳು ಕೈ ಜೋಡಿಸಿದರೆ ಎರಡೂ ದೇಶಗಳಿಗಲ್ಲದೇ ವಿಶ್ವಕ್ಕೇ ಒಳಿತಾಗುವ ಅನೇಕ ಕೆಲಸಗಳಾಗಬಹುದು. ಅದಲ್ಲದೇ ಭಾರತ ಈಗ ಜಗತ್ತಿನ ಮುಖ್ಯ ಉತ್ಪಾದನಾ ದೇಶವಾಗಿ ಹೊರ ಹೊಮ್ಮಲು ಪ್ರಯತ್ನಿಸುತ್ತಿದೆ.

"ಮೇಡ ಇನ್ ಇಂಡಿಯ" ನಮ್ಮ ಹೊಸ ಮಂತ್ರವಾಗಿದೆ. ನಮ್ಮ ದೇಶದ ತರುಣರ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಈ ಮಂತ್ರ ಫಲ ನೀಡಬೇಕಾಗಿದೆ. ಭಾರತದ ಯುವ ಶಕ್ತಿಯಿಂದ ಭಾರತಕ್ಕೆ ಮಾತ್ರವಲ್ಲ, ಕ್ರಮೇಣ ವೃದ್ಧಾಪ್ಯದತ್ತ ಕಾಲಿಡುತ್ತಿರುವ ಮುಂದುವರೆದ ಎಲ್ಲ ದೇಶಗಳಿಗೆ ಲಾಭವಾಗಲಿದೆ. ಅಲ್ಲದೇ ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಭಾರತ. ವೃತ್ತಿಯಿಂದ ಉದ್ದಿಮೆದಾರ, ನಿವೇಶಕರಾಗಿದ್ದ ಡೊನಾಲ್ಡ್ ಟ್ರಂಪ್ ಭಾರತದ ಸ್ನೇಹದಿಂದ ಅಮೆರಿಕಕ್ಕೆ ದೊರಕುವ ಲಾಭಗಳನ್ನು ಅರಿಯಲಾರದಷ್ಟು ಮುಗ್ಧರಲ್ಲ.

ಅಲ್ಪಾವಧಿಯಲ್ಲಿ ತಮ್ಮ ಮೂಲ ಬೆಂಬಲಿಗರನ್ನು ತೃಪ್ತಿಗೊಳಿಸಲು ವೀಸಾ ನಿಯಂತ್ರಣದಂತಹ ಜನಪ್ರಿಯ ಕಾಯಿದೆಗಳನ್ನು ಮಾಡಿದರೂ ದೀರ್ಘಾವಧಿಯಲ್ಲಿ ಚೀನಕ್ಕೆ ಪರ್ಯಾಯವಾದ ಸದೃಢ ಅರ್ಥ ವ್ಯವಸ್ಥೆಯಾಗಿ ಬೆಳೆಯಲು ಭಾರತಕ್ಕೆ ಬೆಂಬಲ ನೀಡುತ್ತಾರೆ ಎಂಬುದು ನನ್ನ ಅನಿಸಿಕೆ. ಮುಖ್ಯವಾಗಿ ಭಾರತ ಅಮೆರಿಕ, ಜಪಾನ್, ದಕ್ಷಿಣ ಕೊರಿಯ ಮತ್ತು ದಕ್ಷಿಣ ಪೂರ್ವ ದೇಶಗಳ ಜೊತೆಗೆ ಇನ್ನೂ ಹೆಚ್ಚಿನ ವ್ಯಾಪಾರ ಸಂಬಂಧ ಬೆಳೆಸಲು ಎಲ್ಲ ಯೋಜನೆಗಳನ್ನು ಹಾಕಿಕೊಳ್ಳಬೇಕು.

ನಮ್ಮ ದೇಶದಲ್ಲಿ ಸರಕಾರದ ನೀತಿ ನಿಯಮಗಳನ್ನು ರೂಪಿಸಲು ಸಹಾಯ ಮಾಡುವ ತಜ್ಞರು ಕೂಡ ಪಕ್ಷಪಾತಿಗಳಾಗಿದ್ದಾರೆ ಎಂದು ಭಾಸವಾಗುತ್ತದೆ. ತಮ್ಮ ತಮ್ಮ ರಾಜಕೀಯ ಒಲವಿಗೆ ಅನುಗುಣವಾಗಿ ಸರಕಾರದ ಎಲ್ಲ ನೀತಿಗಳನ್ನು ಕೆಲವರು ಕಟುವಾಗಿ ಟೀಕಿಸಿದರೆ, ಇನ್ನು ಕೆಲವರು ಸರಕಾರದ ಎಲ್ಲ ನೀತಿಗಳನ್ನು ಹಾಡಿ ಹೊಗಳುತ್ತಾರೆ. ಇತ್ತೀಚೆಗೆ ನಡೆದ ನೋಟು ರದ್ದತಿಯ ವಿಷಯದಲ್ಲಿ ಅನೇಕ ತಜ್ಞರ ಪರಸ್ಪರ ವಿರೋಧಾಭಾಸದ ಹೇಳಿಕೆಗಳಿಂದ ಜನರಲ್ಲಿ ಶಂಕೆಯುಂಟಾಗಿದ್ದು ಸಹಜವೇ.

ಆದರೆ ದೇಶದ ಪ್ರಗತಿಯ ಸಲುವಾಗಿ ನಮ್ಮ ತಜ್ಞರು ತಮ್ಮ ರಾಜಕೀಯ ಒಲವನ್ನು ದೂರಸರಿಸಿ ಸರಿಯಾದ ನೀತಿಗಳನ್ನು ಬೆಂಬಲಿಸುವರೆ? ದೇಶದ ಪರಿಸ್ಥಿತಿ ಏನೇ ಆಗಿರಲಿ, ತಮ್ಮ ಬೇಳೆ ಬೇಯಿಸುವುದರಲ್ಲೇ ನಿರತರಾದ ನಮ್ಮ ಅನೇಕ ರಾಜಕೀಯ ನಾಯಕರುಗಳಿಂದ ನಾವು ಇಂತಹ ಸಂತುಲಿತ ವ್ಯವಹಾರವನ್ನು ಅಪೇಕ್ಷಿಸುವಂತಿಲ್ಲ. ಆದರೆ ತಜ್ಞರು ಎಂದು ಹೆಸರಾದವರಿಂದ ಈ ಅಪೇಕ್ಷೆ ಜನ ಸಾಮಾನ್ಯರಿಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಉದಯವಾಗಿರುವ ಅನಿಶ್ಚಿತ ಪರಿಸ್ಥಿತಿಯಲ್ಲಿ ಭಾರತ ಸರಿಯಾದ ನಿರ್ಣಯಗಳನ್ನು ಕೈಗೊಂಡು ತನ್ನ ಅಭಿವೃದ್ದಿಯತ್ತ ದಾಪುಗಾಲಿಡುತ್ತದೆ. ಈ ದಿಶೆಯಲ್ಲಿ ಜನ ಸಾಮಾನ್ಯರು ಮತ್ತು ತಜ್ಞರು ಅಲ್ಲದೇ ರಾಜಕೀಯ ಪಕ್ಷಗಳು ಕೂಡ ತಮ್ಮ ಪಕ್ಷಬೇಧ ಮರೆತು ಹೆಜ್ಜೆಯಿಡುತ್ತವೆ ಎಂದುಕೊಳ್ಳುತ್ತೇನೆ. ಆದರೆ ತಮ್ಮ ವೈಮನಸ್ಸಿನಿಂದ ಆ ಒಡಕುಗಳನ್ನು ಇನ್ನೂ ಹೆಚ್ಚಿಸುತ್ತಲೇ ಇರುವ ಜನರಿಂದ ಈ ರೀತಿಯ ಪ್ರಬುದ್ಧ ವರ್ತನೆಯನ್ನು ಅಪೇಕ್ಷಿಸುವುದು ವ್ಯಾವಹಾರಿಕವೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How will India face the challenges posed by American president Donald Trump? Donald has tightened screw against H1B Visa. Kannada column by Vasant Kulkarni.
Please Wait while comments are loading...