ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದ ಮಾಜಿ ಪ್ರಧಾನಿ ಯೂ ಅವರನ್ನು ನೆನೆಯುತ್ತ

ಸಿಂಗಪುರದಂತಹ ಸಂಪನ್ಮೂಲರಹಿತ ಸಣ್ಣ ದೇಶ, ಸಮರ್ಥ ಮತ್ತು ದೂರದೃಷ್ಟಿಯುಳ್ಳ ಆಡಳಿತದಿಂದ ಇಂದು ಫಸ್ಟ್ ವರ್ಲ್ಡ್ ಎನಿಸಿಕೊಳ್ಳಬಹುದಾದರೆ, ನಮ್ಮ ಬೃಹತ್ ದೇಶದಲ್ಲಿ ಇಂತಹ ಆಡಳಿತವಿದ್ದರೆ, ಏನು ಬೇಕಾದರೂ ಆಗಬಹುದಲ್ಲವೇ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಒಂದು ದೀರ್ಘಕಾಲದ ಕಾಯಿಲೆಯಿಂದ ಗುಣಮುಖರಾಗಲು ಅತ್ಯಂತ ಕಹಿ ಔಷಧಿಯನ್ನು ಕುಡಿಯಬೇಕಾದರೆ ಅದಕ್ಕೆ ನಾವು ತಯಾರಾಗಬೇಕಲ್ಲವೇ?

ದೇಶವನ್ನು ಅಂತಹ ಕಾಯಿಲೆಯಿಂದ ಗುಣಪಡಿಸಲೆಂದು ಮತ್ತು ಅದನ್ನು ಉಂಟುಮಾಡುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಾದ ಕಪ್ಪು ಹಣದ ಮಾಲೀಕರು ಮತ್ತು ಕಳ್ಳ ನೋಟುಗಳನ್ನು ಮುದ್ರಿಸುವ ವಂಚಕರಿಗ ಕಹಿ ಉಣ್ಣಿಸಿ ತಕ್ಕ ಶಾಸ್ತಿ ಮಾಡಲೆಂದು ಪ್ರಧಾನ ಮಂತ್ರಿ ಮೋದಿಯವರು ಸಾವಿರ ಮತ್ತು ಐದು ನೂರು ರೂಪಾಯಿಗಳ ನೋಟುಗಳನ್ನು ರದ್ದು ಮಾಡಿದ ಸುದ್ದಿ ಬಹಳ ಹೆಸರು ಮಾಡುತ್ತಿದೆ.

ಇಂತಹ ಸನ್ನಿವೇಶದಲ್ಲಿ ಅನೇಕರು ಅನೇಕ ಪ್ರಕಾರದ ಅನಿಸಿಕೆಗಳನ್ನು ನೀಡುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಆಳುವ ಪಕ್ಷದ ಬೆಂಬಲಿಗರು ಬೆಂಬಲ ನೀಡಿದರೆ, ವಿರೋಧಿ ರಾಜಕೀಯ ಪಕ್ಷಗಳು ಮೋದಿ ಅವರ ಈ ಕ್ರಮವನ್ನು ವಿವಿಧ ಧ್ವನಿಗಳಲ್ಲಿ ವಿರೋಧಿಸುತ್ತಿವೆ. ಕೆಲವರು ಬಹಳ ತೀವ್ರವಾಗಿ ವಿರೋಧಿಸಿದರೆ, ಮತ್ತೆ ಕೆಲವರು ಎಚ್ಚರಿಕೆಯಿಂದ ಲಘುವಾಗಿ ಟೀಕಿಸಿದ್ದಾರೆ.

ನಾನು ಕೆಲವು ದಿನಗಳಿಂದ ಈ ಪರ ಮತ್ತು ವಿರೋಧಿ ವಾದಗಳನ್ನು ಕೇಳಿದ್ದೇನೆ. ಮುಖ್ಯವಾಗಿ ಈ ಬೆಳವಣಿಗೆಯ ಬೆಂಬಲಿಗರ ಪ್ರಕಾರ ಕೆಳಗಿನ ಪ್ರಯೋಜನಗಳುಂಟಾಗುತ್ತವೆ. [ಪ್ರೀತಿ, ಮಮತೆ ಪರಿಚಯಿಸಿದ 500, 1000 ನೋಟುಗಳ ಸಾವು!]

Demonetisation : Why one should support Narendra Modi

ಆಗುವ ಪ್ರಯೋಜನಗಳು

* ಕಪ್ಪು ಹಣ ಹೊರಬರುತ್ತದೆ. ಅನ್ಯಾಯದಿಂದ ಹಣ ಶೇಖರಿಸಿಟ್ಟವರು ತಮ್ಮ ಕೈ ಸುಟ್ಟುಕೊಂಡು ಪಾಠ ಕಲಿಯುತ್ತಾರೆ. ಜಾರಿಯಲ್ಲಿದ್ದ ಕಳ್ಳ ನೋಟುಗಳ ಹಾವಳಿ ತನಗೆ ತಾನೇ ಕರಗಿ ಹೋಗುತ್ತದೆ.

* ನಮ್ಮ ದೇಶದ ನೋಟುಗಳನ್ನು ಛಾಪಿಸಿ, ಉಗ್ರಗಾಮಿಗಳಿಗೆ ಹಣ ಮತ್ತು ಅಸ್ತ್ರ ಸಹಾಯ ಮಾಡುವ ಪಾಕಿಸ್ತಾನದ ಅಧಿಕೃತ ಮತ್ತು ಅನಧಿಕೃತ ವಾಣಿಜ್ಯೋದ್ಯಮ ದೊಡ್ಡ ನಷ್ಟ ಅನುಭವಿಸುವುದರಿಂದ, ಆತಂಕವಾದಿಗಳಿಗೆ ದೊಡ್ಡ ಪೆಟ್ಟು ಬೀಳುತ್ತದೆ.

* ಕಳ್ಳತನದ ವ್ಯಾಪಾರ ಮಾಡುವ ವ್ಯಾಪಾರಿಗಳು ಮತ್ತು ಸ್ಥಿರಾಸ್ತಿ ಉದ್ಯಮಿಗಳಿಗೆ ತಕ್ಕ ಶಾಸ್ತಿ ಉಂಟಾಗಿ, ವಸ್ತುಗಳ ಬೆಲೆ ಕಡಿಮೆಯಾಗಿ, ಹೆಚ್ಚು ವ್ಯಾಪಾರ ಉಂಟಾಗಿ, ಸರಕಾರದ ಬೊಕ್ಕಸಕ್ಕೆ ತೆರಿಗೆ ಹಣ ಹರಿದು ಬರುತ್ತದೆ. ಇದರಿಂದ ದೇಶದ ದೀರ್ಘಾವಧಿ ಬೆಳವಣಿಗೆಗೆ ಸಹಾಯವಾಗುತ್ತದೆ.

* ಬ್ಯಾಂಕುಗಳಿಗೆ ಹೆಚ್ಚು ಹಣ ಹರಿದು ಬರುವುದರಿಂದ ಅವುಗಳ ವ್ಯವಹಾರದಲ್ಲಿ ಧನಾತ್ಮಕ ಬೆಳವಣಿಗೆ ಉಂಟಾಗುತ್ತದೆ. [ಹಾಸ್ಯ : ನಿಮಗೂ ಹಿಂಗೇ ಅನ್ಸುತ್ತಾ? ನಿಜ ಹೇಳಿ!]

* ನಗದು ವ್ಯವಹಾರ ಕಡಿಮೆಯಾಗಿ, ಕ್ರೆಡಿಟ್ ಕಾರ್ಡು ಮತ್ತು ಚೆಕ್ ವ್ಯವಹಾರಗಳು ಹೆಚ್ಚಾಗುವುದರಿಂದ ಕಪ್ಪು ಹಣದ ಮೇಲೆ ನಿಯಂತ್ರಣ ಉಂಟಾಗುತ್ತದೆ.

* ನಗದು ವ್ಯವಹಾರ ಕಡಿಮೆಯಾಗುವುದರಿಂದ ಸಮಾನಾಂತರ ಅರ್ಥ ವ್ಯವಸ್ಥೆ ಎಂದು ಕರೆಯಲ್ಪಟ್ಟ ಕಪ್ಪು ಹಣದ ವ್ಯವಹಾರ ನಿಂತು ಹೋಗುತ್ತದೆ. ['ತೆರಿಗೆ ಬೇಡವೇ ಬೇಡ, ಆದಾಯದಲ್ಲಿ ಶೇ 2ರಷ್ಟು ಕೊಟ್ಟರೆ ಸಾಕು!']

Demonetisation : Why one should support Narendra Modi

ವಿರೋಧಿಗಳ ವಾದಗಳ ಪ್ರಕಾರ ಆಗುವ ದುಷ್ಪರಿಣಾಮ

* ಈ ಬೆಳವಣಿಗೆಯಿಂದ ಸಣ್ಣ ಪ್ರಮಾಣದ ವ್ಯವಹಾರ ಮಾಡುವವರಿಗೆ ವ್ಯತ್ಯಯ ಉಂಟಾಗುತ್ತದೆ. ಅವರು ತಮ್ಮ ಕೆಲಸ ಬಿಟ್ಟು ನೋಟುಗಳನ್ನು ಪಡೆಯಲು ಬ್ಯಾಂಕುಗಳಲ್ಲಿ ಸರತಿಯಲ್ಲಿ ನಿಲ್ಲಬೇಕಾಗುತ್ತದೆ.

* ಹಳ್ಳಿಗಾಡಿನ ಜನರಲ್ಲಿ ನಗದು ವ್ಯವಹಾರವೇ ಹೆಚ್ಚಾಗಿ ನಡೆಯುವುದರಿಂದ, ಅವರಿಗೆ ಈ ಬೆಳವಣಿಗೆಯಿಂದ ಬಹಳ ತೊಂದರೆಯುಂಟಾಗಿ ಅವರ ವ್ಯವಹಾರ ಕುಂಠಿತಗೊಳ್ಳುತ್ತದೆ.

* ಅನೇಕರ ಹತ್ತಿರ ಯಾವುದೇ ತರಹದ ಗುರುತಿನ ಪತ್ರ ಇರುವುದಿಲ್ಲ. ಅಂತಹ ಜನರು ತಮ್ಮಲ್ಲಿರುವ ನೋಟುಗಳನ್ನು ಬ್ಯಾಂಕಿನಲ್ಲಿ ಹೇಗೆ ಪಾವತಿಸಬೇಕು? [10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]

* ಅನಿರೀಕ್ಷಿತವಾಗಿ ಯಾರನ್ನಾದರೂ ಆಸ್ಪತ್ರೆಗೆ ಸೇರಿಸಬೇಕಾದಾಗ ಹಾಗೂ ಖಾಸಗಿ ಆಸ್ಪತ್ರೆಗಳು ಹಳೆಯ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಬಹಳ ತೊಂದರೆ ಉಂಟಾಗುತ್ತದೆ.

* ಸನಿಹದಲ್ಲಿ ಮದುವೆ ಮುಂತಾದ ಸಮಾರಂಭಗಳನ್ನು ಹೂಡಿಕೊಂಡಿರುವವರಿಗೆ ಬಹಳ ತೊಂದರೆ ಉಂಟಾಗುತ್ತದೆ.

ಈ ಕೊನೆಯ ಎರಡೂ ವಾದಗಳಲ್ಲಿ ಸತ್ಯಾಂಶಗಳಿದ್ದು, ಅವುಗಳ ಪ್ರತಿಪಾದಕರ ಕಳಕಳಿ ಅರ್ಥವಾಗುತ್ತದೆ. ಒಟ್ಟಿನಲ್ಲಿ ಪರ ಮತ್ತು ವಿರೋಧವಾಗಿ ಅನೇಕ ಸ್ವರಗಳು ಕೇಳಿ ಬಂದರೂ, ನನಗನಿಸಿದ ಮಟ್ಟಿಗೆ ಜನಸಾಮಾನ್ಯರು ಈ ಕ್ರಾಂತಿಕಾರಿ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಅನೇಕರು ದೇಶದ ಹಿತಕ್ಕಾಗಿ ಸ್ವಲ್ಪ ದಿನಗಳ ತೊಂದರೆಯನ್ನು ನಾವು ಅನುಭವಿಸಲು ಸಿದ್ಧ ಎಂದಿದ್ದಾರೆ.

ಆದರೂ ಅನೇಕ ಮಾಧ್ಯಮಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಈ ನಗದು ರದ್ದಿನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಹಾಗು ಕಷ್ಟಗಳನ್ನು ನೋಡಿದಾಗ ನನಗೆ, ಈ ಬೆಳವಣಿಗೆಯ ಬಗ್ಗೆ ಪ್ರಸಿದ್ಧ ಆದರೆ ಸ್ವತಂತ್ರ ಅರ್ಥ ಶಾಸ್ತ್ರಜ್ಞರು ಏನು ಹೇಳಿದರು ಎಂಬ ಬಗ್ಗೆ ತಿಳಿದುಕೊಳ್ಳಬೇಕೆನಿಸಿತು. ಅಂತರ್ಜಾಲದಲ್ಲಿ ಹುಡುಕಿ ನೋಡಿದೆ. ಆಗ ಸಿಕ್ಕ ಕೆಲವು ಅಭಿಪ್ರಾಯಗಳು ಇಂತಿವೆ:

Demonetisation : Why one should support Narendra Modi

ಖ್ಯಾತ ಅರ್ಥಶಾಸ್ತ್ರಜ್ಞರ ಅನಿಸಿಕೆಗಳು

ವ್ಹಾರ್ಟನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್‍ನ ಅರ್ಥ ಶಾಸ್ತ್ರಜ್ಞರಾದ ಜಿತೇಂದ್ರ ವಿ. ಸಿಂಗ್ ಅವರು "ಬದಲಾವಣೆಯ ಸಂಕ್ರಮಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಈ ಹೆಜ್ಜೆ ಒಂದು ಧನಾತ್ಮಕ ಬೆಳವಣಿಗೆ" ಎಂದು ಹೇಳಿದ್ದಾರೆ. IMF, ಈ ಹೆಜ್ಜೆ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವ್ಯವಹಾರಗಳನ್ನು ತಡೆಗಟ್ಟುವುದರಿಂದ, ಅದನ್ನು ಬೆಂಬಲಿಸುವುದಾಗಿ ಹೇಳಿಕೆ ನೀಡಿದೆ.

ಕಾರ್ಲಟನ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ವಿವೇಕ ದಹೆಜಿಯಾ "ಮೊದಲು ಕೆಲವು ಅಡೆತಡೆಗಳುಂಟಾದರೂ, ಕ್ರಮೇಣ ಈ ಹೆಜ್ಜೆ ದೇಶದ ಬೆಳವಣಿಗೆಯಲ್ಲಿ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಕಪ್ಪು ಹಣದ ಮೇಲೆ ಒಂದು ಬಾರಿ ಅತಿ ದೊಡ್ಡ ತೆರಿಗೆಯ ಹಾಗೆ ಈ ಹೆಜ್ಜೆ ಕೆಲಸ ಮಾಡುವುದರಿಂದ, ಕಪ್ಪು ಹಣ ಶೇಖರಿಸುವವರಿಗೆ ಅಧೈರ್ಯವುಂಟು ಮಾಡುತ್ತದೆ" ಎಂದಿದ್ದಾರೆ. ಆದರೆ, ವಿಶ್ವ ಬ್ಯಾಂಕ್‍ನ ಮುಖ್ಯ ಅರ್ಥಶಾಸ್ತ್ರಜ್ಞ, ಕೌಶಿಕ್ ಬಾಸು "ಈ ಹೆಜ್ಜೆಯಿಂದಾಗುವ ಹಾನಿಗಳು ಅದರ ಲಾಭಗಳನ್ನು ಮೀರಲಿವೆ" ಎಂದು ಹೇಳಿಕೆ ನೀಡಿದ್ದಾರೆ.

ಸಾಮಾನ್ಯರಾಗಿ ನಾವೂ ಯೋಜನೆ ಮಾಡಬೇಕಲ್ಲವೆ?

ಮೋದಿ ಮತ್ತು ಬಿಜೆಪಿಯ ಈ ಕ್ರಮ ಮುಖ್ಯವಾಗಿ ಅವರ ಮುಖ್ಯ ಬೆಂಬಲಿಗರಾದ ವ್ಯಾಪಾರಸ್ಥರು ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳ ಮೇಲೆಯೇ ಆಗುವುದರಿಂದ, ಅವರ ಈ ಕ್ರಮ ಒಂದು ರಾಜಕೀಯ ಆತ್ಮಹತ್ಯೆಯೇ ಅಲ್ಲವೇ ಎನಿಸಿತು. ಆದರೂ ಅವರು ದೇಶಕ್ಕಾಗಿ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆಂದರೆ ಅವರು ಸಾಕಷ್ಟು ಯೋಚನೆ ಮಾಡಿರಬೇಕಲ್ಲವೇ?

ಅದೇನೇ ಆಗಲಿ, ಅಪಕ್ಷೀಯರಾದ ನಮ್ಮಂತಹ ಸಾಧಾರಣ ನಾಗರಿಕರು, ದೇಶದ ಭ್ರಷ್ಟಾಚಾರ ಮತ್ತು ಉಗ್ರಗಾಮಿಗಳ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗೊಟ್ಟಲು ಕೈಗೊಂಡಿರುವ ಈ ಕ್ರಮವನ್ನು ಸ್ವಾಗತಿಸಬೇಕು ಎಂಬುದು ನನ್ನ ಭಾವನೆ.

ಸರಕಾರ ತನ್ನ ಬೆನ್ನು ತಟ್ಟಿಕೊಳ್ಳುವ ಮುನ್ನ...

ಕೇಂದ್ರ ಸರ್ಕಾರ ಮತ್ತು ಆಡಳಿತ ಪಕ್ಷ, ಕೇವಲ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುವ ಚಟವನ್ನು ಬಿಟ್ಟು, ಈ ಹೆಜ್ಜೆಯಿಂದಾಗುವ ವ್ಯತ್ಯಯಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಂಡು ಹಾನಿಗಳನ್ನು ತಡೆಗಟ್ಟುವತ್ತ ಕೆಲಸ ಮಾಡಬೇಕು ಎಂಬುದು ನನ್ನ ಜೊತೆಗೆ ಅನೇಕರ ಆಶಯ ಎಂದುಕೊಳ್ಳುತ್ತೇನೆ.

ಹಾಗೆಯೇ ವಿರೋಧಿಗಳು ಕೂಡ ಕೇವಲ ವಿರೋಧ ಮಾಡುವುದಕ್ಕಾಗಿಯೇ ವಿರೋಧಿಸುವುದನ್ನು ಬಿಟ್ಟು, ನಿಜವಾದ ವ್ಯತ್ಯಯಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಾಯ ಹಸ್ತ ಚಾಚಬೇಕೆಂದು ಕೇಳಿಕೊಳ್ಳುತ್ತೇನೆ. ಆದರೆ ಹಾಗಾಗಲು ಸಾಧ್ಯವೇ?

Demonetisation : Why one should support Narendra Modi

ಲೀ ಕುವಾನ್ ಯೂ ಅವರನ್ನು ನೆನೆಯಲೇಬೇಕು

ಈ ನಿಟ್ಟಿನಲ್ಲಿ ನಾನು ಸಿಂಗಪುರದ ಹಿಂದಿನ ಪ್ರಧಾನ ಮಂತ್ರಿ ಮತ್ತು ಅದರ ಜನಕ ಎಂದೇ ಕರೆಯಲ್ಪಟ್ಟ ಲೀ ಕುವಾನ್ ಯೂ ಅವರನ್ನು ನೆನೆಯುತ್ತೇನೆ. ಅವರು ಕೂಡ ದೇಶವನ್ನು ಮೂರನೇ ದರ್ಜೆಯಿಂದ ಮೇಲೆತ್ತಲು ಅನೇಕ ಅಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡರು. ಕಷ್ಟ ನಷ್ಟಗಳ ನಡುವೆಯೂ ಜನ ಅವರನ್ನು ಬೆಂಬಲಿಸಿದರು. ಅದರ ಪರಿಣಾಮವನ್ನು ನಾವಿಂದು ನೋಡುತ್ತಿದ್ದೇವಲ್ಲವೇ? [ಸಿಂಗಪುರದ 'ಸಿಂಹ' ಲೀ ಕುಆನ್ ಯೂ, ನುಡಿನಮನ]

ಸಿಂಗಪುರದಂತಹ ಸಂಪನ್ಮೂಲರಹಿತ ಸಣ್ಣ ದೇಶ, ಸಮರ್ಥ ಮತ್ತು ದೂರದೃಷ್ಟಿಯುಳ್ಳ ಆಡಳಿತದಿಂದ ಇಂದು ಫಸ್ಟ್ ವರ್ಲ್ಡ್ ಎನಿಸಿಕೊಳ್ಳಬಹುದಾದರೆ, ನಮ್ಮ ಬೃಹತ್ ದೇಶದಲ್ಲಿ ಇಂತಹ ಆಡಳಿತವಿದ್ದರೆ, ಏನು ಬೇಕಾದರೂ ಆಗಬಹುದಲ್ಲವೇ?

English summary
Demonetisation or rupee : Why one should support bold decision taken by prime minister of India Narendra Modi? Vasant Kulkarni, a Singapore resident has analysed the pros and cons of demonetisation. He has also remembered revolutionary former prime minister of Singapore Lee Kuan Yew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X