ವಿಧ್ವಂಸಕ ಆಯುಧಗಳನ್ನು ಸಂಪೂರ್ಣ ನಾಶಗೊಳಿಸಿ

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಕೆಲವು ವರ್ಷಗಳ ಹಿಂದೆ ಜಪಾನಿನ ಹಿರೋಷಿಮಾಗೆ ಕೆಲಸದ ನಿಮಿತ್ತ ಹೋಗಿದ್ದೆ. ಅಲ್ಲಿ ಹೋದಾಗ ನಾನು ಹಿರೋಷಿಮಾ ಶಾಂತಿ ಸ್ಮಾರಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿಯವರೆಗೆ ಪರಮಾಣು ಬಾಂಬ್ ಮಾಡಿದ ತೀವ್ರ ಹಾನಿಯ ಬಗ್ಗೆ ಓದಿಯೋ ಅಥವಾ ಕೇಳಿಯೋ ತಿಳಿದಿದ್ದ ನನಗೆ ಆ ಹಾನಿಯ ನಿಜವಾದ ಪ್ರಭಾವದ ನೇರ ಅನುಭವವಾಯಿತು.

ಒಂದು ಲಕ್ಷಕ್ಕೂ ಮಿಕ್ಕಿ ಜನರನ್ನು ಬಲಿ ತೆಗೆದುಕೊಂಡ ಹಿರೋಷಿಮಾ ಪರಮಾಣು ಬಾಂಬ್‍ನ ಪ್ರಭಾವ ನೋಡಿದ ಮೇಲೆ ಜಗತ್ತಿನ ಎಲ್ಲ ಬಾಂಬುಗಳ ಬಗ್ಗೆ ಒಂದು ತರಹದ ಜಿಗುಪ್ಸೆ ಉಂಟಾಯಿತು.[ಬಾಂಬ್ ಗಳ ಮಹಾತಾಯಿ ಅಂದರೆ ಏನು? ವಿವರಗಳು]

ವಸ್ತು ಸಂಗ್ರಹಾಲಯದಲ್ಲಿ ಬಾಂಬ್ ಹಾಕಿದ ನಂತರ ಉಂಟಾದ ಪರಿಣಾಮಗಳ ಅನೇಕ ಪ್ರದರ್ಶನಗಳಿವೆ. ಹಿರೋಷಿಮಾದ ಪ್ರಜೆಗಳು ಅನುಭವಿಸಿದ ಘೋರ ಕಷ್ಟ ಕಾರ್ಪಣ್ಯಗಳ ಈ ಪ್ರದರ್ಶನಗಳು ನಮ್ಮ ಎದೆಯನ್ನು ನಡುಗಿಸುತ್ತವೆ. ಬಾಂಬ್ ಹಾಕಿದ ಮೇಲೆ ಕೂಡ ಅನೇಕ ವರ್ಷಗಳವರೆಗೆ ಕ್ಯಾನ್ಸರ್ ನಂತಹ ಘೋರ ಕಾಯಿಲೆಗಳಿಗೆ ತುತ್ತಾಗಿ ಬಳಲಿದ ಅಥವಾ ಬಳಲುತ್ತಿರುವ ಹಿರೋಷಿಮಾದ ಕರುಣ ಕಥೆ ನನ್ನ ಮನಸ್ಸನ್ನು ಕಲುಕಿತು.

All the nuclear bombs have to be destroyed

ಮೊನ್ನೆ ತಾನೇ ಅಮೇರಿಕ "ಎಲ್ಲ ವಿಸ್ಫೋಟಕಗಳ ತಾಯಿ (Mother of all Bombs)"ಯನ್ನು ಅಫಘಾನಿಸ್ತಾನದ ನಂಗರಹಾರ್ ಪರ್ವತಗಳಲ್ಲಿ ಅಡಗಿದ್ದ ಐಸಿಸ್‍ನ ಭಯೋತ್ಪಾದಕರ ಮೇಲೆ ಪ್ರಯೋಗಿಸಿತು. 10 ಮೀ ಉದ್ದ ಮತ್ತು 9500 ಕಿಲೋ ಗ್ರಾಂ ತೂಗುವ ಈ ಸ್ಫೋಟಕ ಅಫಘಾನಿಸ್ತಾನದಲ್ಲಿ ದುಷ್ಕೃತ್ಯದಲ್ಲಿ ತೊಡಗಿದ್ದ 94 ಐಸಿಸ್ ಉಗ್ರರನ್ನು ಬಲಿ ತೆಗೆದುಕೊಂಡಿತು. ಈ ಬಾಂಬ್‍ನ ಶಕ್ತಿ ಸುಮಾರ್ 11 ಟನ್ ಟಿಎನ್‍ಟಿಗೆ ಸಮಾನವಾಗಿದ್ದರೆ, ಎಪ್ಪತ್ತೆರಡು ವರ್ಷಗಳ ಹಿಂದೆ ಜಪಾನಿನ ಹಿರೋಷಿಮಾದ ಮೇಲೆ ಪ್ರಯೋಗಿಸಿದ ಅಣು ಬಾಂಬ್‍ನ ಶಕ್ತಿ ಸುಮಾರು 16,000 ಟನ್ ಟಿಎನ್ ಟಿನಷ್ಟು![ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!]

ಅಫಘಾನಿಸ್ತಾನದ ಈ ತಾಯಿ ಬಾಂಬ್ ಪರಮಾಣು ಬಾಂಬ್‍ನಷ್ಟು ಹಾನಿಕಾರಕವಲ್ಲದಿದ್ದರೂ ಮತ್ತು ಐಸಿಸ್‍ನಂತಹ ಘನಘೋರ ಆತಂಕವಾದಿಗಳ ವಿರುದ್ಧ ಬಳಸಲ್ಪಟ್ಟಿದ್ದರೂ, ಒಂದು ವಿಷಯ ನನ್ನ ತಲೆಯಲ್ಲಿ ಸುಳಿದಾಡಿತು. ಬಾಂಬ್‍ನ ಗುರಿ ಐಸಿಸ್ ಉಗ್ರಗಾಮಿಗಳಾಗಿರಬಹುದು. ಆದರೆ ಈ ಬಾಂಬ್‍ಗೇನು ಗೊತ್ತು ಕೇವಲ ಉಗ್ರಗಾಮಿಗಳನ್ನು ಮಾತ್ರ ಕೊಲ್ಲಬೇಕು ಎಂಬುದು? ಈ ಬಾಂಬ್‍ನಿಂದ 94 ಉಗ್ರಗಾಮಿಗಳ ಜೊತೆಗೆ ಅದೆಷ್ಟೋ ನಿರಪರಾಧಿ ನಾಗರಿಕರ ಹತ್ಯೆಯಾಗಿರಬಹುದಲ್ಲವೇ?

ಎಪ್ಪತ್ತು ವರ್ಷಗಳ ಹಿಂದಿನ ಹಿರೋಷಿಮಾ ಮತ್ತು ನಾಗಾಸಾಕಿಗಳಲ್ಲಿ ಲಕ್ಷಾಂತರ ಜನರನ್ನು ಕೊಂದು ಹಾಕಿದ ಪರಮಾಣು ಬಾಂಬುಗಳಿಗೂ ಮತ್ತು ಇತ್ತೀಚಿನ ಅಫಘಾನಿಸ್ತಾನದ ತಾಯಿ ಬಾಂಬ್‍ಗೂ ಇರುವ ಸಾಮಾನ್ಯ ಅಂಶವೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನ. ಎರಡನೇ ವಿಶ್ವ ಯುದ್ಧ ಮುಗಿದು ಇನ್ನೇನು ಜಪಾನ್ ಕೂಡಾ ಶರಣಾಗತವಾಗುತ್ತದೆ ಎನ್ನುವಷ್ಟರಲ್ಲಿ ತಾನು ತಯಾರಿಸಿದ ಪರಮಾಣು ಬಾಂಬ್‍ಅನ್ನು ಪರೀಕ್ಷಿಸಲು ಜಪಾನನ್ನು ಪ್ರಯೋಗಪಶುವಾಗಿಸಿತು ಅಮೆರಿಕ.

ಅಫಘಾನಿಸ್ತಾನದ ವಿಷಯದಲ್ಲಿ ಕೂಡಾ ಐಸಿಸ್‍ಅನ್ನು ಮುಂದಿಟ್ಟುಕೊಂಡು ಇಲ್ಲಿಯವರೆಗೂ ಉಪಯೋಗಿಸದ ತಾಯಿ ಬಾಂಬ್‍ಅನ್ನು ಅಮೆರಿಕ ಬಳಸಿದೆ. ಆದರೆ ಅಮೆರಿಕ ಈಗ ಜಗತ್ತಿನ ಏಕೈಕ ಸೂಪರ್ ಪವರ್. ಯಾವುದೇ ದೇಶ ಹದ್ದು ಮೀರಿ ವರ್ತಿಸಿದರೆ ಅದರಲ್ಲಿಯೂ ಅದರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದರೆ ಅಮೆರಿಕ ತನ್ನ ತಲೆ ಹಾಕುತ್ತದೆ ಮತ್ತು ಶಿಕ್ಷಿಸುತ್ತದೆ. ಅಲ್ ಕೈದಾ, ತಾಲಿಬಾನ್ ಮತ್ತು ಐಸಿಸ್‍ನಂತಹ ಅಪಾಯಕಾರಿ ಗುಂಪುಗಳು ಈಗ ಹದ್ದು ಬಸ್ತಿನಲ್ಲಿರುವುದೇ ಅಮೆರಿಕದ ಈ ವರ್ತನೆಯಿಂದ. ಆದರೂ ಕೂಡಾ ಅತಿ ಅಪಾಯಕಾರಿ ಬಾಂಬುಗಳ ಪ್ರಯೋಗ ಅದೆಷ್ಟರ ಮಟ್ಟಿಗೆ ನ್ಯಾಯ?[ಗೊತ್ತಿರುವುದು ಮರಳಿನ ಕೇವಲ ಒಂದು ಕಣದಷ್ಟು!]

ಮುಖ್ಯವಾಗಿ ಇಂತಹ ಬಾಂಬುಗಳ ಉತ್ಪಾದನೆ ಮತ್ತು ಪ್ರಯೋಗ ಮಾಡುವಂತಹ ಪರಿಸ್ಥಿತಿಯನ್ನು ಜಾಣ ಪ್ರಾಣಿ ಎನ್ನಿಸಿಕೊಂಡ ಮನುಷ್ಯ ಏಕೆ ತಂದುಕೊಂಡಿದ್ದಾನೆ? ಮನುಷ್ಯನ ಅತಿ ಜಾಣತನವೇ ಅವನಿಗೆ ಮುಳುವಾಗಿದೆಯೇ?

ತನ್ನ ಅತಿ ಬುದ್ಧಿವಂತಿಕೆಯಿಂದ ಬೇರೆ ಬೇರೆ ಜನಾಂಗಗಳು, ವರ್ಗಗಳು, ಜಾತಿಗಳು ಮತ್ತು ಧರ್ಮಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಅವುಗಳಿಗೆ ತಕ್ಕಂತೆ ತಮ್ಮದೇ ಆದ ಸಂಸ್ಕೃತಿ, ಕಾಯಿದೆ ಕಾನೂನುಗಳು, ನಂಬಿಕೆ ಇತ್ಯಾದಿಗಳನ್ನು ಬೆಳೆಸಿಕೊಂಡಿದ್ದಾನೆ. ಅವುಗಳನ್ನು ಸಮರ್ಥಿಸಿಕೊಳ್ಳಲು ಗುಂಪುಗಳನ್ನು ಕಟ್ಟಿಕೊಂಡು ನಂತರ ತಮ್ಮ ಗುಂಪನ್ನು ಇನ್ನೊಂದಕ್ಕಿಂತ ಹೆಚ್ಚು ಎಂದು ಸಾಧಿಸಲು ಜಗಳ, ಹೊಡೆದಾಟ ಮತ್ತು ಯುದ್ಧಗಳನ್ನು ಸೃಷ್ಟಿಸಿದ್ದಾನೆ ಮತ್ತು ತಥಾಕಥಿತ ನಾಗರಿಕತೆಯ ಹುಟ್ಟಿನಿಂದ ಇಲ್ಲಿಯವರೆಗಿನ ತಮ್ಮ ನಾಗರಿಕತೆಯ ಬೆಳವಣಿಗೆಯವರೆಗೆ ರಕ್ತದ ಹೊಳೆಯನ್ನೇ ಹರಿಸುತ್ತಾ ಬಂದಿದ್ದಾನೆ. ತನ್ನೆಲ್ಲ ಅಪರಾಧಿ ಕಾರ್ಯಾಚರಣೆಗಳಿಗೆ ನಾಗರಿಕತೆಯ ವ್ಯಾಖ್ಯಾನದಿಂದಲೇ ಧರ್ಮ, ಜಾತಿ ಮತ್ತು ಜನಾಂಗಗಳಂತಹ ಸಮರ್ಥನೆಗಳನ್ನು ಕೊಡುತ್ತ ಬಂದಿದ್ದಾನೆ. ಅಂತಹುದೇ ಸಮರ್ಥನೆಗಳಿಂದ ಇಂದೂ ಕೂಡ ಕ್ರೂರ ಮತ್ತು ಸಂಘಟಿತ ಅಪರಾಧಗಳನ್ನು ಮಾಡುತ್ತಲೇ ಇದ್ದಾನೆ.

ಅಚ್ಚರಿಯ ಸಂಗತಿಯೆಂದರೆ, ಜಾಣ ಪ್ರಾಣಿ ಮಾನವ ತರ್ಕ ಶಾಸ್ತ್ರ, ವಿಜ್ಞಾನಗಳ ಹುಟ್ಟಿಗೆ ಕಾರಣವಾಗಿದ್ದರೂ ಅವುಗಳನ್ನು ತಾನೇ ಸೃಷ್ಟಿಸಿಕೊಂಡ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಗಳ ಕಟ್ಟುಪಾಡುಗಳ ಬಂಧಿಯಾಗಿ, ತನ್ನಂತಹ ಜನರ ಮೇಲೆಯೇ ಕ್ರೂರ ಅತ್ಯಾಚಾರಗಳನ್ನು ಮಾಡುತ್ತ ಬಂದಿದ್ದಾನೆ. ಇಂದಿನ ನಮ್ಮ ಕಾಶ್ಮೀರ ಮತ್ತು ಮಾವೋ ಉಗ್ರರ ಸಮಸ್ಯೆಯೇ ಆಗಲಿ, ಇರಾಕ್, ಸಿರಿಯಾ ಮತ್ತು ಅಫಘಾನಿಸ್ತಾನದ ಸಮಸ್ಯೆಗಳೇ ಆಗಲಿ, ಅವುಗಳ ಮೂಲ ಈ ಅತಾರ್ಕಿಕ ನಂಬಿಕೆಗಳಲ್ಲಿ ಅಡಗಿದೆ. ತಮ್ಮನ್ನು ತಾವು ತಮ್ಮಂತಹ ಇತರರಿಂದ ರಕ್ಷಿಸಿಕೊಳ್ಳಲು ತಮ್ಮ ಅತಿ ಜಾಣತನವನ್ನು ಉಪಯೋಗಿಸಿ ಇಡೀ ಮಾನವಕುಲವನ್ನು ನಾಶಮಾಡುವ ಬಾಂಬುಗಳಂತಹ ಆಯುಧಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಉಳಿಯುವ ತವಕದಲ್ಲಿ ಅಳಿವಿನ ಮಹಾಮಾರಿಯನ್ನೇ ಮನೆಯಲ್ಲಿ ತಂದಿಟ್ಟುಕೊಂಡಂತೆ ಅನೇಕ ದೇಶಗಳು ಪರಮಾಣು ಬಾಂಬುಗಳ ರಾಶಿ ರಾಶಿಯನ್ನೇ ಸೃಷ್ಟಿಸಿಟ್ಟುಕೊಂಡಿವೆ.

ಈ ಪರಮಾಣು ಬಾಂಬುಗಳು ದುಷ್ಟ ಶಕ್ತಿಗಳ ಕೈಗೆ ಸಿಗುವುದಿಲ್ಲ ಮತ್ತು ಅವುಗಳನ್ನು ಅವು ಉಪಯೋಗಿಸುವುದಿಲ್ಲ ಎಂಬುದರ ಬಗ್ಗೆ ಏನು ಖಾತರಿ? ಈಗ ಪಾಕಿಸ್ತಾನ ಮತ್ತು ಉತ್ತರ ಕೊರಿಯದಂತಹ ಭಯೋತ್ಪಾದಕ ರಾಷ್ಟ್ರಗಳು ತಮ್ಮ ಪರಮಾಣು ಸಾಮರ್ಥ್ಯವನ್ನು ವಿಶ್ವದ ದೇಶಗಳನ್ನು ಹೆದರಿಸಲು ಉಪಯೋಗಿಸುತ್ತಿಲ್ಲವೇ? ಯಾವುದೋ ಭಯೋತ್ಪಾದಕ ಸಂಘಟನೆಯ ಕೈಯಲ್ಲಿ ಈ ಆಯುಧಗಳು ಸಿಕ್ಕಿದರೆ ಏನು ಪರಿಣಾಮವಾಗಬಹುದು ಎಂಬುದನ್ನೂ ಊಹಿಸುವುದು ಕೂಡ ನಡುಕ ಹುಟ್ಟಿಸುವುದಿಲ್ಲವೇ?

ಎಲ್ಲ ದೇಶಗಳು ತಂತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಪರಮಾಣು ಆಯುಧಗಳಂತಹ ವಿನಾಶಕಾರಿ ಆಯುಧಗಳನ್ನು ಸಂಪೂರ್ಣವಾಗಿ ನಾಶಗೊಳಿಸಿ ಈ ತಂತ್ರಜ್ಞಾನವನ್ನು ಸಂಪೂರ್ಣವಾಗಿ ನಿಷೇಧಿಸುವುದೊಂದೇ ಈಗುಳಿದಿರುವ ಮಾರ್ಗ. ಇನ್ನೊಂದು ಮುಖ್ಯ ಅಂಶವೆಂದರೆ, ಎಲ್ಲ ಮಾನವ ಬಣಗಳು ಪ್ರಚಲಿತದಲ್ಲಿರುವ ಎಲ್ಲ ಭೇದಗಳನ್ನು ಗುರುತಿಸಿ ಅವುಗಳನ್ನು ಗೌರವಿಸುವುದನ್ನು ಕಲಿಯಲು ಅನುವಾಗಬೇಕು. Multiculturalism ಈಗಿನ ಜಗತ್ತಿನ ಅನಿವಾರ್ಯ ಅಂಶ ಮತ್ತು ಅದನ್ನು ತುಂಬು ಹೃದಯದಿಂದ ಸ್ವಾಗತಿಸುವುದರಿಂದ ಮಾತ್ರ ಈ ಜಗತ್ತು ಸರ್ವನಾಶದಿಂದ ಉಳಿಯಬಲ್ಲದು. ಆದರೆ ಈ ಸಲಹೆಗಳು ಅದೆಷ್ಟು ವ್ಯಾವಹಾರಿಕ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When we do not have power to create the life, what right do we have to destroy the life? Vasant Kulkarni says America should not have used Mother of All Bombs to eliminate ISIS.
Please Wait while comments are loading...