• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಲಾಸ್ಕಾ ಪಯಣ: ಬೇಸಿಗೆ ಕಾಲದಲ್ಲಿ ಮಾತ್ರ ಇವರ ಬದುಕಿಗೆ ಚಲನೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕಳೆದ ವಾರದ ಪ್ರವಾಸ ಕಥನವಾದ "ನಾ ಕಂಡ ಅಲಾಸ್ಕಾ"ದ ಮುಂದಿನ ಭಾಗ - ಭಾಗ ಎರಡು. ಅಲಾಸ್ಕಾದ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಗ್ಲೇಸಿಯರ್ ಗಳು (glaciers), ಕರಡಿಗಳು, ಜಲಚರ ಪ್ರಾಣಿಗಳಾದ ಸೀಲ್, whale, ಸಾಲ್ಮನ್ ಇತ್ಯಾದಿ. ಬೆಟ್ಟಗುಡ್ಡಗಳು, ನದಿಗಳು ಮತ್ತು ಪೆಸಿಫಿಕ್ ಮಹಾಸಾಗರ. ಮಿಕ್ಕೆಲ್ಲದರ ಬಗ್ಗೆ ಈ ಮುಂಚೆಯೇ ಒಂದಷ್ಟು ಮಾಹಿತಿ ಇದ್ದರೂ glacier ಅಂದರೇನು ಅಲ್ಲಿ ಕಂಡ ಮೇಲೇ ಅರಿವಾಗಿದ್ದು.

ಅತ್ಯಂತ ಶೀತಲ ಪ್ರದೇಶಗಳಲ್ಲೊಂದಾದ ಅಲಾಸ್ಕಾದಲ್ಲಿ ಕನಿಷ್ಠ ಎಂಟು ತಿಂಗಳು ಚಳಿ. ಈ ಎಂಟು ಅಥವಾ ಒಂಬತ್ತು ತಿಂಗಳು ಹವಾಮಾನವು ಚಳಿ, ಅತೀ ಚಳಿ ಅಥವಾ ಭೀಕರ ಚಳಿಗಲ್ಲೊಂದಾಗಿರುತ್ತದೆ. ಹಲವಾರು ಬಾರಿ ಮೂರರಿಂದ ನಾಲ್ಕು ಅಡಿ snow ಬಿದ್ದಿರುವುದೂ ಇದೆ. ಹರಿವ ನೀರು ಹೆಪ್ಪುಗಟ್ಟಿ ನಿಲ್ಲೋದು ಸಾಮಾನ್ಯ. ಅದರ ಮೇಲೆ ಒಗ್ಗರಣೆಯಂತೆ ಅಡಿಗಳಗಟ್ಟಲೆ ಸ್ನೋ.

ಬೆಟ್ಟದಾ ಮೇಲೆ ಹೀಗೆ ಘನೀಕರಿಸಿ ಮಂಜುಗಡ್ಡೆಯಾಗಿ ನಿಂತು ಬೇಸಿಗೆಯ ಸಮಯದಲ್ಲಿ ಕೊಂಚ ಕೊಂಚವೇ ಕರಗಿ ತನ್ನ ಭಾರವನ್ನು ಹೊತ್ತು ಅತೀವ ನಿಧಾನಗತಿಯಿಂದ ಮುಂದೆ ಸಾಗುತ್ತಾ ಬರುತ್ತದೆ. ಹೀಗೆ ನಿಧಾನವಾಗಿ ತೆವಳುವ ಮಂಜುಗಡ್ಡೆಯುಕ್ತ ನದಿಯೇ glacier. ಇಂಥಾ ಗ್ಲೇಸಿಯರ್'ಗಳಲ್ಲಿ ಪ್ರಮುಖವಾದದ್ದು ಎಂದರೆ Hubbard Glacier.

Hubbard Glacier ಸಮುದ್ರದ ಮೇಲಿನಿಂದ ಹನ್ನೊಂದು ಸಾವಿರ ಅಡಿಯ ಮೇಲಿದೆ ಎನ್ನುತ್ತಾರೆ. ಅಂದೆಂದೋ ಅಲ್ಲೆಲ್ಲೋ ಮೇಲಿಂದ ಆರಂಭವಾದ ಈ ಗ್ಲೇಸಿಯರ್ ನ ಮತ್ತೊಂದು ತುದಿ ನೂರಾ ಇಪ್ಪತ್ತೆರಡು ಕಿಲೋಮೀಟರ್ ದೂರದಲ್ಲಿದೆ. ಈ ಮತ್ತೊಂದು ತುದಿಯನ್ನೇ ನಾವು ಕಂಡಿದ್ದು.

ಆ ಬೆಟ್ಟದ ತುದಿಯಲ್ಲಿ ಉಂಟಾದ ಮಂಜುಗಡ್ಡೆ ಸರಿದು ಬರುತ್ತಾ ಈ ತುದಿಗೆ ಬರಲು ಕೇವಲ ನಾನೂರು ವರುಷಗಳಾಗುತ್ತದಂತೆ. ಇಂಥಾ ವಿಷಯಗಳನ್ನು ಕೇಳಲು ಚೆನ್ನ, ಅರ್ಥೈಸಿಕೊಳ್ಳಲು ಸೊಗಸು, ಆದರೆ ಊಹಿಸಿಕೊಳ್ಳಲೇ ದುಸ್ತರ. ಭೂಮಿಯ ಮೇಲೆ ಅತ್ಯಂತ ಶುದ್ಧ ನೀರು ಎಂದರೆ ಈ ಗ್ಲೇಸಿಯರ್ ನೀರು. ಇಂಥಾ ಒಂದು ಗ್ಲೇಸಿಯರ್ ಆದ Mendenhall Glacier ಮೇಲೆ ನಾವು ಹೆಲಿಕ್ಯಾಪ್ಟರ್ ನಲ್ಲಿ ಹೋಗಿದ್ದೆವು.

ಮಂಜುಗಡ್ಡೆಯ ಮೇಲೆ ನಡೆಯುವುದು ಸಲೀಸಲ್ಲ. ಅದರಲ್ಲೂ ಶೂಗಳ sole ನುಣುಪಾಗಿದ್ದರೆ ದೇವರೇ ಗತಿ. ಇಂಥವು ಆಗಬಾರದು ಅಂತಲೇ, ಹೆಲಿಕ್ಯಾಪ್ಟರ್ ಏರುವ ಮುನ್ನವೇ ಅಲ್ಲಿನ ಕಚೇರಿಯಲ್ಲಿ ಮಂಜುಗಡ್ಡೆಯ ಮೇಲೆ ನಡೆಯಲು ಸೂಕ್ತವಾದ ಶೂಗಳನ್ನು ನೀಡುತ್ತಾರೆ. ಈ ಶೂಗಳನ್ನು ನಾವು ಧರಿಸಿರುವ ಶೂಗಳ ಮೇಲೆಯೇ ಧರಿಸಬಹುದು.

ಹೆಲಿಕ್ಯಾಪ್ಟರ್ ನಿಂದ ಕೆಳಗಿಳಿದು ಗೈಡ್ ಹೇಳಿದ ಹಾಗೆ ಅಲ್ಲಲ್ಲೇ ಎಚ್ಚರಿಕೆಯಿಂದ ನಡೆದಾಡುತ್ತಾ ಆತ ಹೇಳಿದ ವಿಷಯಗಳನ್ನು ಅರ್ಥೈಸಿಕೊಳ್ಳುತ್ತಾ ಸಾಗಿದೆವು. ಅವನು ಹೇಳಿದಷ್ಟೇ ಕಡೆ ಹೆಜ್ಜೆ ಹಾಕಿದೆವೇ ವಿನಾ ಯಾವ ಪ್ರಯೋಗವನ್ನೂ ಮಾಡಲು ಹೋಗಲಿಲ್ಲ. ನಾನಂತೂ ಅವನು ಕೊಟ್ಟ ಕೋಲನ್ನು ಹಿಡಿದೇ ಓಡಾಡಿದೆ. ಅಪ್ಪಿ ತಪ್ಪಿ ಅಲ್ಲಿಂದ ಜಾರಿದರೆ ಬಹುಶಃ ಎರಡು ಅಥವಾ ಮೂರು ಸಾವಿರ ಅಡಿಯಿಂದ ಕೆಳಕ್ಕೆ ಬೀಳುತ್ತೇವೆ.

ಸ್ಯಾಂಪಲ್ ಗೆ ಮೂಳೆಯೂ ಸಿಗದೇ ಹೋಗಬಹುದು. ಪ್ರಪಾತಕ್ಕೆ ಬಿದ್ದರೆ ಅದು ಬೇರೆ ಕಥೆ. ಆದರೆ ಮರಗಳ ಮೇಲೆ ಬಿದ್ದು ಅಲ್ಲಿಯೇ ನೇತಾಡುವಂತಾದರೆ? ಅಲ್ಲಿ ನೇತಾಡುವಾಗ ಬುಸ್ ನಾಗಪ್ಪ ಬಂದು shall i kiss you ಅಂದ್ರೆ? ಅಲ್ಲಿ ಹರಿಯುತ್ತಿದ್ದ ನೀರನ್ನು ಮುಟ್ಟಿದಾಗ ತಣ್ಣನೆ ಕೊರೆಯುತ್ತಿತ್ತು. 'ಕೈಗಳು ಗಲೀಜಿರಬಹುದು, ನೆಲದ ಮೇಲೆ ಅಂಗಾತ ಮಲಗಿ ಬಾಯಿಂದ ನೇರವಾಗಿ ನೀರನ್ನು ಸೆಳೆದು ಕುಡಿಯಿರಿ' ಎಂದ ಗೈಡ್ ಮಹಾಶಯ.

ಮೊದಲಿಗೆ ತಮಾಷೆಗೆ ಹೇಳಿರಬಹುದು ಎಂದುಕೊಂಡರೆ ಅವನು ಹೇಗೆ ಕುಡಿಯಬೇಕು ಅಂತ ತೋರಿಸಿಕೊಟ್ಟ. ಆ ನಂತರ ಅವನಂತೆಯೇ ಮಾಡಿ, ನೀರನ್ನು ಕುಡಿದಾಗ ಜನ್ಮದಲ್ಲೇ ಇಂಥಾ ನೀರು ಕುಡಿದಿರಲಿಲ್ಲ ಎನಿಸಿದ್ದು ನಿಜ. ನಮ್ಮ ಇಡೀ ಪಯಣದಲ್ಲಿ, ಎರಡು ಬಸ್ಸುಗಳು, ಒಮ್ಮೆ ಟ್ರೈನ್, ಹೆಲಿಕ್ಯಾಪ್ಟರ್, ATV, ವ್ಯಾನ್ ಗಳಲ್ಲಿ ಓಡಾಡಿದ ನಮಗೆ ಆಯಾ ವಾಹನ ಓಡಿಸುವವರೇ ಗೈಡ್ ಕೂಡಾ ಆಗಿದ್ದರು.

ನಿರರ್ಗಳವಾಗಿ ಅವರುಗಳು ಹೇಳುತ್ತಾ ಸಾಗಿದ ವಿಷಯಗಳು ಒಂದು ಕಾದಂಬರಿಗೆ ಆಗುವಷ್ಟು ಸರಕು. ಕೆಲವನ್ನು ಮಾತ್ರ ಉಲ್ಲೇಖಿಸುತ್ತೇನೆ. ಹಲವಾರು ವಿಚಾರಗಳು "ನಾ ಕಾಣದ ಅಲಾಸ್ಕ" ವಿಚಾರವಾಗಿರುತ್ತದೆ. ಡಿಸೆಂಬರ್ ಇಪ್ಪತ್ತೊಂದನೆಯ ತಾರೀಖು (winter solstice) ಅತ್ಯಂತ ಕಡಿಮೆ ಗಂಟೆಗಳ ಕಾಲ ಸೂರ್ಯ ದರ್ಶನ ಇರುವ ಈ ರಾಜ್ಯದ ಕೆಲವು ಸ್ಥಳಗಳಲ್ಲಿ ನಾಲ್ಕರಿಂದ ಆರು ಗಂಟೆಗಳ ಕಾಲ ಮಾತ್ರ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಜೂನ್ ಇಪ್ಪತ್ತೊಂದನೆಯ ತಾರೀಖು (summer solstice) ಅತ್ಯಂತ ಹೆಚ್ಚು ಗಂಟೆಗಳ ಕಾಲ ಸೂರ್ಯ ರಾರಾಜಿಸುತ್ತಾ ಇರುತ್ತಾನೆ.

ಬೇಸಿಗೆಯ ಕಾಲದಲ್ಲಿ ಹದಿನೈದರಿಂದ ಹತ್ತೊಂಬತ್ತು ಗಂಟೆಗಳ ಕಾಲ ಬೆಳಕು ಇರುತ್ತದೆ. ಇದು ಕೇವಲ ಮೂರೋ ನಾಲ್ಕೋ ತಿಂಗಳು ಮಾತ್ರ. - YUKON ಪ್ರದೇಶದಲ್ಲಿರುವ Emerald ನದಿ ಒಂದು ಹಸಿರು ನದಿಯಾಗಿ ಪ್ರಖ್ಯಾತ. ಇದು ಪಾಚಿಯುಕ್ತ ಅಲ್ಲ ! ನದಿಯ ನೀರಿನಲ್ಲಿ marlstone ಅಂಶ ಹೆಚ್ಚಿರುವ ಕಾರಣ, ಬೆಳಕು ಪ್ರತಿಫಲಿಸಿದಾಗ ಹಸಿರು ಬಣ್ಣ ಕಾಣುತ್ತದೆ.

YUKON ಪ್ರದೇಶದಲ್ಲಿ ಒಂದು ಜಾಗದಲ್ಲಿ ಮರುಭೂಮಿ ಇದೆ ಎಂದು ಆ ಗೈಡ್ ತೋರಿಸಿದಾಗ ಅತ್ಯಂತ ಅಚ್ಚರಿಯಾಯಿತು. ಅದಿಷ್ಟು ಜಾಗ ಮಾತ್ರ ತಲಕಾಡಿನಲ್ಲಿರುವಂತೆ ಮರಳೋ ಮರಳು. Carcross desert ಎಂಬ ಈ ಮರುಭೂಮಿ ವಿಶ್ವದ ಅತ್ಯಂತ ಚಿಕ್ಕ ಮರುಭೂಮಿ. ಇದರ ಸುತ್ತಳತೆ ಕೇವಲ ಒಂದು ಚದರ ಮೈಲಿ.

Glacier ಮೇಲೆ ಬಿದ್ದ ಸ್ನೋ, ಹಲವೊಮ್ಮೆ ಅಲ್ಲಿಯೇ ಗಡ್ಡೆಗಟ್ಟಿ ನಿಲ್ಲುತ್ತೆ. ಹಾಗೆ ಗಡ್ಡೆ ಕಟ್ಟಿದಾಗ air bubbles ಅದರೊಳಗೆ ಸೇರಿಕೊಳ್ಳುತ್ತದೆ. ಇಂಥದ್ದರ ಮೇಲೆ ಬೆಳಕು ಬಿದ್ದಾಗ ಅವು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ರೋಡಿನ ಮೇಲೆ ವಾಹನಗಳಲ್ಲಿ ಚಲಿಸುವಾಗ ಹಲವಾರು ಕಡೆ ರಸ್ತೆ ಕಾಮಗಾರಿ ಕೆಲಸಗಳು ನಡೆಯುತ್ತಿದ್ದವು. ವಿಷಯ ಏನಪ್ಪಾ ಅಂದ್ರೆ ರಸ್ತೆ ರಿಪೇರಿ ಕೆಲಸಕ್ಕೆ ಅವರಿಗೆ ಸಿಗುವ ಸಮಯ ಕೇವಲ ಮೂರು ಅಥವಾ ನಾಲ್ಕು ತಿಂಗಳು ಮಾತ್ರ. ಆ ಸಮಯ ತಪ್ಪಿದರೆ ಮುಂದಿನ ಬೇಸಿಗೆಯವರೆಗೆ ಕಾಯಬೇಕು.

Tour guide ಗಳಾಗಿ ಕೆಲಸ ಮಾಡುವ ಬಸ್ ಡ್ರೈವರ್ ಗಳಿಗೆ ಚಳಿಗಾಲದಲ್ಲಿ ಕೆಲಸವೇ ಇರೋದಿಲ್ಲ. ಆ ಸಮಯದಲ್ಲಿ ಪಾರ್ಟ್ ಟೈಮ್ ಶಾಲೆಯ ಬಸ್ ಓಡಿಸುವುದೋ ಅಥವಾ ಮತ್ಯಾವುದೋ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಂಡಿರುವುದು ಅನಿವಾರ್ಯ. Juneau ನಲ್ಲಿ ಒಂದು ಆಭರಣಗಳ ಅಂಗಡಿಗೆ ನಮ್ಮ ಮಹಿಳಾಮಣಿಗಳು ದಾಳಿ ಇಟ್ಟರು.

ಅಂದ ಮೇಲೆ ನಾವೂ ಹೋಗಿದ್ದೆವು ಅಂತಾಯ್ತಲ್ಲ. ಅಲ್ಲಿ ನಮಗೆ ಅರಿವಾಗಿದ್ದು, ಆ ಅಂಗಡಿಯ ಒಬ್ಬ ಭಾರತೀಯ ಕೆಲಸಗಾರ juneau ನಲ್ಲಿ ನಾಲ್ಕು ತಿಂಗಳು ಮಾತ್ರ ಕೆಲಸ ಮಾಡುತ್ತಾನೆ. ಮಿಕ್ಕ ಎಂಟು ತಿಂಗಳು carribean ದೇಶದಲ್ಲೆಲ್ಲೋ ಕೆಲಸ ಮಾಡುತ್ತಾನೆ ಅಂತ. ಬಿಸಿಲು ಕಡಿಮೆ ಇರುವ ಈ ರಾಜ್ಯದ ಪ್ರದೇಶದಲ್ಲಿ ವಿಟಮಿನ್ D deficiency ಸರ್ವೇ ಸಾಮಾನ್ಯ.

ಇಲ್ಲಿನ ಮಣ್ಣು ಯಾವುದೇ ಉಳುಮೆಗೆ ಯೋಗ್ಯವಲ್ಲ. ಮಳೆಯಾಗಲಿ, ಹಿಮವಾಗಲಿ ಇಂಚುಗಳ ಲೆಕ್ಕದಲ್ಲಿ ಬೀಳದೆ ಅಡಿಗಳಗಟ್ಟಲೆ ಬೀಳುತ್ತವೆ. ಮೇಲಿನ ವಿಷಯಗಳಲ್ಲಿ ಅರ್ಥವಾಗಿರಬಹುದು ಈ ಬೃಹತ್ ರಾಜ್ಯದಲ್ಲಿ ಜನಸಂಖ್ಯೆ ಏಕೆ ಕಡಿಮೆ ಅಂತ. ಮತ್ತೇನಾದರೂ ಸ್ವಾರಸ್ಯ ಕಂಡಿತೇ? ಅಥವಾ ನಡೆಯಿತೇ?

ಹಡಗಿನಲ್ಲಿ ಸಾವಿರಾರು ಜನ ಇರ್ತಾರೆ ಅಂತ ಹೇಳಿದ್ದೆ. ನಮ್ಮಂತೆ ಭಾರತೀಯರೂ ಇದ್ದರು ಅನ್ನಿ. ನಾವು ಕನ್ನಡದಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ಒಬ್ಬರು ಮರುದಿನ ನಮ್ಮನ್ನು ಹುಡುಕಿಕೊಂಡು ಬಂದು ಮಾತನಾಡಿಸಿದರು. ಬೆಂಗಳೂರಿನ ಯಾವುದೋ ಒಂದು ಭಾಗದಲ್ಲಿ ಮಿಲ್ ನಡೆಸುತ್ತಿದ್ದಾರಂತೆ. ಅವರ ಮಿಲ್ ನ ಮೂರು ಬಗೆಯ ಚಟ್ನಿಪುಡಿಗಳನ್ನು ನೀವೂ ರುಚಿ ನೋಡಿ ಅಂತ ಕೊಟ್ಟರು !

ನಾವು ಭಾರತೀಯರು ಎಂಬ ಹೆಮ್ಮೆಯಿಂದ ನಮ್ಮ ಮಹಿಳಾಮಣಿಗಳು ಒಮ್ಮೆ ಸೀರೆಯನ್ನೂ ಉಟ್ಟುಕೊಂಡಿದ್ದರು. ಒಂದೆಡೆ hubbard ಗ್ಲೇಸಿಯರ್ ಸೌಂದರ್ಯ ಕಾಣುತ್ತಿದ್ದರೆ, ಮಹಿಳಾಮಣಿಗಳು ಆ ಹಿನ್ನೆಲೆಯಲ್ಲಿ ವಿವಿಧ ಭಂಗಿಗಳಲ್ಲಿ ನಿಂತು ಚಿತ್ರ ತೆಗೆಸಿಕೊಳ್ಳುತ್ತಿದ್ದರು. ಅಂದಿನಿಂದ ಕೊನೆಯ ದಿನದವರೆಗೆ ಇವರನ್ನು ಕಂಡವರೆಲ್ಲಾ ಮೆಚ್ಚುಗೆ ಸೂಸುತ್ತಿದ್ದರು.

ನಾವೂ ಚಡ್ಡಿ (shorts) ಷರಟು ಹಾಕಿಕೊಂಡು ತಿರುಗಿದ್ದೆವು ಆದರೆ ಯಾರೂ ಕ್ಯಾರೇ ಅನ್ನಲಿಲ್ಲ. ಹೀಗೆ ಒಮ್ಮೆ ಬಸ್ ಪ್ರಯಾಣದಲ್ಲಿ ಸಾಗಿದ್ದಾಗ ಊಟಕ್ಕೆ ಒಂದೆಡೆ ನಿಲ್ಲಿಸಿದ ನಮ್ಮ ಡ್ರೈವರ್. ಈ ಮುಂಚೆಯೇ ಎಷ್ಟು ಶಾಕಾಹಾರಿ ಊಟ ಮತ್ತು ಎಷ್ಟು ಚಿಕನ್ ತಿನ್ನುವವರು ಅಂತ ಲೆಕ್ಕ ಕೇಳಿದ್ದ. ಆತ ನಿಲ್ಲಿಸಿದ ತಾಣ ಜಗತ್ತಿನ ಯಾವುದೋ ಒಂದು ಮೂಲೆ. ಕಂಡು ಕಾಣದ ಕೇಳದಂಥಾ ಜಾಗ. ಅರ್ಥಾತ್ ಭೂಪಟದಲ್ಲಿ ಸಿಗದಂಥ ತಾಣ.

ಅಲ್ಲಿ ನಮಗೆ ಅನ್ನ ಮತ್ತು ದಾಲ್ ಊಟ ಸಿಕ್ಕಿತು ಎಂದರೆ ಅಚ್ಚರಿಯಾಯ್ತು. ಅನ್ನದ ಋಣ ಇತ್ತು ಬಿಡಿ. ಒಟ್ಟಾರೆ ಹೇಳುವುದಾದರೆ ಹಲವಾರು ದಿನಗಳ ನಮ್ಮ ಈ cruise ಪಯಣ ಹಲವಾರು ಹೊಸ ವಿಷಯಗಳನ್ನು ಕಲಿಸಿದೆ. ಹೊಸ ಹೊಸ ಚಿಂತನೆಗಳನ್ನು ಮೂಡಿಸಿವೆ. ಪ್ರಕೃತಿಯ ಮುಂದೆ ನಾ ಶೂನ್ಯ ಎಂಬ ಭಾವನೆ ಮೂಡಿಸಿದೆ.

English summary
Alaska travelogue by Oneindia columnist Srinath Bhalle. He writes about very interesting details about Alaska tourism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X