• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಗೂಢ, ಭಯಂಕರ ಗರ ಬಡಿಸುವ ಸೌಂದರ್ಯವೇ ಸಾಗರ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಯಾವುದೇ ಭಾಷೆಯ ಸಾಹಿತ್ಯದಲ್ಲಿ ಈ ಒಂದಂಶವನ್ನೂ ಕಾಣಬಹುದು ಎಂದರೆ 'ಸಾಗರದಷ್ಟು ವಿಶಾಲವಾದ ಮನಸ್ಸು' ಎಂಬೋದು. ಈ ಹೋಲಿಕೆಯಿಂದ ಮನಸ್ಸು ದೊಡ್ಡದು ಎಂಬ ವಿಷಯ ಅರ್ಥವಾಗುತ್ತದೆಯೇ ವಿನಃ ಸಾಗರ ಎಷ್ಟು ದೊಡ್ಡದು ಎಂಬ ಕಲ್ಪನೆ ಬರಲಿಕ್ಕಿಲ್ಲ.

Ocean ಎಂದರೆ ಸಾಗರ, Sea ಎಂದರೆ ಸಮುದ್ರ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಸಮುದ್ರಗಳು ಏಳು ಮತ್ತು ಮಹಾಸಾಗರಗಳು ಐದು. ಸಮುದ್ರ ಎಂದರೆ ಮಹಾಸಾಗರದ ಒಂದು ಭಾಗ. ಸಮುದ್ರದ ಸುತ್ತಲೂ ಒಂದಷ್ಟು ಭುವಿಯ ಪ್ರದೇಶಗಳೂ ಇರುತ್ತವೆ. ಉದಾಹರಣೆ ಎಂದರೆ ಅರಬ್ಬಿ ಸಮುದ್ರವು ಹಿಂದೂ ಮಹಾಸಾಗರದ ಒಂದು ಭಾಗ. ಚಾಂದ್ ಕಾ ತುಕ್ಡಾ ಅಂತಾರಲ್ಲಾ ಹಾಗೆ ಸಾಗರ ಕಾ ತುಕ್ಡಾ. ಅರಬ್ಬಿ ಸಮುದ್ರದ ಸುತ್ತ ಪಾಕಿಸ್ತಾನ, ಇರಾನ್ ಮತ್ತು ಭಾರತದ ಭಾಗಗಳಿವೆ.

ನನ್ನ ಬೇಸಿಗೆ ರಜೆಯ ಮಜಾ ಹೀಗಿತ್ತು! ನಿಮ್ಮದು ಹೇಗಿತ್ತು?

ಪಂಚ ಮಹಾಸಾಗರಗಳಲ್ಲಿ ಒಂದು ಅಟ್ಲಾಂಟಿಕ್ ಮಹಾಸಾಗರ. ಇದು ವಿಶ್ವದ ಎರಡನೆಯ ಅತಿದೊಡ್ಡ ಮಹಾಸಾಗರ. ಪೆಸಿಫಿಕ್ ಮಹಾಸಾಗರ ಮೊದಲ ಸ್ಥಾನದಲ್ಲಿದೆ. ಅಟ್ಲಾಂಟಿಕ್ ಮಹಾಸಾಗರ ಎಷ್ಟು ವಿಶಾಲ ಎಂದರೆ ಉತ್ತರ ಮತ್ತು ದಕ್ಷಿಣವಾಗಿ ವಿಂಗಡಿಸಲಾಗಿದ್ದು, ವಿಶ್ವದ ನೀರಿನ surface'ನ ಶೇಕಡಾ 30 ಈ ಮಹಾಸಾಗರದಲ್ಲೇ ಇದೆ. ಅಮೇರಿಕಾದ ಈಶಾನ್ಯ ಭಾಗದಲ್ಲೂ ಕಂಡುಬರುವ ಈ ಮಹಾಸಾಗರ ನಾವಿರುವ ಸ್ಥಳದಿಂದ ಇದ್ದುದರಲ್ಲೇ ಹತ್ತಿರದಲ್ಲೇ ಇದೆ ಎನ್ನಬಹುದು.

ವರ್ಜೀನಿಯಾ ಬೀಚ್ ಎಂಬುದು ವರ್ಜೀನಿಯಾ ರಾಜ್ಯದ ಒಂದು ಮಹಾನಗರ. ಅಟ್ಲಾಂಟಿಕ್ ಮಹಾಸಾಗರಕ್ಕೆ ಅಂಟಿಕೊಂಡಿರುವ ಈ ನಗರದಲ್ಲಿ ಹಲವಾರು ಬೀಚ್'ಗಳಿವೆ. ಅವುಗಳಲ್ಲಿ ಒಂದು sandbridge.

ನಾವಿರುವ ಸ್ಥಳದಿಂದ ಎರಡೂವರೆ ಘಂಟೆಯ ಪಯಣ. ಹಾದಿಯಲ್ಲಿ ಸಿಗುವದೇ Chesapeake Bay Bridge-Tunnel. ಇದೊಂದು ಇಂಜಿನಿಯರಿಂಗ್ ಅದ್ಬುತ ಎಂದರೆ ತಪ್ಪಿಲ್ಲ. ವಿಶ್ವದ ಅತ್ಯಂತ ಉದ್ದನೆಯ bridge - tunnel ಇದು. ಬ್ರಿಜ್ ಮೇಲೆ ಸಾಗುವಾಗ ಮಹಾಸಾಗರದ ಮೇಲ್ಭಾಗ, ಮಹಾಸಾಗರದ ಒಳಭಾಗದಲ್ಲಿ ಸಾಗುವ ಟನಲ್ ಎರಡೂ ಅತ್ಯದ್ಭುತವೇ ಸರಿ. ಆ ಪರಿಯ ಆಳದಲ್ಲಿ, ಒಂದೇ ಸಮನೆ ಬದಲಾಗೋ ನೀರಿನ ವೇಗದಲ್ಲಿ ಯಾವ ರೀತಿ ಸುರಂಗ ಮಾಡಿದ್ದಾರೆ ಎಂದು ಅರಿಯಲೇ ದುಸ್ತರ.

ಒಂದು ಮೈಲಿ ದೂರವಿರುವ ಈ ಟನಲ್'ನಲ್ಲಿ ಸಾಗುವಾಗ ಅತೀ ಎಚ್ಚರಿಕೆ ಇರಬೇಕಾದ್ದು ಅತ್ಯಗತ್ಯ. ಟನಲ್ ಇನ್ನೂ ಎರಡು ಮೈಲಿ ದೂರ ಇದೆ ಎನ್ನುವಾಗಲೇ 'ನಿಮ್ಮ ಕಾರಿನಲ್ಲಿ ಗ್ಯಾಸ್ (ಪೆಟ್ರೋಲ್) ಇದೆಯೇ ಚೆಕ್ ಮಾಡಿಕೊಳ್ಳಿ ಎಂಬ ವಾರ್ನಿಂಗ್ ಕೊಡಲಾಗುತ್ತದೆ'. ಟನಲ್ ಒಳಗೆ ಹೋಗುವಾಗ ಲೇನ್ ಬದಲಿಸುವಂತಿಲ್ಲ. ಆದರೂ ಆ ಒಂದು ಮೈಲಿ ದೂರದ ಡ್ರೈವ್ ರೋಮಾಂಚನಕಾರಿ. ನಂತರ ನಾವು ತಲುಪಿದ್ದು sandbridge'ನ ಲಿಟಲ್ ಐಲ್ಯಾಂಡ್ ಪಾರ್ಕ್ ಎಂಬ ಜಾಗ.

ನಿಮಗೆ ದಾಂಧಲೆ ಎಬ್ಬಿಸುವವರು ಗೊತ್ತೇ? ಇದರಿಂದ ಪ್ರಯೋಜನವೂ ಇದೆ

sandbridge'ನ ಸುತ್ತಮುತ್ತಲೂ ಎಲ್ಲೆಲ್ಲೂ ಕಾಣುವುದೇ ಬೀಚ್ houses. ಒಂದೊಂದು ಮನೆಯೂ ಒಂದೊಂದು ವಿನ್ಯಾಸ. ಕೆಲವೊಂದು ಹಳೆಯ ಜೋಪಡಿಯಂತೆ ಇದ್ದರೆ ಮತ್ತೆ ಕೆಲವು ಮಹಲ್'ನಂತೆ. ಜೇಬಿನಲ್ಲಿರೋ ಅರ್ಥಾನುಸಾರ ಮನೆ ಕಟ್ಟಿ ಬಾಡಿಗೆಗೆ ಬಿಡುತ್ತಾರೆ ಮಂದಿ. ಬಿಡಿ, ವಿಷಯ ಮನೆ ಮನೆ ಕಥೆ ಅಲ್ಲ.

ಲಿಟಲ್ ಐಲ್ಯಾಂಡ್ ಪಾರ್ಕ್ ಒಳಗೆ ಹೋಗುತ್ತಿದ್ದಂತೆಯೇ ಪಾರ್ಕಿಂಗ್'ಗೆ ದುಡ್ದು ತೆರಬೇಕು. ಹಲವಾರು shelter ಸ್ಥಳಗಳು, ಅತ್ಯಂತ ಸ್ವಚ್ಛ ಟಾಯ್ಲೆಟ್ ಮುಂತಾದವು ಸ್ವಾಗತ ಕೋರಿದ್ದವು. ಅಲ್ಲಿಂದ ಒಂದಷ್ಟು ದೂರ ಸಾಗಲು ಕಾಣುವುದೇ ಮಹಾಸಾಗರ. ಎಷ್ಟು ದೂರ ಕಣ್ಣು ಹಾಯಿಸಿದರೂ ಕಾಣುವುದು ಬರೀ ನೀರು. ಮಾಹಾಸಾಗರ ಎಂದ ಮೇಲೆ ನೀರಲ್ಲದೆ ಮತ್ತೇನಿರುತ್ತೆ ಎನ್ನದಿರಿ. ನಾನು ಹೇಳಿದ್ದು ಬೀಚ್ ಎಂದ ಕೂಡಲೇ ಜನಜಂಗುಳಿ ಇರಲಿಲ್ಲ. ಅಲ್ಲಲ್ಲೇ ಒಂದಷ್ಟು ಜನರು ಇದ್ದದ್ದು ಬಿಟ್ಟರೆ ಹೆಚ್ಚು ಕಮ್ಮಿ ಪ್ರಶಾಂತವಾಗೇ ಇತ್ತು.

ನೀರಿನೊಳಗೆ ಇಳಿಯಲು ಮುಂದಾದೆವು ಎಂದರೆ ಅದು ಘೋರ ಅಪರಾಧ. ಅದೇನು ತೊಟ್ಟಿಯ ನೀರೇ ಇಳಿಯಲು? ನೀರಿನ ಬಳಿ ಸಾಗಿದೆವು. ಮೊದಲ ಅಲೆ ಬಂದು ಪಾದಕ್ಕೆ ಬಡಿಯಲು ತಣ್ಣನೆಯ ಕೊರೆತ. ಎಷ್ಟೇ ಬಿಸಿಲಿದ್ದರೂ ಸಾಗರದ ನೀರನ್ನು ಬಿಸಿ ಮಾಡುವಷ್ಟು ಶಕ್ತಿ ಆ ಬಿಸಿಲಿಗೆ ಇಲ್ಲವೇನೋ? ಬೇಡ ಬಿಡಿ, ಸುಮ್ಮನೆ ಅವರಿಬ್ಬರ ನಡುವೆ ಯಾಕೆ ತಂದಿಡೋದು?

ತಣ್ಣನೆ ಕೊರೆತ ಅನುಭವಿಸಿ ಇನ್ನೂ ಚೇತರಿಸಿಕೊಳ್ಳುವಷ್ಟರಲ್ಲೇ ಒಂದು ಅಲೆ ಬಂದು ಅಪ್ಪಳಿಸಿತು. ದೇಹವಾಗಲಿ ಅಥವಾ ಮನವಾಗಲಿ ಇನ್ನೂ ಸಿದ್ಧವಿರಲಿಲ್ಲ. ಒಂಥರಾ ಫಸ್ಟ್ ಬಾಲ್'ಗೆ ಔಟಾಗುವ ಹಾಗೆ ಅಲೆಯ ಹೊಡೆತಕ್ಕೆ ಧೊಪ್ಪನೆ ಬಿದ್ದೆ. ಆದರೂ ಮಜವಾಗಿತ್ತು. ಮತ್ತೆ ಎದ್ದು ನಿಂತೆ. ಈಗ ಬರಲಿ ಗೂಗ್ಲಿ ಅಂದಿದ್ದೆ ತಡ ಮೊದಲಿಗಿಂತ ದೊಡ್ಡ ಅಲೆ ಬಂದು ಗುದ್ದಿತ್ತು. ಈ ಬಾರಿ ಬೀಳಲಿಲ್ಲ. ಆದರೆ ನೀರಿನ ಅಲೆಯ ವಾಪಸ್ಸಾಗುವ ಸಮಯದಲ್ಲಿ ಪಾದದ ಕೆಳಗಿನ ಮರಳನ್ನು ಸೆಳೆಯುವಾಗ ಏನೋ ಒಂಥರಾ ಮುಳಮುಳಾ ಅನ್ನಿಸೋ ಅನುಭವ.

ಒಂದೊಂದೂ ಅಲೆಗಳು ಒಂದೊಂದು ಬದುಕಿನ ಪಾಠ ಕಲಿಸುತ್ತಿದೆಯೇನೋ ಅನ್ನಿಸಿತ್ತು. ಒಂದೊಂದು ಅಲೆಯೂ ಪ್ರಕೃತಿಯ ವೈಪರೀತ್ಯವಾದಾಗ ಹೇಗಿರಬಹುದು ಎಂಬ ಎಚ್ಚರಿಕೆ ನೀಡುತ್ತಿತ್ತು. ಒಂದೊಂದು ಅಲೆಯೂ ನಮ್ಮ ಮುಂದೆ ನೀನೇನೂ ಇಲ್ಲವೋ ಮಾನವ ಎಂದು ನುಡಿಯುತ್ತಿದೆಯೇನೋ ಅನ್ನಿಸಿತ್ತು. ಒಂದು ಮಾತಲ್ಲಿ ಹೇಳಬಹುದು ಎಂದರೆ ಬಿದ್ದ ಹೊಡೆತ ಅಲ್ಲಿ ನಿಂತು ನಿಮ್ಮನ್ನು ನೋಯಿಸುತ್ತಾ ಇರುವುದಿಲ್ಲ. ಹೊಡೆತ ಬಿದ್ದಾಗ ಅರಿತು ಕ್ರಮ ತೆಗೆದುಕೊಳ್ಳುವುದರಲ್ಲಿ ಒಳಿತಿದೆ. ಇನ್ನೂ ಅಲ್ಲೇ ನಿಂತು ಹೊಡೆಸಿಕೊಳ್ಳುತ್ತೇನೆ ಎಂದರೆ ಹೊಡೆಯುವವರಿಗೆ ಕರುಣೆ ಇರುವುದಿಲ್ಲ ಅಂತ.

MH-370 ಎಂಬ ವಿಮಾನ ಸಾಗರದಲ್ಲಿ ಕಾಣೆಯಾಗಿತ್ತು. ಮೊದಲ ದಿನಗಳಲ್ಲಿ ವಿಪರೀತ ಹುಡುಕಾಟ ನಡೆದಿತ್ತು. ಒಂದೆರಡು ದಿನಗಳು ಕಳೆದಂತೆ ಯಾರೂ ಬದುಕಿರುವ ಸಂಭವ ಇಲ್ಲ ಎಂದೇ ತೀರ್ಮಾನಕ್ಕೆ ಬರುವಂತೆ ಇತ್ತು. ಕನಿಷ್ಠ ವಿಮಾನದ ಭಾಗಗಳಾದರೂ ಸಿಗಬಹುದೇನೋ ಎಂಬ ಆಶಯ ಇತ್ತು. ಅವೂ ಸಿಗದೇ ಹೋಗಿದ್ದು ಇತ್ತೀಚೆಗೆ ಕೇಸ್'ಅನ್ನು ಕೂಡಾ ಮುಚ್ಚಬೇಕಾಯ್ತು. ಒಂದೇ ಸಮನೆ ಬಡಿಯೋ ಅಲೆಗಳ ವಿರುದ್ಧ ನೂರಿನ್ನೂರು ಅಡಿಗಳೂ ಹೋಗಲಾರದೆ ಹೋದಾಗ ಸಾಗರದ ಮಧ್ಯದಲ್ಲಿ ಸಿಲುಕಿದರೆ ಏನಾಗಬಹುದು ಎಂದು ಊಹಿಸಲೂ ಸಾಧ್ಯವಿಲ್ಲ.

ಇಂಥಾ ಸಾಗರದ ಹೊಟ್ಟೆಯಲ್ಲಿ ಎಂತೆಂಥಾ ಜಲಚರಗಳಿರಬಹುದು ಎಂದೊಮ್ಮೆ ಯೋಚಿಸಿದೆ. ನಾನು ಯೋಚಿಸಿದೆ ಅಷ್ಟೇ ಆದರೆ ಊಹಿಸಲು ಸಾಧ್ಯವಾಗಲಿಲ್ಲ. ಶಾರ್ಕ್, whale ಎಂಬ ಮಹಾನ್ ಜಲಚರಗಳು ಈ ಸಾಗರದಲ್ಲಿ ಎಲ್ಲಿ, ಎಷ್ಟಿವೆ ಎಂದೇ ಊಹಿಸಲಾಗದ್ದು. ಹಲವಾರು ವರ್ಷಗಳ ಹಿಂದೆ ತೆರೆಕಂಡ Jaws ಸಿನಿಮಾ ನೆನಪಾಯ್ತು. ಆ ಸಿನಿಮಾ ನೋಡುವಾಗಲೇ ದಿಗಿಲಾಗಿತ್ತು. ಒಮ್ಮೆ ದೊಡ್ಡದಾಗಿ ಬಾಯಿ ತೆರೆದರೆ ಒಂದು ಆನೆಯನ್ನು ನುಂಗುತ್ತೇನೋ ಎನ್ನಿಸುವಂಥಾ ಭೀಕರ ಪ್ರಾಣಿ ಇವು ಎನಿಸುತ್ತದೆ.

ಒಂದಷ್ಟು ಹೊತ್ತು ಆಟವಾಡಿದ ಮೇಲೆ ಬೀಚ್ ಮೇಲೆ ಒಂದು ವಾಕ್ ಹೊರಟೆವು. ಅಲೆಗಳು ಮುತ್ತಿಕ್ಕುತ್ತಾ ಸಾಗುವ ಹಾದಿಯಲ್ಲಿ ವಾಕ್ ಮಾಡುವ ಪರಿಯೇ ಚೆನ್ನ. ಹಾಗೆ ಸಾಗುತ್ತಿರಲಿ ಅಲ್ಲಲ್ಲೇ ರಂಧ್ರಗಳು. ಒಂದು ಕೋಲನ್ನು ನೆಡುವಂತೆ ಮಾಡಲಾಗಿರುವ ರಂಧ್ರ. ಏನಿರಬಹುದು ಅಂತ ಅಲ್ಲೇ ಕಾಯಲು ಕಂಡಿದ್ದು ಏಡಿಗಳು. ಓಡಿ ಬಂದು ಪುಸುಕ್ ಅಂತ ರಂಧ್ರದೊಳಗೆ ನುಗ್ಗುತ್ತೆ. ಆ ರಂಧ್ರವನ್ನು ಅವೇ ಮಾಡಿರುತ್ತೋ ಅಥವಾ ಮಾತ್ಯಾವುದಾದರೂ ಪ್ರಾಣಿ ಮಾಡಿರುತ್ತೋ ನನಗೆ ಗೊತ್ತಿಲ್ಲ.

ಹಾಗೆ ಮುಂದೆ ಸಾಗಲು ಒಂದು ಬೇಲಿ. ಇದರಿಂದ ಮುಂದೆ ಸಾಗುವಂತಿಲ್ಲ. wild life sanctuary ahead ಎಂಬ ಫಲಕ. ಆ ಬೇಲಿಯ ಆಚೆಗೆ ಕನಿಷ್ಠ ಎಂದರೂ ಇನ್ನೂರು seagull ಪಕ್ಷಿಗಳ ತಾಣ. ನಾವು ಬೇಲಿಯ ಬಳಿ ಹೋಗುತ್ತಿದ್ದಂತೆಯೇ ಒಮ್ಮೆಗೆ ರೆಕ್ಕೆ ಬಿಚ್ಚಿ ಹಾರಿ ಒಂದು ರೌಂಡ್ ಹೊಡೆದು ಮತ್ತೆ ಬಂದು ಕೂತವು. ಅತ್ಯದ್ಭುತವಾದ ದೃಶ್ಯ. ಅಲ್ಲೇ ಒಂದಷ್ಟು ಹೊತ್ತು ಕಳೆದು ವಾಪಸಾಗಲು ಅಲ್ಲಲ್ಲೇ ಒಂದಷ್ಟು ಪುಟ್ಟ ಪುಟ್ಟ ಪಕ್ಷಿಗಳು. ಪ್ರತಿ ಬಾರಿ ಅಲೆ ಬಂದು ವಾಪಸ್ಸಾಗಲು ಆ ಪಕ್ಷಿಗಳು ಗುಡುಗುಡು ಅಂತ ಓಡುತ್ತಾ ಬಂದು ಏನಾದರೂ ತಿನ್ನಲು ಸಿಗುತ್ತೇನೋ ನೋಡುತ್ತವೆ. ಮತ್ತೊಂದು ಅಲೆ ಅತೀ ಹತ್ತಿರಕ್ಕೆ ಬರೋ ತನಕ ಓಡಿ ನಂತರ ಪುರ್ ಅಂತ ಹಾರುವ ದೃಶ್ಯ ನಯನಮನೋಹರ.

ಸಾಗರದ ಒಂದು ಭಾಗ ನೋಡಲೇ ಇಷ್ಟು ವಿಶಾಲ, ಭಯಂಕರ, ಗೂಢ ಎಂದೆಲ್ಲಾ ಇರುವಾಗ ಸಾಗರ ದಾಟುವ ಕ್ರಿಯೆ ಒಂದು ಚಿಕ್ಕ ಕೆಲಸ ಎಂಬಂತೆ ಹನುಮಂತ ಮಾಡಿದನಂತೆ. ತಾನು ಇಷ್ಟು ಸಾಹಸಿ ಎಂದು ಅವನಿಗೆ ಅರಿವಿರಲಿಲ್ಲವಂತೆ. ತನ್ನ ಗರ್ಭದಲ್ಲಿ ಇಷ್ಟೆಲ್ಲಾ ವೈಶಿಷ್ಟ್ಯತೆ ಹೊಂದಿದ್ದರೂ ಸಾಗರ ತನ್ನ ಕೆಲಸ ತಾನು ಮಾಡಿಕೊಂಡಿರುತ್ತೆ. ಬೇಕಾದಾಗ ಸುಮ್ಮನಿರುತ್ತೆ. ಛೇಡಿಸಿದರೆ ತಕ್ಕ ಪಾಠ ಕಲಿಸುತ್ತೆ. ಪ್ರಕೃತಿಯಿಂದ ನಾವು ಇನ್ನೂ ಎಷ್ಟು ಕಲಿಯಬೇಕೋ ಗೊತ್ತಿಲ್ಲ. ಬಹುಶ: ಕಲಿಕೆಯೂ ಸಾಗರದಷ್ಟೇ ವಿಶಾಲ ಇರಬಹುದು.

English summary
Together we can face any challenges as deep as the ocean and as high as the sky. Life is like the ocean, it goes up and down. Srinath Bhalle shares his wonderful experience of visiting Sandbridge beach, Virginia, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X