• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಎಲ್ಲಕ್ಕೂ ಜಾಗ ಅಂತ ಒಂದಿದೆ

By ಶ್ರೀನಾಥ್ ಭಲ್ಲೆ
|
Google Oneindia Kannada News

ಇಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿರುವ ವಿಷಯ ಏನಪ್ಪಾ ಅಂದ್ರೆ 'ಎಲ್ಲಕ್ಕೂ ಜಾಗ ಅಂತ ಒಂದಿರಬೇಕು, ಎಲ್ಲವೂ ಆಯಾ ಜಾಗದಲ್ಲಿರಬೇಕು' ಅಂತ. ಆಂಗ್ಲದಲ್ಲೇ ಹೇಳುವುದಾದರೆ There should be a place for everything and everything should be in place. ನಮ್ಮದೇ ನಿತ್ಯ ಜೀವನದಲ್ಲಿ, ನಮ್ಮ ಸುತ್ತಲೇ ಇರುವ ಹಲವಾರು ಸಂಗತಿಗಳತ್ತ ದಿಟ್ಟಿಸಿ ನೋಡಿ ಮೇಲಿನ ಮಾತುಗಳನ್ನು ತಾಳೆ ಹಾಕಿ ನೋಡುವ.

ಮೂಗಿನ ಜಾಗದಲ್ಲಿ ಬಾಯಿ ಬಂದಿರಬೇಕೇ?
ಮೊದಲಿಗೆ ಭಗವಂತನ ಸೃಷ್ಟಿಯಾದ ಈ ದೇಹವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಒಂದು ಮುಂಜಾನೆ ಕಚೇರಿಗೆ ಹೋಗುವ ಮುನ್ನ ತಲೆಬಾಚಿಕೊಳ್ಳುವ ಅಂತ ಹೋದರೆ ತಲೆಯ ಮೇಲೆ ಬೆನ್ನು ಇದ್ದರೆ? ಅರೇ.. ಸ್ವಲ್ಪ ಹೊತ್ತಿಗೆ ಮುಂಚೆ ತಲೆಗೂದಲು ಇತ್ತಲ್ಲಾ ಈಗ ಬೆನ್ನು ಎಲ್ಲಿಂದಾ ಬಂತು ಅಂತ ಕನ್ನಡಿ ನೋಡಿಕೊಂಡರೆ ಮೂಗಿನ ಜಾಗದಲ್ಲಿ ಬಾಯಿ ಬಂದಿರಬೇಕೇ? ಭಗವಂತ ಸೃಷಿ ಮಾಡಿರುವಾಗ ದೇಹದ ಅಂಗಾಂಗಗಳು ಎಲ್ಲೆಲ್ಲಿ ಇರಬೇಕು ಅಂತ ಮಾಡಿದ್ದಾನೋ ಅವು ಅಲ್ಲಲ್ಲೇ ಇರಬೇಕೂ ಅಂತಲೂ ನಿಯಮಾವಳಿ ಹಾಕಿದ್ದ. ಹಾಗೆ ಇಲ್ಲದಿದ್ದರೆ, ಒಂದೊಂದು ದಿನ ಒಂದೊಂದು ಕಡೆ ಅಂಗಾಂಗಗಳು ಓಡಾಡಿಕೊಂಡು ಇರುತ್ತಿರುತ್ತಿತ್ತು. ಬಾಡಿ ಪಾರ್ಟ್‌ಗಳು moving ಪಾರ್ಟ್‌ಗಳಾಗಿರುತ್ತಿತ್ತು. ಇದಕ್ಕೇ ಹೇಳೋದು, ಎಲ್ಲಕ್ಕೂ ಒಂದೊಂದು ಜಾಗ ಅಂತ ಇರುತ್ತೆ, ಎಲ್ಲವೂ ಆಯಾ ಜಾಗದಲ್ಲಿ ಇರಬೇಕು ಅಂತ.

ಈ ಡೈಲಾಗ್ ಬಹಳ ಸೂಕ್ತವಾಗಿದೆ

ಈ ಸಂದರ್ಭದಲ್ಲಿ ನನಗೆ ನೆನಪಾಗುವುದೇ ದೊಡ್ಡಣ್ಣ ನಟಿಸಿರುವ ಚಿತ್ರವೊಂದರ ಅವರ ಡೈಲಾಗ್, 'ಯಾವ್ ಯಾವುದು ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲಿ ಇದ್ದರೆ ಮರ್ಯಾದೆ, ಗೌರವ,' ಅಂತ. ಮೇಲೆ ಹೇಳಿದ ಸನ್ನಿವೇಶಕ್ಕೆ ಈ ಡೈಲಾಗ್ ಬಹಳ ಸೂಕ್ತವಾಗಿದೆ ಎನ್ನಬಹುದು. ಇರಲಿ ಬಿಡಿ, ಈ ವಿಷಯ ಏಕೆ ಬಂತು ಎಂದರೆ ಈ ಸಿನಿಮಾ ನೋಡಿದ್ದಕ್ಕೆ ನೆನಪಾಯ್ತು ಅಂತಲ್ಲ ಬದಲಿಗೆ ಯಾರೋ ವಾಟ್ಸಾಪ್‌ನಲ್ಲಿ ಹಂಚಿಕೊಂಡ ಒಂದು ವಿಡಿಯೋ ನೋಡ್ತಿದ್ದೆ. ವಿಡಿಯೋದಲ್ಲಿ ನೋಡಿದ್ದಕ್ಕೆ ನನ್ನ ವ್ಯಾಖ್ಯಾನವನ್ನೂ ಸೇರಿಸಿದರೆ ಹೀಗಿದೆ ವಿಷಯ.

ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇರಬೇಕು
ಈ ವಿಡಿಯೋದಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ ಇರಬೇಕು ಎಂಬ ವಿಷಯ ಮಾತನಾಡುತ್ತಾ, ಹೊರಗಿನಿಂದ ಬಂದ ಮೇಲೆ ಗಾಡಿಯ ಕೀಯನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು. ಆ ಜಾಗದಲ್ಲಿ ಇಡಲು ಎಷ್ಟು ಸಮಯವಾಗುತ್ತದೋ ಅಷ್ಟೇ ಸಮಯ ಅಲ್ಲಿಂದ ವಾಪಸ್ ತೆಗೆದುಕೊಳ್ಳಲೂ ಬೇಕಾಗುತ್ತದೆ. ಇದರ ಬದಲಿಗೆ, ಮನೆಗೆ ಬಂದ ಮೇಲೆ ಆ ಕೀಯನ್ನು ಎಲ್ಲೋ ಒಂದು ಕಡೆ ಇಟ್ಟರೆ ಅಥವಾ ಎಸೆದರೆ, ಹಾಗೆ ಮಾಡಲೂ ಅಷ್ಟೇ ಸಮಯ ಬೇಕಾಗುತ್ತದೆ. ಆದರೆ ಕೀ ಬೇಕೂ ಎಂದಾಗ ಹುಡುಕುವಾಗ ಅದೆಷ್ಟು ಸಮಯ ಬೇಕಾಗುವುದೋ ಬಲ್ಲವರು ಯಾರು?. ಮೊದಲಿಗೆ ಕೀ ಇಡುವ ಕಡೆಯಿಂದ ಹುಡುಕಲು ಆರಂಭಿಸಿ ನಂತರ ಇಲ್ಲೇ ಇಟ್ಟಿದ್ದೆ ಅಂತ ಹುಡುಕಲು ಆರಂಭಿಸಿ, ಇಟ್ಟ ಕಡೆ ಇರೋದಿಲ್ಲ ಅಂತ ಮನೆಯವರ ಮೇಲೆಲ್ಲಾ ಹಾರಾಡಿ, ತಮ್ಮ ಬಿಪಿ ಮತ್ತು ಮನೆಯವರೆಲ್ಲರ ಬಿಪಿ ಏರಿಸಿ, ಕೊನೆಗೆ ಕೀ ಕಣ್ಣಿಗೆ ಬೀಳುವಷ್ಟರಲ್ಲಿ ಮನೆಮಂದಿಯೆಲ್ಲ ಒಬ್ಬರಿಗೊಬ್ಬರು ವೈರಿಗಳೇ ಆಗಿರುತ್ತಾರೆ. ಇದೆಲ್ಲಾ ಬೇಕಾ..?

ಮೊದಲಿಗೆ ಇದು ಶಿಸ್ತನ್ನು ಕಲಿಸುತ್ತದೆ
ವಿದ್ಯಾರ್ಥಿಗಳು 'ಎಲ್ಲಕ್ಕೂ ಒಂದು ಜಾಗ ಇರುತ್ತದೆ' ಎಂಬುದನ್ನು ಸರಿಯಾಗಿ ಪಾಲಿಸಬೇಕು. ಶಾಲೆಯಿಂದ ಮನೆಗೆ ಬಂದ ಮೇಲೆ ಬಿಚ್ಚಿಡುವ ಚಪ್ಪಲಿ ಅಥವಾ ಶೂಸ್, ಸಾಕ್ಸ್, ಯುನಿಫಾರ್ಮ್ ಬಟ್ಟೆ ಮತ್ತು ಸ್ಕೂಲ್ ಬ್ಯಾಗ್ ಎಲ್ಲವೂ ಆಯಾ ಸ್ಥಳಕ್ಕೆ ಸೇರಿಸುವುದನ್ನು ಕಲಿಯಬೇಕು. ಮೊದಲಿಗೆ ಇದು ಶಿಸ್ತನ್ನು ಕಲಿಸುತ್ತದೆ. ಎರಡನೆಯದ್ದು ಎಂದರೆ ಮರುದಿನ ಧಾವಂತದಲ್ಲಿ ಶೂಸ್ ಎಲ್ಲಿ ಹೋಯ್ತು? ಎಂದು ಹುಡುಕುವ ಗೋಜು ಇರುವುದಿಲ್ಲ. ಸಾಕ್ಸ್ ಒಗೆಯಲಿಕ್ಕೆ ಹಾಕಲಿಲ್ಲ ನೋಡು ಗಬ್ಬು ವಾಸನೆ ಬರ್ತಿದೆ ಅಂತ ಬೈಸಿಕೊಳ್ಳುವುದನ್ನು ತಪ್ಪಿಸಬಹುದು. ಪುಸ್ತಕಗಳು ಮತ್ತು ಬ್ಯಾಗು ಒಂದೆಡೆ ಇದ್ದಾಗ ಮರುದಿನಕ್ಕೆ ಯಾವ ಪುಸ್ತಕ ಬೇಕು ಬೇಡಾ ಎಂಬುದೆಲ್ಲಾ ಒಂದು ಲಭ್ಯ. "ಎಲ್ಲಕ್ಕೂ ಒಂದು ಜಾಗ ಅಂತ ಇರಬೇಕು" ಎಂಬ ನೀತಿಯನ್ನು ಇಲ್ಲಿ ಪಾಲಿಸದೇ ಇದ್ದರೆ, ಪುಸ್ತಕ ಇರುವ ಕಡೆ ಸಾಕ್ಸ್ ಇರಬಹುದು, ಶೂಸ್ ಇಡುವ ಕಡೆ ಯುನಿಫಾರ್ಮ್ ಶರ್ಟು ಸಿಗಬಹುದು ಹೀಗೆ.

ಸಮಯ ಖರ್ಚು ಮಾಡಿದರೆ ಮುಗೀತು
ಶಿಸ್ತು ಎಂಬುದು Investment ಇದ್ದ ಹಾಗೆ. ಮೊದಲಲ್ಲಿ ಕೊಂಚ ಹೆಚ್ಚು ಸಮಯ ವ್ಯಯ ಮಾಡಿದರೆ ಅದರಿಂದ ಆಗುವ ಗಳಿಕೆ ಬಹಳ ದೊಡ್ಡದು. ನಿಮ್ಮದೇ ಒಂದು wardrobe ಅನ್ನು ಉದಾಹರಣೆ ತೆಗೆದುಕೊಂಡರೂ ಈ ಮಾತು ಸಲ್ಲುತ್ತದೆ. ಯಾವ ಯಾವ ಬಟ್ಟೆ ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲಿ ಇದ್ದರೆ ಇಂಥಾ ಬಟ್ಟೆ ಬೇಕು ಎಂದರೆ ಕಣ್ಣುಮುಚ್ಚಿಕೊಂಡು wardrobeಗೆ ಸಾಗಿದರೂ ಅಲ್ಲಿ ಸಿಗಬೇಕು. ಒಮ್ಮೆ ಸಮಯ ಖರ್ಚು ಮಾಡಿದರೆ ಮುಗೀತು ಅಂತಲ್ಲ, ಬದಲಿಗೆ ಪ್ರತೀ ದಿನ ಈ ಶಿಸ್ತನ್ನು ಪಾಲಿಸಬೇಕು. ಒಂದು ಜಾಗದಿಂದ ತೆಗೆದುಕೊಂಡ ಬಟ್ಟೆ ಮತ್ತೆ ಅದೇ ಜಾಗ ಸೇರಬೇಕು.

folder ಮಾಡಿಕೊಂಡು ಸೇವ್ ಮಾಡಬೇಕು
ಇದಕ್ಕೆಲ್ಲಾ ಯಾರು ಸಮಯ ಕೊಡ್ತಾರೆ ಅಂತ ಅನ್ನಿಸಿದರೆ ಮತ್ತೊಂದು ಉದಾಹರಣೆ ಕೊಡ್ತೀನಿ. Computer ಮೇಲೆ ಕೆಲಸ ಮಾಡುವಾಗ ಒಂದು file ಅನ್ನು save ಮಾಡಬೇಕು ಅಂತ ಅಂದುಕೊಳ್ಳಿ. ಈ ಮಾಹಿತಿಯು ಒಂದು ಆಧಾರ್ ಕಾರ್ಡ್‌ನ ಕಾಪಿ ಆಗಿರಬಹುದು, ನೀವು ಬರೆದ ಲೇಖನ ಆಗಿರಬಹುದು ಅಥವಾ ಮತ್ತಿನ್ನೇನೋ ಆಗಿರಬಹುದು. Computer ಹೊಟ್ಟೆಯಲ್ಲಿ ಇದನ್ನು ಶೇಖರಿಸುವ ಮುನ್ನ ಅದಕ್ಕೊಂದು ಸೂಕ್ತ ಜಾಗ ಹುಡುಕಿ ಸೇರಿಸಬೇಕು ಅರ್ಥಾತ್ ಒಂದು folder ಮಾಡಿಕೊಂಡು ಸೇವ್ ಮಾಡಬೇಕು. ಶಿಸ್ತು ಪಾಲಿಸಿದರೆ ಆಧಾರ್ ಕಾರ್ಡಿನ ಕಾಪಿಗೆ ಸರಿಯಾಗಿ ನಾಮಕರಣ ಮಾಡಿ ಶೇಖರಿಸಬೇಕು. ಈ ರೀತಿ ಸೇವ್ ಮಾಡಿದಾಗ ಮುಂದೊಮ್ಮೆ ಹುಡುಕುವಾಗ ಸಲೀಸಾಗಿ ಸಿಗುತ್ತದೆ. ಇದರ ಬದಲಿಗೆ ಸೇವ್ ಮಾಡಿದಾಗ xyz ಅಂತ ಹೆಸರು ಕೊಟ್ಟು ಎಲ್ಲೋ ಒಂದು ಕಡೆ ಸುಮ್ಮನೆ ಇರಿಸಿ ಸೇವ್ ಮಾಡಿದರೆ, ಮುಂದೊಮ್ಮೆ ಈ ಫೈಲ್ ಬೇಕು ಎಂದರೆ ಹುಡುಕಲೇ ಅರ್ಧದಿನ ಬೇಕಾಗಬಹುದು.

ಎಲ್ಲದಕ್ಕೂ ಒಂದೊಂದು ಜಾಗ ಅಂತ ಇರುತ್ತದೆ
ಒಂದು ಮೆಡಿಕಲ್ ಸ್ಟೋರ್ಸ್ ಅಂದುಕೊಳ್ಳಿ. ಇಂಥಾ ಔಷಧಿ ಬೇಕು ಎಂದ ಕೂಡಲೇ ಅಂಗಡಿಯ ಒಂದೆಡೆ ಹೋಗಿ ಆತ ಅಥವಾ ಆಕೆ ತಂದುಕೊಡುತ್ತಾರೆ. ಅರ್ಥಾತ್ ಸಂಬಂಧಪಟ್ಟ ಔಷಧಿಗಳನ್ನು ಒಂದೆಡೆ ಇಟ್ಟಿರುತ್ತಾರೆ ಅಂತರ್ಥ. ಒಂದು ಮಳಿಗೆ ಅಂತ ತೆಗೆದುಕೊಂಡರೆ toothpaste, ಬ್ರಷ್ ಇತ್ಯಾದಿಗಳು ಒಂದೆಡೆ ಇರುತ್ತದೆ. ವಿವಿಧ ಸೋಪುಗಳು ಒಂದೆಡೆ ಹೀಗೆ ಎಲ್ಲದಕ್ಕೂ ಒಂದೊಂದು ಜಾಗ ಅಂತ ಇರುತ್ತದೆ. ದಿನದ ಕೊನೆಯಲ್ಲಿ ಗ್ರಾಹಕರು ಒಂದೆಡೆ ತೆಗೆದುಕೊಂಡು ಮತ್ತೊಂದೆಡೆ ಇಟ್ಟಿದ್ದರೆ ಅದನ್ನು ಆಯಾ ಜಾಗಕ್ಕೆ ಸೇರಿಸಿ ಇಡುತ್ತಾರೆ ಆ ಅಂಗಡಿಯ ಮಂದಿ. ಇಂಥಾ ಸನ್ನಿವೇಶ ಮಾಲುಗಳ ಅಂಗಡಿಗಳಲ್ಲಿ ಕಾಣಬಹುದು.

ಮನೆಯಲ್ಲೊಂದು ದೇವರಮನೆ ಅಂತ ಇರುತ್ತದೆ
ಎಲ್ಲಕ್ಕೂ ಒಂದೊಂದು ಜಾಗವಿರುತ್ತದೆ ಎಂಬ ಮಾತಿಗೆ ವಾಪಸ್ ಬಂದರೆ ಮನೆಯಲ್ಲೊಂದು ದೇವರಮನೆ ಅಂತ ಇರುತ್ತದೆ. ಊರಿನಲ್ಲಿ ದೇವಸ್ಥಾನ ಅಂತ ಇರುತ್ತದೆ. ವಾಹನ ಸಾಗಲು ಬೀದಿ ಇರುತ್ತದೆ. ಮಕ್ಕಳು ಆಡಲು ಎಂದೇ ಪಾರ್ಕ್ ಇರುತ್ತದೆ. ಬಸ್ಸುಗಳು ನಿಲ್ಲಲು ಒಂದು ನಿಲ್ದಾಣ ಇರುತ್ತದೆ. ಬಸ್ಸುಗಳ ಒಳಗೆ ಚಾಲಕನಿಗೇ ಅಂತ ಒಂದು ಜಾಗ ಇರುತ್ತದೆ. ಹೀಗೆ ನಮ್ಮ ಜೀವನದ ಪ್ರತೀ ಒಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಲ್ಲಕ್ಕೂ ಒಂದು ಜಾಗ ಅಂತಿದೆ ಮತ್ತು ಎಲ್ಲವೂ ಆಯಾ ಜಾಗದಲ್ಲಿ ಇರಬೇಕು. ಡ್ರೈವರ್ ಸೀಟು ಒಂದೆಡೆ ಇದ್ದು, steering ಇನ್ನೆಲ್ಲೂ ಬ್ರೇಕ್ ಮತ್ತೆಲ್ಲೋ ಇರಲಾಗುತ್ತದೆಯೇ?

ಪ್ರಕೃತಿಯನ್ನು ವಿಕೃತಿ ಮಾಡುತ್ತಿದ್ದಾರೆ
ಪ್ರಕೃತಿಯಲ್ಲಿರುವ ಎಷ್ಟೆಷ್ಟೋ ವಿಚಾರಗಳು ಈ ನಿಯಮವನ್ನು ಅರಿತೋ ಅರಿಯದೆಯೋ ಒಟ್ಟಿನಲ್ಲಿ ಪ್ರಶ್ನಿಸದೇ ಪಾಲಿಸಿಕೊಂಡೇ ಬಂದಿವೆ. ಅದೇಕೋ ಗೊತ್ತಿಲ್ಲ, ಪ್ರಶ್ನಿಸದೇ ಒಪ್ಪಬಾರದು ಎಂಬ ನೀತಿಯನ್ನು ಇತ್ತಂಡವಾದಿಗಳು ಬೇರೊಂದು ರೀತಿಯಲ್ಲಿ ಅರ್ಥೈಸಿಕೊಂಡು ನಿಯಮವನ್ನು ಪಾಲಿಸದೇ ತಮ್ಮದೇ ಹಾದಿ ಹಿಡಿದು, ಪ್ರಕೃತಿಯನ್ನು ವಿಕೃತಿ ಮಾಡಿ ಅಪಾಯದ ಅಂಚಿಗೆ ತಳ್ಳುತ್ತಿದ್ದಾರೆ. ಸಂಸ್ಕೃತಿಯನ್ನು ವಿನಾಶದ ಅಂಚಿಗೆ ತಳ್ಳುತ್ತಲೇ ಇದ್ದಾರೆ. ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂಬ ಇತ್ತಂಡವಾದಿ ಕೋಣಗಳ ಮೂಗಿಗೆ ದಾರ ಕಟ್ಟಿ ಎಳೆಯುವವರಾರು?

English summary
Srinath Bhalle Column: There should be a place for everything and everything should be in place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X