• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ನೀವು ಮೂಗು ಮುರಿಸಿಕೊಂಡಿದ್ದೀರಾ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಇದೇನು ತ್ರೇತಾಯುಗವೇ ಮೂಗು ಮುರಿಸಿಕೊಳ್ಳಲು? ಪರಪುರುಷನ ಮೇಲೆ ಕಣ್ ಹಾಕಿದ್ದಕ್ಕೆ ಕಣ್ ಹೋಗಬೇಕಿತ್ತು, ಬದಲಿಗೆ ಮೂಗು, ಕಿವಿ ಕತ್ತರಿಸಿದ್ದು ಯಾಕೆ ಅಂತ ಪ್ರಶ್ನೆ ಕೇಳುತ್ತಲೇ ಇಂದಿನ ಮಾತು ಆರಂಭಿಸುವಾ. ನಿಮಗೇನಾದರೂ ಗೊತ್ತೇ?

ತಾನು ಸುಂದರಿ ತನ್ನನ್ನು ವರಿಸು ಎಂದು ದಂಬಾಲು ಬಿದ್ದವಳು ಶೂರ್ಪನಖಿ. ರಾಮನು ತಾನು ಏಕಪತ್ನಿವ್ರತಸ್ಥ ಎಂದು ಹೇಳಿ ಅವಳನ್ನು ಲಕ್ಷ್ಮಣನ ಬಳಿ ಕಳುಹಿಸಿದರೆ ಅವನೂ ಅವಳನ್ನು ತಿರಸ್ಕರಿಸಿದ. ಇದರಿಂದ ಕ್ರೋಧಗೊಂಡ ರಕ್ಕಸ ನಾರಿ ಸೀತೆಯ ಮೇಲೆ ಆಕ್ರಮಣ ಮಾಡಲು ಹೊರಟಾಗ ಲಕ್ಷ್ಮಣನು ಆಕೆಯ ಮೂಗು- ಕಿವಿಗಳನ್ನು ಕತ್ತರಿಸಿದ. ತಾಯಿ ಸಮಾನಳಾದ ಅತ್ತಿಗೆಯನ್ನು ಘಾಸಿಗೊಳಿಸಲು ಹೊರಟಾಗ ಲಕ್ಷ್ಮಣನಿಗೆ ಸಹಜವಾಗಿ ಸಿಟ್ಟು ಬಂದಿತ್ತು. ಲಕ್ಷ್ಮಣನನ್ನು ಮಾನವನಾಗಿ ನೋಡಿದಾಗ, ಕ್ರೋಧದಲ್ಲಿ ಏನು ಮಾಡಬಲ್ಲರು ಎಂಬುದೂ ಇಲ್ಲಿ ಅರಿಯಬಹುದು. ಆದರೆ ವಿಷಯ ಇದಲ್ಲ.

ಮೂಗಿಗೆ ನತ್ತನ್ನು ಹಾಕಿಕೊಂಡರೆ ಆದರೆ ಗತ್ತೇ ಬೇರೆ
ಮೂಗು ಮತ್ತು ಕಿವಿಗಳು ಸೌಂದರ್ಯ ವರ್ಧಕ. ಕಿವಿಗೆ ಓಲೆ ಧರಿಸದೇ ಇದ್ದಾಗ ಒಂದು ಹೆಣ್ಣಿನ ಸೌಂದರ್ಯ ಕ್ಷೀಣಿಸಿದಂತೆ ಕಾಣುತ್ತದೆ. ಮೂಗಿನ ಬದಿಯಲ್ಲಿ ಚುಚ್ಚಿಸಿಕೊಂಡವರು ನತ್ತನ್ನು ಹಾಕಿಕೊಂಡರೆ ಆದರೆ ಗತ್ತೇ ಬೇರೆ. ಕೆಲವರು ಚುಚ್ಚಿಸಿಕೊಂಡಿಲ್ಲದೆ ಇರುವಾಗಲೂ ಪ್ರೆಸ್ ನತ್ತು ಹಾಕಿಕೊಳ್ಳುತ್ತಾರೆ. ದಿನನಿತ್ಯದಲ್ಲಿ ನತ್ತನ್ನು ಹಾಕಿಕೊಳ್ಳದೇ ವಿಶೇಷ ಸಂದರ್ಭದಲ್ಲಿ ಹಾಕಿಕೊಂಡಾಗ ಸಂದರ್ಭದ ಜೊತೆಗೆ ಇವರೂ ವಿಶೇಷವಾಗಿಯೇ ಕಾಣುತ್ತಾರೆ. ಒಟ್ಟಾರೆ ಈ ಮೂಗಿನ ನತ್ತು ಸಿರಿಯ ಶೋಭೆ ಎಂದು ಹೇಳುವಾ ಎನ್ನುವಾಗಲೇ ದಾಸರೇಕೆ ನೆನಪಾದರು?

ಶ್ರೀನಿವಾಸ ನಾಯಕನ ಧರ್ಮಪತ್ನಿ ಸರಸ್ವತಿಬಾಯಿ. ಪರಮಾತ್ಮನು ಈ ಜಿಪುಣ ನವಕೋಟಿ ನಾರಾಯಣನಲ್ಲಿ ಅರಿವು ಮೂಡಿಸುವ ಸಲುವಾಗಿ ಸಾಲ ಕೇಳಲು ಬರುವ ಕಥೆ ಎಲ್ಲರಿಗೂ ಗೊತ್ತೇ ಇದೆ. ಬಂಗಾರದ ಮೂಗಿನ ನತ್ತು ಒಬ್ಬ ಮಹಾ ಜಿಪುಣ ಸಿರಿವಂತನನ್ನು, ಇಂದು ಮನೆಮಾತಾಗಿರುವ ದಾಸರನ್ನು ನೀಡಿದೆ ಎಂದರೆ ನತ್ತಿನ ಗಮ್ಮತ್ತು ನೀವೇ ಊಹಿಸಿ.

ಬಹುಶಃ ಬಾಲಿವುಡ್‌ನಲ್ಲಿ ಹೀರೋಯಿನ್‌ಗಳೇ ಇರುವುದಿಲ್ಲ
ಇಂಥಾ ಸುಂದರ ಮೂಗನ್ನು ಕತ್ತರಿಸಿದರೆ, ಎಂಥಾ ಸುಂದರಿಯೂ ಕ್ಷಣದಲ್ಲೇ ಕುರೂಪಿಯಾಗಿ ಕಾಣಿಸುತ್ತಾಳೆ ಅಲ್ಲವೇ? ಪರಪುರುಷನ ಮೇಲೆ ಕಣ್ಣು ಹಾಕಿದ ಒಂದು ಸೌಂದರ್ಯ, ಮತ್ತೋರ್ವ ಸುಂದರ ಪರನಾರಿಯ ಮೇಲೆ ಮೋಹಗೊಳ್ಳುವಂತೆ ಹಾದಿ ಹಾಕಿಕೊಟ್ಟಿದ್ದೇ ರಾಮಾಯಣ. ಎರಡೂ ಸನ್ನಿವೇಶದಲ್ಲಿ ಕಣ್ಣು ಹಾಕಿದವರಿಗೆ ಕಿವಿ, ಮೂಗು ಮತ್ತು ತಲೆಗಳು ಹೋಯ್ತು. ಅದು ತ್ರೇತಾಯುಗ ಬಿಡಿ. ಇಂದು, ಪರಪುರುಷನ ಮೇಲೆ ಕಣ್ಣು ಹಾಕಿದವರಿಗೆ ಲಕ್ಷ್ಮಣ ಶಿಕ್ಷೆ ಕೊಟ್ಟರೆ, ಬಹುಶಃ ಬಾಲಿವುಡ್‌ನಲ್ಲಿ ಹೀರೋಯಿನ್‌ಗಳೇ ಇರುವುದಿಲ್ಲ. "ಲಕ್ಷ್ಮಣನಿಂದ ಲಕ್ಷಣ ಕಳೆದುಕೊಂಡವರು' ಅಂತ ಬ್ರೇಕಿಂಗ್ ನ್ಯೂಸ್ ಆಗುತ್ತಿದ್ದರು.

ಹೀಗಾಗಿ ಈ ಮೂಗು ಸ್ವಲ್ಪ ರಿಸ್ಕಿ ಅಂತಾಯ್ತು. ಒಂದು ಜಿರಲೆಯು ತನ್ನ ಮೀಸೆಯಿಂದ ವಾತಾವರಣ ಹೇಗೆ ಎಂದು ಅರಿತು ಮುನ್ನುಗ್ಗುವಂತೆ ಈ ಮೂಗು. ಹೇಗೆ ಸಂದುಗೊಂದಿನಲ್ಲಿ ಆಟೋರಿಕ್ಷಾದ ಮುಂದಿನ ಚಕ್ರ ನುಗ್ಗಿದರೆ ಸಾಕು, ಅದರ ಇಡೀ ದೇಹವೇ ನುಗ್ಗಬಲ್ಲದೋ ಹಾಗೆ ಈ ಮೂಗು. ಏನೀ ಸಂಬಂಧ ಎಂದಿರಾ? ಬಹಳಾ ಸುಲಭ. ಎಲ್ಲರದ್ದೂ ಒಂದು personal space ಅಂತ ಇರುತ್ತದೆ. ಅಲ್ಲಿ ನೀವು ನಿಮ್ಮೊಂದಿಗೆ ಇರುವ ಸನ್ನಿವೇಶ. ಆ ಜಾಗದಲ್ಲಿ ನಿಮ್ಮನ್ನು ಬಿಟ್ಟರೆ ಬೇರೊಬ್ಬರಿಲ್ಲ ಎಂದಾಗ ಅಲ್ಲೇ ನಿಮ್ಮ ಬೇಗುದಿ, ಅಳು ಇತ್ಯಾದಿಗಳು ಚದುರಿ ಚೆಲ್ಲಿರುವುದು. ಕೆಲವೊಮ್ಮೆ ತಲೆ ಕೆಟ್ಟು ಮೊಸರಾದಾಗ ಏಕಾಂತ ಬೇಕು ಎನಿಸಿದಾಗ, ನೀವು ನಿಮ್ಮೊಂದಿಗೆ ಕಳೆಯುವ ತಾಣವೇ ಈ personal ಸ್ಪೇಸ್.

ಲಕ್ಷ್ಮಣರೇಖೆ ದಾಟಿದಾಗ ಅಪಹರಣ
ಈಗೇಕೆ ಈ ಮಾತು ಎಂದರೆ, ಮೇಲೆ ಹೇಳಿದ ವಾತಾವರಣ ಅಥವಾ ಸಂದುಗೊಂದು ಎಂಬುದು ನಿಮ್ಮದೇ ಜೀವನ ಎಂದುಕೊಳ್ಳಿ. ಇನ್ನೆಷ್ಟೇ ಉತ್ತಮ ಬಾಂಧವ್ಯ ಎನಿಸಿದರೂ ಈ ಏಕಾಂತ ಬೀಡಿಗೆ ಯಾರನ್ನೂ ಬಿಟ್ಟುಕೊಳ್ಳಬಾರದು. ಲಕ್ಷ್ಮಣರೇಖೆ ದಾಟಿದಾಗ ಅಪಹರಣ. ಲಕ್ಷ್ಮಣರೇಖೆಯೊಳಗೆ ಇತರರು ಅಡಿಯಿಟ್ಟಾಗ ಸ್ವಾತಂತ್ರ್ಯಹರಣ. ಬಾಂಧವ್ಯ ಚೆನ್ನಾಗಿರುವ ತನಕ ಎಲ್ಲವೂ ಚೆನ್ನ. ಕೆಲವರು ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡಾಗ ಅವರಾಡಿಸುವ ಬೊಂಬೆಯಾಗುವ ಸಂಭವನೀಯತೆ ಹೆಚ್ಚು.

ನಿಮ್ಮ ಜೀವನದ ಪ್ರತೀ ಹಂತದಲ್ಲೂ ಅವರು ಮೂಗು ತೂರಿಸಲು ಆರಂಭಿಸಿ, ಮೇಲುಗೈ ಸಾಧಿಸಿದರು ಎಂದರೆ ಅಲ್ಲಿಗೆ ಬಾಂಧವ್ಯ ಮುಗಿದು ಅಧಿಕಾರ ಶುರುವಾಗಿರುತ್ತದೆ. ಎಲ್ಲಾ ಚೆನ್ನಾಗಿರುವಾಗ, ದೇಹದ ಮೇಲಿನ ಮಚ್ಚೆಯ ವಿಷಯವನ್ನೂ ಅರುಹಿರುವಾಗ, ನಿಮ್ಮದು ಎಂಬುದು ಏನೂ ಇರುವುದೇ ಇಲ್ಲ ಅಲ್ಲವೇ? ಮೂಗು ತೂರಿಸಲು ಬಂದವಳ ಮೂಗನ್ನೇ ತಾನೇ ಕತ್ತರಿಸಿದ್ದು ಆ ಲಕ್ಷ್ಮಣ.

ಲಕ್ಷ್ಮಣನಿಗೆ ಮೂಗಿನ ಮೇಲೆಯೇ ಕೋಪ
ಲಕ್ಷ್ಮಣನೇ ಏಕೆ ಮೂಗನ್ನು ಕತ್ತರಿಸಿದ್ದು? ರಾಮ ಶಾಂತಮೂರ್ತಿ. ಲಕ್ಷ್ಮಣನಿಗೆ ಮೂಗಿನ ಮೇಲೆಯೇ ಕೋಪ. ಬಾಯಿಯ ಮೇಲೆ ಮೂಗಿದೆ ಎಂದರೆ ತಪ್ಪು, ಮೂಗಿನ ಕೆಳಗೆ ಬಾಯಿ ಇದೆ ಎಂದರೂ ಸಿಟ್ಟು. ಸದಾ ಅದೇನೋ ಸಿಟ್ಟು ಸೆಡವು. ಇಂಥವರು ಕ್ರೋಧಗೊಂಡಾಗ ಮುಖ ಕೆಂಪಾಗಬಹುದು. ಕೆಂಪು ಕಾಣದ ಮುಖದಲ್ಲಿ ಮೂಗಿನ ಹೊಳ್ಳೆಗಳಂತೂ ಸಿಟ್ಟು ಹೇಳುತ್ತದೆ. ವೃಷಭಗಳು ಸಿಟ್ಟಿನಿಂದ ತೀಕ್ಷ್ಣದೃಷಿಯನ್ನು ಬೀರುತ್ತಾ ಇರುವ ಚಿತ್ರಣ ಮೂಡಿಸಿಕೊಂಡಾಗ ಅದರ ಮೂಗಿನ ಹೊಳ್ಳೆಗಳಿಂದ ರಭಸವಾದ ಗಾಳಿಯು ಹೊರಬರುವುದನ್ನು ಊಹಿಸಿಕೊಳ್ಳಬಹುದು. ಆ ಗಾಳಿಯನ್ನೇ ಕೆಲವು ಬಾರಿ ಹೊಗೆ ಮೂಡಿರುವಂತೆ ಬಿಂಬಿಸಿದಾಗ ಅದು ಬಿಸಿಗಾಳಿ ಎಂದೂ ಅರ್ಥೈಸಿಕೊಳ್ಳಬಹುದು. ನಿಜ ತಾನೇ? ಸಿಟ್ಟುಗೊಂಡಾಗ ಮೈ ಬಿಸಿಯಾಗುತ್ತದೆ. ಆಗ ದೇಹದಿಂದ ಹೊರ ಬರುವ ತಂಗಾಳಿಯೂ ಬಿಸಿಯೇ ಆಗಿಬಿಡುತ್ತದೆ.

ಬೇರೊಬ್ಬರ ವಿಷಯದಲ್ಲಿ ಮೂಗು ತೂರಿಸುವ ಮಂದಿ, ಅವರೊಂದಿಗೆ ಒಂದು ಮಾತನ್ನಾಡಿದರೆ ಬಹುಶಃ ಇವರ ವಿಷಯವನ್ನು ಮತ್ತೊಬ್ಬರ ಮುಂದೆಯೂ ಬಣ್ಣಬಣ್ಣವಾಗಿ ನೂರು ಮಾತುಗಳನ್ನು ಆಡುತ್ತಾರೆ ಎಂಬುದು ನಿಜವೇ ತಾನೇ? ಇದು, ಮಾತನ್ನು ಆಡುವವರ ಬಗ್ಗೆಯಾದರೆ, ಮಾತನ್ನೇ ಆಡಲು ಬಾರದವರು ಬಹುಶಃ ಇಂಥಾ ವಿಷಯಕ್ಕೆ ತಮ್ಮ ಮೂಗು ತೋರಿಸುವುದಿಲ್ಲ ಎಂದುಕೊಳ್ಳಬಹುದೇ? ಮೂಗನ್ನು ತೂರಿಸದವರು ಮೂಗರು ಎನ್ನಬಹುದೇ? ಮತ್ತೊಬ್ಬರ ಜೀವನದಲ್ಲಿ ಮೂಗು ತೂರಿಸಿ ಮಾತನಾಡದಂತೆ ಮೂಗನನ್ನು ಮಾಡಯ್ಯ ತಂದೆ ಅಂತ ಕೂಡಲಸಂಗಮನನ್ನು ಕೇಳಬಹುದೇ?

ಮೂಗಿಗೆ ಕೆಟ್ಟ ವಾಸನೆ ಅಥವಾ ಸುವಾಸನೆ ಎಂಬ ಭೇದವಿಲ್ಲ
ಮೂಗಿನ ಕೆಲಸವೇ ವಾಸನೆಯನ್ನು ತೆಗೆದುಕೊಳ್ಳುವುದು. ಇಂಥಾ ಮೂಗಿಗೆ ಕೆಟ್ಟ ವಾಸನೆ ಅಥವಾ ಸುವಾಸನೆ ಎಂಬ ಭೇದವೇ ಇಲ್ಲ. ಕೆಟ್ಟದ್ದು, ಒಳ್ಳೆಯದು ಎಂಬ ಅರಿವೇ ಇಲ್ಲದ ಮೂಗಿಗೆ ಇಂಥವನ್ನು ಸ್ವೀಕರಿಸುವ, ಇಂಥವನ್ನು ತ್ಯಜಿಸುವ ಬುದ್ದಿ ಕೊಟ್ಟು, ಕೈಯಿಂದ ಆ ಕೆಲಸ ಮಾಡಿಸುತ್ತದೆ. ಕೆಲವೊಮ್ಮೆ ಉಸಿರನ್ನು ಹಿಡಿದಿಟ್ಟುಕೊಳ್ಳುವಂತೆಯೂ ಬುದ್ದಿ ಕೊಡುತ್ತದೆ. ಈ ಬುದ್ದಿಯದು ಸಖತ್ ಬುದ್ದಿ. ಎಲ್ಲಾ options ಕೊಡುತ್ತದೆ. ಆದರೆ ಹೇಗೆ ಬಳಸಿಕೊಳ್ಳಬೇಕು ಎಂಬ ಬುದ್ದಿಯನ್ನೂ ಕೊಡುತ್ತದೆ. ಯಾವುದೋ ಒಂದು ದುರ್ವಾಸನೆ ಹತ್ತಾರು ನಿಮಿಷಗಳ ಕಾಲ ನಮ್ಮನ್ನು ಸುತ್ತುವರೆದೇ ಇರುತ್ತದೆ ಎಂದಾಗ ಉಸಿರು ಬಿಗಿ ಹಿಡಿದಿಡಲಾಗುತ್ತದೆಯೇ? ಹಾಗೆ ಮಾಡಿದಲ್ಲಿ ನಾವು ದುರ್ನಾತದೊಂದಿಗೆ ಲೀನ.

Pinocchio ಅಂತ ಒಂದು ಡಿಸ್ನಿಯವರ ಕಾಲ್ಪನಿಕ ಪಾತ್ರವಿದೆ. ಈ ಹೆಸರಿನ ಹುಡುಗನೊಬ್ಬ ಪ್ರತೀ ಬಾರಿ ಸುಳ್ಳು ಹೇಳಿದಾಗಲೂ ಅವನ ಮೂಗು ಉದ್ದವಾಗುತ್ತಲೇ ಹೋಗುತ್ತದೆ. ನಿಜವ ನುಡಿದಾಗ ಸ್ವ-sizeಗೆ ವಾಪಸ್ ಬರುತ್ತದೆ. 1940ರಲ್ಲಿ ಎರಡೂವರೆ ಮಿಲಿಯನ್ ಡಾಲರ್ ದುಡ್ಡು ಹಾಕಿ ಮಾಡಿದ ಸಿನಿಮಾ ಅಂದು ೧೬೦ ಮಿಲಿಯನ್ ದುಡಿಯಿತಂತೆ. ಸುಳ್ಳು ದುಡ್ಡು ಮಾಡಿತಾ ಎನ್ನಬೇಡಿ? ನಿಜ ನುಡಿದಿದ್ದಕ್ಕೆ ದುಡ್ಡು ಮಾಡಿತು ಎನ್ನುವ.

ಕನ್ನಡಕವನ್ನು ಆನಿಸಿ ಇಟ್ಟುಕೊಳ್ಳಲು ಮೂಗು ಬಳಕೆ
ಇಂದಿನ ಯುಗದಲ್ಲಿ ಮೂಗು ಇದೆ ಎಂದೇ ಕನ್ನಡಕವನ್ನು ಆನಿಸಿ ಇಟ್ಟುಕೊಳ್ಳಲು ಬಳಸಿಕೊಳ್ಳಲಾಗಿದೆ. ಕೆಲವರ ಮೂಗು ಸಕತ್ ಶಾರ್ಪ್ ಅಂದ್ರೆ ಚೂಪು ಅಂತಲ್ಲ. ಒಂದಿನಿತು ಸುವಾಸನೆಯಲ್ಲೇ ಇಂಥದ್ದೇ ಅಡುಗೆ ಅಥವಾ ಪದಾರ್ಥ ಎಂದು ಗುರುತಿಸಬಲ್ಲವರು. ಇಂಥವರಿಗೆ ಹೈ-ಟೆಕ್ ಭಾಷೆಯಲ್ಲಿ ಶ್ವಾನನಾಸಿಕ ಎನ್ನಬಹುದು. ಸಿಂಪಲ್ ಆಗಿ ನಾಯಿ ಮೂಗು ಅಂತಾರೆ.

ಮೂಗುಗಳಲ್ಲಿ ಹಲವು ವಿಧ. ಸಿಲಬಸ್ revision ಬೇಕೇ? ಮೊಂಡ ಮೂಗು, ನೀಳ ನಾಸಿಕ, ನತ್ತು ಮೂಗು, ಚುಚ್ಚಿದ ಮೂಗು, ಪ್ರೆಸ್ ನತ್ತು ಮೂಗು, ಗುಂಡು ಮೂಗು, ಶ್ವಾನನಾಸಿಕ, ಒಗ್ಗರಣೆ ಸೀದಿದ್ದರೂ ವಾಸನೆ ಹೀರದ ನಾಸಿಕ, ಲೀಕ್ ಆದ ಸಿಲಿಂಡರ್ ಗ್ಯಾಸ್ ಅನ್ನು ಥಟ್ ಎಂದು ಗುರುತಿಸುವ ನಾಸಿಕ ಹೀಗೆ. ಇಷ್ಟೆಲ್ಲಾ ಅರಿವು ಮೂಡಿಸಿಕೊಂಡ ನಿಮ್ಮ ಮೂಗು ಎಂಥದ್ದು?

English summary
Srinath Bhalle Column: efficts of Interfering On Someone Else's Life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion