ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ

|
Google Oneindia Kannada News

ಕಾಲವೊಂದಿತ್ತು, ಮನೆಯ ತೊಲೆಯಿಂದ ಅಥವಾ ತೂಗಿ ಬಿಟ್ಟ ಹುಕ್ ಒಂದಕ್ಕೆ ದಪ್ಪನೆಯ ಬಟ್ಟೆಯನ್ನು ಕಟ್ಟಿ ಜೋಲಿ ಕಟ್ಟುತ್ತಿದ್ದರು. ನಮ್ಮಲ್ಲಿ ಜೋ೦ಡ್ಲಿ ಅಂತ ಇದಕ್ಕೆ ಹೇಳುತ್ತಿದ್ದರು. ಇದೂ ಬಳಕೆಯಲ್ಲಿದೆಯೋ ಅಥವಾ ಅಪಭ್ರಂಶವೋ ಗೊತ್ತಿಲ್ಲ. ಮುಖ್ಯವಾಗಿ ಕೂಸನ್ನು ಮಲಗಿಸುವಾಗ ಬಳಸುತ್ತಿದ್ದ ಸಾಧನ. ಕೂಸನ್ನು ಅಲ್ಲಿ ಮಲಗಿಸಿ ತೂಗಿದಾಗ, ಬೆಚ್ಚಗಿನ ವಾತಾವರಣದಲ್ಲಿ ಒಂದೆರಡು ಘಂಟೆಗಳ ಕಾಲ ಆರಾಮ ನಿದ್ರೆ ಮಾಡುತ್ತಿತ್ತು. ಕೆಲವೊಮ್ಮೆ ಮಗುವನ್ನು ಮಲಗಿಸುವ ಭರದಲ್ಲಿ, ಕೂಸನ್ನು ಮಲಗಿಸಿ ಹತ್ತು ನಿಮಿಷಗಳ ಕಾಲ ತೂಗಿ ಆಮೇಲೆ ಒಮ್ಮೆ ಜೋಲಿಯಲ್ಲಿ ಇಣುಕಿ ನೋಡಿದಾಗ, ಅದು ಕಾಸಗಲ ಕಣ್ಣು ಬಿಟ್ಟುಕೊಂಡು ಆನಂದವಾಗಿ ಮಲಗಿರುವುದನ್ನು ನೋಡಿದಾಗ ಕೋಪ ಬರುತ್ತಿದ್ದುದು ಬಹಳ ಕಡಿಮೆ. ಆದರೆ ಪ್ರೀತಿಯಿಂದ ಬಯ್ಯೋದು ಉಂಟು. ಕೆಲವೊಮ್ಮೆ ಕೂಸನ್ನು ತೂಗುವ ಭರದಲ್ಲಿ, ರೂಮು ಚಿಕ್ಕದಾಗಿದ್ದರೆ, ಗೋಡೆಗೋ ಅಥವಾ ಬಾಗಿಲಿಗೋ ಬಡಿದು ಶಂಖನಾದ ಮೂಡುತ್ತಿದ್ದುದೂ ಉಂಟು.

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ಜೋಲಿಯಲ್ಲಿ ಅಥವಾ ತೊಟ್ಟಿಲಲ್ಲಿ ಮಲಗಿಸುವಾಗ ತಾಯಿಯಾದವಳು ಸಣ್ಣಗೆ ಹಾಡನ್ನು ಹೇಳುವುದನ್ನೇ ಜೋಗುಳ ಅಥವಾ lullaby ಅನ್ನೋದು. 'ಯಾಕಳುವೆ ಎಲೆ ರಂಗ, ಬೇಕಾದ್ದು ನಿನಗಿದೆ, ನಾಕೆಮ್ಮೆ ಕರೆದಾ ನೊರೆ ಹಾಲು' ಅಥವಾ 'ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು ಮಗುವೇ ಜೋ ಜೋ ಜೋ ಜೋ' ಹಾಡುಗಳಲ್ಲಿ ಮುಖ್ಯವಾಗಿ ಇರುವುದೇ 'ಜೋ' ಎಂಬ ದೀರ್ಘಾಕ್ಷರ. ನಿಧಾನಗತಿಯಲ್ಲಿ ಜೋ ಎಂದು ದೀರ್ಘವಾಗಿ ಹಾಡಿದಾಗ ಮಗುವಷ್ಟೇ ಅಲ್ಲದೆ, ಕೇಳುವ ಬೇರೆಯವರಿಗೂ ನಿದ್ದೆ ಬರುವಂಥಾ ಸವಿ ಈ "ಜೋ'ನಲ್ಲಿದ್ದೆ. ಅದರಲ್ಲೂ 'ಜೋ'ಎಂಬುದನ್ನು ಹಲವು variationನಲ್ಲಿ ಹಾಡಿದಾಗಲಂತೂ ನಿದ್ದೆ ಖಚಿತ.

ಒತ್ತಡ ಭರಿತ ಮನಕ್ಕೂ ನಿದ್ರೆ ಬೇಕು
ಟೆನ್ಷನ್ ಇಲ್ಲದ ಜೀವನದಲ್ಲಿ 'ಜೋ ಜೋ' ಹಾಡಿ ನಿದ್ರಿಸುವ ಪರಿಯು ಒತ್ತಡ ಭರಿತ ಮನಕ್ಕೂ ಬೇಕು ಎಂದನಿಸುವುದಿಲ್ಲವೇ? ಟೆನ್ಷನ್ ಭರಿತ ಮನದ ದೇಹವನ್ನು ಒಂದು ಜೋಲಿಯಲ್ಲಿ ಹಾಕಿ ತೂಗಿಬಿಟ್ಟು ಒಂದು ಲಾಲಿ ಹಾಡನ್ನು ಹಾಡಿ ಅಥವಾ ಯಾವುದಾದರೂ ಪ್ಲೇಯರಿನಲ್ಲಿ ಓಡಿಸಿದಾಗ ನೆಮ್ಮದಿಯ ನಿದ್ರೆ ಬಾರದೇ ಇದ್ದೀತೆ? ಇಂಥಾ ಒಂದು ಆವಿಷ್ಕಾರ ಆಗಲೇಬೇಕು ಎಂಬ ಮಾತೇನು ಬೇಡಾ ಬಿಡಿ. ಮುಂದಿನ ವಿಷಯ ಹೇಳಲು ಪೀಠಿಕೆ ಹಾಕಿದೆ ಅಷ್ಟೇ. ದೊಡ್ಡ ದೇಹವನ್ನು ಉದ್ದಕ್ಕೆ ಇಳಿಬಿಟ್ಟ ಜೋಲಿಯಲ್ಲಿ ಹಾಕಲು ಆಗಲಾರದು. ಇಂದಿನ ಅಪಾರ್ಟ್ಮೆಂಟ್ ಮನೆಯೇ ಆದರೆ ಇಡೀ ಬಿಲ್ಡಿಂಗ್ ಕೆಳಕ್ಕೆ ಬಂದೀತು. ಹಾಗೆಂದೇ ಅದನ್ನು ಕೊಂಚ ಅಗಲವಾಗಿ ಕಟ್ಟಿ ಅದರಲ್ಲಿ ಮಲಗಿದಾಗ ಖಂಡಿತ ಅಲ್ಲೊಂದು ಹಿತವಿದೆ. ದೊಡ್ಡವರ ಜೋಲಿಯನ್ನು Hammock ಎನ್ನುತ್ತಾರೆ, ಅಲ್ಲವೇ?

Srinath Bhalle Column

ಮಕ್ಕಳಿಗೂ ನಿರಾಳ ಮನಸ್ಸೇ ಅಲ್ಲವೇ
ಮಗುವನ್ನು ಜೋಲಿಯಲ್ಲಿ ಮಲಗಿಸಿ ನಿದ್ರೆ ಮಾಡಿಸುವ ಇರಾದೆ ಇಲ್ಲದಿರುವಾಗ ಕೆಲವೊಮ್ಮೆ ಕೂಸಿನ ಕಾಲುಗಳನ್ನು ಆ ಕಡೆ ಈ ಕಡೆ ಬರುವಂತೆ ಕೂರಿಸಿ, ಬೆನ್ನಿಗೆ ಸರಿಯಾದ ಒತ್ತು ಕೊಟ್ಟು ತೂಗುತ್ತಿದ್ದುದೂ ಉಂಟು. ನಿರಾಳವಾದ ಮನಸ್ಸಿನ ಕೂಸು ಕೆಲವೊಮ್ಮೆ ಈ ಭಂಗಿಯಲ್ಲೂ ಮಲಗುತ್ತಿದ್ದುದು ಉಂಟು. ಎಲ್ಲ ಮಕ್ಕಳಿಗೂ ನಿರಾಳ ಮನಸ್ಸೇ ಅಲ್ಲವೇ ಎನ್ನದಿರಿ. ಉದರದಲ್ಲಿ ಇರುವಾಗಲೇ ಶಿಕ್ಷಣ ಆರಂಭಿಸಿದ್ದ ಪ್ರಹ್ಲಾದ ಕುಮಾರ, ಅಭಿಮನ್ಯುನ೦ಥವರಿಗೆ ಹುಟ್ಟಿನ ಮೊದಲೇ ಕ್ರೂರ ಹೊರ ಜಗತ್ತಿನ ಅರಿವಿತ್ತು. ಅದು ಅಂದಿನ ಯುಗ ಎನ್ನುವುದು ಬೇಡ, ಏಕೆಂದರೆ ಈಗ ಮಕ್ಕಳು ಹುಟ್ಟಿದಾಗಲೇ ಕಣ್ಣು ಬಿಟ್ಟುಕೊಂಡೇ ಹೊರಬರುತ್ತಾರೆ, ತಲೆಯಲ್ಲಿ ಕೂದಲು ಆಗಲೇ ಬೆಳೆದಿರುತ್ತದೆ. ಹುಟ್ಟಿದ ಮೇಲೆ ಯಾಕೆ ಟೈಮ್ ವೇಸ್ಟ್ ಅಂತಲೋ ಅಥವಾ ಒಳಗಿರುವಾಗ ಯಾಕೆ ಟೈಮ್ ವೇಸ್ಟ್ ಮಾಡಬೇಕು ಅಂತಲೋ ಗೊತ್ತಿಲ್ಲ.

ಬೆನ್ನಿಗೆ ಆಧಾರವಿರಲೇಬೇಕು ಎಂಬ ನಿಯಮದಿಂದ ಬಾಹಿರವಾದ ಹಿರಿಯರ ಜೋಲಿಯನ್ನು ಉಯ್ಯಾಲೆ ಎನ್ನುತ್ತಾರೆ. ತೋಟದಲ್ಲಿ ಅಥವಾ ಪಾರ್ಕ್‌ಗಳಲ್ಲಿ ಇರುವ ಉಯ್ಯಾಲೆಗೆ ಬೆನ್ನಿಗೆ ಆಧಾರವಿರುವುದಿಲ್ಲ. ಹುಣ್ಣಿಮೆಯ ಆ ಬೆಳದಿಂಗಳ ರಾತ್ರಿಯಲ್ಲಿ, ಹೂವಿನ ಶೃಂಗಾರಗೊಂಡ ಉಯ್ಯಾಲೆಯ ಮೇಲೆ ಬಿಳೀ ದಿರಿಸು ಧರಿಸಿ, ತಂಗಾಳಿಗೆ ತೂಗಿಬಿಟ್ಟ ತಲೆಗೂದಲು ಹಾರಾಡಿಸುತ್ತಾ ಕೂತ ಬೆಳದಿಂಗಳ ಬಾಲೆ ನೆನಪಾದಳೇ? ಏನೋ ಆಹ್ಲಾದಕರವಾಗಿದೆ ಅಲ್ಲವೇ? ಆದರೂ, ಅದು ಹುಣ್ಣಿಮೆಯೋ ಅಥವಾ ಅಮಾವಾಸ್ಯೆಯೋ ಅಂತ ಒಮ್ಮೆ ಖಾತ್ರಿ ಮಾಡಿಕೊಂಡು ಬಿಡಿ. ಇಂಥಾ ದೃಶ್ಯ ಮನಸ್ಸಿಗೆ ಬಂದರೆ, ಎರಡರಲ್ಲೊಂದು ಕಾರಣಕ್ಕೆ ನಿದ್ದೆ ಬರುವುದಿಲ್ಲ ಬಿಡಿ.

ಹಿತವಾದ ಸಂಗೀತ ಕೇಳುತ್ತಾ, ಕಣ್ಮುಚ್ಚಿ ಕೂರಲು
ವಿಶಾಲವಾದ ಮನೆಯ ಪೊರ್ಚ್‌ನಲ್ಲಿ ಬೆನ್ನಿಗೆ ಆಧಾರವಿರುವ, ತಲೆಯ ಮೇಲೆ ಛಾವಣಿಯೂ ಇರುವ ತೂಗುಯ್ಯಾಲೆ ನೋಡಿಯೇ ಇರುತ್ತೀರಾ. ಕೆಲವೊಮ್ಮೆ ಇಂಥಾ ರಾಜಭೋಗದ ಉಯ್ಯಾಲೆಯು ಮನೆಯ ಒಳಗೂ ಇರುತ್ತದೆ. ಕೆಲವು ಡಿಸೈನ್‌ನಲ್ಲಿ ಇದನ್ನು ನೆಲದ ಮೇಲೆ ಕೂರಿಸಿದ್ದಾರೆ. ಕೆಲವನ್ನು ತೂಗಿ ಬಿಡಲಾಗಿರುತ್ತದೆ. ಈ ತೂಗುಯ್ಯಾಲೆಯ ಮೇಲೆ ಕೂತು, ಹಿತವಾದ ಸಂಗೀತ ಕೇಳುತ್ತಾ, ಕಣ್ಮುಚ್ಚಿ ಕೂರಲು ನನಗಂತೂ ಬಹಳ ಇಷ್ಟ. ಅದಾವಾಗ ಆ ನಿದಿರಾದೇವಿ ನನ್ನನ್ನು ಅಪ್ಪಿಕೊಂಡಿರುತ್ತಾಳೋ ಗೊತ್ತಿರುವುದಿಲ್ಲ ಅಷ್ಟೇ. ಇಂಥಾ ತೂಗುಯ್ಯಾಲೆಯ ಮೇಲೆ ಸುಮ್ಮನೆ ಕೂರಬೇಕೇ ವಿನಃ ಬಿಸಿ ಕಾಫಿ ಕುಡಿಯಬಾರದು ನೋಡಿ. ಸುಮ್ನೆ ಯಾಕೆ ರಿಸ್ಕ್ ಅಂತೀನಿ.

ಇಂಥದ್ದೇ ಮತ್ತೊಂದು ಸೌಭಾಗ್ಯ ಎಂದರೆ ಆರಾಮ ಕುರ್ಚಿ. ಹಳೆಯ ಕಾಲದ ಇಂಥಾ ಆರಾಮ ಕುರ್ಚಿ ಹೆಚ್ಚು ಕಮ್ಮಿ ನೆಲದ ಸಮಕ್ಕೇ ಇರುತ್ತಿತ್ತು. ಇದರ ಮೇಲೆ ಕೂರುವುದು ಎನ್ನುವುದಕ್ಕಿಂತಾ ಅರ್ಧ ಮಲಗುವುದು ಎಂದೇ ಹೇಳಬೇಕು. ಆರಾಮ ಕುರ್ಚಿಯ ಮೇಲೆ ಕೂತು ಕಾಫಿ ಹೀರುತ್ತಾ, ಪೇಪರ್ ಓದುವ ಹಿರಿಯರನ್ನು ಎಷ್ಟೋ ಸಾರಿ ನೋಡಿದ್ದೇನೆ. ಚಿಕ್ಕವಯಸ್ಸಿನಲ್ಲಿ ಒಮ್ಮೆ ಅದರ ಮೇಲೆ ಕೂತು- ಮಲಗಿ, ಇತಿಹಾಸ ಓದುತ್ತಿದ್ದೆ. ಅಮ್ಮ ಎಬ್ಬಿಸಿದಾಗಲೇ ಗೊತ್ತಾಗಿದ್ದು, ಇತಿಹಾಸ ಪುಸ್ತಕ ಕೆಳಕ್ಕೆ ಜಾರಿತ್ತು ನಾನು ವರ್ತಮಾನದಲ್ಲಿ ಸೊಗಸಾಗಿ ಮಲಗಿದ್ದೆ.

ಜೋಲಿಯನ್ನು ಕಟ್ಟುವ ಸಂಪ್ರದಾಯ ಕ್ಷೀಣಿಸಿರುವ ಈ ದಿನ
ಮತ್ತೊಂದು ರೀತಿಯ ಆರಾಮ ಕುರ್ಚಿ ಎಂದರೆ rocking chair. ಇಂಥಾ ಕುರ್ಚಿಯ ಕಾಲುಗಳು ಒಂದು ವಿಶಿಷ್ಟ ರಚನೆಯಾಗಿದ್ದು, ಅದರ ಮೇಲೆ ಕೂತು ಹಿಂದೆ ಮುಂದೆ ಆಡಬಹುದು. ಜೋಲಿಯನ್ನು ಕಟ್ಟುವ ಸಂಪ್ರದಾಯ ಕ್ಷೀಣಿಸಿರುವ ಈ ದಿನಗಳಲ್ಲಿ parenting ಹೆಸರಿನಲ್ಲಿ ಪುಟ್ಟ ಕೂಸನ್ನು ಮೈಮೇಲೆ ಮಲಗಿಸಿಕೊಂಡು, ಇಂಥಾ ಕುರ್ಚಿಯ ಮೇಲೆ ಕೂತು ರಾಕ್ ಮಾಡಿದಾಗ ಕೂತ ಇಬ್ಬರಿಗೂ ನಿದ್ರೆ ಗ್ಯಾರಂಟಿ.

ಇಂದಿನ ಸೋಫಾಗಳಲ್ಲಿನ ಒಂದು ವಿಶೇಷ ಎಂದರೆ ಎರಡು ತುದಿಯ ಸೀಟುಗಳು recliner ಸೀಟುಗಳು. ಬದಿಯಲ್ಲೋ ಅಥವಾ ಒಳಭಾಗದಲ್ಲೋ ಇರುವ ಒಂದು lever ಅನ್ನು ಎಳೆದಾಗ ಸೀಟ್ ಬಿಚ್ಚಿಕೊಂಡು ನೀಳವಾಗಿ ಕಾಲನ್ನು ಚಾಚಿಕೊಳ್ಳುವಂತೆ ಆಧಾರವಾಗುತ್ತದೆ. ಇನ್ನೂ ಒಂದಿಷ್ಟು ಮುಂದುವರೆದಲ್ಲಿ ಹೆಚ್ಚುಕಮ್ಮಿ ಹಾಸಿಗೆಯಂತೆ ಉದ್ದಕ್ಕೆ ಚಾಚಿಕೊಳ್ಳುತ್ತದೆ. ನಾನು ಏನೂ ಕೆಲಸ ಮಾಡದೇ ಇರುವಾಗ, ಸುಮ್ಮನೆ ಇಂಥಾ Recliner ಸೋಫಾದ ಮೇಲೆ ಕೂತಿರುವಾಗ, ಒಂದೈದು ನಿಮಿಷ ಯಾರೂ ಮಾತನಾಡಿಸದೇ ಹೋದರೆ ಅಷ್ಟೇಯಾ.

ನಿದ್ರೆ ಕಿಟಕಿಯಾಚೆ ಹೋಗಿರಬಹುದು
ಎಷ್ಟೋ ಸಾರಿ ಊಟವಾದ ಮೇಲೆ ನಿದ್ದೆ ಬರುತ್ತದೆ. ಅದರಲ್ಲೂ ಹೊಟ್ಟೆ ತುಂಬಾ ಅಲ್ಲದೆ ಮೂಗಿನ ಮಟ್ಟ ಉಂಡಾಗಲಂತೂ ನಿದ್ರೆ ಖಚಿತ. ಹಬ್ಬದ ಊಟವಾದ ಮೇಲೆ, ಮದುವೆಯ ಮನೆಯ ಊಟವಾಗಿ ಬಿಸಿಲಲ್ಲಿ ಮನೆಗೆ ಹಿಂದಿರುಗಿ ಬಂದು ತಣ್ಣನೆಯ ಫ್ಯಾನ್ ಕೆಳಗೆ ಕೂತರಂತೂ ಮುಗೀತು, ನಿದ್ರೆ ಖಚಿತ. ಇಂಥಾ ಸಮಯದಲ್ಲಿ ಎಲ್ಲಿ ಕೂತಿರುತ್ತೇವೋ ಅಲ್ಲೇ ಒಂದು power nap ತೆಗೆದುಬಿಟ್ಟರೆ ಎಲ್ಲವೂ ಸುಸೂತ್ರ. ಅದು ಬಿಟ್ಟು, ಮಲಗಲು ಸಕಲ ಸಿದ್ಧತೆ ಮಾಡಿಕೊಂಡು, ಮಲಗಲು ಅನುವಾಗುವ ಹೊತ್ತಿಗೆ ನಿದ್ರೆ ಕಿಟಕಿಯಾಚೆ ಹೋಗಿರಬಹುದು. ಕೆಲವರಿಗೆ power nap ಅಭ್ಯಾಸವಿರುತ್ತದೆ. ಆದರೆ ಕೆಲವರಿಗೆ ಹೀಗೆ ಮಲಗಿದಾಗ ಆ power nap ಎಂಬುದು powerful nap ಆಗಿ ಪರಿವರ್ತನೆಯಾಗಿಬಿಡುತ್ತದೆ. ಇಂಥವರು airport lounge ನಲ್ಲಿ ಮಲಗದಿರುವುದು ಒಳ್ಳೆಯದು.

ನಿಮಗೆ ನಿದ್ದೆ ಬರುವಂತೆ ಮಾಡಿತೋ
ಇಷ್ಟೆಲ್ಲಾ ಮಾತು ಏಕೆ ಬಂತು ಅಂದರೆ ಕಳೆದ ವಾರದಲ್ಲಿ ಅರ್ಥಾತ್ ಅಕ್ಟೋಬರ್ 16ರಂದು ವಿಶ್ವ Anesthesia ದಿನವಾಗಿತ್ತು. ಯಾವುದೋ ಒಂದು ಆಪರೇಷನ್ ಆಗಬೇಕು ಎಂದಾಗ ಕತ್ತರಿಗೆ ದೇಹವನ್ನು ಒಡ್ಡುವಾಗ ಅನಸ್ಥೆಸಿಯಾ ಇಲ್ಲ ಎಂದುಕೊಳ್ಳಿ, ಅದನ್ನು ಊಹಿಸಿಕೊಳ್ಳುವಿರಾ? ದೇಹಕ್ಕೆ ಕತ್ತರಿ ಚಾಕುಗಳು ಬಿದ್ದಾಗ ಆಗುವ ನೋವನ್ನು ತಿಳಿಯದಂತೆ ಮಾಡುವ ಒಂದು ವಿಸ್ಮಯವೇ ಈ ಅನಸ್ಥೆಸಿಯಾ. ಶಸ್ತ್ರಚಿಕಿತ್ಸೆಗೆ ಮುನ್ನ ಇಂಜೆಕ್ಷನ್ ರೂಪದಲ್ಲಿ ದೇಹಕ್ಕೆ ಇಳಿಯುವ ಈ ವಿಸ್ಮಯವು ರೋಗಿಯನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ. ಕೆಲವೊಮ್ಮೆ ಅನಸ್ಥೆಸಿಯಾ ಇಡೀ ದೇಹಕ್ಕೆ ಬೇಕಾಗಿರುವುದಿಲ್ಲ. ಬದಲಿಗೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಬೇಕಾಗಬಹುದು ಉದಾಹರಣೆಗೆ ದಂತವೈದ್ಯರು ಕೇವಲ ವಸಡಿಗೆ ಮಾತ್ರ ಇಂಜೆಕ್ಷನ್ ಚುಚ್ಚಿ ಆ ಭಾಗವನ್ನು ನಿದ್ರೆಗೆ ಜಾರಿಸುತ್ತಾರೆ.

ಇಂದಿನ ಈ ಬರಹ ನಿಮಗೆ ನಿದ್ದೆ ಬರುವಂತೆ ಮಾಡಿತೋ ಅಥವಾ ಭಾಗಶಃ ನಿದ್ದೆ ಬರುವಂತೆ ಮಾಡಿತೋ ನೀವೇ ಹೇಳಬೇಕು. ಏಕೆಂದರೆ ಲೇಖನ ಬರೆದ ಮೇಲೆ ನನಗೆ ನಿದ್ರೆ ಬರುತ್ತಿದೆ. ಅಂದ ಹಾಗೆ ಕೊನೆಯಲ್ಲಿ ಒಂದು ಪ್ರಶ್ನೆ. ನಿದ್ರೆಯನ್ನು ಎಮೋಜಿ ಸ್ವರೂಪದಲ್ಲಿ ಹೇಳುವಾಗ zzzzzz ಎಂದೇಕೆ ಹೇಳುತ್ತಾರೆ?

English summary
Srinath Bhalle Column: Method of Sleeping a Baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X