• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಭಾಷೆಯಲ್ಲಿ ಸೀಳು ಕಥಾನಕ : ಸೀಳೋದ್ ಸೀಳ್ರಿ ಸೀಳಬಾರದ್ ಸೀಳಬ್ಯಾಡಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಮೊದಲಿಗೆ ಸಕಾರಾತ್ಮಕಾಗಿಯೇ ಆಲೋಚಿಸಿ... 'ಸ' ಅಕ್ಷರವನ್ನು ಸೀಳೋಕ್ಕಾಗುತ್ತಾ? ಈಗ ನಕಾರಾತ್ಮವಾಗಿ ಆಲೋಚಿಸಿ. 'ನ' ಎಂಬ ಅಕ್ಷರವನ್ನು ಸೀಳೋಕ್ಕಾಗುತ್ತಾ? ಈಗ ಮುಂದೆ ಹೋಗೋಣ.... ಸೀಳಬಲ್ಲ ಅಥಾವ ಸೀಳble ಯಾವುವು? ಉದಾಹರಣೆಗೆ 'ಪ', 'ದ', ಮತ್ತು 'ಬ'. ಸೂಕ್ಷ್ಮವಾಗಿ ಗಮನಿಸಿದರೆ ಸೀಳೋಕ್ಕೆ ಅರ್ಥಾತ್ ಗೀಟು ಎಳೆಯೋಕ್ಕೆ ಜಾಗ ಇರಬೇಕು. ಆದರೆ "ಘ" ಅನ್ನೋದು ಹುಟ್ಟುತ್ತಲೇ ಸೀಳ್ಕೊಂಡ್ ಹುಟ್ಟಿದೆ ಎನ್ನಬಹುದು. ಸೀಳಿಲ್ಲದ 'ಘ' ಅಕ್ಷರ ಇಲ್ಲ.

ಗೀಟು ಬರೆಯೋಕ್ಕೆ ಜಾಗ ಇದ್ರೂ 'ಒ' 'ಓ' ಇತ್ಯಾದಿ ಅಕ್ಷರಗಳಿಗೆ ಸೀಳು ಭಾಗ್ಯ ಇಲ್ಲ. ಹಾಗೆಲ್ಲಾ ಸ್ವರಾಕ್ಷರಗಳನ್ನ ಸೀಳೋದ್ ಇಲ್ಲ ಅಂತ ಹೇಳಬಹುದು. ಗೀಟು ಬರೆಯೋಕ್ಕೆ ಜಾಗ ಇದ್ರೂ 'ವ' ಸೀಳು ಭಾಗ್ಯ ಇಲ್ಲ. ಹಾಗೆಲ್ಲಾ ಅವರ್ಗೀಯ ವ್ಯಂಜನಗಳನ್ನ ಸೀಳೋದ್ ಇಲ್ಲ ಅಂತ ಹೇಳಬಹುದು. ವರ್ಗೀಯ ವ್ಯಂಜನದಲ್ಲಿ 'ಮ' ಅಕ್ಷರಕ್ಕೂ ಈ ಭಾಗ್ಯ ಇಲ್ಲ.

ಇನ್ನೊಬ್ಬರ ಜೀವನದಲ್ಲಿ ಏನು ನಡೆಯುತ್ತಿದೆ ಊಹಿಸಿದ್ದೀರಾ?

ಹೀಗಾಗಿ ಏನಾಗಿದೆ ಅಂದ್ರೆ ಸೀಳಬಲ್ಲ ಅಕ್ಷರಗಳನ್ನೇ ತಮಗಿಷ್ಟ ಬಂದ ಹಾಗೆ ಸೀಳೋದು ಈಗ ಅಭ್ಯಾಸವಾಗಿ ಹೋಗಿದೆ. 'ದ', 'ಧ' 'ಬ' 'ಭ' ಅಕ್ಷರಗಳು ಅಕ್ಷರಮಾಲೆಯಲ್ಲಿ ತಮ್ಮದೇ ಸ್ಥಾನ ಹೊಂದಿದ್ದರೂ ಅವುಗಳನ್ನು ಒಂದರ ಬದಲಿಗೆ ಮತ್ತೊಂದನ್ನು ಬಳಸುವುದು ಅಭ್ಯಾಸವಾಗಿದೆ ಎನ್ನಬಹುದು. ಇಷ್ಟು ಹೇಳಿ ಈ ಸೀಳು ಕಥಾನಕ ಮುಂದುವರೆಸೋಣ.

ಕೃತಯುಗದಿಂದ ನೋಡ್ಕೊಂಡು ಬರೋಣ ಅಂತ ಒಮ್ಮೆ ಆಲೋಚಿಸಿದೆ. ಅಲ್ಲಿ ಮಹಾವಿಷ್ಣುವಿನ ನಾಲ್ಕು ಅವತಾರಗಳಿವೆ. ಆದರೆ ಮೊದಲ ಮೂವರು ಏನೂ ಸೀಳಲಿಲ್ಲ. ನರಸಿಂಹಾವತಾರದಲ್ಲಿ ಸೀಳುವಿಕೆ ಇದೆ. ಅದೂ ಎರಡು ಬಾರಿ. 'ಯಾವ ಕಂಬದಲ್ಲಿದ್ದಾನೆ ಆ ನಿನ್ನ ವಿಷ್ಣು' ಎಂದು ತಡಕಾಡುತ್ತಾ ಕೊನೆಗೆ ಒಂದು ಕಂಬವನ್ನು ತನ್ನ ಗದೆಯಿಂದ ಬಡಿದಾಗ, ಮಹಾವಿಷ್ಣುವು ನರಸಿಂಹನ ಅವತಾರ ತಾಳಿ ಕಂಬವನ್ನು "ಸೀಳಿ" ಹೊರಬರುತ್ತಾನೆ. ಆ ನಂತರ, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ನರಸಿಂಹ ತನ್ನ ನಖಗಳಿಂದ ಅವನ ಕರುಳನ್ನು ಬಗೆಯುತ್ತಾನೆ. ಆದರೆ ಬಗೆಯುವುದೇ ಬೇರೆ, ಸೀಳುವುದೇ ಬೇರೆ ಅಲ್ಲವೇ? ಇಲ್ಲಿ ಸೀಳುವಿಕೆ ಎಲ್ಲಿದೆ? ಕರುಳನ್ನು ಬಗೆದು ತೆಗೆಯುವ ಮುನ್ನ ಸೀಳಲಾಗಿತ್ತು ಅನ್ನೋದು ಸೂಕ್ಷ್ಮ ವಿಚಾರ. ತಾನೊಂದು ಬಗೆದರೆ ರಕ್ಕಸ, ಬೇರೊಂದ ಬಗೆಯೋದೇ ದೈವ! ಬಗೆಯೋದ್ರಲ್ಲಿ ಬಗೆ ಬಗೆ ಇದೆ ಅಂತಾಯ್ತು.

ತ್ರೇತಾಯುಗದಲ್ಲಿನ ಅವತಾರಿಗಳು ಪರಶುರಾಮ ಮತ್ತು ರಾಮ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರ ರುಂಡಗಳನ್ನು ಚೆಂಡಾಡಿದ ಎಂದು ಓದಿದ್ದೇವೆ. ಚೆಂಡಾಡುವ ಮುನ್ನ ಆ ತಲೆ ಎಂಬ ಚೆಂಡು ಕೈಯಲ್ಲಿ ಸಿಗಬೇಕಾದರೆ ಕುತ್ತಿಗೆ ಸೀಳಲೇಬೇಕು ಅಲ್ಲವೇ? ಹಾಗಾಗಿ ಪರಶುರಾಮ ಸೀಳಿದ್ದಾನೆ ಅಂತಾಯ್ತು. ಇನ್ನು ಶ್ರೀರಾಮ ಬಾಣ ಎಂದೂ ಗುರಿ ತಪ್ಪಿಲ್ಲ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಸುಗ್ರೀವನಿಗೆ ವಚನ ಕೊಟ್ಟಂತೆ ವಾಲಿಯ ಗುಂಡಿಗೆಯನ್ನೇ ತನ್ನ ಬಾಣದಿಂದ ಸೀಳಿದ ಶ್ರೀರಾಮ.

ಮುಂದೆ ನನ್ನ ನೆಚ್ಚಿನ ದ್ವಾಪರಯುಗ. ಬೃಹಧ್ರಥ ಮಹಾರಾಜನು ಋಷಿವರ್ಯ ನೀಡಿದ ಹಣ್ಣನ್ನು ಸಮನಾಗಿ ಎರಡು ಭಾಗ ಮಾಡಿ ತನ್ನಿಬ್ಬರು ರಾಣಿಯರಿಗೆ ನೀಡಿದ ಫಲವಾಗಿ, ಒಂದು ದೇಹದ ಎರಡು ಭಾಗಗಳು ಒಬ್ಬೊಬ್ಬ ರಾಣಿಯಲ್ಲಿ ಜನಿಸಿತು. ಈ ಸೀಳಿದ ದೇಹಗಳಿಂದ ಮಾಡೋದೇನಿದೆ ಅಂತ ಎಸೆಯುತ್ತಾನೆ. ಸೀಳಿದ ಭಾಗಗಳನ್ನು ಸೇರಿಸಿದವಳು ರಕ್ಕಸಿಯಾದ 'ಜರಾ'. split ಆಗಿದ್ದವ join ಆಗಿ ಹುಟ್ಟಿದವ ಜರಾಸಂಧ. ಮುಂದೆ, ಅವನೊಡನೆಯ ಭೀಮ ಯುದ್ಧ ಮಾಡುವಾಗ ಅವನನ್ನು ಇಬ್ಬಾಗವಾಗಿ ಸೀಳಿ ಎಸೆದಾಗಲೆಲ್ಲಾ ಅವನು ಮತ್ತೆ ಸೇರಿಕೊಂಡೇ ಮತ್ತೆ ಯುದ್ಧಕ್ಕೆ ಬರುತ್ತಿದ್ದ. ಆಗ ನಮ್ಮ ಶ್ರೀಕೃಷ್ಣ ಪರಮಾತ್ಮ ಒಂದು ಹುಲ್ಲುಕಡ್ಡಿಯನ್ನು ತೆಗೆದುಕೊಂಡು ಅದನ್ನು ಸೀಳಿ ವಿರುದ್ಧ ದಿಕ್ಕಿನಲ್ಲಿ ಎಸೆದ. ಅದರಂತೆಯೇ ಭೀಮನು ಜರಾಸಂಧನನ್ನು ಸೀಳಿ ಮತ್ತೆ ಸೇರಿಕೊಳ್ಳಲಾಗದಂತೆ ವಿರುದ್ಧ ದಿಕ್ಕಿನಲ್ಲಿ ತೋರುವಂತೆ ಎಸೆದ.

ಏನೂ ಚಿಂತೆ ಮಾಡಬೇಡಿ, ಏನೂ ಆಗೋಲ್ಲ, ಎಲ್ಲ ಸರಿಹೋಗತ್ತೆ!

ಇನ್ನು ನಮ್ಮ ಕಲಿಯುಗದ ಮಹಿಮೆಗಳೇ ಅಪಾರ, ಮುಖ್ಯವಾಗಿ ಬರವಣಿಗೆಯಲ್ಲಿ. ಮಹಾಭಾರತದ ಬುದ್ದಿಜೀವಿ ಎಂದೇ ಹೆಸರಾದ ವಿದುರ, ಪಾಂಡವರಿಗೆ ಬಹಳ ಸಹಾಯ ಮಾಡಿದ್ದವ ಮತ್ತು ಶ್ರೀಕೃಷ್ಣಭಕ್ತ. 'ವಿಧುರ' ಎಂದರೆ ಹೆಂಡತಿಯನ್ನು ಕಳೆದುಕೊಂಡ ಗಂಡ. ಒಂದಕ್ಕೊಂದಕ್ಕೆ ಏನೇನೂ ಸಂಬಂಧವಿಲ್ಲ. ಆದರೂ 'ವಿದುರ' ಎನ್ನುವಾಗ 'ವಿಧುರ' ಎಂದು ಬರೆಯುತ್ತಾರೆ, 'ವಿಧುರ' ಎನ್ನುವಾಗ 'ವಿದುರ' ಎಂದು ಬರೆಯುತ್ತಾರೆ. ನಾನು ಹೇಳ್ತಿರೋದು ಇಷ್ಟೇ, ವಿದುರ ಒಬ್ಬ ದಿವ್ಯಾತ್ಮ ಹಾಗಾಗಿ ಸೀಳಬೇಡಿ. ವಿಧುರ ಎಂದು ಬರೆಯುವಾಗ 'ದು' ಅಕ್ಷರವನ್ನು ಮಾತ್ರ ಸೀಳಿ.

"ಹೀಗೇ ಒಂದು ಬಾರಿ ಬಾರಿನಲ್ಲಿ ಭಾರೀ ಜಗಳವಾಯ್ತು." ಎಂದು ಬರೆಯುವಾಗ ಸೀಳುಪ್ರಿಯರಿಗೆ ಹಬ್ಬ ಎನ್ನಬಹುದು. "ಒಂದು ಭಾರಿ ಬಾರಿನಲ್ಲಿ ಬಾರೀ ಜಗಳವಾಯ್ತು" ಎಂದು ಬರೆದದ್ದನ್ನು ನಾನೇ ಓದಿದ್ದೆ. "ಭಾರಿ ಬಾರು" ಎಂದರೆ ಯಾವ ಲೆವೆಲ್ ಅಂತಲೇ ಅರ್ಥವಾಗಲಿಲ್ಲ. "ಬಾರೀ ಜಗಳ" ಅಂದ್ರೇನು? ಬಾರನ್ನು ಸೀಳಬೇಡಿ, ಜೇಬನ್ನು ಸೀಳೋದು ಅದರ ಕೆಲಸ. 'ಒಂದು ಬಾರಿ' ಎಂದಾಗ 'once' ಅನ್ನೋ ಅರ್ಥ ಬರುತ್ತೆ. 'ಭಾರೀ' ಅನ್ನೋದು 'ಸಿಕ್ಕಾಪಟ್ಟೆ' ಅನ್ನೋ ರೀತಿ ಬಳಸುತ್ತಾರೆ. 'ಭಾರೀ ರಿಯಾಯಿತಿ, ಭಾರೀ ಭರ್ಜರಿ ಬೇಟೆ' ಇತ್ಯಾದಿ...

ಇದೇ 'ಬ'ಕಾರ ಸೀಳುವಿಕೆಯ ಮತ್ತೊಂದು ಉದಾಹರಣೆ ಎಂದರೆ 'ಬಾವಿ' ಮತ್ತು 'ಭಾವಿ'. 'ಬಾ'ಕಾರವನ್ನು ಸೀಳಿದಾಗ, ಸೀಳದಿದ್ದಾಗ ಅರ್ಥವೇ ಸಂಪೂರ್ಣ ಭಿನ್ನ. ಬಾವಿಯಲ್ಲಿ ನೀರು ಸಿಗುತ್ತೆ (ಇದ್ದರೆ) ಅದರಿಂದ ನೀರನ್ನು ಸೇದಿಕೊಂಡು ದೈನಂದಿನ ಕೆಲಸಗಳಿಗೆ ಬಳಸುತ್ತಾರೆ. ಇಂಥಾ ಪವಿತ್ರವಾದ ಬಾವಿಗೂ ಕಲ್ಲುಹಾಕುವವರು ಇರ್ತಾರೆ. ಯಾರು ಅಂದ್ರಾ, ಅದೇ ಬಾವಿಗೆ ಹಾರಿ ಪ್ರಾಣ ಕಳೆದುಕೊಳ್ಳುವವರು. 'ಭಾವಿ' ಎಂದರೆ 'ಮುಂದಿನ' / 'in future' ಅನ್ನೋ ಅರ್ಥದಲ್ಲಿ ಬಳಸಬೇಕು. ಹುಟ್ಟುವ ಕೂಸನ್ನು ಕುರಿತು 'ಭಾವೀ ಭಾರತದ ಪ್ರಜೆ' ಎನ್ನಬಹುದು. 'ಭಾವೀಪತ್ನಿ / ಭಾವೀಪತಿ' ಅಂತ ಯಾರೂ ನುಡಿಯೋದೇ ಇಲ್ಲ ಬದಲಿಗೆ fiancee ಎನ್ನುತ್ತಾರೆ. ಆದರೆ ಇಲ್ಲೂ ಕೊಂಚ ಭಿನ್ನತೆ ಇದೆ ಎಂಬ ಅರಿವು ಹಲವರಿಗೆ ಇಲ್ಲ. ಎಂಗೇಜ್ ಆಗಿರೋ ಗಂಡಿಗೆ fiance ಎನ್ನಬೇಕು. ಎಂಗೇಜ್ ಆಗಿರುವ ಹೆಣ್ಣಿಗೆ fiancee ಎನ್ನಬೇಕು. ಒಟ್ಟಾರೆ ಹೇಳೋದ್ ಇಷ್ಟೇ, ಭಾವಿಯನ್ನು ಪಾಪ ಸೀಳದೇ ಬಾವಿ'ಗೆ ನೂಕಬೇಡಿ.

ಬಡತನದ ರೇಖೆಯಿಂದ ಕೆಳಗೆ ಇರುವವನು ಬಡವ. 'ಕತ್ತೆ ಭಡವ' ಅಂಬೋದು ಬೈಗುಳ. ಬಡವನಾದವನು ಭಡವ ಅಲ್ಲ, ಹಾಗೆಯೇ ಭಡವ ಸಾಮಾನ್ಯವಾಗಿ ಬಡವ ಆಗಿರೋಲ್ಲ ಎನ್ನಬಹುದು.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ಒಮ್ಮೆ ಒಂದು ಕನ್ನಡ ಕಿರು ಸಿನಿಮಾ ಟೈಟಲ್ ಕಾರ್ಡ್ ನೋಡ್ತಿದ್ದೆ. ಅದರಲ್ಲಿನ ಬಳಕೆ ನಿಜಕ್ಕೂ ಖೇದಕರವಾಗಿತ್ತು. "ಮಧ್ಯಪಾನ ನಿಷೇಧ" ಅಂತೇನೋ ಬರೆದಿತ್ತು. ಮಧ್ಯ ಅಂದ್ರೆ centre. ಮದ್ಯ ಅಂದ್ರೆ ನಿಶೆ ಬರಿಸುವ ಪಾನೀಯ. ಮದ್ಯಪಾನ ಸರಿ, ಅರ್ಥಾತ್ ಪದಪ್ರಯೋಗ ಸರಿ. ಆದರೆ ಮಧ್ಯಪಾನ ಎಂದಾಗ ಏನೇನೋ ಅರ್ಥಕೊಡುತ್ತೆ.

ಈಗ ಭಾಷಾಬಳಕೆಯಿಂದ ಕೊಂಚ ಬೇರೆ ಕಡೆ ದೃಷ್ಟಿ ಹರಿಸೋಣ. ಹುಟ್ಟಿದ ಮಕ್ಕಳಲ್ಲಿ ಕಾಣುವ ನ್ಯೂನತೆಗಳಲ್ಲಿ ಒಂದು ಸೀಳು ತುಟಿ. ಈ ಸೀಳುತುಟಿಯ ಮಕ್ಕಳಿಗೆ ಹಾಲು ಕುಡಿಯುವುದಕ್ಕೂ ತೊಂದರೆಯಾಗುತ್ತದೆ ಮತ್ತು ಮುಂದೆ ಮಾತನ್ನು ಆಡಲೂ ಕಷ್ಟಪಡುತ್ತಾರೆ.

ಪಾದಗಳ ಹಿಂಭಾಗದಲ್ಲಿ ಹಲವರಿಗೆ ಬಿರುಕು ಮೂಡಿರುತ್ತದೆ. ಇದೇನೂ ದೊಡ್ಡ ವಿಷಯವಲ್ಲ, ಆದರೆ ವಿಶ್ವಸುಂದರ / ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವುದಾದರೆ ಮಾತ್ರ ಇದು ಮಹಾ ತಾಪತ್ರಯ. ಕೆಲವರು ಇದನ್ನು ಬಿರುಕು ಅಂತಾರೆ ಕೆಲವರು ಇದನ್ನು ಸೀಳು ಅಂತಾರೆ. ಟೈಟಲ್ ಏನೇ ಇರಲಿ ಇದೊಂದು ಹಿಂಸೆ. ಕೆಲವರು ಮಾತನಾಡುತ್ತಾ ಕೂತಿರುವಾಗ ಆ ಸೀಳಿನ ಸುತ್ತಲಿನ ಒಣಗಿದ ಚರ್ಮವನ್ನು ಕಿತ್ತುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಹಾಗೆ ಕಿತ್ತುವಾಗ ರಭಸವಾಗಿ ಕಿತ್ತಿ ರಕ್ತವನ್ನೂ ಸೋರಿಸುತ್ತಾರೆ.

ವಿಧಿಯಿಲ್ಲದ ಪರಾವಲಂಬಿ ಜೀವನ ನಿಮ್ಮದಾಗದಿರಲಿ

ಬಹಳ ವರ್ಷಗಳ ಹಿಂದಿನ ಮಾತು. ನಮ್ಮ ಕಚೇರಿಗೆ ಬರುತ್ತಿದ್ದ ಒಬ್ಬ postman ಬಗ್ಗೆ ಆಫೀಸಿನವರು ಅವನ ಕಣ್ಣುಗಳು ಬಹಳ ವಿಶೇಷವಾದದ್ದು ಅನ್ನೋ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಮರುದಿನ ಆತ ಬಂದಿದ್ದ ವೇಳೆಯಲ್ಲಿ ನಾನು front officeಗೆ ಬಂದೆ. ಆತ ನನಗೆ ಬೆನ್ನು ಮಾಡಿ ನಿಂತಿದ್ದ. ಅವನು ತಿರುಗಲಿ ಅಂತ ಕಾದಿದ್ದೆ. ಒಮ್ಮೆ ಅವನು ತಿರುಗಿ ನನ್ನ ನೋಡಿದ ಅಷ್ಟೇ! ನನಗೆ ಒಂದು ಹೆಜ್ಜೆ ಹಿಂದೆ ಇಡುವ ಹಾಗಾಯ್ತು. ಆತನದ್ದು ಸಾಮಾನ್ಯ ಕಂಗಳಲ್ಲ ಹದ್ದಿನ ಕಂಗಳು ಎನ್ನಬಹುದು. ಒಮ್ಮೆ ನೋಡಿದರೆ ದೇಹವನ್ನೇ ಸೀಳಿಬಿಡುವಂಥಾ ದೃಷ್ಟಿ ಆತನದ್ದು. ಆದರೆ ಸ್ವಭಾವ ಒಳ್ಳೆಯದ್ದು ಅಂತ ಕೇಳಿದ್ದೆ. ಯಾಕೆ ಹೇಳಿದೆ ಅಂದ್ರೆ ಈ ಸೀಳುವಿಕೆ ಅನ್ನೋದು physical ಆಗಿರಲೇಬೇಕು ಅಂತೇನಿಲ್ಲ.

ಈ ಸೀಳು ಕಥಾನಕದಲ್ಲಿ ತಪ್ಪು ಒಪ್ಪುಗಳು ಇರಬಹುದು. ನಾನೆಂದೂ ನಾ 'ಬಲ್ಲೆ' ಅಂತ ಹೇಳಿಕೊಂಡಿಲ್ಲ. ನೀವೂ ಹಾಗೆ ಹೇಳದಿರಿ. ಯಾಕೆ ಅಂದ್ರೆ ನಾನು 'ಬಲ್ಲೆ' ಅಲ್ಲ, ನನ್ನ ಸೀಳಿ, ನಾನು "ಭಲ್ಲೆ"!

English summary
How correctly do you write in Kannada or pronounce the words? Srinath Bhalle from Richmond, USA narrates the difference between similar words, how to write and how to pronouce.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more