• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿದ್ರಿಸುವ ವಿಚಾರವನ್ನು ನಿದ್ರೆಗೆ ಭಂಗವಾದಂತೆ ಅರಿಯೋಣ ಬನ್ನಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಬಹಳ ವರ್ಷಗಳ ಹಿಂದೆ, ಹೀಗೇ ಒಮ್ಮೆ ಮಟ ಮಟ ಮಧ್ಯಾಹ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಪಾಪ ಅವನ ಅಮ್ಮ ಮಲಗಿದ್ದರೋ ಏನೋ ಗೊತ್ತಿಲ್ಲ, ಅದ್ದೂರಿ ಸ್ವಾಗತ ಅಂತೂ ಸಿಗಲಿಲ್ಲ. 'ಮಲಗಿದ್ದಾನೆ, ನೀನೇ ಎಬ್ಬಿಸು' ಅಂತ ಅವನ ರೂಮಿಗೆ ದಾರಿ ತೋರಿಸಿದರು. ಅಂದು, ಈಗಿನ ಪ್ರೈವಸಿ, ಬಾಗಿಲು ಬಡಿದು ಒಳಗೆ ಹೋಗೋದು ಎಂಬೆಲ್ಲಾ ಶಿಸ್ತಿನ ಬಗ್ಗೆ ಅರಿವೇ ಇಲ್ಲದ ದಿನಗಳು. ಸ್ನೇಹಿತ ಮೊದಲೇ ಸ್ಥೂಲ ವ್ಯಕ್ತಿ. ಎರಡೂ ಕೈಗಳನ್ನು ಅಗಲವಾಗಿ ಹರಡಿಕೊಂಡು ಅಂಗಾತ ಮಲಗಿದ್ದ ಶೈಲಿ ಕಂಡು ಥೇಟ್ ಗರುಡ ಪಕ್ಷಿ ರೆಕ್ಕೆ ಬಿಚ್ಚಿ ಮಲಗಿದೆಯೇನೋ ಅನ್ನಿಸಿತು. ಎಬ್ಬಿಸಿದರೆ ಎಲ್ಲಿ ಕುಕ್ಕಿಬಿಡುತ್ತಾನೋ ಅಂತ ಸೈಲೆಂಟ್ ಆಗಿ ಜಾಗ ಖಾಲಿಮಾಡಿದ್ದೆ. ಸಕತ್ ತರಲೆ, ಆದರೆ ಮಲಗಿದ್ದಾಗ ಮಾತ್ರ ಭಗವಂತ ಬಿಟ್ರೆ ಇವನೇ ಅನ್ನೋ ಹಾಗೆ ಪ್ರಶಾಂತ ವದನ. ಮಲಗಿದ್ದ ನಾವೂ ಪ್ರಶಾಂತವಾಗಿಯೇ ಕಾಣ್ತೀವಿ ಅನ್ನಿಸುತ್ತೆ, ಅಲ್ಲವೇ?

ಈ ವಿಷಯದಲ್ಲಿ ಭಗವಂತ ಅಂದಾಗ ನೆನಪಾಗೋದೇ ಶ್ರೀರಂಗಪಟ್ಟಣದ ರಂಗನಾಥ. ಇವನು ಮಲಗಿರುವ ಶೈಲಿಯಲ್ಲಿ ಭಕ್ತರನ್ನು ಸಲಹುವ ದೈವ ಅಂತ ನಿಮಗೆ ಗೊತ್ತಿದೆ. ಮಜಬೂತಾದ 'ಆದಿಶೇಷ'ನೆಂಬ ಹಾಸಿಗೆಯ ಮೇಲೆ ಮಲಗಿರುವ ಭಂಗಿ ರಂಗನಾಥನದ್ದು. ಇಲ್ಲಿನ ವಿಶೇಷ ಎಂದರೆ ಅಂಥಾ ಸುಪ್ಪತ್ತಿಗೆಯ ಮೇಲೆ ಮಲಗಿದ್ದರೂ, ಆದಿಶೇಷನೇ ದಿಂಬಾಗಿದ್ದರೂ ಭಗವಂತ ತಲೆ ಇಟ್ಟಿರೋದು ತನ್ನದೇ ಹಸ್ತವೆಂಬ ದಿಂಬಿನ ಮೇಲೆ! ಮೃದುವಾದ ಹಸ್ತ ದಿಂಬಿಗಿಂತಲೂ ಸುಖ ಅಂತಾಯ್ತು. ನಿಮಗೂ ನಿಮ್ಮದೇ ಹಸ್ತದ ಮೇಲೆ ಮಲಗಿ ಅಭ್ಯಾಸವಿದೆಯೇ? ನಿಮಗೆ ಕೈಯನ್ನೇ ದಿಂಬಾಗಿಸಿಕೊಂಡು ಮಲಗುವ ಅಭ್ಯಾಸ ಇದೆಯೇ?

Dont give up on your dreams, so sleep well

ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!

ದೈವದ ವಿಷಯವನ್ನೇ ಕೊಂಚ ಮುಂದುವರೆಸಿದರೆ, ಮಲಗಿದ್ದ ಶ್ರೀಕೃಷ್ಣ ಪರಮಾತ್ಮನನ್ನು ಕಾಣಲು ಬಂದು ತಾನೇನು ಅವನ ಕಾಲಿನ ಬಳಿ ಕೂಡೋದು ಅಂತ ತಲೆಯ ಬಳಿ ಕೂತ ದುರ್ಯೋಧನನ ಕಥೆ ಏನಾಯ್ತು ಗೊತ್ತಲ್ಲವೇ? ಬಾಲಕೃಷ್ಣನು ಆಲದ ಎಲೆಯ ಮೇಲೆ ಮಲಗಿ ತನ್ನ ಕಾಲಿನ ಹೆಬ್ಬೆರಳನ್ನು ಬಾಯಲ್ಲಿ ಇಟ್ಟುಕೊಂಡಿರುವ ಭಂಗಿ ಎಂಥಾ ಸುಂದರ ಅಲ್ಲವೇ? ಮಲಗಿದ್ದವರನ್ನು ಎಬ್ಬಿಸಬೇಡಿ ಅಂತ ಆಗಲೇ ಹೇಳಿದ ವಿಷಯ ತೆಗೆದುಕೊಂಡರೆ, ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಗುರು ಪರಶುರಾಮರು ಮಲಗಿದ್ದಾಗ ದುಂಬಿ ಬಂದು ಕಚ್ಚಿ ಏನೆಲ್ಲಾ ಅವಾಂತರವಾಯ್ತು ಅಲ್ಲವೇ? ಮಧ್ಯಾಹ್ನದ ಬಿಸಿಲಿಗೆ, ಸುಸ್ತಾಗಿ ಫ್ಯಾನ್ ಗಾಳಿಗೆ ಮೈಯೊಡ್ಡಿ ಮಲಗಿದ್ದಾಗ ಯಾರೋ ಕರೆಗಂಟೆ ಒತ್ತಿದರೆ ಅಥವಾ ಕರೆ ಮಾಡಿದರೆ ಏನು ಸಿಟ್ಟು ಬರುತ್ತೆ ಅಲ್ವೇ? ಬರದೇ ಇನ್ನೇನಾಗತ್ತೆ?

Dont give up on your dreams, so sleep well

ಈಗ ಮಲಗುವ ಭಂಗಿಗಳನ್ನು ಅರಿಯೋಣ ಬನ್ನಿ. ಕೆಲವರು ಬಲಕ್ಕೆ ಹೊರಳಿ ಮಲಗುತ್ತಾರೆ, ಕೆಲವರು ಎಡಕ್ಕೆ. ಕೆಲವರು ಬೆನ್ನ ಮೇಲೆ ಮಲಗಿದರೆ, ಹಲವಾರು ಬೆನ್ನ ತೋರಿ ಮಲಗುವರು. ಕೆಲವರು ಹೊದಿಕೆ ಹೊದೆಯದೇ ಮಲಗುವರು, ಕೆಲವರು ಹೊದೆಯದೇ ಇದ್ದರೆ ಆಗೋದೇ ಇಲ್ಲ. ಕೆಲವರಿಗೆ ತೆಳು ಹೊದಿಕೆ ಸಾಕು, ಹಲವರಿಗೆ ರಗ್ ಬೇಕು. ಕೆಲವರು ಹೊಟ್ಟೆಯ ತನಕ ಹೊದೆಯುತ್ತಾರೆ, ಕೆಲವರು ಕುತ್ತಿಗೆಯವರೆಗೆ, ಕೆಲವರು ಮುಸುಕು ಹಾಕಿಕೊಂಡೇ ಮಲಗುತ್ತಾರೆ. ಯಾವುದು ಸರಿ ಯಾವುದು ತಪ್ಪು ಬಿಡಿ, ನಿಮ್ಮ ಭಂಗಿ ಯಾವುದೋ?

ಪ್ರತಿಯೊಬ್ಬರಿಗೂ ಅವರವರದ್ದೇ ಆದ comfort level ಅಂತ ಇರುತ್ತೆ. ಅದಕ್ಕೆ ಏನೋ ವಿಷಯ ಹೇರಿ 'ಹಿಂಗೇ ಮಲಗಬೇಕು' ಎಂದು ತಾಕೀತು ಮಾಡಿದರೆ ಪಾಪ ಬರೋ ನಿದ್ದೆಯೂ ಬಾರದೇ ಹೋಗಬಹುದು. ಶೀರ್ಷಾಶನ ಮಾಡಿಕೊಂಡು ಮಲಗುವ ಅಭ್ಯಾಸವಿದ್ದರೂ ಅವರನ್ನು ಅವರ ಪಾಡಿಗೆ ಬಿಟ್ಟುಬಿಡುವಾ.

ಮೌನ ಬಂಗಾರವೂ ಆಗಬಹುದು, ಬಣ್ಣವನ್ನೂ ಕಳೆದುಕೊಳ್ಳಬಹುದು!

ವಾಟ್ಸಾಪ್ ಮುಖೇನ "before you sleep let's know that" ಅಂತ ಒಬ್ಬರು ಮೆಸೇಜ್ ಕಳಿಸುತ್ತಿದ್ದರು. ಏನು ವಿಷಯಗಳು ಎಂದರೆ ಒಂಟೆ ನೀರನ್ನೇ ಕುಡಿಯದೆ ಏಳು ದಿನಗಳ ಕಾಲ ಬದುಕಬಲ್ಲದು ಎನ್ನುವ ರೀತಿ. ನಾನು ಅವರನ್ನು ಕೇಳಿದೆ "before you sleep..." ಅಂತಲೇ ಯಾಕೆ? ನಾಳೆ ತಿಳಿದುಕೊಂಡರೆ ಗಂಟೇನು ಹೋಗುತ್ತೆ? ಅಂತ.. ಅವರು ಮೆಸೇಜಿನಲ್ಲೇ ಕೆಟ್ಟದಾಗಿ ನೋಡಿ ಹೇಳಿದ್ರು "before you sleep..." ಅಂದ್ರೆ ಸಾಯೋ ಮುನ್ನ ಅಂತ! ಥತ್!!

Dont give up on your dreams, so sleep well

ಈಗ ಅರ್ಥ ಮಾಡಿಕೊಳ್ಳಿ sleep ಅಂದ್ರೆ ಬರೀ ನಿದ್ದೆಯಲ್ಲಾ. ಶರಶಯ್ಯೆಯ ಮೇಲೆ ಮಲಗಿದ್ದ ಭೀಷ್ಮರ ರೀತಿಯಾಗಬಹುದು, ನೋವಿನಲ್ಲೇ ನರಳುತ್ತಾ ಮಲಗಿದ್ದ ದುರ್ಯೋಧನನ ರೀತಿಯದ್ದೂ ಆಗಿರಬಹುದು, relax ಮಾಡಿಕೊಳ್ಳುತ್ತಾ ಕೊನೆಘಳಿಗೆಯಲ್ಲಿ ಮಲಗಿದ್ದ ಶ್ರೀಕೃಷ್ಣನ ರೀತಿಯದ್ದೂ ಆಗಿರಬಹುದು. ಇದ್ಯಾವುದೂ ಅಲ್ಲದೆ ಗ್ಲೂಕೋಸ್ ಚುಚ್ಚಿಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಂತೆ ಇರಬಹುದು, ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿಲ್ಲದ ಕೋಮಾ ಸ್ಥಿತಿಯಾಗಿರಬಹುದು. ಎಲ್ಲವೂ ಮಲಗಿರೋದೇ. ಮಲಗಿದ್ದೇವೆ ಎಂದರೆ ನಿದ್ದೆ ಮಾಡುತ್ತಿದ್ದೇವೆ ಅಂತಲ್ಲ.

ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .

'ಮಲಗೋ ಮುನ್ನ ಒಮ್ಮೆ ಆಲೋಚಿಸಿ' ಅಂತ ನಾನು ಫೇಸ್ಬುಕ್'ನಲ್ಲಿ ನಿಮಗೆ ಪ್ರಶ್ನೆ ಕೇಳೋ ವಿಷಯ ನಿಮಗೇನೂ ಹೊಸತಲ್ಲ. ನನ್ನ ಅರ್ಥದಲ್ಲಿ, ಪ್ರಶ್ನೆ ನಿಮ್ಮ ಮುಂದಿದೆ ಉತ್ತರ ಕಂಡುಕೊಂಡು ಮಲಗಿ. ಸಾಧನೆಗೈದ ತಲೆಯಿಂದ ದೇಹಕ್ಕೆ ಚೆನ್ನಾಗಿ ಬರುತ್ತೆ ಅಂತ.

ಮಲಗೋ ಭಂಗಿ ಯಾವುದೇ ಇರಲಿ, ಮಲಗುವ ಕೋಣೆ ಶಬ್ದ ರಹಿತವಾಗಿರಬೇಕು. ಆದರೆ ಮೆಲುವಾದ ಸಂಗೀತ ಇದ್ದರೆ ಅಡ್ಡಿಯಿಲ್ಲ ಎನ್ನುವವರು ಕಾರಂಜಿಯಿಂದ ಸುರಿವ ನೀರಿನ ಮೆಲು ಸಂಗೀತವನ್ನು ಹಾಕಿಕೊಂಡು ಮಲಗುತ್ತಾರೆ. ರಾತ್ರಿಯ ಪಾಳಿಯ ಕೆಲಸ ಮಾಡುವವರು (ನರ್ಸ್ ಇತ್ಯಾದಿ) ತಮ್ಮ ಕೋಣೆಯ ಕಿಟಕಿಗೆ ದಪ್ಪನೆಯ ಕರ್ಟನ್ ಹಾಕಿಕೊಂಡು ಹಗಲಿನಲ್ಲಿ ನಿದ್ರಿಸುತ್ತಾರೆ. Flightಗಳಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಮಲಗುತ್ತೇವೆ. ಒಟ್ಟಾರೆ ಮಂದ ಬೆಳಕು, ನಿಶ್ಶಬ್ದತೆ ಮುಖ್ಯ. ಇಷ್ಟೆಲ್ಲಾ ವೈಭೋಗ ಮಾಡಿದ್ದರೂ ಕೆಲವರಿಗೆ ಜಾಗ ಬದಲಾವಣೆಯಾದ್ರೆ ನಿದ್ರೆ ಬರೋದಿಲ್ಲ. ಯಾರದ್ದಾದರೂ ಮನೆಯಲ್ಲಿ ರಾತ್ರಿ ಉಳಿದುಕೊಂಡು, ಬೆಳಿಗ್ಗೆ ಎದ್ದಾಗ ಅವರ ಮನೆಯ ಜನ ಕೇಳೋ ಮೊದಲ ಪ್ರಶ್ನೆ 'ನಿದ್ದೆ ಬಂತಾ?' ಅಂತಲೇ! ತಮ್ಮದೇ ಮನೆಯಾದ್ರೂ ಕೆಲವರಿಗೆ ಮಗ್ಗುಲು ಬದಲಾದರೆ ನಿದ್ದೆ ಬರೋದಿಲ್ಲ. ಕೊಂಚ ಶಬ್ದ ಇದ್ದರೂ ನಿದ್ದೆ ಬರೋದಿಲ್ಲ. ಕೆಲವು ಪುಣ್ಯಾತ್ಮರೋ ಸಿಟಿ ಮಾರ್ಕೆಟ್'ನಲ್ಲೂ ಮಲಗಬಲ್ಲರು. ಬದಲಾವಣೆಗೆ ನಾವು ಸಿದ್ಧರಿದ್ದೇವೋ ಇಲ್ಲವೋ ಎಂಬುದನ್ನು ಈ ನಡವಳಿಕೆ ತಿಳಿಸಿಕೊಡುತ್ತದೆಯೇ?

Dont give up on your dreams, so sleep well

ಈಗ ಮಲಗಿದ್ದಾಯ್ತು, ಏಳೋಣ ಬನ್ನಿ. ಎದ್ದಾಗ ಬಲಮಗ್ಗುಲಿಗೆ ತಿರುಗಿ ಏಳಬೇಕೋ ಅಥವಾ ಎಡಮಗ್ಗುಲಿಯೂ ತಿರುಗಿ ಏಳಬಹುದಾ ಅಂತ ಕೇಳಿದರೆ ನಾನು ಹೇಳೋದು ಇಷ್ಟೇ, ಎದ್ದಿರಲ್ಲಾ ಅಷ್ಟು ಸಾಕು, thank god ಅನ್ನಿ ಸಾಕು ಅಂತ. ಹೀಗೇಕೆ ಹೇಳಿದೆ? ಕೆಲವರಿಗೆ ರಾತ್ರಿ ಮಲಗಿದ್ದಾಗ ಹೃದಯ ನಿಂತುಹೋಗುವ ಖಾಯಿಲೆ ಇರುತ್ತದೆ (Sleep apnea). ಅರ್ಥಾತ್ oxygen ತೆಗೆದುಕೊಳ್ಳುವ ಕ್ರಿಯೆಯಲ್ಲಿ ತೊಂದರೆಯುಂಟಾಗಿ ಹೃದಯ ನಿಂತೇ ಹೋಗಬಹುದಾದ ಖಾಯಿಲೆ. ಇಂಥವರು ಮಲಗೋ ಮುನ್ನ ಒಂದು ಆಕ್ಸಿಜನ್ ಮಷೀನ್ ಅನ್ನು ಪ್ಲಗ್ ಮಾಡಿ ಮೂಗಿಗೆ ಬಡಿದುಕೊಂಡು ಮಲಗುತ್ತಾರೆ (CPAP). Shortness of Breath at night times ಬಗ್ಗೆ ಎಚ್ಚರಿಕೆ ಇರಲಿ. ಆ ಖಾಯಿಲೆ ಅರಿವಿಲ್ಲದೆ ಹೋದವರು ರಾತ್ರಿ ಮಲಗಿದ ಮೇಲೆ ಬೆಳಿಗ್ಗೆ ಏಳುತ್ತಾರೆ ಅಂತ ಗ್ಯಾರಂಟಿ ಏನು?

ಕೇಳಿಸಿಕೊಳ್ಳುವುದಕ್ಕೂ, ಆಲಿಸುವುದಕ್ಕೂ ಏನು ವ್ಯತ್ಯಾಸ? ಅಲ್ಲೇ ಇದೆ ಸ್ವಾರಸ್ಯ

ನೆಮ್ಮದಿಯಾಗಿ ನಿದ್ದೆ ಮಾಡಲು ಏನು ಮಾಡಬೇಕು? ಅಥವಾ ಮಾಡಬಾರದು? ಮೊದಲಿಗೆ ಮನಸ್ಸು ಶಾಂತವಾಗಿರಬೇಕು. ಸಿಟ್ಟು ಮಾಡಿಕೊಂಡು / ಊಟ ಬಿಟ್ಟು ಮಲಗದಿರಿ. ಕ್ರೈಂ ಡೈರಿ ನೋಡಿ ಮಲಗದಿರಿ. ದೇಹ ದಣಿದರೆ ಒಳ್ಳೆಯ ನಿದ್ದೆ ಬರುತ್ತದೆ ಎಂದು ವ್ಯಾಯಾಮ ಮಾಡಿ ಮಲಗುವ ಯತ್ನ ಮಾಡಿದರೆ ನಿದ್ದೆ ಬಂದೇ ಬರುತ್ತದೆ ಎಂಬ ಗ್ಯಾರಂಟಿ ಇಲ್ಲ. ಕೆಲವೊಮ್ಮೆ ಅತೀ ದಣಿದರೂ ದೇಹಕ್ಕೆ ನಿದ್ದೆ ಬಾರದು. Fresh ಆಗಿ ಸ್ನಾನ ಮಾಡಿ ಮಲಗಬಹುದು. ಆದರೆ ಇಲ್ಲೂ ಅಷ್ಟೇ ನಿದ್ದೆಯ ಬಗ್ಗೆ ಗ್ಯಾರಂಟಿ ಇಲ್ಲ. ಆರಾಮವಾಗಿ ರಾತ್ರಿ ಎಂಟರ ಹೊತ್ತಿಗೆ ಊಟ ಮುಗಿಸಿ, ಸಾಧ್ಯವಾದರೆ ಒಂದು ವಾಕ್ ಮಾಡಿ, ಹರಟೆ ಕೊಚ್ಚಿ (ರಾಜಕೀಯ, ಮತ, ಧರ್ಮ ಇವೆಲ್ಲ ಮಾತಿನಲ್ಲಿ ಬೇಡ), ಏನಾದರೂ ಓದಿ ನಂತರ ಮಲಗಿ.

ಕೆಲವರಿಗೆ (ನನಗೆ) ತಲೆಯು ದಿಂಬಿಗೆ ಕಿಸ್ ಕೊಟ್ಟರೆ ನಿದ್ದೆ ಬರಬಹುದು, ಕೆಲವರಿಗೆ ಮಲಗಿದ ಒಂದು ಘಂಟೆಯ ನಂತರ ನಿದ್ದೆ ಬರಬಹುದು. ಕೆಲವರಿಗೆ ಮಧ್ಯೆ ಎಚ್ಚರವಾಗಬಹುದು, ಕೆಲವರಿಗೆ ಒಮ್ಮೆ ಮಲಗಿದರೆ ಹಗಲಿನಲ್ಲೇ ಎಚ್ಚರವಾಗೋದು. ಕೆಲವರಿಗೆ ಮಧ್ಯದಲ್ಲಿ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆ ಹತ್ತಲೇ ಒಂದು ಘಂಟೆಯಾಗಬಹುದು. ಕೆಲವರಿಗೆ ರಾತ್ರಿ ನಿದ್ದೆಯೇ ಬಾರದೆ ಹಗಲಿನಲ್ಲಿ ನಿದ್ರೆ ಬರಬಹುದು. ಇದೆಲ್ಲಾ ಒಂದು ರೀತಿಯಾದರೆ ಮಲಗಿದ್ದಾಗ ಕೆಲವರು ಹಲ್ಲು ಕಡಿಯುತ್ತಾರೆ, ಕೆಲವರು ಮಾತನಾಡುತ್ತಾರೆ, ಕೆಲವರು ಎದ್ದು ಓಡಾಡುತ್ತಾರೆ. ನಿಮ್ಮ ನಿದ್ದೆ ಹೇಗೆ?

Dont give up on your dreams, so sleep well

ಮನುಷ್ಯನಿಗೆ ಏಳರಿಂದ ಒಂಬತ್ತು ಘಂಟೆಗಳ ಕಾಲ ನಿದ್ದೆ ಅತ್ಯಾವಶ್ಯಕ ಎನ್ನುತ್ತಾರೆ ವಿಜ್ಞಾನಿಗಳು. ಈ ವಿಜ್ಞಾನಿಗಳು ಎಷ್ಟು ಹೊತ್ತು ಮಲಗುತ್ತಾರೆ ಎಂದು ಕೇಳದಿರಿ. ಇಂದಿನ ದಿನಗಳಲ್ಲಿ ಇಷ್ಟು ಹೊತ್ತು ಮಲಗಲು ಸಾಧ್ಯವೇ ಎಂದು ಮೂಗು ಮುರಿಯುವವರು ಬಹಳ. ಇನ್ನೇನು ಮಲಗಬೇಕು ಎಂದುಕೊಂಡಾಗ ವಾಟ್ಸಾಪ್ ಮೆಸೇಜು ಬರುತ್ತೆ, ನೋಡಲೇಬೇಕು ಎನ್ನುತ್ತಾರೆ ಕೆಲವರು. ಮಲಗೋ ಮುನ್ನ ಒಮ್ಮೆ ನನ್ನ profile pictureಗೆ ಯಾರಾದರೂ ಲೈಕ್ ಒತ್ತಿದ್ದಾರಾ? Stunning ಅಂತ ಹೇಳಿದ್ದಾರಾ ಅಂತ ನೋಡೋ ಆಸೆ ಸಹಜ. ಅವರ ಗ್ರಹಚಾರಕ್ಕೆ ಹೊಸತಾಗಿ ಒಂದೈದು ಲೈಕು ಹತ್ತು ಕಾಮೆಂಟ್ ಇತ್ತು ಅಂದ್ರೆ ಮುಗೀತು, ಮಲಗೋ ಸಮಯ ಇನ್ನೊಂದು ಘಂಟೆ ಮುಂದಕ್ಕೆ ಹೋಯ್ತು ಅಂತಾನೇ ಅರ್ಥ.

ಬಾಹ್ಯ ಪರಪಂಚದ ವ್ಯಾಮೋಹ ಸಹಜ. ಆದರೆ ಅದಕ್ಕೆ ಬೇಲಿಹಾಕಿಕೊಳ್ಳೋದು ನಮ್ಮ ಕೈಲಿದೆ. ಜಗತ್ತಿನಲ್ಲಿ ಎಲ್ಲವೂ ಒಳ್ಳೆಯದೇ ಎಲ್ಲವೂ ಅಪಾಯಕಾರಿಯೇ, ಆದರೆ ಬಳಸಿಕೊಂಡ ರೀತಿ ಅಷ್ಟೇ. ದೇಹದಲ್ಲೇ ಬೆಳೆದುಬಂದ ಖಾಯಿಲೆಯಾದರೆ ಅನುಭವಿಸಬೇಕು ನಿಜ, ಆದರೆ ನಾವೇ ಖಾಯಿಲೆ ಹುಟ್ಟಿಸಿಕೊಂಡು ಅದಕ್ಕೆ ಬಲಿಯಾಗುವುದರಲ್ಲಿ ಏನಿದೆ ಸುಖ? ನೆಮ್ಮದಿಯಾಗಿ ನಿದ್ದೆ ಮಾಡಿ. ಈ ಲೇಖನ ಬಗ್ಗೆ ಮಲಗೋ ಮುನ್ನ ಯೋಚಿಸಿ ಹೇಳಿ ಎನ್ನಲೇ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahatma Gandhi had told, Each night, when I go to sleep, I die. And the next morning, when I wake up, I am reborn. Sleep well to get dreams. Unless you dream, you can't achieve anything. Kannada essay on sleep and method of sleeping by Srinath Bhalle Richmond.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+1353354
CONG+09090
OTH09898

Arunachal Pradesh

PartyLWT
BJP23436
JDU077
OTH11112

Sikkim

PartyWT
SKM1717
SDF1515
OTH00

Odisha

PartyWT
BJD112112
BJP2323
OTH1111

Andhra Pradesh

PartyLWT
YSRCP0151151
TDP02323
OTH011

LOST

Venugopal Reddy - YSRCP
Guntur
LOST
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more