ಆದಾಬ್ ಮೊಹಮ್ಮದ್ ರಫಿ, ಆದಾಬ್ ಪಿಬಿ ಶ್ರೀನಿವಾಸ್

ಕನ್ನಡದ 'ಒಂದೇ ಬಳ್ಳಿಯ ಹೂವುಗಳು' ಚಿತ್ರಕ್ಕಾಗಿ 'ನೀನೆಲ್ಲಿ ನಡೆವೆ ದೂರ...' ಹಾಡನ್ನು ಹಾಡಿದ್ದ ರಫಿ ಸಾಬ್ ರನ್ನು ನೆನೆಯಲು ಇನ್ನೊಂದು ಕಾರಣವಿದೆ. ಅದರ ಹಿಂದೆ ಮಾನವೀಯತೆಯ ಮಹತ್ವವೂ ಇದೆ. ಇದೇ ನ.11ರಂದು ಬೆಂಗಳೂರಿನಲ್ಲಿ ರಫಿ ಅವರು ಹಾಡಿದ್ದ ಸಂತೋಷಭರಿತ ಹಾಡುಗಳು ತೇಲಿತೇಲಿ ಬರಲಿವೆ. ಆ ಹಾಡುಗಳನ್ನು ಕೇಳಿದ ಸಂತೋಷದಲ್ಲಿಯೂ ಎರಡು ಹನಿ ಕಣ್ಣೀರು ಹಾಕಲು ಸಿದ್ಧರಾಗಿ ಬನ್ನಿ.
ಹಣದ ಅಗತ್ಯ ಇರುವವರಿಗೆ ಸಂಗೀತ ಕಾರ್ಯಕ್ರಮ ಅಥವಾ ಇನ್ನಾವುದೇ ರೀತಿಯ ಕ್ರೀಡೆ ಏರ್ಪಡಿಸಿ ಚಂದಾ ಎತ್ತುವುದನ್ನು ಕೇಳಿದ್ದೇವೆ. ಆದರೆ, ಈ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದು ಕ್ಯಾನ್ಸರ್ ರೋಗದಿಂದ ತೀವ್ರವಾಗಿ ಬಳಲುತ್ತಿರುವವರಿಗಾಗಿ. ರೋಟರಿ ಬೆಂಗಳೂರು ಇಂದಿರಾನಗರ ಸಂಸ್ಥೆ ಚೌಡಯ್ಯ ಸ್ಮಾರಕ ಭವನದಲ್ಲಿ 'ಆದಾಬ್ ರಫಿ' ಕಾರ್ಯಕ್ರಮವನ್ನು ಸಂಜೆ 6ಕ್ಕೆ ಏರ್ಪಡಿಸಿದೆ.
ತಲ್ಲೀನನಾಗಿ ಹಾಡುತ್ತಿದ್ದರೆ ಮೊಹಮ್ಮದ್ ರಫಿಯೇ ಮತ್ತೆ ಜೀವಂತವಾಗಿ ಬಂದಿದ್ದಾರೆ ಎನಿಸುವ ಕಂಠದ ಹೋಷಿಯಾರಪುರದ ರಾಮ್ ತೀರ್ಥ, ಮುಂಬೈನ ಗೌರವ್ ಬಂಗಿಯಾ, ಅದ್ಭುತ ಮಾಧುರ್ಯದ ರಿತೀಶಾ ಮತ್ತು ಪ್ರತಿಭಾನ್ವಿತ ಯುವ ಗಾಯಕ ಯಾಸೀನ್ ಕೇಳುಗನ್ನು ಗಂಧರ್ವಲೋಕಕ್ಕೆ ಕರೆದೊಯ್ಯಲಿದ್ದಾರೆ.
ಟಿಕೆಟ್ ಗಳು www.buzzintown.com ಅಂತರ್ಜಾಲ ತಾಣದಲ್ಲಿ ಲಭ್ಯವಿವೆ. ಜಯನಗರ 3ನೇ ಬ್ಲಾಕ್ ನಲ್ಲಿರುವ ಕ್ಯಾಲಿಪ್ಸೋದಲ್ಲಿ ಕೂಡ ಟಿಕೆಟ್ ಸಿಗುತ್ತವೆ. ರು.300, ರು.500, ರು.700 ಮತ್ತು ರು.1000 ಟಿಕೆಟ್ ಗಳು ಲಭ್ಯವಿವೆ. ಮಾನವೀಯತೆಯ ಸೆಲೆಯುಳ್ಳ ಸಂಗೀತ ಪ್ರೇಮಿಗಳು ಟಿಕೆಟ್ ಕೊಂಡು ಕಾರ್ಯಕ್ರಮಕ್ಕೆ ಬರಬಹುದು. ಹಾಗೆಯೆ, ಇಲ್ಲಿ ಸಂಗ್ರಹವಾದ ಹಣ ಕ್ಯಾನ್ಸರ್ ರೋಗಿಗಳಿಗಾಗಿಯೇ ವಿನಿಯೋಗವಾಗಲಿ.
ನೆನಪಿಡಿ : ಕಾರ್ಯಕ್ರಮ ನಡೆಯುವ ಸ್ಥಳ ; ಮಲ್ಲೇಶ್ವರದ ವೈಯಾಲಿ ಕಾವಲ್ ನಲ್ಲಿರುವ ಚೌಡಯ್ಯ ಸ್ಮಾರಕ ಭವನ. ಸಮಯ ; ಸಂಜೆ 6 ಗಂಟೆಗೆ. ಕಾಲಾವಧಿ ; 2 ಗಂಟೆ.
ಪಿಬಿಎಸ್ ಸಂಗೀತ ಸಂಜೆ : ನನಗೆ ರಫಿ ಹೇಗೋ ಪಿಬಿ ಶ್ರೀನಿವಾಸ್ ಕೂಡ ಹಾಗೆ. ನವೆಂಬರ್ 13ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪಿಬಿ ಶ್ರೀನಿವಾಸ್ ಅವರ ಸುಮಧುರ ಚಿತ್ರಗೀತೆಗಳ ಗಾನಸೌರಭ ಕಾರ್ಯಕ್ರಮವನ್ನು ಸೌರಭ ಸಂಸ್ಥೆ ಹಮ್ಮಿಕೊಂಡಿದೆ. ಇಲ್ಲಿ ಟಿಕೆಟ್ ಕೊಳ್ಳುವ ಅವಶ್ಯಕತೆಯಿಲ್ಲ, ಪ್ರವೇಶ ಉಚಿತ.












Click it and Unblock the Notifications