ಜಿಆರ್ ವಿಶ್ವನಾಥ್ ಕ್ಲೀನ್ ಬೋಲ್ಡ್ ಇನ್ ಜೆಪಿನಗರ್

ಇವತ್ತು ಕೂಡ ಹೀಗೇ ಆಯಿತು. ಐದಾರು ವರ್ಷಗಳಿಂದ ಗುತ್ತಿಗೆದಾರರು ಮತ್ತು ಬಿಡಿಎ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ಬೆಂಗಳೂರಿನ ಜೆಪಿನಗರದ 15ನೇ ಮುಖ್ಯರಸ್ತೆಯಲ್ಲಿ ಅಡ್ಡಡ್ಡ ಮಲಗಿದ್ದ ಕೆಳಸೇತುವೆ ನಿರ್ಮಾಣ ಅಂತೂಇಂತೂ ಪೂರ್ಣವಾಯಿತು. ಮಂಗಳವಾರ ಬೆಳಗ್ಗೆ ಇದರ ಅಧಿಕೃತ ಉದ್ಘಾಟನೆಯೂ ನೆರವೇರಿತು. ಈ ಮಾರ್ಗ ಬಳಸಿ ಸಂಚರಿಸುವ ವಾಹನ ಚಾಲಕರು ಇನ್ನು ಸ್ವಲ್ಪ ಉಸಿರಾಡಬಹುದು.
ಉದ್ಘಾಟನೆ ಸುದ್ದಿಯನ್ನು ಬಿತ್ತರಿಸುವುದಕ್ಕೆ ಜಯನಗರದಿಂದ ಜೆಪಿನಗರದವರೆಗಿನ ಹಾದಿಬೀದಿಗಳಲ್ಲಿ ನಿಮ್ಮನ್ನು ಸ್ವಾಗತಿಸುವುದಕ್ಕೆ ಭಿತ್ತಿಚಿತ್ರಗಳ ಭರಾಟೆಯೋ ಭರಾಟೆ. ಕೂಡು ರಸ್ತೆಗಳಲ್ಲಿ ನೇತುಹಾಕಿರುವ ಕಟ್ ಔಟುಗಳಲ್ಲಿ ಯಥಾಪ್ರಕಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹಮಂತ್ರಿ ಆರ್.ಅಶೋಕ, ವಿಧಾನಸಭಾ ಸದಸ್ಯರಾದ ವಿಜಯ್ ಕುಮಾರ್, ಸತೀಶ್ ರೆಡ್ಡಿ ಹೀಗೆ ಮರಿಪುಡಾರಿಗಳಿಂದ ಹಿಡಿದು ಎಲ್ಲರ ಅಂದದ ಚಿತ್ರಗಳು ದಾರಿಹೋಕರನ್ನು ನೋಡುತ್ತಿದ್ದವು.
ಉದ್ಘಾಟನೆಗೊಂಡ ಕೆಳಸೇತುವೆಗೆ ಮಾಜಿ ಕ್ರಿಕೆಟರ್, ಸ್ಕ್ವೇರ್ ಕಟ್, ಸ್ಕ್ವೇರ್ ಡ್ರೈವ್ ಸ್ಪೆಷಲಿಸ್ಟ್ ಜಿ ಆರ್ ವಿಶ್ವನಾಥ್ ಅವರ ಹೆಸರನ್ನು ಇಡಲಾಗಿದೆ. ಕ್ರಿಕೆಟ್ ಜಗತ್ತು ಕಂಡ ಸಭ್ಯ ಮತ್ತು ಮನಮೋಹಕ ಬ್ಯಾಟ್ಸ್ ಮನ್ ಕನ್ನಡಿಗ ಜಿಆರ್ ವಿ ಅವರ ಹೆಸರನ್ನು ಇಡುವುದರ ಮೂಲಕ ಬಿಡಿಎ ಉತ್ತಮವಾದ ಕೆಲಸಮಾಡಿದೆ. ಬಿಡಿಎಗೆ ಅಭಿನಂದನೆಗಳು.
ಭಿತ್ತಿಚಿತ್ರದಲ್ಲಿ ಮಾಜಿ ಕ್ರಿಕೆಟರ್ ನಾಪತ್ತೆ : ದಕ್ಷಿಣ ಬೆಂಗಳೂರಿನಲ್ಲಿ ರಾರಾಜಿಸುತ್ತಿರುವ ಭಿತ್ತಿಚಿತ್ರಗಳಲ್ಲಿ ಮಾಜಿ ಕ್ರಿಕೆಟಿಗ ಗುಂಡಪ್ಪ ರಂಗನಾಥ್ ವಿಶ್ವನಾಥ್ ಅವರ ಚಿತ್ರ ನಾಪತ್ತೆ ಆಗಿರುವುದು ಒಂದು ಪ್ರಮುಖ ಲೋಪ. ಇದರ ಅವಶ್ಯಕತೆ ಈ ಕಾರ್ಯಕ್ರಮಕ್ಕೆ ಇತ್ತು ಎಂದು ಇವರಾರಿಗೂ ಅನ್ನಿಸದೇ ಇದ್ದುದು ಸೋಜಿಗ. ನಿತ್ಯ ತಮ್ಮ ಫೋಟೋಗಳನ್ನು ತೋರಿಸುವ ರಾಜಕಾರಣಿಗಳು ವಿಶ್ವ ಅವರ ಚಿತ್ರವನ್ನೂ ಭಿತ್ರಿಚಿತ್ರದಲ್ಲಿ ಸೇರಿಸಿದ್ದರೆ ಅವರಪ್ಪನ ಗಂಟೇನು ಹೋಗುತ್ತಿತ್ತು. ಬ್ಯಾನರ್ ನಲ್ಲಿ ಫೋಟೊ ಇಲ್ಲವೆಂದು ಜಿ.ಆರ್ ಏನೂ ಬೇಜಾರು ಮಾಡಲಿಕ್ಕಿಲ್ಲ. ಆದರೆ ಅವರ ಅಭಿಮಾನಿಗಳಿಲ್ಲವೆ. ದಿನಾ ಪುಡಾರಿಗಳ ಮುಖ ನೋಡಿದವರಿಗೆ ಒಂದಿಷ್ಟು ಚೇಂಜ್ ಆದರೂ ಸಿಗುತ್ತಿತ್ತು.
ಕೆಳಸೇತುವೆಗೆ ಜಿಆರ್ ವಿಶ್ವನಾಥ್ ಅವರ ಹೆಸರು ಇಡುವುದಕ್ಕೆ ತಕರಾರುಗಳು ಬಾರದಿದ್ದುದು ಒಂದು ಸಮಾಧಾನಕರ ವಿಚಾರ. ಅವರು ವಾಸಿಸುವ ಮನೆಯ ಬಳಿಯೇ ಇರುವ ಕೆಳಸೇತುವೆಗೆ ಅವರ ಹೆಸರು ಇಟ್ಟಿರುವುದು ಔಚಿತ್ಯಪೂರ್ಣ. ಇದೇ ರಸ್ತೆಯಲ್ಲಿ ನಟಿ ಆರತಿ ಅವರ ಮನೆಯೂ ಇತ್ತು. ಜೆಪಿ ನಗರ ಬಿಕೋ ಎನ್ನುತ್ತಿದ್ದ ಕಾಲದಲ್ಲಿ ಆರತಿ ಇಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದರು. ಅವರು ಉತ್ತರ ಕ್ಯಾಲಿಫೋರ್ನಿಯಾಗೆ ವಲಸೆ ಹೋಗಿರುವುದರಿಂದ ಕೆಳಸೇತುವೆಗೆ ಯಾರ ಹೆಸರು ಇಡಬೇಕು ಎಂಬ ಚರ್ಚೆ ಎದ್ದೇಳದಿದ್ದುದು ನಮ್ಮ ಪುಣ್ಯ. ಕೇಳಸೇತುವೆ ಉದ್ಘಾಟನೆಗೆ ವಿಶ್ವ ಅವರಷ್ಟೇ ಆಕರ್ಷಕ ಬ್ಯಾಟಿಂಗಿಗೆ ಹೆಸರಾದ ರಾಹುಲ್ ದ್ರಾವಿಡ್ ಬಂದಿದ್ದು ಸಂತೋಷ.
ರಾಜ್ಯಕ್ಕೆ, ರಾಷ್ಟಕ್ಕೆ ಮತ್ತು ಕ್ರಿಕೆಟ್ಟಿಗೆ ಒಳ್ಳೇ ಹೆಸರು ತಂದ ವಿಶ್ವ ಮತ್ತು ದ್ರಾವಿಡ್ ಇಬ್ಬರನ್ನೂ ನೋಡಲು ಕ್ರಿಕೆಟ್ ಅಭಿಮಾನಿಗಳು ಜೆಪಿನಗರಕ್ಕೆ ಮುತ್ತಿಗೆ ಹಾಕಿದ್ದರು. ರಾಜಕಾರಣಿಗಳ ಮುಖಸ್ತುತಿ ಮಾಡುವುದಕ್ಕೆ ಅವರ ಅಭಿಮಾನಿಗಳು ಮತ್ತು ಇವರನ್ನೆಲ್ಲ ಕಾಯುವುದಕ್ಕೆ ಪೊಲೀಸರ ದಂಡು ಜೆಪಿನಗರಕ್ಕೆ ಲಗ್ಗೆ ಹಾಕಿದ್ದರು. ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿದ್ದ ವಿಶ್ವನಾಥ್ ಅವರ ಒಂದು ಚಿತ್ರವನ್ನೂ ಹಾಕದೆ ಬಿಡಿಎ, ಜಯನಗರ, ಬೊಮ್ಮನಹಳ್ಳಿ ಬಿಜೆಪಿ ಘಟಕದ ಕಾರ್ಯಕರ್ತರು ಸಮಯ ಸಂದರ್ಭದ ಔಚಿತ್ಯವನ್ನು ಕಡೆಗಾಣಿಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನೇ ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ G.R Vishwanath Clean Bowled in JP Nagar, for a no Ball. [ಬಿಬಿಎಂಪಿ]











Click it and Unblock the Notifications