ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೆ 20 ಸಿಗರೇಟು ಸೇದುವ 2 ವರ್ಷದ ಹುಡ್ಗ

By * ಶಾಮ್
|
Google Oneindia Kannada News

2 year old Ardi Riyad, tobacco addict
ಸಿಗರೇಟು, ಬೀಡಿ, ತಂಬಾಕು ಪುಡಿ, ಗುಟ್ಕಾ, ಸಿಗಾರ್, ಪಾನ್ ಪರಾಗ್ ಮುಂತಾದ ತಂಬಾಕು ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಪದಾರ್ಥಗಳನ್ನು ಸೇವಿಸುವುದರಿಂದ ತಲೆದೋರುವ ನಾನಾ ರೋಗಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಮಂದಿ ನಿತ್ಯ ಸಾವನ್ನಪ್ಪುತ್ತಿದ್ದಾರೆ. ನೀವು ಸೇದಬೇಡಿ. ಸೇದುವ ಚಟ ಇದ್ದರೆ ಇವತ್ತೇ ಬಿಟ್ಟುಬಿಡಿ.

ಹಾಗಂತ ಹಿತನುಡಿಯುವ ಮಾತುಗಳು, ಉದ್ದುದ್ದ ಲೇಖನಗಳ ಜತೆಗೆ ಹಿತೈಷಿಗಳು, ಸ್ನೇಹಿತರು, ಮನೆಯವರು, ವೈದ್ಯರು ಹಾಗೂ ಎಂದೂ ಸಿಗರೇಟುಗಳನ್ನೇ ಸೇದದವರು ಧೂಮಪಾನದ ಕೆಟ್ಟ ಪರಿಣಾಮಗಳ ಬಗ್ಗೆ ಬುದ್ದಿವಾದ ಹೇಳುತ್ತಲೇ ಇರುತ್ತಾರೆ. ತಂಬಾಕು ಚಟಕ್ಕೆ ಅಂಟಿಕೊಂಡವರಿಗೆ ಮಾತ್ರ ಈ ಯಾವ ಹಿತವಾದ ಮಾತುಗಳೂ ಕೇಳಿಸುವುದಿಲ್ಲ. ಕೇಳಿಸಿದರೂ ಹೊಗೆಯನ್ನು ಬಾಯಲ್ಲಿ ಎಳೆದುಕೊಂಡು ಮೂಗಿನಿಂದ ಹೊರಬಿಡುತ್ತಾರೆ.

ಡಿಗ್ರಿ ಪಾಸಾಗಿ ಕೆಲಸಕ್ಕೆ ಸೇರಿದನಂತರ ಸ್ವಂತ ಸಂಪಾದನೆ ಹಣದ ಮೇಲೆ ಸಿಗರೇಟನ್ನೋ ಬೀಡಿಯನ್ನೋ ಸೇದುವ ಚಟಕ್ಕೆ ಒಗ್ಗಿಕೊಳ್ಳುವ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ನಾಲಕ್ಕನೇ ತರಗತಿವರೆಗೆ ಓದಿ ಶಾಲೆಬಿಟ್ಟು ಗ್ಯಾರೇಜಿನಲ್ಲಿ ಹೆಲ್ಪರ್ ಆಗಿ ದುಡಿಯುವ ಹುಡುಗ ಹತ್ತನೇ ವರ್ಷಕ್ಕೆ ಬೀಡಿ ಸೇದಲು ಆರಂಭಿಸುತ್ತಾನೆ. ಹಳ್ಳಿಯಲ್ಲಿ ಹೈಸ್ಕೂಲು ಇಲ್ಲ ಎಂದು ದೊಡ್ಡ ಊರಿಗೆ ಹೋಗಿ ಹಾಸ್ಟೆಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸುವ ಹುಡುಗ ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಲ್ ಟಿಕೇಟ್ ಪಡೆಯುವ ಮೂರು ವರ್ಷಕ್ಕೆ ಮುಂಚೆ ಸಿಗರೇಟು ರುಚಿ ಕಂಡಿರುತ್ತಾನೆ.

ವ್ಯಸನಗಳು ಯಾವುದೋ ಒಂದು ಗಳಿಗೆಯಲ್ಲಿ ಅಮರಿಕೊಳ್ಳುತ್ತವೆ. ಅದಕ್ಕೆ ವಯಸ್ಸಿನ ಮಿತಿಯಂತ ಏನೂಇಲ್ಲ. ಮುಖ್ಯವಾಗಿ ಚಟಗಳು ಸಹವಾಸ ದೋಷದಿಂದ ಬರುವಂಥವು. ಅವನು ಸೇದುತ್ತಾನೆ ಅಂತ ಇವನೂ ಆರಂಭಿಸುತ್ತಾನೆ. ಇವಳು ಸೇದಿದಳು ಎಂದು ಅವಳೂ ಸೇದುತ್ತಾಳೆ. ಒಮ್ಮೆ ಶುರುವಾದದ್ದು ನಿಲ್ಲಬೇಕಾದರೆ ವ್ಯಸನಿಗೆ ಭಯಂಕರ ಕಾಯಿಲೆ ಬರಬೇಕು ಅಥವಾ ಸತ್ತೇ ಹೋಗಿರಬೇಕು.

ಕಳೆದ ತಿಂಗಳು ಕರ್ನಾಟಕ ಪ್ರಜೆಗಳನ್ನು ನಿಬ್ಬೆರಗಾಗಿಸಿದ ಒಂದು ಸುದ್ದಿ ನಿಮಗೂ ಗೊತ್ತಿರಬಹುದು. ಹರಪನಹಳ್ಳಿಯ 12 ವರ್ಷದ ಹುಡುಗನೊಬ್ಬನಿಗೆ ಕುಡಿಯುವ ಚಟ ಫೆವಿಕಾಲ್ ಟೈಪ್ ಅಂಟಿಕೊಂಡಿದೆ ಎಂತಲೂ ಅವನಿಗೆ ದಿನಕ್ಕೆ ಎರಡು ಕ್ವಾರ್ಟರ್ ಬ್ರಾಂಡಿ ಸಿಗದೆ ಇದ್ದರೆ ಚಡಪಡಿಸುತ್ತಾನೆಂದೂ ಸುದ್ದಿ ಆಗಿತ್ತು. ಅಬಕಾರಿ ಸಚಿವ ರೇಣುಕಾರವರು ಖುದ್ದಾಗಿ ಅವನನ್ನು ಭೇಟಿ ಮಾಡಿ ಆತನ ಉಭಯ ಕುಶಲೋಪರಿ ವಿಚಾರಿಸಿದರೆಂದು ಸುದ್ದಿಯಾಗಿತ್ತು.

ಈ ಹುಡುಗನಿಗೆ ಚಿಕಿತ್ಸೆ ಆಗಬೇಕು. ಜೊತೆಗೆ ಸಂಶೋಧನೆಯೂ ಆಗಬೇಕು.
12 ವರ್ಷದ ಬಾಲಕ ಬ್ರಾಂದಿ ಅಡಿಕ್ಟ್ ಹೇಗಾದ ಎಂದು ಚಕಿತಪಟ್ಟವರು ಬಹಳ ಮಂದಿ. ಚಕಿತ ಪಟ್ಟವರಲ್ಲಿ ಕುಡಿಯುವವರೂ ಮತ್ತು ಕುಡಿಯದವರೂ ಇದ್ದರು. ಇವರೆಲ್ಲರೂ ದಿಗ್ಭ್ರಾಂತರಾಗುವ ಹೊಸ ಸುದ್ದಿ ಈಗ ಇಂಡೋನೇಶಿಯಾದ ಸುಮಾತ್ರದಿಂದ ಬಂದಿದೆ. ಅರ್ದಿ ರಿಜಾಲ್ ಎಂಬ ಹೆಸರಿನ ಎರಡು ವರ್ಷದ ಹುಡುಗ ದಿನಕ್ಕೆ ಎರಡು ಪ್ಯಾಕೆಟ್ ಸಿಗರೇಟು ಎಳೆಯುತ್ತಾನಂತೆ!

ಅಪ್ಪ ಅಮ್ಮ ಸಿಗರೇಟು ತೆಗೆಸಿಕೊಡದಿದ್ದರೆ ಚಡಪಡಿಕೆ ಹೆಚ್ಚಾಗಿ ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾನಂತೆ. ತಲೆ ಸುತ್ತು ಬರುತ್ತಿದೆ ಎನ್ನುತ್ತಾನಂತೆ. ಅವನು ತಪ್ಪು ಮಾಡುತ್ತಿದ್ದಾನೆ ಎನ್ನುವದಕ್ಕಿಂತ ತಂಬಾಕು ಅವನಿಗೆ ಸಮಸ್ಯೆ ಆಗಿದೆ ಎಂದು ಭಾವಿಸುತ್ತೇನೆ ಎಂದು ಹುಡುಗನ ತಾಯಿ ಡಯಾನಾ ನಿಸ್ಸಹಾಯಕ ಧ್ವನಿಯಲ್ಲಿ ಹೇಳುತ್ತಾರೆ. ಹುಡುಗನ ತಂದೆ ಮೊಹಮ್ಮದ್ ರಿಜಾಲ್ ಗೆ ಇದೇನು ದೊಡ್ಡ ಸಮಸ್ಯೆ ಅನ್ನಿಸುವುದಿಲ್ಲ. ಮಗ ಆರೋಗ್ಯವಾಗಿದ್ದಾನೆ, ಸಿಗರೇಟು ಕೊಡದಿದ್ದರೆ ಮಾತ್ರ ಹುಚ್ಚನ ರೀತಿ ಆಡುತ್ತಾನೆ ಎಂದು ಟೆಲಿಗ್ರಾಫ್ ಪತ್ರಿಕೆಯ ವರದಿಗರಾರರಿಗೆ ತಿಳಿಸಿದ್ದಾನೆ.

ಅದೇನೇ ಇರಲಿ, ಕಡಿಮೆ ಆದಾಯ ಇರುವ ಕುಟುಂಬಗಳಲ್ಲಿ ಈ ವಿದ್ಯಮಾನ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಹೀಗಾಗುವುದಕ್ಕೆ ತಂದೆ ತಾಯಿ ಪೋಷಕರೇ ಕಾರಣ ಎಂದು ವಾಷಿಂಗ್ ಟನ್ ಡಿಸಿ ಪ್ರದೇಶದಲ್ಲಿನ ಟೊಬ್ಯಾಕೋ ಫ್ರೀ ಕಿಡ್ಸ್ ಚಳವಳಿಯ ಮುಖ್ಯಸ್ಥ ಮ್ಯಾಥ್ಯೂ ಮಯ್ಯರ್ಸ್ ಸುಮಾತ್ರದ ಧೂಮಪಾನ ವ್ಯಸನಿ ರಿಜಾಲ್ ಉದಾಹರಣೆ ಇಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ.

ಸುಮಾತ್ರದಲ್ಲಿ ನಡೆದ ಈ ಘಟನೆಯಿಂದ ಅಮೆರಿಕಾದಲ್ಲಿರುವ ಧೂಮಪಾನ ವಿರೋಧಿ ಚಳವಳಿಗಾರರು ಚುರುಕಾಗಿದ್ದಾರೆ. ಇಂಡೋನೇಷಿಯಾ ಸರಕಾರ ಈ ಕೂಡಲೇ ಕ್ರಮ ಕೈಗೊಂಡು ಎಳವೆಯಲ್ಲಿ ಧೂಮಪಾನ ಚಟಕ್ಕೆ ಬಲಿಯಾಗುವ ಮಕ್ಕಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಗರೇಟು ಮಾರಾಟ ಕಂಪನಿಗಳು ಅಮಾಯಕ ಬಡ ಕುಟುಂಬದ ಮಕ್ಕಳ ಮೇಲೆ ಮಾಡುತ್ತಿರುವ ಆಕ್ರಮಣ ಇದಾಗಿದೆ ಎಂದು ಗುಡುಗುತ್ತಿದ್ದಾರೆ.

ಸಿಗರೇಟು ಚಟದ ಎರಡು ವರ್ಷದ ಹುಡುಗನ ಪ್ರತಾಪಗಳು ವರದಿಯಾಗಿರುವುದು ದಕ್ಷಿಣ ಸುಮಾತ್ರದ ಕರಾವಳಿ ಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ. ಹುಡುಗನ ಅಪ್ಪ ಮಗ 18 ತಿಂಗಳಿದ್ದಾಗ ಒಂದು ಸಿಗರೇಟು ಕೊಟ್ಟು ಸೇದಿಸಿ ರುಚಿ ತೋರಿಸಿದ್ದನಂತೆ ಎಂದು ಎಎನ್ಐ ಸುದ್ದಿಸಂಸ್ಥೆ ಬಾತ್ಮೀದಾರರು ಹೇಳುತ್ತಾರೆ. ಧೂಮಪಾನ ವಿರೋಧಿಗಳು ಜನ ಜಾಗೃತಿಯ ಗಂಟೆಗಳನ್ನು ಒಂದು ಕಡೆ ಬಾರಿಸುತ್ತಿದ್ದರೆ ಇನ್ನೊಂದೆಡೆ ತಂಬಾಕು ಕೃಷಿ, ಸಿಗರೇಟು, ಬೀಡಿ ಉತ್ಪನ್ನಗಳಲ್ಲಿ ಏರಿಕೆ, ಪಾನ್ ಪರಾಗುಗಳ ಅವ್ಯಾಹತ ಮಾರಾಟ ನಡೆಯುತ್ತಲೇ ಇರುತ್ತದೆ.

ಈ ವಿಷಚಕ್ರ ಒಂದಲ್ಲ ಒಂದು ದಿನ ನಿಲ್ಲಬೇಕು ಎಂದು ಪಣತೊಟ್ಟಿರುವ ಸಂಸ್ಥೆಗಳ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಂಚೂಣಿಯಲ್ಲಿದೆ. ಅಂದಹಾಗೆ, ನಾಡಿದ್ದು ಭಾನುವಾರ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಸುದ್ದಿ ಪತ್ರಿಕೆಗಳಲ್ಲಿ ಮಿಂಚಿ ಮರೆಯಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X