ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲೋಗ-ನ್ನಿಗೆ ಬದ್ಧ-ವಾಗಿ ಬದು-ಕಲು ಸಾಧ್ಯವಾ? ಮಾರಾ-ಯ್ತಿ

By Staff
|
Google Oneindia Kannada News


ಆಧುನಿಕ ಓಟದ ಭರದಲ್ಲಿ, ಸಂಘಜೀವಿಯಾದ ಮನುಷ್ಯ ದ್ವೀಪವಾಗುತ್ತಿರುವ ಸಂದರ್ಭದಲ್ಲಿ ಭಾರತೀಯ ಮದುವೆ ಚೌಕಟ್ಟು ಮಾಸುತ್ತಿದೆಯೇ? ಪಶ್ಚಿಮದ ಗಾಳಿ ಭಾರತದ ಮದುವೆಗೂ ಸೋಕಿತೆ? ಸಹ-ಬಾಳ್ವೆ ಹೀಗೂ ಸಾಧ್ಯ-ವಾ-ಗು-ವು-ದುಂಟೆ?

Utopian Society is an illusion: Is it really so..?ಒಲವೆ ನಮ್ಮ ಬದುಕು’ ಎನ್ನುವ ಸ್ಲೋಗನ್ನಿಗೆ ಬದ್ಧರಾಗಿ ಹುಡುಗ ಹುಡುಗಿ ಬದುಕುವುದು ಸಾಧ್ಯವಾದರೆ? ಮದುವೆ ಅನ್ನುವ ಮೊಹರು ಇಲ್ಲದೇನೆ ಗಂಡು-ಹೆಣ್ಣಿನ ಸಹಬಾಳ್ವೆಅರ್ಥಪೂರ್ಣವಾಗಿ ಅರಳಬಲ್ಲುದಾದರೆ, ಅದನ್ನು ಯಾರಾದರೂ ಯಾಕೆಅಲ್ಲಗಳೆಯಬೇಕು. ಅಂಥ ಬಾಳ್ವೆ ಸಾಧ್ಯವಾದಲ್ಲಿ - ಜಾತಿಯೆಂಬುದಲ್ಲಿ ಚಿಂದಿ. ಮದುವೆಎಂಬ ಹಂಗಿಗೆ ತಿಲಾಂಜಲಿ. ವ್ಯಕ್ತಿ ವಿಶಿಷ್ಟ ಸ್ವಾತಂತ್ರ್ಯವ ನೋಡ-ಲ್ಲಿ..

ಗಂಡು ಹೆಣ್ಣಿನ ಸಹಬಾಳ್ವೆಯ ಆಧುನಿಕ ಭಾಷ್ಯವಾದ ‘ಪ್ರಯೋಗಾತ್ಮಕ ಮದುವೆ,ಒಪ್ಪಂದದ ಮದುವೆ’ ಮುಂತಾದ ಹಿನ್ನೆಲೆಯಲ್ಲಿ ಮೇಲಿನಂತೆ ಯೋಚಿಸಲುತೊಡಗಿದಾಗಲೆಲ್ಲ, ಈ ಎಲ್ಲಾ ಅಗತ್ಯಗಳನ್ನು ನಮ್ಮ ‘ಭಾರತೀಯ ಮದುವೆ’ ಪೂರೈಸಲಾರದೆಎನ್ನುವ ಪ್ರಶ್ನೆ ಹುಟ್ಟುತ್ತದೆ. ಇಷ್ಟಕ್ಕೂ ಮದುವೆ ಎಂದರೇನು? ನಾವು ಬಹುತೇಕರುನಂಬಿರುವಂತೆ ಮದುವೆ ಎಂಬುದು ವಯಸ್ಕ ಹೆಣ್ಣು ಹಾಗೂ ಗಂಡು ಒಟ್ಟಿಗೆ ಬಾಳಲು,ಸಮಾಜ ಕಲ್ಪಿಸಿಕೊಟ್ಟ ಒಂದು ಚೌಕಟ್ಟು. ಅದೇ ಸಮಾಜ ಈಗ ಮದುವೆಯ ಕುರಿತಾದಹೊಸ ಪ್ರಯೋಗಗಳ ಬಗ್ಗೆ ಮಾತನಾಡುತ್ತಿದೆ. ಇಲ್ಲಿರುವ ಪ್ರಶ್ನೆಯೆಂದರೆ, ಯಾವುದು ಒಳ್ಳೆಯದು, ಅಥವಾ ಯಾವುದನ್ನು ಉಳಿಸಿಕೊಂಡರೆ ಒಳ್ಳೆಯದು, ಯಾವು-ದನ್ನು ಬೆಳೆ-ಸಿ-ಕೊಂಡರೆ ಒಳ್ಳೆ-ಯ-ದು?.

ಜಾತಿ, ವರದಕ್ಷಿಣೆ ಮುಂತಾದವುಗಳ ನಡುವೆ ಕಲುಷಿತಗೊಂಡಿರುವ ಮದುವೆಯನ್ನು ನೋಡಿಯೂ ಮದುವೆಯಾಗಲು ಧೈರ್ಯ ಬರುತ್ತದೆಂದರೆ ಅವರು ಭಂಡರೇ ಇರಬೇಕು (ಮೀನಾಮೇಷ ಎಣಿಸಿ ಕೊನೆಗೆ ಎಲ್ಲರೂ ಭಂಡರಾಗುತ್ತಾರೆ ಅನ್ನುವುದು ಬೇರೆ ಮಾತು). ಇಂಥ ಪರಿಸ್ಥಿತಿಯೇ ನಮ್ಮ ಯುವ ಜನತೆಗೆ ‘ಟ್ರಯಲ್‌ ಮ್ಯಾರೇಜ್‌’ ಎನ್ನುವ ಪಾಶ್ಚಿಮಾತ್ಯ ಪರಿಕಲ್ಪನೆಯ ಕುರಿತು ಒಲವು ಮೂಡಲು ಕಾರಣವಾಗಿದೆ. ಅಲ್ಲದೇ, ಟ್ರಯಲ್‌ ಮ್ಯಾರೇಜ್‌ ಒಡ್ಡುವ ‘ವ್ಯಕ್ತಿ ವಿಶಿಷ್ಟ ಸ್ವಾತಂತ್ರ್ಯ, ಬಂಧನವಿಲ್ಲದ ಬದುಕು, ಯಾವಾಗ ಬೇಕಾದರೂ ಕೊಡವಿಕೊಳ್ಳಬಹುದಾದ ಅನುಕೂಲ’ ಮುಂತಾದ ಆಕರ್ಷಣೆಗಳ ಸೆಳೆತದ ಆಳ ತುಂಬಾ ಪ್ರಬಲವಾದುದು.

ಕಾಲ, ಶಕ್ತಿ ಎರಡನ್ನೂ ಹೀರಿ ವ್ಯಕ್ತಿಯ ಚೇತನವೇ ರಸಹೀನವಾಗುತ್ತಿರುವ ಜಾಗತೀಕರಣದದಿನಗಳಲ್ಲಿ ಮಕ್ಕಳು ಮರಿ ಎನ್ನುವ ಜವಾಬ್ದಾರಿಗಳು ಭಾರವಾಗಿ ಕಾಣುತ್ತಿದ್ದು, ಆಧುನಿಕ ಓಟಕ್ಕೆ ಒಪ್ಪಂದದ ಮದುವೆಗಳೇ ಸೂಕ್ತ ಅನ್ನುವಂತಾಗಿದೆ.

ಪರಿಸ್ಥಿತಿ ಹೀಗಿದ್ದಲ್ಲಿ ಭಾರತೀಯ ಮದುವೆಗೆ ಸಾವು ಸನ್ನಿಹಿತವಾ? ಕಣಿ ಹೇಳುವುದು ಕಷ್ಟ. ಆದರೆ, ಒಂದಂತೂ ನಿಜ. ಪ್ರಯೋಗಾತ್ಮಕ ಮದುವೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿದ್ದರೂ, ಆಳದಲ್ಲಿ ಭಾರತೀಯ ಮದುವೆಗಳಲ್ಲಿನ ಗಟ್ಟಿತನ ಅವುಗಳಿಗಿಲ್ಲ. ಅಪ್ಪ ಅಮ್ಮ-ಮಕ್ಕಳು, ಅಣ್ಣ -ಅಕ್ಕ-ತಂಗಿ-ತಮ್ಮ ಮುಂತಾದ ಸಂಬಂಧಗಳಂತೆ ಗಂಡ ಹೆಂಡತಿ ಪರಿಕಲ್ಪನೆ ಕೂಡ ಒಂದು ಕೌಟುಂಬಿಕ ಸಂಬಂಧವೇ. ಆದರೆ, ತಮಾಷೆ ನೋಡಿ; ಉಳಿದ ಸಂಬಂಧಗಳಲ್ಲಿ ಯಾವುದೇ ಪ್ರಯೋಗದ ಕುರಿತು ಯೋಚಿಸದ ವ್ಯಕ್ತಿ ಮದುವೆಯ ಕುರಿತು ಪ್ರಯೋಗ ಮಾಡುತ್ತಾನೆ. ಮದುವೆಗೆ ಹೊರತಾದ ಪ್ರಾಯೋಗಿಕ ಕೌಟುಂಬಿಕ ಸಂಬಂಧಗಳನ್ನು ಎಲ್ಲಿಯಾದರೂ ಕಾಣಲು ಸಾಧ್ಯವಾ? ಪ್ರಾಯೋಗಿಕ ಅಪ್ಪ ಅಮ್ಮಂದಿರು ಅಥವಾ ಅಣ್ಣ ತಮ್ಮಂದಿರ ಕುರಿತು ಯೋಚಿಸಲೂ ಒಲ್ಲದ ವ್ಯಕ್ತಿ ಪ್ರಾಯೋಗಿಕ ಮದುವೆಗೆ ಮನಸ್ಸು ಮಾಡುತ್ತಾನೆ. ಹೆಣ್ಣು ಗಂಡಿನ ಸಹಬಾಳ್ವೆಗೆ ಕಾಮದ ಅರ್ಥವನ್ನು ಸೀಮಿತಗೊಳಿಸಿದಾಗ ಮಾತ್ರ ಇಂಥ ಪ್ರಯೋಗಗಳು ಸಾಧ್ಯವಾಗುತ್ತವೆ. ಈ ಸೀಮೆ-ಗ-ಳನ್ನೆಲ್ಲ ದಾಟಿ ಒಂದೊಮ್ಮೆ ಅವಳು ಮೀರಾ ಇವನು ವಾಸು-ಕಿಯಾ-ಗು-ವು-ದಾ-ದರೆ? ಭಲೆ!

ಸಹಬಾಳ್ವೆ ಕಷ್ಟವಾದಾಗ, ಒಪ್ಪಂದ ಮುರಿದುಬಿದ್ದಾಗ ಹೊಸ ಸಂಗಾತಿಯನ್ನು ಆಯ್ದುಕೊಳ್ಳಲು ಅವಕಾಶ ಕಲ್ಪಿಸುವ ಟ್ರಯಲ್‌ ಮ್ಯಾರೇಜ್‌ಗಳನ್ನು ‘ಗೌರವಾನ್ವಿತ ಹಾದರ’ ಅನ್ನದೆ ವಿಧಿಯಿಲ್ಲ. ನಾವೊಂದು ವಿಷಯವನ್ನು ನೆನಪಿನಲ್ಲಿಡಬೇಕು. ಭಾರತೀಯ ಕುಟುಂಬಗಳಲ್ಲಿ ಕಾಣುವ ಶೋಷಣೆ, ವರದಕ್ಷಿಣೆ ಮುಂತಾದ ಪಿಡುಗುಗಳಿಗೆಲ್ಲ ಮದುವೆ ನೆಪ ಮಾತ್ರ.

ಮದುವೆಯ ಮೂಲ ಉದ್ದೇಶ ಹೆಣ್ಣು ಗಂಡಿನ ಸಹಬಾಳ್ವೆಗೆ ನೈತಿಕತೆಯ ಚೌಕಟ್ಟನ್ನು ಕಲ್ಪಿಸುವುದು ಹಾಗೂ ಸಮಾಜದ ಗೌರವವನ್ನು ಕಲ್ಪಿಸಿಕೊಡುವುದೇ ಹೊರತು ವ್ಯಾಪಾರವಲ್ಲ. ವರದಕ್ಷಿಣೆ, ದಬ್ಬಾಳಿಕೆ ಮುಂತಾದವುಗಳಿಗೆ ವ್ಯಕ್ತಿಯ ಸ್ವಾರ್ಥ ಕಾರಣವೇ ಹೊರತು ಮದುವೆಯಲ್ಲ. ವ್ಯಕ್ತಿ ಆತ್ಮ ಗೌರವ ಕಳೆದುಕೊಳ್ಳಲು ಮದುವೆಯೇ ಆಗಬೇಕಿಲ್ಲ. ಜಾತೀಯತೆಯನ್ನು ಪ್ರೋತ್ಸಾಹಿಸುವುದೂ ಸೇರಿದಂತೆ ಭಾರತೀಯ ಮದುವೆಯಲ್ಲಿ ಕೆಲವು ಲೋಪಗಳಿರುವುದು ನಿಜ. ಅವುಗಳನ್ನು ಸರಿಪಡಿಸುವುದು ಕೆಲಸವಾಗಬೇಕೇ ಹೊರತು, ಚೌಕಟ್ಟನ್ನು ಮುರಿಯುವುದಲ್ಲ.

ಇದೆಲ್ಲದರ ಹೊರತಾಗಿ ಒಂದು ಗಂಡು ಒಂದು ಹೆಣ್ಣು ಮದುವೆಯ ಹಂಗಿಲ್ಲದೆ ಪ್ರೀತಿಯಿಂದ ಬಾಳಲು ಸಾಧ್ಯವಾದರೆ, ಆಹಾ! ಆದರೆ, ಇಂಥ ಮನಸ್ಥಿತಿ ಎಲ್ಲರದೂ ಆಗುವುದು ಸಾಧ್ಯವಿಲ್ಲ. ಆದರ್ಶ ಸಮಾಜವೆನ್ನುವುದು ವಾಸ್ತವ ಅಲ್ಲ. ಹೌದಾ? ಹೋಗ-ಲಿ-ಬಿ-ಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X