• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವತ್ತು ರಾತ್ರಿ ನಿಮ್ಮ ಮನೆಯಲ್ಲಿ ಶುಂಠಿ ತಂಬುಳಿ ಆಗಲಿ..

By Staff
|
ಇವತ್ತು ರಾತ್ರಿ ನಿಮ್ಮ ಮನೆಯಲ್ಲಿ ಶುಂಠಿ ತಂಬುಳಿ ಆಗಲಿ.. Sampige marada hasirele naduve...

ಅಡುಗೆಯ ಬಲಭೀಮರೆ,

ಕೆಂಡಸಂಪಿಗೆಯ ಶನಿವಾರದ ಬರಹ ಸೊಗಸಾಗಿದೆ. ಈ ದಿನ ನಾವು ಮೌಂಟನ್‌ ವ್ಯೂ ಸತ್ಕಾರದಲ್ಲಿ ಹೊಟ್ಟೆ ಬಿರಿಯುವಂತೆ ತಿಂದಿದ್ದೇವೆ. ಹೊಟ್ಟೆ ತುಂಬಿತೆ ಎಂದು ಮಾತ್ರ ಕೇಳಬೇಡಿ. ರೊಕ್ಕ ಬೋಳಿಸಿಕೊಂಡು ಅರೆಹೊಟ್ಟೆ ಆಯಿತು. ಆದರೆ ಮನೆಗೆ ಬಂದು ನಿಮ್ಮ ಲೇಖನ ಓದಿದ ನಂತರ ಫುಲ್‌ ಮೀಲ್‌ ಮಾಡಿದ ಸಂತಸವಾಯಿತು.

ಅಡುಗೆ ಬಗ್ಗೆ ಉಡಾಫೆ ಬಿಡುವವರೆ ಹೆಚ್ಚು . ತಮ್ಮ ಬಾಣಸಿಗ ಕೆಲಸ ಕಂಡು ಬೆರಗಾದೆ. ಅದು ಒಂದು ಕಲೆ. ಅದರಲ್ಲಿ ಸಿಗುವ ಆನಂದ ಹೇಳಲಿಕ್ಕೆ ಬಾರದು. ನನಗೂ ಅಡುಗೆ ಕೆಲಸದಲ್ಲಿ ಪರಿಶ್ರಮ ಉಂಟು. . ತಾವು ಕೊಡುವ ಭೀಮಪಾಕವನ್ನು ಸವಿಯಲು ಬಯಸುತ್ತೇನೆ.

ಒಂದು ಕಡೆ ವಿಚಿತ್ರಾನ್ನ, ಇನ್ನೊಂದು ಕಡೆ ನಿಮ್ಮ ಭೀಮಪಾಕ ! ಸ್ವಾಮಿ ಅಜೀರ್ಣ ಬೇಡ ! ಮಿತವಾಗಿ ಕೊಡಿ ಸವಿಯೋಣ.

- ವೈ. ಹನುಮಂತಶೆಟ್ಟಿ

1063, ಸೋರ್ಸ್‌ ಅವೆನ್ಯೂ, 5/ 107

ಸನ್ನಿವೇಲ್‌, ಕ್ಯಾಲಿಫೋರ್ನಿಯಾ

8ನೇ ಫೆಬ್ರವರಿ, 2003

ಶಾಮ್‌,

ನಿಮ್ಮ ಅಡುಗೆ ಚಟುವಟಿಕೆಗಳ ವರದಿಯಂತೂ ಚೆನ್ನಾಗಿದೆ. ಆದರೆ ಅಡುಗೆಯ ರುಚಿ ಹೇಗಿರುತ್ತದೋ ಆ ದೇವರೇ ಬಲ್ಲ ! ನಿಮ್ಮ ರೆಸಿಪಿ ಬರೆಯಿರಿ. ನಾವು ಇಲ್ಲಿ ಅದನ್ನೇ ಮಾಡಿ ನೋಡುತ್ತೇವೆ. ಆನಂತರ ಬರೆಯುವೆ.

- ಮಾಲಿನಿ ನಾಗರಾಜ್‌,

9ನೇ ಫೆಬ್ರವರಿ, 2003

ನವದೆಹಲಿ

ಪ್ರಿಯರೇ,

ನನಗೂ ಅಡುಗೆ ಮಾಡಲು ಬರುತ್ತದೆ ಎನ್ನುವುದನ್ನು ಓದಿ ತಿಳಿದ ನಮ್ಮ ಅನೇಕ ಓದುಗರು ಚಕಿತರಾಗಿದ್ದಾರೆ, ಕೆಲವರು ಭಯದಿಂದ ಬೆಚ್ಚಿಬಿದ್ದಿದ್ದಾರೆ! ಉದಾಹರಣೆಗಾಗಿ ಎರಡು ಪ್ರತಿಕ್ರಿಯೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮಾನ್ಯ ಹನುಮಂತ ಶೆಟ್ಟಿ ಅವರು ಭಯ ಪಡಬೇಕಾಗಿಲ್ಲ . ಅವರು ಅನುಮಾನಿಸಿರುವ ಹಾಗೆ ಅಜೀರ್ಣವಾಗುವಷ್ಟು ರೆಸಿಪಿಗಳನ್ನು ನಾನು ಬರೆಯುವುದಿಲ್ಲ. ನಮ್ಮ ಮನೆಯಲ್ಲಿ ನಾನೇ ಕೈಯ್ಯಾರ ಮಾಡಿದ ರುಚಿಗಳನ್ನು ಮಾತ್ರ ಬರೆಯುವೆ. ಜತೆಗೆ ನಿಮ್ಮದೇ ಆದ ರೆಸಿಪಿಗಳನ್ನು ಬರೆದು ಕಳಿಸಿದರೆ ಅದನ್ನು ಪ್ರಕಟಿಸುವೆ.

S.K. Shama Sundara, The Cookಅಜೀರ್ಣ ಎಂದಾಗ ನೆನಪಾಯಿತು. ಮದುವೆ, ಮುಂಜಿ, ಗೃಹಪ್ರವೇಶ, ಹುಟ್ಟುಹಬ್ಬ ಪಾರ್ಟಿ ಮುಂತಾದ ನೆಪಗಳಲ್ಲಿ ನಾವು ಅವರಿವರ ಮನೆಗಳಲ್ಲಿ , ಹೋಟೆಲುಗಳಲ್ಲಿ ಹಾಳೂ ಮೂಳೂ ತಿಂದು ಹೊಟ್ಟೆ ಕೆಟ್ಟಿರುತ್ತದೆ. ಹೊಟ್ಟೆ ಕೆಡುವುದು ಎಂದರೆ ನೋವು ಕಾಣಿಸಿಕೊಳ್ಳಲೇ ಬೇಕು ಎಂದೇನಿಲ್ಲ. ಮನೆ ಊಟ ಬಿಟ್ಟು ಬೇರೆ ಎಲ್ಲಿ ತಿಂದರೂ ಕ್ರಮ ತಪ್ಪಿದ ಇಂಜಿನ್‌ನಂತೆ ಹೊಟ್ಟೆ ತನ್ನ ಪಾಡಿಗೆ ತಾನು ನೋವು ಅನುಭವಿಸುತ್ತದೆ. ಅನೇಕ ವೇಳೆ ನಿಮ್ಮ ಹೊಟ್ಟೆ ಅನುಭವಿಸುವ ಹಿಂಸೆ ನಿಮಗೆ ಗೊತ್ತಾಗುವುದೇ ಇಲ್ಲ.

ಹೊಟ್ಟೆಯನ್ನು ನಿಯಮಿತವಾಗಿ , ಆದಷ್ಟೂ ಸ್ವಚ್ಛವಾಗಿ ಇಡುವುದಕ್ಕೆ ಏನು ಮಾಡಬೇಕು ? ನಮ್ಮಲ್ಲಿ ಮಾರ್ಗೋಪಾಯಗಳಿವೆ. ಅವುಗಳಲ್ಲಿ ಎದ್ದು ಕಾಣುವಂಥದ್ದು ಶುಂಠಿ ತಂಬುಳಿ ಪ್ರಯೋಗ. ತಂಬುಳಿಯ ಕಲ್ಪನೆಯನ್ನು ಮೊದಲು ಕಂಡವರು ಮಲೆನಾಡಿನವರು. ದಕ ಮತ್ತು ಉಕ ಪ್ರದೇಶಗಳಲ್ಲೂ ತರಹೇವಾರಿ ತಂಬುಳಿಗಳನ್ನು ಮಾಡುವ ಪರಿಪಾಠ ಉಂಟು. ಆದರೆ ಗೊಜ್ಜು , ಚಟ್ನಿಗಳನ್ನೇ ಹೆಚ್ಚಾಗಿ ನಂಬಿಕೊಂಡ ಹಳೇ ಮೈಸೂರು ಮತ್ತು ಬೆಂಗಳೂರು ಪ್ರಾಂತ್ಯದ ಜನಕ್ಕೆ , ಮತ್ತು ಝುಣಕ ಮಾಡಿಬಲ್ಲ ಉತ್ತರ ಕರ್ನಾಟಕದ ಮಂದಿಗೆ ತಂಬುಳಿಯ ರುಚಿ ಗೊತ್ತಿಲ್ಲ.

ಅಜೀರ್ಣತೆ ನಿವಾರಣೆಗೆ ಮತ್ತು ಉದರ ಶುದ್ಧಿಗೆ ಏಕಾದಶಿ ವ್ರತ ಬಿಟ್ಟರೆ ಶುಂಠಿ ತಂಬುಳಿಯೇ ರಾಮಬಾಣ..

ಇವತ್ತು ರಾತ್ರಿ ನಿಮ್ಮ ಮನೆಯಲ್ಲಿ ಈ ತಂಬುಳಿ ಪ್ರಯೋಗ ಆಗಲಿ. ನಾಲ್ಕು ಹಂತದಲ್ಲಿ 10 ನಿಮಿಷದ ಈ ಅಡುಗೆ ಸಾಗಲಿ.

1) ನಾನ್‌ ಸ್ಟಿಕಿ ಪ್ಯಾನ್‌ ಅನ್ನು ಗ್ಯಾಸ್‌ ಮೇಲಿಟ್ಟು ಒಂದೇ ಒಂದು ಚಮಚೆ ತುಪ್ಪ ಹಾಕಿ. ತುಪ್ಪ ಕಾಯುತ್ತಿದ್ದಂತೆ ಹೊಟ್ಟೆ ಸೀಳಿದ ಎರಡು ಹಸಿ ಮೆಣಸಿನಕಾಯಿ , ಒಂದು ಚಿಟಿಕೆ ಮೆಂತ್ಯ ಹಾಕಿ ಒಗ್ಗರಿಸಿ. ಪ್ಯಾನ್‌ ಕೆಳಗಿಳಿಸಿ

2) ಒಂದು ಹಿಡಿ ಹಸಿ ತೆಂಗಿನಕಾಯಿ ತುರಿ, ಹೆಬ್ಬೆಟ್ಟಿನ ಗಾತ್ರದ ಹಸಿ ಶುಂಠಿ ಮತ್ತು ಮೇಲೆ ಮಾಡಿಟ್ಟುಕೊಂಡ ಒಗ್ಗರಣೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

3 ) ರುಬ್ಬಿದ ಪದಾರ್ಥವನ್ನು ನಾಲ್ಕು ಲೋಟದಷ್ಟು ಮಂದ ಮಜ್ಜಿಗೆಗೆ ಬೆರೆಸಿ. ಉಪ್ಪು ನಿಮಗೆ ಬೇಕಾದಷ್ಟು ಹಾಕಿಕೊಳ್ಳಿ.

4) ಮತ್ತೆ ಪ್ಯಾನ್‌ ಒಲೆಯ ಮೇಲೇರಲಿ. ಈಗ ಅರ್ಧ ಚಮಚ ಅಡುಗೆ ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ ಚೂರು ಸಾಸಿವೆ , ನಾಲ್ಕಾರು ಕರಿಬೇವಿನ ಎಲೆ , ಎರಡು ಒಣ ಮೆಣಸಿನಕಾಯಿ , ಅರ್ಧ ಚಮಚ ಜೀರಿಗೆ ಒಗ್ಗರಣೆ ಸಿದ್ಧವಾಗಲಿ. ಇದನ್ನು ಶುಂಠಿ ಮಜ್ಜಿಗೆಗೆ ಬೆರೆಸಿರಿ.

ವಿಶೇಷ ಸೂಚನೆಗಳು : ರಾತಿ ಊಟಕ್ಕೆ ಯೋಗ್ಯ. ಊಟ ಮುಕ್ತಾಯದ ಹಂತಕ್ಕೆ ಬಂದಾಗ ಮಾತ್ರ ಶುಂಠಿ ತಂಬುಳಿಯನ್ನು ಬಡಿಸಬೇಕು. ಬಿಸಿ ಅನ್ನದೊಂದಿಗೆ ಕಲಸಿ ತಿನ್ನಬೇಕು. ಎಷ್ಟು ತಿಂದರೂ ತೊಂದರೆ ಆಗದು. ಶುಂಠಿ ಮತ್ತು ಮಜ್ಜಿಗೆಯ ಕರಾಮತ್ತು ಜಠರವನ್ನು ಶುದ್ಧೀಕರಿಸುವುದರಿಂದ ಬೆಳಗ್ಗೆ ಬೇಗ ಹಸಿವಾಗುವುದು. ಆದ್ದರಿಂದ ನಾಳೆ ಬೆಳಗಿನ ತಿಂಡಿಯನ್ನು ಇವತ್ತೇ ಪ್ಲಾನ್‌ ಮಾಡಿದರೆ ನಿಮಗೇ ಒಳ್ಳೆಯದು.

- ಶಾಮ್‌,

10-02-03

Thank you for choosing Thatskannada.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more