• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖಪುಟ : ಅಕ್ಕ ಎರಡು ಹೋಳು

By ಎಸ್‌.ಕೆ. ಶಾಮಸುಂದರ
|

ಬಿರುಕು ಕಾಣಿಸಿಕೊಂಡು ತಿಂಗಳುಗಳೇ ಉರುಳಿತ್ತು . ಮೊನ್ನೆ , ಗೋಡೆ ಕುಸಿದು ಬಿತ್ತು.

ಯಾವ ಉದ್ದೇಶದಿಂದ ಅವರೆಲ್ಲ ಒಗ್ಗಟ್ಟಿನಿಂದ ಇಟ್ಟಿಗೆಗಳನ್ನು ಒಂದೊಂದಾಗಿ ಪೇರಿಸಿ ಕನ್ನಡ ಗುಡಿ ಕಟ್ಟಿದ್ದರೋ ಅದೇ ಉತ್ಸಾಹದಿಂದ ತಾವೇ ಕಟ್ಟಿದ ಗುಡಿಯನ್ನು ಅವರು ಮಮಕಾರವಿಹೀನರಾಗಿ ಕೆಡವಿದರು. ಕೆಡವುದಕ್ಕೆ ಮುಂಚೆ ಬೀದಿಯಲ್ಲಿ ಇಂತು ಜಗಳ ಕಾಯ್ದರು. ಪರಸ್ಪರ ಕೆಸರು ಎರಚಾಡಿದರು. ಕೈಕೈ ಮಿಲಾಯಿಸುವ ಹಂತದವರೆವಿಗೂ ಹೋದರು. ವ್ಯಕ್ತಿ ಪ್ರತಿಷ್ಠೆ, ರಾಗ ದ್ವೇಷ, ಅಧಿಕಾರ ದಾಹ ಮತ್ತು ಮದ ತಾನೇತಾನಾಗಿ ಮೆರೆದು ಗುಡಿಯನ್ನು ಕೆಡವಲು ಹಾರೆ ಗುದ್ದಲಿಗಳನ್ನು ಜೋಡಿಸಿಕೊಂಡು ಪೂರ್ಣ ತಯಾರಾಗಿದ್ದರು. ದಾಯಾದಿ ಕಲಹದ ಪ್ರತೀಕವಾಗಿ, ವ್ಯವಸ್ಥಿತವಾಗಿ ನಡೆದ ಈ ಗುಡಿ ಕೆಡವುವ ಯಜ್ಞ ಮೊನ್ನೆ ಸಾಂಗವಾಗಿ ನೆರವೇರಿತು. ಗುಡಿ ಬಿತ್ತು. ಆದರೆ, ದೇವರು ಮತ್ತು ಆತನ ಭಕ್ತರು ಅಪಾಯದಿಂದ ಪಾರಾದರು. ಪೂಜಾರಿಗಳು ಮಾತ್ರ ಚೇತರಿಸಿಕೊಳ್ಳಲಾಗದಷ್ಟು ಏಟುಗಳನ್ನು ತಿಂದು ಆಸ್ಪತ್ರೆಗೆ ದಾಖಲಾದರು!

*ಅನಿವಾಸಿ ಕನ್ನಡಿಗರ ಆಶೋತ್ತರಗಳಿಗೆ ಸಮಗ್ರ ಅಭಿವ್ಯಕ್ತಿ ನೀಡುವ ಸಲುವಾಗಿ ಅಸ್ತಿತ್ವಕ್ಕೆ ಬಂದದ್ದು ಉತ್ತರ ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ. ಅದರ ಸಂಕ್ಷಿಪ್ತ ಹೆಸರು ‘ಅಕ್ಕ'. ಅಕ್ಕ ಜನ್ಮ ತಾಳಿದ್ದು 1998ರಲ್ಲಿ , ಅಮೆರಿಕಾದ ಮರುಭೂಮಿ ಅರಿಜೋನಾದ ಒಂದು ಹವಾ ನಿಯಂತ್ರಿತ ಸಭಾಂಗಣದ ತಂಪು ವಾತಾವರಣದಲ್ಲಿ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ದೂರದ ಅಮೆರಿಕಾದಲ್ಲಿ ಕಾಪಿಟ್ಟುಕೊಳ್ಳಲು ಒಂದಾಗಿ ಶ್ರಮಿಸುವ ಉತ್ಸಾಹದಲ್ಲಿ .

ಈ ಹೊತ್ತು ಆ ಕ್ಷಣಗಳನ್ನು ನೆನೆದವರಿಗೆ ‘ಬೋಳಿ ತುರುಬು ನೆನೆಸಿಕೊಂಡ ಹಾಗೆ' ಎನ್ನುವ ಗಾದೆ ನೆನಪಾಗುವುದು.

ಅರಿಜೋನಾದ ಕನ್ನಡ ಸಮ್ಮೇಳನದಲ್ಲಿ ‘ಅಕ್ಕ'ದ ಕಲ್ಪನೆಗಳು ಚಿಗುರೊಡೆದಾಗ ನಮ್ಮ ವಾಹಿನಿ ಅಂತರ್‌ಜಾಲವನ್ನು ಇನ್ನೂ ಪ್ರವೇಶಿಸಿರಲಿಲ್ಲ. ದಟ್ಸ್‌ಕನ್ನಡ ಡಾಟ್‌ಕಾಂ ಕಂಡ ವಿಶ್ವ ಕನ್ನಡಿಗರು ಒಟ್ಟಾಗಿ ನಡೆಸಿದ ದೊಡ್ಡ ಪ್ರಮಾಣದ ಮೊದಲ ಕಾರ್ಯಕ್ರಮ ಹ್ಯೂಸ್ಟನ್‌ ಕನ್ನಡ ಸಮ್ಮೇಳನ. ಆ ಸಮ್ಮೇಳನ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು ಎಂದು ಪ್ರಶಂಸೆಗೆ ಒಳಗಾಗಿದ್ದರೂ ನಮಗೆಲ್ಲ ಗೊತ್ತಿರುವ ಹಾಗೆ ವ್ಯಕ್ತಿಕೇಂದ್ರಿತ ಮನಸ್ತಾಪದ ಬೀಜಗಳು ಮೊಳೆತದ್ದು ಅಲ್ಲಿಯೇ.

ಬೆಳೆಯುವ ಸಂಸ್ಥೆ ಮತ್ತು ಅದನ್ನು ಬೆಳೆಸುವ ವ್ಯಕ್ತಿಗಳಿಗೆ ಅಭಿಪ್ರಾಯ ಭೇದಗಳು ಮತ್ತು ಭಿನ್ನಾಭಿಪ್ರಾಯಗಳು ಟಾನಿಕ್‌ ಆಗಬೇಕು . ‘ಅಕ್ಕ' ಸಂಸ್ಥೆ ಕುರಿತಾದ ಸಂಗತಿಗಳಲ್ಲೂ ಈ ದಿಸೆಯ ಚಿಂತನೆಗಳು ಚಾಲ್ತಿಗೆ ಬರುತ್ತವೆ ಎಂಬ ನಿರೀಕ್ಷೆಯಿಂದ ಕನ್ನಡದ ತೇರು ಹ್ಯೂಸ್ಟನ್‌ನಿಂದ ಮಿಷಿಗನ್‌ವರೆಗೆ ಸಾಗಿಬಂತು. ಆದರೆ, ತೇರು ಡೆಟ್ರಾಯಿಟ್‌ಗೆ ಬರುವ ಹೊತ್ತಿಗೆ ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವ ನಾಣ್ಣುಡಿ ಕನ್ನಡಿಗರಿಗೆ ಮತ್ತೊಮ್ಮೆ ಮನವರಿಕೆ ಆಯಿತು.

Learning and Unlearning from Situations and experiences is my ಧ್ಯೇಯ ವಾಕ್ಯ ಎಂದು ಆಗಾಗ ಹೇಳಿಕೊಳ್ಳುವ ಎಂ. ವಿ. ಕುಮಾರಸ್ವಾಮಿಗಳು 2001ರ ಅಕ್ಕ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡದ ತೇರನ್ನು ಸಾಂಗವಾಗಿ ಕೊಂಡೊಯ್ಯುವ ಕಾಯಕಕ್ಕೆ ಒಬ್ಬ ಸಮರ್ಥ ನಾಯಕ ಬೇಕು ಎಂಬುದನ್ನು ಅವರು ಮನಗಂಡಿದ್ದರು. ಎಲ್ಲೋ ಲಾಯರ್‌ಗಿರಿ ಮಾಡಿಕೊಂಡು ಹಾಯಾಗಿದ್ದ ಅಮರ್‌ನಾಥ್‌ ಗೌಡರನ್ನು ಕೈ ಹಿಡಿದುಕೊಂಡು ಬಂದು ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಿ King Maker ಎಂಬ ಬಿರುದನ್ನು ವಿಎಂಕೆ ಸಂಪಾದಿಸಿಕೊಂಡಿದ್ದರು.

ಆದರೆ, ಉತ್ಸವ ಮೂರ್ತಿಯಾಗಲು ಹೊರಟಿದ್ದ ಕುಮಾರಸ್ವಾಮಿಗಳ ಆಟಾಟೋಪಗಳನ್ನು ಸಹಿಸುವುದು ಕಷ್ಟಸಾಧ್ಯ ಎನಿಸಿದಾಗ ಅಮರ್‌ನಾಥ್‌ ಗೌಡ ಮತ್ತು ‘ಅಕ್ಕ'ದ ಇತರ ಪದಾಧಿಕಾರಿಗಳು ಸ್ವಾಮಿಗಳನ್ನು ‘ಅಕ್ಕ' ಆಡಳಿತ ಮಂಡಳಿಯಿಂದ ಆಚೆ ತಳ್ಳಿದರು. This is injustice and totally against to Robert rule of Law ಎಂದು ವಿ.ಎಂ.ಕೆ. ಅನೇಕ ಬಾರಿ ಏರಿದ ಧ್ವನಿಯಲ್ಲಿ ಹೇಳುತ್ತಾ ಬಂದರು. ಇತ್ತೀಚೆಗೆ ‘ಅಕ್ಕ'ದ ಎಲ್ಲ ಪದಾಧಿಕಾರಿಗಳಿಗೆ ವಿಎಂಕೆ ಅವರ ಲಾಯರ್‌ ನೋಟೀಸು ಜಾರಿ ಮಾಡಿದ್ದಾರೆ ಎಂಬ ಸಂಗತಿ ನಿಮಗೂ ಗೊತ್ತಿರಲಿ. ಅದು ಹೇಗೂ ಇರಲಿ, ‘ಅಕ್ಕ'ದ ಪದಾದಿಕಾರಿಗಳು ವಿಎಂಕೆ ಗರ್ಜನೆಗೆ ಸೊಪ್ಪು ಹಾಕಿಲ್ಲ. ಕ್ಯಾರೇ ಅನ್ನಲಿಲ್ಲ. ಆವತ್ತಿನಿಂದ ಶುರುವಾದ ‘ಗೌಡರ ನಡುವಿನ' ಕದನ ದಿನೇದಿನೇ ಬೆಳೆಯುತ್ತಾ ಹೋಯಿತೇ ವಿನಾ ತಣ್ಣಗಾಗಲೇ ಇಲ್ಲ . ‘ ಕನ್ನಡದ ಕೆಲಸಗಳು ಮುಖ್ಯ, ಪ್ರತಿಷ್ಠೆ ಮತ್ತು ಜಗಳದಿಂದ ನಾವು ಸಾಧಿಸುವುದು ಏನೂ ಇಲ್ಲ ' ಎಂಬ ಅನೇಕ ಕನ್ನಡಿಗರ ಒಕ್ಕೊರಲ ಮನವಿಯನ್ನು ಕೇಳಿಸಿಕೊಳ್ಳಬೇಕಾದವರು ಕೇಳಿಸಿಕೊಳ್ಳಲೇ ಇಲ್ಲ. ಅಂತರ್‌ಜಾಲದಲ್ಲಿ ಒಬ್ಬ ಕನ್ನಡಿಗರು ಮಾಡಿಕೊಂಡ ಕಳಕಳಿಯ ಮನವಿ ಎಲ್ಲರ ಕಣ್ಣಿಗೆ ಬಿತ್ತೇ ಹೊರತು ಅದರ ಸತ್ವವನ್ನು ಹೀರಿಕೊಳ್ಳಲು ಯಾರೂ ಸಿದ್ಧರಿರಲಿಲ್ಲ.

ನಾವು ರಕ್ತ ಬೀಜಾಸುರರು ! ಒಡಕುಗಳು ನಮಗೆ ಹೊಸದೇನೂ ಅಲ್ಲ , ಅಂಥದಕ್ಕೆಲ್ಲ ನಾವು ಅಂಜುವವರೂ ಅಲ್ಲ. 48ರಲ್ಲಿ ದೇಶವೇ ಒಡೆದು ಹೋಳಾದುದನ್ನು ನುಂಗಿಕೊಂಡವರು. ಇದೇ ಲಾಲ್‌ಬಾಗಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಒಡೆದು ಚೂರಾದುದನ್ನು ಕಂಡವರು. ನಿಜನಿಂಗಪ್ಪನವರ ಸಂಸ್ಥಾ ಕಾಂಗ್ರೆಸ್‌ ರಾಜಕೀಯ ಇತಿಹಾಸದ ಪುಟಗಳಲ್ಲಿ ನೆಲಸಮವಾದುದನ್ನು ಕಂಡವರು. ಆದಿಚುಂಚನಗಿರಿ ಸಂಸ್ಥಾನ ಹೋಳಾಗಿ ಪರ್ಯಾಯ ಮಠ ಸ್ಥಾಪನೆಯಾಗಿರುವುದನ್ನು ಈ ದಿನಗಳಲ್ಲಿ ದಾಖಲಿಸುತ್ತಿರುವವರು. ಇವತ್ತು ಹೊರನಾಡ ಕನ್ನಡಿಗರ ಒಗ್ಗಟ್ಟು Vertically, horizontally, simultaneously ಒಡೆದು ಎರಡು ಹೋಳಾದುದಕ್ಕೆ ಸಾಕ್ಷಿಯಾದವರು.

*ತ್ರಿವೇಣಿ ಕನ್ನಡ ಸಂಘದ ಅಧ್ಯಕ್ಷರೂ ಹಾಗೂ ‘ಅಕ್ಕ' ಮೂಲ ನೆಲೆಯಿಂದ ದೂರಬಂದು ‘ಪ್ರತ್ಯೇಕ ಅಕ್ಕ' ನಿರ್ಮಾಣದಲ್ಲಿ ಸಕ್ರಿಯರಾದ ಹನಸೋಗೆ ಅಶ್ವಥ್‌ನಾರಾಯಣ ಅವರಿಂದ ಒಂದು ಪತ್ರಿಕಾ ಪ್ರಕಟಣೆ ಬಂದಿದೆ. ‘ಅಕ್ಕ' ಭಿನ್ನಮತೀಯರು ಪ್ರತ್ಯೇಕವಾಗಿ ಕಟ್ಟಿಕೊಂಡ ‘ಉತ್ತರ ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟದ' ಸ್ಥಾಪನೆ ಮತ್ತು ಚುನಾವಣೆ ಫಲಿತಾಂಶದ ಮಾಹಿತಿಗಳು ಆ ಪ್ರಕಟಣೆಯಲ್ಲಿವೆ. ಕಾರ್ಯಕಾರಿ ಸಮಿತಿಯಲ್ಲಿರುವ ಪದಾಧಿಕಾರಿಗಳ ಹೆಸರುಗಳು ಮಾತ್ರವಲ್ಲದೆ ಸಂಸ್ಥೆಯ ಧ್ಯೇಯ- ಉದ್ದೇಶ ಮತ್ತು ಪದಾಧಿಕಾರಿಗಳ ಜವಾಬ್ದಾರಿಗಳನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

‘ಅಕ್ಕ' ಸಂಸ್ಥೆಗೆ ಪರಿಪಕ್ವವಾದ Costitution ಇಲ್ಲ ಎನ್ನುವುದು ಹನಸೋಗೆಯವರು ಯಾವತ್ತೂ ಮಾಡುವ ಆರೋಪ. ಕೆಲವು ತಿಂಗಳುಗಳ ಹಿಂದೆ ನಾನವರನ್ನು ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಮಲ್ಲೇಶ್ವರಂನಲ್ಲಿರುವ ಒಂದು ಆಯುರ್ವೇದ ಆಸ್ಪತ್ರೆಯಲ್ಲಿ ಅವರು ಆಗ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ಜತೆಜತೆಗೆ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ‘ಅಕ್ಕ' ಸಂವಿಧಾನ ರಚನೆಯಲ್ಲಿ ತೊಡಗಿದ್ದರು. ‘ಅಕ್ಕ' ಸಂವಿಧಾನ , ಅಂಗರಚನೆಗೆ ಒಂದು ಅಂತಿಮ ರೂಪ ಕೊಟ್ಟಿರುವ ಹನಸೋಗೆ ನೂತನ , ಸ್ವರಚಿತ ಸಂವಿಧಾನದ ಪ್ರಕಾರ ಚುನಾವಣೆಗಳಿಗೆ ಏರ್ಪಾಟು ಮಾಡಿದ್ದರು. ಅದರಂತೆ ‘ಚುನಾವಣೆಗಳು ನಡೆದು ‘ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ' ಹೆಸರುಗಳನ್ನು ಅವರು ಪ್ರಕಟಿಸಿದ್ದಾರೆ- ಓದಿ.

ಹನಸೋಗೆ ಅವರಿಗೆ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ . ಒಮ್ಮೆ Stroke ಆಗಿತ್ತು. ಅಮೆರಿಕಾದಲ್ಲಿ ಸಾಕುಬೇಕಾದಷ್ಟು ಚಿಕಿತ್ಸೆ ಪಡೆದರೂ ಕೊನೆಗೆ ಭಾರತೀಯ ಮೂಲದ ವೈದ್ಯ ಪದ್ಧತಿಗೆ ಮೊರೆಹೋಗಬೇಕಾಗಿ ಬಂತು. ಬೆಂಗಳೂರಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದರು. ಪಂಚಕರ್ಮ ಯೋಗ ಅಂದರೆ, ದೇಹದಲ್ಲಿರುವ ನಂಜನ್ನು ಹಂತಹಂತವಾಗಿ ಇಳಿಸುವ ದೇಶೀ ಚಿಕಿತ್ಸೆ.

ತಮ್ಮ ಆರೋಗ್ಯದ ತೊಂದರೆ ಎಷ್ಟೇ ಇದ್ದರೂ ಅಮೆರಿಕಾದಲ್ಲಿನ ಭಾರತೀಯ - ಕರ್ನಾಟಕ ಸಂಸ್ಥೆಗಳ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದು ಹನಸೋಗೆ ಅವರ ಪ್ರಿಯ ಹವ್ಯಾಸಗಳಲ್ಲೊಂದು. ಪ್ರತಿಯಾಂದೂ ವಿಷಯಗಳು ಕಾನೂನಿನ ಚೌಕಟ್ಟಿನಲ್ಲೇ ನಡೆಯಬೇಕು, ಸಂಸ್ಥೆಯ ಸಂವಿಧಾನದಲ್ಲಿ ದೋಷಗಳಿಗೆ ಆಸ್ಪದವಿರಬಾರದು, ಪಟ್ಟಭದ್ರ ಹಿತಾಸಕ್ತಿ ಬೆಳೆಯಲು ಬಿಡಬಾರದು, ವೈಯಕ್ತಿಕ ದ್ವೇಷಗಳನ್ನು ಬೆಳೆಸಿಕೊಳ್ಳಬಾರದು ಎನ್ನುವುದು ಅಶ್ವಥ್‌ ಅವರ ನಿಲುವು. ಅವರು ಇನ್ನು ಕೆಲವು ಒಲವು-ನಿಲುವುಗಳು ಹೀಗಿವೆ :

‘ನನಗೆ ಅಮರ್‌ನಾಥ್‌ ಗೌಡರ ಬಗ್ಗೆ ಆಗಲೀ ಅಥವಾ ಅಕ್ಕದ ಇತರ ಪದಾಧಿಕಾರಿಗಳ ಬಗ್ಗೆಯಾಗಲೀ ವೈಯಕ್ತಿಕ ದ್ವೇಷವಿಲ್ಲ. But, my only concern is that administration in AKKA many times is not done according to the existing Constitution. Infact on many sections the exisiting Constitution has lot of short comings and misgivings. My approach and efforts are towards eliminating all such anomolies.

ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬ ಗಾದೆ ಗೊತ್ತಲ್ಲ ! ಹನಸೋಗೆಯವರು ಬೆಂಗಳೂರಿನಲ್ಲಿ ಸಂವಿಧಾನ ತಿದ್ದುತ್ತಿದ್ದರೆ ಅಲ್ಲಿ ಅಮರ್‌ನಾಥ್‌ ಗೌಡರ ಆಳ್ವಿಕೆಯಲ್ಲಿ ಸಂವಿಧಾನ ತಿದ್ದುಪಡಿ ಕೆಲಸ ಕಾರ್ಯಗಳು ಅದೇ ಕಾಲಕ್ಕೆ ಪ್ರತ್ಯೇಕವಾಗಿ ನಡೆಯುತ್ತಿತ್ತು . ಈ ಹೊತ್ತಿಗೆ ‘ಶಿಕಾಗೋ ಸಭೆ'ಯಲ್ಲಿ ಅವರ ಪುನಾರಚಿತ ಸಂವಿಧಾನಕ್ಕೆ ಅನುಮೋದನೆ ಸಿಕ್ಕಿರಬಹುದು.

ಅಶ್ವಥ್‌ನಾರಾಯಣ್‌ ವೃತ್ತಿಯಲ್ಲಿ ಇಂಜಿನಿಯರ್‌ ( ನಿವೃತ್ತ ) ಆದರೂ ಪ್ರವೃತ್ತಿಯಲ್ಲಿ ‘ಕಾನೂನು- ಕಟ್ಟಳೆ' ಮನುಷ್ಯ. ಸ್ವಲ್ಪ ಜಿಗಟು. ತಮ್ಮ ನಿಲುವಿಗೆ ವಿರುದ್ಧವಾಗಿ ಏನಾದರೂ ನಡೆದರೆ ರಾಜಿಯಾಗುವವರಲ್ಲ. ಅಗತ್ಯ ಬಿದ್ದರೆ ಕೋರ್ಟಿಗೂ ಹೋಗೋಣ ಎನ್ನುವ ಆಸಾಮಿ. ಎಷ್ಟೋ ಕೇಸುಗಳಲ್ಲಿ ಅವರು ಕೋರ್ಟು ಮೆಟ್ಟಿಲು ಹತ್ತಿ ಬಂದಿದ್ದಾರೆ ಎನ್ನುವುದು ಬೇರೆಯದೇ ವಿಷಯ.

ಇಂಥ ಹನಸೋಗೆ ‘ಅಕ್ಕ' ವಿಚಾರದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಅಕ್ಕದ ಪರ್ಯಾಯ ಮಠ ಕಟ್ಟುವಲ್ಲಿ ಯಶಸ್ವಿ ಆಗಿದ್ದಾರೆ. ಈ ರಾಜಗುರುಗಳು ಕಟ್ಟಿದ ಹೊಸ ಮಠದ ಸ್ವಾಮಿಗಳು ಶ್ರೀ. ವಿಎಂಕೆ.

ಅಂತೂ ‘ಅಕ್ಕ' ಇಭ್ಭಾಗವಾಯಿತು. ಇನ್ನು ಕನ್ನಡಿಗರಿಗೆ ನಿಶ್ಚಿಂತೆ. ಒಂದೇ ಒಂದು ಪ್ರಾಬ್ಲಂ ಎಂದರೆ ‘ಎರಡು ಅಕ್ಕದಲ್ಲಿ ನಾನಾರ ಪಕ್ಕ' ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವುದು. ‘ಅಕ್ಕ' ದಲ್ಲಿ ಒರಿಜನಲ್‌ ಯಾವುದು ಡೂಪ್ಲಿಕೇಟ್‌ ಯಾವುದು ಎನ್ನು ತೀರ್ಮಾನಕ್ಕೆ ಬರುವುದು.

ಈ ಮಧ್ಯೆ ಹನಸೋಗೆ ಅಶ್ವಥ್‌ನಾರಾಯಣ ಹೊರಡಿಸಿರುವ ಚುನಾವಣೆ ಮತ್ತು ‘ಅಕ್ಕ' ಅಂಗರಚನೆಯ ಬಗ್ಗೆ ಅಮರ್‌ನಾಥ್‌ ಗೌಡ ಅವರು ಕಿಡಿಕಾರಿ ಹೊರಡಿಸಿರುವ ಸುತ್ತೋಲೆ ನನಗೆ ಸಿಕ್ಕಿದೆ. ಆ ಸುತ್ತೋಲೆಯನ್ನು ಅವರು ಉತ್ತರ ಅಮೆರಿಕಾದ ಎಲ್ಲ ಕನ್ನಡ ಕೂಟಗಳ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ನೀವೂ ಓದಿಕೊಂಡಿರಿ.

*‘ಅಕ್ಕ' ಇಬ್ಭಾಗವಾದ ಸುದ್ದಿ ತಿಳಿದು ಅನೇಕ ಕನ್ನಡಿಗರು ದಿಗ್‌ಭ್ರಾಂತರಾಗಿದ್ದಾರೆ. ಏನು ಆಗಬಾರದಿತ್ತೋ ಅದು ಆಗಿಹೋಯಿತು ಎಂಬ ನನ್ನ ಅನೇಕ ಮಿತ್ರರ ಪ್ರತಿಕ್ರಿಯೆಗಳಿಗೆ ನನ್ನ ಉತ್ತರವಿಷ್ಟೆ . ಒಂದು ಸಂಸ್ಥೆಯ ತಳಹದಿ ಭದ್ರವಾಗಿಲ್ಲದಿದ್ದರೆ ಕಟ್ಟಡ ಕುಸಿಯುವುದು ಸಹಜ. ಪುನಃ ಕಟ್ಟುವ ಕಟ್ಟಡ ಭದ್ರವಾಗಿರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AKKA Splits. Seperate AKKA formation by dissidents leads to crisis in unity amounbg Kannada associations of North America and Canada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more