• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲೆಯ ಮೇಲೆ ಕಾಯುತ್ತಿರುವುದು ಅಂತಹುದೇ ಮರುಕದ ನೀರು!

By ಸ ರಘುನಾಥ, ಕೋಲಾರ
|

ಮುನೆಕ್ಕನಲ್ಲಿ ಹೇಳಿಕೊಂಡು ಮನಗುದಿಯ ಉಕ್ಕನ್ನು ಇಳಿಸಿಕೊಂಡ ಸುನಂದಾ ಯೋಚಿಸಿದಳು. ಮುನೆಕ್ಕ ತನ್ನ ಬಗ್ಗೆ ಹೇಳಿಕೊಂಡಿದ್ದಕ್ಕಾಗಿ ತಾನೂ ಹೇಳಿಕೊಂಡೆನೆ? ಅವಳ ಮಾತು ತನ್ನೊಳಗೇ ಇದ್ದ ಕುದಿಯನ್ನು ಹೊರಹಾಕಿ ತಣ್ಣಗಾಗಲು ದಾರಿ ಕಂಡಿತೆ? ಅತಿ ಭಾವುಕಳಾಗಿದ್ದೇ ಕಾರಣವೆ? ಹೇಳಬಾರದಿತ್ತೆ? ಮುಂದಾದರೂ ಹೇಳಬೇಕಿದ್ದುದ್ದೆ ಅಲ್ಲವೆ? ಕಾಲ ಕೂಡಿಬಂದಿತ್ತೆ? ತನ್ನದು ಅಸಹ್ಯದ ಬದುಕು ಅನ್ನಿಸಿದ್ದೀತೆ? ಹಾಕಿದ್ದಿದ್ದರೆ ಈ ಉಪಚಾರ ಇರುತ್ತಿರಲಿಲ್ಲವಲ್ಲವೆ? ಅನುಕಂಪಕ್ಕಾಗಿ ಹೇಳಕೊಂಡೆನೆ? ಇಷ್ಟೂ ಪ್ರಶ್ನೆಗಳನ್ನಿಟ್ಟುಕೊಂಡು ಬಚ್ಚಲಿಗೆ ಹೋಗಿ ಹಂಡೆಯಲ್ಲಿ ಕೈ ಇಟ್ಟು ನೋಡಿದಳು.

ನೀರು ಉಗುರುಬೆಚ್ಚಗಾಗಿತ್ತು. ಎರಡು ಚೆಂಬು ತಣ್ಣೀರನ್ನೇ ಹುಯ್ದುಕೊಂಡರೆ ಏನೀಗ ಅಂದುಕೊಂಡಳು. ಈ ಬೆಚ್ಚನೆಯ ನೀರನ್ನೇ ಹಾಕಿಕೊಳ್ಳಲೆ?

ಸುನಂದಾಳ ಬದುಕಿನ ಬೆತ್ತಲೆ ಕಥೆ

ವರದಲು ಹೆಣಕ್ಕೆ ಸ್ನಾನ ಮಾಡಿಸಿದ್ದು ತಣ್ಣೀರಿನಲ್ಲಿ ತಾನೆ. ಅದು ಅವಳ ಮರಣ ಸ್ನಾನಕ್ಕೆಂದೇ ಬಂದಂತೆ ಎರಡು ದಿನಗಳಿಂದ ಗಾಳಿ ತುಂಬಿಕೊಂಡಿದ್ದ ಬೀದಿ ನಲ್ಲಿ ಮೂರು ನಾಲ್ಕು ಸಲ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿತ್ತು. ಆ ಕಣ್ಣೀರಿಗಾಗಿ ಜಗಳ, ಬಡಿದಾಟವಿಲ್ಲದೆ ಇತ್ತೆ? ಕುಡಿಯಲೇ ನೀರು ಬಿಡದವರು ವರದಲು ಸ್ನಾನಕ್ಕೆ ಮೂರು ಕೊಡ ನೀರು ತಂದುಕೊಟ್ಟರಲ್ಲವೆ! ಇಷ್ಟು ದಿನಕ್ಕೆ ಸುನಂದಾಳಿಗೆ ಅದು ಮರುಕದ ನೀರು ಅನ್ನಿಸಿತು. ಈಗ ಒಲೆಯ ಮೇಲೆ ಕಾಯುತ್ತಿರುವುದು ಅಂತಹುದೆ ಮರುಕದ ನೀರೆ?

ವರದಲು ಕಡೆಯ ಸ್ನಾನಕ್ಕೆ ಬಿಸಿನೀರು ಇದ್ದಿದ್ದರೆ? ನೀರು ಕಾಯಿಸಲೆ ಅಂದಿದ್ದಕ್ಕೆ, 'ಅವಳ ಬದುಕಿಗೇ ಬೆಂಕಿಬಿದ್ದು ಹೋಗಿದೆ. ಆ ದೇಹ ಸುಡುತ್ತಿದೆ ಸುನಂದಾ. ಮಣ್ಣಿಗೆ ಹಾಕುವಾಗಲಾದರೂ ಅದು ಆರಿ ತಣ್ಣಗಾಗಲಿ. ತಣ್ಣೀರನ್ನೇ ಹಾಕೋಣ' ಅಂದಿದ್ದಳು ಅಮ್ಮ. ಇದು ನೆನಪಿಗೆ ಬಂದು ತಣ್ಣೀರು ಸ್ನಾನ ಬೇಡವೆನ್ನಿಸಿತು. ಕಾಯಲಿ ಎಂದು ಬಂದು ಕುಳಿತಳು. ಅಲ್ಲೇ ಕುಳಿತು ತನ್ನ ಕಥೆಯನ್ನು ಮುನೆಕ್ಕನಿಗೆ ಹೇಳಿದ್ದು.

ವರದಳಿಗೆ ಸ್ನಾನ ಮಾಡಿಸುತ್ತಿದ್ದಾಗ ನೀರಿನ ಹನಿಹನಿಯೂ ರಕ್ತವಾಗಿ ಹರಿಯುತ್ತಿತ್ತು. ಅವಳು ಸತ್ತು ಬಿದ್ದಿದ್ದ ಜಾಗವನ್ನು ಸಾರಿಸಿದ್ದು ತಾನು. ಸಾರಿಸುವಾಗ ಎಮ್ಮೆ ರಕ್ತದ ಸಗಣಿ ಹಾಕಿತ್ತೆ ಅನ್ನಿಸುತ್ತಿತ್ತು. ಸಾರಿಸುವಾಗ, ಆವರೆಗೆ ಘಮ್ಮೆನ್ನುತ್ತಿದ್ದ ಸಗಣಿ ಅಂದು ಹಸಿನೆತ್ತರ ವಾಸನೆಯಿಂದ ಕೂಡಿತ್ತು. ಸಾರಿಸಿದ್ದು ಬಲಗೈಯಲ್ಲಿ. ಮಣ್ಣು ಮಾಡಿ ಬಂದ ರಾತ್ರಿ ಉಪವಾಸ. ಮಾರನೆಯ ದಿನ ಅಮ್ಮ ಟೀ, ಬನ್ನು ತಂದುಕೊಟ್ಟಳು. ಬಲಗೈಲಿದ್ದ ಬನ್ನಿನಿಂದಲೂ ಹಸಿನೆತ್ತರ ವಾಸನೆ. ತಿನ್ನಲಾಗಲಿಲ್ಲ. ವಾಕರಿಕೆ. ಟೀ ಕುಡಿಯಲು ತುಟಿಗಿಟ್ಟಾಗ ಮೂಗಿಗೆ ಬಡಿದಿದ್ದೂ ಅದೇ ವಾಸನೆ. ವಾಂತಿ ಬರುವಂತಾಯಿತು. ಖಾಲಿ ಹೊಟ್ಟೆಯಿಂದ ಹೊರಬಂದುದು ಕಾಲು ಬೊಗಸೆಗಿಂತಲು ಕಡಿಮೆಯಾದ ಹುಳಿಕಹಿ ನೀರು.

ದಾಸರ ಪದಗಳು ನಲಿದವು ಸುನಂದಾಳ ನಾಲಿಗೆ ಮೇಲೆ...

ಸುನಂದಾ ಬಲಗೈಯನ್ನು ಮೂಸಿದಳು. ಹಸಿನೆತ್ತರ ವಾಸನೆ. ಇಷ್ಟು ದಿನ ಚರ್ಮದ ಅಡಿಯಲ್ಲೇ ಅಡಗಿದ್ದು ಮೂಸಿ ನೋಡಲೆಂದೇ ಹೊರಬಂದಂತೆ! ಅಮ್ಮನ ಹೆಣಕ್ಕೂ ಸಿಕ್ಕಿದ್ದು ಮರುಕದ ನೀರೇ. ಆ ಅಮ್ಮ ದೇವತೆ ಎಂದು ಅನ್ನಿಸಿದ್ದು ಅದೆಷ್ಟೋ ಸಲ. ಆದರೀಗ ಅವಳಿಗೆ ಹಾಗೆನ್ನಿಸಲಿಲ್ಲ. ಅವಳು ಅಮ್ಮನಷ್ಟೇ ಅನ್ನಿಸಿತು. ವರದಲು ಅಮ್ಮನಲ್ಲದೆ ಮತ್ತೇನಾಗಲೂ ಸಾಧ್ಯವಿಲ್ಲ ಅನ್ನಿಸಿತೀಗ. ಅಕ್ಷರ ಕಲಿಸಿದಳು. ತನ್ನದೆಲ್ಲದರಲ್ಲೂ ಪಾಲು ಕೊಟ್ಟವಳು. ಅಮ್ಮ.

ಸುನಂದಾಳ 'ಹರಿಕಥಾ’ ಪ್ರಸಂಗ

ಸುನಂದಾಳಿಗೆ ಬಲಗೈ ವಾಸನೆ ನೋಡಿಕೊಳ್ಳಬೇಕೆನಿಸಿತು. ಮೂಗಿನ ಹತ್ತಿರ ಹಿಡಿದು ದೀರ್ಘವಾಗಿ ಉಸಿರೆಳೆದುಕೊಡಳು. ಹಸಿನೆತ್ತರ ವಾಸನೆಯಿಲ್ಲ! ಅವಳಿಗೆ ತಾನು ಮುಡಿಸುತ್ತಿದ್ದ, ಅವಳು ತುಂಬಾ ಇಷ್ಟಪಡುತ್ತಿದ್ದ ಕೆಂಡಸಂಪಿಗೆ ಹೂವಿನ ಪರಿಮಳ!

English summary
sunanda recalled her old memories in munekka home while going to take bath. Here is a short story about her past,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X