• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುನೆಕ್ಕನ ಮನವ ಕವಿಯಿತು ನಾಟಕದ ಮಾಯೆ

By ಸ ರಘುನಾಥ, ಕೋಲಾರ
|

ಸುನಂದಳ ನಿರ್ಗಮನದ ನಂತರ ಮುನೆಕ್ಕ ನಿರಾತಂಕಳಾದಳು. ಮುಂದಿನ ನಾಟಕದ ಮಾತು ಬರುವವರೆಗೆ ಜನ ಅವರವರ ಕೆಲಸ ಕಾರ್ಯಗಳಲ್ಲಿ ಮಗ್ನರಾದರು. ನರಸಿಂಗರಾಯನಿಗೆ ದನ ಕಾಯುವ ಕೆಲಸವಿರಲಿಲ್ಲ. ಇದ್ದ ತುಂಡುನೆಲದಲ್ಲಿಯೂ ಅಷ್ಟೇನೂ ಕೆಲಸವಿರಲಿಲ್ಲ. ಅಪ್ಪ ತನ್ನ ಪೆಟ್ಟಿಗೆಯಲ್ಲಿದ ನಾಟಕಗಳ ಕಟ್ಟನ್ನು ಮಗನ ಕೈಗೆ ಕೊಟ್ಟು, ಇನ್ನು ಇದೆಲ್ಲ ನಿನ್ನದು ಎಂದು ತನ್ನ ವಯಸ್ಸಿನವರೊಡನೆ ಕಾಲ ಕಳೆಯತೊಡಗಿದ.

ಮುನೆಕ್ಕ ಮನೆಗೆ ಬಂದಾಗಲೆಲ್ಲ ನರಸಿಂಗರಾಯ ಯಾವುದಾದರೊಂದು ನಾಟಕ ಓದುತ್ತ ಕುಳಿತಿರುತ್ತಿದ್ದ, ಇಲ್ಲವೆ ಅಡುಗೆ ಮನೆಯಲ್ಲಿ ನಾಟಕದ ಕುರಿತು ಅಮ್ಮನೊಡನೆ ಚರ್ಚೆಯಲ್ಲಿ ಮುಳುಗಿರುತ್ತಿದ್ದ. ಮುನೆಕ್ಕನೂ ಕೇಳಿಸಿಕೊಳ್ಳುತ್ತಿದ್ದಳು. ನಾಟಕ ಅವಳ ಮನಸ್ಸನ್ನು ನಿಧಾನವಾಗಿ ಸೆಳೆಯತೊಡಗಿತ್ತು. ಮನೆಗೆ ಹೋಗಿ ಎಂದೋ ಕಲಿತು ಮರೆತಿದ್ದ ಬರವಣಿಗೆಯನ್ನು ನೆನಪಿಗೆ ತಂದುಕೊಳ್ಳುತ್ತ ಬರೆಯುವುದರ ಅಭ್ಯಾಸ ಮಾಡತೊಡಗಿದಳು. ಬರೆದುದನ್ನು ಒಂದೊಂದೇ ಅಕ್ಷರ ಹಿಡಿದು ಓದಿಕೊಳ್ಳುತ್ತಿದ್ದಳು. ಒಂದು ದಿನ ನಾಚುತ್ತಲೇ ಅಮ್ಮನಿಗೆ ಅದನ್ನು ತೋರಿಸಿ, ತಿದ್ದಿಸಿ, ಓದಿಸಿಕೊಂಡು ಅದರಂತೆ ಓದಲು ಪ್ರಯತ್ನಿಸುತ್ತಿದ್ದಳು.

ನರಸಿಂಗರಾಯನ ಮೇಲೆ ಮುನೆಕ್ಕನ ಕಣ್ಗಾವಲು

ಅಮ್ಮ, 'ಏನೇ ಮುನೆಕ್ಕ ಈ ವಯಸ್ಸಿನಲ್ಲಿ ಇದೆಲ್ಲ' ಎಂದು ನಗಾಡಿದರೂ ಸಂತೋಷಪಟ್ಟು ಹೇಳಿಕೊಡುತ್ತಿದ್ದಳು. ಎರಡು ಮೂರು ತಿಂಗಳಲ್ಲಿ ಮುನೆಕ್ಕ ತಪ್ಪಿಲ್ಲದೆ ಓದೂದು, ಬರೆಯೂದು ಕಲಿತಳು. ಹಾಗೆಯೇ ಅಮ್ಮನಿಂದ ನಾಟಕದ ಮಟ್ಟುಗಳನ್ನು ಹಾಡುವ ವರಸೆಯನ್ನು ಅಭ್ಯಾಸ ಮಾಡುತ್ತಿದ್ದಳು. ಇದೆಲ್ಲ ಬೆಳವಣಿಗೆಯನ್ನು ಅಮ್ಮ, ಅಪ್ಪ-ಮಗನಿಗೆ ವರದಿಯಂತೆ ಒಪ್ಪಿಸುತ್ತಿದ್ದಳು. ಆಗ ಅಪ್ಪ, 'ಮುಂದೊಂದು ದಿನ ಮುನೆಕ್ಕ ನಾಟಕದಲ್ಲಿ ಪಾರ್ಟು ಕೇಳಿದರೂ ಹೆಚ್ಚಲ್ಲ ಎಂದು ಹೇಳಿದ್ದರು. ನರಸಿಂಗರಾಯನಿಗೂ ಹಾಗೆಯೇ ಅನ್ನಿಸುತ್ತಿತ್ತು.

ಅಂದು ನರಸಿಂಗರಾಯನ ಮನೆಯಲ್ಲಿ ಊಟಕ್ಕೆ ಉಳಿದ ಮುನೆಕ್ಕ, ಅಮ್ಮನ ಮಾತಿನ ಮೂಲಕ ಮುಂದೆ ನಾಟಕ ಕಲಿಸುವಾಗ ತನಗೊಂದು ಪಾರ್ಟು ಕೊಡುವಂತೆ ಅಪ್ಪ-ಮಗನ ಕಿವಿಗೆ ಮುಟ್ಟಿಸಿದಳು. ಅಪ್ಪ, ಮುನೆಕ್ಕನಿಗೆ ಯಾವ ಪಾರ್ಟೋ ನರಸಿಂಗ ಎಂದು ಕೇಳಿದರು. ಇನ್ನಾವುದು, ಶೂರ್ಪನಖಿಯದೋ, ಲಂಕಿಣಿಯದೋ ಇಲ್ಲ ಶಕುನಿಯದೋ ಅಂದ. ಕೂಡಲೇ ಮುನೆಕ್ಕ ಅವನ ತೊಡೆ ಹಿಂಡಿದಳು. ನರಸಿಂಗರಾಯ ಅವಳು ಬೊಗಸೆ ಮಾಡಿ ತೊಡೆಯ ಮೇಲೆ ಇರಿಸಿಕೊಂಡಿದ್ದ ಎಡಗೈಗೆ ತನ್ನ ಕೈಲಿದ್ದ ತುತ್ತನ್ನು ಹಾಕಿದ. ಎಲ್ಲರೂ ಗೊಳ್ಳೆಂದು ನಕ್ಕರು. ಮುನೆಕ್ಕ ಆ ತುತ್ತನ್ನು ತನ್ನ ತಟ್ಟೆಗೆ ಹಾಕಿಕೊಂಡು ಕೈಯನ್ನು ಅವನ ಪಂಚೆಗೆ ಒರೆಸಿದಳು. ಕೂಡಲೇ ನರಸಿಂಗರಾಯ 'ದುರುಳ ಮುನೆಕ್ಕನಿಗೆ ಶೂರ್ಪನಖೀ ಪಾತ್ರ ಪ್ರಾಪ್ತವಾಗಲಿ' ಎಂದು ಎಂಜಲ ಕೈಯನ್ನು ಅಭಯಹಸ್ತ ಮಾಡಿ ನುಡಿದ.

ಅಂದು ಜನರ ಮಾತಿನಲ್ಲಿ ನರಸಿಂಗರಾಯ ಎನ್.ಟಿ.ಆರ್., ಸುನಂದ ಜಮುನಾ...

'ಕಾಯುವುದಿನ್ನೆಷ್ಟು ದಿನ ನಿನ್ನ ಬರುವಿಕೆಗೆ ರಾಮಾ

ಕೇಳುತಿಹುದು ಗಿಡಬಳ್ಳೀ ಶಬರೀ ಎಲ್ಲೆ ನಿನ ರಾಮಾ

ಕಾನನದಲಿ ಫಲಗಳೊ ಕೇಳುತಲಿಹುವಯ್ಯಾ ರಾಮಾ

ಕಾಯುತಲುದುರಿದೆವೇ ಶಬರೀ ಎಲ್ಲೆ ನಿನ ರಾಮಾ

ಎಂದು ಹಾಡಿಕೊಳ್ಳುತ್ತ ಮುನೆಕ್ಕ ಉಲ್ಲಾಸದಿಂದ ಮನೆಯತ್ತ ಹೆಜ್ಜೆ ಹಾಕಿದಳು.

English summary
Whenever Munekka came home, Narasingaraya buisy with reading drama or engaging in a discussion with his mother about the drama in the kitchen. Even munekka slowly drawing her mind towards drama,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X