ಸ. ರಘುನಾಥ ಅಂಕಣ: ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ
ಹುಟ್ಟಿದ ಮೂರು ತಿಂಗಳಿಗೇ ಅಜ್ಜಿ ತಾತನ (ತಾಯಿಯ ತಂದೆ, ತಾಯಿ) ಮಡಿಲು ಸೇರಿ, ಇವರು ಅಮ್ಮ, ಅಪ್ಪ ಎಂದು ಗುರುತಿಸುವ ವಯಸ್ಸು ಬರುವ ಕಾಲಕ್ಕೆ ಅವರಿರಬೇಕಿದ್ದ ಮನಸ್ಸಿನಲ್ಲಿ ಅಜ್ಜಿ ತಾತನನ್ನು ತುಂಬಿಕೊಂಡವನು ನಾನು. ಇದೀಗ ನಡೆದಂತೆ ಎದೆಯಲ್ಲಿ ಆ ದೃಶ್ಯವಿದೆ. ಆಗ ನನಗೆ ನಾಲ್ಕು ವರ್ಷವಿದ್ದೀತು. ರಾತ್ರಿ ಇಬ್ಬರು ಮನೆಗೆ ಬಂದರು. ಅಡುಗೆ ಮನೆಯಲ್ಲಿ ಕುಳಿತರು.
ಅವರಿಗೆ ಕೊಂಚ ದೂರದಲ್ಲಿ ತಾತ. ಅಜ್ಜಿ ಅಡುಗೆ ಮಾಡುತ್ತಿದ್ದಳು. ನಾನು ತಾತನ ಪಕ್ಕದಲ್ಲಿದ್ದೆ. ನಿನ್ನ ಅಪ್ಪ ಅಮ್ಮ ಇವರು, ಹೋಗು ಎಂದಳು ಅಜ್ಜಿ. ನಾನು ಹೋಗಿ ಅಜ್ಜಿಯ ಬೆನ್ನಹಿಂದೆ ನಿಂತೆ. ಅಜ್ಜಿ ಹೇಳಿದ ಅಪ್ಪನಾಗಲಿ ಅಮ್ಮನಾಗಲಿ ಬಳಿಗೆ ಕರೆಯಲಿಲ್ಲ. ಮುಂದೆಂದೂ ನನಗೆ ಅವರ ಪ್ರೀತಿಯ ಸ್ಪರ್ಶವಾಗಲೇ ಇಲ್ಲ.
ಅಮ್ಮನಿಗೆ ಜಾಗ ಮಾಡಿಕೊಡಲು ನನ್ನಿಂದಾಗಲೇ ಇಲ್ಲ
ದಿನ ಕಳೆದಂತೆ, ನನ್ನ ಅಪ್ಪ ಇವನೇ ಎಂದು ಮನವರಿಕೆಯಾದರೂ ಆತ ನನ್ನ ಮನಸ್ಸಿನ ಒಂದು ಕಿರುಮೂಲೆಯಲ್ಲಿಯೂ ಅಪ್ಪನಾಗಿ ಸ್ಥಾಪಿತನಾಗಲಿಲ್ಲ. ಏಕೆಂದರೆ ಅವನ ಪ್ರವೇಶಕ್ಕೆ ಕಿಂಚಿತ್ತೂ ಎಡೆಯಿಲ್ಲದಂತೆ ತಾತ ಆವರಿಸಿಕೊಂಡಿದ್ದ. ಅಮ್ಮನಿಗೂ ಅಷ್ಟೇ. ಅಜ್ಜಿಯನ್ನು ಕೊಂಚವಾದರೂ ಪಕ್ಕಕ್ಕೆ ಸರಿಸಿ ಅಮ್ಮನಿಗೆ ಜಾಗ ಮಾಡಿಕೊಡಲು ನನ್ನಿಂದಾಗಲೇ ಇಲ್ಲ.

ತಾತ ಮರಣಿಸಿ, ಅಜ್ಜಿ ಮಗನ ಆಶ್ರಯಕ್ಕೆ ಹೋದ ನಂತರ ಅನಾಥನೇ ಆದೆ. ಫೇಲಾಗಿ ಫೇಲಾಗಿ ಹತ್ತನೆಯ ಇಯತ್ತೆ ಪಾಸು ಅನ್ನಿಸಿಕೊಂಡು, ಅನಿವಾರ್ಯವಾಗಿ ಅಪ್ಪನಲ್ಲಿಗೆ ಹೋಗಿ ಮುಂದಕ್ಕೆ ಓದಿಸುವಂತೆ ಕೇಳಿದಾಗ, 'ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು?' ಅಂದ ಅಪ್ಪ ಅಪರಿಚಿತನೇ ಆಗಿಬಿಟ್ಟ. ಅಲ್ಲಿಗೆ ನನ್ನ ವಿದ್ಯಾಭ್ಯಾಸ ನಿಂತಿತು. ಊರಿನಲ್ಲಿ ಬೀದಿ ಹುಡುಗನಾಗಿ ತುತ್ತು ಕೊಟ್ಟವರಿಗೆ ಕೃತಜ್ಞನಾದೆ.
ಅಪ್ಪನಿಗಿಂತ ಅಧಿಕವೇ ತಾತ ನನ್ನನ್ನು ಪ್ರೀತಿಸಿದ
ತಾತ ಒಬ್ಬ ಅಪ್ಪನಿಗಿಂತ ಅಧಿಕವೇ ನನ್ನನ್ನು ಪ್ರೀತಿಸಿದ. ಅವನಲ್ಲಿ ತಂದೆ- ತಾಯಿ ಇದ್ದೂ ಅನಾಥನಾದವನು ಎಂಬ ಭಾವ ಬೆಳೆದಿತ್ತು ಅನ್ನಿಸುತ್ತದೆ. ಸಾಕಿ ಸಲಹಿದ, ಅಕ್ಷರ ಕಲಿಸಿದ. ತಂದೆಯಾವದವನು ಕ್ಷಮಿಸಲಾಗದಂತಹ ತಪ್ಪುಗಳನ್ನು ಮಾಡಿದಾಗಲೂ ಹೊಟ್ಟೆಯಲ್ಲಿ ಹಾಕಿಕೊಂಡ. ಅಜ್ಜಿಯೂ ಇದಕ್ಕೆ ಪೂರಕವಾಗಿದ್ದಳು. ತಾತ ಮತ್ತು ಅಜ್ಜಿಯ ಪ್ರೀತಿ ಎಷ್ಟು ಅಗಾಧವಾಗಿತ್ತೆಂದರೆ, ನನ್ನ ಸೋದರಮಾವ, ಆತನ ಮಕ್ಕಳಲ್ಲಿ ಕೆಲವರು ನನ್ನಲ್ಲಿ ಅಸೂಯೆ ತಳೆಯುವಷ್ಟು. ಈ ಕಾರಣಕ್ಕಾಗಿಯೂ ಅವರು ಇವರನ್ನು ಆಕ್ಷೇಪಿಸುತ್ತಿದ್ದರು ಮತ್ತು ವಿರೋಧಿಸುತ್ತಿದ್ದರು.

ಈ ಸೋದರಮಾವ ನನ್ನ ತಪ್ಪುಗಳನ್ನು ಹುಡುಕಿ ಹುಡುಕಿ ನನ್ನ ಮೇಲೆ ಕೈ ಮಾಡಲು ಮುಂದಾದಗಲೆಲ್ಲ, 'ನಿಮ್ಮ ಮಕ್ಕಳನ್ನು ಅವನ ಜೊತೆಗೆ ಬಿಡಬೇಡಿ' ಎಂದು ತಾಕೀತು ಮಾಡುತ್ತಿದ್ದರು. ಅವರ ಅಸೂಯೆಯ ನೆರಳೂ ಬೀಳದಂತೆ ತಾತ ನನಗೆ ರಕ್ಷಾ ಕವಚವಾಗಿದ್ದ. ಅಂಥವರಿಗೆ ನನ್ನ ಹಸಿತನದಿಂದಾಗಿ ಕಷ್ಟ, ಅವಮಾನ ತಂದ ನಾನು ಇಂದಿಗೂ ಮನದಲ್ಲೇ ಕ್ಷಮೆಯಾಚಿಸುತ್ತಲೇ ಇದ್ದೇನೆ. ಆದರಿಂದು ಅವರು ಹೆಮ್ಮೆಪಡುವಂತೆ ಬದುಕು ಕಟ್ಟಿಕೊಂಡು ಅವರ ಕ್ಷಮೆ ಸಿಕ್ಕಿದೆಯೆಂದು ಸಮಾಧಾನಗೊಂಡಿದ್ದೇನೆ.
ನಿನ್ನಂತೆ ಮೇಷ್ಟ್ರು ಮಾಡಿದ್ದೇನೆ
'ನಮ್ಮ ಮಕ್ಕಳು' ಪ್ರಾರಂಭವಾದುದು ನನ್ನ ಬದುಕಿನ ಪ್ರಮುಖ ಘಟ್ಟ. ಇದರ ಮೊದಲ ಸದಸ್ಯೆ ತುಂಬು ಬಸುರಿಯಾಗಿದ್ದ ಒಬ್ಬೊಂಟಿ ಭಿಕ್ಷುಕಿ. ಅವಳ ಆರೈಕೆಗೆ ಮನವಾದುದುದಕ್ಕೆ ಪ್ರೇರಣೆ ನನ್ನ ತಾತ ಮತ್ತು ಅಜ್ಜಿಯೆಂಬುದು ಇಂದಿಗೂ ಬೇರೂರಿರುವ ನಂಬಿಕೆ. ಅವಳ ಆರೈಕೆಯಲ್ಲಿರುವಾಗ 'ಹುಟ್ಟುವ ಮಗುವಿಗೆ ವಿದ್ಯಾಭ್ಯಾಸ ಮಾಡಿಸುವಂತೆ ವಚನ ತೆಗೆದುಕೊಂಡೆ.
ಇದಾದ ನಲವತ್ತು ವರ್ಷಗಳ ನಂತರ ಶ್ರೀನಿವಾಸಪುರದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ನನ್ನನ್ನು ಗುರುತಿಸಿ, (ನನ್ನ ಕುಂಟು ಹಾಗು ಉಬ್ಬಿದ ಹಲ್ಲುಗಳಿಂದ ನನ್ನ ಗುರುತು ಮಾಸದು) ಆನಂದದಿಂದ ಬಳಿಗೆ ಬಂದು, ಮಗನನ್ನು ಓದಿಸಿ, ನಿನ್ನಂತೆ ಮೇಷ್ಟ್ರು ಮಾಡಿದ್ದೇನೆ. ನೀನಂದು ಅಪ್ಪನಾಗಿ ನೋಡಿಕೊಂಡೆ ಎಂದುದಲ್ಲದೆ, ಅಲ್ಲೆ ನಿಂತಿರಲು ಹೇಳಿ ಹೋಗಿ, ಬೊಗಸೆ ತುಂಬ ದ್ರಾಕ್ಷಿಹಣ್ಣು ತಂದುಕೊಟ್ಟು ತನ್ನೆದುರೇ ತಿನ್ನಲು ಒತ್ತಾಯಿಸಿದಳು. ತೊಳೆಯದಿದ್ದರೂ ಅವಳ ಪ್ರೀತಿ ಹಣ್ಣನ್ನು ರೋಗಾಣುಮುಕ್ತ ಮಾಡುವುದೆಂದು ಅವಳಿಗೂ ಕೊಟ್ಟು ತಿಂದೆ. ಭಿಕ್ಷೆ ಬೇಡುವುದನ್ನು ಬಿಟ್ಟಿದ್ದೇನೆ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಿದಳು. ಧನ್ಯನ ಮಾಡಿದೆ ತಾಯಿ ಎಂದು ಕೈ ಮುಗಿದು ಬೀಳ್ಕೊಟ್ಟೆ.

ಅಹಂಭಾವ ಬರಬಾರದೆಂಬ ಎಚ್ಚರಿಕೆ ನನ್ನದು
'ನಮ್ಮ ಮಕ್ಕಳು' ಮಡಿಲಿಗೆ ಮೊದಲು ಬಂದುದು ಒಬ್ಬ ಭಿಕ್ಷುಕ ಬಾಲಕ. ನಂತರ ಅವನ ಅಕ್ಕ ಹಾಗೂ ತಮ್ಮ. (ಅವರು ಹಾಗೂ ಅವರಂತೆ ಇದ್ದವರ ಹೆಸರು ಹೇಳಿ, ಇಂದು ಗೌರವಾನ್ವಿತರಾಗಿ ಬಾಳುತ್ತಿರುವವರಲ್ಲಿ ಕೀಳರಿಮೆ ತರುವ ಹಕ್ಕು ನನಗಿಲ್ಲ) ಕೂಡಿಕೊಂಡರು. ಇದಾದ ಇಪ್ಪತ್ತೆಂಟು ವರ್ಷಗಳಲ್ಲಿ ನಮ್ಮ ಮಕ್ಕಳು ಅಪ್ಪಿಕೊಂಡ ಮಕ್ಕಳ ಸಂಖ್ಯೆ ಹೇಳಿದರೆ ಪ್ರಚಾರಕ್ಕಾಗಿ ಎಂದಾಗಿಬಿಡಬಹುದೆಂಬ ಭಯದಿಂದಾಗಿ ಹೇಳುವುದಿಲ್ಲ.
ಈಗಿರುವ ಹದಿಮೂರು ಮಕ್ಕಳ ಪರಿಚಯವನ್ನೂ ಹೇಳಲಾರೆ. (ಇವರಲ್ಲಿ 19 ವರ್ಷದ ಹುಡುಗನನ್ನು ಕೊರೊನಾ ಬಲಿ ಪಡೆಯಿತು) 'ನಮ್ಮ ಮಕ್ಕಳು' ತಮ್ಮ ಕಾಲ ಮೇಲೆ ತಾವು ನಿಂತ ನಂತರ ಅವರ ಸಂಪರ್ಕವನ್ನೂ ಕಡಿದುಕೊಳ್ಳುತ್ತಿದ್ದೇನೆ. ನನ್ನಿಂದಲೇ ಅವರು ಈ ಸ್ಥಿತಿಗೆ ತಲುಪಿದ್ದಾರೆ ಎಂಬ ಅಹಂಭಾವ ಬರಬಾರದೆಂಬ ಎಚ್ಚರಿಕೆ ನನ್ನದು. ಯಾವ ತಂದೆ ತನ್ನ ಮಕ್ಕಳ ಉದ್ಧಾರಕನೆಂದು ಅಹಂಕಾರ ತಳೆಯುತ್ತಾನೆ?.
ಮಕ್ಕಳು ಶಾಲೆಗೆ ಬರಲು ಬೆರಳು ಚಾಚಿದವು
ಕುಡುಕ, ಬಹು ಹೆಂಡಿರ ತಂದೆ, ಅವನೊಂದಿಗೆ ಸದಾ ಜಗಳ ನಿರತ ತಾಯಿ. ಕೌಟುಂಬಿಕ ಪ್ರೀತಿಯ ಕೊರತೆ. ಹಿಡಿದುಕೊಳ್ಳಲು ಬೆರಳಿಲ್ಲ. ತಲೆ, ಬೆನ್ನು ನೇವರಿಸುವ ಅಕ್ಕರೆಯ ಕೈಯಿಲ್ಲ. ಆದರೆ ದಶಕಗಳ ಹುಟ್ಟುಹಾಕಿದ 'ನಮ್ಮ ಮಕ್ಕಳು' ಶಾಲೆಗೆ ಬರಲಾಗದ, ಬರೆಯಲು ಬೆರಳುಗಳಿದ್ದ ಮಕ್ಕಳು ಶಾಲೆಗೆ ಬರಲು ಬೆರಳು ಚಾಚಿದವು. ನಮ್ಮ ಮಕ್ಕಳು ಅವರ ತಲೆ, ಬೆನ್ನು ನೇವರಿಸಿತು. ಕಂದಾ ಎಂದು ಕರುಳಿನಿಂದ ಕರೆಯಿತು. ಅವು ತಮ್ಮ ಬದುಕಿನ ದಾರಿಯಲ್ಲಿ ಬೆಳಕನ್ನು ಕಂಡವು, ನಡೆದವು.
ನಮ್ಮ ಮಕ್ಕಳು ಸಾಲಾಗಿ ಕುಳಿತು ಉಣ್ಣುವಾಗ ಅವರ ಮುಖಗಳಲ್ಲಿ ನನ್ನ ಮಗಳ ನಗೆಮುಖ ಕಂಡಿದೆ. ಅವರೇ ಅವಳಾದಂತೆ ನನ್ನ ಬಾಯಿಗೆ ತುತ್ತಿಟ್ಟಾಗಲೆಲ್ಲ ಆ ಕೈಗಳು ನನ್ನ ಮಗಳ ಕೈಗಳೆನಿಸುತ್ತವೆ. ತಂದೆಯೊಬ್ಬ ತನ್ನ ಮಕ್ಕಳಿಂದ ಅನುಭವಿಸುವ ನಿಂದೆಗಳು ನನಗೂ ಸಿಕ್ಕಿವೆ. ಮುನಿದಿದ್ದೇನೆ, ಬಡಿದಿದ್ದೇನೆ. ಇದನ್ನು ಅವು ಮರೆತಿವೆ. ನನ್ನಲ್ಲಿಯೂ ಮರೆಸಿವೆ. ಇವರಲ್ಲಿ ದಾರಿ ತಪ್ಪಿದವರುಂಟು, ತಿದ್ದಿಕೊಂಡವರುಂಟು, ತಪ್ಪು ಮಾಡುತ್ತಲೇ ಕೆಟ್ಟವರುಂಟು. ಅಂತಹವರೂ 'ನಮ್ಮ ಮಕ್ಕಳು' ತಾನೆ? ಸರಿ ಹೋದಾರೆಂಬ ಭರವಸೆ ತಂದೆಯದಲ್ಲವೆ? ಇದು ಬಹುಮಕ್ಕಳ ಕುಟುಂಬ. ಈ ಸದಸ್ಯರು ವಿದ್ಯೆಯು ಆತ್ಮಗೌರವ, ಸಾಮಾಜಿಕ ಮರ್ಯಾದೆ, ಸ್ಥಾನಮಾನ ತಂದುಕೊಡುವುದೆಂದು ಮನಗಂಡಂತೆಲ್ಲ ಅದನ್ನು ದಕ್ಕಿಸಿಕೊಂಡರು.
ಕುಟುಂಬ ಸಮಾಜಮುಖಿಯಾಗುವುದು
ಒಂದು, ಎರಡು, ಮೂರು ಮಕ್ಕಳುಳ್ಳವರು ತಮ್ಮ ಮಕ್ಕಳು ಅದಾಗಿದ್ದಾರೆ, ಇದಾಗಿದ್ದಾರೆ ಎಂದು ಹೇಳಿಕೊಂಡು ಹೆಮ್ಮೆ ಪಡುವಂತೆ ನಮ್ಮ ಮಕ್ಕಳು ಮೂಲಕ ನಾನೂ ಹೆಮ್ಮಿಗನಾಗಿರುವೆ. ಈ ಮಕ್ಕಳು ಶಿಕ್ಷಕರು, ವೈದ್ಯರು, ವ್ಯಾಪಾರಿಗಳು, ಕೃಷಿಕರು, ಕಾರ್ಮಿಕರು, ಕೂಲಿಕಾರರು, ಉಪಕಾರಿಗಳು ಆಗಿರುವರೆಂದು ಹೇಳಿಕೊಳ್ಳುವ ಹೆಮ್ಮೆಯ ಭಾಗ್ಯವಂತ ನಾನಾಗಿರುವೆ.
ನನ್ನ ಅನುಭವದಲ್ಲಿ ತಂದೆ ಕುಟುಂಬದ ಭಕ್ತ. ಶರಣಾಗತಿ ಭಾವವಿರದೆ ಇವನು ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಏನನ್ನೂ ಸಾಧಿಸಲಾರ ಮತ್ತು ಹೊಂದಲಾರ. ನಿರ್ವಹಣೆಗಾಗಿ ತಂದೆಯಲ್ಲಿ ತಾಯಿ ಮನಸ್ಸು ಅರಳಿರಬೇಕು. ತಾಯಿಯೊಬ್ಬಳು ತಂದೆಯೂ ಆಗುವಂತೆ ಇವನೂ ಆಗಬೇಕು. ಇಂಥ ತಂದೆಯ ಜೀವನ ಸಾಮಾಜಿಕವೂ ಆದರೇನೇ ಕುಟುಂಬ ಸಮಾಜಮುಖಿಯಾಗುವುದು. ತನ್ನ ಮಗುವಿಗೆ ತಿನಿಸನ್ನು ಕೊಡಿಸುವಾಗ ತನ್ನತ್ತ ಆಸೆಗಣ್ಣುಗಳಿಂದ ನೋಡುವ ಬೇರೊಂದು ಮಗುವಿಗೂ ಕೊಡಿಸುವ ಮನಸ್ಸು ಇದ್ದವನು ನಿಜ ತಂದೆ. ಈ ಪಾಠವನ್ನು 'ನಮ್ಮ ಮಕ್ಕಳು' ನನಗೆ ಕಲಿಸಿದೆ ಎಂದು ಹೇಳಿಕೊಳ್ಳಲು ಹರ್ಷಿಸುತ್ತೇನೆ. ತಂದೆತನ ಕೊಟ್ಟ ಮಗಳಿಗೆ, 'ನಮ್ಮ ಮಕ್ಕಳು' ಒಳಗಿನ ಮಕ್ಕಳಿಗೆ ನಾನು ನಿತ್ಯಕೃತಜ್ಞ.












Click it and Unblock the Notifications