ಯಾವ ಕೆರೆ ತುಂಬಿತು, ಯಾವ ಹೊಲಕೆ ನೀರು ನುಗ್ಗಿತು?
ಈ ವಿಚಾರ ಹೇಗೆ ಪ್ರಸ್ತಾವ ಮಾಡುವುದು ಎಂಬ ಆತಂಕದಿಂದಲೇ ಲೇಖನ ಆರಂಭಿಸುತ್ತಿದ್ದೇನೆ. ಏಕೆಂದರೆ, ನಾವು ಪ್ರವಾದಿಗಳಾಗಬಾರದು. ಉಪದೇಶಗಳಂತೂ ಇರಲೇಬಾರದು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಸತ್ಯವನ್ನೂ ಹೇಳಬೇಕು. ಖಂಡಿತಾ ಇದು ಹಗ್ಗದ ಮೇಲಿನ ನಡಿಗೆ. ನನ್ನಂಥ ಜನ ಸಾಮಾನ್ಯನ ತಿಳಿವಳಿಕೆಗೆ ಬಂದ ಸಂಗತಿಯನ್ನೇ ನಿಮ್ಮೆದುರು ವಿನಯ ಪೂರ್ವಕವಾಗಿ ಇಡುತ್ತಿದ್ದೇನೆ.
ಸುದ್ದಿ ಚಿತ್ರಗಳು, ವಿಚಾರಗಳು 'ಝೂಂ ಲೆನ್ಸು'ಗಳಿಂದ ಮುಕ್ತವಾಗಬೇಕು. ಏಕೆಂದರೆ ಸುದ್ದಿ, ವಿಚಾರ, ಆಲೋಚನೆ, ಪ್ರಕಟಣೆಗಳನ್ನು ಝೂಂ ಮೂಲಕವೇ ನೋಡುವುದಾಗುತ್ತಿದೆ ಅನ್ನಿಸುವಂತಾಗಿರುವುದರಿಂದ ವರ್ತಮಾನದ ಚಹರೆಯ ಪಾರ್ಶ್ವನೋಟ ಸಿಗುತ್ತಿದೆ. ಅದರ ಆಂತರ್ಯ ಝೂಮಿನ ಹಿಂದೆ ಕಣ್ಗತ್ತಲೆಯಲ್ಲಿದೆ. ಪಾರ್ಶ್ವವನ್ನು ಝೂಂ ಸಹಿತ ದೃಶ್ಯಕ್ಕೆ ಅಳವಡಿಸುವ ತರಾತುರಿಯಲ್ಲಿ ಅರ್ಥ ಗ್ರಹಿಕೆಗೆ ಮಂಕು ಕವಿಯುತ್ತಿದೆ.
ಇಂಥ ಹಲವು ನೋಟಗಳು ವರ್ತಮಾನದ ಚಹರೆಯ ಅಪೂರ್ಣತೆಗೆ ಉದಾಹರಣೆಗಳಾಗುವ ಹಾಗೆ ರೂಪಕಗಳೂ ಆಗುತ್ತವೆ. ಈ ಝೂಮಿಕೆಯನ್ನು ಮೂಲ ಸ್ವರೂಪದ ಒತ್ತುವರಿ ಅನ್ನಬಹುದು. ಕಳೆದ ಒಂದೆರಡು ವಾರದ ದಿನಗಳಲ್ಲಿ ಮಳೆಯ ಅಸಮ ಹಂಚಿಕೆಗೆ ಗುರಿಯಾದ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆಯೂ ಒಂದು.
ಆದರೆ, ದೃಶ್ಯ ಮಾಧ್ಯಮಗಳಲ್ಲಿ ಜಿಲ್ಲೆಯ ಕೆರೆಗಳು ಭರ್ತಿ, ಹೊಲಗಳಿಗೆ ನುಗ್ಗಿದ ನೀರು ಎಂಬ ಸುದ್ದಿ ಬಿತ್ತರಗೊಂಡವು. ಇಲ್ಲಿ ಎಷ್ಟು ಕೆರೆಗಳು, ಎಂಥ ಹೊಲಗಳು ಎಂಬ ಪ್ರಶ್ನೆಗಳು ಬರಲಿಲ್ಲವಾದ್ದರಿಂದ ಉತ್ತರವೂ ಇಲ್ಲವಾಯಿತು.

ಸುದ್ದಿ ವೈಭವೀಕರಣ ಪಾರ್ಶ್ವ ನೋಟವಲ್ಲವೆ?
ಬೆರಳೆಣಿಕೆಯ ಕೆರೆಗಳಿಗೆ ನೀರು ಬಂದುದನ್ನು ಜಿಲ್ಲೆಯ ಕೆರೆಗಳಿಗೆ ಎಂದು ಸುದ್ದಿ ಮಾಡಿ ವೈಭವೀಕರಿಸುವುದು ಪಾರ್ಶ್ವ ನೋಟವಲ್ಲವೆ? ಹಾಗೆಯೇ ಹೊಲಗಳಿಗೆ ನೀರು ನುಗ್ಗಿತು ಎಂಬುದೂ ಸಹ. ನೀರು ನುಗ್ಗಿದ್ದು ಸಹಜ ಸ್ಥಿತಿಯ ಹೊಲಗಳಿಗಲ್ಲ. ಒತ್ತುವರಿಯಾದ ಕೆರೆಗಳಲ್ಲಿನ ಹೊಲಗಳಿಗೆ.

ನೀರಿನ ಜಾಗ ಯಾರದು?
ನೀರಿನ ಹಕ್ಕಿನ ಜಾಗವದು. ಅದನ್ನು ಕಬ್ಜಾ ಮಾಡಿಕೊಂಡು ನೀರನ್ನು ಜವಾಬ್ದಾರಿ ಮಾಡುವುದು ನಮ್ಮ ಅಪರಾಧವಲ್ಲವೆ? ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ಮನೆಗಳನ್ನು ತುಂಬಿದ ನೀರಿನ ಜಾಗ ಯಾರದು? ನೀರಿನದಾದ ಕೆರೆಗಳದಲ್ಲವೆ? ಹರಿಯದೆ ನಿಂತಿದ್ದು ಕಾಲುವೆಗಳನ್ನು ಮುಚ್ಚಿದ್ದರಿಂದಲ್ಲವೆ?

ಯಾರಯಾರ ಸ್ಥಾನದಲ್ಲಿ ಅವರವರಿದ್ದರೆ ಅನಾಹುತವಾಗದು
ಗಡಿಗಳಲ್ಲಿ ಅಕ್ರಮವಾಗಿ ನುಸುಳಿದವರು ವಿದೇಶಿ ನುಸುಳುಕೋರರಾದರೆ, ನಾವು ಸ್ವದೇಶಿ ಅಕ್ರಮ ನುಸುಳುಕೋರರಾಗುವೆವಲ್ಲವೆ? ಯಾರಯಾರ ಸ್ಥಾನದಲ್ಲಿ ಅವರವರಿದ್ದರೆ ಅನಾಹುತವಾಗದು ಎಂಬ ಸರಳ ಪಾಠವನ್ನು ಈ ಮಳೆ ಹೇಳಿತಷ್ಟೆ..

ಸೀಮೋಲ್ಲಂಘನ ಮಾಡುವುದು ಯಾರಿಗೂ ಗುಣವಲ್ಲ
ಈ ಹಿನ್ನೆಲೆಯಲ್ಲಿ ಇಂದಿನ ಅನೇಕ ವಿಚಾರಗಳನ್ನು ಇಟ್ಟು ನೋಡಬೇಕಿದೆ. ತನ್ನ ಒಳಿತು- ಕೆಡುಕಿನ ಪ್ರಜ್ಞೆ ಸಾಕ್ಷರರಿಗೆ ಮಾತ್ರವಿದೆಯೆಂದು ಭಾವಿಸುವುದೇ ಮೂರ್ಖತನ. ಅನಕ್ಷರಸ್ಥನಿಗೂ ಇದ್ದದ್ದೇ. ಇದನ್ನು ಗಮನಿಸದೆ, ಬೇಡಿಕೆಯ ಆಹ್ವಾನವಿಲ್ಲದೆ 'ಸ್ವಯಂ ಪ್ರತಿನಿಧಿತ್ವ'ದ ನೆಪ ಹುಟ್ಟಿಸಿಕೊಂಡು ಅದರದರ ಸೀಮೋಲ್ಲಂಘನ ಮಾಡುವುದು ಯಾರಿಗೂ ಗುಣವಲ್ಲ.

ಬಲವಂತದ ಮಾಘಸ್ನಾನಕ್ಕೆ ಎಳೆಯಬಾರದು
ಇದು ತಪ್ಪು, ಇದು ಸರಿ ಎಂದು ಮನವರಿಕೆ ಮಾಡಿಕೊಡುವುದು ಬೇರೆ, ಇದೇ ಸರಿ. ನೀನು ಇದನ್ನೇ ಅನುಸರಿಸಬೇಕು ಎಂದು ಹೇರುವುದು ಸರಿಯಾದುದಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ ಎನ್ನುವುದಾದರೆ 'ಬಲವಂತದ ಮಾಘಸ್ನಾನ'ಕ್ಕೆ ಯಾರನ್ನೂ ಎಳೆಯಬಾರದು. ಇದು ವಿಚಾರವಂತಿಕೆಯ ವಿವೇಕ ಮತ್ತು ವಿನಯ.

ಶೋಷಣೆಯ ಬೇರನ್ನು ಕಿತ್ತು ನಾಶ ಮಾಡಬೇಕು
ಈ ವಿನಯವನ್ನು ಮೀರುವುದರಿಂದ ಗೊಂದಲ, ಘರ್ಷಣೆಗಳು, ತೀಮಾನಕ್ಕೆ ಬಾರದ, ಜಾತಿ ಮತಗಳ ಅಸಹನೆಗೆ ಕಾರಣವಾಗುತ್ತದೆ. ಹುಟ್ಟುವ ಗೊಂದಲಗಳು ನೆಮ್ಮದಿಯನ್ನು ಕದಡುತ್ತವೆ. ಶೋಷಣೆಯ ಬೇರನ್ನು ಕಿತ್ತು ನಾಶ ಮಾಡಿದರೆ ಮೂಢನಂಬಿಕೆಯ ಬೇರು ತಾನಾಗಿಯೇ ಸಾಯುತ್ತದೆ.

ಜೀವಕಷ್ಟಗಳು ಮೂಢನಂಬಿಕೆಗಳತ್ತ ಚಲಿಸುವಂತೆ ಮಾಡುತ್ತವೆ
ಶೋಷಣೆಯಿಂದ ಉಂಟಾಗುವ ಅಪಮಾನ, ಸಂಭವಿಸುವ ಜೀವಕಷ್ಟಗಳು ಜನರನ್ನು ಮೂಢನಂಬಿಕೆಗಳತ್ತ ಚಲಿಸುವಂತೆ ಮಾಡುತ್ತವೆ. ಈ ಶೋಷಣೆಯ ಕಷ್ಟ, ಅಪಮಾನಗಳಲ್ಲಿ ಇದೊಂದೇ ಎಂಬುದಿಲ್ಲ. ಆಹಾರವೂ ಸೇರಿ ಅನೇಕವಿವೆ. ನನ್ನದಿದು. ನೀನು ಇದನ್ನೇ ಸ್ವೀಕರಿಸಬೇಕು ಎಂಬುದು ಜೀವಿಸ್ವಾತಂತ್ರ್ಯ ವಿರೋಧಿ ಸರ್ವಾಧಿಕಾರಿ ಧೋರಣೆ. ಇದಕ್ಕೆ ವಿರೋಧ ಹುಟ್ಟಿಯೇ ಹುಟ್ಟುತ್ತದೆ.

ಎಡ-ಬಲ ಕೆರಳಿಸುವಂತಿರಬಾರದು
ಎಡಬಲ ಯಾವುದೇ ಇರಲಿ ಕೆರಳಿಸುವಂತಿರಬಾರದು. ಹಿಡಿಯುವ, ಬಡಿಯುವ ಕೈಗಳಿರುವ ಮಾನವನಿಂದಷ್ಟೇ ಒತ್ತುವರಿಗಳಾಗುತ್ತಿರುವುದು. ಇಲ್ಲಿಂದಲೇ ವೈಚಾರಿಕ ವಿರೋಧಗಳು ಹುಟ್ಟಿಕೊಂಡಿದ್ದು. ಇವು ವರ್ತಮಾನದವೇನಲ್ಲ. ಇದು ತ್ರಿಕಾಲ ವಿಶ್ವವ್ಯಾಪಿ. ಯಾರಿಗೂ ಕೆಡುಕಾಗದಂತೆ ನಿರ್ವಹಿಸುವುದೇ ಪರಿಪೂರ್ಣ ವೈಚಾರಿಕತೆ.

‘ಝೂಂ ಲೆನ್ಸು’ಗಳಿಂದ ಮುಕ್ತವಾಗಬೇಕು
ಸುದ್ದಿ ಚಿತ್ರಗಳು, ವಿಚಾರಗಳು 'ಝೂಂ ಲೆನ್ಸು'ಗಳಿಂದ ಮುಕ್ತವಾಗಬೇಕು. ವಾಸ್ತವಗಳಷ್ಟೆ ಕಣ್ಣುಗಳಿಗೆ ಕಾಣಬೇಕು. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರಂಥವರ ವಿಚಾರ, ವಾದಗಳನ್ನು ಹೇಳಿಕೆಗಳಿಗೆ ಮಿತ ಮಾಡುವುದಲ್ಲ. ಅವರು ಯಾರನ್ನೂ ದ್ವೇಷಿಸಿದ್ದಿಲ್ಲ. ವಿರೋಧವು ದ್ವೇಷವಲ್ಲ ಎಂಬುದನ್ನು ಅವರಿಂದ ಪಡೆದುಕೊಳ್ಳುವ ಗುಣವಾಗಿದೆ.

ಕುವೆಂಪು ನಮಗೆ ಮಾದರಿಯೂ ಆದರ್ಶವೂ
ನೀರಿನ ಜಾಗವನ್ನು ನೀರಿಗೆ ತೆರವು ಮಾಡಿಕೊಡುವುದು ಎಷ್ಟು ಮುಖ್ಯ ಹಾಗೂ ಅನಿವಾರ್ಯವೊ ಹಾಗೆಯೇ ಪೂರ್ವಗ್ರಹಗಳನ್ನು ತೆರವು ಮಾಡಿ ವಿಚಾರವಂತಿಕೆಯನ್ನು ತರುವುದು ಮುಖ್ಯ ಅನಿವಾರ್ಯ. ಇದಕ್ಕೆ ಕುವೆಂಪು ನಮಗೆ ಮಾದರಿಯೂ ಆದರ್ಶವೂ ಆಗಿರುವರು.












Click it and Unblock the Notifications