ಪೂರ್ಣದರ್ಶನದ ಭಾಗ್ಯ ಕೊಟ್ಟ ನನ್ನೊಲವ ಶಕುಂತಲೆಗೆ ಪ್ರೀತಿ ತುಂಬಿದ ಪತ್ರ
ನನ್ನ ಶಕುಂತಲೇ,
ರೈಲು ಬರುತ ಕೂಗಿತು ನೀನು ಬಂದೆಯೆಂದು. ರೈಲು ಹೋಗುತ ಕೂಗಿತು ನೀನು ಇಳಿದಿರುವಿಯೆಂದು. ನಿಲ್ದಾಣಕ್ಕೆ ಬಂದಿದ್ದ ಅಪ್ಪನ ಹಿಂದೆ ನೀನು. ಅವನು ಒಳಬಂದಾಗ ಬಾಗಿಲಲ್ಲಿ ನನಗೆ ನಿನ್ನ ಪೂರ್ಣದರ್ಶನ ಭಾಗ್ಯ ಕೊಟ್ಟೆ ಶಕುಂತಲೆ.
ನಿನ್ನ ನಡುನೆತ್ತಿಯಲಿ ಓರೆಯಾದ ಬೈತಲೆ ಬೊಟ್ಟು, ಮುಡಿದ ಕನಕಾಂಬರದ ಜಡೆ ನಡುವೆ ಸೇವಂತಿಗೆ ಜಡೆಬಿಲ್ಲೆ, ಕೊರಳಲಿ ಚಿಂತಾಕು ಪದಕ, ಜೊತೆಗೆ ಕಾಸಿನಸರ, ಮುತ್ತಿನ ಮೂಗುತಿ, ತೋಳಬಂಧಿ, ಕಿವಿಯಲ್ಲಿ ಹೊಳೆವ ಮತ್ಸ್ಯದೋಲೆ, ಸೊಂಟದಲಿ ಬಂಗಾರದ ಡಾಬು, ಕಾಲಿನಲಿ ಬೆಳ್ಳಿ ಚೈನು, ಹಸಿರು ರೇಷಿಮೆಸೀರೆ - ರವಿಕೆ, ಹಗಲು ಇರುಳಾಯಿತೆ ಅನಿಸುವ ಕಣ್ಣ ಕಾಡಿಗೆ.
ಅಮ್ಮ ಕೆನ್ನೀರಿನಾರತಿ ಎತ್ತಿ ದಾಸವಾಳದ ಗಿಡಕೆರಚಿ ಬಂದಳು ದೃಷ್ಟಿ ನಿವಾರಣೆಗೆ. ನೀನು ಒಳಬಂದಾಗ ಮನೆಯಲ್ಲಿ ಎಂಥದೋ ಕಾಂತಿ. ನೀನಾಗ ಪ್ರಭಾದೇವಿ ಅನಿಸಿತು. ಕೋಳಿ ಕೂಗಿಗೆ ಕನಸು ಕರಗಿ ಎಚ್ಚರಗೊಂಡೆ ಶಕುಂತಲೆ.

ಅಂದು ಗದ್ದೆಯ ಕೆಲಸ. ನಾಟಿ ಮಾಡಿದ ನೆಲ್ಲುಪೈರು ಹೊಸಬೇರು ಬಿಟ್ಟು ನೆಟ್ಟಗೆ ನಿಂತು ಹೊಸ ಹಸಿರುಗರಿಯಿಟ್ಟಿತ್ತು. ಕನಸಿನಲಿ ನೀನುಟ್ಟ ಹಸಿರು ಸೀರೆಯಂತೆ. ಕಳೆ ತೆಗೆಯುವ ಕೆಲಸ ಕೆಸರುಗದ್ದೆಯಲ್ಲಿ. ಹೆಣ್ಣಾಳುಗಳು ಬಾಗಿ ತೆಗೆಯುತ್ತಿದ್ದರು ಕಳೆ. ಬಾಗಿದ ಅವರು ಕಾಣುತ್ತಿದ್ದರು ರಂಗುರಂಗಿನ ಬೆಳ್ಳಕ್ಕಿಯಮ್ಮರಂತೆ.
ಅವರಲ್ಲಿ ಒಬ್ಬಾಕೆ, ನಿನ್ನೆ ತವರಿಂದ ಬಂದವಳು ಉಟ್ಟಿದ್ದಳು ತವರಿನವರು ಕೊಟ್ಟಿದ್ದ ಗಿಳಿಯಂಚು ಹಸಿರುಸೀರೆ. ಅವಳ ಹೆಸರು ಗನ್ನೇರಿ. ಅವಳ ಪಕ್ಕದಲೆ ಇದ್ದಳು ಹುಲಿಬಣ್ಣದ ಸೀರೆ-ರವಿಕೆ ತೊಟ್ಟ. ನಿನ್ನೆಯಷ್ಟೇ ನಿಶ್ಚಿತಾರ್ಥ ಮುಗಿದಿದ್ದ ಜವ್ವನಿ. ಅವಳ ಹೆಸರು ಜವರಾಲು.
ಕೆಂಪು ಸೀರೆಯುಟ್ಟವಳು ವರದಮ್ಮ. ಅವಳದು ಚಲುವು ಮಾಸದ ನಡುವಯಸು. ಕಷ್ಟದ ಜೀವ, ಇಪ್ಪತ್ತೈದಕ್ಕೇ ನಾಲ್ಕು ಮಕ್ಕಳ ತಾಯಿ. ಚೌಡಿ ಉಟ್ಟಿದ್ದಳು ಅಮ್ಮ ಕೊಟ್ಟ ನೀಲಿ ರಂಗಿನ ಸೀರೆ. ನಮ್ಮ ಗದ್ದೆಯಲ್ಲಿ ಮೂಡಿತ್ತು ಶಕುಂತಲೆ ಕಾಮನಬಿಲ್ಲು. ಅಲ್ಲಿ ಕಂಡಿತು ಹಳದಿ ಬಣ್ಣದ ಕೊರತೆ. ಅದನು ತುಂಬಲು ಅಲ್ಲಿ ನಾ ನಿನ್ನ ಕಲ್ಪಿಸಿಕೊಂಡೆ.
ನಾನು ಕೊನೆಯಲ್ಲಿ ಆಳುಗಳ ಜೊತೆ ಸೊಂಟ ಬಗ್ಗಿಸಿದ್ದೆ. ಬದುವಿನ ಮೇಲೆ ಕುಳಿತಿದ್ದ ಅಪ್ಪ ಮಾಡುತ್ತ ಕೆಲಸದ ಅಜಮಾಯಿಷಿ. ಆಗ ಬೆಳಗಿನ ಒಂಬತ್ತು ಗಂಟೆ. ಕಾಯುತಿದ್ದೆವು ಅಮ್ಮನಿಗೆ ಅವಳು ಹೊತ್ತು ತರುವ ತಂಗಳು ಮಕ್ಕರಿಗೆ. ಅಮ್ಮ ಬರುತಲಿದ್ದಳು ಅನ್ನಪೂರ್ಣೆಯಂತೆ. ತಂಗಳುಂಡು ಆಳುಗಳು ಗದ್ದೆಗಿಳಿದರು. ಅವವರೊಡನೆ ಅಮ್ಮ ಕೈ ಹಾಕಿದಳು. ನಾನು ಎತ್ತುಗಳ ಮೇಸಲು ಕೆರೆಕಟ್ಟೆಗೆ ಹೋದೆ.
ಕೆರೆಯ ಕೋಡಿ ಅಂಚಿನಲ್ಲಿದ್ದ ಎಲೆಯಿರದ ಕಕ್ಕೆಮರದ ತುಂಬ ನೆಲದತ್ತ ಜೋಲುತ್ತಿದ್ದವು ಉದ್ದ ಮುಗ್ಗು-ಹೂ ಮುಡಿದ ಗೊಂಚಲುಗಳು. ಆ ಗೊಂಚಲುಗಳ ಹಿಡಿದು ಯಾರೋ ಇಳಿದು ಮರದಡಿಗೆ ಬಂದಂತೆ. ತಲೆದೂಗುತಿದ್ದವು ತಂಗಡಿ ಹೂಗಳು ಸ್ವಾಗತಿಸುವಂತೆ. ತಿತ್ತಿರಿ ಹಕ್ಕಿ ಬಾನಲ್ಲಿ ಸುತ್ತಿ ಹಾಡುತ್ತಿತ್ತು ಸ್ವಾಗತದ ಶುಭಗೀತೆ.
ಬಾರೆಂದು ಕರೆಯುತ್ತಿರುವ ಆ ಯಾರು? ನೋಡಿದೆ. ನೋಡುತ್ತ ನೋಡುತ್ತ ಕಾಣಿಸಿತು ಸ್ಪಷ್ಟ. ಅದು ನೀನೇ. ಕನಸಿನಲಿ ಕಂಡ ಒಡವೆ ವಸ್ತ್ರಗಳಲ್ಲಿ ನನ್ನ ಶಕುಂತಲೆ. ಹಗಲಿನಲಿ ಮರುಕಳಿಸಿದ ಇರುಳು ಕಂಡ ಕನಸು. ಗದ್ದೆ ಕಡೆಯಿಂದ ಹಾಡು:
ಅರಮನೆ ಬಾಕುಲಕ ಮಾಸಿಗುರು ತ್ವಾರಣ ಕಟಿಸಿ
ದ್ವಾರಕ ಬಾಡದ ದಾಳಿಂಬ್ರಿ ಹೂ ಮಾಲೆ ಹಾಕಿಸಿ
ಅರಮನೆ ಒಳಿಗೆ ಅತ್ತರು ಮಲಿಗೂವ್ವ ಗಮಲು
ಅರಸ ಕಾತವನೆ ಮನುಮತನಂತ ರೂಪು
ಮನದೊಳಗಿನ ಕನಸಿನ ಗುಂಗಿಗೆ ಹಾಡಿನಿಂಪು. ಆ ಇಂಪಿನಲಿ ನಿನ್ನ ಕಾಡಿಗೆ ಕಣ್ಣೋಟದ ಪ್ರೀತಿಯ ಬೆಳಕು.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications