ಹೊರಟಾನೊ ನರಸಿಂಗರಾಯ ಶಕುಂತಲೆಯ ಅನ್ವೇಷಣೆಗೆ

ತನ್ನೂರಿನ ಹೆಂಗಳಲ್ಲಿ ಶಕುಂತಲೆಯಂತಹವಳು ಇದ್ದಾಳೆಯೆ ಎಂದು ಕುತೂಹಲಗೊಂಡ ನರಸಿಂಗರಾಯನಿಗೆ ಚಿನ್ನಕ್ಕನನ್ನು ನೋಡಿದ ದಿನಗಳಲ್ಲಿ ಶಕುಂತಲೆಯ ನೆನಪಾದುದಿಲ್ಲ. ಆಗಿದ್ದರೆ ಅನ್ನುವುದು ಉತ್ತರವಿಲ್ಲದ್ದು. ಬಹಳ ಯೋಚಿಸಿದ ಮೇಲೆ ದಾರಿ ಹೊಳೆಯಿತು. ಬಸಪ್ಪನ ನೀರುಬಾವಿ ದಾರಿಯಲ್ಲಿದ್ದ ಜನ್ನಗಟ್ಟಮ್ಮನ ಹೊಲ ಸರಿಯಾದ ತಾಣ ಅನ್ನಿಸಿತು.

ಬೆಳಗ್ಗೆಯೇ ಅವಳಲ್ಲಿಗೆ ಹೋಗಿ, ಇವತ್ತು ಒಂದು ಕಟ್ಟು ಜೋಳದ ಕರೆಗಳನ್ನ ನಿಮ್ಮ ಹೊಲದಲ್ಲಿ ಕೊಯ್ಕೊಳ್ತೀನಿ. ನಾಳೆ ನಮ್ಮ ಹೊಲದಿಂದ ತಂದು ಕೊಡ್ತೀನಿ ಎಂದು ಕೇಳಿದ. ಅವಳು ಅಷ್ಟೇ ತಾನೆ, ತಂದು ಕೊಡೋದೇನೂ ಬೇಡ, ಕೊಯ್ಕೊಂಡು ಹೋಗೆಂದಳು. ನರಸಿಂಗರಾಯ ಹೊಲಕ್ಕೆ ಹೋದ.

ದಾರಿ ಅಂಚಿನ ಸಾಲು ಹಿಡಿದು, ಬಾಗಿ, ನಿಧಾನವಾಗಿ ಕೊಯ್ಯುತ್ತ ದಾರಿಯತ್ತ ದೃಷ್ಟಿ ನೆಟ್ಟ. ನೀರಿಗೆ ಹೋಗಿ ಬರುವವರಲ್ಲಿ ಶಕುಂತಲೆಯ ರೂಪವನ್ನು ಹುಡುಕತೊಡಗಿದ. ಕಣ್ಣಿಗೆ ಕಾಣುತ್ತಿದ್ದವರೆಲ್ಲರಲ್ಲಿ ಶಕುಂತಲೆಯ ಒಂದಿಲ್ಲೊಂದು ಅಂಶ ಕಾಣುತ್ತಿತ್ತೇ ವಿನಾ ಕಾಳಿದಾಸನ ವರ್ಣನೆಯಂತಹ ಒಬ್ಬಳೂ ಕಾಣಲಿಲ್ಲ.

Kannada short story: Narasingaraya went to find Shakuntala

ಬೇಸರ, ನಿರಾಸೆಯಲ್ಲಿ ಹೊರೆ ತಲೆಗೇರಿಸಿಕೊಂಡು ಮನೆಯತ್ತ ತಿರುಗಬೇಕು, ಕಣ್ಣು ಚೆದುರಿತು, ಮನಸು ನಲಿಯಿತು, ತಲೆ ಮೇಲಿನ ಹೊರೆ ನೆಲಕ್ಕೆ ಬಿತ್ತು. ಶಕುಂತಲೆಯಂತಹ, ಅಂತಹ ಏನು? ಶಕುಂತಲೆಯೇ! ಗೂನಪ್ಪನ ಮಗಳು ನಾಗಿ! ಇಷ್ಟು ದಿನ ಎಲ್ಲಿ ಅಡಗಿಸಿಟ್ಟುಕೊಂಡಿದ್ದಳು ಶಕುಂತಲೆಯ ರೂಪವನ್ನು?! ಕವಿ ಕಾಳಿದಾಸ ನನಗೊಂದು ಪದ್ಯ ಕರುಣಿಸೆಂದು ಬೇಡಿದ.

ಬಿರಬಿರ ಮನೆಗೆ ಬಂದ ನರಸಿಂಗರಾಯ. ಗಬಗಬ ಎರಡು ತುತ್ತು ನುಂಗಿ, ಎಲ್ಲರಿಗಿಂತ ಮೊದಲು ದನಗಳನ್ನು ಹೊಡೆದುಕೊಂಡು ಹೊರಟು ಬಿಟ್ಟ. ಅವುಗಳನ್ನು ಮೇಯಲು ಬಿಟ್ಟು, ಕೆಂಪು ಹೂ ಮುಡಿದಿದ್ದ ಮುತ್ತುಗದ ಮರದ ನೆರಳಲ್ಲಿ ಕುಳಿತು ಪದ್ಯ ಹಿಡಿಯಲು ಒದ್ದಾಡಿದ. ಬಹಳ ಹೊತ್ತಿಗೆ ಎದೆಯಲ್ಲಿ ಹರಿಯಿತು ಪದ್ಯ: 'ಮನ ಶಾಂತವಿರುವಾಗ ಬ್ರಹ್ಮ/ ಚಲುವಿನ ಗಣಿ ತಂದು ರೂಪಿಸಿದ ನಿನ್ನ/ ವರವಾಗಿ ನನಗಿತ್ತ ಮದನ/ ತೋರೆ ಮುಖಾಬ್ಜವ ಬೀರೆ ಸುಹಾಸವ.'

ಓದಲು ಬಾರದ ನಾಗಿಗೆ ಹೇಳಲು ಓದಿ ಓದಿ ಬಾಯಿಪಾಠ ಮಾಡಿಕೊಂಡ. ಸಂಜೆ ಅವಳ ಹೊಲಕ್ಕೆ ಹೋಗಿ ಕಾದ. ಕುಡುಗೋಲು ಹಿಡಿದು ಬಂದಳು ನಾಗಿ. ಏನು ನರಸಿಂಗ ಅಪರೂಪಕ್ಕೆ ನಮ್ಮ ಹೊಲದ ಕಡೆ ಎಂದಳು. ನಮ್ಮ ಪಡ್ಡೆಕರು ತಪ್ಪಿಸಿಕೊಂಡಿದೆ. ಹುಡುಕಿಕೊಂಡು ಬಂದೆ. ನೀನು ಕಂಡೆ, ಮಾತನಾಡಿಸಿ ಹೋಗೋಣ ಅಂತ ನಿಂತೆ ಅಂದ.

ಪ್ರಯತ್ನಿಸಿ, ಪ್ರಯತ್ನಿಸಿ ನಾಗಿ ನಿನ್ನ ಮೇಲೊಂದು ಹಾಡು ಬರೆದಿದ್ದೀನಿ ಕೇಳ್ತೀಯ ಅಂದ ಧೈರ್ಯ ಮಾಡಿ. ಹೌದಾ ಎಂದು ತನ್ನ ದುಂಡು ಮುಖವನ್ನು ಗೂಡೆಯಗಲ ಮಾಡಿ, ಬೊಗಸೆಗಣ್ಣನ್ನು ಇಷ್ಟಗಲ ಅರಳಿಸಿ ಹೇಳೆನ್ನುವ ಹಾಗೆ ನೋಡಿದಳು. ಬದುವಿನಲ್ಲಿ ಕಾಣಿಸಿಕೊಂಡ ಗೂನಪ್ಪ 'ಏನು ನರಸಿಂಗ ಇವತ್ತು ನಮ್ಮ ಹೊಲದ ಕಡೆ?' ಎಂದು ಕೇಳಿದ.

ನಿಮ್ಮ ಹೊಲದಲ್ಲಿ ಅವರೆ ಹೇಗೆ ಹೂ ಬಿಟ್ಟಿದೆ ಅಂತ ನೋಡಾಕೆ ಬಂದೆ ಎಂದು ಅವನತ್ತ ಹೋದ. ನಾಗಿಗೆ ಅವನ ಸುಳ್ಳು ತಿಳಿದು, ಅವನು ಬಂದಿದ್ದೇ ತನಗಾಗಿ ಎಂದು ಖಾತರಿಯಾಯಿತು. ಅಪ್ಪನ ಜೊತೆ ನಿಂತು ಮಾತನಾಡುತ್ತಿದ್ದ, ಹೊಂಬಿಸಿಲು ಅರಳಿದ್ದ ನರಸಿಂಗರಾಯನ ಮುಖವನ್ನು ನೋಡಿದಳು. ಅವನ ಮುಖದಲ್ಲಿ ನಾಗನ ಮುಖದ ಹೋಲಿಕೆ ಕಂಡಿತು.

ಸತತ ನಾಲ್ಕು ದಿನ ಪ್ರಯತ್ನಿಸಿದರೂ ನರಸಿಂಗರಾಯನಿಗೆ ಅವಳನ್ನು ಸಂಧಿಸಲಾಗಲೇ ಇಲ್ಲ. ನಾಗಿ ನೂಟವೆ ನಂಜುಂಡಪ್ಪನ ತೋಟದ ಬಾವಿಯಲ್ಲಿ ಹೆಣವಾಗಿ ತೇಲಿದಳು. ಅವನ ಎದೆಯಲ್ಲೇ ಉಳಿದ ಆ ಪದ್ಯ, ಅನೇಕ ವರ್ಷಗಳ ನಂತರ ಅವನು ಕಲಿಸಿದ ರಾಮಾಯಣ ನಾಟಕದ ಮಟ್ಟಾಗಿ, ಮಂಡೋದರಿಯ ಕಂಠದಿಂದ ಹೊಮ್ಮಿ ಜನರಿಂದ ಶಬ್ಬಾಷ್ ಗಿರಿ ಪಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+