ಕಾಲೇಜು ಮೆಟ್ಟಿಲನ್ನೇ ಹತ್ತದ ನಾನು 1954ನೇ ಬ್ಯಾಚಿನ ಎಮ್ಮೆ

By: ಸ.ರಘುನಾಥ, ಕೋಲಾರ
Subscribe to Oneindia Kannada

ಕಾಲೇಜೊಂದಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು. ಕೊಂಚ ಮುಂಚಿತವಾಗಿ ಹೋಗಿದ್ದೆ. ಪರಿಚಯದ ನಂತರ ಲೆಕ್ಚರರೊಬ್ಬರು ನೀವು ಯಾವ ಬ್ಯಾಚಿನ ಎಂ.ಎ. ಅಂದರು. ನಾನು, 1954ರ ಬ್ಯಾಚಿನ ಎಮ್ಮೆ ಅಂದೆ. ಬೆಂಗಳೂರಲ್ಲೊ, ಮೈಸೂರಲ್ಲೊ ಅಂದರು. ಎರಡರಲ್ಲೂ ಅಲ್ಲ ಅಂದೆ. ಮತ್ತೆ ಧಾರವಾಡದಲ್ಲೊ ಅಂದರು. ಒಂದು ಥರಾ ಧಾರವಾಡದ್ದೆ. ಆದರೆ ಮಾಲೂರಿನ ಮುನಿಸಿಪಲ್ ಸ್ಕೂಲಲ್ಲಿ ಅಂದೆ.

ಈಗವರು ತಬ್ಬಿಬ್ಬುಗೊಂಡರು. ತಮಾಷೆ ಮಾಡಬೇಡಿ, ಹೇಳಿ ಅಂದರು. ತಮಾಷೆ ಅಲ್ಲ ಗುರುವೆ, ನಾನು 1954ರ ಬ್ಯಾಚಿನ ಎಮ್ಮೆ ಅಂದೆ. 54ರಲ್ಲಿ ಎಂ.ಎ. ಮಾಡಿ ಇನ್ನೂ ಸರ್ವಿಸ್ ನಲ್ಲಿದ್ದೀರ, ರಿಟೈರಾಗಿಲ್ವ ಅಂದರು ಅಚ್ಚರಿಯಲ್ಲಿ ಬಿದ್ದು. ಎಮ್ಮೆಗಾವ ರಿಟೈರುಮೆಂಟು ಗುರುವೆ ಅಂದೆ.

ಯಾವ ಕೆರೆ ತುಂಬಿತು, ಯಾವ ಹೊಲಕೆ ನೀರು ನುಗ್ಗಿತು?

ಇಷ್ಟು ಹೊತ್ತಿನ ಮೇಲೆ ಅವರು ಕೇಳಿದ ಎಂ.ಎ. ಬಗ್ಗೆ ನಾನು ಹೇಳುತ್ತಿಲ್ಲ ಎಂಬುದು ತಿಳಿಯಿತು. ಪೆಚ್ಚಾದರು. ಅವರ ಪೆಚ್ಚನ್ನು ಕಳೆಯಲು, ನಾನು ಕಾಲೇಜು ಮೆಟ್ಟಿಲನ್ನೇ ಹತ್ತಿಲ್ಲ ಗುರುವೆ ಎಂದೆ. ಮತ್ತೆ 54ರ ಬ್ಯಾಚು ಅಂದಿರಲ್ಲ ಎಂದು ಕೇಳಿದರು. ನಾನು ಹುಟ್ಟಿದ್ದು 1954ರಲ್ಲಿ. ಆದ್ದರಿಂದ ಆ ಬ್ಯಾಚು ಅಂದೆ ಎಂದು ಹೇಳಿದೆ.

ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ

ಒಳ್ಳೆ ಆಸಾಮಿ ನೀವು ಎಂದು ನಕ್ಕರು. ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಅವರು ತಮ್ಮ ಸಹೋದ್ಯೋಗಿಗಳಿಗೆ ಇದನ್ನು ಹೇಳಿ ನಗಿಸಿದ್ದರು. ಇದರಿಂದಾದ ಒಂದು ಅನುಕೂಲವೆಂದರೆ, ಅವರೆಲ್ಲ ನನ್ನ ಭಾಷಣ ಕೇಳಲು ಆಸಕ್ತರಾದುದು.

ಅನುಕೂಲ ಮಾಡಲು ತಿಳಿಯದವರ ಸಹಾಯ

ಅನುಕೂಲ ಮಾಡಲು ತಿಳಿಯದವರ ಸಹಾಯ

ಅಂಗವಿಕಲತೆಯಲ್ಲಿ ಕುಂಟುತನಕ್ಕಿರುವ ಅನಾನುಕೂಕತೆಯೇ ಬೇರೆ ರೀತಿಯದು. ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ನೋಡುಗರಲ್ಲಿ ಆತಂಕ ಹುಟ್ಟಿಸುತ್ತದೆ. ಅವರಲ್ಲಿ ಕೆಲವರು ನೆರವಿಗೆ ಧಾವಿಸುವುದು ಸಹಜ. ಆದರೆ ನಮಗೆ ಅನುಕೂಲವಾಗುವಂತೆ ನೆರವಾಗುವುದು ಹೇಗೆಂದು ತಿಳಿದಿರುವುದಿಲ್ಲ ಪಾಪ. ಅವರಿಗೆ ತೋಚಿದಂತೆ ಏರಲು, ಇಳಿಯಲು ನಮ್ಮನ್ನು ಗಟ್ಟಿಯಾಗಿ ಹಿಡಿದುಕೊಳ್ಳುತಾರೆ. ಇದರಿಂದ ನಮಗೆ ಚಲನೆ ಸಾಧ್ಯವಾಗುವುದಿಲ್ಲ.

ಹೆಣ್ಣುಮಗಳೊಂದಿಗಿನ ತಮಾಷೆ

ಹೆಣ್ಣುಮಗಳೊಂದಿಗಿನ ತಮಾಷೆ

ಆಂಧ್ರದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಒಂದು ಅಂತಸ್ತಿನ ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ನನಗಿಂತಲೂ ಒಂದು ಮೆಟ್ಟಿಲು ಕೆಳಗೆ ಇದ್ದ ಹೆಣ್ಣುಮಗಳೊಬ್ಬಳು ಸೈಡು ಬಾರುಗಳನ್ನು ಹಿಡಿದು ನಿ... ಧಾ...ನವಾಗಿ ಇಳಿಯುತ್ತಿದ್ದ ನನ್ನನ್ನು ಕಂಡು, ಸಹಾಯ ಕೇಳಲು ನಾನು ಸಂಕೋಚ ಪಡುತ್ತಿದ್ದೇನೆಂದು ಭಾವಿಸಿ, ಹತ್ತಿರ ಬಂದು ನನ್ನ ಕೈ ಹಿಡಿದುಕೊಂಡು ಇಳಿಯಿರಿ ಅಂದಳು.

ಕೊಂಚ ತಮಾಷೆ ಮಾಡೋಣ ಅನ್ನಿಸಿತು. ಮದುವೆ ಆಗಿದೆಯಾ ತಾಯಿ ಅಂದೆ. ಇಲ್ಲ. ಯಾಕೆ ಅಂದಳು. ಏನಿಲ್ಲ, ನೀನು ಹೀಗೆ ಹಿಡಿದುಕೊಂಡು, ನಾನು ಇಳಿದರೆ ನೀನು ಆಯ ತಪ್ಪಿ ಉರುಳಿ ಬೀಳುತ್ತಿ. ಹಲ್ಲುಗಿಲ್ಲು ಮುರಿದರೆ ನಿನಗೆ ಮದುವೆ ಆಗೊಲ್ಲ. ಆಗ ನನ್ನ ಬೈದುಕೊಳ್ಳುತ್ತಿ ಅಂದೆ. ಹುಡುಗಿ ಚೂಟಿ ಇದ್ದಳು. ನಕ್ಕಳು. ಹೀಗಮ್ಮ ಹೀಗೆ ಎಂದು ಹೇಳಿದೆ. ನೋಡಿ ಇದೆಲ್ಲ ಗೊತ್ತಾಗೊಲ್ಲ ಅಂದಳು ತೆಲುಗಿನಲ್ಲಿ. ಕುಂಟನ್ನ ಮದುವೆ ಮಾಡಿಕೊ. ಆಗೆಲ್ಲ ಗೊತ್ತಾಗುತ್ತೆ ಅಂದೆ. ಆಗೊಲ್ಲ ಅಂತ ಹೇಗೆ ಹೇಳೋಕಾಗುತ್ತೆ ಅಂದಳು.

ನನ್ನ ಕವಿತೆ ನಿಮ್ಮ ಕಾಲು

ನನ್ನ ಕವಿತೆ ನಿಮ್ಮ ಕಾಲು

ಕವಿಮಿತ್ರರೊಬ್ಬರು ತಮ್ಮ ಎರಡೇ ಸಾಲಿನ ಹನಿಗವಿತೆಯನ್ನು ಕೊಟ್ಟು, ಹೇಗಿದೆ ಹೇಳಿ ಅಂದರು. ಸಾಲುಗಳು ನನ್ನ ಕಾಲು ಇರುವ ಹಾಗೆ ಒಂದು ಉದ್ದ ಒಂದು ಗಿಡ್ಡ ಅಂದೆ. ಅಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು. ಕವಿಯೂ ‘ನನ್ನ ಕವಿತೆ ನಿಮ್ಮ ಕಾಲು' ಎಂದು ಚಮತ್ಕಾರ ಮಾಡಿ ನಕ್ಕರು.

ಲೆಕ್ಕದ ಪುಸ್ತಕ ಕೊಡದ ಅಂಗಡಿಯವ

ಲೆಕ್ಕದ ಪುಸ್ತಕ ಕೊಡದ ಅಂಗಡಿಯವ

ನಾನು ಗೌನಿಪಲ್ಲಿಯಲ್ಲಿದ್ದಾಗ ಅಂಗಡಿಯೊಂದರಲ್ಲಿ ಸಾಲದ ಖಾತೆ ಇಟ್ಟಿದ್ದೆ. ತಿಂಗಳಿಗೊಮ್ಮೆ ದುಡ್ಡು ಕೊಡುವಾಗ, ಎಲ್ಲಿ ಆ ಲೆಕ್ಕದ ಪುಸ್ತಕ ಕೊಡು ನೋಡೋಣ ಅಂದಾಗಲೆಲ್ಲ, ಬಿಡಿ ಸಾ ಅದನ್ನೇನು ನೋಡೋದು. ನಾನೇನು ಸುಳ್ಳು ಲೆಕ್ಕ ಬರೆದು ನಿಮಗೆ ಮೋಸ ಮಾಡೊಲ್ಲ ಅನ್ನುತ್ತಿದ್ದ. ಹಾಗಂತ ಅಲ್ಲ, ಸುಮ್ಮನೆ ನೋಡೋಣ ಅಂತ ಅಷ್ಟೆ ಅಂದರೂ ಕೊಡೋನಲ್ಲ. ಬೇರೆಯವರಿಗಾದರೆ ಕೇಳಿದ ಕೂಡಲೆ ಕೊಟ್ಟುಬಿಡುತ್ತಿದ್ದ.

ಗುಟ್ಟೇನೋ ಇದೆ ಅನಿಸುತ್ತಿತ್ತು

ಗುಟ್ಟೇನೋ ಇದೆ ಅನಿಸುತ್ತಿತ್ತು

ನನಗೆ ಇದರಲ್ಲೇನೋ ಗುಟ್ಟು ಇದೆ ಅನ್ನಿಸುತ್ತಿತ್ತು. ಒಂದು ಸಲ ಅಂಗಡಿಗೆ ಹೋದಾಗ ಅವನಿರಲಿಲ್ಲ. ಅವನ ಮಗನಿದ್ದ. ಲೆಕ್ಕದ ಪುಸ್ತಕ ಕೇಳಿದೆ. ಕೊಟ್ಟ. ಹುಡುಕಿದರೆ ನನ್ನ ಹೆಸರೇ ಕಾಣಲಿಲ್ಲ. ಏನೇನೋ ಅನುಮಾನ ಬಂತು. ಇರಲಿ ನೋಡೋಣ ಎಂದು ನಿಧಾನವಾಗಿ ಹಾಳೆ ಹಾಳೆ ನೋಡುತ್ತಾ ಹೋದೆ. ಒಂದು ಹಾಳೆಯಲ್ಲಿ ನನ್ನ ಸಾಲದ ಲೆಕ್ಕ ಕಂಡಿತು. ಅಲ್ಲದ್ದುದು ನನ್ನ ಹೆಸರಲ್ಲ. ನನ್ನ ಅನ್ವರ್ಥಕ ನಾಮ !

ಪುಸ್ತಕ ಮುಗಿಯುವವರೆಗೆ ಅದೇ ಹೆಸರಿರಲಿ

ಪುಸ್ತಕ ಮುಗಿಯುವವರೆಗೆ ಅದೇ ಹೆಸರಿರಲಿ

ಅವನಿಗೆ ಏಕೋ ನನ್ನ ಹೆಸರು ತಿಳಿದಿರಲಿಲ್ಲ. ಸಾಲ ಕೊಡುವಷ್ಟು ಪರಿಚಿತನಾದ ನನ್ನನು ಹೆಸರು ಕೇಳಲು ಸಂಕೋಚವಾಗಿ ಲೆಕ್ಕದ ಗುರ್ತಿಗಾಗಿ ‘ಕುಂಟ ಮೇಷ್ಟ್ರು' ಎಂದು ಬರೆದುಕೊಂಡಿದ್ದ. ನನಗೆ ನಗೆ ಬಂತು. ಆಮೇಲೆ ನಾನೇ ನನ್ನ ಹೆಸರು ಹೇಳಿದೆ. ತಪ್ಪಾಯ್ತು ಸಾ ಎಂದು ತಿದ್ದಲು ಹೋದ. ತಿದ್ದಬೇಡ ಹಾಗೇ ಇರಲಿ ಎಂದು ತಡೆದೆ. ಆ ಪುಸ್ತಕ ಮುಗಿಯುವವರೆಗೆ ನಾನು ‘ಕುಂಟ ಮೇಷ್ಟ್ರು' ಎಂದೇ ಆ ಪುಸ್ತಕದಲ್ಲಿದ್ದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Humorous Kannada article by Oneindia Kannada columnist Sa Raghunatha. He writes about himself and how people react to him.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ