• search

103 ವರ್ಷ ಬದುಕಿದ ಗಂಗಭಾರತ ಗಾರುಡಿಗ ಮುನೆಪ್ಪನ ಬಗ್ಗೆ ಹೇಳಲೊಂದಿಷ್ಟು

By ಸ ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಗಂಗಭಾರತದ ಕಥೆ ಜಾನಪದ- ಪೌರಾಣಿಕ ವಸ್ತುವಿನದು. ದಲಿತ ಕುಲ ಮೂಲದ ಕಥೆಯದು. ಕುಲದ ಹುಟ್ಟಿನಿಂದ ಪ್ರಾರಂಭವಾಗಿ ತ್ರಿಮೂರ್ತಿಗಳಿಗೂ ಮಾದಿಗ ಕುಲಕ್ಕೂ ಇರುವ ಸಂಬಂಧವನ್ನು ಕಥೆ ಸ್ಥಾಪಿಸುತ್ತದೆ. ಹಾಗಾಗಿ ಮಾದಿಗ ಕುಲಕ್ಕೆ ಇತರೆ ಜಾತಿಗಳೊಂದಿಗೆ ಇರುವ ಬಂಧುತ್ವವನ್ನು ಸಾರುತ್ತದೆ. ಈ ಕಥೆಯ ಪ್ರಕಾರ ಮಾದಿಗರು ಬ್ರಾಹ್ಮಣರಿಗೆ ಬೀಗರು. ಆ ಮೂಲದ ಸಂಬಂಧಿಗಳು. ಮಾದಿಗ ಮನೆಮಗಳು ಅರಂಜೋತಿ (ಅರುಂಧತಿ). ವಸಿಷ್ಠ ಇವಳಿಗೆ ವರ.

  ಮಾದಿಗರು ಕಾಮಧೇನುವನ್ನು ಕೊಲ್ಲುತ್ತಾರೆ. ಮಾಂಸವನ್ನು ಭಾಗ ಹಾಕುತ್ತಾರೆ. ಕುಲದ ಭಾಗದೊಂದಿಗೆ ವಿಷ್ಣು, ಬ್ರಹ್ಮ, ಶಿವ, ನಾರಾಯಣರಿಗೆ ಮತ್ತು ಅಲ್ಲಾಹ್ ನಿಗೆ ಭಾಗ ದೊರೆಯುತ್ತದೆ. ವಿಷ್ಣುವಿನ ಭಾಗವು ಅಕ್ಷತೆಯಾದರೆ, ಶಿವನ ಭಾಗವು ವಿಭೂತಿ, ನಾರಾಯಣನ ಭಾಗ ತೀರ್ಥ, ಬ್ರಹ್ಮನ ಭಾಗ ಬ್ರಹ್ಮ ಕಂಕಣ, ಅಲ್ಲಾಹ್ ನ ಭಾಗ ಬಿಸ್ಮಿಲ್ಲಾ ಆಗುತ್ತದೆ. ಧರ್ಮ ಬೇರೆಯಾದರು ಕುಲವೊಂದೆಂದು ಮುನೆಪ್ಪನು ಹಾಡುವ ಗಂಗಭಾರತ ಹೇಳುತ್ತದೆ.

  ಯಲವಳ್ಳಿಯ ಮುನೆಂಕಟಪ್ಪನ ಮಾತೂ ಹಾಡೇ, ಹಾಡೂ ಹಾಡೇ

  ಕಥೆ ಕುಲದ ಹಿರಿಮೆಯನ್ನು, ದೈವದ ಭಕ್ತಿಯನ್ನು ಹೇಳುವುದನ್ನೇ ಮಾಡದು. ಜಾಗೃತ ಅಸ್ಪೃಶ್ಯ ಪ್ರಜ್ಞೆ ಹಾಕುವ ಪ್ರಶ್ನೆಗಳು ಒಡಲಲ್ಲಿ ತುಂಬಿದ ನೋವುಗಳ ಪ್ರತಿಧ್ವನಿಯಾಗುತ್ತವೆ. ಜಾತಿ ಮತವಾದಿಗಳನ್ನು ಹೆಟ್ಟಿಹೆಟ್ಟಿ ಕೇಳುತ್ತವೆ.

  Folk artist Jonkini Muneppa life and Ganga Bharata

  'ಹಂದೀಯ ತಿನುತಾರೆ/ ಊರಲ್ಲಿ ಇರುತಾರೆ/ ಗೋವನ್ನ ತಿನುತೇವೆ/ ಊರಾಚೆ ಇರುತೇವೆ/ ಹಂದೇನು ತಿನುತಾದೆ/ ಗೋವೇನು ತಿನುತಾದೆ?' ಪ್ರಶ್ನೆಯ ಮುಂದಕ್ಕೆ ಶೋಷಣೆಯ ಚಿತ್ರ ತರುವುದು ಹೀಗೆ-

  'ಹಾಲು ನಿಮ್ಮದು, ಮೊಸರು ನಿಮ್ಮದು/ ಬೆಣ್ಣೆ ತುಪ್ಪಗಳೆಲ್ಲ ನಿಮ್ಮವು/ ಸಗಣಿ ಗಂಜಲವು ನಿಮ್ಮವು/ ಹಸು ಮಾತ್ರ ನಮ್ಮದು.' ಅದು ಕರೆವ ಹಸುವಲ್ಲ. ಜೀವಂತವಲ್ಲ. ಬದುಕು ಬಾಳಿಗೊದಗದ ಸತ್ತ ಹಸು ! ಒಂದರೆಡು ಹೊತ್ತಿಗೆ ಮಾಂಸ, ಚರ್ಮಕ್ಕೆ ಮಾತ್ರ. ಇದಕ್ಕೂ ಹಂಗು.

  ಗಂಗಭಾರತ ಕಥೆಯನ್ನು ಮುನೆಪ್ಪ ಎಂಬತ್ತು ವರ್ಷಗಳ ಕಾಲ ಹಾಡಿದ. ಅಳಿದ ನೆನಪನ್ನೇ ಬಗೆಬಗೆದು ನೆನಪಾದ ತುಣುಕುಗಳಿಗೆ ಮಾತಿನ ಕೊಂಡಿ ಬೆಸೆಯುತ್ತ ಕಥೆಗೊಂದು ರೂಪ ಕೊಡಲು ಹೆಣಗುತ್ತ ಮತ್ತೂ ಹತ್ತು ವರುಷಗಳ ಕಾಲ ಗಂಗಭಾರತದ ಆರಾಧನೆ ಮಾಡಿದ.

  ಸರಳ ಸಂಸಾರಿ ಸಂತನ 'ಸುಖ'ದ ಪಾಠಕ್ಕೆ ಶುಲ್ಕವಿಲ್ಲ, ವೆಚ್ಚವಿಲ್ಲ

  ಮುನೆಪ್ಪ ಜೋಂಕಿಣಿ ಹಿಡಿದಿದ್ದು, ಕಾಲಿಗೆ ಗೆಜ್ಜೆ ಕಟ್ಟಿದ್ದು ತನ್ನ ಆರನೇ ವಯಸ್ಸಿನಲ್ಲಿ. ಮನೆಯ ಆರಾಧ್ಯ ದೇವತೆ ಬೀರಂಗಿ ಎಲ್ಲಮ್ಮನ ಸನ್ನಿಧಿಯಲ್ಲಿ. ತಾತ ಪೆದ್ದಗಂಗನ್ನ ಗುರು. ತಂದೆ ಜೋಂಕಿಣಿ ಎಲ್ಲಪ್ಪ, ತಾಯಿ ವೆಂಕಟಮ್ಮ ಮಗನನ್ನು ಜೋಂಕಿಣಿ ಮುನೆಪ್ಪನನ್ನಾಗಿ ಬೆಳೆಸಿದರು, ಹರಸಿದರು.

  Folk artist Jonkini Muneppa life and Ganga Bharata

  ಕರೆಸುವ, ಹಾಡಿಸುವ ಆದರ ಇಳಿಮುಖವಾಗುತ್ತಿದ್ದ ಅ ದಿನಗಳಲ್ಲಿ ಮುನೆಪ್ಪ ಮುದಿತನದ ಕಣಿವೆಗಿಳಿಯುತ್ತಿದ್ದ. ಸಂಭಾವನೆಯ ಬಹುಪಾಲು ಧಾನ್ಯ ರೂಪದ್ದಾಗಿತ್ತು. ಇದು ಹೊಟ್ಟೆಗೆ. ಪುಡಿಕಾಸು ಬಟ್ಟೆ, ವೆಚ್ಚಕ್ಕೆ. ಕೂಡಿಟ್ಟದ್ದು 'ಜೋಕಿಣಿ ಮುನೆಪ್ಪ'ನೆಂಬ ಹೆಸರಿನಲ್ಲಿ ಬಡತನವನ್ನು.

  ಒಂದು ಮಳೆಗಾಲ. ಬೀರಂಗಿಯಲ್ಲಿ ಹಾಡಿ, ಅದಕ್ಕಾಗಿ ಸಿಕ್ಕಿದ ಕಾಳಿನ ಗಂಟು ಹೊತ್ತು ಬರುತ್ತಿದ್ದವನನ್ನು ಜೋರಾದ ಮಳೆ- ಗಾಳಿ ಅಟ್ಟಕಟ್ಟಿ ಹಾಕಿದ್ದ ಹುಲ್ಲಿನ ಮೆದೆ ಅಡಿಗೆ ರಕ್ಷಣೆಗೆ ಅಟ್ಟಿತ್ತು. ಅದರಡಿ ಕುಂತವನಿಗೆ ಕುಸಿದ ಮೆದೆ ಬೆನ್ನು ಮೂಳೆಗೆ ಪೆಟ್ಟು ಕೊಟ್ಟು ಬಾಗು ಬೆನ್ನಾಗಿಸಿತ್ತು. ಗೆಜ್ಜೆ ಕಾಲಿನಿಂದ ದೂರವಾಯಿತು. ಎಲ್ಲಮ್ಮನ ಕೃಪೆ ಹಾಡುವ ಕೊರಳನ್ನು, ಜೋಂಕಿಣಿ ಮೀಟುವ ಕೈಯನ್ನು ಉಳಿಸಿತ್ತು.

  ಮುನೆಪ್ಪನ ಊರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೈಕೊತ್ತೂರು. ಇದು ಆಂಧ್ರದ ಗಡಿಗೆ ತೀರಾ ಹತ್ತಿರಾದ ಪುಟ್ಟ ಹಳ್ಳಿ. ಮನೆಯೆಂಬೋ ಗುಡಿಸಲಲ್ಲಿ ಹುಟ್ಟಿ, ಅದೇ ಗುಡಿಸಲಲ್ಲಿ ತನ್ನ ಆರಾಧ್ಯ ದೈವ ಬೀರಂಗಿ ಎಲ್ಲಮ್ಮನ ಪಾದ ಸೇರಿದಾಗ ಮುನೆಪ್ಪನ ವಯಸ್ಸು ನೂರ ಮೂರು ದಾಟಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Folk artist Jonkini Muneppa lived for 103 years. He remembered with Ganga Bharata. One India columnist Sa Raghunatha writes about Ganga Bharata Muneppa who was basically from Srinivasapura taluk, Kolar district.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more