• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುದ್ಧಿಜೀವಿಗಳು ಮುಸ್ಲಿಂ ಉಗ್ರರನ್ನು ಏಕೆ ಖಂಡಿಸಲಿಲ್ಲ?

By ಅಂಕಣಕಾರ : ರವಿ ಬೆಳೆಗೆರೆ
|

Why intellectuals have not condemned Bangalore blasts?ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳಾದವು. ಒಬ್ಬ ಹೆಣ್ಣುಮಗಳು ತೀರಿಕೊಂಡು ಐವರು ಗಾಯಗೊಂಡರು. ಮರುದಿನವೇ ಅಹ್ಮದಾಬಾದಿನಲ್ಲಿ ಬಾಂಬು ಬೊಬ್ಬಿರಿದವು. ನೆತ್ತರು ಹೊಳೆಯಂತೆ ಹರಿಯಿತು. ಅದರ ಹಿಂದೆಯೇ ಸೂರತ್‌ನಲ್ಲಿ ಹದಿನೆಂಟು ಬಾಂಬು ಸಿಕ್ಕವು.

ಕರ್ನಾಟಕದ ಒಬ್ಬೇ ಒಬ್ಬ ಬುದ್ಧಿಜೀವಿ, ಒಬ್ಬೇ ಒಬ್ಬ ಲೇಖಕ, ಎಡಪಂಥೀಯ ವಿಧಾನಸೌಧದ ಮುಂದೋ, ಕಾರ್ಪೊರೇಷನ್ ಮುಂದೋ, ಕಲಾಕ್ಷೇತ್ರದ ಮುಂದೋ ಧರಣಿ ಕೂಡುತ್ತಾನಾ ಅಂತ ನೋಡಿದೆ. ಮುಸ್ಲಿಂ ಉಗ್ರಗಾಮಿಗಳನ್ನು ಖಂಡಿಸುತ್ತಾನಾ ಅಂತ ಪತ್ರಿಕೆಗಳನ್ನು ತಿರುವಿ ಹಾಕಿದೆ. ಯಾವ ದೊಡ್ಡ ಹೆಸರಿನ ಮಹಾಶಯನೂ ಖಂಯಕ್ ಕುಂಯಕ್ ಅನ್ನಲಿಲ್ಲ.

ಯಾಕೆ ಸ್ವಾಮೀ? ಇದೇ ಕೆಲಸವನ್ನು ಆರೆಸ್ಸೆಸ್ಸಿನವರೋ, ಭಜರಂಗದಳವರೋ ಒಂದು ಮುಸ್ಲಿಂ ಲೊಕ್ಯಾಲಿಟಿಯಲ್ಲಿ ಅಥವಾ ಅವರೇ ಹೆಚ್ಚಿಗಿರುವ ಬರ್ಮಾ ಬಜಾರಿನಂತಹ ಪ್ರದೇಶದಲ್ಲಿ ಮಾಡಿದ್ದಿದ್ದರೆ ನೀವು ಸುಮ್ಮಿಸುತ್ತಿದ್ದಿರಾ? ನಿಮ್ಮ ಸೆಕ್ಯುಲರಿಸಂ ಸುಮ್ಮನಿರುತ್ತಿತ್ತಾ? ಒಂದು ಮಸೀದಿಯ ಮುಂದೆ ಪಟಾಕಿ ಹಾರಿಸಿದರೆ, ಒಂದು ದತ್ತ ಪೀಠಕ್ಕೆ ಮೆರವಣಿಗೆ ಹೊರಟರೆ ಮನೆಯಲ್ಲಿ ಇದ್ದಬದ್ದವರನ್ನೆಲ್ಲ ಕರಕೊಂಡು ಬಂದು ದೇಶವೆಂಬ ದೇಶವೇ ಕೋಮುವಾದಿಗಳ ಪಾಲಾಗಿ ಹೋಯಿತು ಅಂಥ ಖಂಡಿಸುವ, ಭಾಷಣ ಮಾಡುವ, ಹೇಳಿಕೆ ನೀಡುವ, ಜೈಲಿಗೂ ಹೋಗುವ ನೀವು- ಸಿಮಿ, ಇಂಡಿಯನ್ನ ಮುಜಾಹಿದ್ದಿನ್‌ನಂತಹ ಸಂಘಟನೆ ಮಾಡಿದ ಈ ಪಾತಕದ ವಿರುದ್ಧ ಒಂದೇ ಒಂದು ಹೇಳಿಕೆ ನೀಡಲಿಲ್ಲವಲ್ಲ? "ಬಿಡ್ರೀ, ಇವೆಲ್ಲ ಆನೆ ಪಟಾಕಿಯಂಥ ಠುಸ್ ಬಾಂಬುಗಳು" ಅಂತ ನಿಮ್ಮಲ್ಲಿ ನೀವೇ ಮಾತಾಡಿಕೊಂಡು, ಇದಕ್ಕಿಂತ ಅರ್ಜೆಂಟಾಗಿ ಗಣಿ ಉಳಿಸಬೇಕು ಅಂತ ಕಾವಿ ಕಟ್ಟಿಕೊಂಡು ಸಾಣೇಹಳ್ಳಿ ಮಠಕ್ಕೆ ಉಂಬಲು ಹೊರಟುಬಿಟ್ಟಿರಲ್ಲಾ? ಬೆಂಗಳೂರೇನು ಬಿಟ್ಟಿಬಿದ್ದಿರುವ ಊರಾ?

ಇಲ್ಲಿ ಅಜಮಾಸು ಒಂದು ಕೋಟಿ ಜನ ಬದುಕುತ್ತಾರೆ. ಅವರಲ್ಲಿ ಲಕ್ಷಾಂತರ ಮುಸಲ್ಮಾನರೂ ಇದ್ದಾರೆ. ಇದು ಮುಂಬಯಿಯಂಥ ಅಗಾಧ ಸ್ವರೂಪದ ಕಮರ್ಷಿಯಲ್ ಕ್ಯಾಪಿಟಲ್ ಅಲ್ಲ. ಎಲ್ಲೋ ಒಂದೆರಡು ಬಾರಿ 'ಕ್ಯಾರೆ ಜಾರೆ' ಎಂಬಂತೆ ಹಿಂದೂಗಳು-ಮುಸಲ್ಮಾನರೂ ಕಿತ್ತಾಡಿಕೊಂಡಿರಬಹುದಾದರೂ ಈ ಮಹಾನಗರಿ ಅದೃಷ್ಟವಶಾತ್ ಮತೀಯ ದಂಗೆಗಳಾಗುವಂತಹ ಕಮ್ಯುನಲಿ ಸೆನ್ಸಿಟಿವ್ ನಗರವಲ್ಲ. ಇದು ನಿಜವಾದ ಅರ್ಥದಲ್ಲಿ ಕಾಸ್ಮೋಪಾಲಿಟನ್ ನಗರ. ಯಾರಬ್‌ನಗರದ ಪಕ್ಕದಲ್ಲೇ ಕರೇಸಂದ್ರವಿದೆ. ಶಿವಾಜಿನಗರದ ಆಚೆಯಲ್ಲೇ ಕಂಟೋನ್ಮೆಂಟಿದೆ. ಶ್ರೀರಾಂಪುರದಲ್ಲೊಂದು ಮಹಮ್ಮಡನ್ ಬ್ಲಾಕ್ ಇದೆ. ಬಸವನಗುಡಿಯ ಗರ್ಭದಲ್ಲೇ ಮುಸ್ಲಿಮರ ತವರ ಸಾಲಿದೆ. ಇದು ಒಬ್ಬರನ್ನೊಬ್ಬರು ಒಪ್ಪಿಕೊಂಡು, ಪ್ರೀತಿಯಿಂದ ಆದರಿಸುತ್ತ, ಆಶ್ರಯಿಸುತ್ತಾ, ಪ್ರೀತಿಯಿಂದ ಬಾಳುವಂಥ ಊರು. ಸ್ವಭಾವತಃ ಈ ಊರಿಗೆ ಕಮ್ಯೂನಲ್ ಮಾದರಿಯ ಗಾಬರಿಯಿಲ್ಲ.

ಆದರೆ ಮೊನ್ನಿನ ಸರಣಿ (ಪಟಾಕಿ!) ಬಾಂಬ್ ಸ್ಫೋಟ ಅದಿನ್ನೆಂಥ ಗೊಂದಲ ಉಂಟುಮಾಡಿತು. ನೀವು ಗಮನಿಸಿಲ್ಲವಾ? ಪಕ್ಕದ ರಾಮನಗರ, ಚನ್ನಪಟ್ಟಣದ ಮುಸ್ಲಿಂ ವೀಥಿಗಳಲ್ಲಿ ಇದೇ ಮಾದರಿಯ ಬಾಂಬು, ಸಾಮಗ್ರಿ ದೊರೆತವು. ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳಾಗುವುದಕ್ಕೆ ಮುಂಚೆ ಚನ್ನಪಟ್ಟಣದಲ್ಲಿ ಉಗ್ರರು ಒಂದು dry run ತರಹದ ಸ್ಫೋಟ ನಡೆಸಿದರು. ಇದು ಮುಸ್ಲಿಂ ಉಗ್ರರದೇ ಕೆಲಸ ಅಂತ ಪೊಲೀಸರೂ ಖಚಿತ ಪಡಿಸಿಕೊಂಡರು.

ಅಷ್ಟಾದ ಮೇಲೆ ಶುರುವಾದದ್ದು ಹುಸಿ ಬಾಂಬ್ ಬೆದರಿಕೆಗಳ ಸರಣಿ. ಬೆಂಗಲೂರಿನ ಶಾಲೆಗಳ ಗತಿ ಭಗವಂತನೇ ಬಲ್ಲ. ಪ್ರತಿ ಶಾಲೆಗೂ ನಾಯಿ ನುಗ್ಗಿದವು. ಮನೆಗಳಲ್ಲಿದ್ದ ಪೋಷಕರು(ಹಿಂದೂ-ಮುಸ್ಲಿಮರೆನ್ನದೆ) ಓಡೋಡಿ ಬಂದು ಮಕ್ಕಳನ್ನೆತ್ತಿಕೊಂಡು ಹೋದರು. ಇದ್ದ ಕೆಲಸವೆಲ್ಲ ಬಿಟ್ಟು ಪೊಲೀಸರಿಗೆ ಈ ಹುಸಿಕರೆಗಳ ತನಿಖೆ-ತಲಾಷು ಮಾಡುವುದೇ ಕೆಲಸವಾಯಿತು. ನಿತ್ಯ ಓಡಾಡುತ್ತಿದ್ದ ಜನನಿಬಿಡ ಪ್ರದೇಶಗಳಿಗೆ ಹೋಗಲಿಕ್ಕೂ ಹಿಂದುಮುಂದು ನೋಡುವಂತಾಯಿತು. ಒಂದು ಊರಿನ ನೆಮ್ಮದಿ ಕೆಡಲಿಕ್ಕೆ ಇನ್ನು ಏನಾಗಬೇಕು?

ನೆನಪಿರಲಿ, ದಶಕಗಳ ಹಿಂದೆ ಕಾಶ್ಮೀರದಲ್ಲಿ ಅನಾಹುತಗಳೆಲ್ಲ ಆರಂಭವಾದದ್ದೇ ಹೀಗೆ. ದಾಂಧಲೆ, ಸ್ಫೋಟ, ಅಗ್ನಿಸ್ಪರ್ಶ ಮಾಡಿದಾಗ- "ಅವರು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರರು ಕಣ್ರೀ... ಅವರನ್ನು ಭಾರತ ಸರ್ಕಾರ ದಮನ ಮಾಡ್ಬಿಟ್ಟಿದೆ. ಅದಕ್ಕೇ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ" ಎಂಬುದಾಗಿ ಇವೇ ಬುದ್ಧಿಜೀವಿಗಳು ಬೆಂಬಲಿಸಿ ಮಾತನಾಡಿದರು. ಕಾಶ್ಮೀರಿಗಳ ಸ್ವಾತಂತ್ರ್ಯ(?) ಹೋರಾಟಗಾರ ಹಿಂದೆ ಪಾಕಿಸ್ತಾನದ ಬಹುದೊಡ್ಡ ಅನಾಹುತಕಾರಿ ಡಿಸೈನ್ ಇದೆ ಎಂಬುದು ನಮ್ಮ ಸೆಕ್ಯುಲರ್ ಸ್ಪೆಷಲಿಸ್ಟುಗಳಿಗೆ ಅವತ್ತು ಅರ್ಥವೇ ಆಗಿರಲಿಲ್ಲ. ಇವತ್ತೂ ಆಗಿಲ್ಲ.

ಅಲ್ಲಿ ಮುಸ್ಲಿಂ ಉಗ್ರರ ಹಿಂಸಾಚಾರ ಆರಂಭವಾಗುತ್ತಿದ್ದಂತೆಯೇ, ಪತ್ರಿಕೆಗಳ ಸರ್ಕ್ಯುಲೇಷನ್ ಜ್ವರ ಏರಿದಂತೆ ಏರಿತು. ಇನ್ನೇನು ನಾವು ಸ್ವತಂತ್ರರಾಗಿಬಿಡುತ್ತೇವೆ ಅಂತ ಕಾಶ್ಮೀರಿಗಳೂ ಸಂಭ್ರಮಿಸಿದರು. ಇದ್ದ ಬದ್ದ ಹಿಂದೂ ಪಂಡಿತರನ್ನೆಲ್ಲ ಒಗ್ತಾ ಒದ್ದು ಓಡಿಸಿದರು. ಆಮೇಲೆ ಕಾಶ್ಮೀರದ ಗತಿ ಏನಾಯಿತು? ಹಿಂದೂ ಪಂಡಿತರ ಪರಿಸ್ಥಿತಿ ಏನಾಯಿತು? ಯಾವ ಬುದ್ಧಿಜೀವಿ ಸೆಕ್ಯುಲರಿಸ್ಟು ಅವರ ಬಗ್ಗೆ ಮಾತಾಡಿದ? ಅಂಥ ಸುಂದರ ಕಾಶ್ಮೀರ ಸ್ಮಶಾನವಾಗಿ ಹೋಯಿತು. ಇವತ್ತು ಅಲ್ಲಿನ ಜನ ಉಗ್ರವಾದವನ್ನು ಬೆಂಬಲಿಸಿದ್ದಕ್ಕಾಗಿ, ಸಹಿಸಿಕೊಂಡಿದ್ದಕ್ಕಾಗಿ 'ತೋಬಾ ತೋಬಾ' ಅನ್ನುತ್ತಿದ್ದಾರೆ.

ನಿಮಗೆ ಇನ್ನೂ ಒಂದು ವಿಷಯ ಗೊತ್ತಿರಲಿ. ಕಾಶ್ಮೀರಿಗಳು ಉಳಿದ ಭಾರತೀಯರಂತೆ ಸರ್ಕಾರಕ್ಕೆ ಒಂದು ನಯಾಪೈಸೆ ತೆರಿಗೆ ಕಟ್ಟುವುದಿಲ್ಲ. ಕಾಶ್ಮೀರದಲ್ಲಿ ಹೊರರಾಜ್ಯದವರೂ ಜಾಗ ಕೊಳ್ಳುವಂತಿಲ್ಲ. ಬಂಡವಾಳ ಹೂಡುವಂತಿಲ್ಲ. ಆದರೆ ಕಾಶ್ಮೀರಿಗಳಿಗೆ ನಮ್ಮ ಕಾಲೇಜುಗಳಲ್ಲಿ ಸೀಟು ಕೊಡುತ್ತೇವೆ. ಸಾವಿರಾರು ಕಾಶ್ಮೀರಿಗಳು ವಲಸೆ ಬಂದು ನಮ್ಮ ಅಕ್ಕಪಕ್ಕದಲ್ಲೇ ಅಂಗಡಿ ಮುಂಗಟ್ಟು ತೆರೆದು, ಎಲ್ಲ ಸವಲತ್ತೂ ಅನುಭವಿಸುತ್ತಿದ್ದಾರೆ. Go back to Kashmir ಅಂತ ಅವರ ವಿರುದ್ಧ ಯಾವನೂ ದನಿಯೆತ್ತುವುದಿಲ್ಲ. ಕಾಶ್ಮೀರಿಗಳೇ ಮುಖ್ಯವಾಗಿ ಉಗ್ರರನ್ನು ಕರೆತಂದು ಇಲ್ಲಿ ಆಶ್ರಯ ಕೊಡುತ್ತಿದ್ದಾರೆ. ಅವರೇ ಶಸ್ತ್ರಾಸ್ತ್ರ ಪೂರೈಸುತ್ತಿದ್ದಾರೆ. ಅವರಿಂದಲೇ ಬೆಂಗಳೂರಿನಂಥ ನೆಮ್ಮದಿಯ ತಾಣದಲ್ಲೂ ಸ್ಫೋಟಗಳು, ಹತ್ಯೆಗಳು ಆಗುತ್ತಿವೆ ಎಂಬುದು ಎಲ್ಲಿರಿಗೂ ಗೊತ್ತು. ಆದರೆ ಯಾವ ಬುದ್ಧಿಜೀವಿಯೂ ಅವರ ವಿರುದ್ಧ ಮಾತನಾಡುವುದಿಲ್ಲವಲ್ಲ?

ಇನ್ನು ನಮ್ಮ ರಾಜಕಾರಣಿಗಳು! ಇದರ ಬಗ್ಗೆ ಒಂದು ವಿಷಯ ಹೇಳುತ್ತೇನೆ ನೋಡಿ. ಮುಸ್ಲಿಮರ ಓಟು ಸಿಗುತ್ತದೆ ಎಂಬುದು ಖಾತರಿಯಾದರೆ ಇವರ ಪಂಚೆಯೊಳಕ್ಕೆ ತಂದು ಬಾಂಬು ಕಟ್ಟಿದರೂ ಇವರು ಉಸಿರೆತ್ತುವುದಿಲ್ಲ. ಇದೊಂದು ವಿಷಯದಲಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ ಎಲ್ಲ ಒಂದೇ.

ವ್ಯಕ್ತಿಗತವಾಗಿ ನಾನು ಆರೆಸ್ಸೆಸ್ಸಿಗನಲ್ಲ. ಬಿಜೆಪಿ ಮೊದಲೇ ಇಲ್ಲ. ಆದರೆ minimum ಭಾರತೀಯನೂ ಆಗಿರಬೇಡ ಅಂದರೆ, ಅದು ನನಗೆ ಸಹನೆಯಾಗುವುದಿಲ್ಲ. ಇವತುತ ಪಾಕಿಸ್ತಾನದಲ್ಲಿರುವುದಕ್ಕಿಂತ ಹೆಚ್ಚಿನ ಮುಸ್ಲಿಮರು ಭಾರತದಲ್ಲಿದ್ದಾರೆ. ಅವರೆಲ್ಲ ಭಾರತೀಯರೇ. ಅವರನ್ನು ಕೇವಲ ಭಾರತೀಯರಂತೆ ಕಾಣಿರಿ. ಊರ ನೆಮ್ಮದಿ ಕೆಡಿಸುವ ಮಾತು ಯಾರೇ ಆಡಿದರೂ ಅವನ ಜಾತಿ, ಧರ್ಮ ನೋಡದೆ ಹಣ ಹಾಕಿರಿ. ಬ್ರಾಹ್ಮಣ, ಲಿಂಗಾಯತ, ಕುರುಬ, ದಲಿತ-ಯಾರನ್ನೂ ನಮ್ಮ ದೇವೇಗೌಡ, ಯಡಿಯೂರಪ್ಪ, ಖರ್ಗೆ ಮುಂತಾದವರು "ಸೋದರರೇ" ಅಂತ ಉದ್ದೇಶಿಸಿ ಮಾತನಾಡುವುದಿಲ್ಲ. "ನನ್ನ ಕುರುಬ ಸೋದರರೇ, ಲಿಂಗಾಯತ ಸೋದರರೇ" ಅಂತ ಮಾತಾಡಿದ್ದು ಯಾವತ್ತಾದರೂ ಕೇಳಿದ್ದಿರಾ? ಆದರೆ ಚಿಕ್ಕದೊಂದು ಗಲಭೆಯಾದರೂ "ಮುಸ್ಲಿಂ ಸೋದರರೇ, ಮುಸ್ಲಿಂ ಬಾಂಧವರೇ" ಅಂತ ಹೊರಟು ಬಿಡುತ್ತೀರಲ್ಲಾ, ನಿಮಗೇನು ತಿಕ್ಕಲಾ?

ಇವತ್ತು ಬೆಂಗಳೂರು, ಭಯೋತ್ಪಾದನೆಯ ಮೊದಲ ರುಚಿ ನೋಡಿದೆ. "ಇದೆಲ್ಲ ಬಿಡಿ ಆನೆ ಪಟಾಕಿ" ಎಂಬಂತಹ ನಿಲುವಿಟ್ಟುಕೊಂಡು ನಮ್ಮ ಬುದ್ಧಿಜೀವಿಗಳು ಕಳ್ಳ ಸೆಕ್ಯುಲರಿಸಂನ ಹಿಂದೆ ತಲೆ ಮರೆಸಿಕೊಂಡರೆ, ಅವರೇ ಅದಕ್ಕೆ ಪಶ್ಚಾತ್ತಾಪ ಪಡಬೇಕಾದೀತು.

(ಸ್ನೇಹಸೇತು : ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more