ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮ ಉತ್ತಮವೋ? ಇಂಗ್ಲಿಷ್ ಮಾಧ್ಯಮವೋ?

By ಅಂಕಣಕಾರ : ರವಿ ಬೆಳೆಗೆರೆ
|
Google Oneindia Kannada News

Dr. U.R. Ananthmurthy
ಹೈಕೋರ್ಟ್‌ನ ತೀರ್ಪಿನಿಂದಾಗಿ ಕನ್ನಡಕ್ಕೆ ಮರಣದಂಡನೆಯಾಗಿದೆ. ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಬೋಧಿಸುವುದು ತಪ್ಪಿಲ್ಲ. ಅಪರಾಧವಲ್ಲ. ಯಾವ ಭಾಷೆಯಲ್ಲಿ ತಮ್ಮ ಮಕ್ಕಳನ್ನು ಓದಿಸಬೇಕು ಎಂದು ತೀರ್ಮಾನಿಸುವ ಸಂವಿಧಾನಬದ್ಧ ಹಕ್ಕು ಮಕ್ಕಳ ತಂದೆ ತಾಯಿಗಿದೆ. ಹಾಗಂತ ಹೈಕೋರ್ಟ್ ತೀರ್ಪು ನೀಡುವ ಮೂಲಕ ರಾಜ್ಯದ ಸಾವಿರಾರು ಅಕ್ರಮ ಕಂಗ್ಲಿಷ್ ಶಾಲೆಗಳಿಗೆ ಸಕ್ರಮವೆಂಬ ಜೀವದಾನ ಕೊಡಮಾಡಿದೆ. ಒಂದು ಕಡೆ ನಾರಾಯಣಗೌಡರಿಂದ ಹಿಡಿದು, ರಾಷ್ಟ್ರಕವಿ ಶಿವರುದ್ರಪ್ಪ ತನಕ, ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್ ತನಕ ಅಸಮಾಧಾನ, ಬೇಸರ ತಳಮಳ ಎಲ್ಲ ವ್ಯಕ್ತವಾಗಿದೆ. ದಿನ ಪತ್ರಿಕೆಗಳವರು ದುಂಬಾಲು ಬಿದ್ದು ಕನ್ನಡ ಸಾಹಿತಿಗಳನ್ನು ಸಂದರ್ಶಿಸುತ್ತಿದ್ದಾರೆ. ಕನ್ನಡ ಸಾಹಿತಿಗಳ ಪೈಕಿ ಬರಗೂರು ರಾಮಚಂದ್ರಪ್ಪನಂಥವರು ಎಲ್ಲ ಉದ್ವೇಗದ ನಡುವೆಯೂ 'ಕನ್ನಡವನ್ನು ಅನ್ನದ ವಿಷಯವನ್ನಾಗಿ ಮಾಡಿಕೊಳ್ಳದಿದ್ದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ' ಎಂದು ಪ್ರಜ್ಞಾವಂತಿಕೆಯ ಮಾತುಗಳನ್ನಾಡಿದ್ದಾರೆ.

ಇದೆಲ್ಲದರ ಮಧ್ಯೆ ನಾನು ಮಾತನಾಡುವುದೂ ಇದೆ. ಮಾತನಾಡಲೇ ಬೇಕಾಗಿದೆ ಮತ್ತು ಉಳಿದೆಲ್ಲರಿಗಿಂತ ನಾನು ಮಾತನಾಡುವುದು ಸೂಕ್ತ ಅಂತಲೂ ನಾನು ಭಾವಿಸಿದ್ದೇನೆ. ಭಾಷೆಯ ವಿಷಯಕ್ಕೆ ಬಂದರೆ ನಾನು ಅಪ್ಪಟ ಕನ್ನಡಿಗ. ನನ್ನ ತಾಯಿ ತೀರಿಕೊಳ್ಳುವುದರೊಂದಿಗೆ ನಮ್ಮ ಮನೆಯ ಭಾಷೆಯಾಗಿದ್ದ ತೆಲುಗು ತೀರಿಕೊಂಡಿತು. ಮನೆಯಲ್ಲಿ ನಾವೆಲ್ಲ ಕನ್ನಡವನ್ನೇ ಮಾತನಾಡುತ್ತೇವೆ. ಓದುತ್ತೇವೆ, ಬರೆಯುತ್ತೇವೆ. ನಾನು ಕನ್ನಡ ಸಾಹಿತಿ, ಕನ್ನಡ ಪತ್ರಿಕೋಧ್ಯಮಿ. ಆದರೆ ನಾನು ನಡೆಸುತ್ತಿರುವ 'ಪ್ರಾರ್ಥನಾ ಸ್ಕೂಲ್ 'ಇಂಗ್ಲೀಷ್ ಮೀಡಿಯಂನದು. ಇದು ಕಂಗ್ಲಿಷ್ ಶಾಲೆ ಕೂಡಾ ಇಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿಸುತ್ತೇವೆಂದು ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟು ಇಂಗ್ಲಿಷ್‌ನಲ್ಲಿ ಕದ್ದು ಪಾಠ ಮಾಡುವ ಕಳ್ಳ ಕಂಗ್ಲಿಷ್ ಶಾಲೆ ಕೂಡಾ ಅಲ್ಲ. ಇದು ಶುದ್ಧಾನುಶುದ್ಧ ಇಂಗ್ಲಿಷ್ ಮೀಡಿಯಂ ಸ್ಕೂಲ್.

ಇಂಥದೊಂದು ಶಾಲೆ ಆರಂಭಿಸುವ ಮುನ್ನ ನನ್ನ ದೃಷ್ಟಿಯಲ್ಲಿದ್ದುದು ಲಂಕೇಶ್ ಬರೆದಿರುವ ಒಂದು ಸಾಲು. 'ಈ ರಾಜ್ಯಕ್ಕೆ ಅವಶ್ಯಕವಿರುವುದು ಒಳ್ಳೆಯ ಇಂಗ್ಲಿಷ್ ಕಲಿಸುವ ಕನ್ನಡ ಶಾಲೆ ಮತ್ತು ಒಳ್ಳೆಯ ಕನ್ನಡ ಕಲಿಸಬಲ್ಲ ಇಂಗ್ಲಿಷ್ ಸ್ಕೂಲ್' ಹಾಗಂತ ಲಂಕೇಶ್ ಬರೆದಿದ್ದರು. ಎಲ್ಲ ಕನ್ನಡದ ಸಾಹಿತಿಗಳಿಂತೆಯೇ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಲ್ಲೇ ಓದಿಸಿದ್ದರು. ಒಬ್ಬಿಬ್ಬರ ಹೊರತಾಗಿ ನಮ್ಮೆಲ್ಲ ಸಾಹಿತಿಗಳೂ, ಪತ್ರಕರ್ತರು, ಸರ್ಕಾರಿ ಅಧಿಕಾರಿಗಳೂ, ಮಂತ್ರಿ ಮಾಗಧರೂ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗಳಲ್ಲೇ ಓದಿಸಿದ್ದಾರೆ, ಓದಿಸುತ್ತಿದ್ದಾರೆ, ಓದಿಸುತ್ತಾರೆ. ನನಗೆ ಆಶ್ಚರ್ಯವಾಗುವುದೆಂದರೆ ನಮ್ಮ ಎಲ್ಲ ದಿನ ಪತ್ರಿಕೆಗಳಲ್ಲಿಯೂ ಹೈಕೋರ್ಟ್‌ಗೆ ಸಂಬಂಧಿಸಿದಂತೆ ಸಾಹಿತಿಗಳನ್ನ, ನಿವೃತ್ತ ನ್ಯಾಯಮೂರ್ತಿಗಳನ್ನ, ಯೂನಿವರ್ಸಿಟಿ ಪ್ರೊಪೆಸರುಗಳನ್ನ ಸಂದರ್ಶಿಸುತ್ತವೆಯೇ ಹೊರತು, ಯಾವ ಪತ್ರಿಕೆಯವರು ಎಲೆಮೆಂಟರಿ ಶಾಲೆ ಶಿಕ್ಷಕರನ್ನು ಸಂದರ್ಶಿಸುತ್ತಿಲ್ಲ. ಕನ್ನಡ ಶಾಲೆ, ಇಂಗ್ಲಿಷ್ ಶಾಲೆ, ಉರ್ದು ಶಾಲೆ, ತಮಿಳು ಶಾಲೆಯನ್ನು ನಡೆಸುತ್ತಿರುವವರನ್ನ ಸಂದರ್ಶಿಸುತ್ತಿಲ್ಲ. ಎಂಜನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿರುವ ಶಾಮನೂರು ಶಿವಶಂಕರಪ್ಪ, ಪ್ರಬಾಕರ ಕೋರೆಯಂತಹ ಟೈಕೂನ್‌ಗಳನ್ನು ಸಂದರ್ಶಿಸುತ್ತಿಲ್ಲ. ನಿಜಕ್ಕೂ ಭಾಷಾ ಮಾಧ್ಯಮ, ಮಕ್ಕಳ ಭವಿಷ್ಯ, ನೌಕರಿ, ಅದರ ಅವಶ್ಯಕತೆ ಇತ್ಯಾದಿಗಳಿಗೆ ಸಂಬಂಧಪಟ್ಟವರು ಈ ಜನ. ಕೆಲ ಸಾಹಿತಿಗಳಲ್ಲ. ಸಾಹಿತ್ಯಲೋಕದ ಅತಿದೊಡ್ಡ ವ್ಯಕ್ತಿತ್ವ ಅನಿಸಿಕೊಂಡಿರುವ ಬೈರಪ್ಪ, ಅನಂತಮೂರ್ತಿ, ಶಿವರುದ್ರಪ್ಪ ಮುಂತಾದವರು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಇದೇ ಸರಿ, ಇದೇ ಅಂತಿಮ ಅಂತ ತೀರ್ಪು ಕೊಡಬಹುದೇ ಹೊರತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಲ್ಲ. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ disputeಗಳಿದ್ದಾಗ ಸಾಹಿತಿಗಳನ್ನ, ಚಿತ್ರನಟರನ್ನ, ಚಳವಳಿಗಾರರನ್ನ ಸಂದರ್ಶಿಸಿ ಅವರ ಅಭಿಪ್ರಾಯವೇ ಮಹಾಪ್ರಸಾದ ಎಂಬಂತೆ ಪ್ರಕಟಿಸಬಾರದು.

ನಿಜ ಹೇಳಬೇಕೆಂದರೆ, ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಯಾವ ಮಹಾ ಆಪತ್ತೂ ಬಂದಿಲ್ಲ. ಬೆಂಗಳೂರಿನ ಮಟ್ಟಿಗೆ, ಈ ನಗರದ ಕೆಲ ಭಾಗಗಳಲ್ಲಿ ಕನ್ನಡ ಗೊತ್ತಿಲ್ಲದವರು ಜನರಿದ್ದಾರೆ ಎಂಬುದು ನಿಜ. ಅದು ನಗರೀಕರಣದ ಪ್ರಬಾವವೇ ಹೊರತು ಕನ್ನಡಕ್ಕೆ ಒದಗಿದ ಆಪತ್ತಲ್ಲ. ಮೂದಲು ಖಾಸಗಿ ರೇಡಿಯೋ ಬಂದಾಗ ಎಲ್ಲವೂ ಪರಭಾಷಾಮಯವಾಗಿಬಿಡುತ್ತದೆ ಅಂದುಕೊಂಡಿದ್ದೇವು. ಹಾಗೇನಿಲ್ಲ, ಇವತ್ತು ಕನ್ನಡದ ಹಾಡುಗಳು ಕಿವಿಗೆ ಬೀಳುತ್ತವೆ ಎಂದರೆ ಅದಕ್ಕೆ ಎಫ್.ಎಂ.ಗಳೇ ಕಾರಣ ಎಂಬಂತಾಗಿದೆ. ಬೆಂಗಳೂರೂ ಸೇರಿದಂತೆ ಎಲ್ಲ ಕಡೆ ಕನ್ನಡ ಪತ್ರಿಕೆಗಳು ಸುರಳಿತವಾಗಿ ಮಾರಾಟವಾಗುತ್ತವೆ.ಮುಂಗಾರುಮಳೆ , ಚೆಲುವಿನ ಚಿತ್ತಾರದಂತಹ ಚಿತ್ರಗಳು ಜಯಭೇರಿ ಬಾರಿಸಿವೆ. ಬೈರಪ್ಪನವರ ಕಾದಂಬರಿಗಳ ಮಾರಾಟಕ್ಕೆ ಬರವಿಲ್ಲ. ಬಸ್ಸಿನಲ್ಲಿ ಕಂಡಕ್ಟರ್‌ಗಳು ಕನ್ನಡದಲ್ಲೇ ಮಾತನಾಡುತ್ತಾರೆ. ಪೊಲೀಸರು ಕನ್ನಡದಲ್ಲೇ ಬೈಯುತ್ತಾರೆ. ಈ ನಾಡಿಗೆ ಇಂಗ್ಲಿಷ್ ಮೀಡಿಯಂ ಶಾಲೆಗಳು ಕಾಲಿಟ್ಟು ದಶಕಗಳೇ ಕಳೆದಿವೆ. ಆದರೂ ಕನ್ನಡ ನಾಶವಾಗಿಲ್ಲ. ಅದು ಆಗುವುದೂ ಇಲ್ಲ. ಇವತ್ತು ಸರ್ಕಾರಿ ನೌಕರಿಗಳಲ್ಲಿ ಕನ್ನಡ ಮೀಡಿಯಂ ಕೋಟಾ ಅಂತ ಕೂಡಾ ಒಂದು ಮೀಸಲಾತಿ ಇದೆ. ಯಾರಿಗೂ ಕನ್ನಡವೆಂಬುದು ಬೇಡದ ಭಾಷೆಯಾಗಿಲ್ಲ. ಬೆಂಗಳೂರು ದಾಟಿ ನೆಲಮಂಗಲಕ್ಕೆ ಕಾಲಿಟ್ಟರೆ ಅಲ್ಲಿಗೆ ಕಿವಿಗೆ ಬೀಳುವುದು ಕೇವಲ ಕನ್ನಡ.

ಹಾಗಾದರೆ ಕನ್ನಡಕ್ಕೆ ಆಪತ್ತು ಬಂದಿರುವುದು ಯಾರಿಂದ? ಇಂಗ್ಲಿಷ್ ಮೀಡಿಯಂ ಶಾಲೆಗಳಿಂದಲಾ? ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ನಡೆಸುತ್ತಿರುವವರಿಂದ ಕನ್ನಡಕ್ಕೆ ಆಪತ್ತು ಬಂದಿದೆಯಾ? ಹಾಗಾದರೆ ಆ ಶಾಲೆಗಳಿಗೆ ಅಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆ ಕಳುಹಿಸುತ್ತಿರುವವರು ಯಾರು? ಅವರು ಕನ್ನಡಿಗರಲ್ವಾ? ಕನ್ನಡ ವಿರೋಧಿಗಳಾ? ಅವರಿಗೆ ಕನ್ನಡ ಬೇಡವಾ? ಅವರನ್ನೇ ಕೇಳಿ.

ಪ್ರಾರ್ಥನಾ ಸ್ಕೂಲ್‌ನ ಐದು ಸಾವಿರ ಮಕ್ಕಳ ಪೋಷಕರು ಹತ್ತು ಸಾವಿರದಷ್ಟಿದ್ದಾರೆ. ಎಲ್ಲರೂ ಶ್ರೀಮಂತರಲ್ಲ. ಇಲ್ಲಿ ಸಾಫ್ಟ್‌ವೇರ್ ಇಂಡಸ್ಟ್ರಿಯ ಶ್ರೀಮಂತ 'ಟೆಕೀ'ಗಳಿಂದ ಹಿಡಿದು ಅಟೋ ಡ್ರೈವರುಗಳ ಮಕ್ಕಳ ತನಕ ಎಲ್ಲರೂ ಓದುತ್ತಿದ್ದಾರೆ. ಅವರಿಗೆ ಪ್ರಾರ್ಥನಾ ಸ್ಕೂಲೇ ಬೇಕು. ಅದಕ್ಕೂಸ್ಕರ ಮನೆ ಬದಲಾಯಿಸಿ, ಊರುಗಳನ್ನು ಬದಲಾಯಿಸಿ ಪದ್ಮನಾಭನಗರಕ್ಕೆ ಬಂದು ನೆಲೆಸಿದವರಿದ್ದಾರೆ. ಈ ಹತ್ತು ಸಾವಿರ ಪೋಷಕರಲ್ಲಿ ಸುಮಾರು ಒಂಬತ್ತೂವರೆ ಸಾವಿರ ಪೋಷಕರು ಕನ್ನಡಿಗರು, ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಬರುವುದೇ ಇಲ್ಲ. ಆದರೂ ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಲಿ ಮತ್ತು ಪ್ರಾರ್ಥನಾದಲ್ಲೇ ಓದಲಿ ಅಂತ ಬಯಸುತ್ತಾರೆ. ಹೀಗೆ ಬಯಸಲು ಕಾರಣವೇನೆಂದರೆ, ಪ್ರಾರ್ಥನಾದಲ್ಲಿ ಡೋನೇಶನ್ ಇಲ್ಲ. ಅತ್ಯಂತ ರೀಸನಬಲ್ ಆದ ಫೀ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಉತ್ತಮವಾದ ಇಂಗ್ಲಿಷ್ ಮತ್ತು ಉತ್ತಮವಾದ ಕನ್ನಡ ಕಡ್ಡಾಯವಾಗಿ ಕಲಿಸಲಾಗುವುತ್ತದೆ. ಇದು ಪ್ರಾರ್ಥನಾದ ಹೆಗ್ಗಳಿಕೆಯಾದರೆ, ನಮ್ಮ ಮಗು ಇಂಗ್ಲಿಷ್ ಮೀಡಿಯಂನಲ್ಲೇ ಕಲಿಯಲಿ ಅಂತ ಪೋಷಕರು ಬಯಸುವುದು ಅವರ ಹಕ್ಕು ಮತ್ತು ಅನಿವಾರ್ಯತೆ.

ಏನನ್ನು ಕಲಿತರೆ ನನ್ನ ಮಗುವಿಗೆ ಒಳ್ಳೆಯ ಭವಿಷ್ಯವಿದೆ ಅಂತ ಯೋಚಿಸುವುದು ತಂದೆ ತಾಯಿಗಳ ಹಕ್ಕು ಮತ್ತು ಕರ್ತವ್ಯ. ನನ್ನ ಮಗು ಕನ್ನಡ ಮೀಡಿಯಂನಲ್ಲಿ ಕಲಿತರೆ ಅದಕ್ಕೆ ಸರ್ಕಾರಿ ನೌಕರಿ ಸಿಗಬಹುದು. ಆದರೆ ಸರ್ಕಾರಿ ನೌಕರಿಯಲ್ಲಿ ನಾನಾ ತರಹದ ಮೀಸಲಾತಿಗಳಿವೆ. ಅವೆಲ್ಲಾ ಕೋಟಾಗಳಿಗೆ ಹೋಗಿ ಜನರಲ್ ಮೆರಿಟ್ ಬರುವ ಹೊತ್ತಿಗೆ ಕನ್ನಡದ ಕೋಟಾಕ್ಕೆ ಎಷ್ಟು ಮಹಾ ನೌಕರಿಗಳು ಉಳಿದಾವು?

ಇನ್ನೂ ಖಾಸಗಿ ವಲಯಕ್ಕೆ ಹೋಗಿ ನೌಕರಿ ಕೇಳುವುದು ಅನಿವಾರ್ಯ. ಅಲ್ಲಿ ನೌಕರಿ ಕೇಳಬೇಕೆಂದರೆ ಮಗ ಎಂಜನಿಯಂರಿಂಗ್ ಓದಿರಬೇಕು. ಕನ್ನಡ ಮೀಡಿಯಂ ಇಂಗ್ಲಿಷ್ ಕಾಲೇಜುಗಳು ಎಷ್ಟಿವೆ. ನೀವು ಮಗುವಿಗೆ ಐದನೇ ತರಗತಿ ವರೆಗೆ ಮಾತ್ರ ಕಡ್ಡಾಯವಾಗಿ ಕನ್ನಡದಲ್ಲಿ ಕಲಿಸಿ ಎನ್ನುತ್ತೀರಿ. ಮಾತೃ ಭಾಷೆಯಲ್ಲಿ ಕಲಿಸಿದರೆ ಮಗು ಬೇಗ ಕಲಿಯುತ್ತದೆ ಎನ್ನುತ್ತೀರಿ. ಅದು ನಿಜವೂ ಹೌದು. ಆದರೆ ಐದನೇ ಕ್ಲಾಸು ಮುಗಿಯುವ ಹೊತ್ತಿಗೆ ಮಗುವಿಗೆ ಹತ್ತನೇ ವರ್ಷ ತುಂಬಿರುತ್ತದೆ. ಒಂದು ಮಗುವಿನ ವ್ಯಕ್ತಿತ್ವ, ಅಭ್ಯಾಸಗಳು, ಯೋಚನಾಕ್ರಮ, ಶಿಸ್ತು, ಯೋಚನಾ ಭಾಷೆ (thinking language) ಮುಂತಾದವೆಲ್ಲ ರೂಪುಗೊಳ್ಳುವುದೆಲ್ಲ ಅದರ ಏಳನೇ ವಯಸ್ಸಿನೊಳಗಾಗಿಯೇ. ಅಷ್ಟರೊಳಗಾಗಿ ಅದಕ್ಕೆ ನೀವು ಇಂಗ್ಲಿಷ್ ಮತ್ತು ಕನ್ನಡವನ್ನು ಕಲಿಸಿರಬೇಕು. ಎರಡನ್ನೂ ಸಮರ್ಥವಾಗಿ ಕಲಿಸಿರಬೇಕು. ಮನೆಯಲ್ಲಿ ಹೊರಗಡೆ ಮಗುವು ಕನ್ನಡವನ್ನೇ ಮಾತಾಡುತ್ತಿರುತ್ತದಾದ್ದರಿಂದ, ಶಾಲೆಯಲ್ಲಿ ಅದಕ್ಕೆ ಕನ್ನಡವನ್ನು ಒಂದು ಕಡ್ಡಾಯದ subject ಆಗಿ ಕಲಿಸಿದರೆ ಸಾಕು. ಆದರೆ ಪ್ರೀ ನರ್ಸರಿಯಿಂದಲೇ ಮಗುವಿಗೆ ಇಂಗ್ಲಿಷ್ ಕಲಿಸತೊಡಗಿದರೆ, ಎಸೆಸೆಲ್ಸಿಗೆ ಬರುವ ಹೊತ್ತಿಗೆ ಇಂಗ್ಲಿಷ್ ಗ್ರಹಿಕೆ ಮತ್ತು ಮಾತು ನಿರರ್ಗಳವಾಗುತ್ತದೆ.

ಹೆಚ್ಚಿನ ಪೋಷಕರು ಬಯಸುವುದೇ ಅದನ್ನ. ಅವರಿಗೆ ಕನ್ನಡ ನಾಶವಾಗುವುದು ಬೇಕಾಗಿಲ್ಲ. ಆದರೆ ತಮ್ಮ ಮಗುವಿಗೆ ಇಂಗ್ಲಿಷ್ ಬರುವುದು ಬೇಕು. ಎಷ್ಟೇ ಒಳ್ಳೆಯ ಸಿನಿಮಾ ಆಗಿದ್ದರೂ ಟೈಟಾನಿಕ್‌ನಂಥದು ಕರ್ನಾಟಕದ ಊರುರುಗಳಲ್ಲಿ ನೂರು ದಿನ ನಡೆಯಲಿಲ್ಲ. ನಡೆದದ್ದು ಕನ್ನಡದ 'ಬಂಗಾರದ ಮನುಷ್ಯ'ನೇ. ಜನಕ್ಕೆ ಏನು ಬೇಕೋ ಅದನ್ನು ಕೊಡಿ. ಆದರೆ ಎಷ್ಟು ಕೊಡಬೇಕು ಎಂಬುದನ್ನು ಪ್ರಾಜ್ಞರಿಗೆ ಬಿಡಿ. ಇಷ್ಟು ದೊಡ್ಡ ಪ್ರಜಾಪ್ರಭುತ್ವದಲ್ಲಿ ಅತ್ಯವಶ್ಯಕ ವಸ್ತುಗಳಾಗದ ಸೀಮೆ ಎಣ್ಣೆ, ಪೆಟ್ರೋಲ್ ಗಳ ಬೆಲೆ ಏರಿಸುವಾಗ 'ಹೀಗೆ ಏರಿಸಬಹುದೇ' ಅಂತ ಯಾರನ್ನೂ ಸರ್ಕಾರ ಒಂದೇ ಒಂದು ಮಾತನ್ನು ಕೇಳುವುದಿಲ್ಲ. ಅಂಥವರಲ್ಲಿ ಒಬ್ಬ ತಂದೆ ತನ್ನ ಮಗನನ್ನು ಯಾವ ಮೀಡಿಯಂನಲ್ಲಿ ಓದಿಸಬೇಕು ಅಂತ ರಕ್ಷಣಾ ವೇದಿಕೆಯ ನಾರಾಯಗೌಡರನ್ನ, ವಾಟಾಳ್ ನಾಗರಾಜರನ್ನ, ಚಂದ್ರಶೇಖರ್ ಪಾಟೀಲ್‌ರನ್ನ ಕೇಳಿ ಓದಿಸಬೇಕಾ?

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X