• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗೆರೆ ಕಾಲಂ: ಖುಷ್ವಂತಜ್ಜನ ಪೋಲಿ ಹೆಡ್ಡಿಂಗು

By Staff
|

Khusi muthlab Kushwanth Singh ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳಾದರೂ ಅಷ್ಟೆ. ಅವುಗಳ ಧ್ವನಿ ಹೀಗೇ ಇರಬೇಕೆಂದು ನಿರ್ಧರಿಸುತ್ತಿದ್ದವನು ಸಂಪಾದಕ; ಮಾಲೀಕನಲ್ಲ! ಖಾದ್ರಿ ಶಾಮಣ್ಣರಂಥವರು ಇವತ್ತು ಯಾವ ವಿಷಯದ ಬಗ್ಗೆ ಸಂಪಾದಕೀಯ ಬರೆಯುತ್ತಾರೋ ಅಂತ ಇಡೀ ನಾಡು ಕಾಯುತ್ತಿತ್ತು. ಲಂಕೇಶ್ ಬರೆದ ಸಂಪಾದಕೀಯಗಳು ನಮ್ಮಂಥವರ ಪಾಲಿಗೆ ರಸದೌತಣಗಳು. ಇದೆಲ್ಲವೂ 1980 ರಿಂದೀಚೆಗೆ ಬದಲಾಗತೊಡಗಿದವು. ಜಾಗತೀಕರಣವಾಯಿತು. ಮುಖ್ಯವಾಗಿ ಟೇವಿ ಬಂತು. ಇಪ್ಪತ್ನಾಲ್ಕು ಗಂಟೆ ಸುದ್ದಿ ತೋರಿಸುವ ಛಾನಲ್ ಗಳು ಬಂದವು ಇವತ್ತು ಅಲ್ಲೆಲ್ಲೋ ನಡೆದುದನ್ನು ಕಣ್ಣಾರೆ ನೋಡಿದ ಮೇಲೆ ಮತ್ತೆ ಅದರ ವರದಿಯನ್ನು ನಾಳೆ ಓದುವರ್ಯಾರು?

ರವಿಬೆಳಗೆರೆ

'ದಂಧೆಯ ದಿನಗಳು' ಪುಸ್ತಕ ಬರೆದು ಮುಗಿಸುವ ತನಕ ದಿನಕ್ಕೆ ಒಂದೇ ಒಂದು ವೃತ್ತಪತ್ರಿಕೆಯ ಹೊರತು ಬೇರೇನನ್ನೂ ಓದಬಾರದು ಅಂತ ತೀರ್ಮಾನಿಸಿರುವುದರಿಂದ ಟೇಬಲ್ಲಿನ ಮೇಲೆ ಅನೇಕ ಮ್ಯಾಗಝೀನುಗಳು ಹಾಗೇ ಬಿದ್ದಿದ್ದವು. ಸಾಮಾನ್ಯವಾಗಿ ಅವುಗಳನ್ನು ರಾತ್ರಿಗೆ ಓದಲು ಇಟ್ಟುಕೊಂಡಿರುತ್ತಿದ್ದೆ.ಪುಸ್ತಕ ಬರೆಯಲು ಕುಳಿತವನಿಗೆ ರಾತ್ರಿ ಯಾವುದೋ ಹಗಲ್ಯಾವುದೋ ತಿಳಿಯದಂಥ ಸ್ಥಿತಿ. ಅಂಥದರಲ್ಲಿ ಇವತ್ತು ಬೆಳಗ್ಗೆ ಗೆಳತಿಯೊಬ್ಬಳು ಫೋ ನು ಮಾಡಿ" Outlook ನಲ್ಲಿ ನಿಮ್ಮ ಗುರು ಖುಷ್ವಂತ್ ಸಿಂಗ್ ಬರೆದಿರುವುದನ್ನು ಓದಿದೆಯಾ? ತೊಂಬತ್ತೈದು ವರ್ಷ ಅಂತೀಯ .ಹೆಂಗೆ ಪೋಲಿ ಪೋಲಿಯಾಗಿ ಬರೀತಾರಪ್ಪ. ಆದರೆ ಈ ಸಲದ ಬರವಣಿಗೆ ಚೆನ್ನಾಗಿದೆ.ಹೆಡ್ಡಿಂಗು ಮಾತ್ರ ಅಶ್ಲೀಲವಾಗಿದೆ" ಅಂದಳು. Out look ತೆರೆದು ನೋಡಿದೆ. ಅಜ್ಜಪ್ಪ ಏನು ಬರೆದಿದೆಯೋ ಅಂತ. ಹೆಡ್ಡಿಂಗು ನಿಚ್ಚಳವಾಗಿತ್ತು: xxxx all editors!

ಲೇಖನದಲ್ಲಿ ಖುಷ್ವಂತ್ ತುಂಬ ಹೊಸದೇನನ್ನೂ ಹೇಳಿಲ್ಲ. ಆದರೆ ತೀರ ಇತ್ತೀಚೆಗೆ Asian Age ಪತ್ರಿಕೆಯ ಮಾಲೀಕರು ಅದರಸ್ಥಾಪಕ ಸಂಪಾದಕರಾದ ಎಂ.ಜೆ. ಅಕ್ಬರ್ ಅವರನ್ನು ಹೇಳದೆ ಕೇಳದೆ ತೆಗೆದು ಹಾಕಿದುದರ ಬಗ್ಗೆ ಬರೆಯುತ್ತ, ಇವತ್ತಿನ ಪತ್ರಿಕೋದ್ಯಮದಲ್ಲಿ 'ಸಂಪಾದಕ'ನೆಂಬ ಪ್ರಾಣಿ ಎಷ್ಟು ಅಪ್ರಸ್ತುತನಾಗಿದ್ದಾನೆ ಎಂಬುದರ ಕುರಿತು ಚಿಂತಿಸಿದ್ದಾರೆ.

ಒಂದು ಕಾಲವಿತ್ತು. ಪತ್ರಿಕೆಯ ಹೆಸರು ಹೇಳಿದ ಕೂಡಲೆ ಅದರ ಸಂಪಾದಕನ ವ್ಯಕ್ತಿತ್ವ ಕಣ್ಣೆದುರಿಗೆ ಬರುತ್ತಿತ್ತು. ಪತ್ರಿಕಾ ಕಚೇರಿಯಲ್ಲಿ ಸಂಪಾದಕನ ಮಾತೇ ಅಂತಿಮ. ಇಂಗ್ಲಿಷ್ ಪತ್ರಿಕೋದ್ಯಮವನ್ನು ಅರ್ಧಶತಮಾನಕ್ಕಿಂತಲೂ ಹೆಚ್ಚು ಕಾಲ ಫ್ರಾಂಕ್ ಮೊರೇಸ್, ಚಲಪತಿರಾವ್, ಕಸ್ತೂರಿ ರಂಗ ಅಯ್ಯಂಗಾರ್, ಪೋತನ್ ಜೋಸೆಫ್, ಪ್ರೇಮ್ ಭಾಟಿಯಾರಂಥವರು ಆಳಿದರು. ಕನ್ನಡದಲ್ಲೂ ಖಾದ್ರ್ರಿ ಶಾಮಣ್ಣ, ಕೆ.ಶಾಮರಾವ್, ಟೀಎಸ್ಸಾರ್ ರಂಥವರ ಹೆಸರುಗಳಿದ್ದವು. ಮೊಟ್ಟಮೊದಲ ಬಾರಿಗೆ ಖಾದ್ರಿ ಶಾಮಣ್ಣ ನವರನು ಭೇಟಿಯಾಗಲು ಹೋದಾಗ ಅಕ್ಷರಶಃ ನನ್ನ ಕಾಲು ನಡಗುತ್ತಿದ್ದವು. ಅವತ್ತಿಗೆ 'ಕನ್ನಡ ಪ್ರಭ'ಕ್ಕೊಬ ಮಾಲೀಕರು ಅಂತ ಇದ್ದಾರೆ ಎಂಬುದೇ ನಮಗೆ ಗೊತ್ತಿರಲಿಲ್ಲ. ಶಾಮರಾಯರಂಥವರನ್ನೂ one fine day ಕತ್ತು ಹಿಡಿದು ಆಡಳಿತ ಮಂಡಲಿ ಆಚೆಗೆ ನೂಕಬಹುದು ಎಂದು ಕನಸುಮನಸಿನಲ್ಲೂ ಆಂದುಕೊಂಡಿರಲಿಲ್ಲ. ಅವರ ವ್ಯಕ್ತಿತ್ವಗಳೇ ಆಯಾ ಪತ್ರಿಕೆಗಳನ್ನು ಆವರಿಸಿಕೊಂಡಿರುತ್ತಿದ್ದವು. ಜಾಹೀರಾತು ವಿಭಾಗದವರು ಸಂಪಾದಕರಿದ್ದಲ್ಲಿಗೇ ಬಂದು ದಮ್ಮಯ್ಯ ಗುಡ್ಡೆ ಹಾಕಿ, ಜಾಹೀರಾತಿಗೊಂದಿಷ್ಟು ಜಾಗ ಕೊಡಿ ಅಂತ ಅಂಗಲಾಚುತ್ತಿದ್ದರು. ಸಂಪಾದಕರಿ ಅದಕ್ಕೆ ಒಪ್ಪಿದರೆ ಉಂಟು ಇಲ್ಲದಿದ್ದರೆ ಇಲ್ಲ!

'ಪತ್ರಿಕೆ'ಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳಾದರೂ ಅಷ್ಟೆ. ಅವುಗಳ ಧ್ವನಿ ಹೀಗೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳಾದರೂ ಅಷ್ಟೆ. ಅವುಗಳ ಧ್ವನಿ ಹೀಗೇ ಇರಬೇಕೆಂದು ನಿರ್ಧರಿಸುತ್ತಿದ್ದವನು ಸಂಪಾದಕ; ಮಾಲೀಕನಲ್ಲ! ಶಾಮಣ್ಣರಂಥವರು ಇವತ್ತು ಯಾವ ವಿಷಯದ ಬಗ್ಗೆ ಸಂಪಾದಕೀಯ ಬರೆಯುತ್ತಾರೋ -ಅಂತ ಇಡೀ ನಾಡು ಕಾಯುತ್ತಿತ್ತು. ಲಂಕೇಶ್ ಬರೆದ ಸಂಪಾದಕೀಯಗಳು ನಮ್ಮಂಥವರ ಪಾಲಿಗೆ ರಸದೌತಣಗಳು. ಇದೆಲ್ಲವೂ 1980 ರಿಂದೀಚೆಗೆ ಬದಲಾಗತೊಡಗಿದವು. ಜಾಗತೀಕರಣವಾಯಿತು. ಮುಖ್ಯವಾಗಿ ಟೇವಿ ಬಂತು. ಇಪ್ಪತ್ನಾಲ್ಕು ಗಂಟೆ ಸುದ್ದಿ ತೋರಿಸುವ ಛಾನಲ್ ಗಳು ಬಂದವು ಇವತ್ತು ಅಲ್ಲೆಲ್ಲೋ ನಡೆದುದನ್ನು ಕಣ್ಣಾರೆ ನೋಡಿದ ಮೇಲೆ ಮತ್ತೆ ಅದರ ವರದಿಯನ್ನು ನಾಳೆ ಓದುವರ್ಯಾರು? ಯಾವಾಗ ಜನ ಟೀವಿಗಳ ಕಡೆಗೆ ತಿರುಗಿದರೋ, ನಮ್ಮ ದಿನಪತ್ರಿಕೆಗಳು ಕರಡೀ ಮಜಲು ಕುಣಿಯಲಾರಂಭಿಸಿದವು.

ಅವತ್ತಿನ ತನಕ ಒಂದು ಪತ್ರಿಕೆಯನ್ನು ಅದರ ಸಂಪಾದಕನ ವ್ಯಕ್ತಿತ್ವ ಆಳುತ್ತಿತ್ತು. ಆದರೆ TVಬಂದ ಮೇಲೆ ಸಂಪಾದಕರ ಮಾತು ಹಾಗಿರಲಿ, ಪತ್ರಿಕೆಗಳೇ ವ್ಯಕ್ತಿತ್ವ ಇಲ್ಲದಂತಾಯಿತು. ಸಂಪಾದಕರು ನೇಪಥ್ಯಕ್ಕೆ ಸರಿದರು. ಅವರಿಲ್ಲದೇನೇ ಅವರ ಹೆಸರು ನಮೂದಿಸದೇನೇ ಪತ್ರಿಕೆ ಹೊರತರಬಹುದು ಎಂಬುದು ಮಾಲೀಕರಿಗೆ ಮನದಟ್ಟಾಯಿತು.

ಜನಕ್ಕೂ ಸಂಪಾದಕರ ಹೆಸರುಗಳು ಮರೆವಾಗತೊಡಗಿದವು. ಈಗ ನೀವೇ ಛಟ್ಟನೆ ನೆನಪು ಮಾಡಿಕೊಂಡು 'ಉದಯವಾಣಿ' ಸಂಪಾದಕರ ಹೆಸರು ಹೇಳಿ ನೋಡೋಣ? 'ಸಂಯುಕ್ತಕರ್ನಾಟಕ'?, 'ಪ್ರಜಾವಾಣಿ'? ಉಹುಂ, ನೆನಪಾಗುವುದಿಲ್ಲ.

ಹಾಗೆ ನೋಡಿದರೆ ಕನ್ನಡ ಪತ್ರಿಕೆಗಳೇ ಮೇಲು. ಇಂಗ್ಲಿಷಿನಲ್ಲಿ ಸಂಪಾದಕರು ಪೂರ್ತಿ ಮುಖಹೀನರಾಗಿ ಹೋಗಿದ್ದಾರೆ. Film, Fashion, Food -ಇಂಥವುಗಳ ಬಗ್ಗೆ ಬರೆದರೆ ದಿನಪತ್ರಿಕೆ ಖರ್ಚಾಗುತ್ತದೆ. ಮೂರು 'F' ಗಳಿಂದ ಕೆಲಸ ನಡೀತದೆ ಅಂತಾದ ಮೇಲೆ ಅವನ್ಯಾಕೆ ಬೇಕು ಸಂಪಾದಕ? xxxx the editor ಅಂದಿತು ಮಾಲೀಕ ವರ್ಗ. ನಿಜವಾದ ಬುದ್ಧಿವಂತರು, ಪ್ರಜ್ಞಾವಂತರು, ಕಸಬು ಗೊತ್ತಿರುವವರೂ ಆದ ಅನೇಕೆ ಪತ್ರಿಕೋದ್ಯಮಿಗಳು ಮೂಲೆಗೆ ಬಿದ್ದರು. ಕೆಲಸಕ್ಕೆ ಬಾರದ ಮೀಡಿಯೇಟರ್ ಪೆರೈಟಿಯ ಜನ ಸಂಪಾದಕರ ಕುರ್ಚಿಗೆ ಬಂದರು. ಇವತ್ತಿಗೆ ಟೈಮ್ಸ್ ಆಫ್ ಇಂಡಿಯಾ ಥರದ ಪತ್ರಿಕೆಯನ್ನು ಬಿಚ್ಚಿ ಓದುವುದಕ್ಕೂ ಮನಸಾಗುವುದಿಲ್ಲ.

ಖುಷ್ವಂತ್ ಸಿಂಗ್ ಅದೇ ಹಳೆಯ ತಲೆಮಾರಿನ ಪ್ರತಿಭಾವಂತರನ್ನು ನೆನಪಿಸಿಕೊಂಡು ಬರೆಯುತ್ತಾರೆ. ಕೇವಲ 60 ಸಾವಿರದಷ್ಟು ಪ್ರಸಾರ ಸಂಖ್ಯೆಯಿದ್ದ ಇಲ್ಲಸ್ಟ್ರೇಟೆಡ್ ವೀಕ್ಲಿಯನ್ನು ತಾವು ಹೇಗೆ ನಾಲ್ಕು ಲಕ್ಷ ಪ್ರತಿಗಳಿಗೆ ಕೊಂಡೊಯ್ದೆ ಅಂತ ನೆನಪಿಸಿಕೊಳ್ಳುತ್ತಾರೆ. ಅಷ್ಟೆಲ್ಲ ಪ್ರಸಾರ ಸಂಖ್ಯೆಬೆಳಸಿ, ಪತ್ರಿಕೆಯನ್ನು ಕಟ್ಟಿ -ರೂಪಿಸಿ ಕಡೆಗೊಂದು ದಿನ ಆಫೀಸಿಗೆ ಹೋದರೆ 'ನಿಮ್ಮ ನ್ನು ನೌಕರಿಯಿಂದ ತೆಗೆಯಲಾಗಿದೆ. ನೀವು ಕೂಡಲೇ ಹೊರಡತಕ್ಕದ್ದು ' ಅಂತ ಒಂದು ಪತ್ರವನ್ನು ಕೈಗಿಡುತ್ತದೆ ಮ್ಯಾನೇಜ್ ಮೆಂಟು. ಕಣ್ತುಂಬಿ ಬರುತ್ತದೆ. ಖುಷ್ವಂತ್ ಗೆ.ಕೊನೆಯ ದೊಂದು ಸಂಪಾದಕೀಯ ಬರೆದು ತಮ ಛತ್ತರಿ ಎತ್ತಿಕೊಂಡು ಮನೆಗೆ ನಡೆಯುತ್ತಾರೆ. ಅವರು ಬರೆದಿಟ್ಟ ಸಂಪಾದಕೀಯ ಪ್ರಕಟ ಕೂಡ ಆಗುವುದಿಲ್ಲ. ಅಲ್ಲಿಗೇ 'ಟೈಮ್ಸ್ ಆಫ್ ಇಂಡಿಯಾ'ದವರ ದ್ವೇಷ ತೀರುವುದಿಲ್ಲ. 1978 ರಿಂದ ಇವತ್ತಿನ ಈ ದಿನದ ತನಕ ಖುಷ್ವಂತ್ ಭಾಗವಹಿಸಿದ ಯಾವ ಸಮಾರಂಭದ್ದೂ ಸುದ್ದಿ ಫೋಟೋ ಪ್ರಕಟವಾಗುವುದಿಲ್ಲ.ಅದರಲ್ಲಿ ದುಡ್ಡಿದ್ದವರ ಹಗೆಯ ಮುಂದೆ ಖುಷ್ವಂತ್ ಆದರೇನು, ಯಾರದರೇನು?

ಈಗ ಅದೇ ಪರಿಸ್ಥಿತಿ ಎಂ.ಜೆ. ಅಕ್ಬರ್ ಗೆ ಆಗಿದೆ. ಅವರೇ ಸ್ಥಾಪಿಸಿ, ಕಟ್ಟಿ ಬೆಳೆಸಿದ Asian Age ನಿಂದ ಅವರನ್ನು ತೆಗೆದು ಹಾಕಲಾಗಿದೆ. ಸಕ್ರಿಯ ರಾಜಕಾರಣಿಯಾಗಿ ಅಕ್ಬರ್ ಏನೇ ಇರಲಿ, ಹೇಗೆ ಇರಲಿ: ಲೇಖಕರಾಗಿ ,ಪತ್ರಕರ್ತರಾಗಿ ಅವರದೇ ತಮ್ಮದೇ ಆದ ವ್ಯಕ್ತಿತ್ವವಿದೆ. ಆದರೆ ದುಡ್ಡಿನ ದೊರೆಗಳಿಗೆ ಅವೆಲ್ಲ ಬೇಕಿಲ್ಲ.

ಕನ್ನಡ ಪತ್ರಿಕೋದ್ಯಮದಲ್ಲೂ ಇಂಥವು ಸಾಕಷ್ಟಾಗಿದೆ. ಇದೇ ಶಾಮರಾಯರು, "ಸರ್, ಖಾದ್ರಿ ಶಾಮಣ್ಣನೋರು ತೀರಿಕೊಂಡರಂತೆ" ಅಂತ ಹೇಳಿದಾಗ, ಹೋದನೇನು? ಐದನೇ ಪುಟದಲ್ಲಿ ಸಣ್ಣದೊಂದು ಸುದ್ದಿ ಹಾಕಿ ಮುಗಿಸು!"ಅಂತ ಅಪ್ಪಣೆ ಕೊಟ್ಟಿದ್ದರು. ಒಂದು ಕಾಲಕ್ಕೆ 'ಸಂಯುಕ್ತ ಕರ್ನಾಟಕ'ದ ವ್ಯವಸ್ಥಾಪಕ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ತಮ್ಮ ಮಾತು ನಡೆಯುತ್ತಿದ್ದ ಕಾಲದಲ್ಲಿ ಅದೇ ಶಾಮರಾಯರನ್ನು, ಜನಿವಾರ ಹರಿದು ಅದಕ್ಕಿದ್ದ ಅಲ್ಮೇರಾದ ಬೀಗದ ಕೈಕಿತ್ತಿಕೊಂಡು ಕತ್ತು ಹಿಡಿದು ಹೊರಕ್ಕೆ ನೂಕಿಸಿದ್ದರು. ಆಮೇಲೆ ಹೆಡೆ ತುಳಿಸಿಕೊಂಡಹಾವಿನಂತೆ ಛಲಕ್ಕೆ ಬಿದ್ದ ಶಾಮರಾಯರು ಹನ್ನೆರಡು ವರ್ಷನಾನಾ ಕೋರ್ಟುಗಳಲ್ಲಿ ಬಡಿದಾಡಿ ಮತ್ತದೇ 'ಸಂಯುಕ್ತ ಕರ್ನಾಟಕ' ದ ಮುಖ್ಯಸ್ಥರಾಗಿ ಬಂದು ಕುಳಿತು ಅನೇಕರ ಜನಿವಾರ ಹರಿಸಿ, ಹೊರದಬ್ಬಿಸಿದರು. ಆ ಮಾತು ಬೇರೆ.

ಆದರೆ ಆವತ್ತಿನ ಪತ್ರಕರ್ತ ಎಂಥ ಆಡಳಿತ ಮಂಡಳಿಯೊಂದಿಗೂ ಜಗಳಕ್ಕೆ ಬೀಳಬಲ್ಲವನಾಗಿದ್ದ. ತನ್ನ ಹಕ್ಕು ಸಾಧಿಸುತ್ತಿದ್ದ. ಕ್ರಮೇಣ ಆ ತಲೆಮಾರು ನಶಿಸುತ್ತಿದೆ. ವೈಕುಂಠರಾಜು, ಲಂಕೇಶ್ ನಂತರದ ದಿನಗಳಲ್ಲಿ ನಾನು ಮ್ಯಾನೇಜುಮೆಂಟುಗಳೊಂದಿಗೆ ಕಿತ್ತಾಡಿಕೊಂಡು ನಮ್ಮವೇ ಸ್ವಂತ ಪತ್ರಿಕೆಗಳನ್ನು ಕಟ್ಟಿಕೊಂಡೆವು. ಪ್ರಕಾಶನ ಸಂಸ್ಥೆಗಳನ್ನು ಮಾಡಿಕೊಂಡೆವು. ಇಲ್ಲಿ ಮಾಲೀಕರ ಹಾವಳಿಯಿಲ್ಲ. ಜಾಹೀರಾತುವಿಭಾಗದವರೊಂದಿಗೆ ಜಗಳವಿಲ್ಲ. ಆದರೆ ಇವೆಲ್ಲವೂ ನಾವು ಬದುಕಿರುವ ತನಕ, ನಮ್ಮ ಬೆನ್ನು ಮೂಳೆ ನೆಟ್ಟಗಿರುವ ತನಕ, ನಮ್ಮ ಸಹನೆ ಗಟ್ಟಿಯಾಗಿರುವ ತನಕ ನಡೆಯಬಲ್ಲಂಥವು. ಆ ಮೇಲಿನ ಮಾತು ಯಾಂವ ಬಲ್ಲ? ಹೀಗೆ ಸ್ವತಂತ್ರರಾಗಿ ಇದ್ದೇವೆಂಬುದು ನಿಜವಾದರೂ, ಈ ಸ್ವಾತಂತ್ರ್ಯದ್ದೇನು ಕಡಿಮೆ ಹೋರಾಟವೇ? ಇದಕ್ಕೋಸ್ಕರ ಕಳೆದುಕೊಂಡದ್ದೇನು ಅಲ್ಪ ಸ್ವಲ್ಪವೇ? ಇವತ್ತಿಗೂ ಎಲ್ಲ ಪತ್ರಿಕೆಗಳಂತೆಯೇ ನಾವೂ ಟೀವಿ ಜೊತೆಗೆ ಸ್ಪರ್ಧಿಸಬೇಕು. ಸುದ್ದಿ ಹೆಕ್ಕಬೇಕು. ರಿಸ್ಕು ಮೈಮೇಲೆ ಎಳೆದುಕೊಳ್ಳಬೇಕು. ಕೋರ್ಟಿಗೆ ಅಲೆಯಬೇಕು. At least, ದಿನಪತ್ರಿಕೆಗಳಲ್ಲಿ ಅಪಾರವಾದ ಸಿಬ್ಬಂದಿ, ಸವಲತ್ತು, ಪ್ಯಾರಫರ್ನೇಲಿಯಾ ಇರುತ್ತದೆ. ಇಲ್ಲೇನಿದೆ? ಪತ್ರಿಕೋದ್ಯಮದ ಧಡಕಿ ಎಂಥವನನ್ನೂ ಹಣಿದು ಹೈರಾಣು ಮಾಡಿಬಿಡುತ್ತದೆ.

(ಸ್ನೇಹಸೇತು :ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more