ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ನೆನಪಿರಲಿ; ಗೊತ್ತಿಲ್ವಾ, ಮಾತು ಬಲ್ಲವನಿಗೆ ಜಗಳವಿಲ್ಲಾ!

By Staff
|
Google Oneindia Kannada News

ಅಧಿಕಾರ ಸಿಕ್ಕಿದ್ದೇ ಅದೃಷ್ಟ ಎಂಬಂತೆ ಶೋಭಾ ನೀನು ಬಾರಮ್ಮ, ರೇಣುಕಾಚಾರ್ಯ ನೀನಿಲ್ಲದಿದ್ದರೆ ಹೆಂಗಪ್ಪ? ಅನ್ನುವಂತೆ ನಡೆದುಕೊಂಡು ರಣರಂಗ ಮಾಡಿಕೊಳ್ಳಬಾರದು.ಶೋಭಾ ಕರಂದ್ಲಾಜೆ ಬಗ್ಗೆ ಬೇರೆ ಏನೂ ಮಾತಾಡಬೇಕಿಲ್ಲ. ಆದರೆ ಆಕೆ ಒಳಗೆ ಬಂದರೆ ಒಂದು ರಾದ್ಧಾಂತಕ್ಕೆ ಮೂಲವಾಗುತ್ತದೆ. ರೇಣುಕಾಚಾರ್ಯ ಅವರಂಥವರಿಗೆ ಛಾನ್ಸು ಕೊಟ್ಟರೆ ನರ್ಸ್ ಜಯಲಕ್ಷ್ಮೀ ತರದ ಹಗರಣ ಹುಟ್ಟಿ ಯಡ್ಡಿಯ ನೆತ್ತಿಗೇ ಹೆಟ್ಟುತ್ತವೆ.

  • ರವಿ ಬೆಳಗೆರೆ

ಕಳೆದ ಐದು ವಾರಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಕರ್ನಾಟಕದ ಜನರಿಗೆ ಸಣ್ಣದೊಂದು ರಿಲ್ಯಾಕ್ಸ್ ಸಿಕ್ಕಂತಾಗಿದೆ.ಜೆಡಿಎಸ್ ಜತೆ ಹಾಕ್ಯಾಟ ಮಾಡಿಕೊಂಡು, ಅಧಿಕಾರ ಕಳೆದುಕೊಂಡು ಬೀದಿಬೀದಿ ಗಿರಗಿರ ಸುತ್ತಿದ, ಫುಟ್‌ಪಾತ್ ಮೇಲೆ ರಗ್ಗು ಹೊದ್ದು ಮಲಗಿದ ಯಡಿಯೂರಪ್ಪ ಕಡೆಗೂ ತಮ್ಮ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ನಿಜ, ದೇವೇಗೌಡರಂತಹ ವೃದ್ಧ ಮಾಂತ್ರಿಕರು; ಯಡ್ಡಿ ಈ ಲೈಫ್‌ನಲ್ಲಿ ಸಿಎಂ ಆಗೋದೇ ಇಲ್ಲ ಅಂತ ಪುಂಗಿ ಬಿಟ್ಟ ಸೋಮಯಾಜಿಯವರಂತಹ ಜ್ಯೊತಿಷಿಗಳು, ಕುಮಾರಸ್ವಾಮಿಯಂತಹ ಸುಳ್ಳರ ವರ್ತುಲದಿಂದ ಬಚಾವಾಗಿ ಹೊರ ಬರುವುದೇ ಒಂದು ಸಾಧನೆ. ಆ ಸಾಧನೆ ಯಡಿಯೂರಪ್ಪ ಅವರಿಂದ ಆಗಿದೆ. ಅದಕ್ಕಾಗಿ ಅವರಿಗೆ ಒಂದು ಹ್ಯಾಟ್ಸಫ್. ಯಾರೇನೇ ಹೇಳಲಿ. ಆದರೆ ಅಕ್ಟೋಬರ್ ಎರಡರ ನಂತರ ಯಡಿಯೂರಪ್ಪ ಅವರ ಮುಖವನ್ನು ಬೀದಿಯಲ್ಲಿ, ಟೀವಿಯಲ್ಲಿ, ರೇಸ್‌‍ಕೋರ್ಸ್ ಎದುರಿನ ಮನೆಯಲ್ಲಿ ಕಂಡವರಿಗೆ ಒಂದು ಅಭಿಪ್ರಾಯ ಹುಟ್ಟಿದ್ದಂತೂ ನಿಜ!

“ಏನಾದರಾಗಲೀ, ಈ ಯಪ್ಪ ಒಂದು ವಾರದ ಮಟ್ಟಿಗಾದರೂ ಸಿಎಂ ಆಗಿಬಿಡಬೇಕು ಕಣ್ರೀ... ಆದ ಮೇಲೆ ಯಾವಾಗ ಯಾರು ಬೇಕಾದರೂ ಕಾಲೆಳೆದು ಬಿಡ್ಲಿ. ಒಟ್ಟಿನಲ್ಲಿ ಅವ್ರು ಒಂದಲ್ಸ ಸಿಎಂ ಆದರೆ ಸಾಕು" ಅಂತ ತುಂಬ ಜನ ಬಯಸಿದ್ದಕ್ಕೆ ಕಾರಣವೂ ಇತ್ತು. ಯಾಕೆಂದರೆ ಸಿಎಂ ಆಗಬೇಕೆಂಬ ಯಡಿಯೂರಪ್ಪನವರ ಆಸೆ ಅದೆಷ್ಟು ಢಾಳಾಗಿ ಕಾಣುತ್ತಿತ್ತು ಎಂದರೆ, ಅವರ ಶತ್ರುಗಳೂ ಥೋ! ಒಂದ್ಸಲ ಅವ್ರಿಗೆ ಅಧಿಕಾರ ಕೊಟ್ಟು ಬಿಡಬೇಕಪ್ಪ ಅನ್ನ ತೊಡಗಿದ್ದರು.

ಅದರರ್ಥ; ಯಡ್ಡಿ ಕೇವಲ ಸಿಂಪಥಿ ದೃಷ್ಟಿಯಿಂದ ಸಿಎಂ ಆಗಲು ಅರ್ಹರು ಅಂತಲ್ಲ. ನಿಜ ಹೇಳಬೇಕೆಂದರೆ ತಮ್ಮೆಲ್ಲ ಮುಂಗೋಪಗಳ ನಡುವೆಯೂ ಅವರು ಗುಡ್ ಅನ್ನುವಂತಹ ಬಜೆಟ್ ಕೊಟ್ಟರು. ಅನೇಕ ಮಠಮಾನ್ಯಗಳಿಗೆ ಸುಖಾಸುಮ್ಮನೆ ತಗಂಡು ಹೋಗಿ ಹಣ ಕೊಟ್ಟರು ಎಂಬುದನ್ನು ಬಿಟ್ಟರೆ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟರು.

ಆ ದೃಷ್ಟಿಯಿಂದ ನೋಡಿದರೆ ಯಡಿಯೂರಪ್ಪ ಸಿಎಂ ಆಗಲು ಅರ್ಹ ಕ್ಯಾಂಡಿಡೇಟೇ, ಎಲ್ಲಕ್ಕಿಂತ ಮುಖ್ಯವಾಗಿ ಕುಮಾರಸ್ವಾಮಿಯಂಥವರು ಕರ್ನಾಟಕ ನೋಡಿದ್ದು ಸಿಎಂ ಆದ ಮೇಲೆಯೇ. ಆದರೆ ಯಡಿಯೂರಪ್ಪ ದಶಕಗಳ ಕಾಲದಿಂದ ಕರ್ನಾಟಕದ ಉದ್ದಗಲ ಸುತ್ತಿದವರು. ಹಳ್ಳಿಹಳ್ಳಿಗಳಿಗೆ ಹೋದವರು. ಜನರ ಕಷ್ಟಗಳನ್ನು ಕಣ್ಣಾರೆ ನೋಡಿದವರು.

ಅದಕ್ಕಿಂತ ಮುಖ್ಯವಾಗಿ ಈ ಕುಮಾರಸ್ವಾಮಿಯಂತೆ ಫಾದರ್ ಕಂ ಗಾಢ್‌ಫಾದರ್ ಬೆಂಬಲದಿಂದ ಮೇಲೆದ್ದು ನಿಂತವರಲ್ಲ ಯಡಿಯೂರಪ್ಪ. ಆ ದೃಷ್ಟಿಯಿಂದ ಸಿಎಂ ಆಗಲು ಅವರಿಗೊಂದು ಅರ್ಹತೆ ಅಂತಿದೆ. ಆದರೆ ಇವತ್ತು ಕರ್ನಾಟಕದ ಸಿಎಂ ಹುದ್ದೆ ಎಂಬುದು ತೀರಾ ಸರಳವಾದ ಹುದ್ದೆ ಏನಲ್ಲ. ಅವರ ಹಿಂದೆ ಬಿಜೆಪಿ ವರಿಷ್ಠರ ಕಟಾಕ್ಷವಿದೆಯಾದರೂ, ಮಗ್ಗುಲಲ್ಲೇ ದೇವೇಗೌಡ, ಕುಮಾರಸ್ವಾಮಿ ಅವರಂತಹ ಕಾರ್ಕೋಟಗಳ ದಂಡಿದೆ.

ಅಧಿಕಾರ ಹಸ್ತಾಂತರ ಮಾಡುವ ವಿಷಯದಲ್ಲಿ ಈ ಅಪ್ಪ,ಮಕ್ಕಳು ನಡೆದುಕೊಂಡ ರೀತಿ, ತೆಗೆದ ರೊಚ್ಚೆ, ಸೃಷ್ಟಿಸಿದ ಕೊಚ್ಚೆಗಳನ್ನೆಲ್ಲ ನೋಡಿದರೂ ಸಾಕು. ಯಡ್ಡಿ ನೇತೃತ್ವದ ಸರ್ಕಾರಕ್ಕೆ ಎಂತೆಂತಹ ಅಪಾಯಗಳು ಬರಬಹುದು ಎಂಬುದು ಅರ್ಥವಾಗುತ್ತದೆ. ನಿಜ ಹೇಳಬೇಕೆಂದರೆ ದೇವು ಅಂಡ್ ಫ್ಯಾಮಿಲಿ ಹಿಡಿತಕ್ಕೆ ಸಿಕ್ಕುವುದಕ್ಕಿಂತ ಈ ಬಿಜೆಪಿ ನಾಯಕರು ನೇರವಾಗಿ ಚುನಾವಣೆ ಎದುರಿಸಿದ್ದರೇ ಚೆನ್ನಾಗಿರುತ್ತಿತ್ತೇನೋ?

ಆದರೂ ಒಂದು ಚುನಾವಣೆ ಎಂದರೆ ಅದು ಕೋಟಿಗಟ್ಟಲೆ ವೆಚ್ಚದ ಕಥೆ ಯಥಾಪ್ರಕಾರ ಇವರ ಜಗಳಕ್ಕೆ ದಂಡ ತೆರಬೇಕಾದವನು ಮತದಾರ. ಹೋಗಲಿ, ಚುನಾವಣೆಯೇ ಆಗಿತ್ತು ಎಂದು ಇಟ್ಟುಕೊಳ್ಳೋಣ. ಆಗಲೂ ಅತಂತ್ರ ಸ್ಥಿತಿ ಸೃಷ್ಟಿಯಾದರೆ? ಅದೂ ಹೆದರಿಕೆ. ಹೀಗಾಗಿ ಯಡ್ಡಿ ಸಿಎಂ ಆಗುತ್ತಿರುವುದೇ ಓಕೆ ಅಂತಿಟ್ಟುಕೊಳ್ಳೋಣ. ಆದರೆ ಹೀಗೆ ದಾಪುಗಾಲು ಹಾಕಿ ಬರುತ್ತಿರುವ ಯಡಿಯೂರಪ್ಪ ಬಂದ ಪುಟ್ಟ, ಹೋದ ಪುಟ್ಟ ಎಂಬ ಧಾಟಿಯಲ್ಲಿ ನಡೆದರೆ ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಒಳ್ಳೆಯ ಸರ್ಕಾರ ಕೊಡಲು ಅಗತ್ಯವಾದ ದಂಡನ್ನು ರೆಡಿ ಮಾಡಿಕೊಳ್ಳುವ ಕೆಲಸ ಅವರಿಂದ ಆಗಬೇಕು.

ಇವತ್ತು ಜೆಡಿಎಸ್ ಪಾಳಯದಿಂದ ಬರುವ ಮಂತ್ರಿಗಳ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗದು. ಬಸವರಾಜಹೊರಟ್ಟಿ ಅವರಂಥವರದೊಂದು ದಂಡು ಬಂದರೆ ಫೈನ್, ಆದರೆ ಜೆಡಿಎಸ್ ಪಾಳಯದಲ್ಲಿ ಮಂತ್ರಿಗಳಾಗುವವರು ಯಾರು ಅಂತ ನೋಡಿದರೆ ಉದ್ದಕ್ಕೂ ಕುಮಾರಸ್ವಾಮಿ, ರೇವಣ್ಣ, ಜಮೀರು ಥರದ ಹಸಿದ ಮುಖಗಳು ಕಾಣುತ್ತವೆಯೇ ಹೊರತು ನಿಜವಾದ ಕೆಲಸಗಾರರು ಮಂತ್ರಿಗಳಾಗುವ ಲಕ್ಷಣ ಕಡಿಮೆ.

ಅದರರ್ಥ, ಜೆಡಿಎಸ್‌ನಲ್ಲಿ ಯೋಗ್ಯರೇ ಇಲ್ಲ ಅಂತಲ್ಲ. ತುಮಕೂರು ಜಿಲ್ಲೆಯ ಶಿರಾ ಸತ್ಯನಾರಾಯಣ, ಕೆ‌ಎನ್ ರಾಜಣ್ಣ, ಅವರಂಥವರು ಚನ್ನಿಗಪ್ಪನಿಗಿಂತ ಸಾವಿರ ಪಟ್ಟು ಬೆಟರ್ರು. ಇದೇ ರೀತಿ ಪಾಂಡವಪುರದ ಪುಟ್ಟರಾಜು, ಚೆನ್ನರಾಯಪಟ್ಟಣದ ಪುಟ್ಟೇಗೌಡ ಥರದವರಿಗೂ ಒಂದೊಂದು ಅವಕಾಶಕೊಟ್ಟು ನೋಡುವುದು ಒಳಿತು.

ಬಿಜೆಪಿಯಲ್ಲೂ ಅಷ್ಟೇ ಕೆದಕುತ್ತಾ ಹೋದರೆ ಅಲ್ಲಿ ಆರಗ ಜ್ಞಾನೇಂದ್ರ ತರಹದ ಬುದ್ದಿವಂತರು, ತಿಳುವಳಿಕೆಯುಳ್ಳವರು, ಕಾಮನ್‌ಸೆನ್ಸ್ ಇರುವವರು ಹಲವರಿದ್ದಾರೆ. ಅಂಥವರಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ವಿ.ಸಿ.ಮೊಹನ್, ಜೀವರಾಜ್ ತರದವರು ಮುಖ್ಯರು. ಯಡಿಯೂರಪ್ಪ ಇಂಥವರದೊಂದು ಟೀಮನ್ನು ಗುರುತಿಸಿ ಕ್ಯಾಬಿನೆಟ್‌ಗೆ ತೆಗೆದುಕೊಳ್ಳಬೇಕು.

ಅದರ ಬದಲು ಅಧಿಕಾರ ಸಿಕ್ಕಿದ್ದೇ ಅದೃಷ್ಟ ಎಂಬಂತೆ ಶೋಭಾ ನೀನು ಬಾರಮ್ಮ, ರೇಣುಕಾಚಾರ್ಯ ನೀನಿಲ್ಲದಿದ್ದರೆ ಹೆಂಗಪ್ಪ? ಅನ್ನುವಂತೆ ನಡೆದುಕೊಂಡು ರಣರಂಗ ಮಾಡಿಕೊಳ್ಳಬಾರದು. ಶೋಭಾ ಕರಂದ್ಲಾಜೆ ಬಗ್ಗೆ ಬೇರೆ ಏನೂ ಮಾತಾಡಬೇಕಿಲ್ಲ. ಆದರೆ ಆಕೆ ಒಳಗೆ ಬಂದರೆ ಒಂದು ರಾದ್ಧಾಂತಕ್ಕೆ ಮೂಲವಾಗುತ್ತದೆ. ರೇಣುಕಾಚಾರ್ಯ ಅವರಂಥವರಿಗೆ ಛಾನ್ಸು ಕೊಟ್ಟರೆ ನರ್ಸ್ ಜಯಲಕ್ಷ್ಮೀ ತರದ ಹಗರಣ ಹುಟ್ಟಿ ಯಡ್ಡಿಯ ನೆತ್ತಿಗೇ ಹೆಟ್ಟುತ್ತವೆ.

ಹೀಗಾಗಿ ಯಡ್ಡಿ ಈ ವಿಷಯದಲ್ಲಿ ಎಚ್ಚರದಿಂದಿರುವುದು ಒಳಿತು. ಅದಕ್ಕಿಂತ ಮುಖ್ಯವಾಗಿ ಈಗ ತಮ್ಮ ಅಕ್ಕಪಕ್ಕ ಇರುವವರು ಹೇಗಿರಬೇಕು? ಎಂಥವರಿರಬೇಕು? ಎಂಬುದನ್ನು ಯಡಿಯೂರಪ್ಪ ಜಾಣ್ಮೆಯಿಂದ ನಿರ್ಧರಿಸಬೇಕು. ಹತ್ತು ಜನ ನೋಡುತ್ತಿರುವಂತೆಯೇ ಎಂಟು ಬೆರಳುಗಳಲ್ಲಿ ಲಕಲಕ ಅಂತ ಉಂಗುರ ಬೆಳಗಿಸುತ್ತಾ, ಪೆಕಪೆಕಾ ಅಂತ ನಗುತ್ತಾ ಬರುವ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರಂಥವರು ತಮ್ಮ ರೈಟ್ ಹ್ಯಾಂಡುಗಳು ಅಂತ ಯಡಿಯೂರಪ್ಪ ಬಿಂಬಿಸಿದರೆ ಅವರ ಅವನತಿಗೆ ಬೇರೆ ಕಾರಣಗಳೇ ಬೇಡ.

ಇನ್ನು ಅವರು ತೀರಾ ಎಚ್ಚರಿಕೆ ವಹಿಸಬೇಕಿರುವುದು ಅಧಿಕಾರಿಗಳ ವಿಷಯದಲ್ಲಿ. ಹಿಂದೆ ಕುಮಾರನ ಬೂಟು ಪಾಲೀಷು ಮಾಡುತ್ತಾ, ದುಡ್ಡು ದುಗ್ಗಾಣಿ ದೋಚುತ್ತಾ ಬದುಕಿದವರನ್ನು ಹತ್ತಿರ ಬಿಟ್ಟುಕೊಳ್ಳುವ ಕೆಲಸಕ್ಕೆ ಕೈ ಹಾಕಿದರೆ ಅದೂ ಅಭಿಮಾನ ಭಂಗದ ಕೆಲಸವೇ. ಈವತ್ತು ಪರಿಸ್ಥಿತಿ ಹೇಗಿದೆ ಅಂದರೆ ಧರ್ಮಸಿಂಗ್ ಕಾಲದಲ್ಲಿ ಬೂಟು ನೆಕ್ಕಿದವರು, ಕುಮಾರನ ಕಾಲಕ್ಕೂ ಸಲ್ಲುತ್ತಾರೆ. ನಾಳೆ ಯಡ್ಡಿ ಪಾಳಯಕ್ಕೂ ಸಲ್ಲುತ್ತಾರೆ ಎಂಬಂತಿದೆ, ಹಾಗಾಗದಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X