• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಮಗುರು ಬರೆದ ಪೋಲಿ ಕಾದಂಬರಿ: ಸಾಗರ ಸಮ್ಮುಖಂ!

By Staff
|
Ravi Belagere on Thatskannada.com ರವಿ ಬೆಳಗೆರೆ
‘ಸಾಗರ ಸಮ್ಮುಖಂ’

ಹಾಗಂತ ಹೆಸರಿಟ್ಟೆ. ಅದು ಪರಮಗುರು ಖುಶ್ವಂತ್‌ ಸಿಂಗ್‌ ಅವರು ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ ಬರೆದ Burial at see ಎಂಬ ಇಂಗ್ಲೀಷ್‌ ಕಾದಂಬರಿಗೆ ಯಾರಾದರೂ ಕೊಡಬಹುದಾದ ಕನ್ನಡದ ಹೆಸರು. ತೊಂಬತ್ತನೇ ವರ್ಷದ ಹೊತ್ತಿಗೆ ನಾನು ಅದ್ಯಾವ ನೆಲದ ಅಡಿಯಲ್ಲಿ ಗೊಬ್ಬರವಾಗಿ ಮಲಗಿರುತ್ತೀನೋ ಗೊತ್ತಿಲ್ಲ : ಈ ಪೋಲಿ ಅಜ್ಜ ಆ ಇಳಿವಯಸ್ಸಿನಲ್ಲಿ ಚಿಕ್ಕದೊಂದು ಕಿಡಿಗೇಡಿ ಕಾದಂಬರಿ ಬರೆದು ಓದುಗರ ಕೈಗಿಟ್ಟು ತುಂಟನಗೆ ನಗುತ್ತಿದ್ದಾರೆ. ‘ಯಾಕೋ ಏನೂ ಬರಿಯೋಕೆ ಆಗ್ತಿಲ್ಲ ಕಣ್ರೀ... ಇನ್ನೇನಿದೆ ಬರಿಯೋಕೆ ಅನ್ನಿಸ್ತಿದೆ...’ ಅಂತೆಲ್ಲ ಸೋತ ಮದುಮಗನ ಹಾಗೆ ಮಾತನಾಡುವ ನಮ್ಮ ವಯಸ್ಸಿನ ಬರಹಗಾರರಿಗೆ ತೊಂಬತ್ತರ ಅಜ್ಜ ಖುಶ್ವಂತ್‌ಸಿಂಗ್‌ ದೊಡ್ಡ ಸವಾಲಿನಂತೆ ಕಾಣಿಸುತ್ತಾರೆ.

ಅವರೆಡೆಗೆ ನನಗಿರುವ ಭಕ್ತಿ, ಗೌರವ, ಪ್ರೀತಿ, ಸಲುಗೆ, ಅತಿರೇಕಾಭಿಮಾನ ಎಲ್ಲವೂ ನಿಮಗೆ ಗೊತ್ತು. ಖುಶ್ವಂತ್‌ರ ಬರಹ ಯಾವತ್ತಿಗೂ ನನ್ನಲ್ಲೊಂದು ಅಚ್ಚರಿ, ಮೆಚ್ಚುಗೆ ಎರಡನ್ನೂ ಮೂಡಿಸುತ್ತದೆ. ಅವರು ಬರೆದ ಸಿಖ್‌ ಧರ್ಮದ ಇತಿಹಾಸವನ್ನು ಒಬ್ಬ ಇತಿಹಾಸದ ವಿದ್ಯಾರ್ಥಿಯಾಗಿ ಹುಚ್ಚಿಗೆ ಬಿದ್ದು ಓದಿದವನು ನಾನು. ಆಗಿನ್ನೂ ನಾನು ಪಂಜಾಬಕ್ಕೆ ಹೋಗಿರಲಿಲ್ಲ. ಒಂದೇ ಸಲವೂ ಅಮೃತಸರದ ಚಿನ್ನದ ದೇಗುಲವನ್ನು ಕಣ್ಣಾರೆ ನೋಡಿರಲಿಲ್ಲ. ಅಸಲು ಸಿಖ್ಖರ ಪರಿಚಯ ಕೂಡ ನನಗಿರಲಿಲ್ಲ. ಅಂಥದರಲ್ಲಿ ಸಿಖ್‌ ಧರ್ಮದ ಇತಿಹಾಸ ಕೈಗೆತ್ತಿಕೊಂಡು ಓದಲು ಕುಳಿತರೆ, ನನಗದು ಪರಕೀಯ ಅಂತ ಅನ್ನಿಸಲೇ ಇಲ್ಲ. ಮೊದಲ ಪುಟ ಓದಲಾರಂಭಿಸಿದವನು, ಪುಸ್ತಕ ಮುಗಿಸುವ ತನಕ ಅದರ ಗುಂಗಿನಿಂದ ತಪ್ಪಿಸಿಕೊಳ್ಳಲೇ ಇಲ್ಲ. ಒಬ್ಬ ಬರಹಗಾರನ ತಾಕತ್ತೇ ಅದು. ಆತ ಓದುಗನ ಕೈಗೆ ತೀರ ಅಕಸ್ಮಾತ್ತಾಗಿ ಸಿಕ್ಕು ಬಿಟ್ಟರೂ, ಆತನನ್ನು ಓದುಗ ಕೈಕೊಡವಿಕೊಂಡು ಎದ್ದು ಹೋಗಲಾರದಂತೆ ಹಿಡಿದು ಜಗ್ಗಿ ಕೂಡಿಸಿಕೊಂಡುಬಿಡಬೇಕು. ಒಂದು ಪುಸ್ತಕ ಜ್ವರದಂತೆ ನಿಮ್ಮನ್ನು ಆವರಿಸಿಕೊಂಡು ಬಿಡಬೇಕು. ಆ ಲೇಖಕನ ಅಷ್ಟೂ ಪುಸ್ತಕಗಳನ್ನು ಹುಡುಕಾಡಿಕೊಂಡು ಓದಲು ಹೊರಡುವಂತೆ ಮಾಡಬೇಕು. ನನ್ನನ್ನು ಹಾಗೆ ಬಿಡದೆ ಬೆನ್ನತ್ತಿದ ಲೇಖಕರು ತೀರ ಕೆಲವೇ ಜನರಿದ್ದಾರೆ; ಚಲಂ, ಮಾರ್ಕ್ವೇಜ್‌, ಹೆಮಿಂಗ್ವೆ, ಪ್ರೊತಿಮಾ ಬೇಡಿ ಮತ್ತು ಖುಶ್ವಂತ್‌.

Kushwant Singhನಿಮ್ಮ ಕೈಗೆ ನೂರಾರು ವರ್ಷಗಳ ಇತಿಹಾಸವಿರುವ ದಿಲ್ಲಿ ಎಂಬ ಊರನ್ನು ಕೊಟ್ಟು ಅದರ ಮೇಲೊಂದು ಕಾದಂಬರಿ ಬರಿ ಅಂದರೆ, ನೀವು ದಿಲ್ಲಿಯಲ್ಲೇ ಹುಟ್ಟಿ ಬೆಳೆದವರಾದರೂ ಆ ಊರಿನ ಇತಿಹಾಸಕ್ಕೆ ಕಾದಂಬರಿಯ ಚೆಲುವು ಕೊಡುವುದು ಹೇಗೆ ಅಂತ ಕಕ್ಕಾವಿಕ್ಕಿಯಾಗುತ್ತೀರಿ. ಆದರೆ ಹತ್ತಾರು ವಂಶಗಳು, ನೂರಾರು ಅರಸರು, ರಾಜಕಾರಣಿಗಳು, ಇಂಗ್ಲಿಷರು ಮುಂತಾದವರಿಂದ ಆಳಿಸಿಕೊಂಡ ದಿಲ್ಲಿ ನಗರಿ ಕೇವಲ ಖುಶ್ವಂತ್‌ರಂತಹ ಕ್ರಿಯಾಶೀಲ ಲೇಖಕನ ಕಣ್ಣಿಗೆ ಭಾಗಮತಿ ಎಂಬ ಹಿಜಡಾ ಥರಾ ಕಾಣಿಸಿಕೊಳ್ಳಲಿಕ್ಕೆ ಸಾಧ್ಯ. ಒಂದು ಸಲ ಹಾಗೆ ದಿಲ್ಲಿಗೆ ಗಂಡೂ ಅಲ್ಲ-ಹೆಣ್ಣೂ ಅಲ್ಲದ ಭಾಗಮತಿ ಅಂತ ಹೆಸರಿಟ್ಟುಬಿಟ್ಟ ಮೇಲೆ ಖುಶ್ವಂತ್‌ರಂತಹ ಲೇಖಕನಿಗೆ ಆಕೆಯನ್ನು (ಕ್ಷಮಿಸಿ, ಅದನ್ನು!) ಪ್ರೀತಿಸಲಿಕ್ಕೆ, ದ್ವೇಷಿಸಲಿಕ್ಕೆ, ಮೋಹಿಸಲಿಕ್ಕೆ, ಕಾಮಿಸಲಿಕ್ಕೆ ಕಡೆಗೆ ಮುಪ್ಪಾದ ಮುಪ್ಪಿನ ವಯಸ್ಸಿನಲ್ಲಿ ತನ್ನ ಆಸರೆಯ ಊರು ಗೋಲಾಗಿ ಬಳಸಲಿಕ್ಕೆ ಸಾಧ್ಯ. ಆ ಕೆಲಸವನ್ನು ಖುಶ್ವಂತ್‌ ಅದೆಷ್ಟು ಅದ್ಭುತವಾಗಿ ಮಾಡುತ್ತಾರೆ ಅಂದರೆ, ಓದುಗ ಕೂಡ ದಿಲ್ಲಿಯನ್ನು ಮೋಹಕ-ಕೊಳಕು ಹಿಜಡಾಗಳನ್ನಾಗಿ ನೋಡತೊಡಗುತ್ತಾನೆ. ಈ ತೆರನಾಗಿ ಒಂದು ಊರನ್ನು Animate object ನಂತೆ, ಜೀವವಿರುವ ವ್ಯಕ್ತಿಯಂತೆ ನೋಡಲಿಕ್ಕೆ ಸಾಧ್ಯವಾಗಿದ್ದು- ಜಗತ್ತಿನ ಕೆಲವೇ ಲೇಖಕರಿಗೆ. ತೆಲುಗಿನ ತನ್ನ ಕವಿತೆಯಾಂದರಲ್ಲಿ ಹೈದರಾಬಾದ್‌ ನಗರಿಯನ್ನು ಹೀಗೆ ಹೆಣ್ಣೇನೋ ಎಂಬಂತೆ treat ಮಾಡಿದ ಒಬ್ಬ ಕವಿಯೆಂದರೆ ದೇವರಕೊಂಡ ಬಾಲಗಂಗಾಧರ ತಿಲಕ್‌. ‘ಏನೋ... ತಪ್ಪು ಮಾಡಿದ ಹೆಂಗಸಿನ ಹಾಗೆ ಕಣ್ಣು ತಪ್ಪಿಸಿಕೊಂಡು ತಿರುಗುತ್ತಿದ್ದೀಯಲ್ಲ ? ನಾನೆಂದರೆ ಭಯವಾ...?’ ಅಂತ ಕೇಳುತ್ತಾನೆ ಕವಿ ತಿಲಕ್‌. ಅಂಥ ಹೊಳಪುಗಳು ನಿಮಗೆ ಖುಶ್ವಂತ್‌ರ ದಿಲ್ಲಿಯುದ್ದಕ್ಕೂ ಸಿಗುತ್ತದೆ.

ಪತ್ರಿಕೋದ್ಯಮ, ಅಪಾಪೋಲಿತನ, ಅಲೆಮಾರಿತನ, ಜಗಳಗಂಟ ಚಿಂತನೆ- ಇವೆಲ್ಲವುಗಳನ್ನೂ ಬಿಟ್ಟು ಖುಷ್ವಂತ್‌ ಸಿಂಗ್‌ ಇತಿಹಾಸಕಾರರಾಗಿದ್ದಿದ್ದರೆ, ಅದೆಷ್ಟು ಅದ್ಭುತವಾದ ಕೃತಿಗಳನ್ನು ಬರೆಯುತ್ತಿದ್ದರೋ ಅಂದುಕೊಳ್ಳುತ್ತೇನೆ. ಹಿಂದೆಯೇ ಅನ್ನಿಸಿಬಿಡುತ್ತದೆ, ಅವುಗಳ್ಯಾವೂ ಇಲ್ಲದೆ ಹೋಗಿದ್ದಿದ್ದರೆ ಖುಷ್ವಂತ್‌ ಮನುಷ್ಯರಾಗುತ್ತಿದ್ದುದಾದರೂ ಹೇಗೆ? ಜಗಳ, ಅಲೆಮಾರಿ ಬದುಕು, ಪೋಲಿ ಚಿಂತನೆಗಳು, ವಿಪರೀತವಾದ ಮಾನವೀಯ ಅಂತಃಕರಣ, ಯಾರದೋ ದುಃಖಕ್ಕೆ ತಾನು ಕಣ್ಣೀರಾಗುವಿಕೆ- ಇವೆಲ್ಲ ಇಲ್ಲದ ಮನುಷ್ಯ ಒಬ್ಬ ಬರಹಗಾರನಾಗುವುದಾದರೂ ಹೇಗೆ?

ನೀವು ದಿಲ್ಲಿ ಯೆಂಬ ಕಾದಂಬರಿಯ ಮೊದಲ ಅಧ್ಯಾಯವನ್ನೊಮ್ಮೆ ಓದಿನೋಡಿ. ಅದು ಪೋಲಿ ಅಜ್ಜನ ಆತ್ಮಚರಿಚ್ರೆಯ ಒಂದು ಅಧ್ಯಾಯದಂತೆಯೇ ಕಾಣಿಸುತ್ತದೆ. ಆತ ಶ್ರೀಮಂತ, ಪದೇ ಪದೇ ವಿದೇಶಗಳಿಗೆ ಹೋಗುವಾತ, ದಿಲ್ಲಿಯ ಅಷ್ಟೂ ಪ್ರಮುಖ ಪತ್ರಕರ್ತರು ಕೂತು ಕಾಫಿ ಕುಡಿಯುತ್ತ ಹರಟುವ ಕಾಫಿ ಹೌಸ್‌ನ ಸದಸ್ಯ, ತಾನಿರುವ ಅಪಾರ್ಟ್‌ಮೆಂಟಿಗೆ ಪ್ರತೀ ರಾತ್ರಿ ಒಬ್ಬೊಬ್ಬ ಹೆಂಗಸನ್ನು ಕರೆತರುವಾತ, ಯಾರೂ ಸಿಗದಿದ್ದಾಗ ಭಾಗಮತಿ ಎಂಬ ಹಿಜಡಾಳನ್ನೇ ತೆಕ್ಕೆಗೆ ಎಳೆದುಕೊಳ್ಳುವಾತ- ಅಂಥ ಖುಶ್ವಂತ್‌ ಇದ್ದಕ್ಕಿದ್ದಂತೆ ತನ್ನ ಇಳಿ ಸಂಜೆಗಳನ್ನು ದಿಲ್ಲಿಯ ಸುವಿಶಾಲ ಸ್ಮಶಾನವಾದ ನಿಗಂಬೂಧ್‌ ಘಾಟ್‌ನಲ್ಲಿ ಕೂತು ಕಳೆಯಲೆಂದು ಹೊರಟುಬಿಡುತ್ತಾನೆ.

ಮನಸ್ಸಿನ ತುಂಬ ಪೋಲಿ ವಾಂಛೆಗಳು, ಅವುಗಳ ಜೊತೆಯಲ್ಲೇ ಬೇಸರ, ಹತಾಶೆ, ಒಬ್ಬಂಟಿತನಗಳ ಅಸಹನೀಯ ಮೌನ. ಸ್ಮಶಾನ ಘಟ್ಟದಲ್ಲಿ ಹೋಗಿ ಕೂಡುವ ಲೇಖಕನ ಕಣ್ಣಿಗೆ ಚಿಕ್ಕದೊಂದು ಸಿದಿಗೆ ಕಾಣಿಸುತ್ತದೆ. ಅದರ ಮೇಲೆ ಆಗಷ್ಟೆ ತಂದಿಳಿಸಿರುವುದು ಎಂಟು ವರ್ಷವಯಸ್ಸಿನ ಪುಟ್ಟ ಹುಡುಗಿಯಾಬ್ಬಳ ಶವ. ಅದರೆದುರು ಕುಳಿತು ಅವಳ ತಾಯಿ ಎದೆ ಎದೆ ಬಡಿದುಕೊಂಡು ರೋದಿಸುತ್ತಾಳೆ. ಹುಡುಗಿಯ ತಂದೆ ತಲೆಯ ಮೇಲೆ ಮಣ್ಣು ಸುರಿದುಕೊಂಡು ಭೋರಿಡುತ್ತಾನೆ. ಆ ದಂಪತಿಗಳ ಶೋಕದಲ್ಲಿ ಭಾಗಿಯಾಗಲು ಇಡೀ ದಿಲ್ಲಿಯಲ್ಲಿ ಮತ್ತೊಂದು ಜೀವವಿಲ್ಲ. ಹಿಜಡಾ ದಿಲ್ಲಿ ತನ್ನ ಪಾಡಿಗೆ ತಾನು ಝಗಮಗಿಸುವ ದೀಪಗಳಲ್ಲಿ ಮುಳುಗಿ ಹೋಗಿದೆ. ಒಬ್ಬ ಖುಶ್ವಂತ್‌ ಮಾತ್ರ ನಿಗಂಬೂಧ್‌ ಘಾಟ್‌ನ ಮೆಟ್ಟಿಲುಗಳ ಮೇಲೆ ಕುಳಿತು ಯಾರದೋ ದುಃಖಕ್ಕೆ ಕಣ್ಣೀರಾಗುತ್ತಾರೆ. ಶವ ಸಂಸ್ಕಾರವೆಲ್ಲ ಮುಗಿದ ಮೇಲೆ ತಮ್ಮ ಅಪಾರ್ಟ್‌ಮೆಂಟಿಗೆ ಹೋಗಿ ದುಬಾರಿ ಬೆಲೆಯ ಸ್ಕಾಚ್‌ ಗ್ಲಾಸಿಗೆ ಬಗ್ಗಿಸಿಕೊಳ್ಳುತ್ತಾರೆ. ವಿಸ್ಕಿ ಗುಟುಕರಿಸಿದಂತೆಲ್ಲ ಆ ಸತ್ತು ಹೋದ ಮಗುವಿನ ಮುಖ ಮನಸ್ಸಿನಲ್ಲಿ ಸಾಂದ್ರಗೊಂಡು, ಮನುಷ್ಯತ್ವವೆಂಬುದು ಅವರೆದುರಿಗಿನ ಹಾಳೆಯ ಮೇಲೆ ಅಕ್ಷರವಾಗಿ ಹರಿಯತೊಡಗುತ್ತದೆ.

ಖುಶ್ವಂತ್‌ ಅಂದರೆ ಅದು?

ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ತೀರಿ ಹೋದ ಹೆಂಡತಿಯ ಬಗ್ಗೆ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿರುವುದನ್ನು ನೀವು ಓದಬೇಕು. ಚಿಕ್ಕಂದಿನಿಂದ ಒಂದೇ ಶಾಲೆಯಲ್ಲಿ ಜೊತೆಗೆ ಓದಿದ, ಯೌವನದಲ್ಲಿ ಮತ್ತೆ ಹಠಾತ್ತನೆ ಕಣ್ಣಿಗೆ ಬಿದ್ದ, ಭರಿಸಲಾಗದಷ್ಟು ಪ್ರೀತಿ ಹುಟ್ಟಿಸಿ-ಮದುವೆಯಾಗುವಂತೆ ಬೆನ್ನತ್ತುವಂತೆ ಮಾಡಿದ ಹುಡುಗಿ ತನ್ನೊಂದಿಗೆ ಅರ್ಧ ಶತಮಾನವನ್ನೇ ಕಳೆಯುತ್ತಾಳೆ. ಮಕ್ಕಳನ್ನು ಹೆತ್ತು ಕೊಡುತ್ತಾಳೆ. ಜೊತೆಗೇ ಬಂದು ಟೆನ್ನಿಸ್‌ ಆಡುತ್ತಾಳೆ. ತನಗಿಂತ ಬಿರುಸಾಗಿ ಹೆಜ್ಜೆ ಒಗೆದು Walk ಮಾಡುತ್ತಾಳೆ. ಅಂಥಾಕಿಗೆ ಕೆಟ್ಟ ಖಾಯಿಲೆ ಬಂದುಬಿಡುತ್ತದೆ. ಅದು ತೀರ ಅಪರೂಪಕ್ಕೆ ಬರುವ ವೃದ್ಧಾಪ್ಯದ ಖಾಯಿಲೆ. ಬಂದ ಮೇಲೆ ವಾಸಿಯಾಗುವ ಮಾತಿಲ್ಲ. ಅದು ಖುಶ್ವಂತ್‌ರ ಪತ್ನಿಯನ್ನು ಕರೆದುಕೊಂಡೇ ಹೋಗುತ್ತದೆ. ಅಂಥ ಖಾಯಿಲೆಗೆ ಈಡಾದ ತವ್ಮ ಪತ್ನಿಯ ಬಗ್ಗೆ ಖುಶ್ವಂತ್‌ ಹೇಗೆ ಬರೆಯುತ್ತಾರೆ ಗೊತ್ತೇ? ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮೊಂದಿಗೆ ಅರ್ಧ ಶತಮಾನಕ್ಕೂ ಹೆಚ್ಚು ಬಾಳಿ ಬದುಕಿದ ಆಕೆಗೆ ಮದುವೆಗೆ ಮುಂಚೆಯೇ ಒಂದು affair ಇತ್ತು. ಅದು ಮದುವೆಯ ನಂತರವೂ ಮುಂದುವರೆದಿತ್ತು ಮತ್ತು ಇದ್ದಕ್ಕಿದ್ದಂತೆ ಅದೊಂದು ದಿನ ತಾನಾಗಿಯೇ ಬಿಟ್ಟು ಹೋಯಿತು- ಅಂತ ಬರೆದುದನ್ನು ಓದಿದಾಗ ಖುಶ್ವಂತ್‌ ಅದೆಂಥ ಅದ್ಭುತ ಡೆಮೋಕ್ರೇಟ್‌ ಅನ್ನಿಸದೆ ಇರಲಾಗದು. I love him for that.

ಈಗ ಪೋಲಿ ಅಜ್ಜ ಚಿಕ್ಕದೊಂದು ಕಾದಂಬರಿ ಬರೆದು ಅದಕ್ಕೆ Burial at see ಅಂತ ಹೆಸರಿಟ್ಟಿದ್ದಾರೆ. ಅದೆಷ್ಟು ಕೆಟ್ಟ ಕಾದಂಬರಿಯೆಂದರೆ, ಆ ಕೊಳಕನ್ನು ಸಮುದ್ರ ಸಮ್ಮುಖದಲ್ಲೇ ಅದನ್ನು ಬರೆದವನ ಸಮೇತ ಹೂತು ಬರಬೇಕು ಅಂತ ವಿಮರ್ಶೆ ಬಂದಿದೆ. ಪರಮ ಗುರು ಅದಿನ್ನೆಷ್ಟು ಕೊಳಕು ಕಾದಂಬರಿ ಬರೆದಿದ್ದಾನೋ ನೋಡೇ ಬಿಡೋಣ ಅನ್ನಿಸಿ, ಪುಸ್ತಕ ತರಿಸಿಕೊಂಡು ಓದಿದೆ. ವಿಮರ್ಶೆ ಬರೆದವನ್ನು ಹೂತು ಬರಬೇಕು ಅನ್ನಿಸಿತು.

ಪ್ರಧಾನ ಮಂತ್ರಿಯಾಗಿದ್ದ ನೆಹರೂರನ್ನು ಹಿಂದೂಗಳ ಪರವಾಗಿ ಯೋಚಿಸುವಂತೆ ಮಾಡಲು ಅಂದಿನ ಹಿಂದುತ್ವವಾದಿಗಳು ಒಬ್ಬ ಅಸಾಧಾರಣ ಚೆಲುವೆ ಸನ್ಯಾಸಿಯನ್ನು ರಹಸ್ಯ ಗೂಢಚಾರಿಣಿಯಾಗಿ ನೆಹರೂ ಬಳಿಗೆ ಕಳಿಸುತ್ತಾರೆ. ಆಕೆ ನೆಹರೂವನ್ನು ಹಿಂದುತ್ವವಾದಿಯನ್ನಾಗಿ ಪಳಗಿಸಿಕೊಳ್ಳುವ ಪ್ರಯತ್ನದಲ್ಲೇ ಆ ಹೆಂಡತಿಯಿಲ್ಲದ ಮಧ್ಯ ವಯಸ್ಕನನ್ನು ಪ್ರೀತಿಸುತ್ತಾಳೆ. ಅದರಿಂದಾಗಿಯೇ ಗರ್ಭವತಿಯಾಗುತ್ತಾಳೆ. ಮುಂದೆ ನೆಹರೂ ಮಗಳನ್ನು, ನೆಹರೂ ಮಿತ್ರನೊಬ್ಬ ತೀರ ಚಿಕ್ಕ ವಯಸ್ಸಿನಲ್ಲೇ seduce ಮಾಡುತ್ತಾನೆ. ಆದರೆ ಆ ಮುದುಕನ ಜಾಗಕ್ಕೆ ಒಬ್ಬ ಅಜಾನುಬಾಹು ಬ್ರಹ್ಮಚಾರಿ ಸಂತನೊಬ್ಬ ಬಂದುಬಿಡುತ್ತಾನೆ. ಆತನೊಂದಿಗೆ ನೆಹರೂ ಮಗಳ ಪ್ರೇಮ-ಕಾಮಗಳ ಸಂಬಂಧ ಮುಂದುವರೆಯುತ್ತದೆ.

ನೆಹರೂ ಮತ್ತು ಇಂದಿರಾ ಗಾಂಧಿಯ ಪಾತ್ರಗಳು, ಅವುಗಳ ಲೈಂಗಿಕ ಜೀವನ, ಚಿಂತನಾ ವಿಧಾನ- ಇವೆಲ್ಲ ಎಷ್ಟು ಸಲೀಸಾಗಿ ಅರ್ಥವಾಗುತ್ತ ಹೋಗುತ್ತವೆಂದರೆ, ಖುಶ್ವಂತ್‌ ಅದನ್ನು ಕಾಲ್ಪನಿಕ ಕಾದಂಬರಿ ಅಂತ ಕರೆದರೂ, ನಮಗದು ಇತಿಹಾಸದ ಒಂದು ಪೋಲಿ ಅಧ್ಯಾಯ ಅಂತಲೇ ಅನ್ನಿಸುತ್ತದೆ. ಇದನ್ನು ಕಾದಂಬರಿಯಾಗಿ ಬರೆಯುವ ಬದಲು ಖುಶ್ವಂತ್‌ ಒಂದು ಇತಿಹಾಸದ ಪುಸ್ತಕವನ್ನಾಗೇ ಬರೆಯಬಹುದಿತ್ತು. ನೆಹರೂ ಮತ್ತು ಇಂದಿರಾರಿಗಿದ್ದ ಬೇರೆ ಬೇರೆ ಲೈಂಗಿಕ ಸಂಬಂಧಗಳ ಬಗ್ಗೆ ದಾಖಲೆ ಸಂಗ್ರಹಿಸಿ ಅವರನ್ನು Expose ಮಾಡಬಹುದಿತ್ತು. ಅಂತೆಲ್ಲ ವಿಮರ್ಶೆ ಬರೆಯುವ ಇಂಗ್ಲೀಷ್‌ ವಿಮರ್ಷಕರಿಗೆ, ಖುಶ್ವಂತ್‌ ಎಂಬ ತೊಂಬತ್ತರ ಪೋಲಿ ವೃದ್ಧನಿಗೆ Morals ಕಲಿಸಲು ಆಗುವುದಿಲ್ಲ ಎಂಬುದು ಗೊತ್ತಿದ್ದಂತಿಲ್ಲ.

ಅದೇನೇ ಇರಲಿ, ಚಿಕ್ಕದಾದ ಈ ಕಾದಂಬರಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿ ಅದಕ್ಕೆ ಕನ್ನಡದಲ್ಲಿ ಸಾಗರ ಸಮ್ಮುಖಂ ಅಂತ ಹೆಸರಿಟ್ಟೆ . ಈಗ ಭರ್ತಿ ಬೇಸಗೆಯಿದೆ. ಇಂಥ ಬೇಸಗೆಯಲ್ಲಿ ಬೆಳಗಿನ ಜಾವಗಳು ನಿಜಕ್ಕೂ ಅದ್ಭುತ. ನಾನು ಕೊಂಚ ನಿದ್ದೆ ಕಡಿಮೆ ಮಾಡಿಕೊಂಡು ಜಾವಕ್ಕೇ ಎದ್ದು, ದಿನಕ್ಕೆ ಹತ್ತು ಪುಟ ತರ್ಜುಮೆ ಮಾಡಿಟ್ಟರೂ, ಅದೆಷ್ಟು ಮಹಾ ದಿನಗಳು ಬೇಕಾದಾವು ?

ಅಲ್ವೆ ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more