ಹದತಪ್ಪಿದ ಎದೆಬಡಿತದ ನಡುವೆ ಬೆದೆಯೇರಿದ ಬಿಸಿಯುಸಿರು

Posted By:
Subscribe to Oneindia Kannada

ಚಳಿಗಾಲ ಆರಂಭವಾಗಿದ್ದರೂ ಮರೆಯಾಗಿದ್ದ ಚಳಿ ಡಿಸೆಂಬರ್ ಕೊನೆಯ ವಾರದಲ್ಲಿ ಬೆಂಗಳೂರನ್ನು ಬಲವಾಗಿ ಅಪ್ಪಿಕೊಂಡಿದೆ. ಚಳಿಗಾಲದಲ್ಲಿಯೂ ಅಷ್ಟೊಂದು ಚಳಿಯಿಲ್ಲದೆ ಬೇಜಾರಾಗಿದ್ದ ಮನಸುಗಳು ಅರಳಿಕೊಂಡಿವೆ. ಆ ಹೊಂಬಿಸಿಲಲ್ಲಿ ಮೈಗೆ ಹಿತನೀಡುವ ಸೂರ್ಯನ ಕಿರಣ ಸೋಕಿದಾಗ ಆಗುವ ಅನಿರ್ವಚನೀಯ ಆನಂದವಿದೆಯಲ್ಲ! ದೇವರೆ!

ಕೆಲವು ಮೊಗ್ಗಿನ ಮನಸ್ಸುಗಳಿಗೆ ಈ ಹಿತವಾದ ಅನುಭವ ಬೇಕಾಗಿಲ್ಲ. ಅವು ಬೇರೊಂದು ಧ್ಯಾನದಲ್ಲಿ ಮುಳುಗಿಹೋಗಿವೆ, ಕಳೆದುಹೋಗಲಿರುವ ಆ ಅಂತಿಮ ಕ್ಷಣಗಳಿಗಾಗಿ ಹಾತೊರೆಯುತ್ತಿವೆ. ಪಾಠ ಓದುವ ಕಣ್ಣುಗಳು ಅದೇನನ್ನೋ ಹುಡುಕುತ್ತಿವೆ, ಹದತಪ್ಪಿದ ಎದೆಬಡಿತದ ನಡುವೆ ಬೆದೆಯೇರಿದ ಬಿಸಿಯುಸಿರುಗಳು ಏನೇನೇನೋ ಮಾತನಾಡಿಕೊಳ್ಳುತ್ತಿವೆ.

What's your kid is doing on the eve of New Year?

ಇಂದಿನ ಕಾಲೇಜುಗಳ ಹುಡುಗಹುಡುಗಿಯರು ತರಗತಿಗಿಂತ ಹೆಚ್ಚಿನ ಸಮಯವನ್ನು ರಸ್ತೆಯ ಮೇಲೆ ಕಳೆಯುತ್ತಾರೆ, ಅಪ್ಪ ಕೊಟ್ಟ ಪಾಕೆಟ್ ಮನಿ ಯಾವುದ್ಯಾವುದೋ ವಸ್ತುಗಳಿಗೆ ಖಾಲಿಯಾಗಿರುತ್ತದೆ, ಅಂದವಾಗಿ ಬಟ್ಟೆತೊಟ್ಟು ಬಂದ ಹದಿಹರೆಯದ ಹುಡುಗರಿಗೆ ಕಾಲೇಜೆಂದರೆ ಫುಲ್ ಫ್ರೀಕೌಟ್, ಮಸ್ತ್ ಮಜಾ! ದಶಕದ ಹಿಂದೆ ಹಸ್ತಲಾಘವದಲ್ಲಿ ಕೊನೆಯಾಗುತ್ತಿದ್ದ ಭೇಟಿಗಳು ಇಂದು ತಬ್ಬುಗೆಗೆ ಬಂದು ಮುತ್ತಿನೊಂದಿಗೆ ಕೊನೆಯಾಗುತ್ತವೆ.

ಇದು ಅಚ್ಚರಿಯಾದರೂ ಸತ್ಯಸಂಗತಿ. ಹೊಸವರ್ಷದ ಕನವರಿಕೆಯಲ್ಲಿ ಮುಳುಗಿಹೋಗಿರುವ ಯುವಕರ ಕೈಗೆ ಈಗಾಗಲೆ ಬಾಟಲಿಗಳು ಬಂದು ಕುಳಿತಿವೆ. ಇನ್ನು ಬರೀ ಇಪ್ಪತ್ನಾಲ್ಕು ಗಂಟೆ ಮಚ್ಚಾ, ಎಲ್ಲಿ ಸಿಗೋಣ ಹೇಳು? ಎಂಬಂತಹ ಮಾತುಗಳು ಹರಿದಾಡುತ್ತಿವೆ. ಜೊತೆಗೊಂದಿಷ್ಟು ಹುಡುಗಿಯರು ತಾವು ಎಂಥದ್ದಕ್ಕೂ ಸೈ ಎಂಬಂತೆ ವ್ಯವಹರಿಸುತ್ತಿರುತ್ತಾರೆ. ಇದು ಊಹಿಸಿದ್ದಲ್ಲ, ಸಾಕ್ಷಾತ್ ಕಣ್ಣಿಗೆ ಕಂಡಿದ್ದು!

What's your kid is doing on the eve of New Year?

ನಿಮ್ಮ ಮಗನೋ, ಮಗಳೋ ಯಾವುದೋ ಏರಿಯಾದಲ್ಲಿ, ಯಾವುದೋ ಕಾಲೇಜಲ್ಲಿ, ಯಾವುದೋ ತರಗತಿಯಲ್ಲಿ ಓದುತ್ತಿರಬಹುದು. ನೀವು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ, ಅವರು ಕಾಲೇಜಿನಲ್ಲಿ ಏನು ಮಾಡುತ್ತಾರೆ, ಎಷ್ಟು ಓದುತ್ತಾರೆ, ಯಾರ್ಯಾರೊಂದಿಗೆ ಇರುತ್ತಾರೆ, ಏನೇನು ಕೊಳ್ಳುತ್ತಾರೆ, ಎಂಥೆಂಥ ಸಂದೇಶಗಳನ್ನು ಮೊಬೈಲಿನಲ್ಲಿ ರವಾನಿಸುತ್ತಾರೆ ಎಂಬುದರ ಬಗ್ಗೆ ಅರಿವಿದೆಯಾ?

ಬೋನ್ಸಾಯ್ ಗಿಡದಂಥ ಹೇರ್ ಕಟ್ ಮಾಡಿಸಿಕೊಂಡ ಪಡ್ಡೆಯ ಒಂದು ಕೈಯಲ್ಲಿ ಸಿಗರೇಟು ಹೊಗೆಯುಗುಳುತ್ತಿದ್ದರೆ, ಮತ್ತೊಂದು ಕೈ ಬೈಕ್ ಮೇಲೆ ಕುಳಿತ ಹುಡುಗಿಯ ಹೆಗಲ ಮೇಲಿಂದ ಇಳಿದು ಮತ್ತೇನನ್ನೋ ತಡಕಾಡುತ್ತಿರುತ್ತದೆ. ಇದೆಲ್ಲ ಸರ್ವೇಸಾಮಾನ್ಯ ಅಂತ ಜೀನ್ಸ್ ಟೀಶರ್ಟ್ ಆ ಹುಡುಗಿಯೂ ಮೈಮರೆತಿರುತ್ತಾಳೆ. ದಿನನಿತ್ಯ ಇಂಥದೇ ಕೆಲಸದಲ್ಲಿ ತೊಡಗುವ ಈ ಮನಸ್ಸುಗಳು ಹೊಸವರ್ಷಕ್ಕೆ ಇನ್ನೇನು ಪ್ಲಾನ್ ಹಾಕಿಕೊಂಡಿರುತ್ತವೆಯೋ?

ಮಕ್ಕಳ ಮೇಲೆ ಸಂದೇಹ ಪಡುವ ಪ್ರಶ್ನೆಯೇ ಇಲ್ಲ. ಇಂದಿನ ಮಕ್ಕಳ ಮನಸ್ಸು ಸಿಕ್ಕಾಪಟ್ಟೆ ಸೂಕ್ಷ್ಮ. ಒಂದು ಮಾತು ಆಡಿದರೆ ಜಾಸ್ತಿ, ಒಂದು ಮಾತು ಆಡದೇ ಹೋದರೆ ಕಮ್ಮಿ. ಬೈಯುವುದು ಅತ್ಲಾಗಿರಲಿ, 'ಯಾಕಮ್ಮ ಹೀಗೆ' ಅಂತ ಕೇಳುವ ಹಾಗೂ ಇಲ್ಲ. ಏನಾದ್ರೂ ಹೆಚ್ಚೂಕಮ್ಮಿ ಮಾಡ್ಕೊಂಡ್ರೆ ಎಂಬ ಹೆದರಿಕೆಯಿಂದಲೇ ಎಚ್ಚರಿಕೆಯ ನಡೆಗಳನ್ನು ಪೋಷಕರು ಇಡುವಂಥ ಕಾಲ.

What's your kid is doing on the eve of New Year?

ಜಮಾನಾ ಬದಲಾಗಿದೆ. ಮೋಜು ಮಾಡುವುದು, ಅದಕ್ಕಾಗಿ ಅಲ್ಪಸ್ವಲ್ಪ ಹಣ ವ್ಯಯಿಸುವುದು, ಹುಡುಗ ಹುಡುಗಿಯರು ಪರಸ್ಪರ ಸಂಗ ಬಯಸುವುದು ತಪ್ಪಲ್ಲ. ಆದರೆ, ಈ ಮುಗ್ಧವಲ್ಲದ ಮುಗ್ಧ ಮನಸ್ಸುಗಳು ದಾರಿ ತಪ್ಪುತ್ತಿವೆಯಾ ಎಂಬುದನ್ನು ಅರಿತುಕೊಳ್ಳದಿದ್ದರೆ, ಕೊನೆಗೆ ಪಶ್ಚಾತ್ತಾಪ ಪಡುವವರು ನೀವೇ. ಇದು ಯಾರಿಗೂ ಉಪದೇಶ ಮಾಡುವ ಸಮಯವೂ ಅಲ್ಲ, ಸಂದರ್ಭವೂ ಅಲ್ಲ. ಉಪದೇಶವನ್ನು ಯಾರೂ ಕೇಳುವುದೂ ಇಲ್ಲ.

ಆದರೆ, ಆದರೆ, ಆದರೆ... ಹೊಸವರ್ಷದ ಮುನ್ನಾ ದಿನ ನಿಮ್ಮ ಮುದ್ದಿನ ಕಂದ ಯಾರೊಂದಿಗಿರುತ್ತಾರೆ, ಅವರೊಂದಿಗೆ ಏನು ಮಾಡುತ್ತಾರೆ, ಎಷ್ಟೊತ್ತಿಗೆ ಮನೆ ಸೇರುತ್ತಾರೆ ಎಂಬುದನ್ನು ಗಮನವಿಡುವುದು ಲೇಸು. ಮಿಂಚಿಹೋದ ಮಾತಿಗೆ ಚಿಂತಿಸಿ ಫಲವಿಲ್ಲ ಎಂಬಂತಹ ಸ್ಥಿತಿ ನಿಮ್ಮದಾಗಬಾರದು. ಕಳೆದ ವರ್ಷ ಎಂಜಿ ರಸ್ತೆಯಲ್ಲಿ ಏನು ಘಟಿಸಿತು ಎಂಬುದು ನಿಮ್ಮ ಗಮನಕ್ಕೂ ಬಂದಿರಬಹುದು. ಏನೇ ಆಗಲಿ, ಹೊಸವರ್ಷ ನಿಮ್ಮ ಮನೆಯಲ್ಲಿ ಸಂತಸದ ಬುಗ್ಗೆ ಚಿಮ್ಮಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Year is just few hours away. What are your plans to celebrate the new year? What's your kid is doing? Are they going out with friends for a memorable celebration? Parents, keep a watch.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ