ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲತರಂಗ ಓದಿ..ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ..

By Staff
|
Google Oneindia Kannada News

ಬಾಯಾರಿತು ಎಂದು ಬಾವಿ ನೀರಿಗೆ ಪೋದೆ ಬಾವಿ ಜಲಬತ್ತಿ ಬರಿದಾಯ್ತೊ ಹರಿಯೆ..ಎಂದುಮುಂತಾಗಿ ಭಕ್ತಿಪರಂಪರೆಯ ದೃಷ್ಟಾರರು ಹಾಡಿ ಯಾವುದೋ ಕಾಲವಾಯಿತು.ಇದು ನಿತ್ಯ ಕಲಿಯುವವರ ಕಲಿಯುಗ ಸ್ವಾಮಿ.ನಿರೀಕ್ಷೆಗಳು ಹುಸಿಯಾಗಿ ಭರವಸೆಗಳು ಸುಳ್ಳಾಗಿ ನಂಬಿಕೆಗಳೇ ಮುಳ್ಳಾದಾಗ ಮಾಡುವುದೆಂತು? ಓದಿ..ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ..

  • ಡಾ. ಮೈ.ಶ್ರೀ.ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್
ಆಗಿಂದಾಗ್ಗೆ ಜೀವನದಬಗ್ಗೆ ನಂಬಿಕೆಯನ್ನೇ ಕಳೆದುಕೊಳ್ಳುವಂಥ ನಿರಾಶಾದಾಯಕ ಪರಿಸ್ಥಿತಿ ಇದ್ದಕ್ಕಿದ್ದಂತೆ ಉಂಟಾಗುತ್ತದೆ. ಯಾರನ್ನು ನೀವು ಆಪ್ತಮಿತ್ರರೆಂದು ನಂಬಿದ್ದೀರೋ ಅವರು ನಿಮ್ಮ ಬೆನ್ನಿಗಿರಿಯುತ್ತಾರೆ. "ಎಲವೋ ಬ್ರೂಟಸ್, ನೀನೂ ಇರಿದೆಯ?" ಎಂದು ನೀವು ಸಂಕಟಪಡುತ್ತೀರಿ. ಒಮ್ಮೊಮ್ಮೆ, ಕೆಲಸದೆಡೆ, ಮೇಲಧಿಕಾರಿಗಳೋ, ಕೈಕೆಳಗಿನವರೋ ಅಥವಾ ಸಮಾನರೋ ನಿಮ್ಮ ಪತನಕ್ಕೆ ಕಾರಣರಾಗುತ್ತಾರೆ. ಅವರಿಂದಾಗಿ, ನಿಮಗೆ ದೊರಕಬೇಕಾದ್ದು ಕೈಗೆ ಸಿಕ್ಕದೇ ಹೋಗಬಹುದು. ಆಗಿಂದಾಗ್ಗೆ, ನೀವು ವ್ಯಾಪಾರದಲ್ಲಿ ವಂಚನೆಗೊಳಗಾಗುತ್ತೀರಿ. ಸ್ಟಾಕುಕಟ್ಟೆಯಲ್ಲಿ ಕೊಚ್ಚಿಹೋಗುತ್ತೀರಿ. ಖಾಯಿಲೆ-ಕಸಾಲೆ, ಸಾವು-ನೋವು, ಹೀಗೆ ಒಂದಲ್ಲ ಒಂದು ಕಾರಣದಿಂದ ಸುತ್ತಲೂ ಬರಿ ಕತ್ತಲೆಯಿಂದ ಆವರಿಸಲ್ಪಟ್ಟು, ದಾರಿಗಾಣದೇ "ಅಯ್ಯೋ ದೇವರೇ, ನೀನೆಲ್ಲಿದ್ದಿ? ನಿಜವಾಗಿ ಇದ್ದೀಯೋ ಅಥವಾ ನೀನು ಬರೀ ಕಲ್ಲೋ? ನಿನಗೆ ನಿತ್ಯ ಕೈಮುಗಿದು ಬೇಡುತ್ತೇನಲ್ಲ, ಏಕೆ ನನ್ನ ಕೈಬಿಟ್ಟೆ?" ಮುಂತಾಗಿ ಕೊರಗುತ್ತೀರಿ.
ಅದು ಅವನಿಗೆ ಕೇಳುತ್ತದೋ ಇಲ್ಲವೋ ಅವನಿಗೆ ಮಾತ್ರ ಗೊತ್ತು. ಇಂಥಾ ಸಂದರ್ಭಗಳಲ್ಲಿ ಸಹಾಯವಾಗಲೆಂದು ಯಾರೋ ಪುಣ್ಯಾತ್ಮರು "ಮಗು, ನಂಬಿಕೆ ಕಳೆದುಕೊಂಡರೆ ಇನ್ನೇನಿದೆ ಬಾಕಿ? ನಂಬಿಕೆ ಇಟ್ಟುಕೋ" ಎಂದು ಕಿವಿಯಲ್ಲಿ ಉಸುರುತ್ತಾರೆ. (ಅಥವಾ ಯಾರೋ ಉಸುರಿದರು ಎಂಬ ಭ್ರಮೆಯಿಂದ ನೀವು ಹಾಗಂದುಕೊಂಡರೂ ಸರಿ.) ಚಿಂತೆಯಲ್ಲಿ ಮುಳುಗಿ ನಿದ್ರೆಗೆಟ್ಟು ಅತ್ತಲಿಂದಿತ್ತ ಹೊರಳಾಡುತ್ತಿರುವಾಗ ಯಾವುದೋ ಅಶರೀರವಾಣಿ ನುಡಿಯುತ್ತದೆ.

ಎಷ್ಟೇ ಕಷ್ಟಬಂದರೂ ಬಾಳಿಗೊಂದು ನಂಬಿಕೆ ಇರಬೇಕು. ಕಷ್ಟ ಬಾರದಿದ್ದರೂ ನಂಬಿಕೆಯಿಲ್ಲದೇ ಬದುಕುವುದು ಕಷ್ಟ. ಜ್ಞಾನಿಗಳು, ಎಲ್ಲವನ್ನೂ ಸಮಚಿತ್ತದಿಂದ ನೋಡುತ್ತಾರೆ. ಆವರು ಲಾಭ-ನಷ್ಟ, ಸೋಲು-ಗೆಲುವು, ಕೀರ್ತಿ-ಅಪಮಾನ, ಸುಖ ದುಃಖ, ಎಲ್ಲವನ್ನೂ ಒಂದೇ ಸಮನಾಗಿ ನೋಡುವ "ಸ್ಥಿತಃಪ್ರಜ್ಞರು. ಆದರೆ, ನಮ್ಮಂಥಾ ಹುಲುಮಾನವರ ಗತಿಯೇನು? ನಾವು, ಮಗು ತಾಯಿಯ ಎದೆಯನ್ನು ಅಪ್ಪಿ ರಕ್ಷಣೆಪಡೆಯುವಂತೆ ಯಾವುದೋ ಅವ್ಯಕ್ತಶಕ್ತಿಗೆ ಕೈಮುಗಿದು, "ಅನ್ಯಥಾ ಶರಣಂ ನಾಸ್ತಿ ನೀನಲ್ಲದೇ ನನಗಿನ್ನಾರುಗತಿ" ಎಂದು ಬೇಡಿಕೊಂಡು ಎಲ್ಲರನ್ನೂ ರಕ್ಷಿಸುವ ಆ ಜಗದೀಶ ನಮ್ಮನ್ನೂ ರಕ್ಷಿಸುತ್ತಾನೆ ಎಂದು ನಮಗೆ ನಾವೆ ಸಾಂತ್ವನ ಹೇಳಿಕೊಳ್ಳುತ್ತಾ ಕಾಣದ ಅಭಯಹಸ್ತವನ್ನು ಊಹಿಸಿಕೊಳ್ಳುತ್ತೇವೆ. ಒಳ್ಳೆಯವರಿಗೂ ಎಷ್ಟೋ ಸಲ ಕೆಟ್ಟದಾಗುತ್ತದೆ, ಕೆಟ್ಟವರಿಗೂ ಒಳ್ಳೆಯದಾಗುತ್ತದೆ, ಯಾರಿಗೆ ಯಾವಾಗ ಒಳ್ಳೆಯದು ಅಥವಾ ಕೆಟ್ಟದ್ದು ಆಗುತ್ತದೋ ಅದನ್ನು ನಾವು ಊಹಿಸಿಕೊಳ್ಳಲಾರೆವು. ಇದು ಜೀವನದ ಅನಿಶ್ಚಿತತೆ.

ಜೀವನದ ಕಷ್ಟನಷ್ಟಗಳ ನಡುವೆ ಮನುಷ್ಯನಿಗಿರುವುದು ಒಳ್ಳೆ ಮಾತುಗಳು ಮಾತ್ರ. ಆಗಾಗ್ಗೆ ಅಲ್ಲಲ್ಲಿ ಯಾರೋ ಪುಣ್ಯಾತ್ಮರು ಒಳ್ಳೊಳ್ಳೆ ಮಾತುಗಳನ್ನಾಡಿ ಸದ್ದಿಲ್ಲದೇ ಕಣ್ಮರೆಯಾಗಿಬಿಡುತ್ತಾರೆ. ಅವರ ಮಾತುಗಳು ಮಾತ್ರ ಉಳಿದುಕೊಳ್ಳುತ್ತವೆ. ಒಬ್ಬರ ಬಾಯಿಂದ ಹಲವಾರು ಜನರ ಕಿವಿಗಳಿಗೆ, ಕಣ್ಣುಗಳಿಗೆ ಹರಡುತ್ತ ಸುತ್ತಾಡುತ್ತವೆ. ಇತ್ತೀಚಿನ ಗಣಕಜಗತ್ತಿನಲ್ಲಿ ಇಂಥಾ ಸುತ್ತೋಲೆಗಳು ಹಲವಾರು ಬರುತ್ತವೆ. ಗಣಕವನ್ನು ತೆರೆದರೆ ಸಾಕು, ಬೇಕಾದ, ಬೇಡವಾದ, ಉಪಯುಕ್ತ, ನಿರುಪಯುಕ್ತ, ಆಹ್ವಾನಿತ, ಅನಾಹ್ವಾನಿತ, ನಿರೀಕ್ಷಿತ ಮತ್ತು ಅನಿರೀಕ್ಷಿತ ಹಿತೋಪದೇಶಗಳು ಬರುತ್ತವೆ. ಹೀಗೆ ಇತ್ತೀಚೆಗೆ ಬಂದ ಒಂದಿಷ್ಟು ಸುಭಾಷಿತಗಳು ನಮ್ಮ ಬಾಳಿನ ನಂಬಿಕೆಯನ್ನು ರೂಪಿಸಿಕೊಳ್ಳಲು ಉಪಯೋಗವಾಗಬಹುದು ಎನ್ನಿಸಿ, ಕನ್ನಡಿಸಿ ಜಾಲತಂಗದ ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇಗೋ ಓದಿ.

  • ಒಬ್ಬರೊಡನೆ ಮತ್ತೊಬ್ಬರು ವಾದಮಾಡುತ್ತಾರೆಂಬ ಕಾರಣದಿಂದ ಅವರು ಪರಸ್ಪರ ಪ್ರೀತಿಸುವುದಿಲ್ಲವೆಂದು ತಿಳಿಯಬೇಡಿ. ಇಬ್ಬರ ನಡುವೆ ವಾಗ್ವಾದ ನಡೆಯುವುದಿಲ್ಲವೆಂಬ ಕಾರಣದಿಂದ ಅವರು ಪರಸ್ಪರ ಪ್ರೀತಿಸುವರೆಂದೂ ನಂಬಬೇಡಿ.
  • ಗೆಳೆಯರನ್ನ/ಗೆಳತಿಯರನ್ನ ಬದಲಾಯಿಸಲು ಯತ್ನಿಸಬೇಡಿ, ಬದಲಾಗಬೇಕಾದ ಸಂದರ್ಭಬಂದಾಗ, ಬದಲಾಗಲು ಸಾಧ್ಯವಿದ್ದರೆ, ಅವರು ತಮ್ಮಷ್ಟಕೆ ತಾವೇ ಬದಲಾಗಲಿ, ಬಿಡಿ.
  • ಎಷ್ಟೇ ಆತ್ಮೀಯ ಗೆಳೆಯರಾಗಿದ್ದವರೂ ಒಮ್ಮೊಮ್ಮೆ ನಿಮ್ಮನ್ನು ನೋಯಿಸಿಯೇ ನೋಯಿಸುತ್ತಾರೆ. ಅಂಥವರನ್ನು ಮನ್ನಿಸಿಬಿಡಿ.
  • ಎಷ್ಟೇ ದೂರದಲ್ಲಿದ್ದರೂ, ನಿಜವಾದ ಮೈತ್ರಿ ಬೆಳೆದೇ ತೀರುತ್ತದೆ. ಪ್ರೇಮವೂ ಹಾಗೆ.
  • ಒಮ್ಮೊಮ್ಮೆ, ಕ್ಷಣಮಾತ್ರದಲ್ಲಿ ನೀವು ಮಾಡಿದ ಕ್ರಿಯೆ ಅಥವಾ ತೀರ್ಮಾನ ಇಡೀ ಜೀವನ ನೀವು ಕೊರಗುವಂತೆ ಮಾಡಿಬಿಡಬಹುದು.
  • ನೀವು ಏನಾಗಬಯಸುತ್ತೀರೋ ಅದಾಗಲು ನೀವು ಅಂದುಕೊಂಡಿದ್ದಕ್ಕಿಂತ ದೀರ್ಘಕಾಲ ಬೇಕಾಗಬಹುದು.
  • ಪ್ರೀತಿಪಾತ್ರರಿಗೆ ವಿದಾಯ ಹೇಳುವಾಗ ಅತ್ಯಂತ ಸ್ನೇಹಪೂರ್ಣ ಮಾತುಗಳನ್ನೇ ಆಡಿ. ಅವರನ್ನು ನೀವು ಮತ್ತೊಮ್ಮೆ ನೋಡದೇ ಇರಬಹುದಾದಂಥ ಪ್ರಸಂಗ ಬರಬಹುದು.
  • ಕೆಲವೊಮ್ಮೆ, "ಸಾಕಪ್ಪ, ಇನ್ನು ನಾನು ಒಂದು ಹೆಜ್ಜೆಯನ್ನೂ ಮುಂದಿಡಲಾರೆ" ಎಂದುಕೊಂಡಮೇಲೂ, ನಿಮ್ಮ ಊಹೆಗೂ ನಿಲುಕದಷ್ಟು ಮುಂದೆ ಸಾಗಬಲ್ಲಿರಿ.
  • ನಮ್ಮ ಮನಸ್ಸಿನ ಅನಿಸಿಕೆ ಹೇಗೇ ಇರಲಿ, ನಮ್ಮ ಕ್ರಿಯೆಗೆ ನಾವೇ ಹೊಣೆ.
  • ನಿಮ್ಮ ಸ್ವಭಾವ ನಿಮ್ಮ ಅಧೀನದಲ್ಲಿರದಿದ್ದರೆ, ನಿಮ್ಮ ಸ್ವಭಾವದ ಅಧೀನದಲ್ಲಿ ನೀವಿರುತ್ತೀರಿ.
  • ನಿಜವಾದ ನಾಯಕರು, ಪರಿಣಾಮವನ್ನು ಲೆಕ್ಕಿಸದೇ, ತಾವು ಮಾಡಲೇಬೇಕಾದ್ದನ್ನು, ಮಾಡಲೇಬೇಕಾದಾಗ, ಮಾಡಿಯೇ ತೀರುತ್ತಾರೆ.
  • ಹಣದಿಂದ ಎಲ್ಲಾ ಲೆಕ್ಕಾಚಾರಗಳನ್ನೂ ತೀರಿಸಲಾಗುವುದಿಲ್ಲ.
  • ನೀವು ಕೆಳಗೆ ಬಿದ್ದಾಗ, ತುಳಿಯಲು ಅನೇಕರು ಮುಂದಾಗುತ್ತಾರೆ. "ಇಗೋ ಇವರೂ ನನ್ನನು ಒದ್ದು ತುಳಿಯುತ್ತಾರೆ" ಎಂದುಕೊಳ್ಳುತ್ತಿರುವಾಗಲೇ, ಅವರಲ್ಲೇ ಒಬ್ಬರು ನಿಮ್ಮನ್ನು ಹಿಡಿದು ಮೇಲೇಳಲು ಸಹಾಯಹಸ್ತವನ್ನು ಚಾಚಬಹುದು.
  • ಹಲವೊಮ್ಮೆ ವಿಪರೀತ ಕೋಪ ಬರುತ್ತದೆ ಎನಿಸಿದಾಗ, ನಿಮ್ಮ ಕೋಪ ಸಕಾರಣವಾಗಿದ್ದು ಹಾಗೆ ಕೋಪಮಾಡಿಕೊಳ್ಳುವುದು ನಿಮ್ಮ ಹಕ್ಕಾಗಿದ್ದರೂ ಕ್ರೌರ್ಯವನ್ನು ಪ್ರದರ್ಶಿಸುವುದು ನಿಮ್ಮ ಹಕ್ಕಲ್ಲ.
  • ನಿಮ್ಮ ಪ್ರೌಢಿಮೆಯ ಕುರುಹು ನಿಮ್ಮ ಅನುಭವಗಳು ಎಂತಹವು, ಮತ್ತು ಆ ಅನುಭವಗಳಿಂದ ನೀವು ಏನನ್ನು ಕಲಿತಿರಿ ಎಂಬುದೇ ಹೊರತು, ನೀವು ಎಷ್ಟು ಹುಟ್ಟುಹಬ್ಬಗಳನ್ನು ಆಚರಿಸಿದ್ದೀರಿ ಎಂದಲ್ಲ.
  • ಇತರರ ಕ್ಷಮೆಗೆ ಪಾತ್ರರಾಗುವುದಷ್ಟೇ ಸಾಲದು, ನಿಮ್ಮ ಕ್ಷಮೆಗೂ ನೀವು ಒಮ್ಮೊಮ್ಮೆಯಾದರೂ ಪಾತ್ರರಾಗಬೇಕು.
  • ನಿಮ್ಮ ಹೃದಯ ಎಷ್ಟೇ ಆಘಾತಕ್ಕೆ ಒಳಗಾಗಿದ್ದರೂ, ಈ ಜಗತ್ತು ನಿಮ್ಮ ಕೊರಗನ್ನು ಕೇಳಲು ನಿಲ್ಲುವುದಿಲ್ಲ.
  • ನಾವು ಯಾರು ಎಂಥವರು ಎಂಬುದನ್ನು ನಮ್ಮ ಹಿನ್ನೆಲೆ ಮತ್ತು ವಾತಾವರಣ ನಿರ್ಧರಿಸಬಹುದಾದರೂ, ನಾವು ಏನಾಗಬಯಸುತ್ತೇವೆ ಎಂಬುದನ್ನು ನಿರ್ಧರಿಸುವವರು ನಾವೇ
  • ಇಬ್ಬರು ಒಂದೇ ದೃಶ್ಯವನ್ನು ನೋಡಿದರೂ ಸಂಪೂರ್ಣ ಭಿನ್ನವಾದ ಎರಡು ಚಿತ್ರಗಳನ್ನು ಕಾಣಬಹುದು.
  • ನಿಮ್ಮನ್ನು ನೋಡದ, ಅರಿಯದ ಯಾರೋ ಅಪರಿಚಿತರು ಕೆಲವೇ ಘಂಟೆಗಳಲ್ಲಿ ನಿಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿಬಿಡಬಹುದು.
  • ಇತರರಿಗೆ ಕೊಡಲು ನಮ್ಮಬಳಿ ಏನೂ ಉಳಿದಿಲ್ಲವೆಂದು ಭಾವಿಸಿದಮೇಲೂ, ಹತ್ತಿರದ ಬಂಧುವೋ ಮಿತ್ರನೋ ಗೋಗರೆದಾಗ, ಕೊಡುವ ಶಕ್ತಿ ನಮ್ಮಲ್ಲಿ ಇದ್ದೇ ಇರುತ್ತದೆ.
  • ಗೋಡೆಗಳಮೇಲೆ ನೇತುಹಾಕಿದ ಪ್ರಮಾಣಪತ್ರಗಳು, ಪ್ರಶಂಸಾಪತ್ರಗಳು ನಿಮ್ಮನ್ನು ಮಹಾತ್ಮರನ್ನಾಗಿ ಮಾಡುವುದಿಲ್ಲ
  • ನಿಮಗೆ ಯಾರಮೇಲೆ ಅತ್ಯಂತ ಕಾಳಜಿ ಇರುತ್ತದೋ, ಅವರನ್ನೇ ದೈವ ನಿಮ್ಮಿಂದ ಕಸಿದುಕೊಳ್ಳಬಹುದು.
  • ನಿಜವಾದ ಸುಖಿಗಳು ಅತ್ಯಮೂಲ್ಯವಾದದ್ದನ್ನೆಲ್ಲ ಹೊಂದಿರುವುದಿಲ್ಲ. ತಮ್ಮಬಳಿ ಇರುವುದನ್ನೇ ಅತ್ಯಮೂಲ್ಯವಾಗುವಂತೆ ಮಾಡಿಕೊಳ್ಳುತ್ತಾರೆ, ನೋಡಿಕೊಳ್ಳುತ್ತಾರೆ.
ಮೂಲ ಆಂಗ್ಲದಲ್ಲಿದ್ದ ಈ ಸುತ್ತೋಲೆಯನ್ನು ನನಗೆ ಕಳುಹಿಸಿ ಉಪಕರಿಸಿದ್ದು ನನ್ನ ಚಡ್ಡಿ ಸ್ನೇಹಿತ ಹರಿ ಸರ್ವೋತ್ತಮ ದಾಸ್. ನನಗಿಂತ ಕೊಂಚ ಕಿರಿಯನಾದರೂ, ನನಗಿಂತ ಮುಂಚೆ ಇತ್ತೀಚೆಗೆ ತಾತನಾಗಿ ಮೊಮ್ಮಗುವಿನೊಂದಿಗೆ ಖುಷಿಪಡುತ್ತಿರುವಾತ! (ದೊಡ್ಡ) "ಹರಿಸರ್ವೋತ್ತಮ"ನ ದಯೆ ಎಲ್ಲರಮೇಲಿರಲೆಂದು ಪ್ರಾರ್ಥಿಸುತ್ತ, ಅಂಥಾ ದಯೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆನಿಸಿದರೆ, ನಿಮ್ಮ ಗೆಳೆಯ-ಗೆಳತಿಯರಿಗೆ ಈ ಕನ್ನಡದ ಸುತ್ತೋಲೆಯನ್ನು ರವಾನಿಸುವಿರಿ ಎಂದು ನಂಬುತ್ತ ವಿರಮಿಸುವೆ ಮುಂದಿನ ಕಂತಿನವರೆಗೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X