• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆವರಣ : ಸತ್ಯ ಮತ್ತು ಸೌಂದರ್ಯದ ನಡುವೆ ತಾಕಲಾಟ

By Staff
|

ಮತ್ತೊಂದು ಮುಖ್ಯ ಪ್ರತಿಕ್ರಿಯೆ ಎಂದರೆ, ಆವರಣ ಕಾದಂಬರಿಯ ಯಾವ ಪಾತ್ರವೂ ಮತ್ತೆ ಮತ್ತೆ ಬಂದು ನನ್ನನ್ನು ಬಾಧಿಸಲಿಲ್ಲ, ನನ್ನೊಡನೆ ವಾದಮಾಡಲಿಲ್ಲ. ನನ್ನನ್ನು ತೀವ್ರವಾಗಿ ಕಾಡಲಿಲ್ಲ. ಅಲ್ಲಿನ ಯಾವ ಪಾತ್ರವನ್ನೂ ನಾನು ದ್ವೇಷಿಸಲಿಲ್ಲ ಅಥವಾ ಪ್ರೀತಿಸಲೂ ಇಲ್ಲ, ಗೌರವಿಸಲೂ ಇಲ್ಲ. ಹಿಂದೆ ನಾನು ಭೈರಪ್ಪನವರ ಇತರ ಕಾದಂಬರಿಗಳನ್ನು ಓದಿದಾಗ ಅವರ ಕಥೆಯಿಂದ ತಪ್ಪಿಸಿಕೊಂಡು ಹೊರಬರಲು ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಗಿದ್ದವು ಎಂಬುದನ್ನು ನೆನೆಸಿಕೊಂಡಾಗ, ನನ್ನ ನಿರಾಸೆಗೆ ಅದೇ ಕಾರಣವಿದ್ದರೂ ಇರಬಹುದೆಂಬ ತೀರ್ಮಾನಕ್ಕೆ ನಾನು ಬರಬೇಕಾಯಿತು. ಪುಸ್ತಕ ಓದಿ ಮುಗಿಸಿದಮೇಲೆ, ಒಂದು ರೀತಿಯ ವಿಷಾದ ಮತ್ತು ಖಾಲೀತನದ ಅನುಭವವಾಯಿತೇ ವಿನಃ ರಸಾಸ್ವಾದನೆಯ ತೃಪ್ತಿ ದೊರಕಲಿಲ್ಲ. ಸುದೀರ್ಘ ಸಂಭಾಷಣೆಯನ್ನು ಅರ್ಧಂಬರ್ಧ ಕೇಳಿಸಿಕೊಂಡಂತೆ ಭಾಸವಾಯಿತು.

ಈ ಪುಸ್ತಕದ ಬಗ್ಗೆ ಈಗಾಗಲೇ ಅನೇಕ ಸಂವಾದಗಳೂ ಚರ್ಚೆಗಳೂ ಏರ್ಪಟ್ಟಿವೆ ಎಂದು ಕೇಳಿದ್ದೇನೆ. ಅಲ್ಲದೇ ಹಲವು ಪತ್ರಿಕೆಗಳಲ್ಲಿ ಲೇಖನಗಳೂ ಪ್ರಕಟವಾಗಿವೆ (ಎಲ್ಲವನ್ನೂ ಓದಲಾಗಿಲ್ಲ). ಅಂತರ್ಜಾಲದಲ್ಲಿ ಹಲವಾರು ಸ್ವತಂತ್ರ ಬರಹಗಾರರು ‘ಬ್ಲಾಗ್‌’ಇಸುತ್ತಲೇ ಇದ್ದಾರೆ. ಹೀಗಾಗಿ, ಯಾರೂ ಹೇಳಿರದ ಅಥವಾ ಯಾರಿಗೂ ಹೊಳೆದಿರದ ವಿಚಾರವನ್ನು ನಾನು ಮಂಡಿಸುವೆನೆಂಬ ಹಮ್ಮು ನನಗಿಲ್ಲವೆಂದು ನಿಸ್ಸಂಕೋಚವಾಗಿ ಹೇಳಬಯಸುತ್ತೇನೆ!

***

’ಆವರಣ’ ಒಂದು ದೃಷ್ಟಿಯಿಂದ ನೋಡಿದರೆ ಕಾದಂಬರಿಗಿಂತ ಭಿನ್ನವಾದ ಕೃತಿ. ಐತಿಹಾಸಿಕ ಕಾದಂಬರಿಯಾದರೂ ಕಾಲ್ಪನಿಕ. ಕಾಲ್ಪನಿಕವಾದರೂ ಐತಿಹಾಸಕ. ಹಿಂದೆ ಅವರು ಬರೆದ ‘ಸಾರ್ಥ’ ಕೂಡ ಐತಿಹಾಸಿಕ ಕಾದಂಬರಿ. ಶಂಕರಾಚಾರ್ಯರ ಕಾಲದ ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸ್ಥಿತಿಯನ್ನು ಅಂದಿನ ಭೌಗೋಳಿಕ ವಾತಾವರಣದಲ್ಲಿ ಕಲ್ಪಿಸಿಕೊಂಡು ಸೃಷ್ಟಿಸಿದ್ದ ಕಥಾನಕ. ಆದರೆ ಆವರಣ ಕಾದಂಬರಿಯ ಸಮಯ ಮತ್ತು ಚೌಕಟ್ಟು, ಔರಂಗಜೇಬನ ಆಳ್ವಿಕೆಯ ಐತಿಹಾಸಿಕ ಸಂದರ್ಭ. ಸಾರ್ಥದಲ್ಲಿದ್ದ ಕಲ್ಪನಾಸ್ವಾತಂತ್ರ್ಯ ಆವರಣದಲ್ಲಿರಲು ಸಾಧ್ಯವಿಲ್ಲ.

ಮೊಗಲರ ಕಾಲದ ಅಂದಿನ ಸಾಮಾಜಿಕ, ಚಾರಿತ್ರಿಕ ಸನ್ನಿವೇಶವನ್ನು ತಮ್ಮ ಕಥಾನಾಯಕಿಯ ಕೈಯಲ್ಲಿ ಬರೆಸುತ್ತ, ‘‘ಇದು ಚರಿತ್ರೆಯೇ?’’ ಎಂದು ಕೇಳುವವರಿಗೆ, ‘‘ಅಲ್ಲ ಇದು ಕಾಲ್ಪನಿಕ ಕಥೆ’’ ಎನ್ನುವಂತೆಯೂ, ‘‘ಇದು ಕಾದಂಬರಿಯೇ?’’ ಎಂದು ಕೇಳುವವರಿಗೆ, ‘‘ಅಲ್ಲ, ಇದು ಇತಿಹಾಸ’’ ಎನ್ನುವಂತಹ ಇಬ್ಬಗೆಯ ಅನುಕೂಲವನ್ನು (ಡಬ್ಬಲ್‌ ಅಡ್ವಾಂಟೇಜ್‌) ಸಂಪಾದಿಸುವ ಜಾಣ್ಮೆಯ ತಂತ್ರ ಆವರಣದಲ್ಲಿದೆ.

ಇದರಲ್ಲಿ ಪಾತ್ರಗಳಿವೆ, ಆದರೆ ಅವು ಅವರ ಇತರ ಕಾದಂಬರಿಗಳ ಪಾತ್ರಗಳಂತೆ ಬೆಳೆಯುವುದಿಲ್ಲ. ಭೈರಪ್ಪನವರು ಮಾಡಹೊರಟಿರುವ ಸತ್ಯಾನ್ವೇಷಣೆಗೆ ಅಂದರೆ, ‘‘ಆವರಣಶಕ್ತಿಯ ಹಿಡಿತವನ್ನು ವಿಷದಪಡಿಸಬೇಕೆಂಬ ಉತ್ಕಟವಾದ ಅಭಿಲಾಷೆ’’ಯನ್ನು ಪೂರೈಸಿಕೊಳ್ಳಲು ಅವು ಪೂರಕಗಳಾಗುವಷ್ಟು ಮಾತ್ರ ಬೆಳೆಯುತ್ತವೆ ಆದರೆ ತೀರ ಸಪ್ಪೆ ಎನಿಸುವಷ್ಟು ಏಕಮುಖಪಾತ್ರಗಳಾಗಿಬಿಡುವುದರಿಂದ ಅವರ ಇತರ ಕಾದಂಬರಿಗಳ ಪ್ರಮುಖ ಪಾತ್ರಗಳಂತೆ ಮನಸ್ಸಿನಲ್ಲಿ ಬಹುಕಾಲ ಉಳಿಯಬಹುದಾದ ಶಕ್ತಿಯನ್ನು ಕಳೆದುಕೊಳ್ಳುತ್ತವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡದೇ ಬಿಡಲಿಲ್ಲ.

ಅವರೇ ಲಕ್ಷ್ಮಿ (ರಜಿಯ) ಕೈಯಲ್ಲಿ ಹೇಳಿಸಿರುವಂತೆ, (ಪುಟ 101) ಇದು ಕಾದಂಬರಿಯೋ (ಸಾಹಿತ್ಯಕೃತಿಯೋ) ಅಥವಾ (ಐತಿಹಾಸಿಕ) ಕಥಾನಕವೋ ಎಂಬ ಪ್ರಶ್ನೆಯನ್ನು ಅವರೇ ಎತ್ತಿ, ಸೌಂದರ್ಯ ಮತ್ತು ಸತ್ಯಗಳ ತಾಕಲಾಟವಾದಾಗ ಗೆಲ್ಲಬೇಕಾದ್ದು ಸತ್ಯವೇ ಹೊರತು ಸೌಂದರ್ಯವಲ್ಲ ಎಂಬ ಸಮಾಧಾನವನ್ನೂ ಒದಗಿಸಿದ್ದಾರೆ. ಆದರೆ, ಇಲ್ಲಿ ನಡೆಯುವ ತಾಕಲಾಟದಲ್ಲಿ ಸತ್ಯವೇನೋ ಬೇಕಾದಷ್ಟಿದೆ, ಸೌಂದರ್ಯ ಹೇಳಿಕೊಳ್ಳುವಷ್ಟೇನೂ ಇಲ್ಲವೇನೋ ಎಂಬ ಭಾವನೆ ಹಲವಾರು ಬಾರಿ ನನ್ನನ್ನು ಕಾಡಿತು.

ಸತ್ಯಕ್ಕೆ ಮೇಲುಗೈ ಆಗುವಾಗ ಸೌಂದರ್ಯ ಸೋಲುವುದರ ಜೊತೆಗೇ ತನ್ನ ಸ್ಥಾನವನ್ನೂ ಕಳೆದುಕೊಳ್ಳಬೇಕೆ ಎಂಬ ಪ್ರಶ್ನೆ ಏಳುತ್ತದೆ. ಇದು ಅನಿವಾರ್ಯವೆನಿಸುವಂತೆ ಇಲ್ಲಿ ಅಭಿವ್ಯಕ್ತಿಗೊಂಡಿದೆ. ಸತ್ಯ ಮತ್ತು ಸೌಂದರ್ಯಗಳ ಸಮೀಕ್ಷೆಯನ್ನು ಆಳವಾಗಿ ಅಧ್ಯಯನ ಮಾಡಿರುವ ಭೈರಪ್ಪನವರ ದೃಷ್ಟಿಕೋನವನ್ನು ನಾವು ಆದರಿಸಬೇಕಾದ್ದೆ.

ಕಾದಂಬರಿಯಲ್ಲಿ ಒಂದು ಸಂದರ್ಭ ಬರುತ್ತದೆ. ರಾಮಮೂರ್ತಿ ಎಂಬ (ಅಪ್ರಸಿದ್ಧ/ಕುಪ್ರಸಿದ್ಧ?) ನಾಟಕಕಾರನೊಬ್ಬ ಬರೆದ ಒಂದು ಪ್ರಾಯೋಗಿಕ ನಾಟಕವನ್ನು ನೋಡಲು ಲಕ್ಷ್ಮಿ ಹೋಗುತ್ತಾಳೆ. ಆ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆ ನಾಟಕದಬಗ್ಗೆ ವ್ಯಕ್ತವಾಗುವ ಒಂದು ಮಾತು ನನ್ನ ಕುತೂಹಲವನ್ನು ಕೆರಳಿಸಿತು. ‘‘ಬರೆಯುವ ವಿಷಯ ಮತ್ತು ಅಳವಡಿಸುವ ತಂತ್ರ ಮೊದಲೇ ಸ್ಪಷ್ಟವಿದ್ದು ಎರಡನ್ನೂ ಜೋಡಿಸಿದರೆ ಕಲೆಯಾಗುವುದಿಲ್ಲ’’ ಎಂಬ ಮಾತು ರಾಮಮೂರ್ತಿಯ ನಾಟಕಕ್ಕೆ ಮಾತ್ರವಲ್ಲ, ಆವರಣ ಕಾದಂಬರಿಗೂ ಅನ್ವಯಿಸುವುದಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಮತ್ತೆ ಮತ್ತೆ ಬಾಧಿಸಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more