ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮದುವೆ ಬಗ್ಗೆ ಒಂದು ಲಾವಣಿ

By Staff
|
Google Oneindia Kannada News
ಸ್ವಾಗತ! ಸುಸ್ವಾಗತ!!
ನಮ್ಮ ಕರೆಗೆ ಓಗೊಟ್ಟು
ಬಂದ ನಿಮಗೆಲ್ಲ
ನಲ್ಮೆಯ ಸ್ವಾಗತ.

ನೆನ್ನೆಮೊನ್ನೆಯವರೆಗೂ
ನಮಗೆ ಸ್ವಲ್ಪ ಫಜೀತಿ
ಎಲ್ಲಿ ಹೋದರೂ ಒಂದೇ ರೀತಿ
ನೆಮ್ಮದಿಯಿಲ್ಲದ ವಿಚಿತ್ರ ಗತಿ.

"ಹೇಗೆ ನಡೆಯುತ್ತಿದೆ ತಯಾರಿ?"
ಎಂದು ಕೇಳಿ ಕೇಳಿ ತಲೆ
ಕೊರೆಯುತ್ತಿದ್ದವರೇ ಹೆಚ್ಚು
ಹಿಡಿಯುವುದೊಂದೇ ಬಾಕಿ, ಹುಚ್ಚು!

ತಲೆ ತಪ್ಪಿಸಿಕೊಂಡು ಓಡಿದೆ
ಏನು ಮಾಡಬೇಕೆಂದು ತೋಚದೇ,
ಕಸಿವಿಸಿಯ ದಿನಗಳ ಕಳೆದೆ,
ಭಂಡನಹಾಗೆ ಎಲ್ಲಾ ಪಾರ್‍ಟಿಗಳಿಗೂ ಹೋದೆ
ಒಂದೆರಡು ತಪ್ಪಿತಲ್ಲ ಎಂದು
ಕೈಕೈ ಹಿಸುಕಿಕೊಳ್ಳುತ್ತಿರುವಾಗ
ಆಷ್ಟರಲ್ಲೇ ಬಂದೇ ಬಿಟ್ಟಿತು
ಮದುವೆಯ ಈ ಸುದಿನ
ಸುಲಗ್ನಾಸ್ಸಾವಧಾನ!

*****

ಮನೆಮುಂದೆ ಚಪ್ಪರ
ಹಾಕಿಸೋಣವೆಂದರೆ
ತೆಂಗಿನ ಗರಿ ಸಿಕ್ಕುವುದಿಲ್ಲ
ಬಾಗಿಲಿಗೆ ತೋರಣ
ಕಟ್ಟೋಣವೆಂದರೆ
ಮಾವಿನಸೊಪ್ಪು ಸಿಕ್ಕುವುದಿಲ್ಲ
"ಗುಂಡಿ ತೋಡು" "ಕಂಬ ನೆಡು"
"ಏಣಿಹತ್ತು" ಎಂದೆಲ್ಲ
ಅಪ್ಪಣೆ ಕೊಡೋಣವೆಂದರೆ
ಆಳುಕಾಳುಗಳಿಲ್ಲ
ಅಂಗಡಿಯಲ್ಲಿ ಸಿಕ್ಕುವ
ಅಲಂಕಾರದ ಸೊಪ್ಪುಗಳೆಲ್ಲ
ಬರೀ ಪ್ಲ್ಯಾಸ್ಟಿಕ್ಕು
ಮಾವಿನೆಲೆ ಆಕಾರವಿಲ್ಲ
ಯಾವುದಕ್ಕು.

ಓಲಗದವರನ್ನು ಕರೆಸೋಣವೆಂದರೆ
ಓಡಬೇಕು ಕೆನಡಾ ತಂಕ
ಒಪ್ಪಿಕೊಂಡರೂ ಬರುತ್ತಾರೋ
ಕೈಕೊಡುತ್ತಾರೋ ಎಂಬ
ಆತಂಕ, ಕೊನೇತಂಕ!
ಹೋಂ-ಡಿಪೋವಿನಲ್ಲಿ ಚಿಗುರಿದ
ಬಾಳೇಕಂದು, ಅದನ್ನೇ ತಂದುಅತ್ತ ಒಂದು ಇತ್ತ ಒಂದು
ಇಟ್ಟು ಅಲಂಕರಿಸಬಹುದು

ಊಟಕ್ಕೆ ಬಾಳೆ ಎಲೆ ಬೇಕೆಂದರೆ
ಕೊರಿಯನ್ ಸ್ಟೋರಿನ ಫ್ರೀಜರಿನಲ್ಲಿ
ಹೆಪ್ಪುಗಟ್ಟಿ ರಟ್ಟಿನಂತೆ ಗಟ್ಟಿಯಾದ
ಗರಿಗರಿ ಎಲೆಯೇ ಗತಿ
ಆತುರದಲ್ಲಿ ಮಾಡಿದರೆ ಗಡಿಬಿಡಿ
ಮಡಿಕೆ ಬಿಡಿಸುವಾಗ ಪುಡಿಪುಡಿ.
ಹೋಗಲಿ ಬಿಡಿ,
ಯಾರೂ ಮಾಡುವುದಿಲ್ಲ ಭಾನ್‌ಗಡಿ
ಹಂಗಿಸುವ ನೆಂಟರಿಲ್ಲ
ಮುನಿಸಿಕೊಳ್ಳುವ ಬೀಗರಿಲ್ಲ
ಪೇಪರ್‍ಪ್ಲೇಟಿನಲ್ಲೇ
ಉಣ್ಣಲು ಎಲ್ಲರೂ ರೆಡಿ!
ಇದು ಅಮೇರಿಕಾ, ಹೇಗೆ ಅಂದರೆ
ಹಾಗೆ ನಡೆಸೋದೇ ನಮ್ಮ ರೂಢಿ.

*****

ಅಲ್ಲಿ ನಮ್ಮೂರಿನ ಮೋಜೇ ಬೇರೆ
ಛತ್ರದ ಹೊರಗೆ ಚಪ್ಪರದಲ್ಲಿ
ತೋರಣಗಳ ಪಚ್ಚೆ ಹಸಿರು
ಮಲ್ಲಿಗೆ ದಂಡೆಗಳ ಮುಡಿದು
ಮುಸಿಮುಸಿ ನಗುವ ಬೆಡಗಿಯರ
ಪರಿಮಳದ ಸ್ವಚ್ಛ ಉಸಿರು

ಛತ್ರದ ಒಳಗೆ ಒಂದರ ಹಿಂದೆ ಒಂದು
ಊಟದ ಮೇಜುಗಳ ಸಾಲುಸಾಲು
ಬಿಡಿಸಿದ ಬಿಳಿಯ ಕಾಗದದ
ತೆಳ್ಳನೆಯ ಸುರುಳಿಯ ಮೇಲೆ
ಎಳೆಯ ಹಸಿರಿನ ಬಾಳೆಯ ಸುಳಿ

ಅತ್ತ ಮಾಂಗಲ್ಯಧಾರಣೆ
ಇನ್ನೂ ಆಗಿಲ್ಲ ಅನ್ನಬೇಡಿ,
ಅದರಷ್ಟಿಗೆ ಅದು
ನಡೆದುಕೊಳ್ಳತ್ತೆ ಬಿಡಿ
ನಾವಿಲ್ಲಿ ಊಟಕ್ಕೆ ರೆಡಿ
ಏಕೆಂದರೆ, ಮೊದಲ ಪಂಕ್ತಿ
ಭಕ್ಷ್ಯಗಳೇ ರುಚಿ, ಶುಚಿ
ಎರಡನೇ ಪಂಕ್ತಿ ಎಷ್ಟಾದ್ರೂನು
ಸ್ವಲ್ಪ ಕಿಚಿ-ಕಿಚಿ

ಊಟ ಮುಗಿಸಿ ಏಳಬೇಕು
ಆದಷ್ಟೂ ಬೇಗ ಬೇಗ,
ಕೈತೊಳೆಯೋ ನಲ್ಲಿ ಹತ್ರ
ಸಿಕ್ಕೋದಿಲ್ಲ ಜಾಗ

ಎಲೆ ಅಡಿಕೆ ತಟ್ಟೆಗೆ
ಮುತ್ತಿಗೆ ಹಾಕಬೇಕಣ್ಣ
ಚಿಗುರೆಲೆ ಎಲ್ಲ ಖಾಲಿಯಾಗಿ
ಉಳಿಯೋದು ಬರೀ ಸುಣ್ಣ

ಮಕ್ಳೂಮರೀನೆಲ್ಲ ಹುಡುಕಿ
ಬೇಗ-ಬೇಗ ಕಲೆಹಾಕಿ
ಹೊತ್ತಾಗಿಬಿಟ್ರೆ ಅನಿಷ್ಟ
ಆಟೋ ಸಿಕ್ಕೋದು ಕಷ್ಟ.

****

ಇಲ್ಲಿನ ಕಥೇನೇ ಬೇರೆ
ಅಲ್ಲಿನ ಹಾಗೆ ಸಿಕ್ಕುವುದಿಲ್ಲ
ಉಡುಪಿಯ ಅಡುಗೆ ಭಟ್ರು
ಎಷ್ಟು ಹಣ ಕೊಟ್ರೂ.

ಮದ್ರಾಸ್ ಉಡುಪಿ ಮಿನರ್ವ ಅಂತ
ಹೆಸರು ಮಾತ್ರ ಬೇರೆ-ಬೇರೆ
ಒಂದೇ ಮೆನ್ಯು, ಒಂದೇ ಟೇಸ್ಟು
ತಿಂದೂ ತಿಂದೂ ಬರೀ ಬೋರೆ.

ವರಪೂಜೆ, ಧಾರೆ, ನಾಗೋಲಿ,
ಬೀಗರೌತಣ ಆದ್ಮೇಲಿ ಸಾಗೋಲಿ
ಎಲ್ಲಾಸೇರಿ ಕಾಲದಮಿತಿ ಮೂರೇ ಘಂಟೆ
ಈ ದೇಶ್‌ದಲ್ಲಿ ಟೈಮಿಂದೇ ಭಾರೀ ತಂಟೆ
ಹಾಗಂದ್‌ಮಾತ್ರಕ್ಕೆ ಮೂಗು ಮುರಿಯೋ
ವಿಷಯಾ ಏನಿಲ್ಲ ಬಿಡಿ
ಚಾ-ಚೂ ತಪ್ಪದೇ ಮಾಡಿದ್ದೀವಿ
ಇದು ಕಂಡೆನ್ಸ್ಡ್ ವರ್ಷನ್ ನೋಡಿ.

ಸೆರಗನ್ನ ಸೊಂಟಕ್ಕೆ ಸುತ್ತಿ
ತುಪ್ಪ ಬಡಿಸುವ ಬೀಗಿತ್ತಿ
ಇಲ್ಲಿಲ್ಲ ಎನ್ನಬೇಡಿ,
ತುಪ್ಪ ಬಡಿಸೋದಕ್ ನಾವೇನೋ ಸಿದ್ಧ,
ಆದರೇನು ಮಾಡೋಣ,
ಬೊಜ್ಜಿಗೆ ಬೆದರಿ ತುತ್ತಿಗೆ
ಮುತ್ತುಕೊಡುವ ಜನ
ಜಿಡ್ಡಿಗೆ ತುಂಬಾ ವಿರುದ್ಧ!

ಹತ್ತಿರದ ಬಂಧುಗಳೆಲ್ಲ
ಊರಿನಲ್ಲೇ ಉಳಿದರಲ್ಲ
ಅಂತ ಶೋಕಿಸುವ ಅಗತ್ಯವೇನಿಲ್ಲ
ಹೆಂಡತಿಯ ಕಡೆಯವರೆಲ್ಲಾ
ಇಲ್ಲೇ ನೆಲೆಸಿದ್ದಾರಲ್ಲ!

ದೂರದ ನೆಂಟರು ಯಾರೋ,
ಹತ್ತಿರದ ನೆಂಟರು ಯಾರೋ
ಅವರಿಬ್ಬರ ನಡುವೆ
ನೀವೆಲ್ಲ ಇದ್ದೀರಲ್ಲ,
ನಿಮಗಿಂತ ಯಾರುಂಟು
ನಮಗಿಲ್ಲಿ ನೆಂಟು?
ನಿಮ್ಮೆಲ್ಲರ ಅಭಿಮಾನವೇ
ನಾವು ಗಳಿಸಿದ ಗಂಟು.

****

ಇನ್ನು ಈ ನಮ್ಮ ಮುದ್ದು ಹುಡುಗಿ
ನಿಮ್ಮೆಲ್ಲರ ಮುಂದೆ
ಅಂಬೆಗಾಲಿಕ್ಕಿದ ಕೂಸು
ಇವಳು ಬೆಳೆದು ಹೆಜ್ಜೆ ಇಟ್ಟಿದ್ದನ್ನು
ಗೆಜ್ಜೆಕಟ್ಟಿ ಕುಣಿದದ್ದನ್ನು
ಕುಣಿದು ತಣಿದದ್ದನ್ನು,
ತಣಿದು ತಣಿಸಿದ್ದನ್ನು
ಕಣ್ಣಾರೆ ಕಂಡಿದ್ದೀರಿ
ಮನಸಾರೆ ಮೆಚ್ಚಿದ್ದೀರಿ
ಮೆಚ್ಚಿ ಹರಸಿದ್ದೀರಿ
ಈಗ ನೋಡಿದರೆ ಬೆಳಕೀವ
ಸೂರ್ಯನನೆ* ಹಿಡಿದಿಟ್ಟಿದ್ದಾಳೆ
ನಮ್ಮ ಮಗಳು!

ಪೂರ್ವ ಪಶ್ಚಿಮಗಳ
ನಡುವೆ ಮಧ್ಯಪ್ರಾಚ್ಯದಿ ದೇವ**
ಹೇಗೆ ಚಿಗುರಿತೋ ಈ ಸಂಬಂಧ
ಇದೆಲ್ಲ ಋಣಾನುಬಂಧ

"ಹಸನಾಗಿ ಬಾಳಲಿ ಹೊಸಜೋಡಿ
ನೂರ್ಕಾಲ ಬಾಳಲಿ ಜೊತೆಗೂಡಿ"
ಎಂದು ಹರಸಿ ನೀವೆಲ್ಲ ದಯಮಾಡಿ
ಮಾವಿನಕೆರೆಯ ರಂಗನಾಥ
ಕುಲದೇವ ವೆಂಕಟೇಶ್ವರರೇ
ನಮ್ಮೀ ಮಕ್ಕಳನು ಕಾಪಾಡಿ.

* ವರನ ಹೆಸರು "ದಿನೇಶ್"

** DEWA = Dubai Electricity and Water Authority. ನಮ್ಮ ಬೀಗರು ಇರುವುದು ಮಧ್ಯಪ್ರಾಚ್ಯದ ದುಬೈನಲ್ಲಿ. ಅಲ್ಲಿನ ವಿದ್ಯುತ್ ಮತ್ತು ನೀರುಸರಬರಾಜು ಇವುಗಳನ್ನು ನಿರ್ವಹಿಸುವ "ದೇವಾ" ಇಲಾಖೆಯಲ್ಲಿ ಅವರ ಹುದ್ದೆ. ಅದನ್ನೇ ಕನ್ನಡದ "ದೇವ" ಎಂಬರ್ಥದಲ್ಲಿಯೂ ಉಪಯೋಗಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X