ಪ್ರತಿ ಕ್ಷಣವನ್ನೂ ಸಂಭ್ರಮದಿಂದಲೇ ಕಳೆಯಬೇಕು

ಹಾಲುಗಲ್ಲದ ಹಸುಳೆಗೂ ಕ್ಯಾನ್ಸರ್ ಎಂಬ ಮಾತು ಕೇಳಿ ಅಶೋಕ್-ರೇಖಾ ಮಾತೇ ಹೊರಡದೆ ನಿಂತುಬಿಟ್ಟಿದ್ದಾರೆ. ಅರ್ಧ ಗಂಟೆಯ ನಂತರ ಚೇತರಿಸಿಕೊಂಡ ಅಶೋಕ್, ಬಾಳಗೆಳತಿಯ ಕೈ ಹಿಡಿದು ಹೇಳಿದರಂತೆ : ನೋಡು ರೇಖಾ, ಆ ಮಗೂಗೆ ಹೋಲಿಸಿದರೆ ನಾನು ತುಂಬ ಪುಣ್ಯವಂತ. ಯಾಕೆಂದರೆ ನಾನು ಭರ್ತಿ 40 ವರ್ಷ ಬದುಕು ನೋಡಿದೀನಿ. ನನಗಿಂತ ನೊಂದವರು ತುಂಬಾ ಜನ ಇದ್ದಾರೆ ಅಂಥ ಅರ್ಥವಾಯ್ತು ನಂಗೆ. ಈಗಿಂದ ನನ್ನ ಯುದ್ಧ ನಾನೇ ಮಾಡ್ತೇನೆ. ಸಾರಥಿಯ ಥರಾ ನೀನು ನನ್ನೊಂದಿಗಿರು. ಆಲ್ ದಿ ಬೆಸ್ಟ್ ಅಂತ ಒಂದು ಮಾತು ಹೇಳು, ಪ್ಲೀಸ್...'
***
ಪ್ರಿಯ ಓದುಗರೆ, ಈಗ ಏನಾಗಿದೆ ಅಂದರೆ- ಒಂದೊಂದು ಕ್ಷಣವನ್ನೂ ಸಂಭ್ರಮದಿಂದಲೇ ಕಳೆಯಬೇಕು ಎಂಬ ಛಲದಿಂದಲೇ ಅಶೋಕ್ ಬದುಕುತ್ತಿದ್ದಾರೆ. ಅವರಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಗೊತ್ತಾದ ನಂತರ ಗಾಂಧಿನಗರದ ಜನರೂ ಸ್ವಲ್ಪ ಬದಲಾಗಿದ್ದಾರೆ. ಕರೆದು ಕೆಲಸ ಕೊಡುತ್ತಿದ್ದಾರೆ. ಒಂದಷ್ಟು ವಿಶೇಷ ಅನುಕೂಲಗಳನ್ನೂ ಒದಗಿಸಿದ್ದಾರೆ. ಸಂಭಾವನೆಯ ವಿಷಯದಲ್ಲೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಗೋವಿಂದಬಾಬು, ಸಾಕ್ಷಾತ್ ದೇವರಿಗಿಂತ ಹೆಚ್ಚಾಗಿ ಅಶೋಕ್ ರಕ್ಷಣೆಗೆ ನಿಂತುಬಿಟ್ಟಿದ್ದಾರೆ. ಊರ ತುಂಬಾ ಇರುವ ಗೆಳೆಯರು, ಬಂಧುಗಳು ರೇಖಮ್ಮನಿಗೆ ಮನೋಬೆಂಬಲ ನೀಡಿದ್ದಾರೆ. ಹೊಸ ಧಾರಾವಾಹಿ ಮಾಡಿಕೊಡಲು ರೇಖಾ-ಅಶೋಕ್‌ಗೆ ಚಾನೆಲ್ ಒಂದರಿಂದ ಆಹ್ವಾನವೂ ಬಂದಿದೆ.
ಅಂದ ಹಾಗೆ, ಈಗಲೂ ಅಶೋಕ್‌ಗೆ ಕ್ಯಾನ್ಸರ್ ಇದೆ ನಿಜ. ಆದರೆ ಆತಂಕಕ್ಕೆ ಕಾರಣವಿಲ್ಲ. ಪ್ರತಿದಿನವೂ ಒಂದೊಂದು ಮಾತ್ರೆ ನುಂಗುತ್ತಲೇ (ಒಂದು ಮಾತ್ರೆಯ ಬೆಲೆ 4000 ರೂ. ಒಂದು ತಿಂಗಳಿಗೆ, ಕೇವಲ ಮಾತ್ರೆಗಳಿಗೆ ಅಶೋಕ್-ರೇಖಾ ದಂಪತಿ ಖರ್ಚು ಮಾಡುತ್ತಿರುವ ಹಣ 1 ಲಕ್ಷ 20 ಸಾವಿರ ರೂ! ಅವರು ಬದುಕಿನುದ್ದಕ್ಕೂ ಈ ದುಬಾರಿ ಮಾತ್ರೆಯನ್ನು ನುಂಗುತ್ತಲೇ ಇರಬೇಕು) ಅಶೋಕ್ ಸಂಭ್ರಮದಿಂದ ಬದುಕುತ್ತಿದ್ದಾರೆ. ಕ್ಯಾನ್ಸರ್ ಇದೆ ಅಂದಾಕ್ಷಣ ಹೆದರಬಾರದು. ಹೆದರಿಕೆ ಮನುಷ್ಯನ ಅತಿ ದೊಡ್ಡ ಶತ್ರು. ದುಡ್ಡನ್ನು ಬೇಕಾದ್ರೆ ಸಾಲ ತರಬಹುದು. ಆದರೆ ಧೈರ್ಯವನ್ನು ಸಾಲ ತರೋಕಾಗಲ್ಲ. ಹಾಗಾಗಿ ಯಾವತ್ತೂ ಯಾರೂ ಧೈರ್ಯ ಕಳ್ಕೋಬೇಡಿ ಎಂಬುದಷ್ಟೇ ನನ್ನ ಮನವಿ. ಈವರೆಗೂ ನನ್ನ ಆರೋಗ್ಯದ ವಿಷಯದಲ್ಲಿ ತುಂಬ ಕಾಳಜಿ ತೋರಿದ ಎಲ್ಲ ಸಹೃದಯೀ ಬಂಧುಗಳಿಗೂ ಋಣಿ ಅನ್ನುತ್ತಾರೆ ಅಶೋಕ್.
ಈಗ ಯುದ್ಧ ಗೆದ್ದ ಸಂಭ್ರಮದಲ್ಲಿರೋದು ನಮ್ಮ ರೇಖಮ್ಮ. ತಾನೇ ಸಂಕಟದ ಕುಲುಮೆಯಲ್ಲಿ ಬೇಯುತ್ತಿದ್ದರೂ, ಯಾರಿಗಾದ್ರೂ ತೊಂದರೆ ಅಂದರೆ ಏನಾದ್ರೂ ಹೆಲ್ಪ್ ಬೇಕಾ ಎಂದು ಕಳಕಳಿಯಿಂದ ಕೇಳುವ ತಾಯಿ ಮನಸ್ಸು ಆಕೆಯದು. ಯಮನೊಂದಿಗೆ ದಿನವೂ ಮುಖಾಮುಖಿಯಾಗುತ್ತಿದ್ದರೂ ಆಕೆ ದುರ್ಯೋಧನ ಛಲದಿಂದಲೇ ಬದುಕುತ್ತಿದ್ದಾರೆ. ಅವರಿಗೆ ಪ್ರೀತಿ, ಅಭಿನಂದನೆ, ನಮಸ್ಕಾರ.
ಅಂದಹಾಗೆ 98456 90927 ನಂಬರಿನಲ್ಲಿ ನಮ್ಮ ರೇಖಮ್ಮ ಸಿಕ್ಕುತ್ತಾಳೆ- ಮಾತಿಗೆ, ಹರಟೆಗೆ, ಕಷ್ಟ ಸುಖ ಹಂಚಿಕೊಳ್ಳಲಿಕ್ಕೆ. ಒಮ್ಮೆ ಮಾತಾಡಿ...












Click it and Unblock the Notifications