ಭ್ರಾಮಕ ಲೋಕದೊಳಗೊಂದು ಭ್ರಮಾಧೀನ ವ್ಯಕ್ತಿತ್ವದ ಆರತಿ
![]() |
| ಆರತಿ (ವಕ್ರ ಭಾವಚಿತ್ರ : ಬಿ.ಜಿ.ಗುಜ್ಜಾರಪ್ಪ) |
ಚಲನಚಿತ್ರ ನಟಿ ಆರತಿಯವರದ್ದು ವೈರುಧ್ಯಗಳಿಂದ ಕೂಡಿದ ನಿಗೂಢ ವ್ಯಕ್ತಿತ್ವ. ಆಕೆಯ ಹೆಸರಿನಿಂದಾಗಿಯೇ ಅವರ ಯಾವ ಚಲನಚಿತ್ರಗಳೂ ಯಶಸ್ಸು ಕಾಣದಿದ್ದರೂ, ಹಲವು ವಿವಾದಗಳಿಂದಾಗಿ ಯಾರೂ ಸಾಧಿಸದ ಕೀರ್ತಿ'ಯನ್ನು ಗಳಿಸಿದವರು. ಭ್ರಾಮಕ ಲೋಕದಲ್ಲೇ ಬದುಕು ನಡೆಸಿದ ಆರತಿ ಒಂದು ಮುಂಜಾನೆ ಎಲ್ಲರೂ ಹುಬ್ಬೇರಿಸುವ ರೀತಿಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಅವರು ರಾಜಕೀಯವನ್ನು ಪ್ರವೇಶಿಸಿದ್ದಷ್ಟೇ ಕ್ಷಿಪ್ರಗತಿಯಲ್ಲಿ ಅದಕ್ಕೆ ಕೃಷ್ಣಾರ್ಪಣಗೈದು ಹೊರಗೆ ನಡೆದೂಬಿಟ್ಟರು.
ನನಗೆ ಗೊತ್ತಿದ್ದಂತೆ ಆರತಿಗೆ ರಾಜಕೀಯದ ಗೀಳೇನೂ ಇರಲಿಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆ ಅವರು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದರು. ಜನತಾ ಪಕ್ಷದ ಶಾಸಕರಿಗಂತೂ ಅವರು ಆರಾಧ್ಯ ಪುರುಷ. ಅವರ ಸಚಿವ ಸಂಪುಟದಲ್ಲಿ ಎಂ. ರಘುಪತಿ ಸಚಿವರಾಗಿ ವಿರಾಜಮಾನರಾಗಿದ್ದರು. ಈ ಸಂದರ್ಭದಲ್ಲಿ ಒಂದು ಅಘಟಿತ ಘಟನೆ ಸಂಭವಗೊಂಡಿತು. ಆರತಿ ಅಚಾನಕ್ಕಾಗಿ ರಘುಪತಿಯವರ ನೇರ ಸಂಪರ್ಕಕ್ಕೆ ಬಂದರು. ಯಾವುದೋ ಒಂದು ಆಹ್ಲಾದಕರ ಸನ್ನಿವೇಶದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರಗೊಂಡಿತು. ರಘುಪತಿ ಆಗಿನ್ನೂ ಅವಿವಾಹಿತ. (ಈಗಲೂ ಅದೇ ಸ್ಥಿತಿಯಲ್ಲಿ ವಾರ್ಧಕ್ಯದ ಸಮೀಪ ಹೋಗಿ ನಿಂತಿದ್ದಾರೆ) ಆರತಿಯಾದರೋ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಗಾಂಧರ್ವ ರೀತಿಯಲ್ಲಿ ಪತಿಯಾಗಿ ಸ್ವೀಕರಿಸಿದ್ದರು; ಜೊತೆಗೆ ಒಂದು ಹೆಣ್ಣು ಮಗುವಿತ್ತು.
ಆರತಿ ರಘುಪತಿ ಪ್ರೇಮಾಂಕುರ ಅನಂತರದ ದಿನಗಳಲ್ಲಿ ವಿವಾಹಕ್ಕೆ ಮುಕ್ತ ಮಾರ್ಗವನ್ನು ತೆರೆದಿಟ್ಟಿತು. ಅತ್ಯಂತ ರಹಸ್ಯವಾಗಿದ್ದ ಈ ವಿಷಯ ನನ್ನವರೆಗೂ ಬಂದಿತು. ಆಗ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಮುಂಗಾರು' ದಿನಪತ್ರಿಕೆಯಲ್ಲಿ ಈ ಸುದ್ದಿಯನ್ನು ಮುಖಪುಟದಲ್ಲೇ ಬರೆದೆ. ಈ ಸುದ್ದಿ ಬರೆದದ್ದಕ್ಕೆ ರಘುಪತಿ ನನ್ನಲ್ಲಿ ಮುನಿಸಿಕೊಂಡರು. ರಘುಪತಿ ಆಜಾತಶತ್ರುವಾದ್ದರಿಂದ ನಮ್ಮ ಸ್ನೇಹಕ್ಕೇನೂ ಕುಂದು ಬರಲಿಲ್ಲ.
ಕೊನೆಗೆ ಇಬ್ಬರೂ ಮದುವೆ ಆದರು. ಹನಿಮೂನಿಗೆಂದು ಅಮೆರಿಕಕ್ಕೆ ಹಾರಿದರು. ರಘುಪತಿಗೆ ಹಲ್ಲುಬ್ಬು ಇತ್ತು. ಆರತಿ ಅಮೆರಿಕದಲ್ಲಿ ಅದಕ್ಕೆ ರಿಪೇರಿ ಮಾಡಿಸಿದರು. ಮಗಳಿಗಾಗಿ ಒಂದು ಲಾರಿಯಷ್ಟು ಬೊಂಬೆ ಹಾಗೂ ಇನ್ನಿತರ ವಸ್ತುಗಳನ್ನು ಕೊಂಡರು. ಹಾಗೇ ಸುತ್ತಾಡಿಕೊಂಡು ಬರುವಾಗ ರಘುಪತಿ ರಾಜಕೀಯದ ನಾರು ಬೇರು ಅರೆದು ಆರತಿಗೆ ಕುಡಿಸಿದರು. ಆರತಿಗೆ ರಾಜಕೀಯದ ಅಮಲು ಏರಿದ್ದು ಹೀಗೆ.
ಬೆಂಗಳೂರಿಗೆ ಬಂದ ಮೇಲೆ ರಘುಪತಿ ಬುದ್ಧಿವಂತಿಕೆ ಪ್ರದರ್ಶಿಸಿದರು. ಆರತಿಯನ್ನು ತಮ್ಮದೇ ಆದ ಜನತಾ ಪಕ್ಷದಲ್ಲಿ ಸೇರಿಸಿಕೊಳ್ಳಲಿಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿ ಬಿಟ್ಟರು. ಅದೇ ಪಕ್ಷದ ಮೂಲಕ ಮುಂದೊಂದು ದಿನ ಮೇಲ್ಮನೆ ಸದಸ್ಯೆಯಾಗಿ ಪ್ರತಿಷ್ಠಾಪಿಸಿಬಿಟ್ಟರು. ಹೀಗೆ ಸುನಾಯಾಸವಾಗಿ ವಿಧಾನಪರಿಷತ್ತನ್ನು ಪ್ರವೇಶಿಸಿದ ಆರತಿ ಕೆಲಕಾಲ ಮೌನಗೌರಿಯಾಗಿ ಕೂತಿದ್ದು ಹೋಗುತ್ತಿದ್ದರು. ಮುಂದೊಂದು ದಿನ ಬಾಯಿ ಬಿಡಬೇಕೆಂಬ ಮನಸ್ಸು ಬಂದಾಗ ಬಾಯಿ ಬಿಟ್ಟರು. ಸದನದ ನೀತಿ ನಿಯಮಾವಳಿ ಗೊತ್ತಿರದಿದ್ದರಿಂದ ಅವರ ಆಗಿನ ಮಾತು ಬೀದಿ ನಲ್ಲಿ ಜಗಳದಂತಿತ್ತು. ಅದೇ ತಾನೆ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಹೊರ ಬಂದಿದ್ದ ಎ.ಕೆ. ಸುಬ್ಬಯ್ಯ ಆರತಿಯವರ ವರ್ತನೆಯನ್ನು ಮೊನಚು ಮಾತುಗಳಲ್ಲಿ ಕೊಚ್ಚಿ ಹಾಕಿದರು. ಇದರಿಂದ ಧೃತಿಗೆಟ್ಟ ಆರತಿ ಕಣ್ಣೀರು ಹಾಕಿದರು.
ಈ ಹೊತ್ತಿಗಾಗಲೇ ಆಕೆ ಕಣಗಾಲ್ ಪುಟ್ಟಣ್ಣನವರ ವಠಾರದಿಂದ ಹೊರ ಬಂದಿದ್ದರು. ಕಣಗಾಲರ ಮೇಲೆ ಅದೇನೊ ಸಿಟ್ಟಿತ್ತು. ಹೀಗಾಗಿ ಅದೇ ತಾನೆ ಜನಿಸಿದ ಚಿತ್ರನಟ ರಾಮಕೃಷ್ಣ (ನೀರ್ನಳ್ಳಿ) ಅವರ ಮಗುವನ್ನು ಆರತಿ ಅಪಹರಿಸಿ ಮೈಸೂರಿನ ಒಂದು ಮನೆಯಲ್ಲಿ ಬಚ್ಚಿಟ್ಟರು. ಚಿತ್ರನಟರಾದ ಅನಂತನಾಗ್, ಅಂಬರೀಷ್ ಮುಂದೆ ರಾಮಕೃಷ್ಣ ಕಣ್ಣೀರು ಹಾಕಿದರು. ತನ್ನ ಮಗುವನ್ನು ಹೇಗಾದರೂ ಪತ್ತೆ ಮಾಡಿ ತರಿಸಿ ಕೊಡುವಂತೆ ಬೇಡಿದರು.
ಅನಂತನಾಗ್ ಈ ವಿಷಯವನ್ನು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಹೇಳಿದರು. ಮಗನನ್ನು ಹುಡುಕಿಸಿಕೊಡಿ ಅಂತ ರಾಮಕೃಷ್ಣ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಾನು ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ 'ನವನಾಡು' ದಿನಪತ್ರಿಕೆಗೆ ವಿಶೇಷ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಮುಖ್ಯ ಸುದ್ದಿಯೇನಾದರೂ ಸಿಗಬಹುದೇ ಅಂತ ಮುಖ್ಯಮಂತ್ರಿಗಳ ಕಚೇರಿಯಲ್ಲಿ ತಡಕಾಡುತ್ತಿದ್ದಾಗ ರಾಮಕೃಷ್ಣ ಪತ್ರ ಕೈಗೆ ಸಿಕ್ಕಿತು. ತಡ ಮಾಡಲಿಲ್ಲ. ರಾಮಕೃಷ್ಣ ಮನೆಗೆ ಹೋದೆ. ಅವರಿಂದ ವಿವರಗಳನ್ನು ಸಂಗ್ರಹಿಸಿದೆ. ಸಚಿವ ರಘುಪತಿಯವರನ್ನು ಕಂಡೆ. ತನಗೆ ಏನೂ ಗೊತ್ತಿಲ್ಲ ಅಂತ ನಾಟಕ ಮಾಡಿದರು. ಹೀಗೆ ಸುದ್ದಿಗಾಗಿ ಎರಡು ದಿನಗಳ ಕಾಲ ಎಲ್ಲೆಲ್ಲೋ ಅಲೆದು ಕೊನೆಯದಾಗಿ ಆರತಿ ಮನೆಗೆ ಫೋನ್ ಮಾಡಿದೆ. ಅವರ ಮಗಳು ಫೋನ್ ತೆಗೆದುಕೊಂಡು ಅಮ್ಮ ಸ್ನಾನ ಮಾಡ್ತಿದಾರೆ' ಅಂತ ಹೇಳಿದಳು. ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಫೋನ್ ಮಾಡುತ್ತಲೇ ಇದ್ದೆ. ಮಗುವಿನದು ಒಂದೇ ಉತ್ತರ ಅಮ್ಮ ಸ್ನಾನ ಮಾಡ್ತಿದಾರೆ'.
ಕೊನೆಗೆ ದಾರಿಯೇ ಕಾಣದೆ ಸಂಪೂರ್ಣ ವರದಿಯನ್ನು ದೂರವಾಣಿಯಲ್ಲೇ 'ನವನಾಡು'ಗೆ ಫೈಲ್ ಮಾಡಿದೆ. ಮರುದಿನ ಪತ್ರಿಕೆಯ ಮುಖಪುಟದಲ್ಲಿ ಮೂರು ಕಾಲಂ ಪೂರ್ಣವಾಗಿ ಸ್ಟೋರಿ ಪ್ರಕಟವಾಯಿತು. ಹುಬ್ಬಳ್ಳಿಯಲ್ಲಿದ್ದವರು ಯಾರೋ ಕೂಡಲೇ ಈ ಸುದ್ದಿಯನ್ನು ಆರತಿ ಗಮನಕ್ಕೆ ತಂದರು. ಆರತಿ ಕೆಂಡಾಮಂಡಲ ಆದರು. ರಾಮಕೃಷ್ಣ ಅವರಿಗೆ ಫೋನ್ ಮಾಡಿ ಮನಸೋ ಇಚ್ಛೆ ಬೈದರು. ಕೊನೆಗೆ ಒಂದು ಮಾತು ಸೇರಿಸಿದರು. "ನೀನು ಫಿಲ್ಮ್ ಇಂಡಸ್ಟ್ರೀಲಿ ಅದು ಹೇಗೆ ಮುಂದುವರಿತಿಯೋ ನಾನು ನೋಡ್ತೀನಿ. ರೌಡಿಗಳನ್ನು ಕಳುಹಿಸಿ ನಿನ್ನ ಜೀವ ತೆಗೀತೀನಿ" ಎಂದು ಬೆದರಿಕೆ ಹಾಕಿದರು. ಇದರಿಂದ ರಾಮಕೃಷ್ಣ ಕಂಗಾಲಾದರು. ಭಯ ಅವರನ್ನು ಆವರಿಸಿಕೊಂಡಿತು. ಈ ವಿಷಯವನ್ನು ನನ್ನ ಮುಂದೆ ವ್ಯಕ್ತಪಡಿಸಿದರು. ನಾನೇ ಅವರಿಗೆ ಧೈರ್ಯ ಹೇಳಿದೆ. ರೌಡಿಗಳ ಸಂಪರ್ಕ, ಪತ್ರಕರ್ತರು ಹಾಗೂ ಪೊಲೀಸರಿಗೆ ಇರುತ್ತದೆಂದು ಹೇಳಿದಾಗ ಅವರು ಸ್ವಲ್ಪ ಸಮಾಧಾನಗೊಂಡರು.
ನನ್ನ ವರದಿ ಪ್ರಕಟವಾದ ಮರುದಿನವೇ ಮಗುವಿನ ಪತ್ತೆ ಆಯಿತು. ಮಗುವಿನ ಅಪಹರಣ ಸುದ್ದಿ ಬಹಿರಂಗಗೊಂಡಿದ್ದರಿಂದ ಆರತಿ ಸಹಜವಾಗಿಯೇ ಹೆದರಿಬಿಟ್ಟಿದ್ದರು. ಮಗುವನ್ನು ಸುರಕ್ಷಿತವಾಗಿ ಒಪ್ಪಿಸಿ ಕೈ ತೊಳೆದುಕೊಂಡರು. ಬ್ಲಾಕ್‌ಮೇಲ್ ತಂತ್ರಕ್ಕೆ ಒಳಗಾಗಿದ್ದ ಪುಟ್ಟಣ್ಣ ಕಣಗಾಲ್ ಇದೇ ಸಮಯದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಒಬ್ಬ ಶಾಸಕಿಯಾಗಿ ಆರತಿ ತಮ್ಮ ಹೊಣೆಗಾರಿಕೆಯನ್ನು ಮರೆತಿದ್ದರು ಅಥವಾ ಅದರ ಪ್ರಾಥಮಿಕ ಜ್ಞಾನವೂ ಆಕೆಗಿರಲಿಲ್ಲ. ಚಿತ್ರ ಪ್ರಪಂಚದಲ್ಲಿನ ಥಳುಕನ್ನೇ ಮೇಲ್ಮನೆಯಲ್ಲೂ ಝಳಪಿಸಬಹುದೆಂಬ ಆಕೆಯ ಕಲ್ಪನೆ ಕಣ್ಮುಂದೆಯೇ ಕರಗಿ ಹೋಗಿತ್ತು. ಹತಾಶ ಸ್ಥಿತಿಗೆ ತಲುಪಿದ ಆರತಿ ಒಂದು ದಿನ ರಘುಪತಿಯವರೊಂದಿಗಿನ ವಿವಾಹ ಸಂಬಂಧವನ್ನು ಕಳಚಿಕೊಂಡರು.
ಈ ಹೊತ್ತಿಗಾಗಲೇ ಚಿತ್ರರಂಗದಲ್ಲೂ ಆರತಿ ಬಗ್ಗೆ ಒಳ್ಳೆಯ ಅಭಿಪ್ರಾಯವೇನೂ ಇರಲಿಲ್ಲ. ಚಿತ್ರಗಳಲ್ಲಿ ನಟಿಸುವ ಅವಕಾಶಗಳೂ ಬತ್ತಿಹೋಗಿತ್ತು. ಈ ಹಂತದಲ್ಲಿ ಆಕೆ ಒಂದು ನಿರ್ಧಾರಕ್ಕೆ ಬಂದರು. ನಿರ್ಧಾರಕ್ಕೆ ಬಂದಿದ್ದೇ ತಡ, ವಿಧಾನ ಪರಿಷತ್ತಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಹಳ ಹಿಂದಿನಿಂದಲೂ ಗೊತ್ತಿದ್ದ- ವಿದೇಶದಲ್ಲಿ ನೆಲೆಸಿದ್ದ ಪರಿಚಿತರೊಬ್ಬರನ್ನು ವಿವಾಹ ಮಾಡಿಕೊಂಡು ಅಮೆರಿಕಕ್ಕೆ ಹಾರಿಬಿಟ್ಟರು. ಬಹುಶಃ ಆಕೆಯ ಸಾರ್ವಜನಿಕ ಬದುಕು ಒಂದು ನಿಲುಗಡೆಗೆ ಬಂದಿದ್ದು ಈ ಹಂತದಲ್ಲೇ ಎಂದು ಕಾಣುತ್ತದೆ.
ಮುಂದಿನ ಬದಲಾವಣೆ : ಒಬ್ಬ ರಾಜಕುಮಾರನ ಕಥೆ













Click it and Unblock the Notifications