ಜಯನಗರ 9ನೇ ಬ್ಲಾಕ್ ಮಾರುಕಟ್ಟೆಗೆ ಶರಣು ಶರಣಾರ್ಥಿ

Posted By: ಜಯನಗರದ ಹುಡುಗಿ
Subscribe to Oneindia Kannada

ನಿನ್ನೆ ಅವಲಕ್ಕಿ ಮಾಡಲು ಹೋದೆ. ಎಲ್ಲಾ ಸಾಮಾನು ಎತ್ತಿಟ್ಟುಕೊಳ್ಳಲು ಹೋದಾಗ ಮೆಣಸಿನಕಾಯಿ ಇಲ್ಲದ್ದು ಗೊತ್ತಾಯಿತು. ಒಂದು ಮೆಣಸಿನಕಾಯಿ ತರೋದಕ್ಕೆ 35 ನಿಮಿಷ ಮಾರುಕಟ್ಟೆಗೆ, 2 ಟ್ರೈನ್ ಹಿಡಿದುಕೊಂಡು ಹೋಗಬೇಕು. ಆ ಜನಜಂಗುಳಿಯಲ್ಲಿ ಚೌಕಾಸಿಯೆಲ್ಲ ಮಾಡಿ ಯಾರು ಮೆಣಸಿನಕಾಯಿ ತರುತ್ತಾರೆ ಎಂದು ಅವತ್ತು ಅವಲಕ್ಕಿ ಮಾಡುವ ಕಾರ್ಯಕ್ರಮ ಕೈಬಿಟ್ಟೆ. ಇದೇ ನಮ್ಮ ಜಯನಗರದಲ್ಲಿ ಆಗಿದ್ದರೆ ಫಟಾಫಟ್ ಅಂತ ಹೋಗಿ 5 ನಿಮಿಷದಲ್ಲಿ ತೆಗೆದುಕೊಂಡು ಬರಬಹುದಿತ್ತು ಅಂತ ಯೋಚನೆ ಮಾಡಿ ಸುಮ್ಮನೆ ಕುಳಿತುಕೊಂಡೆ.

ನಮ್ಮ ಜಯನಗರ 9ನೇ ಬ್ಲಾಕ್ ಮಾರುಕಟ್ಟೆ ಸಿಕ್ಕಾಪಟ್ಟೆ ಉಪಯುಕ್ತವಾದ್ದದ್ದು. ಇಲ್ಲಿ ನಿಜವಾಗಲೂ ಮಾರುಕಟ್ಟೆ ಅಥವಾ ಬಹುಮಹಡಿ ಕಟ್ಟಡಗಳಿಲ್ಲ ಇರೋದು ಬರಿ ತರಕಾರಿ, ಹಣ್ಣಿನ ಗಾಡಿಗಳನ್ನ ರಸ್ತೆಯಲ್ಲಿ ನಿಲ್ಲಿಸಿ ನಡೆಯುವ ವ್ಯಾಪಾರ ಮಾಡುವ ಮಂದಿ. ನನಗಿನ್ನೂ ನೆನಪಿದೆ ಅಮ್ಮ ಅಥವಾ ಅಜ್ಜಿ ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಮೆಣಸಿನಕಾಯಿ ಹಾಗೂ ನಿಂಬೆಹಣ್ಣನ್ನ ಪ್ರತಿ ಸಲ ಮಕ್ಕಳ ಹತ್ತಿರವೇ ತರಿಸುತ್ತಿದ್ದರು. ಬೇಗ ಹೋಗಿ ತಗೊಂಡು ಬಾ ಅಂದಾಗ ಸೈಕಲ್ ನಲ್ಲಿಯೋ ಅಥವಾ ನಡೆದುಕೊಂಡೋ 1 ಅಥ್ವಾ 2 ರುಪಾಯಿ ಜೇಬಿಗೆ ಹಾಕಿಕೊಂಡು ಹೊರಡುತ್ತಿದ್ದೆವು.

ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!

The ever lively vegetable market of Jayanagar 9th block

ಬಿಬಿಎಂಪಿ ಪ್ರಕಾರ ಇಲ್ಲಿ ಮಾರುಕಟ್ಟೆ ಅಸ್ಥಿತ್ವದಲ್ಲಿಯೇ ಇಲ್ಲ, ಆದ್ರೂ ಸುಮಾರು 30-40 ವರ್ಷಗಳಿಂದ ಜನರ ಸಹಕಾರದಿಂದ ಆರಾಮಾಗಿ ನಡೆಯುತ್ತಿರುವ ಮಾರುಕಟ್ಟೆ ಇದು. ಒಮ್ಮೊಮ್ಮೆ ಆ ರಸ್ತೆಯ ಜನ ಗಲಾಟೆ ಮಾಡಿ ಗಾಡಿಗಳನ್ನೆಲ್ಲಾ ಎತ್ತಂಗಡಿ ಮಾಡಿಸಿದ್ದರೂ ಸಹ 4 ದಿನಕ್ಕೆ ಅವರಿಗೆ ತರಕಾರಿಗೆ ಅಭಾವವಾಗಿ ಮತ್ತೆ ಅವರನ್ನೆಲ್ಲ ವಾಪಸ್ಸು ಕರೆಸಿದ್ದೂ ಇದೆ. ದಿನಾ ಸಂಜೆ ಅಲ್ಲಿ ನಡೆಯುವ ಟ್ರಾಫಿಕ್ ಜಾಮ್ ಆದ್ರೂ ಸಹ ಜನ ಸಹಿಸಿಕೊಂಡು ಇದ್ದಾರೆ. ನಮ್ಮ ಮನೆಯಿಂದ 5 ನಿಮಿಷ ದೂರ ಇರುವ ಈ ಮಾರುಕಟ್ಟೆಯಲ್ಲಿ ಸುಮಾರು ಜನ ಹೆಸರಿಂದ ಕರೆಯೋಷ್ಟು ಸಲಿಗೆ.

ನನಗೆ ತರಕಾರಿ ಅಂದರೆ ಚಿಕ್ಕಂದಿನಿಂದ ಅಷ್ಟಕಷ್ಟೆ. ಅಮ್ಮ ದಿನಾಗ್ಲೂ ಫ್ರೆಶ್ ತರಕಾರಿ ತರಬೇಕಂತಲೇ ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನ ಕೆಲಸ ಲೆಕ್ಕ ಹಾಕೋದು. ಅಮ್ಮ ದಿನನಿತ್ಯ ಗಣಿತವನ್ನ ಅಭ್ಯಾಸ ಮಾಡಿಸುತ್ತಿದ್ದದ್ದು ಹೀಗೆಯೇ. ಒಂದು ಕೇಜಿಗೆ ಇಷ್ಟಾದ್ರೆ, ಮುಕ್ಕಾಲು ಕೇಜಿಗೆ ಎಷ್ಟು ಅನ್ನೋ ಪ್ರಶ್ನೆಗೆ ನಾನು ಉತ್ತರ ಕೊಡಬೇಕಾಗಿತ್ತು. ನನಗೆ ಈರುಳ್ಳಿ, ಆಲೂಗಡ್ಡೆ, ಟೋಮ್ಯಾಟೋ ಇಷ್ಟೇ ಇಷ್ಟವಾಗುತ್ತಿತ್ತು. ಆ ಬದನೆಕಾಯಿ, ಮೂಲಂಗಿ, ದೊಣ್ಣೆಮೆಣಸಿನಕಾಯಿ ಕಂಡರೆ ಆಗುತ್ತಿರಲಿಲ್ಲ.

ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು

The ever lively vegetable market of Jayanagar 9th block

ಅಮ್ಮ ನನ್ನ ತಂಗಿಯ ಗಲಾಟೆಯಲ್ಲಿ ತಲೆ ಕೆಡಿಸಿಕೊಂಡು ಮನೆಯವರೆಲ್ಲ ತಿನ್ನುವ ತರಕಾರಿಯನ್ನ ತಗೊಂಡು ಬರುತ್ತಿದ್ದರು. ಅಮ್ಮನನ್ನು ಕಂಡರೆ ಅಲ್ಲಿನವರಿಗೆ ವಿಪರೀತ ಗೌರವ. ಒಳ್ಳೆ ತರಕಾರಿ ಹಾಗೂ ಸರಿಯಾದ ಬೆಲೆಗೆ ಕೊಡುತ್ತಿದ್ದರು. ಅಮ್ಮ ಹಬ್ಬಕ್ಕೆ ಅವರಿಗೆ ಸೀರೆ, ಮಕ್ಕಳ ಓದಿಗೆ ಸಹಾಯ ಮಾಡುತ್ತಿದ್ದಳು. ಈಗಲೂ ಸಹ ಎಷ್ಟೋ ಮಕ್ಕಳು ಓದಿ, ವಿದ್ಯಾವಂತರಾಗಿದ್ದಾರೆ ಎಂದು ಅಮ್ಮನಿಗೆ ಸಿಹಿ ತಂದುಕೊಡುತ್ತಾರೆ.

ಅಮ್ಮನ ಹೆಸರೇ ಸುಮ ಆದ್ದರಿಂದ ಹೂವು ಸಹ ಅವಳಿಗೆ ಪ್ರಿಯ. ಅವಳ ಉದ್ದ ಜಡೆಗೆ ಮಲ್ಲಿಗೆ ಹೂವಿನ ಮೊಳವನ್ನ ಅಂಗಡಿಯವಳೇ ಒಳ್ಳೆ ಹೂಗಳನ್ನು ಆಯ್ದುಕೊಂಡು ಕೊಡುತ್ತಿದ್ದಳು. ಹಣ್ಣುಗಳೂ ಸಹ ಅಷ್ಟಕಷ್ಟೆ. ಬಾಳೆಹಣ್ಣನ್ನು ಮನೆಗೆ ದಿನಾಗ್ಲೂ ತರುತ್ತಿದ್ರು. ಆದರೆ ನನಗೆ ಬಾಳೆಹಣ್ಣು ಕಂಡ್ರೆ ಆಗ್ತಿರ್ಲಿಲ್ಲ. ಸುಮ್ನೆ 25 ಹಣ್ಣುಗಳನ್ನ ಯಾಕೆ ತರಬೇಕು ಅಂತ ಜಗಳ ಆಡುತ್ತಿದ್ದೆ.

ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!

ಮಾರುಕಟ್ಟೆಯಲ್ಲಿ ಸಿಗದೇ ಇದ್ದದ್ದು ಏನು ಇರುತ್ತಿರಲಿಲ್ಲ. ಬಟ್ಟೆ ತರೋದಕ್ಕೂ ಅದೇ, ಚಿಪ್ಸ್ ತರೋದಕ್ಕೆ, ಹಣ್ಣು ತರಕಾರಿ, ಪೂಜೆ ಸಾಮಗ್ರಿ, ಪತ್ರಿಕೆ ಎಲ್ಲವೂ ಸಿಗುತ್ತಿದ್ದದ್ದು ಅಲ್ಲಿಯೇ. ನನ್ನ ಆಸಕ್ತಿ ಬರೀ ಪತ್ರಿಕೆ ಅಂಗಡಿಯ ಮೇಲೆ. ಅಲ್ಲಿರುವ ಪತ್ರಿಕೆಗಳನ್ನೆಲ್ಲ ತರಬೇಕೆಂಬ ಆಸೆ. ಅಪ್ಪನ ಜೊತೆ ಹೋದರೆ ಆ ಆಸೆ ಈಡೇರುತ್ತಿತ್ತು. ಸುಮಾರಾಗಿ ನಾನು ಅಪ್ಪ ಹೋಗುತ್ತಿದ್ದದ್ದು ಭಾನುವಾರದ ದಿವಸ. ತರಕಾರಿಗಿಂತ ಜಾಸ್ತಿ ಪತ್ರಿಕೆಗಳು ಕೈಯಲ್ಲಿರುತ್ತಿದ್ದವು. ಅಮ್ಮನಿಗೆ ಅರ್ಧ ಬೆಲೆಗೆ ಸಿಗುತ್ತಿದ್ದ ತರಕಾರಿ, ನಾನೂ ಅಪ್ಪ ಹೋದರೆ ದುಪ್ಪಟ್ಟಾಗಿರುತ್ತಿತ್ತು. ಆಮೇಲೆ ಸುಮಳ ಮನೆಯವರೆಂದ ಮೇಲೆ ಸರಿಯಾದ ಬೆಲೆಗೆ ಸಿಗುತ್ತಿತ್ತು.

The ever lively vegetable market of Jayanagar 9th block

ಒಮ್ಮೊಮ್ಮೆ ಅಂಗಡಿಯವರೇ ಅಮ್ಮನಿಗೆ 'ಏನಮ್ಮ ನಿಮ್ಮ ಯಜಮಾನಂಗೂ, ಮಗಳಿಗೂ ಏನೂ ಗೊತ್ತಾಗಲ್ಲ, ಏನು ಕೊಟ್ರು ತಕ್ಕೊತ್ತಾರೆ' ಎಂದು ಹೇಳಿ ಮರ್ಯಾದೆ ತೆಗೆದ್ದಿದ್ದಳು. ನನಗೆ ಸೊಪ್ಪುಗಳ ಬಗ್ಗೆ ಗೊತ್ತಿರಲಿಲ್ಲ. ಒಮ್ಮೊಮ್ಮೆ ಅಂಗಡಿಯವಳು 'ಅಲ್ಲೆ ಇದೆ ತಗೋಳಮ್ಮ' ಅಂದಿದ್ದಕ್ಕೆ ಪುದಿನಾ ಸೊಪ್ಪಿಗೆ, ಮೆಂತ್ಯೆ ಸೊಪ್ಪು ತಂದು ಸರಿಯಾಗಿ ಬೈಸಿಕೊಂಡಿದ್ದೆ.

ತಂಗಿ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಹುಶಾರು. ಎಲ್ಲವನ್ನೂ ತಿಳಿದುಕೊಂಡು ಸರಿಯಾಗಿ ಆರಿಸಿ ತರುತ್ತಿದ್ದಳು. ಅವಳಿಗೆ ಬೆಂಡೆಕಾಯಿ ಇಷ್ಟ. ಸುಮಾರು ಎಲ್ಲ ತರಕಾರಿಗಳು ಹೇಗೆ ಇರಬೇಕು, ಯಾವುದು ತಾಜಾ ಎಂದು ಗೊತ್ತಿರುತ್ತಿತ್ತು. ತರಕಾರಿ ಗಾಡಿಯವಳಂತು 'ನಿಮ್ಮ ಎರಡ್ನೆ ಮಗಳು ತುಂಬಾ ಚುರುಕು, ದೊಡ್ಡೋಳು ಸುಮ್ಕೆ ಏನು ಕೊಟ್ರು ತಕ್ಕೋತಾಳೆ' ಅಂತ ನನ್ನನ್ನ ಖಾಯಂ ದಡ್ಡಿಯಾಗಿ ಮಾಡಿದ ಮಾರುಕಟ್ಟೆ ಅದು.

ಹೀಗೆ ಚೆನ್ನಾಗಿ ನಡೆಯುತ್ತಿದ್ದ ಕಾಲದಲ್ಲಿ ದೊಡ್ಡ ಸೂಪರ್ ಮಾರುಕಟ್ಟೆ ಬಂದು ಇವರ ಕನ್ನಡ, ತಮಿಳು ಮಿಶ್ರಿತ ಕನ್ನಡದ ವ್ಯಾಪಾರಕ್ಕೆ ಹೊಡೆತ ಬಿದ್ದಾಗ ಒಂದು ಚೂರು ಧೃತಿಗೆಡದೆ ಅಲ್ಲಿಂದಾನೆ ಸಾಮಾನು ತಂದು, ದುಪ್ಪಟ್ಟು ಬೆಲೆಗೆ ಮಾರಿದ ಕೀರ್ತಿ ಅವರದ್ದು. ಅಮ್ಮ ಹಾಗೂ ಸುಮಾರು ಜನ ಹೆಂಗಸರೇ ಅವರ ವ್ಯಾಪಾರವನ್ನೆಲ್ಲ ಉಳಿಸಿದ್ದ್ರು ಅಂತ ಇನ್ನೂ ಹೇಳೋದು ಕೇಳಿದೀನಿ. ನಮ್ಮ ಜಯನಗರದ ಸ್ವಾಯತ್ತತೆಯ ಸಂಕೇತ ಆಗಿರುವ ಯಾವಾಗಲೂ ಟ್ರಾಫಿಕ್ ಜಾಮ್ ಮಾಡುವ, ಎಷ್ಟು ಸ್ವಚ್ಛ ಮಾಡಿದ್ರೂ ಗಲೀಜಾಗೆ ಇರುವ ನಮ್ಮ ಮಾರುಕಟ್ಟೆಗೆ ಶರಣು ಶರಣಾರ್ಥಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Whether someone likes it or not, everyone wants the vegetable and fruit market near to their residential place, though it creates lot of traffic, cleanliness problems. Meghana Sudhindra, studying in Barcelona, brings back the memory of Jayanagar 9th block vegetable market.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ